ಬಂಡ್ವಾಳ್ವಿಲ್ಲದ ಬಡಾಯಿ
ಅಥ್ವಾ ಹೀಗೂ ಉಂಟೆ
ಒಂದು ಸಾಮಾಜಿಕ ಪ್ರಹಸನ
ಪಾತ್ರಗಳು
ಅಹೋಬ್ಲು : ಬುಳ್ಳಾಪುರದ ಲಾಯ್ರಿ
ಜೀವು : ಈತನ ಪತ್ನಿ
ಮುದ್ಮಣಿ : ಈತನ ಕುಮಾರ
ಬಾಳು : ಈತನಿಗೆ ಕೋರ್ಟ್ನಲ್ಲಿ ಜೂನಿಯರ್, ಆಫೀಸ್ನಲ್ಲಿ ಕ್ಲರ್ಕ್, ಮನೆಯಲ್ಲಿ ಪರಿಚಾರಕ
ಬೋರ : ಈತನ ಎಪ್ಪತ್ತೆರಡು ವಯಸ್ಸಿನ, ಅಲ್ದೆ ಹನ್ನೆರ್ಡಾರ್ಲ ಎಪ್ಪತ್ತೆರಡು ರೂಪಾಯಿ ಸಂಬ್ಳ ಬಾಕಿ ಇರೋ ಜವಾನ
ಪರಶುರಾಮ ಪಟ್ಟರ್ : ಕಕ್ಷಿಗಾರರು
ಕೆಂಪೇಗೌಡ : ಕಕ್ಷಿಗಾರರು
ಕೃಷ್ಟ್ರಾವ್ : ಕಕ್ಷಿಗಾರರು
ರಂಗ್ರಾವ್ : ಸ್ನೇಹಿತರು
ಸ್ಥಾನ : ಅಹೋಬಲ್ರಾಯ್ರ “ಛೇಂಬರ್ಸು”
ಕಾಲ, ಭಾಷೆ : ಆಧುನಿಕ
* * *
ಸ್ಥಾನ : ಲಾಯ್ರಿ ಅಹೋಬಲ್ರಾಯನ ಛೇಂಬರ್ಸು. ಮೇಜಿನ ಮೇಲೆ ಲಾ ಪುಸ್ತಕಗ್ಳ ಕಟ್ಟುಗ್ಳು, ಶಾಯಿಕುಡಿಕೆ, ಪೇನ ಇತ್ಯಾದಿ. ಮೇಜಿನ ಸುತ್ತಲೂ ನಾಲ್ಕೈದು ಮುರುಕಲು ಕುರ್ಚಿಗ್ಳು. ಸ್ವಲ್ಪ ದೂರ ಪಕ್ಕದಲ್ಲಿ ಒಂದು ಗುಮಾಸ್ತೆ ಮೇಜು.
ಛೇಂಬರ್ಸು : ಎಡ ಮುಂಭಾಗ, ಬಲ ಮುಂಭಾಗ, ಮಧ್ಯೆ ಹಿಂಭಾಗ ಬಾಗಿಲುಗ್ಳು.
(ಬೋರ ಎಪ್ಪತ್ತೆರರ್ಡು ವರುಷಗ್ಳ ತಾಬೆಯಿಂದ ಬಗ್ಗಿದ ಮೈಯಿಂದಲೂ ನೆಲವನ್ನು ಸೋಕಿ ಗುಡಿಸುವ ಬಿಳಿ ಗಡ್ಡದಿಂದಲೂ ಆಡನ್ನು ಬಿಂಬಿಸುತ್ತ ಕೈಯಲ್ಲಿರುವ ಪೊರಕೆಯಿಂದ ನೆಲವನ್ನು ಗುಡಿಸಿ ನೆಲದ ಮೇಲೆ ಹಾಸಿರುವ ಹರಕಲು ಚಾಪೆಯೊಂದನ್ನು ನಿರೀಕ್ಷಿಸುತ್ತಲೇ ಪೊರಕೆಯನ್ನು ನೆಲದ ಮೇಲಿಟ್ಟು ನಿಟ್ಟುಸಿರುಬಿಡುವನು)
ಬೋರ : ನಮ್ಕುಲಾನೆಲ್ಲಾ ಈ ಕಸ ಗುಡ್ಸೋ ಕಸಬ್ನಲ್ಲೇ ಕಳ್ದೋಯ್ತು! ನಮ್ತಾತ ಮುತ್ತಾತನ್ ಕಾಲದಿಂದ ನಮ್ಮನೇವ್ರಲ್ಲಾ ಕಸ ಗುಡ್ಸೀ ಗುಡ್ಸೀ ಗುಡ್ಸೀ…. ಈಗ್ನಮ್ಮಟ್ಟೀಲಿ ಉಟ್ಟೋ ಐಕ್ಳೆಲ್ಲಾ ಸೊಂಟ ಮುರ್ಕೊಂಡೇ ಉಟ್ತಾರೆ. ನಮ್ಮಮ್ಮೊಕ್ಳ ಪಾಡಂತೂ ಏಳಾಕ್ಕಾಗಾಕಿಲ್ಲ! ಜಿನಾ ಬೆಳಿಗ್ಗೆದ್ದು ಕಾಲಗುರುಗ್ಳು ಕತ್ರಿಸ್ಕಳ್ದೇ ಇದ್ರೇ …ಕಣ್ಣುಚ್ಕೋತಾರೆ ನಡ್ಯೋವಾಗೆಲ್ಲಾ!…
(ಮನೆಯಾಕೆಯು ಹಿಂಬಾಗಿಲಿನಿಂದ ಪ್ರವೇಶಿಸುವುದನ್ನು ಥಟ್ಟನೆ ಗಮನಿಸಿ ಪೊರಕೆಯನ್ನೆತ್ತಿಕೊಂಡು ಚಾಪೆಯನ್ನು ಬಿರುಸಾಗಿ ಗುಡಿಸಲುದ್ಯುಕ್ತಿಸುವನು)
ಜೀವು : (ಪ್ರವೇಶಿಸಿ, ಚಾಪೆಯ ಮಧ್ಯಭಾಗವನ್ನು, ಪೊರಕೆಪಾಣಿಯಾಗಿ ಅಲಂಕರಿಸಿರುವ ಬೋರನನ್ನು ಸಮೀಪಿಸಿ)
ಏನೋ ಇದೂ? ಮನೇನ ಗುಡಿಸ್ತಿದೀಯಾ, ಇಲ್ಲಾ ಮನೇಲಿರೋ ಒಂದ್ಹರಕ್ಲು ಚಾಪೇನ ಮೇಯ್ತಿದೀಯಾ? ಮೇಕೆ? ನೀನು ಗುಡಿಸಿದ್ ಲಕ್ಷಣ ಸಾಕು. ಪೊರಕೇನಿಟ್ಬಿಟ್ಟು ರಾಮ್ಯೆಟ್ರಂಗ್ಡಿಗೆ ಹೋಗಿ ಪಂಚೇರುಸಕ್ರೆ ಇಸ್ಕೊಂಬಾ.
ಬೋರ : ದುಡ್ರವ್ವಾ?
ಜೀವು : ಛೀ! ದುಡ್ಡಿನ್ ಯೋಚ್ನೆ ನಿನಗ್ಯಾಕೊ? ಶೆಟ್ರೇದ್ರು ದುಡ್ಡಿನ್ ಮಾತು ಎತ್ತಿದ್ರೆ, ಅವರ ಕೇಸ್ ಹೀರಿಂಗು ನಾಳೆ ಅಂತನ್ನು.
(ಎಡಬಾಗಿಲನ್ನು ಸಮೀಪಿಸುತ್ತಿರುವ ಬೋರನಿಗೆ)
ಸ್ಪಲ್ಪಿರೋ!
(ಆತ್ಮಗತಂ)
ಇನ್ನೇನ್ಬೇಕ್ ಮನೇಗೆ?… ಸರಿ, ಜ್ಞಾಪ್ಕ ಬಂದಾಗೆ adjourn ಮಾಡ್ಕೊಂಡ್ರಾಯ್ತು ನಾಡಿದ್ಗೋ ಸಾಮಾನುಗ್ಳು ಬೇಕಾದ್ಹಾಗೆಲ್ಲಾ!
(ಪ್ರಕಾಶಂ)
ಹೋಗೊ ಶನಿ!
(ಬೋರ ನಿಷ್ಕ್ರಮಣ)
(ಸಿಡುಕು ಮುಖದಿಂದ) ಏನ್ ಹಾಳು ಸಂಸಾರವೊ ಇದು! ಲಾಯ್ರಿಗ್ಳ ಹೆಂಡ್ತಿಗ್ಳ ಹಣೇಬರಹವೆಲ್ಲಾ ಹೀಗ್ಯೆ! ಆದ್ರೆ ಪ್ರಪಂಚದಲ್ಲಿರೋ ಲಾಯ್ರಿಗ್ಳೆಲ್ಲಾ ಇವ್ರ ಹಾಗ್ಯೇ! ನಮ್ಮಪ್ಪ ಲಾಯ್ರಿ ಕೆಲ್ಸ ಮಾಡ್ದಾಗ ನಮ್ಮನೆ ಹಜಾರದ ಕಂಬಕ್ಕೆ `Law’ ಗೊತ್ತಿತ್ತು! ಈ ಕಂಬಕ್ಕೆ ಗೊತ್ತಿದ್ದ `Law’ ಲಿ ಎಳ್ಳಷ್ಟಾದ್ರೂ ಇದಕ್ಕೆ ಗೊತ್ತಿದ್ದಿದ್ರೆ ಇಷ್ಟೊತ್ಗೆ ಮಲ್ಲೇಶ್ವರದಲ್ಲಿ ಮೂರ್ಮಾಡಿ ಮನೆ ಕಟ್ಬಹುದಾಗಿತ್ತು! ಯಾಕ್ಹೀಗಿದ್ಯೋ ಕಾಣೆ? ಇಷ್ಟಕ್ಕೂ ಲಾಯ್ರೀಗೇ ಬೇಕಾದದ್ದೆಲ್ಲಾ ಇದೆ ಇವ್ರಿಗೆ. ಮಾತಿಗೂ ಸುಳ್ಳುಗಳಿಗೂ ಕಮ್ಮಿ ಏನೂ ಇಲ್ಲ. ಇಲ್ಲಾ, ಕೋರ್ಟ್ನಲ್ಲಿ ಬೆಚ್ಬಿದ್ದು ಬಾಯ್ಬಿಡೋಕೆ ಬೆದ್ರಿ ನಾಲ್ಗೇನ್ ನುಂಗ್ಕೊಂಡು ನಡಗ್ತ ನಿಂತಿರುತ್ತೋ? ಇಲ್ಲ, ಜಡ್ಜಿಗ್ಳು ಇವ್ರ ಪೂರ್ವಜನ್ಮದಲ್ಲಿ ಜ್ಞಾತಿಗ್ಳೋ ಏನೋ ಕಾಣೆ! ಮುಖ್ಯ, ಕೇಸುಗ್ಳ ಗೆಲ್ಲದ ಕೆಂಬೂತ!
(ಬೋರನು ಮೇಜಿಗೆ ಒರಗಿಸಿ ಹೋದ ಪೊರೆಕೆಯನ್ನು ಹಿಡಿದುಕೊಂಡು ನಿಲ್ಲುವಳು)
ಅಹೋಬ್ಲು : (ನೇಪಥ್ಯದಲ್ಲಿ) ಇಷ್ಟ್ಹೊತ್ನಲ್ಹೇನ್ ಗಲಾಟೆ ನನ್ನ ಛೇಂಬರ್ಸ್ನಲ್ಲಿ?
(ಹಿಂಭಾಗದ ಮಧ್ಯಬಾಗಿಲಲ್ಲಿ ಕಾಣಿಸಿಕೊಂಡು)
ಏನ್ನೀನೇ ಜೀವು! ನೀನೇ ಗುಡಿಸ್ತೀದೀಯಾ!? Poor girl!! ಯಾಕೆ, ಬೋರ ಎಲ್ಹೋದ? ಹನ್ನೆರಡಾರ್ಲ ಎಪ್ಪತ್ತೆರ್ಡು ರೂಪಾಯಿ ಬಿಟ್ಬಿಟ್ಟು ಎಲ್ತಾನೆ ಹೋದಾನು?
ಜೀವು : ಎಪ್ಪತ್ತೆರ್ಡು ರೂಪಾಯಿ! ಯಾರ್ದೆಪ್ಪತ್ತೆರ್ಡು ರೂಪಾಯಿ!
ಅಹೋಬ್ಲು : ಸಧ್ಯ ಯಾರ್ದೂ ಅಲ್ಲ. ಒಂದ್ವೇಳೆ ನಮ್ಹತ್ರಿದ್ದು. ಅವನಿಗ್ಕೊಟ್ರೆ, ಬೋರಂದು… ಸಂಬಳ, ಒಂದ್ ಸಂವತ್ಸರದ್ದು.
ಜೀವು : ಇದೇನ್ಹೊಸಲ್ಮೇಲೇ ನಿಂತ್ಕೊಂಡು ಮಾತಾಡ್ತೀದೀರಿ? ಒಳ್ಳೇದಲ್ಲ ಒಳಕ್ಬನ್ನೀಂದ್ರೆ.
ಅಹೋಬ್ಲು : Not at all ! ನಿನ್ಕೈಲಿ ಪರಕೆ ಇರೋವರ್ಗು ಪ್ರವೇಶಿಸೋದು ಅನುಚಿತ, ಅಪಾಯ! “ಚಾಮರಂ ಪತಿಭೀಕರಂ” ಇತಿ ನನ್ನ್ ಅಮರಃ! ಆ ಪರ್ಕೆ ಆ ಮೂಲೇಲಿಡು.
(ಪ್ರವೇಶಿಸಿ ಜೀವುವನ್ನು ಸಮೀಪಿಸಿ)
ಹೂಂಂ… ಕಾಫಿ ತಗೊಂಡ್ಬಂದ್ಬಿಡು ಬೇಗ! Friendsಗಿಂಡ್ಸ್ ಬಂದ್ಬಿಟ್ಟಾರು.
ಜೀವು : ಕಾಫಿ ಆಗಿದೆ…ಸಕ್ರೇಗೆ ಕಳಿಸಿದ್ದೇನೆ ಅಂಗ್ಡೀಗೆ. ಬೋರನ್ನ.
ಅಹೋಬ್ಲು : ಅಂಗ್ಡೀಗೇ ! ದುಡ್ಡೆಲ್ಲೀದು?
ಜೀವು : (ತಾತ್ಸರದಿಂದ) ಹಯ್ಯೋ! ಬುದ್ದೀಂಬೋದು ನಿಮ್ಮೊಬ್ರಿಗೇನೇವೇಯೇ ಲಾಯ್ರಿ ಹೊಟ್ಟೇಲ್ಹುಟ್ಟಿ. . . ಲಾಯ್ರಿ ಕೈ ಹಿಡ್ಡು. . . ಕಾಸಿಲ್ದೆ ಒಂದಿಷ್ಟು ಸಕ್ರೆ ತರಿಸೋಕ್ಕೂಡ ಗೊತ್ತಿಲ್ದೆ ಹೋಯ್ತೆ ನನಗೆ!?
(ಭ್ರುಕುಟಿರಚನೆಯಿಂದ ಪ್ಪಶ್ನಿಸುತ್ತಿರುವ ಪತಿಗೆ)
ಅದೇ ರಾಮ್‌ಶೆಟ್ಟಿ ಕೇಸು, ರಾಮ್‌ಶೆಟ್ಟಿ ಕೇಸೂಂತ ಬಡುಕೊಳ್ತಿದ್ರಲ್ಲ ಮೂರ್ತಿಂಗ್ಳು ಹಿಂದೆ, ಅದ್ನ, “ಹೀರಿಂಗ್ನ” ನಾಳೇಗ್ ಹಾಕ್ಕೊಂಡೆ.
(ಕೋಣೆಗೆ ಉಸುರನ್ನೆಲ್ಲಾ ಹೀರುತ್ತ ಮೂಗನ್ನು ಸೂರಿಗೆತ್ತುವಳು)
ಅಹೋಬ್ಲು : Wonderful woman ಜೀವು!, ನೀನೂ ನಿನ್ನಂಥ wifeಊ ಇದ್ದು, ಸ್ವಲ್ಪ Luckಊಗಾನ ಬಂತೋ. Lord ಸಿಂಹನ್ನ ಎತ್ಕುಕ್ಕಿಬಿಡ್ತೀನೆ ಒಂದ್ದಿನ! ಎತ್ತೇ ಕುಕ್ಕಿಬಿಡ್ತೇನೆ One of theseದಿನಾಸ್!
ಜೀವು : ಹಯ್ಯೋ ಸಾಕ್ನಿಲ್ಸೀಂದ್ರೆ! ನಿಮ್ಮೋರೆ ಮಯ್ಯಿಮತಿ ಇರೋ ಯೋಗ್ಯತೇಗೆ ಇನ್ನೊಬ್ಬನ್ನ ಎತ್ಕುಕ್ಬೇಕೆ? ಅದ್ರಲ್ಲೂ “ಸಿಂಹ” ನಂತೆ ಅವನ ಹೆಸ್ರು! ಯಾರದು?
ಅಹೋಬ್ಲು : ಬಂಗಾಳದ ಲಾಯ್ರಿ ಜೀವು! Practice ಪ್ರಾರಂಭಿಸ್ದ ಪ್ರಾಣಿ. ನಾವೀಗಿಧೇವಲ್ಲಾ….ವಿಜೃಂಭಣೆಯಾಗಿ. . . ಇದಕ್ಕೂ ಅವನಾಗಿದ್ದದ್ದಕ್ಕೂ ಅಗಳಷ್ಟೂ ಸಂಬಂಧವಿಲ್ಲ. ಒಂದೇ ಮಾತ್ನಲ್ಲಿ ಹೇಳ್ತೇನೆ : ಅವನ ಮನೇಲಿ ಗುಡಿಸೋಕೆ ಕಸಕ್ಕೂಡ ಯೋಗ್ಯತೆಯಿಲ್ಲ. ಇನ್ನು ಊಟ ಉಪಚಾರಗ್ಳೋ; ನೆನ್ನೆ ಅನ್ನ, ಮೊನ್ನೆ ಸಾರು, ಈವತ್ತಿನೆಲೆ, ನಾಳೆ ನೀರು, ನಾಡಿದ್ದು ಊಟ! ಹೀಗಿದ್ನ ನೋಡು ಜೀವು! ಆ ಚಂಚಲಕಟಾಕ್ಷಿ ವರಲಕ್ಷಿ ಕಣ್ಣು ಸ್ವಲ್ಪ ಮಿಟಿಕ್ಸಿದ್ಳೂ. ..ನೆಗೆದ ನೋಡು ಭೂಪ್ತಿ Lord ಪಟ್ಟಕ್ಕೆ! ಜೀವು! ಪಾತಾಳದಿಂದ ಈ ಪಾಮರ Lordಪಟ್ಟಕ್ಕೆ ಎಗರಿರೋವಾಗ ಭೂತಾಳದಲ್ಲಿರೊ ನಾವಿಬ್ರೂ ಇದಕ್ಕಿಂತ ಎತ್ತರವಾಗಿ ಎಗರ್ಬಾರ್ದಾಜೀವು!?
(ಎಂದು ಹುಮ್ಮಸ್ಸಿನ ಆವೇಶದಲ್ಲಿ ಜೀವುವನ್ನು ಸಮೀಪಿಸುವನು)
ಜೀವು : (ಜುಗುಪ್ಸೆಯಿಂದ) ಹಯ್ಯೊ ನಿಲ್ಸೀಂದ್ರೆ ! ನಿಮ್ಮಾತೆಲ್ಲಾ ಹೀಗ್ಯೇ. ಲಾಗಾಯಿತ್ನಿಂದ ಮರಳ್ಮೇಲೆ ನೀವ್ಕಟ್ಟಿರೊ ಮುನ್ನೂರು ಅರಮನೆಗ್ಳ ಜೊತೇಲಿ ಇದೊಂದು ಹೊಸ ಮಹಲ್ಲು. ಈ ಹುಚ್ಚೆಲ್ಲಾ ಬಿಟ್ಟಿಟ್ಟು ಕೇಸುಗಳ್ನ ಓದ್ಕೊಂಡು, ಕೋರ್ಟ್ಗೆ ಹೋಗಿ, ಗೆದ್ದು, ಸಂಪಾದ್ನೆ ಮಾಡಿ, ಹೆಬ್ಬೆಟ್ನಿಂದ ತಲೆ ತುದಿವರ್ಗೂ ಇರೋ ಸಾಲಾನೆಲ್ಲಾ ತೀರ್ಸಿ. ಸಧ್ಯ ನೆರೆ ಹೊರ್ಕೆವ್ರು ಕಟ್ಟಿದಾರಲ್ಲಾ ಪಟ್ಟ….”ಬಂದ್ವಾಳ್ವಿಲ್ಲದ ಬಡಾಯೀ”ಂತ. . ಅದ್ನ ಹೋಗ್ಲಾಡಿಸ್ಕೊಂಡು ಮಾನಮಿಗಿಸ್ಕೊಂಡು ಬದುಕಿದ್ರೆ, ಅಮೇಲೆ… ಈ “Lord” ಪಟ್ಟ ಅಂಬೋ ಬಿಸಿಲ್ಕುದರೇನ ನಾವಿಬ್ರೂ ಸವಾರಿ ಮಾಡ್ಬೋದು!
ಅಹೋಬ್ಲು : (ಮೇಜಿನ ಮೇಲೆಲ್ಲಾ ಪುಸ್ತಕದ bind ಹಾಕಿರುವ ಒಂದು ಪುಸ್ತಕವನ್ನು ತೆಗೆದು ಒಳಗಿರುವ Film Magazine ಹಾಳೆಗಳನ್ನು ತಿರುವುತ್ತ) ಹೆಂಗಸ್ರೆಲ್ಲಾ ಹೀಗೆ… ಹುಮ್ಮಸ್ಸಿಲ್ಲ! No enthusiam at all!
ಜೀವು : ಹಯ್ಯೋ ಗೊಂಬೆಗ್ಳು ಹಾಕಿದ Law ಪುಸ್ತಕ ಓದೋದ್ರಿಂದ್ಲೇ ಗೋಳು ಮನೇಗೆಲ್ಲ!
(ಎಡಬಾಗಿಲನ್ನು ಈಕ್ಷಿಸಿ)
ಅದೋ ಬೋರನೂ ಬಂದ, ಸಕ್ರೇನೂ ಬಂತು.
(ಹಿಂಬಾಗಿಲಿನ ಹೊಸಲನ್ನು ಸಮೀಪಿಸುತ್ತ)
Lord ಸಿಂಹನ್ನ ಬಾಯ್ಮಾಂತ್ನಿಂದ್ಲಾದ್ರು ಎತ್ಕುಕ್ಕಿ ಬರ್ತಿರೊ ನಾಲ್ಗೆ ಪ್ರಯಾಸಕ್ಕೆ ಒಂದ್ಚೊಂಬು ಕಾಫಿನಾದ್ರು ಬಸ್ಕೊಳ್ಳಿ!
ಅಹೋಬ್ಲು : (ಉತ್ಸಾಹದಿಂದ) Golden girlಊ ಜೀವು! ಪುಟಕ್ಕೆ ಹಾಕಿದ Partnerಊ! ಎಷ್ಟು anger ಇದ್ರೂನೂವೆ… ಏನು! Loveಉ Loveಏನೇವೇ!
(ಎಡಬಾಗಿಲಿನಿಂದ ಪ್ರವೇಶಿಸಿ ಕೋಣೆಯನ್ನು ಹಾಯುತ್ತಿರುವ ಬೋರನಿಗೆ)
ಬೀದೀಲೇನಾದ್ರು ಬಿಡಿಗಾಸು ಬಿದ್ದಿದೇಂತ ಬಗ್ನೋಡ್ತ ಬರ್ತಿದೀಯೇನೋ ಬಕ್ವೇ!?…
(ಸ್ವಗತಂ)
ಚೆನ್ನಾಗ್ ಚುನಾಯಿಸ್ದೆ ಚಾಕರೀಗೆ ಚತುಷ್ಪಾದಾನ!…
(ಹಿಂಬಾಗಿಲಿನಿಂದ ನಿಷ್ಕ್ರಮಿಸುವ ಬೋರನನ್ನು ನೋಡುತ್ತ)
ಅದೊಂದ್ಮಟ್ಗೂ ಒಪ್ಕೊಳ್ಳೇಬೇಕು!… ಯಾವ ಕೆಲ್ಸ ಹೇಳಿದ್ರೂ ಮೈಬಗ್ಗಿ ಮಾಡ್ತಾನೆ… ಮೈಬಗ್ಗಿ ಮಾಡ್ತಾನೆ!
(ಬಲಬಾಗಿಲಿನಿಂದ ನಿಷ್ಕ್ರಮಣ)
ಅಹೋಬ್ಲು : (ಪುನಃ: ಪ್ರವೇಶಿಸಿ ಸ್ವಗತಂ) ಬಾಳು ಯಾಕ್ ಇಷ್ಟು Lateಉ ಈ ಹೊತ್ತು? ಈ ಹೊತ್ತೇನೂ!? ಯಾವ ಹೊತ್ತೇನೂ!? ಇವನ ಹಣೇಬರಹವೆಲ್ಲಾ Lateಏ! ಇರ್ಲೀ! ಹೇಳಿದ್ಕೆಲ್ಸ ಮಾಡ್ತ ಬದಲ್ಮಾತು
ಎತ್ತದೆ ತೆಪ್ಪನೆ ದುಡೀತ ಬೆಕ್ಕಿನ್ಹಾಗೆ ಬಿದ್ಗೊಂಡಿದ್ದ ಈ ಕುರಿ ಕಿವೀಗೆ ಯಾರೂ Juniorಗೂ Clerkಗೂ ಕೆಲಸ್ಗಾರ್ನಿಗೂ ಇರೊ ವ್ಯತ್ಯಾಸಾನ ಯಾವ ಪಾಪಿನೋ ಊದ್ಬಿಟ್ಟಿದಾನೆ! ಈಗಿಂದೀಚೆಗೆ ದುಡ್ಡು ದುಗಾಣಿ ಅಂತ ಗೊಣಗುಟ್ಟೋಕೆ ಪ್ರಾರಂಭಿಸ್ಬಿಟ್ಟಿದೆ ಈ ಗುಗ್ಗು. ಏನತ್ಮಧ್ಯೆ ಇವರಪ್ಪನ ಹತ್ರ ಒಪ್ಕೊಂಡ ತಿಂಗಳಿಗೆ ಹದ್ನೈದ್ರ ಪ್ರಕಾರ ಇಪ್ಪತ್ತಿಂಗ್ಳ ಸಂಬ್ಳ ಮುನ್ನೂರ್ರೂಪಾಯ್ನ ಮಾತ್ಗೀತು ಏನಾದ್ರು ಎತ್ತಿಗಿತ್ತಿದ್ನೋ,… ಆದ್ರೇನು… ನಾನ್ಮಟ್ಗೆ ನನ್ನ Usual tactics… diplomacy ಇರೋವರಿಗೂ ಹೇಗಾದ್ರೂ…Manageಮಾಡ್ಕೋಬಹುದು!
(ಎಡ ಬಾಗಿಲನ್ನು ದುರುಗುಟ್ಟಿನೋಡಿ, ಕೂತ ಕುರ್ಚಿಯನ್ನು ಕೂತಹಾಗೆಯೇ ಸೆಳೆಯುತ್ತ ಬಾಗಿಲನ್ನು ಸಮೀಪಿಸಿ)
ಇಕೋ ಬಂದ! ಈಗ Stiff ಆಗಿರೋದೆ best thingoo!
(ಪ್ರವೇಶಿಸಿ ಹೊಸಲು ಮೇಲೆ ನಿಂತ ಬಾಳುವಿಗೆ ಬಿರುಸಾಗಿ ಅರ್ಭಟಿಸುತ್ತ) What is this, I say! What is the meaning of this I say? What is the time, I say! What are you, where are you, when are you, why are you, what it I say!? ಇದೇನು Chamberಓ ಛತ್ರಾನೊ? ಕಾಲ ದೇಶ ವರ್ತಮಾನ ಗೊತ್ತಿಲ್ವೆ ನಿನಗೆ? ಏನರ್ಥ? ನೀವೇನು ಮನುಷ್ಯನೇ, ಮೃಗವೇ? What is it? Duty, Docility, Disciplineನ Dictionaryಲಾದ್ರು ನೋಡಿದ್ದೀಯಾ? What is the meaning of this? ಏನಿದು ಹುಚ್ಚು ಬೊಗಳೂ ಬಾಳು!
ಬಾಳು : (ಮುಂದಕ್ಕೆ ಬಂದು ಸೊಟ್ಟಮೋರೆಯನ್ನು ಧರಿಸಿ) ಏನ್ ಸಾರ್ ಇದು? ಯಾರ್‍ನ ಹೆದ್ರಿಸ್ತೀರಿ ಸಾರ್! ಓಹೋಃ ಏನ್ಸಾರ್ ಇದು? ನಮ್ಮಪ್ಪ ಹೇಳ್ದ ಸಾರ್ ನಮ್ಮ Fatherಉಃ ನೀನು ಅಹೊಂಬಲ್ರಾಯ್ರ ರೂಮಿಗೆ ಹೋದಾರಭ್ಯ…
ಅಹೋಬ್ಲು : (ಅಡ್ಡ ಮಾತಾಗಿ) Roomoo ಅನ್ಬೇಡ! Chambersಉ ಅನ್ನು.
ಬಾಳು : ಆಗ್ಲಿಸಾರ್. ನಮ್ಮಪ್ಪ ಹೇಳಿದ್ದಿಷ್ಟು: “ನೀನು ಅಹೋಬಲ್ರಾಯ್ರ Chambersಗೆ ಹೋದಾಗ್ನಿಂದ Chambersನ ಮನೆ ಸಮೇತ ಗುಡ್ಸೋದು; ಬಾವಿಯಿಂದ ನೀರು ಸೇದಿ ಹಂಡೆ
ತುಂಬೋದು; ಮಾರ್ಕೆಟ್ಟಿಗೆ ಹೋಗಿ ತರ್ಕಾರಿ ತಂದ್ಹಾಕೋದು; ನಿಮ್ಕುಮಾರನ್ನ ಸ್ಕೂಲಿಗೆ ತಲಪೊಸ್ಸೋದು; ಇನ್ನು ಕೋರ್ಟ್ಗೆ ಟಿಫನ್ ತಕ್ಕೊಂಡ್ಹೋಗೋದೂ ಅಲ್ದೆ ತಿಂಗ್ಳು ತಿಂಗ್ಳು ಐದ್ದಿನವಾದ್ರೂ ಅಡಿಗೆ ಮಾಡೋದು; ಹೀಗೆಲ್ಲಾ ನಿನ್ರಾರ್ಯ ಮನೇಲಿ ಕಲಿಯೊ Lawನ ಇಲ್ಲೇ ಮನೇಲೇ ಕಲಿ! ಸಧ್ಯ ಈ ಇಪ್ಪತ್ತಿಂಗ್ಳು ಹದ್ನೈದು ರೂಪಾಯಿ ಪ್ರಕಾರ ನಿನಗೆ ಬರಬೇಕಾದ ಮುನ್ನೂರು ರೂಪಾಯ್ನ ನಿನ್ ರಾಯ್ರ ಕೈಯಿಂದ ಇಸ್ಕೊಂಡು ಮನೇಗ್ಬಂದು ಸೇರು” ಅಂತಂದ್ರು ಸಾರ್… ನಮ್ಮ Fatherಉ!
ಅಹೋಬ್ಲು : (ನಾಲಗೆಯನ್ನು ಕಚ್ಚಿಕೊಳ್ಳುತ್ತ, ಸ್ವಗತಂ) ಹೌದು! . . too far ಹೋಗ್ಬಿಟ್ಟೆ! Wormಊ ಕೂಡ turn ಮಾಡುತ್ತೇಂಬೋದ್ನ ಮರ್‍ತದ್ದಕ್ಸರ್‍ಯಾಗಿ… ನನ್ನಿಂದ ಜೀವ ಬಂದ ಈ ಜಂತು ನನ್ನ ಮೇಲೆ ಹೆಡೆ ಎತ್ತಿ ಮುನ್ನೂರು ರೂಪಾಯಿ arrearsನೂ ಕೇಳುತ್ತಲ್ಲಾ! ಆ !?
(ಕ್ಷಣ ಮಾತ್ರ ಮುಖವನ್ನು ಗಂಟುಹಾಕಿಕೊಂಡು ಯೋಚಿಸಿ, ತತ್ಕ್ಷಣವೇ ಮುಖದ ಗಂಟನ್ನು ಬಿಚ್ಚಿ ಸ್ಮಿತವಕ್ತ್ರನಾಗಿ, ಸ್ವಗತಂ)
But…tactics change ಮಾಡ್ಬೇಕು. Stiff method
ಬಿಟ್ಬಿಟ್ಟು, Soft ಆಗಿ ಪುಂಗಿ ಬಾರಿಸ್ಬೇಕು. ಈ ಪದ ಎತ್ತಿದ ಕ್ರಿಮೀಗೆ! ಬಾಳು, ಹೀಗ್ಬಾ!
(ಎದ್ದು ಬಾಳುವನ್ನು ಕೈಹಿಡಿದು ಕರೆದುಕೊಂಡು ಹೋಗಿ ಬೆಂಚಿನ ಪಕ್ಕದ ಒಂದು ಕುರ್ಚಿಯಲ್ಲಿ ಕೂಡಿಸಿ, ತಾನೂ ಕುಳಿತುಕೊಂಡು ಗಂಭೀರ ವಿನಯ ಮಮತೆಗಳು ಮಿಶ್ರಿತವಾದ ಮಧುರ ಭಾವವನ್ನು ತಾಳಿ) ಮಗು, ನೀನೋ youngಉ! ನಾನೋ oldಉ)! ನಿನ್ನ bloodಓ ಬಿಸಿ! ನನ್ನ ರಕ್ತವೊ coldಉ, ಎಳೆ ನಾಗರಹಾವು ಹೆಡೆ ಎತ್ಕೊಂಡು ಬುಸುಗುಟ್ಟೋದು ಅದಕ್ಹೊಂದುತ್ತೆ. ಯಾಕೆ? ತಜ್ಜನ್ಮ, ತದ್ವಯಸ್ಸು, ತದ್ರಕ್ತ, ತದ್ಬಿಸಿರಕ್ತ, ಸಹಜ. ನಾನು oldಉ. ನನ್ನ bloodಉ coldಉ. ನಿನ್ನyoung ವಯಸ್ಸಿನ ರೇಗೋದ್ನ ಗಮನಿಸ್ದೆ, ನಿನ್ಕಿರ್ಲಾಟಾನ ಕಿವಿಗ್ಹಾಕೊಳ್ದೆ ಮನಸ್ಸಿಗೆ ಶಾಂತಿ ತಂದ್ಕೊಂಡು, ನಿನ್ನ ಮುಂದಕ್ಕೆ ತರೋದು ಅಂಬೊ ಯಾವ ನಿಮಿತ್ತಾನ ಮುಂದಿಟ್ಕೊಂಡು, ನಿನ್ನ ನನ್ನ Chambersನ ಹೊಸಲು ದಾಟ್ಸಿ ಇಪ್ಪತ್ತಿಂಗ್ಳು ಹಿಂದೆ ವಹಿಸೊಕೊಂಡ್ನೆ… ಅದೇ ನಿಮಿತ್ತಾನ ಮರೀದೆ, cold ಕಬ್ಬಿಣದ್ಹಾಗೆ rigid ಆಗಿ stiff ಆಗಿ ಈಗ್ಲೂ ಹೇಳ್ತಿರೋದ್ನ calm ಆಗಿ ಕೇಳು, ಮಗು, ಕೇಳು : ನಿಮ್ಮ ಬಾಳು! ನಿಮ್ಮಪ್ಪ, ನಿಮ್ತಂದೆ, ಪಿತ, ಜನಕ ನಿನ್ಕರ್ಕೊಂಡ್ ಬಂದು ಈ Chamberಗೆ, ನಿನ್ನ ಪುಟ್ಕೈನ ನನ್ನ ದೊಡ್ಕೈಲಿಟ್ಟು… ಗದ್ಗದ ಸ್ವರದಿಂದ “ಸ್ವಾಮಿ ಈ ಕೂಸ್ನ ನಿಮ್ಕೈಲಿಟ್ಟಿದೇನೆ. ಇದ್ನ ಮುಂದಕ್ತರೋ ಭಾರ ತಮ್ದು ಈ ಕ್ಷಣದಿಂದ ಈ ಮಗೂಗೆ ತಂದೆ ತಾಯಿ, ತಮ್ಮ, ತಂಗಿ, ಬಂಧು, ಬಳಗ, ವಿಶಿಷ್ಟವೂ… ಒಟ್ನಲ್ಲಿ ದೇವ್ರೂ, ಅಷ್ಟದಿಕ್ಪಾಲಕ್ರೂ, ಪಂಚಭೂತಗ್ಳೂ ತಾವೇ ಈ ಮಗೂಗೆ, ಇದ್ರ ಮುಂದಿನ್ ಯೋಚ್ನೆ ತಮ್ಮ ಭಾರಾ”ಂತ ನನ್ನ ಮೇಲೆ… ನನ್ನ ಹೆಗಲ್ಮೇಲೆ ಹೇರಿಸ್ದಾಗ ನಿನ್ನ ಜವಾಬ್ದಾರೀನ… ವಿಶ್ವಾಮಿತ್ರ ದಶರಥನ ಕೈಯಿಂದ… ಶಸ್ತ್ರಾಭ್ಯಾಸಕ್ಕೆ ರಾಮಲಕ್ಷ್ಮಣರನ್ನ ವಹಿಸ್ಕೊಂಡು ಅರಣ್ಯಕ್ಕೆ ಕರ್ಕೊಂಡ್ಹೋದದ್ದು ಜ್ಞಾಪಕ ಬಂತು. ದಶರಥನ ಅರಮನೆ ಅನುಕೂಲಗಳೆಲ್ಲಿ? ವಿಶ್ವಾಮಿತ್ರ ರಾಜಪುತ್ರರ್‍ನ ಕರ್ಕೊಂಡ್ಹೋದ ಅರಣ್ಯದ ಅನಾನುಕೂಲಗಳೆಲ್ಲಿ? ನಿನ್ತಂದೆ ಮನೇಲಿ ನೀನು ಅನುಭವಿಸಿದ್ದ ಸುಖ ಸೌಕರ್ಯಗಳ್ನ ಜ್ಞಾಪಿಸ್ಕೊಂಡು ನನ್ನ law trainingನಲ್ಲಿ ಇರೋ rigid disciplineನ ಸೆಹಿಸ್ಲಾರ್ದೆ ಹೀಗೆ ಅವಸ್ಥೆಪಡ್ತೀಯೇ ಹೊರ್ತು… ನಾನು ನಿನ್ನ ನೇಮಿಸೋ ಕೆಲಸಗಳಿಗೆ ಇರೊ ಅರ್ಥ ನಿನಗೆ ಗೋಚರವಾಗೋದಿಲ್ಲಾಂತ ಕಾಣುತ್ತೆ ಮಗು! ನೀನು, ನಾನು ನಿನ್ನ ಕೈಯಿಂದ ಮಾಡ್ಸೋ ಕೆಲಸಗಳ್ನೆಲ್ಲ ಜ್ಞಾಪ್ಕ ಹಾಕ್ಕೊಂಡು ಜ್ಞಾಪಿಸ್ಕೊಳ್ತ ಅಳ್ತಿಧೀಯೇ ಹೊರ್ತು ಆಯಾ ಕೆಲಸಗಳ ಅರ್ಥ ಅಲ್ದೆ ಅವುಗಳಿಗೂ ನೀನು ಮುಂದಕ್ಕೆ ಬರೋಕೂ ಇರೋ ಸಂಬಂಧದ ಸೂಚನೆ ನಿನಗೆ ಸ್ವಲ್ಪವಾದರೂ ಸೊಕುತ್ಯೆ? ನೋಡು, ಬಾಳು, ನಿನ್ಕೈಲಿ ಕೆಲ್ಸ ತೊಗೊಳ್ತೇನಲ್ಲಾ ಅಂಬೋದ್ನ ಮಟ್ಟಿಗೂ ಗಮನಿಸಿ ರೇಗ್ತೀಯೇ ಹೊತು, ಯಾಕೀ ಕೆಲ್ಸ ನಿನ್ನೆಕೈಯಿಂದ ಮಾಡೆಸ್ತೇನೆ ಅಂಬದ್ನ ಯೊಚ್ಸಿಧೀಯಾ ನೀನು? ನೋಡು, ಬಾಳು: ನಾಳೆಯಿಂದ ಬೋರ ಬೇಡ, ನೀನೇ ಗುಡ್ಸು ಅಂತ ಅಂದೇ ಅಂತಿಟ್ಕೊ, ಮಸ್ಲ! ಆಗ ನೀನು “ಎಲ! ನಮ್ರಾಯ್ರು ಬೋರ್‍ನ ಹಾಗೆ ಕಸಗುಡಿಸಿಸ್ತಾರಲ್ಲಾ” ಅಂತ ರೇಗ್ತೀಯೇ ಹೊರ್ತು…” ಎಲಾ! ನಮ್ರಾಯ್ರು! ನಮ್ಮ Family friendಉ! ನಮ್ಮಪ್ಪನಿಗೆ ಪ್ರಾಣ ಸ್ನೇಹಿತ್ರು! ನನಗೂ, well wisherಉ! ಇಂಥ ನಮ್ರಾಯ್ರು ನಕ್ಕೈಲಿ ಪರ್ಕೆ ಕೊಟ್ಟು ಗುಡ್ಸಿಸ್ತಾರಲ್ಲಾ! ಇದರಲ್ಲಿ ಏನೋ ಸೊಕ್ಷ್ಮ ಇದೆ! ಏನೋ ಗುಟ್ಟಿದೇ”ಂತ ನನ್ಮೇಲೆ ನಂಬ್ಕೆ ಇದ್ಯೇ? ಊಂ ಹುಂಂ! ಇಲ್ಲ! ಯಾಕೆ? Because you are youngಉ! But young ಆದ್ರೂನೂವೆ, brainsಇರೋ boy ನೀನು. “ಹೌದು ಕಸ ಗುಡ್ಸೋ ಕೆಲ್ಸಕ್ಕೂ, ನಾನು ಮುಂದೆ ಆಗೋ ಲಾಯ್ರಿ ಕಸುಬಿಗೂ ಸಂಬಂಧವೇನೂ”ಂತ ನಿನಗೆ ತೋಚ್ಯೇ ತೋಚುತ್ತೆ, Explanation ಹೇಳ್ತೇನೆ ಕೇಳು ಮಗು. ಕೇಳು, ನಾಳೆ, ನೀನು ಲಾಯ್ರಿಗ್ಳ ಜೊತೇಲಿ ಲಾಯ್ರಿಯಾಗಿ ಕೋರ್ಟ್ನಲ್ಲಿ ಕೊತಿರೋವಾಗ, ನಿನ್ನ ಜಡ್ಜಿ, ಎಲ್ಲಾ ಲಾಯ್ರಿಗ್ಳ ಮೂತಿಗಳನ್ನೂ ನೋಡ್ತಾ ಬಂದು, ನಿನ್ಮುಕಾನ ನೋಡುತ್ಲೂವೆ ‘ಡಂಗ್’ ಆಗಿ, “ಎಲಾ ಈ ಲಾಯ್ರಿ intelligence” ಅಂಬೋದು ತಲೆಯಲ್ಲಾ ತುಂಬೀ ತುಂಬೀ ತುಳುಕೀ ತುಳುಕೀ ಕಣ್ಣುಗಳಿಂದ ಹೊರಗೆ ಹೊರಟು ಬಂದು ಮೋರೆಯೆಲ್ಲಾ ಸುರಿತಿರೋ ಬುದ್ದಿಯೇ ಇಷ್ಟು ಇರುವಾಗ…. ಇವನ್ಮಂಡೇಲಿ ಇರೋ main stock of ಮಿದುಳು ಎಷ್ಟ್ತಾನೇ ಇರಬೇಕೂ”ಂತ ಆಶ್ಚರ್ಯ ಪಟ್ಟದ್ದಲ್ದೆ ಯಾವ್ದಾದ್ರೂ ಒಂದು ಕೇಸಿನ complicated knotty point ತಿಳುಕೊಳ್ಳೋಕೆ ನಿನ್ನ consultಮಾಡೋಕೆ ತನ್ನ Chamberಗೆ ನಿನ್ನ ಕರೆಸಿಕೊಂಡಾಂತಿಟ್ಕೊ, ಮಸ್ಲ ಆಗ ನೀನು ಆ ಜಡ್ಜಿ Chambersಪ್ರವೇಶಿಸುತ್ಲೂವೆ ಆತ, “ಎಲ, ! ಇಂಥಗಟ್ಟಿಗ ಲಾಯ್ರಿ ನಮ್ಮ Chambersಗೆ ಬರೋವಾಗ ಯಾಕೀ ಕೋಣೆ ಇಷ್ಟು dirty ಆಗಿದೇ”ಂತ ಗೊಣಗುಟ್‌ಕೊಂಡಾಂತಿಟ್ಕೊ. ಆಗ ಬಾಳು, ನೀನು ಬೆಪ್ತಕ್ಡಿ ಹಾಗೆ ನಿಲ್ಲದೆ… ಸುತ್ಮುತ್ನೋಡಿ ಕೊನೆ ಮೂಲೇಲೆ ಗೋಡೇಗೆ ಒರಗ್ಕೊಂಡಿರೊ ಪರಕೇನ ಕಸ್ಕೊಂಡು, ಜಡ್ಡಿ Chambersನ ಜಾಡ್ಸಿ ಗುಡ್ಸಿ, ಕಸದ್ ಗುಡ್ಡೇನ ಕದದ ಹಿಂದೆ ಪೇರ್ಸಿ, ಕಸ್ಬರಿಕೇನ ಇದ್ಕಡೆ ಇಟ್ಬಿಟ್ಟು ಜಡ್ಜಿ ಪಕ್ಕಕ್ಕೆ ಬಂದು ತುಟಿ ಕದಸ್ಲ್ದೆ ತೆಪ್ನೆ ನಿಂತೇಂತಿಟ್ಕೊ, ಮಸ್ಲ! ಆಗ ಜಡ್ಜಿ ಮೂಗಿನ್ ಮೇಲೆ ಬೆರಳಿಟ್ಕೊಂಡು, “ಎಲಾ ನಾನು ಗೊಣಗುಟ್ಟಿದ ಮಾತ್ರಕ್ಕೇನೇವೇ ಈತ ಇಷ್ಟ್ಕೆಲ್ಸ ಇಷ್ಟು ಚಟುವಟಿಕೆಯಿಂದ ಮಾಡಿರೋದ್ನ ನೋಡಿದ್ರೆ ಇಂಥಾವೊಬ್ಬ ನನ್ನ ಪಕ್ಕದಲ್ಲೇ ಇದ್ರೆ ನಾನೇ ಎಷ್ಟ್ಕೆಲ್ಸ ಮಾಡ್ತಾ ಇದ್ದೆ! ಅದೂ ಎಷ್ಟ್ಚೆನ್ನಾಗಿ ಗುಡ್ಸಿದಾನೆ! ಕಸ ಗೂಡ್ಸೋದ್ರಲ್ಲಿ neat ಆಗಿರೋದು ತನ್ನ ಕಸಬ್ನಲ್ಲೂ neat ಆಗಿರ್ತಾನೆ. ಇವನ Chambersಊ neatಉ, tableಉ, recordಊ paperಊ neat. Therefore ಇವನ Lawನೂ Must be neatಊ!” ಅಂತ ನಿನ್ಮೇಲೆ ಖುಷಿಬಿದ್ದು, next ಯಾವ್ದಾದ್ರೂ vacancyಲಿ ಹಾಕ್ತಾನೆ! ನಿಸ್ಸಂದೇಹ! So much for ಗುಡ್ಸೋದು… ಅಡಿಗೇಂತೀಯ! ಹನ್ನೊಂದು ಘಂಟೇಗೆ ಕೋರ್ಟಿಗೆ ಬಂದ ಜಡ್ಜಿ, “I do not understand you”, “you are wasting my time”… ಹೀಗೆಲ್ಲಾ ಒಂದು ಫಂಟೆವರಿಗೂ ರೇಗಿದ ಜಡ್ಜೀಗೇ ಒಂದು ತಟ್ಟೆ ಬೋಂಡ ಒಂದು ಕಪ್ ಕಾಫೀ tiffin timeಗೆ ಸೇರಿಸ್ಬಿಡು! ಇನ್ಮಧ್ಯಾಹ್ನವೆಲ್ಲಾ reverse gearಉ! “Yes, Mr. Balu “, “Quite so, Mr. Balu!” ಹೀಗೆಲ್ಲ ನೀನ್ ಬಾಯ್ದಿಟ್ಟಿದ್ದೆಲ್ಲಾ ಬಂಗಾರ! ಅಡಿಗೆ ಆಯ್ತೇ… ಇನ್ನು ನಿನಗೆ ಕೊಡಬೇಕಾದ ಬಾಕಿ ಹದಿನೈದಿಪ್ಪತ್ಲ ಮುನ್ನೂರು ರೂಪಾಯೀಂತೀಯಾ. ಈ ಮುನ್ನೂರು ರೂಪಾಯಿನ್‌ಗತಿ ನಿಮ್ಮನೇಲಾಗುತ್ತೆ ಗೊತ್ತೆ? ಮೂಗ್ಬಟ್ಟೋ, ಮೂಗುತಿಯೋ, ಕತ್ರಿ ಬಾವ್ಲಿನೋ, ಕಂಠೀಸರಾನೋ ಮಾಡ್ಕೊಂಡು ನಿಮ್ಮನೆ ಹೆಂಗಸ್ರು ನಲಿದಾಡೋಕೆ ನೆಪ್ಪಾಗುತ್ಯೇ ಹೊರ್ತು ನಿನಗುಪ್ಯೋಗವೇನೂ ಆಗೋದಿಲ್ಲ. ನೀನು ಕಷ್ಟಪಟ್ಟು ಸಂಪಾದ್ಸಿ ನನ್ ಕೈಪೆಟ್ಟಿಗೇಲಿ ತಯಾರಾಗಿರೋ ನಿನ್ನ ಮುನ್ನೂರು ರೂಪಾಯಿಗ್ಳು!… ನನ್ನ ಅಭಿಪ್ರಾಯ ಏನು ಅಂತೀಯ ಬಾಳು… ನಿನ್ನ ಸಂಬ್ಳಾನೆಲ್ಲಾ careful ಆಗಿ ಕೂಡಿ ಹಾಕಿ ಕೈ ಪೆಟ್ಗೇಲಿಟ್ಕೊಂಡು…. ಲೇಹ್ಯ ಮಾಡಿಕ್ಕೊಂಡಿದೇನೆಲ್ಲಾ Law ಅಂಬೋದ್ನ, ನನ್ನ ಮಂಡೆ ಅಂಬೋಜಾಡೀಲಿ… ಆ ಲೇಹ್ಯಾನ ಗುಳಿಗೆ ಗುಳಿಗೆಯಾಗಿ ನಿನ್ನ mental digestion… ಬುದ್ದಿಯ ಜೀರ್ಣ ಶಕ್ತಿ ಗೆ ಅನುವಾಗಿ ತಿನ್ನಿಸಿ… ನಿನ್ನ called to the bar ಅಂತ ಲಾಯ್ರಿಯಾಗಿ ಮಾಡಿ… ನಿನ್ನ ದುಡ್ನಲ್ಲಿ Chambers ತೊಗೊಂಡು… ಒಂದು set of Law Books purchase ಮಾಡಿ ನಿನ್ನproperಆಗಿ install ಮಾಡಿ ನಿನ್ನೆ ಕಕ್ಷಿಗಾರರ ಕೇಸ್ನ ನೀನೇ ಕೋರ್ಟ್ನಲ್ಲಿ conduct ಮಾಡೋದ್ನ ಕಣ್ತುಂಬ ನೋಡಬೇಕೂಂಬೋ ಕೋರಿಕೇಗೆ ಅಸ್ತಿ ಭಾರವಾದ ಕೆಲಸಗಳ್ನ ಮಾಡಿಸ್ತ ನಿನಗೆ training ಕೊಡ್ತಿರೊ ನನ್ಮೇಲೇ ಅಪನಂಬಿಕೆಯೇ ಬಾಳು?
(ಬಾಳು ಇದನ್ನೆಲ್ಲಾ ಕೇಳಿ ಆಶ್ಚರ್ಯಪಟ್ಟು, ಪಶ್ಚಾತ್ತಾಪದಿಂದ ಉಕ್ಕಿ ಬರುವ ದುಃಖವನ್ನು ತಡೆಯಲಾರದೆ ಅಹೋಬ್ಲುವಿನ ಅಂಗೈಮೇಲೆ ಮುಖವನ್ನು ಘರ್ಷಿಸಿಕೊಳ್ಳುತ್ತ ರೋದಿಸುವನು)
ಬಾಳು! ಹೀಗೆ ಶೋಕಪಡೋದು ಅನುಚಿತ, ಅನಾರ್ಯ, ಅಸ್ವರ್ಗ, ಅಕೀರ್ತಿಕರ, ಅರ್ಜುನ… ಅಲ್ಲ ಬಾಳು! ನ್ಯಾಯಸ್ಥಾನಾಂಬೋ ದೇವಸ್ಥಾನದಲ್ಲಿ, Court room ಅಂಬೋ ಗರ್ಭಗೃಹದಲ್ಲಿ, Judical bench ಅಂಬೊ ಮಂದಾಸನದ ಪೀಠದ ಮೇಲೆ ನಿನ್ನೆ ಕೂಡ್ಸಿ, ಚೀಫ್ ಜಡ್ಜಿಯಾಗಿ ಪಟ್ಬಾಭಿಷೇಕ ಮಾಡ್ಸಿನಿನ್ನ ಮುಖಕ್ಕೆ ಮಂಗಳಾರ್ತಿ ಎತ್ತಿ, ನಿನ್ನ ದರ್ಶ್ನ ಮಾಡಿ ಸಂತೋಷಪಡಬೇಕೆಂಬೋ ಅಭಿಪ್ರಾಯಾನ ಮುಂದಿಟ್ಕೊಂಡು ಈಗ ತಾನೇ ನಿನ್ನೆ ಕೈ ಹಿಡ್ಕೊಂಡು… ಆ ದೇವಸ್ಥಾನದ ಬಾಗಿಲು ತೆಗೆದು ಪ್ರಾಕಾರಾನ ಪ್ರದಕ್ಷಿಣೆ ಮಾಡಿಸ್ತಿರೋ ನನ್ಮೇಲೆ ಅಪನಂಬಿಕೆಯೇ ಬಾಳೂ? ಮಗೂ…?
(ಬಾಳು ಹಿಡಿದುಕೊಂಡು ಕೈ ಅಲ್ಲದ ಮತ್ತೊಂದು ಕೈಯಿಂದ ಬಾಳುವಿನ ತಲೆಯನ್ನು ವಾತ್ಸಲ್ಯದಿಂದ ಸವರುತ್ತ)
ಇನ್ನೂ ನನ್ಮೇಲೆ ಅಪನಂಬಿಕೆಯೇ ಬಾಳು?… ಹೀಗೆ ನನ್ನ ನಂಬಿ leader of local barಆಗಿ ಮುಂದಕ್ಕೆ ಬರ್ತೀಯಾ? ಇಲ್ಲ, ನಿನ್ನ ಹಾಳು ಮುನ್ನೂರ್ರೂಪಾಯ್ನ ನಿಮ್ಮನೆ ಹೆಂಗಸ್ರ ಪಾಲುಮಾಡಿ ಸಾಯೋವರೆಗೂ ನಿಮ್ಮನೆ ಪರಿಚಾರಕ್ನಾಗಿ ನರಳ್ತೀಯಾ?… ಇದನ್ನೆ ಈಗ್ಲೆ ಇತ್ಯರ್ಥ ಮಾಡ್ಕೋ, ಕಂದ!
ಬಾಳು : (ದುಃಖವನ್ನು ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳುತ್ತ) ಕ್ಷಮ್ಸಿಸಾರ್! ನಾನು ಮುಂದಕ್ಕೆ ಬರೋದ್ನ ನಿಮ್ಮನಸ್ನಲ್ಲಿ ಮುಂದಿಟ್ಕೊಂಡು ನನಗೆ training ಕೊಡ್ತಿರೊ ಮರ್ಮ ತಿಳಿಯದ ನನ್ಮಂಕುತನಾನ ಕ್ಷಮ್ಸಿ ಸಾರ್! ಕಂಡೋರು ಕಾಣ್ದೋರು ನನಗೆ ಹೇಳ್ಕೊಟ್ಟದ್ನೆಲ್ಲಾ ನಂಬಿ ಹುಚ್ಚುಹುಚ್ಚಾಗಿ ನಾನು ಹರಟಿದ್ದೆಲ್ಲಾ ಮರತ್ಬಿಡಿ, ಸಾರ್! ನಿಮ್ಮೇಲೆ ನನಗಿರೋ ನಂಬ್ಕೆ ಒಂದೆರಡು ಕ್ಷಣ ಜಾರಿದ್ನ ಮನಸ್ಸಿಗೆತಂದ್ಕೋಬೇಡಿ. Sir!.. ಕ್ಷಮ್ಸಿ Sir!…ತಪ್ಪಾಯಿತು. ಕ್ಷಮ್ಸಿ Sir
(ಬಲವಾಗಿ ರೋದಿಸುತ್ತ ಅಹೋಬ್ಲುವಿನ ಕೈಯನ್ನು ಎದೆಗೆ ಉಜ್ಜಿಕೊಳ್ಳುತ್ತ ಪೇಚಾಡುವನು)
ಅಹೋಬ್ಲು : (ಬಾಳುವಿನ ಗಲ್ಲವನ್ನು ಹಿಡಿದು ಮುಖವನ್ನು ಮೇಲಕ್ಕೆತ್ತಿ ಮಧುರ ವಚನಗಳಿಂದ) ಬಾಳು, ನನ್ಮೇಲಿನ ನಂಬ್ಕೆ ನಿಮಿಷ ಮಾತ್ರ ಮರೆತ ನಿನ್ನ ತಪ್ಪು ಕ್ಷಮ್ಸೋಕೆ ನಾನು ಯಾರು? ಮಗು. ಪಸುಳೆ, ಪಶು ಕಂದ ಅಂತಾರಲ್ಲ ಅಂಥ ಶಿಶುವಾದ ನಿನ್ನ ಹೀಗೆ ಬಿಕ್ಕಿಬಿಕ್ಕಿ ಅಳೋ ಸ್ಥಿತೀಗೆ ತಂದ ನನ್ನ ತಪ್ಪು ಕ್ಷಮ್ಸೋಕೆ ನೀನು ಯಾರು? ಯಾರು ಯಾರಿಗೆ ಹೊಣೆ? ಇದು ಎರವಿನ್ ಸಂಸಾರ! ನಿನ್ನ ತಪ್ಪಾಗ್ಲೀ ನನ್ನ ತಪ್ಪಾಗ್ಲೀ ಎಲ್ಲರ್ ತಪ್ಪನ್ನೂ ಕ್ಷಮ್ಸಿ, ಕಾಪಾಡೋಕೆ
ಪರಮಾತ್ಮನೊಬ್ಬನಿಧಾನೆ ಅಂಬೋದ್ನ ಮರೀದೆ ಆತನ ಮೇಲೆ ಭಾರಹಾಕಿ ನಾವಿಬ್ರೂ… ಮುಂದಿನ್ಕಾರ್ಯ ಮಾಡೋದಲ್ವೇ… ಉಚಿತ!
ಬಾಳು : ಹೂಂ ಸಾರ್, ನೀವು ಹೇಗೆ ಹೇಳ್ತೀರೋ ಹಾಗೇ ಸಾರ್
ಅಹೋಬ್ಲು: ಹಾಗಾದ್ರೆ…ಇರ್ಲಿ, ಈಗ ಹೇಗಿದೆ ಮೈ… ಮನಸ್ಸು ಇತ್ಮಾದಿ?….ಬೇಕಾದ್ರೆ ಸ್ವಲ್ಪ ಕೂತ್ಕೊಂಡು ಸುಧಾರ್ಸ್ಕೊ ಮಗು… ಸುಧಾರ್ಸ್ಕೊ!
ಬಾಳು : ಪರವಾಗಿಲ್ಲ ಸಾರ್, ತಕ್ಕಮಟ್ಟಿಗಿದೆ…ಮ್ಶೆ…ಮನಸ್ಸು….
ಅಹೋಬ್ಲು : ಒಟ್ಟ್ನಲ್ಲಿ fairly strongಊ…ಅನ್ನು…ಊಂ?
ಬಾಳು : ಊಂ … ಸಾರ್!
ಅಹೊಬ್ಲು : ಹಾಗಾದ್ರೆ…ಎರಡೂವರೆ ತೊಲ ಎತ್ತಿದ್ರೆ ಆಯಾಸ್ವಿಲ್ವಲ್ಲಾ ನಿನಗೆ?
ಬಾಳು : ಎಲ್ಬಂತೂ ಸಾರ್!
ಅಹೋಬ್ಲು :Goodಉ. ರಾಮ್ಶೆಂಟ್ರಿಂಗ್ಡೀಗೆ ಹೋಗಿ ಎರಡೂವರೆ ತೊಲ ನೆಶ್ಯ ತಂದ್ಬಿಡು, ಮಗು. ಯಾವಾಗಿನ ಹಾಗೆ ನೀನೇ ದುಡ್ಕೊಡಬೇಡ… ಅವನ ಕೇಸ್ ಹೀರಿಂಗು ನಾಳೆ ಅಂತ… ಬೇಗ ಬಾ, ಮಗು. ಬೀದೀಲಿ ಹುಷಾರು …. ಬಸ್ಸುಗ್ಳು. ಜಟ್ಕಾಗ್ಳು… ಭದ್ರವಾಗಿ ಬಂದು ಸೇರು.
(ಬಾಳು ನಿಷ್ಕ್ರಮಣ ಎಡಬಾಗಿಲಿನಿಂದ)
(ಸ್ವಗತಂ)
ಬದುಕಿದೇ… As I have always maintained… ಎಂಥ ತಕ್ರಾರುಗ್ಳು ಬಂದ್ರೂ lifeನಲ್ಲಿ. . . ಸ್ವಲ್ಪ tactics…diplomacyಗಾನ use ಮಾಡಿದ್ರೆ ಸರ್ವವೂ ಸರಿಹೋಗುತ್ತೆ. . . ಹೌದು. . . ಕಾಫಿಗೇನ್ ತಡ?
ಜೀವು : (ಹಿಂದಿನ ಬಾಗಿಲಿನಿಂದ ಒಂದು ಚೊಂಬಿನಲ್ಲಿ ಕಾಫಿಯನ್ನೂ ಲೋಟಾವನ್ನೂ ತಂದು ಮೇಜಿನ ಮೇಲಿಟ್ಟು) ಕಾಫಿ ಅರ್ಹೋದದ್ ನನ್‌ತಪ್ಪಲ್ಲ!
ಅಹೊಬ್ಲು : ಇದೇನ್ ಜೀವು, ಹೀಗ್ಹೇಳ್ತೀಯಾ ? ಹೀಗ್ಬಾ. (ಜೀವು ಅಮೀಪಿಸುತ್ತಲೂ ತಾನು ಕೂತಿದ್ದ ನೆಲವನ್ನು ತಾನು ಹೇಳುವ ವಚನಗಳಿಗೆ ಉದಾಹರೆಣೆಯಾಗಿ ಉಪಯೋಗಿಸುತ್ತ) ಕ್ಷೀರಸಾಗರ, ಜೀವು! ಇತ್ಕಡೆ ಸುರರು, ಅತ್ಕಡೆ ಅಸುರರು. . . ಮಂದರಪರ್ವತಕ್ಕೆ ಅದಿಶೇಷೆನ್ನ ಸುತ್ತಿ ಕಡೀತಿಧಾರೆ. . . ಎತ್ಕೋತ ಎದ್ಬಂತು ಕಾಲಕೂಟ ವಿಷ! ಅದನ್ನು ಆ ಕೈಲಾಸಪತಿನುಂಗಿ. . . ಶ್ರೀಕಂಠ. . . ಸಿತಕಂಠ…ನೀಲಕಂಠನಾಗತ್ಲೂವೆ. . . ಕಡೆಯೋದ್ನ continue ಮಾಡ್ತಾ . . .ಅಮೃತ ಉಕ್ತಿಧೆ. . . ಅದ್ನೆಲ್ಲಾಸುರರು ಈ ದಡಕ್ಕೆ ಎಳ್ಕೊಂಡು…ಇಂದ್ರ ಮೇಘನಾದ…ಎಲೆ ಹಾಕ್ರೋ ಅಂತ ಕಿರಲ್‌ದ. . . ಇನ್ನು ಹಾಕಿದ ಒಂದೊಂದೆಲೇ ಮುಂದೆ ಒಬ್ಬೊಬ್ಬಮರ. ಅಮರನೇನು. . . ಅಗ ಇನ್ನೂ ಮರ. ಅಮೃತಾನ ಗದುಕಿದ್ಮೇಲೇನೇವೇಯೇ ಅಮರ ಅದದ್ದು, ಇನ್ಬಡಿಸೋಕೆ ವಿಷ್ಣು, ಮೋಹಿನಿ ಅವತಾರ, ಜೀವು! ಮೋಹಿನಿ ವಿಷ್ಣು ! ಹೀಗೆ ಜೀವೂ, ಬಡಿಸಿದ ಪದಾರ್ಥ ಅಮೃತ! ಬಡಿಸೋದ್ ಮೋಹಿನಿ! ಇದ್ನ ಬಕಾಸುರನ ಹಾಗೆ ಭಕ್ಷಿಸೋದ್ ಬಿಟ್ಬಿಟ್ಟು “ಅಮೃತ ಅರಿಹೋಗಿದೇ!”ಂತ ಬಡುಕೊಂಡ್ರೆ ದೇವತೆಗ್ಳು? ಕಾಫಿ ಆರಿದ್ರೇನು! ಹೇಗಿದ್ರೇನು! (ಜೀವುವಿನ ಹಸ್ತವನ್ನು ಹಿಸುಕುತ್ತ) ನಮ್ಮ ಜೀವು ಮುಟ್ಟಿದ್ದೆಲ್ಲಾ ಜೀವಾಮೃತ ನನಗೆ!
ಜೀವು : (ತನ್ನ ಕೈಯನ್ನು ಹಿಡಿದ ಅಹೋಬ್ಲುವಿನ ಕೈಯನ್ನು ಒದರಿ ಸಾಕ್ನಿಲ್ಸಿ ಅಂದ್ರೆ ನಿಮ್ಗಿಲೀಟ್ ಮಾತುಗ್ಳು! ಆರಿದ್ ಕಾಪಿ ಇರ್ಲಿ …..
ಅಹೋಬ್ಲು : (ಬೆಚ್ಚಿಬಿದ್ದು) ಹಾಗೇ ಇರು ಜೀವು! ಕದಲಿಸ್ಬೇಡ ಮುಖಾನ! . . ..ರಾಧಾ!? ಇಷ್ಟುದೊಡ್ಡ ಕಣ್ಣಿಲ್ಲ. ಊರ್‍ವಸೀ? Not at all!ಇಷ್ಟು ಚಿಕ್ಕ ಬಾಯಿಲ್ಲ! ಮೋಹಿನಿ? . . .Never! ಕೂದ್ಲು ಉಯ್ಯಾಲೆ ಆಡ್ತ ಎಷ್ಟು ಬೀಸಿದ್ರೂನೂವೆ. . . ತಿಲೋತ್ತಮಾ?. . .perhaps. . . (ಕೈಬೆರಳುಗಳಿಂದ ಥಟ್ಟನೆ ಜೀವುವಿನ ಕೆನ್ನೆಯನ್ನು ಸವರುತ್ತಾ) ದಮ್ಮಯ್ಯ ಜೀವು, ದಯವಿಟ್ಟು ಕಾಫೀನ ಬಿಸಿ ಮಾಡ್ಕೊಂಬಂದ್ಯೋ ಬದಕ್ದೆ ಒಲೇ ಉರೀತಿದ ತಾನೇ?
ಜೀವು : ಕಾಫಿ ಮಾಡಿದ್ದು ಒಲೇಲಲ್ಲ stoveನಲ್ಲಿ
ಅಹೋಬ್ಲು : ಯಾಕೆ?
ಜೀವು : ಯಾಕೇನು? ಒಲೇಗ್ ಸೌದೆಯಿಲ್ಲ.
ಅಹೋಬ್ಲು : ಮೊನ್ನೆ ಮೊನ್ನೆ ಅಲ್ವೇ ಒಂದು ಗಾಡಿ ಕಟ್ಗೆ. . . ?
ಜೀಬು : ಕಟ್ಗೆ ಕಟ್ಗೇನೇ, ಏನು ಉಪಯೋಗ? ಅದನ್ ಒಡೆದರೆ ತಾನೇ ಒಲೇಗೆ ಉಪಯೋಗ, ನೀವೋ ನಿಸ್ತ್ರಾಣಿ. ಇನ್ನು ನಿಮ್ ಗುಮಾಸ್ತೇನೊ ಗೊಂದ್ನಲ್ಲಿ ಜೋಡಿಸ್ಥ ಹಂಚಿ ಕಡ್ಡಿ. ಇನ್ಯಾರು ಮನೇಲಿ? ನಾನೊಬ್ಳು. ಆ ಸೊಂಟ ಮುರ್ದ ಸಿವಂಗಿ. . . ಬೋರ! (ತನ್ನ ಹೆಸ್ರು ಕೇಳಿಬರೂತ್ಲೂವೆ ಬೋರನು ಹಿಂಬಾಗಿಲಿನಿಂದ ಪ್ರವೇಶಿಸುವನು) ನನಗೋ ನೆನ್ನೆಯೆಲ್ಲಾ ಲಾಲ್ಬಾಗಿಗೆ ನಡ್ದೂ ನಡ್ದೂ ಮೈಯೆಲ್ಲಾ ನೋವು. ಏನ್ಲಾಯ್ರಿ ಕೆಲ್ಸಾನೊ ನೀವು ಮಾಡೋದು! ಒಂದು ಕುದುರೆ ಗಾಡೀಗೆ ಯೋಗ್ಯತೆಯಿಲ್ಲ! _
ಅಹೋಬ್ಲು : ನಾನೇನ್ಮಾಡೋದು ಜೀವು! ಗಾಡಿಗೆದುಡತ್ತೋ ಕುದುರೇಗಿಲ್ಲ. ಕುದುರೇಗ್ ದುಡ್ಡಿತ್ತೋ ಗಾಡೀಗಿಲ್ಲ. ಎರಡ್ನೂ ಕೊಂಡ್ಕೊಳ್ಳೋಕೆ ಕೂಡ್ಹಾಕಿದ್ರೋ ದುಡ್ನ. . . ಸಾಮಾನುಗಳಿಗೆ ದುಡ್ಡಿಲ್ಲ (ಬೋರನನ್ನು ಕ್ಷಣಮಾತ್ರ ದುರುಗುಟ್ಟಿ ದರ್ಶಿಸಿ…ಮುಖದಲ್ಲಿ ಜ್ಞಾನೋದಯವನ್ನು ವ್ಯಕ್ತಿಸುತ್ತಾ ಒಂದ್ಯೋಚ್ನೆ ಜೀವು! ಫುಟ್ಟದೊಂದು ಗಾಡೀನೂ ಸಾಮಾನ್ನೂ ಸಂಪಾದಿಸ್ಕೊಡ್ತೇನೆ…ನಿನಗೆ ಬೇಕಾದಾಗೆಲ್ಲಾ ಈ (ಬೋರನನ್ನು ಸೂಚಿಸುತ್ತ) ಚತುಷ್ಪಾದಾನ harness ಮಾಡ್ಕೊಂಡು drive ಮಾಡು.
ಬೋರ : (ಸ್ವಗತಂ) ಸಿಕ್ತು ನಮ್ಮ ಒಂಸಕ್ಕೆ ಒಸ್ಕಸ್ಬು! ನಾನೊಬ್ನೇ ಯಾಕೆ, ನಮ್ಮ ಅಣ್ಣನ್ನ ಕರ್ತರ್ತೀನಿ…ಇಬ್ಬರ್‍ನೂ ಕಟ್ಕೊಂಡು ಒಡೀರಿ ಜೋಡಿಕುದ್ರೆ ಸಾರಾಟ್ನ. . .
(ಬಲಬಾಗಿಲಿನಿಂದ ನಿಷ್ಕ್ರಮಣ)
ಅಹೋಬ್ಲು : Joking ಇರ್‍ಲಿ ಜೀವು. ಕಡ್ಲೆಹಿಟ್ಟಿದೆ, ಬಾಳೇ ಕಾಯೋ ಬದ್ನೆಕಾಯೋ ಇದೆ. ಒಂದ್ತಟ್ಟೆ ಬೋಂಡ ಮಾಡಿ ತಂದ್ಬಿಡು stoveನಲ್ಲೆ. ಬಿಸಿ ಬಿಸಿ ಕಾಫಿ plus ಬೋಂಡ. . . ಇನ್ನು ಆರು ತಿಂಗಳ್ಗೆ ಬೇಕಾದಷ್ಟು ಸೌದೆ ಒಡೆದ್ಹಾಕ್ತೇನೆ.
(ನಿಟ್ಟುಸಿರು ಬಿಡುತ್ತಾ! ಜೀವೂ ಹಿಂಬಾಗಿಲಿನಿಂದ ನಿಷ್ಕ್ರಮಿಸುವಳು)
ಏನಿದು! ನಾನೇ ಮನೇಗೆ ಸೌದೆ ಒಡ್ಯೋ ಸ್ಥಿತೀಗೆ ಬಂದ್ಬಿಟ್ಟಿದೆಯಲ್ಲ ನನ್ನ ಸಂಸಾರ! Still ಅಪತ್ಕಾಲೆ ನಾಸ್ತಿ ಮರ್ಯಾದೆ! Manಆಗ್ಹುಟ್ಟಿದ್ಮೇಲೆ ಮಿಕ್ಕವರಿಲ್ದಾಗ Myselfಏ ರಾಜ, Moustacheಏ ಮಂತ್ರಿ! ಕೈಯಿ ಕಾಲೇ Infantry, Cavalry! But. . .ಬೋಂಡಾನೂ ಕಾಫೀನೂ ಬರ್ಲಿ! ಏನೋ ಇದೂವರ್‍ಗೂ ನನ್ಕೈಬಿಡ್ದೆ ನನ್ನ ಜೀವ ನನ್ನ ಜೀವು ಸಮೇತ ಜರುಗಿಸ್ತಿರೋ ಜಗದೀಶ ಈಗ ಹಿಂಜರಿದ್ನೋ ಅವನಿಗೇ ಅಪಯಶಸ್ಸು. . . ಅಪಮಾನ!
(ಬೀದಿ ಬಾಗಿಲು ತಟ್ಟುವ ಸದ್ದನ್ನು ಕೇಳಿ) ಯಾರದು? ಬನ್ನಿ ಒಳಗೆ!
ಕೆಂಪೇಗೌಡ : (ಪ್ರವೇಶಿಸಿ…ಬಾಗಿ) ಕೈ ಮುಗ್ದೆ ಬುದ್ದಿ, ತಕೊಳ್ರ, ಕಟ್ನಾವ
(ಕಟ್ಟನ್ನು ಮೇಜಿನ ಮೇಲಿಡುವನು)
ಅಹೋಬ್ಲು : ಏನು Case ಏ….?
ಕೆಂಪೆಗೌಡ : ಊಂ ನಿಂಪಾದ. Case ಅಲ್ದೆ ಲಾಯ್ರ ಮನೆಗೆ ನಾನ್ಯಾಕೆ ಬರ್‍ಲಿ ನಿಮ್ನೇಗೆ ನನ್ನೊಡೆಯಾ! ದೊಡ್ಡಟ್ಟಿ ನಿಂಗಪ್ಪಣ್ನ ಯೆಂಗಾದ್ರೂ ಕೋರ್ಟ್ಗೆಳ್ದು ನಮ್ಮಯ್ಯನ್ಕಾಲ್ದಲ್ಲಿ ಅವರಯ್ಯ ಕಸ್ಕೊಂಡ ಒಲ ತಿರುಗಿ ನನ್ಕೈಗೆ ಬರೋಗಂಟ…ಏನ್ದುಡ್ತಾನೆ ಕರ್ಚಾಗ್ಲಿ. . .
ಅಹೋಬಲು : ಇದೆಲ್ಲಾ ಇರ್ಲಿ. . . ಏನ್ Caseಉ?. . . ಕೇಳೋದೇನು, ಕಟ್ನಲ್ಲೇ ಕಂಡುಬರುತ್ತೆ…(ಕಟ್ಟನ್ನು ಬಿಚ್ಚೆಲು ಉಪಕ್ರಮಿಸುವನು)
ಅಲ್ಲೇನು ನೋಡೋದು ಬುದ್ದಿ! ಎದ್ರು ಮನೆ ಲಾಯ್ರಿ ಕಟ್ನೆಲ್ಲಾ ಒಂದ್ಕಾಗ್ಜ ಬುಡ್ದೆ ಮೊದ್ಲಿನಿಂದ ಕೊನೇತಂಕ “ಸುಲೋಚ್ನ ಸಿಕ್ಕಿಸ್ಕೊಂಡು. . . ಓದಿ. . . (ಮೇಜೆನ ಮೇಲಿರುವ Lawಪುಸ್ತಕಗಳನ್ನು ಸೂಚಿಸಿ) ‘ಇದ್ಯಾವ್ಮೂಲೆ. . . ! ಇವುಗ್ಳಪ್ಪಂದ್ರಂಗೆ. . . ದೊಣ್ಣೆ ದೊಣ್ಣೆ ಪುಸ್ತಕಗಳ್ನ ಓದ್ಕೊಂಡು “ಈ Caseಉ ಎಂಥ ಬೆಪ್ಪು ಲಾಯ್ರಿ ಕೈಲಿ ಸಿಕ್ಕಿದ್ರೂ ಸೋಲೋ ಅಂಗಿಲ್ಲಾ?’ ಅಂದ ಬುದ್ಧಿ. . . ಎದ್ರು ಮನೆ ಅವಯ್ಯ. . . ಲಾಯ್ರಿ…ನಿಮ್ಮಂಗೆ ‘ಬೊಲ್ಡ್’ ಅಕ್ಕೊಂಡೌನೆ ಮನೆ ಮುಂದೆ.
ಅಹೋಬ್ಲು : ಅಲ್ಲಯ್ಯಾ, ಎದ್ರುಮನೆ ಲಾಯ್ರಿ ಕಟ್ನೆಲ್ಲಾ ಓದಿ ಬೆಪ್ತಕ್ಡೀನೂ ಸೋಲೋಹಾಗಿಲ್ಲ ಅಂದದ್ನ ಪರೀಕ್ಷಿಸೋಕೆ ಅವನ್ಬಿಟ್ಟು ನನ್ನ ಹತ್ರ ತಂದಿದ್ದೀಯಾ?
ಕೆಂಪೇಗೌಡ : ಅಲ್ಲ ಬುದ್ಧಿ; ಅತ್ತ್ನಿಮಿಸ್ದಲ್ಲಿ ಗೆಲ್ಲೋ ಮೊಕದ್ನಮೇಗೆ ಐನೂರು ರೂಪಾಯಿ ಕೇಳ್ತಾನಲ್ಲಾ…! ಇನ್ಬಡವ್ರ ಪಾಡೆಂಗೆ? ಅಲ್ದೆ ಅವಯ್ಯನ ಜೀವ್ನ ತಾನೆ ಎಂಗೆ?
ಅಹೋಬ್ಲು : ಹಾಗಾದ್ರೆ ಆತ ದುಡ್ಕೇಳಿದ್ತಪ್ಪು ನಾನು ದುಡ್ಡಿಲ್ದೆ ದುಡ್ಯೋ ಬೆಪ್ಪೂಂತ ತೀರ್ಮಾನಿಸ್ಕೊಂಡೇ ಬಂದದ್ದು ನೀನು?
ಕೆಂಪೇಗೌಡ : ಆಂಗಲ್ಲ ನನ್ನೊಡ್ಯ. ಲೆಕ್ಕ ಲೆಕ್ಕಾನೇವೇ! ನಾಯನಾಯಾವೇಯೇ! ನಾಯವಾಗಿ…ಲೆಕ್ಕಾಚಾರದ್ಮೇಲೆ ದುಡ್ತಕೊಳ್ಳೋದ್ನ ಬುಟ್ಟುಟ್ಟು ಬಡವರ್‍ನ ಸಾವ್ರಾಂತ ಬೆದರ್ಸೋದು ನಾಯಾನಾ ನಿಂಪಾದ?
ಅಹೋಬ್ಲು : ಅಲ್ಲ, ನ್ಯಾಯವಲ್ಲ, ಬಡಬಗ್ಗರಿಗೆ ಸಹಾಯ ಮಾಡೋಕೇಂತ ಇರೋ ಲಾಯ್ರು…ಇದೆಲ್ಲಾ ಯಾಕೆ?…ಇಲ್ಬಾ. . . (ವಕಾಲತ್) ಕಾಗದದ ಮೇಲೆ ಮಶಿಯಲ್ಲಿ ಅದ್ದಿದ ಪೇನಾವನ್ನು ಓಡಿಸುತ್ತ. . .) ಹೆಸ್ರೇನಯ್ಯಾ?
ಕೆಂಪೇಗೌಡ : ಕೆಂಪೇಗೌಡ ನನ್ನೊಡ್ಯಾ. ತಾವ್ರಕೆರೆ ದೊಡ್ಡಟ್ಟಿ ಬೋರೇಗೌಡ್ನ ದೊಡ್ಮಗ ಕೆಂಪೇಗೌಡ.
ಅಹೋಬ್ಲು: (ಬರೆದು) ಇಲ್ಬಾ. . . ಬರಿಯೋಕ್ ಬರುತ್ಯೇ. . . ಹೆಸ್ರು?
ಕೆಂಪೇಗೌಡ : ಯೆಬ್ಬೆಟ್ಟ್ ಇರೋಗಂಟ ಬರವಣಿಗೆ ಯಾಕ್ಬುದ್ದಿ? (ಮಶಿಕುಡಿಕೆಯ ಬಾಯಿಗೆ ಎಡಗೈ ಹೆಬ್ಬೆಟ್ಟನ್ನು ಇಟ್ಟು ಕುಡಿಕೆಯನ್ನು ಕುಲುಕಿ ಹೆಬ್ಬೆಟ್ಟನ್ನು ಲಾಯ್ರಿ ತೋರಿಸಿದ ಕಡೆ ಒತ್ತುವನು)
ಅಹೋಬ್ಲು : ಹೌದೂ. . . ಎಷ್ಟ್ರೂಪಾಯಿನ್ಬಾಬ್ತು . . ? ಕೇಳೋದೇನು. . .
(ಎನ್ನುತ್ತಾ ಕಟ್ಟನ್ನು ಬಿಚ್ಚಲುಪಕ್ರಮಿಸುವನು)
ಕೆಂಪೇಗೌಡ : ಅಲ್ನೋಡೋದೇನ್ಬುದ್ಧಿ? ನಾನೇ ಯೇಳ್ತಿವ್ನಿ…ಐನೂರ್ ರೂಪಾಯಿನ್ತಕ್ರಾರು…ಆಲ್ನೋಡೋದೇನು?
ಅಹೋಬ್ಲು : ಹಾಗಾದ್ರೆ. . . ಸಧ್ಯ ಒಂದವರತ್ತು ರೂಪಾಯಿ ಇಲ್ಲಿಟ್ಬಿಟ್ಟು
ಕೆಂಪೇಗೌಡ : (ಕೈಮುಗಿದು) ದಮ್ಮಯ್ಯ ಬುದ್ದಿ. ದೇವ್ರೂ ನೀವೇ…ದಿಂಡ್ರೂ ನೀವೇ…ನನ್ಮಟ್ಟೀಗೆ ದೇವ್ರೇ ನನ್ನೆಜ್ಜೇನ ತಿರುಗ್ಸಿರ್ಬೇಕು. ನಿಮ್ಮನೆ ಕಡೆ. ಒಂದೇ ಮಾತು ನಂದು. “ಟಾಂಪ್” ದುಡ್ನ ಆಳೆ ತಂದ್ಬಿಡ್ಟೀವ್ನಿ ಮಿಕ್ಕರ್ಚ್ಚಲ್ಲಾ ಎಂಗಾದ್ರೂ ನೀವೇ ಸರ್ಮಾಡ್ಕೊಂಡು ಮೊಕದ್ದಮೇನ ಗೆದ್ದು ಬಂದ ದುಡ್ಗೆ. . . ನಿಮ್ಮ ಕುಶಿ ಎಂಗೊ ಅಂಗೆ.
ಅಹೋಬ್ಲು : (ಸ್ವಗತಂ) ದೇವ್ರೇ ಗತಿ! ಯಥಾಪ್ಪಕಾರ ನನ್ನ ಹಣೇಬರಹ! ನನಗ್ಬರೋ ಫೀಸೆಲ್ಲಾ conditional upon my successಉ, which again is always problematicಉ ! ಈಗ. . .
ಕೆಂಪೇಗೌಡ : ಬುದ್ದಿ, ಊರು ಸುತ್ಕೊಂಬರ್ತಿನೀ. ನೆಂಟ್ರೌರೆ. ಆದ್ರೆ ಬುದ್ದಿ, ರಾತ್ರಿ ಮನಿಕ್ಕೋಳ್ಳಾಕೆ ಒಸಿ ಜಾಗ ಕೊಡಬೇಕ್ರ ಜಗ್ಲಿ ಮೇಲೆ. ಇಳ್ಳು ಬಿದ್ಕೊಂಡು ಬೈಸಾರಿ ಅಳ್ಳಿ ಕಡೆ ಕಾಲಾಕ್ತೀನ್ರ.
ಅಹೋಬ್ಲು : (ಕಟ್ಟನ್ನು ಮೇಜಿನ drawಗೆ ಸೇರಿಸಿ ಆತ್ಮಗತಂ) ಈಗೇನ್ಮಾಡೋದು? ಮುನ್ಸಿಫ್ ಕೋರ್ಟು at least ನಾಲ್ಕು adjornmentಉ ಒಂದು ಹೀರಿಂಗು. . . ಇಪ್ಪತೈದು. sub courtಊ District Court…ditto. . . ಇಪ್ಪತ್ತೈದ್ನಾಕ್ಲ ನೂರು. . . ಮನುಷ್ಯ ತಕ್ಕಮಟ್ಗೆ ಗಟ್ಟಿಮುಟ್ಟಿ. ದಿನಕ್ಕೆ ಎಂಟಾಣಿ. . .ತಿಂಗಳಿಗೆ ಹದಿನೈದು. ಹದಿನೈದಾರ್‍ಲ ತೊಂಬತ್ತು. . . ಹತ್ರೂಪಾಯಿ ಹೋಗ್ಲಿ…ಇವನ ಹಳ್ಳಿಯಿಂದ ತರಕಾರಿ ಬಾಳೆಎಲೇಲಿ make-up ಅಗುತ್ತೆ. . . case ಗೆದ್ದು ಬರಬಹುದಾದ ದುಡ್ನ ಕೆಲಸ್ದಲ್ಲಿ ಈಗ್ಲೇ ಕೀಳೋದು diplomacy. (ಪ್ರಕಾಶಂ) ಅಪ್ಪಾ ಗೌಡ, ಒಂದು ಮಾತು. ಈ Caseಉ ಗೆದ್ದು ಕೊಡೋಕೆ ಇನ್ನು ಎರಡು ತಿಂಗಳಾದ್ರು ಆಗುತ್ತೆ. . . ಸರಾಸರಿ ಹೀರಿಂಗ್ಮೇಲೆ ಹೀರಿಂಗು. . . ಸಾಕ್ಷಿಗ್ಳು. . .
ಕೆಂಪೇಗೌಡ : ಅಲ್ಲವ್ರಾ!
ಅಹೋಬ್ಳು : ಅಲ್ಲಿವರ್‍ಗೂ ನಾನು ಬದುಕಿರ್ಬೇಡ್ವೇ?
ಕೆಂಪೇಗೌಡ : ಇದೇನುಚ್ಚು ಬುದ್ಧಿ? ಬದುಕ್ದೆಯೇನು…ನಿಮ್ಮಂತಾವ್ರು?
ಅಹೋಬ್ಲು : ದಿನಾ ಬದುಕಿರೋಕೆ ಅನ್ನ ಬೇಕು. ಅಕ್ಕಿ ಇದೆ ಮನೇಲಿ. ತರ್ಕಾರಿ ಇದೆ. ದಿನಸುಗಳು ಇವೆ. ಆದ್ರೆ ಕೆಂಪಣ್ಣ. . . ಈ ಮನೆ ಕಟ್ದೋನು ಅಡಿಗೆ ಮನೇಲಿ ಒಲೆ ಹಾಕ್ದಾಗ…ಒಲೆ ಬಾಯಿ ಚಿಕ್ಕದಾಗಿದೆ. ನಾನು ಕೊಂಡ್ಕೊಂಡ ಗಾಡಿ ಸೌದೇನೋ ದೊಡ್ಡ ಕಟ್ಟಗೆಗ್ಳು. ಇದಕ್ಕೇನು ಉಪಾಯ?
ಕೆಂಪೇಗೌಡ : ಉಪಾಯವೇನು ಬುದ್ದಿ? ಕಟ್ಗೇನ ಚಿಕ್ಕಚಿಕ್ಕದಾಗಿ ಸೀಳೋದೇ ಉಪಾಯ!
ಅಹೋಬ್ಲು: ಉಪಾಯ ಒಂದೇ ಅಲ್ಲ. . . ಉಪಕಾರ. ನಿನ್ನಿಂದ ಆಗಬೇಕಾದ ಉಪಕಾರ.
ಕೆಂಪೇಗೌಡ : (ರೇಗಿ) ಇದೇನ್ನಾಯಾ ಬುದ್ದಿ! Caseಗೆ ಕಟ್ತಂದೋನ್ಕೈಲಿ ಕಟ್ಗೆ ಒಡಿಸ್ಕೋಂಡು ಕೂಲಿ ಕೆಲ್ಸ ಮಾಡಿಸ್ಕೊಳ್ಳಾದಾ ನಿಮ್ಲೆಕ್ಕಾಚಾರಾ! ಕೊಡಿ ಬುದ್ಧಿ ಕಟ್ನ : ನೀವಿಲ್ದೆ ಇದ್ರೆ ಏಟೋ ಲಾಯ್ರು!
ಅಹೋಬ್ಲು : ಹಾಗಾದ್ರೆ ಈ ಕಟ್ಬಿಡಿಸ್ಕೊಳ್ಳೋಕೆ ಒಬ್ಬ ಲಾಯರ್‍ನಿಟ್ಟು ಬಿಡಿಸ್ಕೊ. ಯಾರ್‍ಹತ್ರ? ಲಾಯ್ರಿ ಹತ್ತರ್‍ಲೇ ನಿನ್ನ ಹಳ್ಳಿ ಗಮಾರನ್ ಚಾಲಕ್ಕು?
ಕೆಂಪೇಗೌಡ : ಒಳ್ಳೆ ಕಾಟಕ್ತಗಲ್ಕೊಂಡ್ನಲ್ಲಾ! ಆಪ್ರೀನ್ ಮಾಡೋದು! ಸಿವ ಕೊಟ್ಟಿದ್ದೆಲ್ಲಾ ಪರ್ಸಾದ! (ಪ್ರಕಾಶಂ) ಸರಿ.. ಬುದ್ಧಿ. ನೀವೆಂಗೇಳಿದ್ರೆ ಅಂಗೆ. ಅದ್ರೇನು ಬರೀಕೈಲಾ ಸೀಳೋದು ಸೌದೇನ?
ಅಹೋಬ್ಲು : ಛೇ! ಕೊಡ್ಲಿಯಿಧೆ! (ಘಟ್ಟಿಯಾಗಿ) ಬೋರಾ! ಈತನ್ನ ಕರ್ಕೊಂಡ್ಹೋಗಿ ಕೊಡ್ಲಿಕೊಟ್ಟು ಸೌದೇನ ಒಡ್ಸು. ಪಕ್ಕದಲ್ ನಿಲ್ಬೇಡ. ನಿನ್ನಾಕಾರಾನ ನೋಡಿ ಮೈಮರೆತು ಕುರೀ ಅಂಬೋ ಭ್ರಮೇಲಿ ಕಾಳಮ್ಮನ್ಗೆ ಬಲಿಗಿಲಿ ಕೆಟ್ಟಿಬಿಟ್ಬಾನೂ!
(ಕೆಂಪೇಗೌಡನು ಬೋರನೂ ಬಲಬಾಗಿಲಿನಿಂದ ನಿಷ್ಕ್ರಮಣ)
(ಹಿಗ್ಗುತ್ತಾ) Diplommacy plus ದೇವರ ಮೇಲೆ ನಂಬ್ಕೆ ಇರೋವರ್‍ಗೂ ಭಯವಿಲ್ಲ. After all honestyಂಬೋದು best policyಗೆ ಹೆಸ್ರು. . . (ಬೀದಿಯ ಬಾಗಿಲನ್ನು ತೆಗೆದುಕೊಂಡು ಪ್ರವೇಶಿಸಿ ನಶ್ಶದ ಪೊಟ್ಣವನ್ನು ಮೇಜಿನ ಮೇಲಿಟ್ಟು ತಲೆಬಾಗಿ ನಿಂತಿರುವ ಬಾಳುವಿಗೆ)
Thank you, Balu, Desk ಮುಂದೆ ಕೂತ್ಕೊಂಡು ಈ…(ಕಾಗದ ಒಂದನ್ನು ಬಾಳುವಿನ ಕೈಗೆ ಕೊಟ್ಟು) Statementನ Copy ಮಾಡು Neat ಆಗಿ…ಎರಡು copy.
ಬಾಳು : ಆಗ್ಲಿ ಸಾರ್.
(ಕಾಗದವನ್ನು ತೆಗೆದುಕೊಂಡು ರಂಗಸ್ಥಳದ ಬಲಮುಂಭಾಗದಲ್ಲಿನ deskನ ಮುಂದೆ ಕುಳಿತು ನಾಲಿಗೆಯನ್ನು ಬಾಯಿಂದ ಹೊರಗೆ ನೀಡಿಕೊಂಡು ಬರೆಯುತ್ತಿರುವನು. ಅಹೋಬ್ಲು ಮೇಜಿನ ಮುಂದೆ ಕುಳಿತು ಓದುವನು)
(ಹಿಂಬಾಗಿಲಿನ ವಾಸ್ಕಾಲಿಗೆ ಸರಿಯಾಗಿ ಕೆಂಪು ribbon ಕಟ್ಟಿದ ಜಡೆಯಿಂದ ಅಲಂಕರಿಸಲ್ಪಟ್ಟು ಕಸ್ತೂರಿಯನ್ನು ಸೋಲಿಸುವ ಪ್ರಭೆಯನ್ನು ಬೀರುವ ಪುತ್ರಕನ ತಲೆಗೆ ಕರೀ ಟೋಪಿಯನ್ನು ಇಟ್ಟು ಜೀವು ಹಣೆಗೆ ಸಾದನ್ನಿಡುತ್ತಿರುವಳು)
ಅಹೋಬ್ಲು : (ಬೆಚ್ಚಿಬಿದ್ದು ಎದ್ದು ಸುತ್ತಮುತ್ತೂ ನೋಡಿ) ಇದೇನಿದು. . . ಸೂರ್ಯಗ್ರಹಣವೇ? ಬಾಳು! ಈ ಹೊತ್ತು Eclipseಏ?
ಬಾಳು : ಎಲ್ಬಂತು ಸಾರ್?
ಅಹೋಬ್ಲು :Eclipse ಅಂದ್ರೆ ನಿನಗೇನಾದ್ರು ಗೊತ್ತೆ?
ಬಾಳು : ಗೊತ್ತು ಸಾರ್. ಗೊತ್ತೂಂದ್ರೇನು. . . ನಾನು Geography ಓದ್ತಿದ್ದಾಗ ಮೇಸ್ಟ್ರು . . .
ಅಹೋಬ್ಲು : Let me see ! ‘Eclipse of the Moonಉ’ ಅಂದ್ರೇನು?
ಬಾಳು : Shadow of the…Earthoo..
ಅಹೋಬ್ಲು : On the whatoo?
ಬಾಳು : On the Moonooಅಹೋಬ್ಲು :Goodಉ. ‘Eclipse of the Sunಉ’ಅಂದ್ರೆ ಏನು?
ಬಾಳು : Shadow of the . . .Moonoo
ಅಹೋಬ್ಲು : On the whatoo?
ಬಾಳು : On the Sunಉ
ಅಹೋಬ್ಲು : Goodಉ Very goodಉ! ಇದ್ಹೇಳು ನೋಡೋಣ ‘Eclipse of the Earthoo’ಅಂದ್ರೇನು?
ಬಾಳು : (ಭ್ರುಕಟಿಗಳನ್ನು ಗಂಟು ಹಾಕಿ) Eclipse of the Earthoo…? ಎಲ್ಲಾದ್ರು ಉಂಟೆ ಸಾರ್?
ಅಹೋಬ್ಲು : ಉಂಟು ಬಾಳು. ಉಂಟು. Shadow of the Sunಉ. . .
ಬಾಳು : Sunಗೆ Shadow ಉಂಟೆ ಸಾರ್?
ಅಹೋಬ್ಲು : ಉಂಟು ಬಾಳು, ಉಂಟು. Shadow of my sonಉ on this Earthoo! (ಹಿಂದೆ ನೋಡಿ ಜೀವೂಗೆ) ಅಲ್ಕಣೆ! ಈ ಕರೀ ನಾಗ್ರ ಹುತ್ತ ಬಿಟ್ಟು ಹೊರಗ್ಹೊರ್ಡೋ ಅಷ್ಟ್ಹೊತ್ಗೆ schoolಮುಚ್ಚಿರ್ತಾರೆ. (ಕುಮಾರನಿಗೆ) ಇಲ್ಬಾರೊ ಉದ್ದಿನಮಣಿ! ಯಾಕೋ ಇಷ್ಟು lateಉ …. . ? (ಕುಮಾರನು ಮುಂದೆ ಬರುತ್ತಲೂ) ನೀನೋ ನಿನ್ನ ಮಸಿಮೂರ್ತಿನೋ ಜೀವು ಕೆಂಪು… ನಾನೋ ತಕ್ಕಮಟ್ಟಿಗೆ …ಜನಕನೇನು …ಆಮ್ಲಜನಕ! ಈ ಇಂಗಾಲ ಎಲ್ಬಂದು ಸೇರ್ಕೊಂಡ್ತು?
ಜೀವು : ಮುದ್ಮಣಿ ವರ್ಣ…ಅಲ್ಕ ಸ್ವಲ್ಬ ನಿಧಾನ ಅದಪಕ್ಷಕ್ಕೆ…ಹೀಗೆ ಹಿಯ್ಯಾಳಿಸೋದೇ?
ಅಹೋಬ್ಲು : ನಿಧಾನ? ಬಣ್ಣ ನಿಧಾನವಲ್ಲ. . . ನಿಸ್ತ್ರಾಣಿಯಾಗಿ ನಿಂತೇಬಿಟ್ಟಿದೆ! Stationeryಆಗಿ! All ink and no paper! (ಮಗನ ಮುಖವನ್ನು ಗಮನಿಸಿ) ಇದೇನೇ ಇದು! ಮಾಧ್ವರ ಮಗೂಗೆ ಗಂಧದ ಬೊಟ್ಟಿಟ್ಟಿದೀಯಾ ಹಣೇಗೆ!
ಜೀವು : ಗಂಧಾಲ್ಲಾಂದ್ರೆ, ಸಾದು.
ಅಹೋಬ್ಲು : (ಬೊಟ್ಟನ್ನು ಬೆರಳಿನಿಂದ ಮುಟ್ಟಿ, ಪರೀಕ್ಷಿಸಿ) ಹಯ್ಯೋ ಹೌದೇ ಮಾತ್ಯಾಕೆ ಗಂಧದ ಹಾಗಿತ್ತು? (ಅಲ್ಪ ಯೋಚಿಸಿ) Yes, Yes! ಇವನ್ಮೂತಿ colourಗೆ ಸಾಧು ಗಂಧದ ಹಾಗೆ ಕಂಡು ಬರುತ್ತೆ : Question of comparative colorology!
ಜೀವು : ಹೌದೂ…ಮುದ್ಮಣಿ ಪೋಟೋ ಯಾವಾಗ ತೆಗಿಯೋದು?
ಅಹೋಬ್ಲು: Be sensibleಜೀವು! ಇದೇನ್ಹುಚ್ಚು! ಇವನಿಗೆ ಪೋಟೋ ತೆಗೆದು ಗೋಡೇಗೆ ತಗಲಿಹಾಕಿದ್ರೆ ತಸ್ವೀರ್‍ನಾ, ಕತ್ಲೇ ಕೋಣೇಗೆ ಕಿಟಕಿ ಇಟ್ಟಿದಾರೆ ಅನ್ಕೊಂಡಾರು ಕಂಡೋವ್ರೆಲ್ಲಾ!
ಜೀವು : ಯಾಕೆ! ಕಪ್ಪಿಗಿದ್ರೂನೂವೆ ಕೆಂಪಗೆ ಕಾಣೋಹಾಗೆ ಪೋಟೋ ತೆಗಿಯೋಕೆ ಆಗೋದಿಲ್ವೆ?
ಅಹೋಬ್ಲು : Yes yes, The answer is in the “Negative!”…Negativeಲಿ? ಕೆಂಪಗೇ ಇರ್ತಾನೆ. (ಮುದ್ಮಣಿಗೆ) ಇನ್ನೇನೋ! ಹೊರಡು ಸ್ಕೂಲಿಗೆ.
ಮುದ್ಮಣಿ : ಅತ್ಬಾ! ಧ್ಭಂಮ್ರೋಟು?
ಅಹೋಬ್ಲು : ಏನೋ ಅದು!?
ಜೀವು : ಧಮ್ರೋಟು. . . ಮಗು ಕೇಳುತ್ತೆ.
ಅಹೋಬ್ಲು : ಅದ್ರ ಭಾಷೇಲಿ ಕೇಳುತ್ತೆ! ಭಾಷಾಂತರಕ್ಕೆ ಹೆತ್ತ ತಾಯಿ ತಯರಾಗಿರ್ಬೇಕು…ಈ ಗೊಗ್ಗಯ್ಯ ಬಾಯ್ಬಿಟ್ಟಾಗ್ಲೆಲ್ಲಾ.
ಮುದ್ಮಣಿ : (ಗೋಳೋ ಎಂದು ಅಳುತ್ತ) ಅನ್ಮಾ! ಅತ್ಬಾ ಗೊಗ್ಗಯ್ಯ ಅಂಮ್ತಾನೆ!!!
ಜೀವು : (ಸುತನ ಕಪೋಲವನ್ನು ಚುಂಬಿಸಿ) ಅಳ್ಬೇಡ ಕಂದ! (ಪತಿಗೆ, ಬಿರುಸಾಗಿ) ಏನನ್ಯಾಯ ಅಂದ್ರೆ! ಕೂಸಿನ್ಮೇಲ್ಯೇ ತೋರ್ಸೋದು ನಿಮ್ಮ ಘಟ್ಟಿಗತನಾನಾ!
ಅಹೋಬ್ಲು : ಕ್ಷಮ್ಸು ಜೀವು…ಏನೋ ಅದು….ನೀನ್ಕೇಳಿದ್ದೂ…. ಮುದ್ಮಣಿ?
ಮುದ್ಮಣಿ : ದ್ಬಂನ್ಮ್ರೋಟುತ್ಪಾ!
ಅಹೋಬ್ಲು : ಸಾಕು ನೀನ್ಕೇಳಿದ್ದು. ಹೊರ್ಡು Schoolಗೆ.
ಮುದ್ಮಣಿ : (ಎರಡು ಹಸ್ತಗಳ ಹಿಂಭಾಗದಿಂದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ) ಅನ್ಮಾ! ಅತ್ಪಾ! ದ್ಬಂಮ್ರೋಟು…
ಜೀವು : ಮಗು ಕೇಳೋದ್ನ ಕೊಂಡ್ಕೊಡೊ ಯೋಗ್ಯತೆ ನಿಮಗಿಲ್ದಿದ್ರೂನೂವೆ. ಅದೇನ್ಕೇಳುತ್ತೆ? ಅದಕ್ಕೇನ್ಬೇಕು? ಇದ್ನಾದ್ರೂ ಕಿವೀಗ್ಹಾಕ್ಕೋಬಾರ್ದೆ!
ಅಹೋಬ್ಲು : ಬಾರ್ದೆನೂ…ಬಹುದು! ಕಿವಿಗ್ಹಾಕ್ಕೋಬಹುದು! ಬಾಳು! ದೊಡ್ಡ Foolscape sheet ತೆಗೊ. ಚಿಕ್ರಾಯ್ರು ಬೇಕಾದ್ದನ್ನೆಲ್ಲಾ ಹೇಳ್ತಾರೆ. ತಪ್ಸೀಲಾಗಿ ಪಟ್ಟಿ ಬರ್ಕೊ. (ಕುಮಾರನಿಗೆ) ನಿನಗೆ ಇಹಲೋಕದಲ್ಲಿ ಇರೊ ಆಸೇನೆಲ್ಲಾ ಬಾಳು ಬರ್ಯೊ ಪಟ್ಟೀಲಿ ತೀರ್ಸ್ಕೊಳ್ಲೋ! ನಿನಗೇನು ಬೇಕೂಂಬೋದ್ನ ಭಯೆವಿಲ್ದೆ ಹೇಳು. ಹೇಳೋ ಭಯ ನಿನಗೂ ಬೇಡ ಅದ್ಕೊಂಡ್ಕೊಡೋ ಭಯ ನನಗೂ ಇಲ್ಲ ಹೇಳು.
ಮುದ್ಮಣಿ : ಸ್ಫಕ್ಕ್ರೆ!
ಬಾಳು : (ಪಟ್ಟಿಯಲ್ಲಿ ಬರೆದುಕೊಳ್ಳುತ್ತ) ಸಕ್ರೆ.
ಮುದ್ಮಣಿ : ದ್ಬೆಲ್ಲಾ!
ಬಾಳು : ಬೆಲ್ಲ
ಮುದ್ಮಣಿ : ಥ್ಪಾಟೀ ದ್ಬೆಲ್ಲ.
ಬಾಳು : ತಾಟಿ ditto.
ಮುದ್ಮಣಿ : ನ್ಮಿಠಾಯಿ!
ಬಾಳು : (ಬರೆದುಕೊಳ್ಳುತ್ತ) ಮಿಠಾಯಿ.
ಮುದ್ಮಣಿ : ತ್ಬೊಬ್ರಿನ್ಮಿಠಾಯಿ!
ಬಾಳು : ಖೊಬ್ರಿ ditto
ಮುದ್ಮಣಿ : ತ್ಫಾಕಂಟ್ಪೊಪ್ಪು!
ಬಾಳು : (ಬರೆಯುತ್ತ)ಪಾಕಂಪೊಪ್ಪು.
ಅಹೋಬ್ಲು : (ಕೈ ಕೈ ಹಿಸುಕುತ್ತ…ಜುಗುಪ್ಸೆಯಿಂದ) ಹಾಳಾಯ್ತು! ಒಬ್ಬ ರಾಜನಪುತ್ರನ್ನ “ನಿನಗೇನ್ಬೇಕು?” ಅಂತ ಕೇಳಿದ್ರೆ, “ನನಗೆ ಕತ್ತಿ ಬೇಕು?” ಗುರಾಣಿ ಬೇಕು! ಬಿಲ್ಲು ಬೇಕು! ಬತ್ತಳಿಕೆ ತುಂಬಾ ಬಾಣಗಳು ಬೇಕು”…ಇಲ್ಲ ಬ್ರಾಹ್ಮಣವಟೂನ ಕೇಳಿದ್ರೆ ರಾಮಾಯಣ ಮಹಾಭಾರತ ವೇದಪುರಾಣ ಇತ್ಯಾದಿಗಳ ಮೇಲೆ ಅಶೆ ಪಡೋದುಂಟು! ಆದ್ರೆ…ಧಮ್ರೋಟು, ತಾಟಿಬೆಲ್ಲ, ಪಾಕಂಪೊಪ್ಪು ಇದಕ್ಮೇಲೆ ಓಡೊದೇ ಇಲ್ಲ ಈ Double Distilled Dufferಇನ ಬುದ್ಧಿ !!!
ಮುದ್ಮಣಿ : (ತಾಯಿಯನ್ನು ಅಪ್ಪಿಕ್ಕೊಂಡು ಗೊಳೋ ಎಂದು ಅಳುತ್ತ) ಅನ್ಮಾ! ಅತ್ಪಾ ನನ್ನ ‘ಡ್ಡಫರ್ರ್’ ಅಂತ್ತಾನೆ!
ಜೀವು : (ಪುತ್ರನ ಹಣೆಯನ್ನು ಚುಂಬಿಸಿ ತಲೆಯನ್ನು ಸವರುತ್ತ) ಅಳ್ಬೇಡ ನನ್ನ ಅರಗಿಣೀ. . . ಈ ತಿಂಡಿ ಪದಾರ್ಥ ಅಲ್ದೆ ಬೇರೆ ಏನೂ ಬೇಡ್ವೆ ನಿನ್ಗೆ?
ಮುದ್ಮಣಿ : (ಹಸನ್ಮುಖನಾಗಿ, ಕಣ್ಣುಗಳು ಬೆಳಕನ್ನು ಬೀರುತ್ತಾ) ದ್ಬೇಕೂ ನ್ಮಾ!
ಜೀವು : ಹಾಗಾದ್ರೆ…(ಗಲ್ಲವನ್ನು ಪಿಡಿದು ಕುಮಾರನ ಮುಖವನ್ನೆತ್ತಿ) ಕೇಳು ಕಂದ…ಕೇಳು!
ಮುದ್ಮಣಿ : (ಬಾಳುವಿಗೆ) ಬೂಗೋಳ!
ಅಹೋಬ್ಲು : “ಭೂಗೋಳ” I see! ಹುಡುಗ interested in Geography! map of the worldಓ ಇಲ್ಲ Globeಓ ಕೇಳ್ತಿಧಾನೆ! Wonderful !…I Must get…
ಬಾಳು : (ಅಡ್ಡ ಮಾತಾಗಿ) Map ಅಲ್ಲ ಸಾರ್! ಚಿಕ್ರಾಯ್ರು ಕೇಳೋದು ಭೂಗೋಳದ mark ಹಾಕಿದ ಪಟಾಕಿ ಕಟ್ಟು. (ಮುದ್ಮಣಿಗೆ) ಅಲ್ವೆ ಸಾರ್?
ಮುದ್ಮಣಿ : ಹೂಂ.
ಅಹೋಬ್ಲು : ನೆಗೆದ್ಬಿತ್ತು, ನನ್ನ hopeಉ!
ಮುದ್ಮಣಿ : Double ಜಿಂಕೆ
ಅಹೋಬ್ಲು : “Double ಜಿಂಕೆ?”…I see ! He means a double barrelled ಬಂದೂಕು to shoot a ಜಿಂಕೆ with! ಅದೇ…ಆ ರಾಜ ಪುತ್ರ…ಇದೆಲ್ಲಾ ಕಿವಿಗ್ಬಿದ್ದು ಯಾವ್ದೋ ಪೂರ್ವಜನ್ಮದ ಸ್ಮರ್ಣೆ!…ಅಭಿಮನ್ಯುವೋ ! … ಇಂದ್ರಜಿತ್ತೋ! ಬಬ್ರುವಾಹನನೋ…ಸದ್ಯ ಬಂದೂಕು ಕೇಳ್ತಿದಾನೆ…But then…licence for a child ..?
ಬಾಳು : (ಅಡ್ಡ ಮಾತಾಗಿ) ‘ಬಂದೂಕಲ್ಲ ಸಾರ್? ಚಿಕ್ರಾಯ್ರು ಕೇಳೋದು. . . ಎರಡು ಜಿಂಕೆ mark ಹಾಕಿದ ಸೂಜಿ ಪಟಾಕಿ ಕಟ್ಟು. (ಇದನ್ನು ಕೇಳುತ್ತಲೇ ಅಹೋಬ್ಲು ಬರುವ ಕೋಪವನ್ನು ನುಂಗಿಕೊಳ್ಳುತ್ತ ಎರಡೂ ಕೈಗಳ ಮೇಲೆ ಮುಖವನ್ನು ಇಳಿಸಿಕೊಂಡು ಪೇಚಾಡುವನು)
ಮುದ್ಮಣಿ : (ಹಸನ್ಮುಖಿಯುಗಿ ಬಾಳುವಿಗೆ) ದ್ಬರೀರಿ ! . ಪುರ್ ಪುರ್ ಬಾಣ!
ಬಾಳು : “ಸುರ್ ಸುರ್ ಬಾಣ?”
ಮುದ್ಮಣಿ : ಅಲ್ಲ “ಪುರ್ ಪುರ್ ಬಾಣ!”
ಬಾಳು : ಸುರ್ ಸುರು?
ಮುದ್ಮಣಿ : (ಮುಖದಲ್ಲಿ ಕೋಪವನ್ನೂ ಜುಗುಪ್ಪಯನ್ನೂ ಸೂಚಿಸಿ) ಫುರ್ ಫುರ್ ಬಾಣ!
ಬಾಳು : (ಮುದ್ಮಣಿಯ ಭಾಷಣದಿಂದ ಮುಖಕ್ಕೆ ಸಂಭವಿಸಿದ ಪ್ರಕ್ಷಾಳನವನ್ನು ಒರಸಿಕೊಳ್ಳುತ್ತಾ…ಅಹೋಬ್ಲೂಗೆ) ಸಾರ್! ಕನ್ನಡದಲ್ಲಿ yeff‘ ಹೇಗೆ ಬರಿಯೋದು ಸಾರ್?
ಅಹೋಬ್ಲು : (ಚೇತರಿಸಿಕೊಂಡು) “yeff” ಎಲ್ಬಂತು ಇಲ್ಲಿ?
ಬಾಳು : ಚಿಕ್ರಾಯ್ರು ಸುರ್ ಸುರ್ ಬಾಣಾನ ‘ಪುರ್ ಪುರ್ ಬಾಣ’ ಅಂತಾರೆ! ಕನ್ನಡ “ಸ” ನ English “yeff” ಆಗಿ ಬರೀಬೇಕೂಂತಾರೆ . . .
ಅಹೋಬ್ಲು : (ಎದ್ದು ಕುಮಾರನ ಕುತ್ತಿಗೆಯನ್ನು ಬಿಗಿಹಿಡಿದು ಬೀದಿಯ ಬಾಗಿಲಿಗೆ ಸಾಗಿಸುತ್ತ) ಸಾಕೋ ನಿನ್ನ ambitionಉ! ಸಧ್ಯ. . . ಸದ್ದಿಲ್ಲದೆ Schoolಗೆ ತೊಲಗು! ನನ್ನ Schooldaysನಲ್ಲಿ ನಿನ್ನಾಂಥಾವ್ನು ಸಹಪಾಠಿಯಾಗಿದ್ದಿದ್ರೆ…ನಿತ್ಯ Morning Classಉ . . .Because of artficial ಅಮಾವಾಸ್ಯೆ! ಹೊರಡು! ಬಾಳು, ಜೊತೇಲಿ ಹೋಗಿ ಸೇರಿಸ್ಬಿಟ್ಟು ಬಾ.
(ರೋದಿಸುವ ಮುದ್ಮಣಿಯೊಂದಿಗೆ ಬಾಳು ನಿಷ್ಕ್ರಮಣ)
ಅಹೋಬ್ಲು: ರೇಗ್ಬೇಡ ಜೀವು…ಗಂಡು ಮಕ್ಕಳ್ನ ಸಾಕೋ ದಾರಿ ಗಂಡಸರಿಗೆ ಗೊತ್ತೇ ಹೊರ್ತು. . . ಹೆಂಗಸರಿಗೆ ಗೊತ್ತಿಲ್ಲ. ತಬ್ಕೊಂಡು’ ಮುದ್ದಿಟ್ಟು ಮನೇಲಿ ಸಾಕಿದ ಗಂಡ್ಮಕ್ಳು ಮುಂದಕ್ ಬೆಳೆದು ಮನೆ ಹೊಸ್ಲು ದಾಟಿ. . . meetಆಗೊ ಪ್ರಪಂಚ. . . ಕಠಿಣ ಪ್ರಪಂಚ. . . ಬಾಬಾಂತ ತಬ್ಬೊಂಡು ಮುದ್ದಿಡೋ ಪ್ರಪಂಚವಲ್ಲ! ಮೆನೆಲೇ ಗಂಡು ಮಕ್ಕಳ್ಳ ತಕ್ಕಮಟ್ಗೆ ಜಬರ್‌ದಸ್ತ್‌ನಲ್ಲಿ ಬೆಳ್ಸಿದ್ರೇನೇವೇಯೇ. . . ಮೈಯಿ ಮನಸ್ಸು ಗುಂಡಿಗೆ ಗಟ್ಟಿಯಾಗಿ, ಸಮಾಜ್ದಲ್ಲಿ ಒದಗೊ ಅನಿವಾರ್ಯಗಳ್ನ, . . ನಾನು ಈಗ ಹೇಗೆ ಎದೃಸ್ತೇನೋ ಹಾಗ್ಯೇ ಎದೃಸೋಕೆ ಚೈತನ್ಯ ಬರುತ್ತೆ. “ಕಂದಾ. . . ಅರಗಿಣಿ. . . ರಾಜಾ ಮಗೂಂ”ತಽ ಹೆತ್ತ ಮಮತೇಲಿ ಹತ್ತಿ ಸುತ್ತಿಟ್ಟು ಬೆಳೆಸಿದ ಮಕ್ಳು…ಮುಂದಕ್ಕೆ. . .
ಜೀವು : ನೀವೇನು ಹೇಳಿದ್ರೂನವೆ…”ಹೆತ್ತವರಿಗೆ ಹೆಗ್ಣ ಮುದ್ದು?’
ಅಹೋಬ್ಲು : ಹೌದು ಆದ್ರೆ. . . ಆ ಹೆಗ್ಣಕ್ಕೆ ಹೆತ್ತವ್ರು ಮುದ್ದೇ? ಅದನ್ ಯೋಚಿಸ್ದ್ಯಾ? ಅ ಹೆಗ್ಣ “ನನ್ನ ಹೀಗೆ ಹೆತ್ಬಿಟ್ರಲ್ಲಾಂತ ಎಷ್ಟು ಬೈಬೇಕು . . !”
ಜೀವು : (ಸಿಡುಕು ಮುಖದಿಂದ) ಸಾಕ್ನಿಲ್ಸಿದ್ರೇ ನಿಮ್ಜಾಣತನದ ಮಾತುಗ್ಳು
(ನಿಷ್ಲ್ರಮಣ)
ಅಹೋಬ್ಲು : ಇದೇ…”Woman the eternal motherಉ” ಅಂಬೋದು. ಹೊಟ್ಟೇಲಿ ಹೊತ್ತು ಹೆತ್ತ sonನ husbandಏ ಹೀಯಾಳಿಸಿದ್ರೂ . . ರೇಗೋ ಅಷ್ಟು loveನ. . .nature ಇಟ್ಟಿದ್ದಾಳೆ ಹೆಂಗ್ಸಿನ heartನಲ್ಲಿ, ! being a woman herself of course! But ಯಾವುದೋ poet ಹೇಳಿದ್ದಾಗೆ :
“Woman may eat weep and sleep But man must work and work and work”
Therefore…(ಮೇಜಿನಿಂದ law ಪುಸ್ತಕದ bind ಹಾಕಿದ ಒಂದು Film Magazineಅನ್ನು ತೆಗೆದು ಓದತೊಡಗುವನು)
ಜೀವು : (ಲೋಟ ಪ್ರವೇಶಿಸಿ, ಮೇಜಿನ ಮೇಲಿಟ್ಟು) ಇಕೋ. . . ಬಿಸಿ ಕಾಫಿ! ಅಲ್ದೆ ಬೋಂಡ!
ಅಹೋಬ್ಲು : Thank you, ಜೀವು ಎಷ್ಟು ವ್ಯತ್ಯಾಸ ನೋಡು ನಿನ್ಗೂ ನನ್ಗೂ! ನಾನು ರೇಗೋದು…ಕಿರ್‍ಲೋದು…ನಗೋದು…ಆಳೋದು. . . ಹೀಗೆಲ್ಲಾ ನಿಮಿಷ ನಿಮಿಷವೂ ಬದಲಾಯಿಸುತ್ತೆ ನನ್ನ ಸ್ವಭಾವ. ನೀನು…ಸ್ತ್ರೀಯರು “ಚಂಚಲ ಮನಸ್ಸೂ”ಂತ ಸಾಮ್ತಿಗ್ಳು ಎಷ್ಟು ಸಾರಿದ್ರೂನೂವೆ. . . ನನ್ನ ಹುಚ್ಚಾಟಾನೆಲ್ಲಾ…ಸೈರಿಸ್ತ …ಕ್ಷಮೆ….ಕ್ಷಮೆ…ಜೀವು…ನಿನ್ನ…ನಿನ್ನ ಏನು! ನಿಮ್ಮ ಹೆಂಗಸ್ರ ಗುಣಾನೇ ಕ್ಷಮೆ. . . ನಿಮ್ಮ Rock-bottom characterಉ…ಸಂಸ್ಕೃತದಲ್ಲಿ…ನನ್ನ Matriculation Textನಲ್ಲಿ ಎಲ್ಲೋ. . . ಬಂದ ಜ್ಞಾಪಕದ ಹಾಗೆ. . . “ಕ್ಷಮಯಾಧರಿತ್ರೀ”…(ಚೊಂಬಿನ ಕಾಫಿಯನ್ನು ಲೋಟಾಗೂ ಲೋಟಾವಿನ ಕಾಫಿಯನ್ನು ಜೊಂಬಿಗೂ ಬಿಸಿಯನ್ನು ಆರಿಸಲೋಸುಗ ವರ್ಗ ಪ್ರತಿ ವರ್ಗಾಯಿಸುತ್ತ) Wonderfulಉ!. . . (ಬಾಗಿಲನ್ನು ಯಾರೋ ತಟ್ಟುವ ಶಬ್ದ ಕೇಳಿ, ಲೋಟಾವನ್ನು ಚೊಂಬಿನ ಮೇಲೆ ಕುಕ್ಕಿ. . . ಬಾಗಿಲನ್ನು ಸಮೀಪಿಸಿ…ರೇಗಿ) ಎತ್ಕೊಂಡ್ಹೋಗು ನಿನ್ನ ಹಾಳು ಬೋಂಡಾ ಕಾಫೀನ! ಎಂದೂ ಬರದ ಹಾಳು friendsಉ ಇಂದು ಬಂದಿದ್ದಾರೆ ಮಂದೆಮಂದೆಯಾಗಿ! Tiffenಉ ಎಲ್ತಾನೆ ಇಡು! Tiffen hoursಎಷ್ಟೆಷ್ಟ್ತಾನೆ changeಮಾಡು! Wirelessನಲ್ಯಾದ್ರೂ ತಿಳ್ಕೊಂತ್ತಾರೆ Friendsಉ! ಎತ್ಕೊಂಡ್ಹೋಗೆ ಒಳಗೆ ನಿನ್ತಟ್ಟೇನೂ. . . ಚೊಂಬ್ನೂ!
ಜೀವು : (ಆತುರದಿಂದ) ಕಾಫಿ ಆರ್‍ಹೋ. .. !? _
ಅಹೋಬ್ದು : ಹಿಂದ್ಗಡೆ ಸುಳಿದಾಡ್ತಿರೇ! ಸಮಯ ನೋಡಿ ಸುರ್ಕೋತೇನೆ!
(ಜೀವು ತಟ್ಟೆಯನ್ನೂ ಚೆಂಬನ್ನೂ ಲೋಟವನ್ನೂ ಎತ್ತಿಕೊಂಡು ಮನೆಯೊಳಕೈ ನಿಷ್ಕ್ರಮಿವಳು)
(ಅಹೋಬ್ಲು ಬೀದಿ ಬಾಗಿಲನ್ನು ತೆಗೆದು Krishna Rao Ranga Raoಇವರನ್ನು ಒಳಕ್ಕೆ ಬಿಡುವುದಕ್ಕೆ ಮುಂಚೆ, ಮೇಜಿನ ಸುತ್ತೂ ಇರುವ ಕುರ್ಚಿಗಳನ್ನೆಲ್ಲಾ ಜೀವು ನಿಷ್ಕ್ರಮಿಸಿದ ಬಾಗಿಲಿಗೆ ಬೆನ್ನಿಟ್ಟು ಏರ್ಪಡಿಸುವನು)
ಸ್ನೇಹಿತ್ರು : (ಪ್ರವೇಶಿಸುತ್ತ) ಇದೇನು, ಅಹೋಬ್ಲು? ಇಷ್ಟು ತಡ ಬಾಗಿಲು ತೆಗೆಯೋದು? ಅರ್ಧ ಫಂಟೆಯಿಂದ. . .
ಅಹೋಬ್ಲು : Don’t be silly boys! ಬನ್ನಿ, ಕೂತ್ಕೊಳ್ಳಿ. (ಸ್ನೇಹಿತರು ಕೂಡುತ್ತಲೂ) ನೀವೋ ಬಂದು…ಎರಡು ಮೂರು ತಿಂಗಳಾದ್ವು. ನನ್ನ್ Practiceಓraising terribly. ಬರೀ feesಗೇಂತ ಬಂದ Clientನೆಲ್ಲಾ welcome ಮಾಡ್ತಿದ್ದೆ, in my old days. ವಕಾಲತ್feesನಲ್ಲೇ ಸಂಸಾರಾನ ಜರುಗಿಸ್ತಿದ್ದೆ , in my old days. Later on ಸಾವಿರಗಟ್ಲೆ fees ಸುರ್ಯೋ ಒಬ್ಬ Clientಇರುವಾಗ ಒಂದೊಂದು ರೂಪಾಯಿ ಕೊಡೊ ಸಾವಿರ Clientನ ದರ್ಶನಕ್ಕೆ ಸಲಾಂ ಅಂತ Valuable Clientಉ ಜಮೀನ್‌ದಾರ್ lakhs of rupees involved. . .Thereforeಬೇರೆ ಯಾವ Clientಊ ಬರ್ದ್ಹಾಗೆ ಬೀದಿ ಬಾಗಿಲು ಬಿಗಿದು caseನ studyಮಾಡ್ತಿದ್ದೆ. ಈ ಬೀದಿಯೆಲ್ಲಾ ಲಾಯ್ರಿಗ್ಳು! ಒಬ್ಬೊಬ್ಬ ಲಾಯ್ರಿನೂ ಬೀದಿಬಾಗಿಲು ಬಿಚ್ಕೊಂಡು, ಜಗಲೀಲಿ ನಿಂತ್ಕೊಂಡು, ಹಲ್‍ಹಲ್ ಕಿರೀತ ಎರಡು ಕೈಯ್ಯಿಗ್ಳೂ ಬೀಸ್ತಾ, “ಬನ್ನಿ! ಬನ್ನಿ! ದಮ್ಮಯ್ಯ ಬನ್ನೀ!”ಂತ ಪೇಚಾಡ್ತಿರೋವಾಗ ನಾನ್ಮಟ್ಗೆ ಬಾಗಿಲು ಹಾಕ್ಕೊಂಡು. . . ಬಡಾಯಿಯಿಂದೇನು ಪ್ರಯೋಜ್ನ. . . ಒಟ್ನಲ್ಲಿ to apologetically explain my belated ಬಾಗಿಲು ತೆಗೆದದ್ನ….recordsಉ ತಿರುವ್ಹಾಕ್ತಿದ್ದೆ.
ಕೃಷ್ಣ್ರಾವ್ : ಹಾಗಾದ್ರೆ. . . busyನೋ?
ಅಹೋಬ್ಲು : Busyಏನು Brain strainಉ ಕಿಟ್ಟಿ. ಅಲ್ದೆ….ನೆಗಡಿ.
ರಂಗ್ರಾವ್ : ನೆಗಡಿ? ಬೇಸಿಗೇಲಿ?
ಅಹೋಬ್ಲು : ಒಳ್ಳೇ ಬೇಸಿಗೆ, ರಂಗು! ನೀನೆಲ್ತಾನೆ ಬಿದ್ಕೊಂಡಿರು, ಎಂಥ woolತಾನೆ ಹೊದ್ಕೊಂಡಿರು, ಆ half past two in the morningಬೀಸುತ್ತಲ್ಲಾ ಒಂದು breezeಉ. . . ಅದ್ರ ಛಳೀಲಿ.
(ಮೂಗನ್ನು ಹಿಡಿದುಕೊಂಡು, ಸೀನು ಬರುವಂತೆ ನಟಿಸಿ)
ಕ್ಷಮ್ಸಿboys. . . ಬಂದ್ಬಿಟ್ಟೆ.
(ಒಳಹೊಕ್ಕು ಜೀವುವಿಗೆ ಸಂಜ್ಞೆಮಾಡಿ, ಆಕೆ ತಂದ ಕಾಫಿಯನ್ನು ಬಕಬಕನೆ ಬಾಯಿಗೆ ಬಸಿದುತೊಂಡು, ‘ಅಹ್‌ಂ ಛಿಂಂ!’ಎಂದು ಸೀನಿ. ಮೂಗಿನಿಂದ ಸೆಳೆದ ಸಿಂಬಳವನ್ನು ಧೋತ್ರದಲ್ಲಿ ಒರಸಿದಂತೆ ನಟಿಸುತ್ತ, ಪುನಃ ಪ್ರವೇಶಿಸಿ ಹೊಸಲಿನ ಮೇಲೆ ಕ್ಷಣ ನಿಲ್ಲುವನು.
ಕಿಟ್ಟಿ : (ಥಟ್ಟನೆ ಮೂಸಿ ಮುಖದಲ್ಲಿ ಅಶ್ಚರ್ಯವನ್ನೂ ಸಂತೋಷವನ್ನೂ ಸೂಚಿಸಿ ರಂಗೂ! ಮೂಸ್ನೋಡೊ. . . ಘಾಳಿ ವರ್ತಮಾನ. . . ಬೊಂಡ. . . ಬರುತ್ತೆ!)
ರಂಗು : (ತಾನೂ ಮೂಸಿನೋಡಿ ಹಿಗ್ಗಿ. . . ಕಣ್ಣುಗಳು ಹೊಳೆಯುತ್ತ) ಹೌದು ಕಿಟ್ಟೀ. . .ಬೋಂಡಾನೇವೇಯೇ! ಬರೋವರಿಗೂ ಇಲ್ಲೇ ಠಿಕಾಣಿ ನಾವಿಬ್ರು.
ಅಹೋಬ್ಲು: (ಆತ್ಮಗತಂ) ಫಟಿಂಗ್ರು! ಕಂಡ್ಹಿಡ್ಕೊಂಡ್ರು. . . ಬೋಂಡಾ ವಾಸ್ನೆನ! ಆದ್ರೇನ್ಮಾಡೋದು!…ವಾಸ್ನೆ ಬಿಡೊ ಬೋಂಡ! ಹೋದ ಬೋಂಡ. ಬರೋ ಬೋಂಡ ಅಲ್ಲ!!. . . ಕಾದಿರಿ. ನನಗೇನೂ ನಷ್ಟವಿಲ್ಲ. ಕಾಡಿಗೆ ಹೋದ್ರೂ Company ಇರಬೇಕು. . . as Lakshmana said to Rama and Seetha
(ಒಳಗೆ ಪ್ರವೇಶಿಸಿ)
ಅ De la Law caseನಲ್ಲಿ. . . Prima facie
evidenceಉ. . .
ರಂಗು : ಹೌದು. . . ಆ ಜಮೀನ್ದಾರ್ caseಅಂದ್ಯಲ್ಲಾ ಏನದು?
ಅಹೋಬ್ಲು : Political secret, my boy!ನಮ್ಮ Clientsನಮಗೆ ಹೇಳಿದ secretsಎಲ್ಲಾ. . .doctorsಗೆ patientsಹೇಳಿದ?symptoms ಹಾಗೆ. . . sacredಉ. . . until they are brought out in the public Court!. . . (ಬಾಗಿಲನ್ನು ಯಾರೋ ತಟ್ಟುವುದು ಕೇಳುತ್ತಲೂ) Good God! who is it? This must be He! (ಬಾಗಿಲಿಗೆ ಹೋಗಿ, ತೆಗೆದು, ಪರಶುವಿನ ಪ್ರವೇಶಕ್ಕೆ ಅವಕಾಶ ಕೊಟ್ಟು. . . ಹಿಮ್ಮೆಟ್ಟಿ. . . ಮೆಲ್ಲಗೆ ಯಾರು ನೀವು?
ಪರಶು : (ಪ್ರವೇಶಿಸಿ) ನಾನ್. . . ಒಂದ್. . . ಕಕ್ಷಿಕಾರನ್. ಇತು ಲಾಯರ್ ವೀಡ್ ತಾನೆ?
ಅಹೋಬ್ಲು : ಹೌದು. . . ಲಾಯ್ರ ಮನೆ, ಏನುcaseಉ?
ಪರಶು : ಔತು. . . ತೊಟ್ಟ caseಉ. ತೊನ್ನೂರು ರೂಬಾಯಿcaseಉ.
ಅಹೋಬ್ಲು : ತೊನ್ನೂರು? ತೊಂಬತ್ತು ನೂರು ರೂಪಾಯೇ. . .? ಒಂಬತ್ತು ಸಾವ್ರ ರೂಪಾಯಿcaseಏ?
ಪರಶು : ಇಲ್ಲ. ತೊನ್ನೂರ್. . . ಅಂದರೆ ನೂರ್‌ಕು. . . ಪತ್ ರೂಪಾಯಿ ಕಡಿಮೆ. ಒಂಬತ್ತು …..ಹತ್ ರೂಪಾಯಿ.
ಅಹೋಬ್ಲು : ತೊಂಬತ್ತು ರೂಪಾಯಿCaseಏ?. . . at five percentನಾಲ್ಕೂವರೆ ರೂಪಾಯಿ not too little. . .ಬನ್ನಿ ಒಳಗೆ.. . ಹೌದು ; ನಾನೂ ನಶ್ಶ ಹಾಕೋವ್ನೇ. . . ನೀವೂ ಹಾಗ್ಯೇಂತ ಕಾಣುತ್ತೆ. ಆದ್ರೆ ಕಂಡ್ಬರೋ ಹಾಗೆ ನಶ್ಶ ಬಾಕಿ ಇರೋದ್ನ ಒರ್ಸ್ಕೊಂಬಿಡಿ.
ಪರಶು : (ಮೂಗಿನ ತಳಭಾಗವನ್ನು ಸವರುತ್ತ) ಮೂಕ್ಕುನಲ್ಲಿ ನಸ್ಯತ ಪಾಕಿ ಅಲ್ಲ! ಇತು ನನ್ನ ಮೀಸೆ.
ಅಹೋಬ್ಲು : ಮೀಸೇನೊ? ಕ್ಷಮಿಸಬೇಕು. ತಮ್ಮ ಹೆಸ್ರೇನು?
ಪರಶು : ಪರಶುರಾಮನ್.
ಅಹೋಬ್ಲು : ಚೆನ್ನಾಗಿದೆ ಹೆಸ್ರು. ಹೆಸ್ರುಪ್ರಕಾರ ಅಯುಧ ಪಾಣಿಯಾಗಿ ಬಂದಿದ್ದಿದ್ರೆ ನನ್ನ Clientಕೆಂಪೇಗೌಡನಿಗೆ ಕುಮ್ಮಕ್ಕ್ ಕೊಡಬಹುದಾಗಿತ್ತು ! ಇರ್ಲಿ, ತಾವು ಯಾವೂರು! ಯಾವ ಪಂಗ್ಡ?ಯಾವ್ಜಾತಿ? ಜಾತಿಯೇನು ಜನಿವಾರ ಇದೆ. . . ಅದ್ರೂ. . .
ಪರಶು : ನಾನ್ ಅಯ್ಯರ್ ಜಾತಿ.
ಅಹೋಬ್ಲು : ಅಯ್ಯರಿ?…ಹಾಗಾದ್ರೆ ಮೀಸೆ ಎಲ್ಲೀದು ನಿಮಗೆ?
ಪರಶು : ನಮ್ಮ ಜಾದಿಕಿ ಮೀಸೆ ಇಲ್ಲ. ಆತರೆ ನಾನೇನು ಮಾಡುವದ್? ನಮ್ಮ ತೇಶತಲ್ಲಿ ನಮಕ್ ಮೀಸೆ ಇಲ್ಲ. ನಿಮ್ಮ ತೇಶತಲ್ಲಿ ನಿಮಕ್ ಮೀಸೆ ಇದೆ. ಇಂದ ಮೈಸೂರು ತೇಶತ್ಲೆ. . . ಮೈಸೂರಿಕಳ್‌ಕ್‌ತಾಂ ಕೆಲಸ ಕುಡುಕ್‌ತಾರೆ! ಮತರಾಸಿಕಳ್‌ಕ್ ಕೆಲಸಂ ಕುಡುವತಿಲ್ಲ! ನನಕ್. . . ಎನಗೆ. . . ಮೈಸೂರು ಪಾಷೆ. . . ಕನಡಂ ಪಾಷೆ ಚೆನ್ನಾಕಿ ಕೊತ್ತ್ ! ಇನ್ ಮೀಸೆಯುಂ ವೆಚ್ಚಿಕೊಂಡ್‌ಪಿಟ್ಟ್ರೆ. . . ನನ್ನೆ ಮೈಸೂರೀಂತ ತಿಳಿತ್‌ಕಂಡ್ ಎಲ್ಲಿ ಪೋನಾಲಂ . . ಎಂಗೆ. . . ಓತರೊ. . . ಕೆಲಸಂ. . . ಕುಡ್ತ್ ಬಿಡ್ತಾರೆ. (ಎಂದು ಹಲ್ಲುಹಲ್ಲು ಕಿರಿಯುವನು)
ಅಹೋಬ್ಲು: (ಬೆಚ್ಚಿಬಿದ್ದು. . . ಸುಧಾರಿಸಿಕೊಳ್ಳಲು ಒಂದೆರಡು ನಿಮಿಷಗಳಾದ ಮೇಲೆ) ಹಾಗಾದ್ರೆ ಕನ್ನಡಂ ಪಾಷೆ ನಿಮಗೆ ಚೆನ್ನಾಗಿ ಕೊತ್ತೋ? ಮೈಸೂರಿಗ್ಳು ಕೆಲ್ಸ ಕೊಡೋಕ್ಮುಂಚೆ, ನೀವೇ ಮೈಸೂರಿಗ್ಳಿಗೆ ಕೆಲ್ಸ ಕೊಡೋ ಹಾಗಿದೆ! ಅದೇನ್ಕೆಲ್ಸ ನಿಮ್ದು?
ಪರಶು : ಕಸಪ್ ಏನೂ! ಅಯ್ಯರಿ ಕಸಪ್.
ಅಹೋಬ್ಲು : ಅಯ್ಯರಿ ಕಸಬು ಅಂದ್ರೆ ಎಷ್ಟೋ ಈಗ ನಮ್ದೇಶ್ದಲ್ಲಿ ಯಾವ ಯಾವ್ಕಸಬ್ಲೂ ಯಾವ್ಯಾವಿಲಾಖೇಲೂ ಅಯ್ಯರೀದರ್ಶ್ನಾನೆ! ಸರ್ವತ್ರ P.C.ಆಗಿ ಕೂತಿದ್ದಾನೆ. Perfect Cookಉ ಅಯ್ರಿನೆ, Police Constableಊ ಅಯ್ರೀನೆ! ಪಕ್ಕ ಚೋರೂ ಅಯ್ರೀನೆ, Police Commisionerಊ ಅಯ್ರೀನೆ! Physical Culturistಊ ಅಯ್ರೀನೆ! Privy Councillorಊ ಅಯ್ರೀನೆ! ಈ ಸಹಸ್ರ ಅಯ್ಯರ್ ಕಸಬುಗಳಲ್ಲಿ ನಿಮ್ದು ಯಾವP.C.?
ಪರಶು : ಅಡಿಕೆ ಕೆಲ್ಸಙ್.
ಅಹೋಬ್ಲು : ಅಡಿಕೆ?
ಪರಶು : ಅಡಿಕೆ. . . ಅನ್ನ ರಸಂ ಉಳಿ. . . ಊಟ ತಯಾರ್ ಮಾಟುವದ್….
ಅಹೋಬ್ಲು : ಅಡಿಗೇನೇ . .ಹೌದೂ. . . ನೀವು ಕಣಿವೆ ಕೆಳಗಿನ Cookಉಗ್ಳು… ನಮ್ದೇಶಕ್ಕೆ ಬರೋದು… ಕನ್ನಡಿಗರಿಗೆ ಅಡಿಗೆ ಗೊತ್ತಿಲ್ಲಾಂತ್ಲೇ?
ಪರಶು : ಮೈಸೂರಿಕಳ್‌ಕ್ ಅಟಿಕೆ ಕೊತ್ತ್. . . ಅತರೆ ತಿಳ್‌ವ್ ಸಾರ್. . . ತಿಳಿಯರಸಂ ಮಾಟುವ್‌ತಕ್ಕೆ ಪರವುದಿಲ್ಲ. . . ನಿಮಗೆ ತಿಳಿಯ ರಸಂಕೊತ್ತಿಲ್ಲ ಮಾಟುವದ್. . .
ಅಹೋಬ್ಲು : ಓಹೋ! ತಿಳಿಯ ಸಾರು ಮಾಡೋಕೇಂತ ಬಂದಿರೋದು ನೀವು! ಮತ್ಯಾಕೆ ನಾವು ಮೈಸೂರಿಗ್ಳು ಮೀಸೆ ಇಟ್ಕೊಂಡಿರೋದು? ಗಟ್ಸಾರು ಮಾಡಿಬಿಡ್ತೇವೆ; ಮೀಸೆ ಆಚೆಯಿಂದ ಬಾಯಿಗೆ ಬಿಟ್ಕೋತೇವೆ ಗಟ್ಸಾರ್ನ. ಮೀಸೆ ಒಂದು Jewel Filter ಹೊರಗಡೆ. . . ತಿಳಿಯ ಸಾರು ಒಳಕ್ಕೆ ಹೋಗಿರುತ್ತೆ, ಅಲ್ದೆ Jewel Filterಹೊರಗಡೆ. . . ಹೆಸ್ರು ಕಟ್ಟೆ ಕಟ್ಕೊಂಡು. . . ತಯಾರು. . . ತೊವ್ವೆ! (ಅತ್ಮಗತಂ) ಹೌದು. . . ನನಗೀಗ ಬಂದಿರೋclientಉ cookಉ ಅಂತ ನನ್ನ friendsಗೆ ತಿಳೀತೋ. . . ಖದರ್ ಕಮ್ಮಿ ಆಗುತ್ತೆ ನನಗೆ! (ಕಿಟ್ಟು ರಂಗುವನ್ನು ಸಮೀಪಿಸಿ, ಮೆಲ್ಲಗೆ) As I told you. . . ನಾನು ಹೇಳದ್ನಲ್ಲಾ . . ಜಮೀನ್‌ದಾರ್caseಅಂತ. . .This is the Rajah of. . . ಹೆಸ್ರು ಹೇಳ್ಬಾರ್ದು. . .disguiseನಲ್ಲಿ ಬಂದಿದ್ದಾರೆ Diplomatic ಆಗಿ. . . situationನ negotiate ಮಾಡ್ಬಿಟ್ಟು…shall join you. . . (ಪುನಃ ಪರಶುವನ್ನು ಸೇರಿ) ಹೌದೂ, ಅದೇನು. . . ತೊಂಬತ್ತು ಸಾವ್ರನೋ ಇಲ್ಲ ತೊಂಬತ್ತು ರೂಪಾಯಿಗ್ಳ caseಉ ಅಂದ್ರಲ್ಲ. . . ಅದ್ರ ತಪ್ಸೀಲು ಏನು?
ಪರಶು : ನೋಟಿ. ನಾನು ಒಂದು ತೊಟ್ಟ ಮನುಷ್ಯರ ಮನೇಲಿ ಕೆಲ್ಸ ಮಾಡಿ ಕೊಂಡ್ ಇತ್ತೆ. ಅಡಿಕೆ ಕೆಲ್ಸಂ. ತಿಂಗಳ್‌ಕ್ ಪತಿನಂಜಿ. . . ಅತಿನೈತು ರೂಪಾಯಿ ಪೇಶಿಕೊಂಡಿದ್ದು. ಕೆಲ್ಸಂ ಮಾಡ್ತಾ ಮಾಡ್ತಾ “ಶಂಬಳಂ” ಪರುವ ಮಾಸಂ ಕುಡುತ್ತೇನೆ. . . ಪರುವ ಮಾಸಂ ಕುಡುತ್ತೇನೆ” ಈಕೆ ಏಳಿಕೊಂಡ್ ಆರು ತಿಂಗಳ್ ಕೆಲಸಂ ತಕೊಂಡ್‌ಪಿಟ್ಟ್ ಅಮ್ಮಾವ್ರ್ ಕೆಲಸತಿಂದ ವೆರಟಿಬಿಟೃ.
ಅಹೋಬ್ಲು : ಕೆಲಸದಿಂದ ಒದ್ದೋಡ್ಸಿದ್ರೆ ಕಾರಣ?
ಪರಶು : ಅಮ್ಮಾವ್ರು “ನೀನು ಪಂದಾಕಿನಿಂದ ಮನೇಲಿ ಆರಶಿ ಪರ್‌ಪ್ ನೆಯ್ಯಿಪಾಲ್ ಲೆಕ್ಕಂ ಟಪಲ್ ಅಕಿ ಓಯ್ತ್! ಒರಟ್ ಓಗ್!’ ಅನ್ನ್‌ವೆರಟಿ ಬಿಟ್ರ್!
ಅಹೋಬ್ಲು : ಅಮ್ಮಾವ್ರು ಹೇಳಿದ್ರೇನು? ಯಜಮಾನ್ರಿಗೆappeal ಮಾಡ್ಕೊಳ್ಲಿಲ್ವೆ? ನೀವು?
ಪರಶು : ಯಜಮಾನರನ್ನ್ ಕೇಳಿತೆ. ಅತಕೈ ಅವರ್ “ಅಪ್ಪ, ನಾನು ಏನು ಮಾಟಲಿ! ನೀನಕುಂ ಯಚಮಾನಿ ಅಮ್ಮಾವ್ರ್; ನನಕುಂ ಯಚಮಾನಿ ಅಮ್ಮಾವ್ರು! ಕಲಾಟೆ ಮಾಟದೆ… ಅಮ್ಮಾವ್ರ ಮಾತ್ ನಾನು ಕೇಳುವ ಆಕೆ. . . ನೀನೂ ಕೇಳಿಕೊಂಡ್ ಓರಟ್ ಓಗಿ ಬಾ” ಅನ್ ಏಳಿತ್ರ್.
ಅಹೋಬ್ಲು : ಅಯ್ಯೋ ಪರಿಶೋಚನೀಯ ಪ್ರಾಣಿ! ನಿಮ್ಮ ಯಜಮಾನ್ರು ಹೆಳ್ತೇನೆ! ಹೌದೂ. . . ಮನೇಲಿ Home-rulesಉ ಇಲ್ಲಿದ್ರೂನೂವೆ ಆತನಿಗೆ, ಮನೇಗೆ ಸಂಪಾದ್ಸೋವ್ನು ಅತ್ನೆ ಅಲ್ವೇ? ಸಂಬಳಬ್ಬಾಬ್ತು ಹದ್ನೈದಾರ್ಲ ತೊಂಬತ್ತು. . . ಆತನ್ನ ಕೇಳಿದ್ರಾ?
ಪರಶು : ಔತು. ಕೇಳಿತೆ. ಆದರೆ ಅವ್ರು “ಅಪ್ಪಾ ನಾನೇನು ಮಾಟಲಿ! ನಿನ್ನ ನೋಟಿತರೆ ನನ್ನ ವಯರ್ ಎರಿಯಿತದೆ! ಆತ್ರೆ ನಾನೇನು ಮಾಟುವತ್! ಅಮ್ಮಾವ್ರು ಯಚಮಾನಿ. ಅಮ್ಮಾವ್ರು ನನ್ನ ಶಂಬಳತಲ್ಲಿ ಒಂದು ತಮ್ಮಡಿ ಕೂಟ ನನಕೇ ಕೊಟುವುತಿಲ್ಲ. . . ಇನ್ನು ನಿನ್ನ ಶಂಬಳಂ ನನ್ನ ಕೈಕೆ ಕುಡುಕ್‌ತಾರಾ? ನಿನ್ನ ಅತ್ರ ಕೊಂಜಂ ಪೊಡಿ ಇತ್ತರೆ ಕುಡ್ತ್‌ಬಿಟ್ಟ್ ಒರ್ಟ್‌ಓಕ್ ಅಪ್ಪಾ!” ಅಂತ ಎನ್ನನಾ ಕಟ್ಟಿಕೊಂಡ್ ಕಣ್‌ಜಲಂವಿಡುತ್ತಾ ಕಳಿಸಿಬಿಟ್ರ್!
ಅಹೋಬ್ಲು : ಹಯ್ಯೋ ಪ್ರಾಣಿ! ದನದ್ಹಾಗೆ ದುಡ್ಡು ಸಂಪಾದ್ಸಿದ ಸಂಬ್ಳಾನ ಧರ್ಮಪತ್ನಿ ಧರೋಡೆಗೆ ದಾನ ಇಟ್ಟು ನಶ್ಶಕ್ಕೆ ದಮ್ಡಿ ಕೂಡ ಇಲ್ದೆ ಹೋಯ್ತೇ. . . ಆ ದೊಡ್ಡ ಮನುಷ್ಯನ್ಗೆ!
ಪರಶು : ಔತ್. ನನ್ನ ನೋಡಿ ಅವರ ವಯರ್ ಎರಿಂಜ ಆಗೆ ಅವರ ಪುಡಿಕಿ ಕೂಡ ಒಂದು ತಮ್ಮಡಿ ಇಲ್ಲದ ಅವಸ್ತೆ ನೋಟಿ ನನ್ನ ಓಟ್ಟೆಯಂ ಪೆಂಕಿ ಪೆಂಕಿ ಆಗಿ…ಓತರೆ ಓಕಲೀನ್ನ್ ನನ್ನ ಮದರಾಸ್‌ಪುಡಿ ಮಟ್ಟೆ ಅವರಿಕೆ ಕೊಟ್ಟೆ.
ಅಹೋಬ್ಲು : ಅದಾದ್ರು ಮಾಡಿದ್ರಲ್ಲಾ ಉಪಕಾರ!
ಪರಶು : ಅಂದ ಉಪಕಾರತಲ್ಲಿ ನನಗೆ ಅಪಕಾರ ಆಕಿ ಓಯ್ತ್.
ಅಹೋಬ್ಲು : ಅದೇನು?
ಪರಶು : ಎಂಟು ದಿವಸತ್‌ಕನ್ ವೆಚ್ಚಿಕೊಂಡಿದ್ದ ಮಟ್ಟೆ ನಶ್ಯತೆ ಒಂತೇ ಉರಿಂಚಿ ಉರಿಂಚಿ ಬಿಟ್. . . ಕಾಲಿ ಮಟ್ಟೆ ನನ್ನ ಕೈಗೆ ಕೊಟ್ಟು ’ಓರಟ್ ಓಗ್ ಅಂದ್ ಬಿಟ್ಟ್ರ್’
ಅಹೋಬ್ಲು : ಎಲಾ ಕುಂಬಕರ್ಣ! ಎಂಟು ದಿನದ ನಶ್ಶ ಇದ್ಪಟ್ಟೇನ ಒಂದೇ ಹೀರ್ನಲ್ಲಿ ಹೀರ್ಕೊಂಬಿಟ್ನೇ!
ಪರಶು : ಔತ್! ರಾಯರಕ್ ತೊಟ್ಟ ಮೂಕ್! ತೊಟ್ಟ ಮೂಕ್!
ಅಹೋಬ್ಲು : ಹೆದ್ರಬೇಡಿ. ಅತನ್ನ ಕೋರ್ಟಿಗೆ ಎಳೆದು, ಸಹಧರ್ಮಿಣಿ ಸಮೇತ, ಆಕೆ ಬಾಯಿಂದ ನಿಮ್ಮ ಹದಿನೈದಾರ್ಲ ತೊಂಬತ್ತು ರೂಪಾಯ್ನ ಕೆಮ್ಮಿ ಸೊದೇ ಅಲ್ದೆ….. ಆತನ್ಮೂಂಗಿನಿಂದ ನಿಮ್ನೆಶ್ಯಾನೆಲ್ಲಾ ಸೀನಿಸ್ಬಿಡ್ತೇನೆ! ಬನ್ನಿ! (ಮೇಜಿನ ಬಳಿ ಕರೆದುಕೊಂದು ಹೋಗಿ ವಕಾಲತ್ತನ್ನು ರುಜು ಹಾಕಿಸಿಕೊಂಡು) ಸಧ್ಯ ಖರ್ಚಿಗೆ ಒಂದು ಹದಿನೈದ್ರೂಪಾಯಾದ್ರೂ ಇಟ್ಹೋದ್ರೆ…ಮುಂದಕ್ಕೆ. . .
ಪರಶು : ಅತಿನೈತ್ ರೂಪಾಯಿ ಎಂಗಿರಂದ್ ತರುವದ್ ಸ್ವಾಮಿ? ಕೈಯಲ್ಲಿ ಒಂದ್ ಕಾಶಿ ಕೂಡ ಇಲ್ಲ!
ಅಹೋಬ್ಲು : ಮತ್ತೇನು, ಬಿಟ್ಟೆ ಕೆಲ್ಸ ಮಾಡೊಕೇಂತ Board ಹಾಕ್ಕೊಂಡಿಧೇನೇಂತ ತಿಳ್ಕೊಂಡಿಧೀರಾ?
ಪರಶು : ಇಲ್ಲ ಸ್ಟಾಮಿ. Case ಚಯಮಾಗಿ ಪಂದ ರೂಪಾಯಿಲಿ ಇರವದ್ ರೂಪಾಯಿ ಇಡಿತ್‌ಕೊಂಡ್ ಪಾಕಿ ಕೊಟ್ರೆ ನನಕೆ ಪೋರುಂ.
ಅಹೋಬ್ಲು : (ಆತ್ಮಗತಂ) ಒಳ್ಳೇ ಹಣೇಬರಹ ನಂದು! ನನಗೆ ಬರೋ ಒಂದೊಂದು Caseನ feesಊ always conditional on my succesಉ. . . which again equally always is problematicಉ. . . and in this instance. . . particularly so. Therefore… per precedent provided by ಸೌದೆ ಒಡೀತೀರೋ ಕೆಂಪೇಗೌಡ. . . ಈತ್ನಿಂದ. . . in the shape of coinಇಲ್ದಿದ್ರೂನೂವೆ in kind ಅದ್ರೂ ವಸೂಲ್ ಮಾಡ್ಡೇಕು. . .Remunerationನ! (ಪ್ರಕಾಶಂ) ಹೌದು. ನೀವ್ಹೇಳೋದೆಲ್ಲಾ ಅರ್ಥವಾಯಿತು. ಆದ್ರೆ ನೋಡಿ, ಸರ್ಕಾರ ಒಂದ್ಹೊಸ ಕಾನೂನು ಮಾಡ್ಬಿಟ್ಟಿದೆ. ಸುಳ್ಳುcaseಉ ಯಾರಾದ್ರು ತಂದ್ರೆ ಲಾಯ್ರಹತ್ರ ತಕ್ಷಣವೇ policeಗೆ ಹೇಳ್ಕಳ್ಸಿ ಅವರ ಕೈಗೆ ಕಕ್ಷಿಗಾರನ್ನ ಒಪ್ಪಿಸ್ಬೇಕೂಂತ ವಿಧಿಸಿದೆ ಸರ್ಕಾರ.
ಪರಶು : ಶುಳ್ಳ್case? ನಾನ್ ಬ್ರಾಹ್ಮಣ! ಪೊಯ್ಯಿ ಪೇಶುವುದಿಲ್ಲ ಸ್ವಾಮಿ! ನಿಶ ಕೇಸ್ ಇದ್!
ಅಹೋಬ್ಲು : ನೋಡಿ ಬ್ರಾಹ್ಮಣರ ಮೇಲೆ policeನವರ್‍ನ ‘ಛೂ!’ ಬಿಡೋಕೆ ನನಗೇನೋ ಇಷ್ಟವಿಲ್ಲ. ಅದ್ರೂ ನೋಡಿ, ನೀವು ಪರಿಚಾರಕಾಂತ ಬಾಯಿಂದ ಎಷ್ಟು ಹೇಳ್ಕೊಂಡ್ರೂವೆ. . . ನಿಮ್ಮೊಖದಲ್ಲಿ ಬೆಳಗುವ ಲಕ್ಷ್ಮಿಕಳೆ ನೋಡಿದ್ರೆ. . . ಯಾವ್ದೋ ಒಂದು ಪ್ರಭು ಹಾಗೆ ಕಂಡು ಬರುತ್ತೆ ನನ್ನ ಕಣ್ಣಿಗೆ. ನೀವು cookಊಂತ ಹೇಳೋದ್ನ ಹೇಗ್ನಂಬೋದು ನಾನು? ಇದ್ನprove ಮಾಡ್ಬಿಡಿ. . . ನಿಮ್ಮ case ತೊಕೊಂಡು ಮುಂದಿನ ಕಾರ್ಯ ಮಾಡ್ತೇನೆ, ಇಲ್ಲವೋ. . . ನೀವಾಯ್ತು policeನವರಾಯ್ತು.
ಪರಶು : (ಬೆಚ್ಚಿಬಿದ್ದು ಕೈಹಿಸುಕುತ್ತಾ) ನಾನು Cookಊ ಅಂತ ಇಲ್ಲಿ ಯಾಗೆ prove ಮಾಟುವದ್ ಸ್ವಾಮಿ?
ಅಹೋಬ್ಲು : ಹೌದು. ನೀವ್ಹೇಳ್ಹೋದು ಸರಿ. ಈ Chamberನಲ್ಲಿ, ಆಗೋ ಕೆಲ್ಸವಲ್ಲ ಇದು. ನೋಡಿ ಮನೇಲಿ ಅಕ್ಕಿ ಬೇಳೆ ತರ್ಕಾರಿ ಇವೆ. ಒಲೇನೂ ಕಟ್ಗೇನೂ ತಥಾ. ಮನೇಲಿ ಇರೋವ್ರು ನಾನು, ನನ್ನ ಗೃಹಿಣಿ, ನಮ್ಪುತ್ರ. ನನಗೆ ಅಡಿಗೆ ಮಾಡೋದು ಗೊತ್ತಿಲ್ಲಿದ್ರೂನೂವೆ ಮಾಡಿದ ಹುಳಿ ಸಾರು ಪಲ್ಯ ಇತ್ಯಾದಿಗಳಿಗೆ ಒಂದುಪ್ಪು ಹಿಂದೋ ಮುಂದೊ ಹೆಚ್ಚೂ ಕಮ್ಮೀನೊ ಹೇಳಬಲ್ಲೆ. ನೀವು ಮೂರು ಜನಕ್ಕೆ ಅಡಿಗೆ ಮಾಡಿ ಬಡಿಸಿ. ಅಷ್ಟ್ರಲ್ಲೇ ತಿಳೆಕೊಂಡ್ಬಿಡ್ತೇನೆ: ನೀವು ನಿಜವಾದ ಪರಿಚಾರಕರೋ, ಇಲ್ಲ ಸುಳ್ಳುcaseತಂದ ಪ್ರಭುಗ್ಳೋ ಅಂಬೋದ್ನ!
ಪರಶು : ಶರಿ ಓಯ್ತು! ವಕೀಲ್ಮನೆಗೆ ಪಂದ್ರೆ ಶಮ್ಮೇಲೆ ಮಾಟುವ ಶನಿ ನನ್ನ ಪಿಟುವುತಿಲ್ಲ. ಆರು ತಿಂಗ್ಳ್ ಶಂಬಳಮಿಲ್ಲಾತೆ ಕೆಲಸಂ ಮಾಡಿತವನ್‌ಕ್ ಇನ್ನೂಂದ್ ತಿನ ಪಿಟ್ಟಿ ಪಂಚಾರಕದಲ್ಲಿ ನಷ್ಟಂ ಏನೂ ಇಲ್ಲ. (ಕಟ್ಟಿದ ದಟ್ಟಿಯನ್ನು ಅರ್ಧ ಮಡಿಸಿ ಗಂಟು ಹಾಕುತ್ತ) ನೀರು ಮನೆ ತೋರಿಸಿ.
(ಅಹೋಬ್ಲು ಪರಶುವನ್ನು ಕರೆದುಕೊಂಡು, ಸ್ನೇಹಿತರಿಗೆ “Shall Join you in a minute”ಎಂದಂದು ನಿಷ್ಕ್ರಮಣ, ಹಿಂದಿನ ಬಾಗಿಲಿಂದ)
ರಂಗು : ಬೋಂಡ ಯಾಕೆ ತಡಾನೋ ಕಾಣೆ. ನನಗೆ ಹಸಿವು!
ಕಿಟ್ಟ : ನನಗೂ dittoನಾನ್ಘಾಟಿ. ನೀನು ಘಾಟಿಯರ್‌ಉ. But ಅಹೋಬ್ಲು double ಘಾಟಿಯಸ್ಟ್‌ಉ! Court ಗೆ ಹೋಗ್ದೇನೇವೇಯೆ ಕಾಲಾ ತಳ್ಳೋಲಾಯ್ರೆದ್ರುಗೆ ನಮ್ಮ cleverness ಎಲ್ಲಿ! ನನಗೇನೋ ಅಗಾಗ್ಗೆ ನೆಗಡಿ, ಜಮೀನ್ದಾರ್ರೂಂಬೊ ನೆಪಗಳಿಟ್ಕೊಂಡು ಒಳಗೆ ಹೋಗ್ಬರೋ ಗಲಾಟೆಗಳ ಮಧ್ಯೆ. . . ಕಾಫಿ ಬೊಂಡಗಳ್ನ ಸ್ವಾಹಾ ಮಾಡ್ಬಿಟ್ಟಿದಾನೋ ಏನೋ ಕಾಣೆ!
ರಂಗು : “ಏನೋ ಕಾಣೆ” ಏನೂ! ಹಾಗೆ ಏನಾದ್ರು ಅಗಿರ್ಬೇಕು. ಆದ್ರೆ ಇನ್ನೊಂದ್ಕಡೆ ಹೋಗೋಕೆ too lateಉ. ಇಲ್ಲೆ ಇದ್ಕೊಂಡು ಇನ್ಸ್ವಲ್ಪ ಹೊತ್ತುtry ಮಾಡೋದು ಒಂದೇ hopeಉ. unless . . .ಇಷ್ಟ್ಹೊತ್ನಲ್ಲಿ tiffinಮಾಡೋ friendsಉ ನಿನಗ್ಯಾರಾದ್ರೂ.
ಕಿಟ್ಟಿ : ಇದಾರೆ. But ಬರ್ತಾ ಬರ್ತಾtiffin-hunter tricksಎಲ್ಲಾ ತಿಳ್ಕೊಂಡು ತಿಂಡಿ time ಎಲ್ಲಾ change ಮಾಡ್ಬಿಟ್ಟಿದ್ದಾರೆ! ಹೀಗೆ ಒಂದೆರಡುದಿನ ಆಗ್ತಾ ಬಂತು disappoinmentಉ. . . ನಮ್ಮ ನಮ್ಮtiffinಗಳ್ನ ನಾವ್ನಾವೇ ಒದಗಿಸ್ಕೊಳ್ಳೋಕೆ ಯಾವ್ದಾದ್ರೂ hotelಲಿ accountಉ open ಮಾಡ್ಬೇಕು ಅಂತ ಕಾಣುತ್ತೆ.
ರಂಗು : ಯಾವ್ದಾದ್ರು hotelಏನು! ಒಂದೊಂದು hoteನಲ್ಲೂ ಇವೆ. . . ನಬ್ಬಿಬ್ರ accountಗ್ಳು!
ಕಿಟ್ಟಿ : ನಾನ್ಹೇಳಿದ್ದು Some New Hotel. Blazer Coatಉ ಬಿಳಿ ಷರಾಯಿ, Tennis Shoesಉ ಇರೋವರಿಗೂ new hotelನಲ್ಲಿ accounts open ಮಾಡೋದು. . .
ಅಹೋಬ್ಲು : (ಪ್ರವೇಶಿಸಿ) Hullo boys! Congratulate ಮಾಡಿ ನನ್ನ! My client. . . the Zamindar of. . . ಹೆಸ್ರು ಈಗ ಹೇಳದಿದ್ರೂನೂವೆ. . . in afew days. . . Hindu, Times, Mailಗಳೆಲ್ಲ ಸಾರ್ತಿರ್ತವೆ: The great Zamindar’s Succession Case involving and intricate point of Hindu Law. . . Successfully. expounded to the Court by the learned Counsel Mr. Ahoble Rao”…ಇಷ್ಟ್ರಲ್ಲೇ ತಿಳ್ಕೊಂಬಿಡಿ ಈಗ ನನ್ನ situation ಎಷ್ಟು ಸೂಕ್ಷ್ಮ ಅಂಬೋದ್ನ. The Rajah Sab is having a bathಉ. . . ಕನ್ನಡ ಬಾತಲ್ಲ! English bathಉ! And afterwards through my humble hospitality ಮರಾಟ ಬಾತುplus some ಸಾರು and ಮಜ್ಜಿಗೆ. ಈ homely fare ಎಲ್ಲಿ?. . . ಆತನ palaceನಲ್ಲಿ ಕಾದಿರೋ festive board ಎಲ್ಲಿ? But ಏನ್ ಮಾಡೋದು!. . . Princesಊ ಕೂಡಾ ತಲೆಬಾಗಬೇಕುto a lawyer under circumstancesಉ. (ಕುಳಿತುಕೊಳ್ಳುವನು)
ರಂಗು : ಇರ್‍ಲಿ, ಅಹೋಬ್ಲು. Lawಲಿ ಇಷ್ಟು ಘಟ್ಟಗ ನೀನು!. . . Prince Princeಗ್ಳೇ ನಿನ್ನ Clientsಉ! ಆದ್ರೂ ಈ ಹರಕಲು Coatಉ, ಮಾಸಿದ ರುಮಾಲು. . . ?…
ಅಹೋಬ್ಲು: ಅದೇ! The secret of my tradeಉ! ನನ್ನ ಕಸುಬಿನ ಗುಟ್ನ ಹೇಳಿಬಿಡ್ತೀನೆ in a nut shell. . . perhaps a Coconut shell. ನೋಡಿ: “ಹರಕಲುcoatಉ ಹರಕಲು ರುಮಾಲು ಹಾಕ್ಕೊಂಡ ಈ ಲಾಯ್ರೀನ ಇಟ್ರೆ ಖರ್ಚು ಜಾಸ್ತಿ ಆಗೋದಿಲ್ಲಾಂತ ಬರುತ್ವೆ ಕಕ್ಷಿಗಾರ್ರು, ಕಕ್ಷಿಗಾರ್ರಲ್ಲಿ ಒಂದು peculiarity Courtಗೆ ಹೋಗಬೇಕೂಂಬೋ palgue ಹುಳು ಹೊಕ್ಕಿತೋ ರಕ್ತದಲ್ಲಿ…”ನನ್ಕಡೇನೇ ನ್ಯಾಯಾ”ಂಬೋ Ideaನ Brainಗೆ ಊದುತ್ತೆ ಈ ಹೊಕ್ಕ germಉ. “ಇಂಥ Clear case”ಗೆ ಎಂಥ ಮಂಕು ಲಾಯ್ರಿನ ಇಟ್ರೂನೂವೆ ಗೆದ್ದೇಬಿಡುತ್ತೆ ನನ್ನ Caseಊ!”ಂಬೋ ಜೋರ್‍ನಲ್ಲಿ Cheapest Lawyer ಹಿಡೀತಾನೆ party. ನಾವೋ ವಕಾಲತ್ತು sign ಮಾಡ್ಸ್ಕೊಂಡು ಕಟ್ಟು ಕೈಗೆ ಸಿಗುತ್ಲೂವೆ clientನ ಜುಟ್ಟು ಕೈಗೆ ಸಿಕ್ಕಿದ ಹಾಗೇ: Court feesಊ, Typewritting feesಊ ಅಲ್ದೆ Parker pen ಕೂಡ Fee ಜೊತೇಲಿ ಕೊಚ್ಕೊಂಬಂದ್ಬಿಡುತ್ತೆ. ಈ ದುಡ್ಡಿನ್ಕೊಬ್ಬೆಲ್ಲಾ Courtಗೆ ಬಂದ ಕಕ್ಷಿಗಾರನ ತಲೆ ಮೇಲೆ, ಇಲ್ಲ Cartಉ, Compoundಉ, suitಉ, hatಉ, bootಉ, Bar.at.law ಬರೆದ Boardಉ ಹೀಗಿರೋವರ್‍ನ ನೋಡ್ದ್ಯೋ. . . ಇವನ Carಉ Fordಉ, That’s all he can offordಉ! ಪೆಟ್ರೋಲಿಗೆ ಕ್ಷವರಲೆಟ್ಟು. courtಉ, ಕಚೇರಿ and feesಕೊಟ್ಟು clientಉ. . . Dogesಉ. ಈ Standard of perfectionಗೆ Overland qualificationsಉ! ಇ ಷ್ಟೆಲ್ಲಕ್ಕೂ ಇವನ್ಹೊಟ್ಟೀಗೆ Rools of Ragi ಸಿಕ್ಕೋದೆ? ಕಷ್ಟ. ಈ ಕಾಲದಲ್ಲಿ ಬಂಡ್ವಾಳವಿಲ್ಲದ ಬಡಾಯ್ನೂ ಬಡಾಯಿ ಇಲ್ಲದ ಬಂಡ್ವಾಳಾನೂ ವಿಂಗಡ್ಸಿ ತಿಳ್ಕೊಳ್ಳೋ brainsಉ ವಿರಳ…in the world in general and litigants in particular, ಅದಕ್ಕೇ Homo Homini Lupusಊಂತ Dictionaryಲಿ ಅಂದಿರೋದು.
(ಬೀದಿಯ ಬಾಗಿಲನ್ನು ತೆರೆಯಲು ತಾಪಾಳು ಜಗ್ಗಿಸುವ ಸದ್ದನ್ನು ಕೇಳಿ) ಯಾರದು? (ಮುದ್ಮಣಿಯನ್ನು ಮುಂದಿಟ್ಟುಕೊಂಡು ಹಿಂದೆ ಬರುವ ಬಾಳುವಿಗೆ) ಇದೇನ್ಬಾಳು?
ಬಾಳು : ಕ್ಷಮ್ಸಿ ಸಾರ್! ಒಳಗೆ ಹೋದ್ರು ಚಿಕ್ರಾಯ್ರು; ಹೋಗಿ ಸ್ವಲ್ಪ ಹೊತ್ನಲೆ ಹೊರಗ್ಬಂದು, Head masterಉ “ಮಗು ಕೈಲಿ ಕೊಟ್ಟಿರೋ ಕಾಗದದಲ್ಲಿ ಎಲ್ಲಾ ಮಂದಟ್ಟಾಗುತ್ತೆ; ಮನೇಗೆ ಕರ್ಕೊಂಡ್ಹೋಗು” ಅಂದ್ರು Head Masterಉ.
ಅಹೋಬ್ಲು: (ಪುತ್ರನಿಗೆ) ಏನೋ. . . ಈ ಹೊತ್ತು Schoolನಲ್ಲಿ ವಿಶೇಷ?
ಮುದ್ಮಣಿ : ರೆಫಿಪ್ಪೇಷನ್ (Recitation) ಕಾಂನ್ಪೇಟ್ಟೇಷನ್ (Competition) ಅತ್ತ್ಪ್ಪಾ!
ಅಹೋಬ್ಲು : (ಸ್ನೇಹಿತರಿಗೆ) My son, you know ! I mean, my son you don’t know! For the last ಎರಡು ವರ್ಷದಿಂದ Recitation prizeಉ… he is knocking off. ಈ ವರ್ಷಾನೂ ಯಥಾ ಪ್ರಕಾರ. I Think. Just like his father, you know! ಇವನ ವಯಸ್ಸನಲ್ಲಿ ಒಂದುಸಾರ್‍ತಿ. . . ಒಂದೇ ವರ್ಷ. three First Prizesಉ ಬಂದ್ವು! ಯಾವ್ದಕ್ಕೇಂತ ನನಗೆ ಜ್ಞಾಪಕವಿಲ್ಲ. But I remember…. onlyಮೂರೂನೂ First prizeಗ್ಳು. ಅದರಲ್ಲಿ ಒಂದು was for memory! ಆದ್ರೆ….this little feller… Recitation ಬಾಬತ್ನಲ್ಲಿterribleಉ. . . .ಇವತ್ತಿನ competitionಗೆ ಏನು ಹೇಳಿದ್ರೋ?
ಮುದ್ಮಣಿ : ಒನ್ಫ್ (once) ಐ (I) ಫಾ (saw) ಎ (a) ಲಿಟ್ಟ್ಲ್ (little) ದ್ಬರ್‍ಡ್ (bird)
ಕಮ್ (Come) ಹಾಪ್ (hop) ಹಾಪ್ (hop) ಹಾಪ್ (hop)
ಪ್ರೊ (So) ಐ (I) ಕ್ರೈದ್ (Cried) ಲಿಟ್ಟ್ಲ್ (little) ದ್ಬರ್‍ಡ್ (ಬಿರ್ದ್)ವಿಲ್ಯು (will you) ಫ್ಟಾಪ್ (stop) ಫ್ಟಾಪ್ (stop) ಫ್ಟಾಪ್ (stop)
ಅಹೋಬ್ಲು : will you stop!….you see…
ರಂಗು : ಹೌದು, ಮೂರು ವರ್ಷprizeನ ಇವನು ಈrecitationನಲ್ಲಿ knock off ಮಾಡ್ತಾ ಬಂದರೆ….ಮಿಕ್ಕ ಹುಡುಗರ ಉಚ್ಚಾರಣೆ must be. . .
ಅಹೋಬ್ಲು: Hopelessಊ ಅಂತೀಯ? worse than that. Becauseಇವನ್ನ ನಾನು ಕಳಿಸ್ತಿರೋದು. . . Deaf and Dumb Schoolಗೆ’. So that, future lifeನಲ್ಲಿ ಇವನಿಗೆ speechನಲ್ಲಿ ಇರೋimpediments and resultant predicamentsನ’ Deaf and Dumb signs, guesturesನಲ್ಲಿ overcomeಮಾಡ್ಬೇಕೂಂತ. Of course familyಗೆ, in general…ನಮ್ಮmotherಉ…. ಇವನ ಅಜ್ಜಿಗೆ…..terrible disappointrnentಉ! (ಕತ್ತನ್ನು ಬಗ್ಸಿ, ಮನಸ್ತಾಪವನ್ನು ಸೂಚಿಸುವನು)
ಕಿಟ್ಟಿ : ಅದೇನು disappointmentಉ, ಅಹೋಬ್ಲು?
ಅಹೋಬ್ಲು : (ಗದ್ಗದ ಸ್ವರದಿಂದ) You see, dear boys, ಇವನು ಹುಟ್ಟಿದ್ದು ಸರಸ್ವತಿ ಪೂಜೆ ದಿನ. “ಮುಂದಕ್ಕೆ ಮೇಧಾವಿ ಆಗಿ ಮನೆತನಕ್ಕೆ ಮೊಮ್ಮಗ ಯಶಸ್ಸೂ ಸಂಪತ್ತೂ ಸಂಪಾದ್ಸೋದ್ರಲ್ಲಿ ಸಂಶಯವೇನೂ ಇಲ್ಲಾ” ಅಂತ ನಮ್ಮಮ್ಮ “ಶಾರದಾ ಪ್ರಸಾದ್” ಅಂಬೊ ಹೆಸರಿಟ್ಳು ಇವನ್ಗೆ. But then, ನಾನು ಇವನು ‘ಅಪ್ಪ’, ‘ಅಮ್ಮ, ‘ಮಾಮಾ’, ‘ತಾತ’, ಅಂಬೋದಕ್ಕೆ ಅವಸ್ಥೆ ಪಡೋವಾಗ್ಲೇನೇ ಒಬ್ಬ ನವಿಲುವಾಹನನ್ನ ಕರೆದು surgical operation ಮಾಡ್ಸೋದು ಬಿಟ್ಬಿಟ್ಟು, “Men supposes Good disposes : so proposes and reposes ಅಂಬೋHindu law ಪ್ರಕಾರ ತೆಪ್ಪನಿದ್ಬಿಟ್ಟೆ. ಶಾರದಾಪ್ರಸಾದನಾದ್ರು… ಆ ಸರಸ್ವತಿ ಇವನ ನಾಲಿಗೇಲಿ ಪಾತಿ ಮಾಡಿ ಗೊಬ್ರ ಹಾಕಿ… ಬೀಜಾಕ್ಷರ ಬಿತ್ತೋದ್ಮಟ್ಗು ಮರೆತುಬಿಟ್ಳೋ ಏನೋ ಕಾಣೆ! But…. ಬಾಯ್ಬಿಡೋದ್ರಲ್ಲಿ ಸ್ವಲ್ಪ ಹಿಂದು ಮುಂದಾಗಿದ್ರೂನೂವೆ brain and body, limbs, look and sences ಬಲು ಚುರುಕು. ಇವನು School Hockey teamಗೆ Centre forwardಉ. First halfನಲ್ಲೇ twenty goals scoreಮಾಡಿಧಾನೆ! Dyan Chandಯಾವ ಮೂಲೆ!
ರಂಗಣ್ಣ : Twenty goals in the first half! ಯಾವteamಮೇಲೆ?
ಅಹೋಬ್ಲು : Against Bullanna’s Blind School….. Schoolಉ ಯಾವ್ದಾದ್ರೇನು? ಹುಡುಗterrible! Again, as an old graduate, Convocation attendಮಾಡ್ದೆ. And would you believe it? His Highness the Chancellor’s Diamond Medal’ for the cleverest student…. do you know!…… at the last Convocation ….. .. my boy knocked it off! ……ಆದ್ರೆunfortunately ……. police Superintendent …… notice ಮಾಡ್ಡಿಟ್ಟ …. .. and my poor little boy had to put it back on the tableಉ! And now, fresh from the victory of his least Recitation Competition ……. Head Masterಉ ಕೊಟ್ಟ ಕಾಗದದ ಸಮೇತ ಬಂದಿದಾನೆ… “ಕಾಗದದಲ್ಲಿ ಎಲ್ಲ ಮನದಟ್ಟಾಗುತ್ರೇ” ಅಂತHead Masterಉ ಹೇಳಿ ಕಳಿಸಿದ್ದಾರೆ…… ಮಂದಟ್ಬಾಗೋದೇನು! ಹುಡುಗ ಗೆದ್ದ as per usual. Prizeನ ದುಡ್ಡಾಗ್ಯೇ ಕೊಡೋದೋ, ಇಲ್ಲbook ಆಗಿ ತೆಗೆದ್ಕೊಳ್ತೀರೋ? Or some such silly question I suppose!…..ಬಾಳು. ಆ ಕಾಗದಾನ ಓದು.
ಬಾಳು : (ಲಕ್ಕೋಟೆಯನ್ನು ಒಡೆದು ಕಾಗದವನ್ನು ಓದುತ್ತ,) ಶಾರದಾ ಪ್ರಸಾದ್ ಬಿನ್ ಅಥ್ವ ಉರುಫ್ ಮುದ್ಮಣಿಯ ತೀರ್ಥರೂಪರವರಿಗೆ –
ಅಯ್ಯಾ, ತಮ್ಮ ಕುಮಾರ ಕಂಠೀರವರಾದ ಶಾರದಾಪ್ರಸಾದರು ಶಾಲೆಗೆ ದಯಮಾಡುವಾಗೆಲ್ಲ ಅವರ ವಪುಸ್ಸು, ವಸನಗಳಲ್ಲಿ ಅಡಗಿಕೊಂಡಿರುವ ಕೊಳಕಿನ ದುಷ್ಪರಿಮಳವು ಪೊರಮಟ್ಟು ಶಾಲೆಯೆಲ್ಲಾ ಸಂಚರಿಸಿ…. ಶಾಲೆಯ ಕೆಲಸಕ್ಕೆ ಒದಗುವ ಅನಾನುಕೂಲವೇ ಅಲ್ಲದೆ… ಸಹಪಾಠಿಗಳಾದ ಅರ್ಭಕಾನೀಕಕ್ಕೆ ಸಂಭವಿಸಬಹುದಾದ ಚರ್ಮಜಾಡ್ಯಗಳನ್ನೂ…….. ಶಾಲೆಯ ಸೂರು ಕಂಬಗಳು ಕುಸಿದು ಬೀಳಬಹುದಾದ ಅನಿವಾರ್ಯವನ್ನೂ ಅರಿತು…. ಶಾರದಾಪ್ರಸಾದರಿಗೆ ಸ್ನಾನವನ್ನು ಮಾಡಿಸಿ ಶುಚಿಯಾದ ವಸನಗಳನ್ನು ತೊಡಿಸಿ, ಶಾಲೆಗೆ ಕಳುಹಿಸದ ಪಕ್ಷಕ್ಕೆ, ಮುಂದೊದಗಲೇ, ಒದಗುವ building damages caseಗೂ… ಅಲ್ಲದೆ ಸರ್ಕಾರಿ sanitaryಮೊಖದ್ದಮೆಗೂ ಜವಾಬ್ದಾರಾರನಲ್ಲ ಎಂದು ಈಗಲೇ ತಿಳಿಯಪಡಿಸುವ
ತಮ್ಮ ಸೇವಕ.
S.P.Rao
Head Master,
Bullappa’s D & D School
(ಈ ಕಾಗದವನ್ನು ಬಾಳು ಓದುತ್ತಾ ಓದುತ್ತಾ ತಾವತ್ಕ್ರಮೇಣ ಅಹೋಬ್ಲು ಸುಸ್ತ್ ಅಗುತ್ತಾ ಆಗುತ್ತಾ ಸಂದೇಶ ಅಂತ್ಯವು ಮುಟ್ಟುತ್ತಲೇ ಕೂತುಕೂತಿದ್ದ ಹಾಗೆಯೇ ಮೂರ್ಛಿತನಾಗುವನು. ಕಿಟ್ಟ, ರಂಗು, ಬಾಳು ಮೂವರೂ ಬೆಚ್ಚಿಬಿದ್ದು ಮೂರ್ಛಿತನನ್ನು ಸಮೀಪಿಸಿ ಶೈತ್ಯೋಪಚಾರ ನಿಮಿತ್ತ paperನಿಂದ ಘಾಳಿಯನ್ನು ಬೀಸುತ್ತಲೂ Coat, shirtನ ಗುಂಡಿಗಳನ್ನು ಬಿಚ್ಚಿ ಕೈಮೈಯನ್ನು ಅಲ್ಲಾಡಿಸುತ್ತ ಮೂರ್ಛಿತನು, ಚೇತರಿಸಿಕೊಳ್ಳಲೋಸುಗ ಪ್ರಯತ್ನಪಡುವರು.)
ಕಿಟ್ಟಿ : Mr. Balu, ಒಳಗೆ ಹೋಗಿ ಒಂದು ಟಂಬ್ಲರ್ ತಣ್ಣೀರು.
ರಂಗು : (ಅಡ್ಡ ಮಾತಾಗಿ, ಕಿಟ್ಟಿಗೆ ಮೆಲ್ಲಗೆ) ಬೇಡ್ವೋ! ಮಂಕು! ಇದೊಂದೇchanceಉ ನಾವಿಷ್ಟೊತ್ತು ಕಾದಿದ್ದೂ ಸಾರ್ಥಕವಾಗೋಕೆ! (ಘಟ್ಟಿಯಾಗಿ ಬಾಳುವಿಗೆ) Mr. Balu,ನಿಮ್ಮ ಸೀನೀರುswoonಮಾಡ್ಬಿಟ್ಟಿದಾರೆ! ಒಳಗ್ಹೋಗಿ ಅಮ್ಮಾವ್ರಿಗೆ… “ಯಜಮಾನ್ರು ಮೂರ್ಛೆ, ಆದ್ರೆ ಭಯಪಡಬೇಕಾದ್ದೇನೂ ಇಲ್ಲ! ಒಂದು ದೊಡ್ಡ ಚೊಂಬು ತುಂಬ ಕಾಫಿ, ಒಂದು ತಟ್ಟೆ ಬೋಂಡ ಕಲಿಸಿಬಿಟ್ರೆ…. ಯಜಮಾನ್ರು ಚೇತರ್ಸ್ಕೊಂಡು ಎಲ್ಲಾ ಸರಿಹೋಗುತ್ತೆ”ಅಂತ ತಿಳಿಸಿ ಭೇಗ!
ಅಹೋಬ್ಲು : (ಬಾಳುಏನ ಕೈಯನ್ನು ಭದ್ರವಾಗಿ ಹಿಡಿದು… ನಿದ್ದೆಯಲ್ಲಿ ತೊದಲುವವನಂತೆ) ಎಲ್ಲಿಧೇನೆ! ಹಾಂ!… ಯಾರಂದದ್ದು?…… ಬೋಂಡ!!ಕಾಫೀಂತ!! (ಎದ್ದು ಕೂತು ಕಣ್ಣುಗಳನ್ನು ಉಜ್ಜುತ್ತ) Where am I?…..ಕನಸು! (ಸುತ್ತು ಮುತ್ತು ನೋಡಿ) ಕ್ಷಮ್ಸಿ, dear boys! Pure question of shockಉ! I am alright now. Take your seats. (ಗರ್ಜಿಸಿ) ಬಾಳು!ಕಾಗದವನ್ನೂ Steel penನ್ನೂ ತೆಗೆದುಕೊಂಡು ಬರಿ. (ಕಿಟ್ಟಯೂ ರಂಗುವೂ ಅಶಾಭಗ್ನರಾಗಿ ಪೀಠಗಳನ್ನು ಅಲಂಕರಿಸುವರು. ಬಾಳುವು ಶಾಯಿ ಕುಡಿಕೆಯಲ್ಲಿ ಅದ್ದಿದ ಪೇನಾಪಾಣಿಯಾಗಿ ತನ್ನ ಚಿಕ್ಕ ಮೇಜಿನ ಮೇಲೆ ಹರಡಿರುವ ಕಾಗದದ ಮೇಲೆ ದಣಿಯು ಚೀತ್ಕರಿಸುವ ಸಂದೇಶವನ್ನು ಲಿಖಿಸಲು ಉದ್ಯುಕ್ತನಾಗುವನು)
ಅಹೊತಿಬ್ಲು : “ತನಗೆ ತಿಳಿದ ಅಲ್ಪ, ಸ್ವಲ್ಪ ವಿದ್ಯೆಯನ್ನು, ತನ್ನ ಬಳಿ ತಂದೆತಾಯಿಗಳು ಕಳುಹಿಸಿದ ಶಿಶುಗಳ ಮೆದುಳಿಗೆ ಸೋಕಿಸುವ ನೆಪದಿಂದ ಸದರಿ ತಂದೆ ತಾಯಿಗಳಿಂದ school fees ಮುಖಾಂತರವಾಗಿ ಸುಲಿದುಕೊಳ್ಳುವ ಹಣದಿಂದ ಬಸಿರನ್ನು ಬೆಳೆಸುವ… S.P.Rao?….. ಶಿಶುಪೋತರಾಯನಿಗೆ.
“ಹುಲಿಯೂರ್ ಅಹೊಬಲ್ ರಾಯರು ಹೇಳುವದೇನೆಂದರೆ….. ತಂದೆ ತಾಯಿಗಳು ತನುಜರನ್ನು ಪಾಠಶಾಲೆಗೆ ಕಳುಹಿಸುವ ನಿಮಿತ್ತವು, ಉಪಾಧ್ಯಾಯರುಗಳು ಮಕ್ಕಳಿಗೆ ಪಾಠವನ್ನು ಹೇಳುವುದಕ್ಕಲ್ಲದೆ ಮೇಲ್ಪೇಳಿದ ಮಕ್ಕಳ ಮೈ ಬಟ್ಟೆಗಳನ್ನು ಮೂಸಿ ನೋಡುವುದಕ್ಕಲ್ಲ ತೆಗೊಂಬಾ ಇಲ್ಲಿ! I shall sign it! (ಬಾಳುವು ತಂದ ಕಾಗದಕ್ಕೆ ರುಜು ಹಾಕಿ)” ಮುದ್ಮಣಿ ಸಮೇತ ಈ ಕಾಗದಾನ schoolಗೆ ಸೇರಿಸಿ… ಹೆಚ್ಚು ಮಾತಾಡಿದ ಅಂದ್ರೆ… “Lawyer ನಾನು Libel Case ಹಾಕಿ ಆ ಶಿಶುಪೋತ ಶನಿಯ ಕುಲಗೋತ್ರ ಕುಟುಂಬ ಕೊಂಪೆ ಕೊಂಪೇನ್ನೇ courtಗೆ ಎಳೆದು ಹರಾಜು ಹಾಕಿಸ್ಬಿಟ್ಟೇನು! ಹುಷಾರ್!” ಅಂತ್ಹೇಳ್ಬಿಟ್ಟು ಬಾ, ಬಾಳು!
(ಬಾಳುವು ಬೀದಿಬಾಗಿಲನ್ನು ಸಮೀಪಿಸುತ್ತ ಮುದ್ಮಣಿಯನ್ನು ಅಭಿನಯ ಪೂರ್ವಕ ಅಹ್ವೈಸುವನು)
ಮುದ್ಮಣಿ : ಅತ್ಪಾ! ದ್ಭಣ್ರ್ಯೋಟು!
ಅಹೋಬ್ಲು : (ರೇಗಿದ ಹಿರಣ್ಯನು ಪ್ರಹ್ಲಾದನನ್ನು ತೊಲಗಿಸುವಂತೆ ಚೀತ್ಕರಿಸಿ) ತೊಲಗೋ !…..ಪನ್ನೀರುದಾನಿ! (ಪುತ್ರನೂ Juniorಊ ನಿಷ್ಕ್ರಮಿಸುತ್ತಲೂ) Forgive me, dear boys!ಹೀಗೆPosition and pelf, ಕುಟುಂಬ ಕಾಸು ಇಲ್ದೆ ಕಂಗೆಡ್ತಿರೋ ಕ್ರಿಮಿಗಳು ಮೇಸ್ಟ್ರುಗ್ಳಾಗಿ ಸೇರ್ಕೊಂಡು ಹುಡುಗರ್‍ನ ಹಿಯ್ಯಾಳಿಸಿ, ಇಂಥ lmpudent Letters Parentsಗೆ ಬರಿಯೋಕೆ ಪ್ರಾರಂಭಿಸ್ದ್ಮೇಲೆ, Society ಎಲ್ಲಿ? Civic responsibility ಯಾರ್‍ದು? Police and Government ಯಾಕಿರೋದು? Cheap pay ಕೆಲ್ಸ ಮಾಡೊ School Masterಉ parentsಗೆ ಇಂಥ Lettersಬರಿಯೋವಾಗ public hangmanಬಿಟ್ಟಿ ಸಂಬ್ಳ ಯಾಕೆ ಭಕ್ಷಿಸ್ತಿಧಾನೇಂತ ನಾನು ಕೇಳಬಹುದೆ? ಇಲ್ಲ, ಕೇಳ್ಬಾರ್ದೆ?…. .. As a lawyer and also a loyal citizen… householder… Municipal tax payer….. I ask you? ಮಗನ್ನ Schoolಗೆ ಕಳಿಸಿದ್ರೆ……. ಪನ್ನೀರ್‍ಲಿ ಮಂಗಳಸ್ನಾನ ಮಾಡ್ಸಿ “ಪುನಗು ಜವ್ವಾಜಿ ಕುಂಕುಮ ಕೇಸ್ರಿ ಗಂಧ ಕಸ್ತೂರಿ” ಲೇಪಿಸಿ… ವಜ್ರದ ಉಡಿದಾರಕ್ಕೆ ನೀರ್‍ಆಜಿ ಲಂಗೋಟಿ ಕಟ್ಟಿ, ಜರ್ತಾರಿ ಪಂಚೆ ಸುತ್ತಿ, ಮಕಮಲ್ ಅಂಗಿ ತೊಡ್ಸಿ, ರತ್ನಖಚಿತವಾದ ಕಿರೀಟಾನಿಟ್ಟು ಅಂಬಾರೀ ಮೇಲೆ ಹುಡುಗನ್ನ ಸ್ಕೂಲಿಗೆ ಕಳಿಸಿದ್ರೇನೇವೇ… “ಆಟ! ಆ ಆಟಊಟ! ಓಟ್! ಆಗ ಆಟ! ಈಗ ಊಟ!” ಈ ಸೂಕ್ಷ್ಮ ವಿದ್ಯೇನ ನಿಮ್ಮ ಹುಡುಗನಿಗೆ ಉಪದೇಶಿಸ್ತೇನೆಂತ ಮೇಸ್ಟ್ರುಗ್ಳು ಹೊರ್ಟ ಮೇಲೆ… Parents ಗತಿ ಏನು? May I ask you? ಕೇಳ್ಬಹುದೇ?
ಕಿಟ್ಟ, ರಂಗು : (ಏಕಗ್ರೀವದಿಂದ) Of course …ಕೇಳಬಹುದು.
ಅಹೋಬ್ಲು : But what is the use? ಕೇಳೋವ್ನು ಕಿರುಲ್ತಿದ್ರೂನು… ಅದ್ನ ಕಿವೀಗ್ಹಾಕ್ಕೋಳ್ಳೊ ಒಬ್ಬನೂ ಬೇಡ್ವೇ ಈ ನಮ್ಮ Societyಲಿ?
ರಂಗು : ಬೇಕೇ ಬೇಕು ಅಹೋಬ್ಲು But….. ಕೋಪಿಸ್ಕೊಬೇಡ……. Schoolಗೆ ಬರೋ ಹುಡುಗ್ರು…… ವಾಸ್ನೆ……..?
ಅಹೋಬ್ಲು : ವಾಸ್ನೇಗೇನು! ಇದ್ದೇ ಇರುತ್ತೆ. Various boys various ವಾಸ್ನೇಸ್! ಬೆಳ್ಳುಳ್ಳಿ biting boys ಬೆಳ್ಳುಳ್ಳಿ ವಾಸ್ನೆ! ಈರುಳ್ಳಿ eating boysಈರುಳ್ಳಿ ವಾಸ್ನೆ! ಕಳ್ಳೆಕಾಯ್ eating boys….. ಒಟ್ನಲ್ಲಿ all sorts eatablesನ eating boys will now and then expire, exude or even explode all sorts of ವಾಸ್ನೇಸ್! Each boy his own individualವಾಸ್ನೇ! Question of personal equation!ಇದ್ನೆಲ್ಲಾ ಮೇಷ್ಟ್ರು ಗಮನಿಸ್ತಾ ಬಂದ್ರೆ detailಆಗಿ….. ?…..?
ಕಿಟ್ಟಿ : But be charitable ಅಹೊಬ್ಲು! ಹೀಗೆಲ್ಲ ಹುಡುಗರ ವಾಸ್ನೇಗ್ಳ ಗಲಾಟೇಲಿteacherಗತಿ ಏನು?!
ಅಹೋಬ್ಲು : ಏನೇನು?! Fair play for all! Teacherಉ ಅವನ favourite smellನ …… ಅವನಿಗೆ ಬೇಕಾದ Attar of Rosesಓ, ಅಟೊದಿಲ್ಬಹಾರೋ….for protection….. ಇಲ್ಲ Gun powderಓ…… for destruction ತನ್ಮೂಗಿಗೆ ತುರುಕ್ಕೊಂಡು…… ತಾನ್ಸುಲ್ಕೊಳ್ಳೋ ಸಂಬ್ಳಕ್ಕೆ ಸರ್ಯಾಗಿ ಪಾಠ ಹೇಳೋದೋ… ತನ್ನ dutyನ ತಾನು discharge ಮಾಡೋದೋ. . . ಇಲ್ಲಾ. . . ಹೀಗೆ ಹುಡುಗರ ಕೈಲಿ ಕಾಗ್ದ ಕೊಟ್ಟು ಮಕ್ಕಳ್ನ schoolನಿಂದ ಮನೇಗೂ ಮನೆಯಿಂದ schoolಗೂ ಓಡಾಡ್ಸೋದೋ? ಒಟ್ನಲ್ಲಿteachers ಎಲ್ಲಾ hopelessly bad for their profession and must all be dismissed!
ಕಿಟ್ಟಿ : ಹೌದು… dismissಅದ್ರೆ ಅವ್ರ ಗತಿ ಏನು?
ಅಹೋಬ್ಲು : Let them take to business! Businessನಲ್ಲಿ ಎಂಥಾ dufferಗೂ ದುಡ್ಡಿದೆ. But startಮಾಡೋವಾಗ ಮಟ್ಟಿಗೆ ಹುಷಾರಾಗಿಬೇಕು. I shall give you an examp1e. ಪುಳ್ಳಯ್ಯ ಅಂತಿದ್ದ ನಮ್ಮ friendಉ. Friendsಏನು….same streetಉ ಚಿಕ್ಕಂದ್ನಲ್ಲಿ ಹೊರ್‍ಳಾಡಿದ್ದು….same school ಸೇರಿ dismissಆದದ್ದು… same classಉ ಓದದೆ fail ಆಗಿ ಒದೆ ತಿಂದದ್ದು… ಆಮೇಲೆ ನನ್ನ LL.Bಆದಾಗ್ಗೆ ಅವನ್ನ meet ಮಾಡಿದ್ದು. ಅಷ್ಟರಲ್ಲಿ S.S.L.C.ವರೆಗೂ ಮುಟ್ಟಿದ್ರೂನಾವೆ ಎಷ್ಟೋ kinds of businessಗಳಿಗೆ ಕೈ ಹಾಕೀ ಕೈ ಸುಟ್ಕೊಂಡೋ ಕೈ ಕಚ್ಚಿಯೋ… ಒಂದು ಕಾಸು ಸಿಕ್ದಿದ್ರೇನೂ business worldನ experienceಮಟ್ಗೂ collect ಆಗಿ ತುಂಬಿ ತುಳುಕುತ್ತಿದ್ದ ಅವನ್ಮಂಡೇಗೆ ಒಂದು brilliant brain waveಉ ಹೊಳೀತು….. Ideaಏನೋ simpleಉ….but yet promising. ಅವನ Idea: ಒಂದು ಕೋಳಿ ಕೊಂಡ್ಕೊಳ್ಳೋದು. ವಾರಕೈ at least ಎರಡು ಮೊಟ್ಟೆಗಳು. ತಿಂಗಳಿಗೆ ಎಂಟು. Breakagesಗೆ allow ಮಾಡಿ ತಿಂಗಳು ತಿಂಗಳಿಗೂ four to eight, eight to sixteen, sixteen to thirty two…ಹೀಗೆ progression ಲೆಖ್ಖ mathematical ಆಗಿ Budgetಹಾಕಿ, ಐದು ವರ್ಷದಲ್ಲಿ ಒಂದು ಲಕ್ಷವಾದ್ರು ಗಿಟ್ಟೋplanಈ ಹಾಕ್ದ. proceedಊ ಮಾಡ್ದ plan ಪ್ರಕಾರ. But ನಾನು ಹೇಳದ್ಹಾಗೆ…start ಮಾಡೋವಾಗ ಹುಷಾರಾಗಿರ್‍ಲಿಲ್ಲ. Thereforeಇಂಥ Promising planಊ ಕೂಡwent ‘phutt?’
ರಂಗು : ಅದೇನ್ಬೇಹುಷಾರಿ?
ಅಹೋಬ್ಲು : Terrible mistakeಉ. Because…. ಅವನು ಮೊದಲು ಕೊಂಡಕೊಂಡ ಕೋಳಿ…… ಬೇರೆ ವಿಧವಾಗಿ turn outಆಗ್ಹೋಯ್ತು.
ರಂಗು : What do you mean. ಬೇರೆ ವಿಧವಾಗಿ turned outಉ?
ಅಹೋಬ್ಲು : You see. The first ಕೋಳಿ he boughtಉturned out to be… a Cockಊ! ಹ್ಹ ಹ್ಹ ಹ್ಹ ಹ್ಹ ಹ್ಹ! (ಎಂದು ನಗುವನು. ಕಿಟ್ಟುವೂ ರಂಗುವೂ ಜೊತೆಯಲ್ಲಿ ಘೊಳ್ಳೆಂದು ನಗುವರು)
(ಈ ಮೂವರು ನಗುತ್ತ ಮೈ ಮರೆತಿರುವಾಗ ಕೆಂಪೇಗೌಡನು ನಿಶ್ಶಬ್ದವಾಗಿ ಒಳಗಿನಿಂದ ಪ್ರವೇಶಿಸಿ, ಮನೆಗೆ ಬರುವಾಗ ಇಲ್ಲದಿದ್ನ ಗಂಟೊಂದನ್ನು ಕಂಬಳಿಯಲ್ಲಿ ಸುತ್ತಿ ಬೆನ್ನಿಗೆ ಬಿಗಿದುಕೊಂಡು, ಬೆನ್ನು ಮೂವರಿಗೆ ಕಾಣದಂತೆ ಹಿಂದೆ ಹಿಂದೆ ಹೆಜ್ಜೆಯನ್ನಿಟ್ಟು ಬೀದಿ ಬಾಗಿಲನ್ನು ಸಮೀಪಿಸುವನು)
ಕಿಟ್ಟಿ : (ಗೌಡನನ್ನು ಗಮನಿಸಿ) ಯಾರದು?
ಅಹೋಬ್ಲು : (ತಿರುಗಿ, ಗೌಡನನ್ನು ನೋಡಿ, ಆತ್ಮಗತಂ) Good God! Client ಕೈಲಿ ಸೌದೆ ಒಡಿಸ್ಕೊಂಡೆಂತ ಇವರಿಗೆ ತಿಳೀತೋ…ನನಗೆ ಖದರ್ ಕಮ್ಮಿ…Therefore ಕೂಲಿ ಅಂತ….(ಪ್ತಕಾಶಂ) That is alright, boys, That is only a hired worker, (ಗೌಡನಿಗೆ)ಏನೋ? ಸೌದೆ ಎಲ್ಲಾ ಒಡೆದಾಯಿತೆ?
ಗೌಡ : ಊಂ ಬುದ್ಧಿ. ಬತ್ತೀನಿ ಬುದ್ಧಿ, ನನ್ನ ಕಟ್ನ…
(ಬೆನ್ನನ್ನು ಕೋಣೆಯಲ್ಲಿರುವವರ ಕಡೆ ತಿರುಗಿಸದೆ ಬಾಕಿಲನ್ನು ಹಿಂದೆ ಚಾಚಿದ ಕೈಗಳಿಂದ ತೆರೆದು, ನಿಷ್ಕ್ರಮಿಸಲು ಉಪಕ್ರಮಿಸುವನು)
ಅಹೋಬ್ಲು : ಈ ಮಾತು ನೀನು ಹೇಳ್ಬೇಕಾದ್ದಿಲ್ಲ, ಹೋಗು! ನಾನೆಲ್ಲ ನೋಡ್ಕೋತೇನೆ.
(ಗೌಡನು ನಿಷ್ಕ್ರಮಿಸುವನು)
ಕಿಟ್ಟಿ : But …ಅವನ ರುಮಾಲ್ನೂ ಕಂಬ್ಳೀನೂ ಕೋಲ್ನೂ ಬೆಳ್ಳಿ ಕಡಗಾನ್ನೂ ನೋಡಿದ್ರೆ ಬರೀ ಸೌದೆ ಒಡಿಯೋನ್ಹಾಗಿಲ್ವಲ್ಲ?
ಅಹೋಬ್ಲು : ಈ ಕಾಲ್ದಲ್ಲಿ… ನಮ್ದೇಶ್ದಲ್ಲಿ dignity of labour ಇಲ್ಲದೆ ಗರೀಬ್ರೂ ಗುಲಾಮ್ರೂ ತಮ್ಮ ತಮ್ಮ ಕಸಬ್ನಲ್ಲಿ ನಾಚ್ಕೆಪಟ್ಕೊಂಡು ನವಾಬ್ರ ಹಾಗೆ ವೇಷ ಹಾಕ್ಕೊಂಡು ಮೆರಿಯೋಕಾಲ ಇದು. ದುಡ್ಡಿದ್ದೋರು ದುಡ್ಡು ಹೋಗುತ್ತೆ ಅಂಬೊ ಬೆದ್ರಕೇಲಿ ದರಿದ್ರರ ಹಾಗೂ ಬಡವರು ದವಡೆ ಊನಕ್ಕೆ ಬೆದರ್‍ಕೊಂಡು ಧನಿಕರ ವೇಷವನ್ನೂ ಹಾಕ್ಕೊಂಡು ಸಮಾಜದಲ್ಲಿ ಒಬ್ಬರ್‍ನೊಬ್ರು ಮೋಸ ಮಾಡೊ ಕಾಲ ಇದು! Take for instance ನಮ್ಮನೇಲಿ ಇವತ್ತು ಅಡಿಗೆ ಮಾಡ್ತಿರೋ ಜಮೀನ್ದಾರ್…(ಆತ್ಮಗತಂ)(Good God : wrong example (ಪ್ರಕಾಶಂ) I mean,ಅಡಿಗೆ ಆಯ್ತೇಂತ ಸ್ನಾನ ಮಾಡಿ ಕಾದಿರೋ ಜಮೀನ್ದಾರ್… ಇದೆಲ್ಲಾ ಯಾಕೆ? ಒಟ್ನಲ್ಲಿ ನಿನ್ನ life… ಸಮಾಜ್ದಲ್ಲಿ ಹೇಳ್ತೇನೆ… ನೀನು people ಕಣ್ಣಿಗೆ ದೊಡ್ಡವನಾಗಬೇಕೂಂದ್ರೆ money spend ಮಾಡಬೇಕಾದ್ದೇನು ಇಲ್ಲ….. but show ಮಾಡ್ಬೇಕು! Hotelಗೆ ಹೋಗಿ, ಎಂಟಾಣೇಗೆ ತಿಂದು ಲಕ್ಷ ರೂಪಾಯಿ ನೋಟ್ನಿಟ್ಟು, “ಬೇಗಕೊಡಿ ಚಿಲ್ರೇನ” ಅಂತ ಕೇಳು; Building ತೆಗೊಂಡು ತಿಂಗಳು ಗಟ್ಲೆ ಬಾಡ್ಗೆ ಬಾಕಿ… ಇನ್ನು ತಿಂದು ಹೋದ patron’s ದುಡ್ಡೆಲ್ಲಾ problematic…… account bookನಲ್ಲಿ ಇನ್ನೂ ಅಕ್ಕಿ, ಹಿಟ್ಟು, ಉರುಳುಗಡ್ಲೆ, ದಿನಸು ಬಾಕಿ… ಎಲ್ಲ ಸಾಲ… ಹೀಗೆ ಒದ್ದಾಡೋ hotelನವನ್ಮೇಜಿನ್ಮೇಲೆ ಎಂಟಾಣೆಗೆ ತಿಂದ ಮನುಷ್ಯ ಲಕ್ಷ ರೂಪಾಯಿ ನೋಟ್ನ ಕುಕ್ಕಿ, “ಚಿಲ್ರೆ ಕೊಡಿ” ಅಂದ್ರೆ ಏನ್ಹೇಳ್ಯಾನು? ಮೊದಲು sensibleಆಗಿ ಮೂರ್ಛೆ ಹೋಗಿ, icecreamನೋ fruit saladನೋ ಯಾರಾದ್ರೂ ಮಂಡೇಗೂ ಮುಖಕ್ಕೋ ಉಜ್ಜಿ, ಜ್ಞಾನ ಬಂದು, ನೋಟು ಕುಕ್ಕ್ದೋನ್ ಕಾಲಿಗ್ಬಿದ್ದು, “ಕ್ಷಮ್ಸಿ ಪ್ರಭುಗ್ಳೆ! ಲಕ್ಕ್ಮಿಪುತ್ರರೇ! ಚಿಕ್ಕ ಹುಡುಗ್ರು ಪಠ ಓಡಾಡ್ಸೋ ಹಾಗೆ ಲಕ್ಷ ರೂಪಾಯಿ ನೋಟುಗಳ್ನ ಹೀಗೆ ಎಸ್ದಾಡೋ ತಾವು ನನ್ನ hotelನಲ್ಲಿ ಅಲಂಕರಿಸಿದ್ದು ನನ್ನ ಹಿರಿಯರ ಪುಣ್ಯ. ತಾವು ಧಮ್ರೋಟು, ಮಸಾಲ್ದೋಸೆ, ಮಸಾಲ್ದೂದ್ನ ನನ್ನ hotelನಲ್ಲಿ ಅಲಂಕರಿಸಿದ್ದು ನನ್ನ ಫುರಾಕೃತ ಲಭ್ಯ” ಅಂತ ಕಣ್ಣೀರು ಸುರಿಸ್ತ ಹೊರಳಾಡ್ತಾನೆ. ಗತಿಗೆಟ್ಟು ಹೊಟ್ಟೆಕಾಯ್ತು ಒಬ್ಬ ಅದೇ hotelಗೆ ಹೋಗಿ….. “ದಮ್ಮಯ್ಯ! ಪ್ರಾಣ ಹೋಗ್ತಿದೆ! ಸ್ವಲ್ನ ಸೀನೀರು ಕೊಡೀ!” ಅಂತಗಾನ ಕೇಳಿದ್ನೋ ಗರೀಬ….. ದವಡೇಗೇನು? ಬೆನ್ನೆಲುಬು plus ಸೊಂಟಕ್ಕೂ ಊನ! Therefore “ಹಸಿವು ನಿಮಿತ್ತಂ ವಿಧವಿಧ ವೇಷಃ!” ಇನ್ನೊಂದು example ಹೇಳ್ತೇನೆ, ಕೇಳೀ …. ..
ಜೀವು : (ಒಳಗಿನಿಂದ) ಇಧೀರಾ!
ಅಹೋಬ್ಲು : Foregive me. Domestic call from my better halfಉ (ಹಿಂದಿನ ಬಾಗಿಲನ್ನು ಸಮೀಪಿಸಿ) ಏನದು, ಜೀವು?
ಜೀವು : (ಒದ್ದೆ ಸೀರೆಯನ್ನು ಸುತ್ತಿಕೊಂಡು ಬಾಗಿಲಿನ ಹೊಸಲಿನಿಂದಾಚೆ ನಿಂತು ಸಿಡುಕು ಮುದ್ರೆಯಿಂದ) ಇದೇನು ಚೇಷ್ಟೆಗ್ಳು ಅಂದ್ರೆ ನಿಮ್ದು?
ಅಹೋಬ್ಲು : What do you mean? I mean…..
ಜೀವು : ನಿಮ್ಮ ಮೀನು ಮೊಸ್ಳೆ ತಿಮಿಂಗ್ಲ ಈ ಬಾಬ್ತ್ನೆಲ್ಲಾ ಕಟ್ಟಿಟ್ಬಿಟ್ಟು….. ನಾನು ನೀರ್ಮನೇಲಿ ಸ್ನಾನ ಮಾಡ್ತಿದ್ದಾಗ ಮುಚ್ಚಿದ ಬಾಗಿಲ ಮೇಲೆ ಮಡಿಸಿ ಹಾಕಿದ್ದ ಸೀರೆನ ಎಲ್ಬಚ್ಚಿಟ್ಟಿಧೀರ?
ಅಹೋಬ್ಲು : ನಾನ್ಯಾಕ್ಬಚ್ಚಿಡ್ಲೆ? ಆಗಿಂದೀಗಿನ್ವರ್ಗೂ ಮುಂದಿನ್ಕೋಣೆಲೆ ಇದ್ದೆ. ಆ ಅಡಿಗೇವ್ನು…?
ಜೀವು : ಅಡಿಗೆ ಮಾಡ್ತಿಧಾನೆ….. (ತಟ್ಟನೆ ಒಳಕೋಣೆಯ ಸೂರನ್ನು ಗಮನಿಸಿ) ಹಯ್ಯೋ (ಚೀತ್ಕರಿಸಿ) ಹಯ್ಯೋ! ಆ ಮಡಿ ಕೋಲ್ಮೇಲೆ ಹಾಕಿದ್ದ ಜರ್ತಾರಿ ಸೀರೆ… ಆನಂದ… ಅಂಜೂರ…. ಕರಾಚಿ…. ಬಡುಕೊಂಡೇ ನಿಮ್ಮ್ಹತ್ರ….. ಒಂದುtrunkಉ ಕೊಂಡ್ಕೊಡೀಂತ! ಎಲ್ಲಿ ಹೋದ್ವು? ಈ ಗಲಾಟೇಲಿ ಯಾರೋ ಕಳ್ರು……. ಸೀರೇನೆಲ್ಲ ……
ಅಹೋಬ್ಲು : (ಒಳಗೆ ನುಗ್ಗಿ ಓಡಾಡಿ) ಸೀರೆ ಹಾಳಾಗ್ಹೋಗ್ಲೇ……. ಆಲ್ಮಾರಾಲಿಟ್ಟಿದ್ದ cash box ಎಲ್ಲೆ? ಈಗ ಇದ್ಹಾಗಿತ್ತು! (ಹೊರಗೆ ಬಂದು) My God! Boys! Terrible robber! My wife’s sarisಉ ಆಲ್ದೆ my cash box…. ಅದ್ರಲ್ಲಿ ನನ್ನ ಸ್ವತ್ತೆಲ್ಲಾ ಇತ್ತು….. (ಅಂಬೆಗಾಲು ಇಡುವ ಶಿಶುವಂತೆ ಬರುತ್ತಿರುವ ಬೋರನಿಗೆ) ಬೋರಾ! ನಿನ್ನ ಹನ್ನೆರಡಾರ್‍ಲ ಎಪ್ಪತ್ತೆರ್ಡು ರೂಪಾಯಿ ಇಟ್ಟಿದ್ದ ಪೆಟ್ಟಿಗೇನೆ ಕೈಪೆಟ್ಟಿಗೇನ ಯಾರೋ ಲಪ್ಟಾಯಿಸ್ಬಿಟ್ಟಿದ್ದಾರೆ! ಹುಡುಕೋ! (ಬೋರನು ಮೇಜಿನ ಕೆಳಗೂ ಕುರ್ಚಿಗಳ ಕೆಳಗೂ ಓಡಾಡುವನು.)
ರಂಗು : Perhaps I may…..
ಅಹೋಬ್ಲು : (ರೇಗಿ) ನಿನ್ನ perhaps ಮುಂಡಮೋಚ್ತು ……! ನಿನ್ನ I mayಗೆ ಬೆಂಕಿಯಿಡ್ತು.. ನನಗೆ cash box ಹೋಗಿರೋ ಅವಸ್ಥೇಲಿ….. (ಆಗತಾನೆ ಪ್ರವೇಶಿಸುತ್ತಿರುವ ಬಾಳುವಿಗೆ). ಬಾಳು ಹೋಯ್ತು ! ಕೈ ಪೆಟ್ಗೆ ಹೋಯ್ತು! ನಮ್ಮ ಕಣ್ಣೆದ್ರುಗೆ ಕದ್ಕೊಂಡ್ಹೋಗಿದಾನೆ ಯಾರೋ ಕಳ್ಳ! ನಿನ್ನ ಆರು ತಿಂಗಳು ಸಂಬ್ಳ ಅದರಲ್ಲಿತ್ತು. ಒಳಗೆ ಹೋಗಿ ಹುಡ್ಕು, ಬಾಳು! (ಬಾಳುವು ಒಳಕ್ಕೆ ನುಗ್ಗುವನು)
……ಯಾರಿರಬಹುದು? ನಾನಲ್ಲ…..ನಂದು cash boxಉ. ಜೀವು ಆಲ್ಲ…… ಸೀರೇಽ ಅವಳ್ದು …… also a victim. ನೀವಿಬ್ರಲ್ಲ, ಕಣ್ಣೆದ್ರುಗಿದ್ರಿ. Bora and Balu… also parters in the lossಊ, Therefore…by elimination…..it must be cook…. I mean Jahagirdar (ಸಹಸ್ರ ರಾಕ್ಷಸರ ಧ್ವನಿಯನ್ನು ಅವಲಂಬಿಸಿ) ಅಯ್ಯರ್! P.C.!…… ಅದೇ Perfect Cookಓ…. ಪಕ್ಕ ಚೋರೋ…… ಇಲ್ಲ bothಓ….. ಈಗ ಗೊತ್ತಾಗುತ್ತೆ ಅಯ್ಯರ್!!
ಅಯ್ಯರ್ : (ಮೊಣಕಾಲಿನ ಮೇಲೆ ಕಟ್ಟಿದ ತುಂಡಲ್ಲದೆ ವಸನರಹಿತನಾಗಿಯೂ ದೊಡ್ಡದೊಂದು ಸೌಟುಪಾಣಿಯಾಗಿಯೂ ಪ್ರವೇಶಿಸಿ) ಏನು ಸ್ವಾಮಿ (ಸಿಡುಕು ಮಖದಿಂದ) ನೀವ್ ಮೈಸೂರಿಕ್ಳ್…. ನಿಮಗೆ ಅವಿಯಲ್ ಮಾಟಿ. . . ತಿಳ್‌ವ್ ರಸಂ ಸ್ವಾರಸ್ಯಸಂ ತೋರಿಸಪೇಕು ಅನ್ ನಾನ್ ಕಷ್ಟಪಟ್ಟ್ ಕೆಲಸಂ ಮಾಟತಿರುವಾಗ.. ನಾನ್ ಪೊರಿಚಿಕೊಟ್ಟ ವಕ್ಕರ್ಣೆ ಆಕುವ ಸಮಯಕ್ಕೆ ಸರಿಯಾಕಿ…. ಈಕೆ ಕೂಕಿತರೆ…. ಶಮ್ಮ್ಯೇಲ್ ಅಟಿಕೆ ಕೆಟ್ಟು ಓಕಿ…… ನೀವು ನಾನ್ ಅಟಿಕೆಯವನು ಅಲ್ಲ ಅನ್ ನೆನಚಿಕೊಂಡು ಪೋಲೀಸಿಕೆ ಏಳಿಕಳಿಸಿತ್ರೆ…. ನನ್ನ ಕತಿ ಏನು?
ಅಹೋಬ್ಲು : ಅಡಿಕೆ or no ಅಡಿಕ… ಅಲ್ಲ್ರೀ! ನೀವು ಒಳಗೆ ಹೊಕ್ಕ ಮೇಲೆ ನೂರಾರು, ಅಲ್ಲ ಸಾವಿರಾರು ರೂಪಾಯಿ ನಗದು ಅಲ್ದೆ ಲಕ್ಷಾಂತರ ಅಲ್ಲ ಹತ್ಸಾವಿರಾಂತ್ರ ಬಾಳುವ ಒಡವೆ ಇದ್ದ ಕೈ ಪೆಟ್ಟಿಗೇನೂ. . . ಅಲ್ದೆ ನನ್ನ ಹೆಂಡ್ತಿ. . . I mean ಅಮ್ಮಾವ್ರ ಹತ್ತಿಪ್ಪತ್ತು ಸೀರೆಗ್ಳೂ,….. ನೀವು ಈ ಮನೇಲಿ ಹೆಜ್ಜೆ ಇಟ್ಟ ಮೇಲೆ ಹೊರ್ಟೋಗಿವೆ! ನಿಮ್ಮನ್ನ ಜಪ್ತಿ ಮಾಡ್ಲೇ ಬೇಕು.
ಅಯ್ಯರ್ : (ಭ್ರುಕುಟಿಗಳನ್ನು ಊರ್ಧ್ವಗತಿಗೆ ಎತ್ತುತ್ತ) ಶಪ್ತಿ?
ರಂಗು : Let me help…..ಅಂದ್ರೆ ನೀವು ಬರೋವಾಗ. Mr…..or Sir or His Highness…..or Raja Sahib…ಕೋಪಿಸ್ಕೋಬೇಡಿ, Mr. Jahagirdar….ನನಗೆಲ್ಲಾ ಗೊತ್ತುಸಾರ್….. ಅಹೋಬ್ಲು ನನ್ನ friendಉ! but positionಉ delicateಉ. Therefore ಎಲ್ಲ situationಗೆ ನೀವು ಬಂದಾಗ ತಂದ trunkಉ luggageಉ ಇವುಗ್ಳಲ್ಲಿ……
ಅಯ್ಯರ್ : (ಅಡ್ಡಮಾತಾಗಿ) ನೀವು ಏಳುವತ್ ನನಕ್ ಅರ್ತಮಾಕಲಿಲ್ಲ. “ಶಪತಿ” ಅಂತರೆ ಏನ್?
ಕಿಟ್ಟ : ಜಫ್ತಿಂದ್ರೆ….. ನಿಮ್ಮನ್ನು ಹುಡುಕೋದು….. ಈ ಕಳವು ಹೋದ ಸಾಮಾನುಗ್ಳು….. ಅಂದ್ರೆ ಏನು, ಕೈ ಪೆಟ್ಗೇನೂ ಸೀರೆಗ್ಳೂ ನಿಮ್ಹತ್ರ……
ಅಯ್ಯರ್ : ಸಾಮಿ; ನಾನ್ ಪಂದಾಗ ಒಂದು ಬಂಚೆ ಒತ್ತೆಯಾಗಿ ಒಣಕತ ಇತೆ ಪೇಕಡೇಲಿ. ಈಗ ನಾನ್ ಕಟ್ಟಿಕೊಂಡಿರುವ ತೋರತು ಮುಂಟು. ಉಟುಕಿಕೊಳ್ಳಿ! ಇತರಲ್ಲಿ ಏನು ಪೆಟಿಕೆ! ಏನು ಪೊಡವೆ!… ಏನ್ ಸಾಮಿ, ಲಾಯಿರ್ ಮನೆಕ್ case ತಂದ್ರೆ…!
ರಂಗು : ಅಹೋಬ್ಲು ನನಗೇನೋ….real suspicion ಆ ಗೌಡನ್ಮೇಲೆ! ಬೆನ್ನು ತೋರಿಸ್ದೇನೇವೇಯೆ ಈ ಬಾಕ್ಲಿಂದ ಆ ಬಾಕ್ಲವರ್ಗೆ ಹಿಂದ್ಹಿಂದೆ ಹೆಜ್ಜೆ ಹಾಕ್ತ ನಡೆದದ್ದು ಒಂದೇ ಅಲ್ದೆ, ಒಂದ್ಕಂಬ್ಳೀಲಿ ದೊಡ್ಡದೊಂದು ಗಂಟಿದ್ಹಾಗೆ ಕಂಡು ಬಂತು…. ಒಂದು ಜರ್ತಾರಿ…. ಅಲ್ಲ ಸರಿಗೆ ಅಂಚಿನ ಹಸ್ರು ಬಟ್ಟೆ ಜೋಲಾಡ್ತಿದ್ದ ಹಾಗೆ…….
ಜೀವು : (ಉಚ್ಚಧ್ವನಿಯಿಂದ) ಹಯ್ಯೋ, ಅದೇ ನನ್ನ ಆನಂದಾ ಸೀರೆ! ಹಿಡೀರೀಂದ್ರೆ ಈ ಗೌಡನ್ನ! ಗಂಟಿತ್ತೆ ಅವನು ಬರೋವಾಗ….?
ಅಹೋಬ್ಲು : ಗಂಟೂ ಇಲ್ಲ, ಮಣ್ಣೂ ಇಲ್ಲ. But then…ವಕಾಲತ್ signಮಾಡಿ….at least ಹೆಬ್ಬೆಟ್ಟು ಒತ್ತಿ….recordsಉ ಕಟ್ಟು ಕೊಟ್ಬಿಟ್ಟು ಹೋಗಿದಾನೆ. (ಕಟ್ಟನ್ನು ತೆಗೆದು ಮೇಜಿನ ಮೇಲೆ ಕುಕ್ಕಿ) ಹೀಗೆ ತನ್ನ ಊರು ಕೇರಿ ಕುಟುಂಬ ಕೊಂಪೆ ಗೊತ್ಮಾಡೊ ಕಟ್ನ ಇಟ್ಬಿಟ್ಟು ಕಳ್ತನ ಮಾಡೋ ಮಂಕಾದಾನೆ! Besidesನನ್ನ, the cleverest man in the townನ್ನ, ಒಬ್ಬ ಹಳ್ಳಿ ಗಮಾರ ಹೀಗೆ ಗುಮಾಯ್ಸೋಕೆtry ಮಾಡ್ಯಾನೇ? tryಮಾಡಿದ್ರೂನೂ succeedಮಾಡ್ಯಾನೆ? ಅವನ ಹಟ್ಟಿ ಹೊಲ ಕಳ್ಕೊಂಡು, ಅದನ್ನೆಲ್ಲಾ ತಿರುಗಿ ಬರೊinformation ಆ ಕಟ್ನಲ್ಲಿ….
ರಂಗು : (ಕಟ್ಟನ್ನು ಬಿಚ್ಚಿ ಕಾಗದಗಳನ್ನು ತಿರುವು ಹಾಕುತ್ತ) ದೇವ್ರೇಗತಿ, ಅಹೋಬ್ಲು! ಈ ಕಟ್ಟೆಲ್ಲಾ ಬರಿ Blank papersಉ! ಇನ್ನು ಹೇಗೆ ಹಿಡಿಯೋದು ಅವನ್ನ! ಈ paper ಎಲ್ಲಾ ಬರೀ Fools Cap.
ಜೀವು : (ಅಹೋಬ್ಲುವಿಗೆ)- Fools Cap ಅಂದ್ರೆ ಏನು?… ಅರ್ಥವೇನು?
ಅಹೋಬ್ಲು: (ರೇಗಿ) ಅಲ್ಕಾಣೆ! ಒಬ್ಬ ಗಮಾರ…. ಹಳ್ಳಿ ಗಮಾರ ಹುಲಿಯೂರ್ ಅಹೋಬಲ್ರಾಯನ ಮನೇಗೆ ಬಂದು, day lightನಲ್ಲಿ cash box ವಗಯ್ರೆ ಲಪ್ಟಾಯಿಸ್ಬಿಟ್ಟು, ಘಾಟಿ ಆದ ನನ್ನ ಗುಮಾಯಿಸಿ ಹೋದ ಅವಸ್ಥೇಲಿ ಇರೋವಾಗ….. Fools Cap ಅಂದ್ರೆ ಅರ್ಥವೇನೂಂತ ಕೇಳ್ತೀಯಲ್ಲಾ!
ಜೀವು : ಹಾಗಂದ್ರೇನರ್ಥ?
ಅಹೋಬ್ಲು : Fools cap ಅಂದ್ರೆ…. ಪೆದ್ದುಗಳಿಗೆ ಹಾಕೋ ಟೋಪಿ.
ಜೀವು : ಕಾಗದ… ಟೋಪಿ ಹೇಗಾಗುತ್ತೆ?!
ಅಹೋಬ್ಲು : (ದಂತಾವಳಿಯನ್ನು ಕಟಕಟನೆ ಕಡಿದು ಕನಲಿ) ಕಾಗದಾನ ಸಕ್ಕರೆ ಪಟ್ಣದ ಹಾಗೆ ಸುತ್ತಿ ಮಂಕಿನ ತಲೇ ಮೇಲಿಡೋದು….Fools cap
ಜೀವು : (ಅಹೋಬ್ಲುವು ಹೇಳುತ್ತಿರುವಾಗಲೇ ಕಟ್ಟಿನ ಕಾಗದವೂಂದನ್ನು ಕಸಿದುಕೊಂಡು, ಸಕ್ಕರೆ ಪಟ್ಣದಂತೆ ಸುತ್ತಿ ಅಹೋಬ್ಲುವಿನ ತಲೆಯ ಮೇಲಿಡುತ್ತಾ) ಇನ್ಮೇಲಾದ್ರು ಈ ಬಂಡ್ವಾಳ್ವಿಲ್ಲದ ಬಡಾಯೀನ ಬಿಟ್ಟು…..
ಅಹೋಬ್ಲು : (ಮುದ್ರೆ, ದ್ವನಿ, ಭಾಷೆ, ಅಭಿನಯಗಳಿಂದ ಲಜ್ಜೆ, ರೋಷ, ಜುಗುಪ್ಸೆ ಇತ್ಯಾದಿಗಳನ್ನು ತೋರ್ಪಡಿಸುತ್ತ) ದಮ್ಮಯ್ಯ ಜೀವು! ನಿನ್ನ Curtain Lectureಉ ಯಥಾ ಪ್ರಕಾರ ಆಗ್ಲಿ!…. ನೋಡ್ತಿಧಾರೆ ಎಲ್ರು!…… ನಾಚಿಕೆ ಆಗುತ್ತೆ! Clientನೂ, ನನ್ನ creditನೂ considerಮಾಡು!
ಜೀವು : ನೀವ್ಕೆಡೋದೆಲ್ಲಾ ನಿಮ್ಮ ಬಡಾಯಿ…. ನಿಮ್ಮ ಇಂಗ್ಲೀಷ್ ಬೆರಸಿದ ಕನ್ನಡ…..
(ಎಂದು ಜೀವು ಮಾತಾಡುತ್ತಿರುವಾಗಲೇ ಪರದೆಯು ಬೀಳುವುದು)
*****