ಪಾತ್ರಗಳು:
ವೆಂಕಟಾಚಾರ್ಯರು(೬೫ ವರ್ಷ)- ವೈದ್ಯರು
ಪಿಳ್ಳಾರಿ ಗೋವಿಂದ(೩೦ ವರ್ಷ)- ವೆಂಕಟಾಚಾರ್ಯರ ಸಹಾಯಕ
ಗೋಪಾಲ(೩೨ ವರ್ಷ)- ರೋಗಿ
ಅರುಣ- ಶರಣ(೩೬ ವರ್ಷ)- ದರೋಡೆಕೋರರು
ಸುಕ್ಷೇಮ(೪೩ ವರ್ಷ)- ಕಳ್ಳವೇಷದ ಅರುಣ
ಸುಕಾಮ(೪೩ ವರ್ಷ)- ಕಳ್ಳವೇಷದ ಶರಣ
ಅರಸ- (೪೫ ವರ್ಷ)
ಮಂತ್ರಿ- (೬೦ ವರ್ಷ)
ದೂತರು- ಇಬ್ಬರು
ಕಾವಲುಭಟರು- ಇಬ್ಬರು
ಮೇಳದವರು
ಡಂಗುರದವನು
ಅಂಕ– ೧
ಮೇಳ ೧– ಮಾನವನ ಹೃದಯದಲಿ ಆಸೆಯಾ ಗೂಳಿ
ಉಸಿರುಸಿರು ತುಂಬಿಹುದು ಸ್ವಾರ್ಥದಾ ಗಾಳಿ
ಆ ಕಥೆಯ ನಾವೀಗ ಹೇಳ್ತೇವೆ ಕೇಳಿ
ಎಲ್ಲಾರು ಕೇಳಿ ಎಲ್ಲಾರು ಕೇಳಿ
ಮೇಳ ೨– ತೆಂಕಣದ ರಾಜ್ಯ ಅಲ್ಲೊಬ್ಬ ರಾಜ
ಮೇಳ ೧– ಏನವನ ಹೆಸರು ಹೇಳಬಹುದೇ?
ಮೇಳ ೨– ಹೆಸರೆಂಬುದೆಲ್ಲಾ ಬಲು ಮುಖ್ಯವಲ್ಲ
ಮನಸ್ಸಿನಾ ಕಲ್ಪನೆಗೆ ಹೆಸರೆಂಬುದಿಲ್ಲ
ಹೆಸರೆಂಬ ಕೆಸರ ಮೆತ್ತಿಕೊಳ್ಳಲುಬೇಡಿ
ಹೆಸರನ್ನು ಮರೆತು ಕಥೆಯ ಕೇಳಿ
ಮೇಳ ೧– ಆಯ್ತು ಹೇಳಿ ಆಯ್ತು ಹೇಳಿ
ಮೇಳ ೨– ತೆಂಕಣದ ರಾಜ್ಯ ಅಲ್ಲೊಬ್ಬ ರಾಜ
ರಾಜ್ಯದಾ ಮೂಲೆಯಲಿ ವೈದ್ಯರ ಮನೆ
ಅಲ್ಲಿನ ವೈದ್ಯನಿಗೆ ಹಿರಿದೊಂದು ಆಸೆ
ಬರಿಯಾಸೆಯಲ್ಲವದು ಅತಿಯ ಆಸೆ
ಆ ಆಸೆ ಏನೆಂದು ನೋಡೋಣ ಬನ್ನಿ
ನೋಡೋಣ ಬನ್ನಿ ನೋಡೋಣ ಬನ್ನಿ
(ಅದೊಂದು ನಾಟಿವೈದ್ಯರ ಮನೆ. ವರಾಂಡದಲ್ಲಿ ಕುಳಿತ ಇಬ್ಬರು ವ್ಯಕ್ತಿಗಳು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಒಬ್ಬರು ಹಿರಿಯ ನಾಟಿವೈದ್ಯ ವೆಂಕಟಾಚಾರ್ಯರು. ಮತ್ತೊಬ್ಬ ಅವರ ಸಹಾಯಕ ಪಿಳ್ಳಾರಿ ಗೋವಿಂದ.ವೆಂಕಟಾಚಾರ್ಯರು ತಮ್ಮೆದುರಿರುವ ಅನೇಕ ಗ್ರಂಥಗಳಲ್ಲಿಯೇ ದೊಡ್ಡದಾದ ಗ್ರಂಥವೊಂದನ್ನು ಬೆರಳೆಂಜಲಲ್ಲಿ ತಿರುವುತ್ತಾ, ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಪಕ್ಕದಲ್ಲಿಯೇ ಕುಳಿತುಕೊಂಡಿರುವ ಪಿಳ್ಳಾರಿ ಗೋವಿಂದ ಕೆಲವು ಎಲೆಗಳನ್ನು ತನ್ನೆದುರಿರುವ ಅಗಲವಾದ ಕಲ್ಲಿನ ಮೇಲಿಟ್ಟು ಅರೆಯುತ್ತಿದ್ದಾನೆ)
ವೆಂಕಟಾಚಾರ್ಯರು– ಮುಗಿಯಿತೇನೋ?
ಪಿಳ್ಳಾರಿ ಗೋವಿಂದ– ಮುಗಿಯುತ್ತಾ ಬಂತು ಗುರುಗಳೇ. ಇನ್ನೊಂದೈದು ನಿಮಿಷದಲ್ಲಿ ಸಿದ್ಧವಾಗುತ್ತದೆ.
ವೆಂಕಟಾಚಾರ್ಯರು– ಹ್ಞೂ, ಬೇಗ ಮುಗಿಸು. ಎಷ್ಟು ಬೇಗ ಔಷಧಿ ಸಿದ್ಧವಾಗುತ್ತದೋ ಅಷ್ಟೇ ವೇಗದಲ್ಲಿ ಸಾವಿನ ಆಯುಷ್ಯ ಕ್ಷೀಣಿಸುತ್ತಾ ಹೋಗುತ್ತದೆ.(ಒಮ್ಮಿಂದೊಮ್ಮೆಗೇ ಆವೇಶಭರಿತರಾಗಿ) ಸಾವಿರದ ಜಗತ್ತೊಂದು ನಿರ್ಮಾಣವಾಗುತ್ತದೆ. ಸಾವಿಗೇ ಸಾವನ್ನಿಕ್ಕಿದ ಕೀರ್ತಿ ನನ್ನದಾಗುತ್ತದೆ.
(ಮುಷ್ಟಿಗೊಂಡ ಅವರ ಬಲಗೈ ಮೇಲಕ್ಕೆ ಚಾಚಿಕೊಳ್ಳುತ್ತದೆ. ಪಿಳ್ಳಾರಿ ಗೋವಿಂದನ ಮುಖದಲ್ಲಿ ವ್ಯಂಗ್ಯದ ನಗುವೊಂದು ಮೂಡಿ ಮರೆಯಾಗುತ್ತದೆ)
ವೆಂಕಟಾಚಾರ್ಯರು– ಹ್ಞಾ ಪಿಳ್ಳಾರಿ, ನಾಳೆ ಬೆಳಿಗ್ಗೆಯ ಹೊತ್ತಿಗೆ ಆಗಷ್ಟೇ ಮೃತಗೊಂಡಿರುವ ದೇಹವೊಂದು ಬೇಕು. ನೀನು ವ್ಯವಸ್ಥೆ ಮಾಡಬೇಕು. ತಿಳಿಯಿತೇ?
ಪಿಳ್ಳಾರಿ ಗೋವಿಂದ– (ಆಶ್ಚರ್ಯದಿಂದ ಅವರನ್ನೇ ನೋಡುತ್ತಾ) ಏನು ಮೃತದೇಹವೇ? ಯಾಕೆ ಗುರುಗಳೇ?
ವೆಂಕಟಾಚಾರ್ಯರು– (ತುಸು ಕೋಪದಿಂದ) ಅದೆಲ್ಲ ನಿನಗ್ಯಾಕೋ ಮುಟ್ಠಾಳ. ನಾನು ಹೇಳಿದಷ್ಟನ್ನು ಮಾಡು.
(ಪಿಳ್ಳಾರಿ ಗೋವಿಂದನ ಮುಖ ಸಪ್ಪಗಾಗುತ್ತದೆ)
ಪಿಳ್ಳಾರಿ ಗೋವಿಂದ– ಆದರೂ ನಾಳೆ ಬೆಳಿಗ್ಗೆಯ ಸಮಯಕ್ಕೇ ಮೃತದೇಹ ಸಿಗಬೇಕೆಂದರೆ ಸ್ವಲ್ಪ ಕಷ್ಟವೇ.(ಸ್ವಲ್ಪ ಹೊತ್ತು ಹಾಗೆಯೇ ಯೋಚಿಸಿ) ಗುರುಗಳೇ, ಹೀಗೆ ಮಾಡಿದರೆ ಹೇಗೆ?
ವೆಂಕಟಾಚಾರ್ಯರು– ಹೇಗೆ?
ಪಿಳ್ಳಾರಿ ಗೋವಿಂದ-(ಹುಸಿನಗು ನಗುತ್ತಾ) ಹೇಗೂ ನಾಳೆ ಮಂಗಳವಾರ. ಕಾಯಿಲೆ ಬಿದ್ದವರು ನಿಮ್ಮ ಬಳಿಗೆ ಬಂದೇ ಬರುತ್ತಾರೆ. ಅವರಲ್ಲಿ ವಯಸ್ಸಾದವನೊಬ್ಬನನ್ನು ಕೊಂದರೆ ಆಗಲಿಕ್ಕಿಲ್ಲವೇ?
ವೆಂಕಟಾಚಾರ್ಯರು– (ಅತಿಯಾದ ಕೋಪದಿಂದ) ಮೂರ್ಖ, ಅಧಿಕಪ್ರಸಂಗದ ಮಾತನಾಡುತ್ತೀಯಾ? (ಬಾರಿಸುವುದಕ್ಕೆಂದು ಬಲಗೈಯ್ಯನ್ನು ಮೇಲಕ್ಕೆ ಎತ್ತುತ್ತಾರೆ. ಇದ್ದಕ್ಕಿದ್ದಂತೆ ಕೋಪದ ಬದಲಾಗಿ ನಗು ಅವರ ಮುಖದಲ್ಲಿ ಮೂಡತೊಡಗುತ್ತದೆ) ಅಲ್ಲವೋ ಪಿಳ್ಳಾರಿ, ಕೆಲವೊಮ್ಮೆ ನಿನ್ನ ತಲೆಯೂ ಉಪಯೋಗಕ್ಕೆ ಬರುತ್ತದೆ ಎಂದಾಯಿತು. ನೀನು ಹೇಳಿದ್ದೇ ಸರಿ. ಔಷಧಿಗೆಂದು ಬಂದ ವ್ಯಕ್ತಿಯನ್ನೇ ಕೊಂದರಾದೀತು. ಹೇಗೂ ಮತ್ತೆ ಆತನನ್ನು ಬದುಕಿಸುವುದು ಇದ್ದೇ ಇದೆಯಲ್ಲ?!
ಪಿಳ್ಳಾರಿ ಗೋವಿಂದ-(ಆತುರದಿಂದ) ಏನು? ಸತ್ತವನನ್ನು ಮತ್ತೆ ಬದುಕಿಸುವುದೇ? ಅದು ಹೇಗೆ ಗುರುಗಳೇ?
ವೆಂಕಟಾಚಾರ್ಯರು-(ಮುಗುಳ್ನಗುತ್ತಾ) ಅಷ್ಟೊಂದು ಆತುರ ಒಳ್ಳೆಯದಲ್ಲವೋ ಪಿಳ್ಳಾರಿ. ನಾಳೆ ಹೇಗೂ ನೀನೇ ನೋಡುತ್ತೀಯಲ್ಲ. ಆ ವಿಚಾರ ಬಿಡು. ಹೊತ್ತಾಯಿತು. ಊಟ ಮಾಡೋಣ, ಬಾ.
(ಗ್ರಂಥಗಳನ್ನೆಲ್ಲಾ ಜೋಡಿಸಿ ಅಲ್ಲೇ ಇಟ್ಟ ವೆಂಕಟಾಚಾರ್ಯರು ಮನೆಯೊಳಕ್ಕೆ ನಡೆಯುತ್ತಾರೆ. ಅವರನ್ನೇ ನೋಡುತ್ತಾ ಕುಳಿತ ಪಿಳ್ಳಾರಿ ಗೋವಿಂದನ ಮುಖದಲ್ಲಿ ಪ್ರಶ್ನಾರ್ಥಕ ಭಾವ ಮನೆಮಾಡಿರುತ್ತದೆ)
ಪಿಳ್ಳಾರಿ ಗೋವಿಂದ– ಹೇಗೂ ನಮ್ಮ ಗುರುಗಳಿಗೆ ಅರುವತ್ತು ಕಳೆಯಿತು. ಅರುಳು- ಮರುಳು ಹಿಡಿದಿದೆಯೋ ಹೇಗೆ? ಇಲ್ಲದಿದ್ದರೆ ಸತ್ತ ವ್ಯಕ್ತಿಯನ್ನು ಬದುಕಿಸುವುದು ಎಂದೆಲ್ಲಾ ಮಾತನಾಡುತ್ತಿದ್ದಾರಲ್ಲಾ, ಇವರಿಗೆ ಬುದ್ಧಿ ಸ್ಥೀಮಿತದಲ್ಲಿದೆಯಾ? ನನ್ನನ್ನು ದಡ್ಡ ಎಂದು ಹೇಳಿ, ಹೇಳಿ ಇವರೇ ಅತಿಮೂರ್ಖರಾಗುತ್ತಿದ್ದಾರೆ, ಅಷ್ಟೇ.
(ಅಷ್ಟರಲ್ಲಿ ಒಳಗಿನಿಂದ ವೆಂಕಟಾಚಾರ್ಯರ ಧ್ವನಿ ಕೇಳುತ್ತದೆ)
ವೆಂಕಟಾಚಾರ್ಯರು– ಲೋ ಪಿಳ್ಳಾರಿ, ಊಟಕ್ಕೆ ಬಾ ಎಂದದ್ದು ಅರ್ಥವಾಗಲಿಲ್ಲವೇ ನಿನಗೆ? ಬೇಗ ಬಾ.
ಪಿಳ್ಳಾರಿ ಗೋವಿಂದ– ಹ್ಞಾ, ಬಂದೆ ಗುರುಗಳೇ.
(ಅರೆಯುವ ಕಲ್ಲನ್ನು ಆತುರಾತುರವಾಗಿ ಜೋಡಿಸಿಟ್ಟ ಪಿಳ್ಳಾರಿ ಗೋವಿಂದ ಮನೆಯೊಳಕ್ಕೆ ಓಡುತ್ತಾನೆ)
*******************************************************
ಅಂಕ– ೨
(ಬೆಳ್ಳಂಬೆಳಗ್ಗೆಯ ಹೊತ್ತು. ವೆಂಕಟಾಚಾರ್ಯರು ಮತ್ತು ಪಿಳ್ಳಾರಿ ಗೋವಿಂದ ಮನೆಯ ವರಾಂಡದಲ್ಲಿ ಕುಳಿತಿದ್ದಾರೆ. ಅವರಿಬ್ಬರ ಕಣ್ಣುಗಳು, ಅದರಲ್ಲೂ ವಿಶೇಷವಾಗಿ ವೆಂಕಟಾಚಾರ್ಯರ ಕಣ್ಣುಗಳು ಯಾರದ್ದೋ ನಿರೀಕ್ಷೆಯಲ್ಲಿರುವಂತೆ ಅತ್ತಿತ್ತ ಚಲಿಸುತ್ತಿವೆ)
ವೆಂಕಟಾಚಾರ್ಯರು– ಅಲ್ಲವೋ ಪಿಳ್ಳಾರಿ, ಯಾವಾಗಲೂ ರೋಗಿಗಳು ಮೊದಲು ಬಂದು ನನಗಾಗಿ ಕಾಯುತ್ತಿದ್ದದ್ದು. ಆದರೆ ಇಂದು ಹಾಗಲ್ಲ. ನಾನೇ ಅವರಿಗೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ ನೋಡು. ಇಷ್ಟು ಹೊತ್ತಾದರೂ ಒಬ್ಬನೇ ಒಬ್ಬ ಬರುತ್ತಿಲ್ಲವಲ್ಲ.
ಪಿಳ್ಳಾರಿ ಗೋವಿಂದ– ಅಲ್ಲ ಗುರುಗಳೇ, ನೀವ್ಯಾವತ್ತೂ ಇಷ್ಟು ಬೇಗ ಬಂದು ಕುಳಿತದ್ದಿಲ್ಲ. ಇವತ್ತು ಬೇಗ ಬಂದು ಕುಳಿತಿರುವುದರಿಂದಲೇ ರೋಗಿಗಳಿಗೆ ಕಾಯುವ ಸ್ಥಿತಿ ಬಂದಿದೆ ಅಷ್ಟೇ.
ವೆಂಕಟಾಚಾರ್ಯರು– ಹೌದೋ ಪಿಳ್ಳಾರಿ, ರಾತ್ರಿಯಿಡೀ ನಿದ್ದೆಯೇ ಬಂದಿಲ್ಲ ನನಗೆ. ಯಾವಾಗ ಆ ಔಷಧಿಯನ್ನು ಪ್ರಯೋಗಿಸುತ್ತೇನೋ, ಯಾವಾಗ ಸಾವೇ ಇಲ್ಲದ ಪ್ರಪಂಚವನ್ನು ನಿರ್ಮಿಸುತ್ತೇನೋ ಎಂಬ ಕಾತರವೇ ಮನದಲ್ಲಿ ತುಂಬಿಹೋಗಿದೆ. ಆ ಕಾತರ ಮನಸ್ಸಿನಿಂದ ಹೊರಹೋಗಬೇಕಾದರೆ ಸಾವಿನೆದುರು ನಾನು ಗೆಲುವು ಪಡೆಯಬೇಕಾಗಿದೆ. ಹೌದು! ಸಾವಿನೆದುರು ನನ್ನ ಗೆಲುವು ಸಾಧಿತವಾಗಲೇಬೇಕಾಗಿದೆ.
(ಹೀಗೆನ್ನುತ್ತಾ ವೆಂಕಟಾಚಾರ್ಯರು ದೊಡ್ಡ ಸ್ವರದಲ್ಲಿ ವಿಚಿತ್ರವಾಗಿ ನಗುತ್ತಾರೆ.ಪಿಳ್ಳಾರಿ ಗೋವಿಂದ ಆಶ್ಚರ್ಯಚಿತ್ತನಾಗಿ ಅವರನ್ನೇ ನೋಡುತ್ತಾನೆ. ಅಷ್ಟರಲ್ಲಿ ರೋಗಿಯೊಬ್ಬ ನಡೆದುಕೊಂಡು ಬರುತ್ತಿರುವುದು ಪಿಳ್ಳಾರಿ ಗೋವಿಂದನಿಗೆ ಗೋಚರವಾಗುತ್ತದೆ)
ಪಿಳ್ಳಾರಿ ಗೋವಿಂದ– ಗುರುಗಳೇ, ರೋಗಿಯೊಬ್ಬ ಇತ್ತಲೇ ಬರುತ್ತಿದ್ದಾನೆ ನೋಡಿ. (ಮತ್ತೊಮ್ಮೆ ರೋಗಿಯ ಕಡೆಗೆ ಸೂಕ್ಷ್ಮ ನೋಟವನ್ನು ಹರಿಸಿ) ಓ! ಅವನು ಕೆಳಓಣಿಯ ಗೋಪಾಲ ಗುರುಗಳೇ.
ವೆಂಕಟಾಚಾರ್ಯರು– (ಆ ಕಡೆಗೆ ನೋಟವನ್ನು ಬೀರಿ) ಒಳ್ಳೆಯದೇ ಆಯಿತು ಬಿಡು. ಅವನಿಗೆ ಹಿಂದಿಲ್ಲ, ಮುಂದಿಲ್ಲ. ನನ್ನ ಪ್ರಯೋಗಕ್ಕೆ ತಕ್ಕುದಾದವನಂತಿದ್ದಾನೆ. ಲೋ ಪಿಳ್ಳಾರಿ ಚೆನ್ನಾಗಿ ನೆನಪಿಡು, ಅವನು ಯಾವ ರೋಗವನ್ನೇ ಹೇಳಲಿ, ಅದು ನಮಗೆ ಮುಖ್ಯವಲ್ಲ. ನಾನು ಔಷಧಿ ಕೊಡು ಎಂದ ಕೂಡಲೇ ವಿಷದ ಮಾತ್ರೆಯಿದೆಯಲ್ಲ, ಅದನ್ನು ಆತನಿಗೆ ಕೊಡಬೇಕು. ತಿಳಿಯಿತಲ್ಲ? ನಿನ್ನ ಅತಿಬುದ್ಧಿಯನ್ನೇನಾದರೂ ಪ್ರಯೋಗಿಸಹೊರಟೆಯೋ, ಬಂದಿರುವ ಒಳ್ಳೆ ಅವಕಾಶವೂ ಹಾಳಾದೀತು, ಜೋಕೆ!
ಪಿಳ್ಳಾರಿ ಗೋವಿಂದ– ಸರಿ ಗುರುಗಳೇ. ಎಲ್ಲಾ ನೀವು ಹೇಳಿದಂತೆಯೇ ಮಾಡುತ್ತೇನೆ.
(ಗೋಪಾಲ ವರಾಂಡಕ್ಕೆ ಬಂದು ವೆಂಕಟಾಚಾರ್ಯರಿಗೆ ಅಭಿಮುಖನಾಗಿ ಕುಳಿತುಕೊಳ್ಳುತ್ತಾನೆ)
ವೆಂಕಟಾಚಾರ್ಯರು– ಏನಾಗಿದೆಯೋ ಗೋಪಾಲ, ಮುಖ ಬಾಡಿಕೊಂಡಂತಿದೆಯಲ್ಲ?
ಗೋಪಾಲ– ನಿನ್ನೆ ರಾತ್ರೆಯಿಂದಲೂ ಒಂದು ರೀತಿಯ ಆಯಾಸ ವೈದ್ಯರೇ. ಯಾವ ಆಹಾರವನ್ನೂ ದೇಹ ಒಪ್ಪಿಕೊಳ್ಳುತ್ತಿಲ್ಲ. ತಿಂದದ್ದು ಕುಡಿದದ್ದೆಲ್ಲಾ ವಾಂತಿ ಆಗುತ್ತಿದೆ. ನನ್ನ ಮನೆಯಿಂದ ಇಲ್ಲಿಯವರೆಗೆ ನಡೆದುಕೊಂಡು ಬಂದದ್ದೇ ಹೆಚ್ಚು.
ವೆಂಕಟಾಚಾರ್ಯರು– ಸರಿ. ನನ್ನಲ್ಲಿಗೆ ಬಂದೆಯಲ್ಲ, ಇನ್ನೆಲ್ಲಾ ಸರಿಹೋಗುತ್ತದೆ ಬಿಡು. ಲೋ ಪಿಳ್ಳಾರಿ, ವಾಂತಿ ನಿಲ್ಲುವ ಗುಳಿಗೆಯಿದೆಯಲ್ಲ, ಅದನ್ನು ತೆಗೆದುಕೊಂಡು ಬಾ.
(ವೆಂಕಟಾಚಾರ್ಯರು ಪಿಳ್ಳಾರಿ ಗೋವಿಂದನತ್ತ ನೋಡಿ ಕಣ್ಸನ್ನೆಯನ್ನು ಮಾಡುತ್ತಾರೆ. ಪ್ರತಿಯಾಗಿ ಪಿಳ್ಳಾರಿ ಗೋವಿಂದನೂ ಕೂಡಾ ಅರ್ಥವಾಯಿತು ಎಂಬಂತೆ ಕಣ್ಸನ್ನೆ ನಡೆಸುತ್ತಾನೆ. ಬಳಿಕ ವಿಷದ ಮಾತ್ರೆಯನ್ನು ತಂದು ವೆಂಕಟಾಚಾರ್ಯರಲ್ಲಿ ಕೊಡುತ್ತಾನೆ)
ವೆಂಕಟಾಚಾರ್ಯರು– ನಾನು ಆಗ ಹೇಳಿದ ಮಾತ್ರೆಗಳನ್ನೇ ತಂದಿದ್ದೀ ತಾನೇ?
ಪಿಳ್ಳಾರಿ ಗೋವಿಂದ– ಹೌದು ಗುರುಗಳೇ, ಇದು ಅದೇ ಮಾತ್ರೆ.
ವೆಂಕಟಾಚಾರ್ಯರು– (ಗೋಪಾಲನತ್ತ ತಿರುಗಿ) ಇಕೋ ಗೋಪಾಲ, ಇದನ್ನು ಇಲ್ಲಿಯೇ ತೆಗೆದುಕೊಂಡರೆ ಒಳ್ಳೆಯದು. ಮನೆಮುಟ್ಟುವ ವೇಳೆಗೆ ನಿನ್ನ ವಾಂತಿಯೆಲ್ಲಾ ನಿಂತು, ನಿತ್ರಾಣವೂ ಸರಿಹೋಗಿರುತ್ತದೆ.
(ಗೋಪಾಲ ಆ ಗುಳಿಗೆಯನ್ನು ಸೇವಿಸುತ್ತಾನೆ. ಐದು ನಿಮಿಷದಲ್ಲಿಯೇ ಸಂಕಟದಿಂದ ಒದ್ದಾಡುತ್ತಾ, ಪ್ರಾಣವನ್ನು ಕಳೆದುಕೊಂಡು, ನೆಲದ ಮೇಲೆ ಅಂಗಾತ ಬೀಳುತ್ತಾನೆ)
ವೆಂಕಟಾಚಾರ್ಯರು– (ಗೋಪಾಲನ ನಾಡಿಮಿಡಿತವನ್ನು ಪರೀಕ್ಷಿಸಿ) ಲೋ ಪಿಳ್ಳಾರಿ, ಸತ್ತಿದ್ದಾನೆ. ಆದಷ್ಟು ಬೇಗ ನಮ್ಮ ಪ್ರಯೋಗ ಮೊದಲ್ಗೊಳ್ಳಬೇಕು. ಹೋಗು, ನಾನು ನಿನ್ನೆ ಸಿದ್ಧಪಡಿಸಿಟ್ಟಿದ್ದೇನಲ್ಲ ಗುಳಿಗೆ, ಅದನ್ನು ತೆಗೆದುಕೊಂಡು ಬಾ. ಹ್ಞಾ, ಗುಳಿಗೆಯ ಪಕ್ಕದಲ್ಲೇ ಎಲೆಯ ರಸವನ್ನೂ ಇಟ್ಟಿದ್ದೇನೆ. ಅದನ್ನೂ ತಾ.
ಪಿಳ್ಳಾರಿ ಗೋವಿಂದ– (ಆಶ್ಚರ್ಯದಿಂದ) ಗುರುಗಳೇ, ಆ ಮಾತ್ರೆ ಕೊಟ್ಟರೆ ಈತ ಮತ್ತೆ ಬದುಕುತ್ತಾನೆಯೇ?
ವೆಂಕಟಾಚಾರ್ಯರು– (ಕೋಪದಿಂದ) ಮತ್ತೇನು ಕೆಲಸವಿಲ್ಲದ್ದಕ್ಕಾ ಆ ಮಾತ್ರೆ ಸಿದ್ಧಪಡಿಸಿದ್ದು?! ಬದುಕಿಯಾನೆಂಬ ಭರವಸೆ ನನಗಿದೆ. ಹಾಗೆ ಒಂದು ವೇಳೆ ಬದುಕದಿದ್ದರೂ ಏನೂ ತೊಂದರೆಯಿಲ್ಲ ಬಿಡು. ಇವನನ್ನೇ ನಂಬಿಕೊಂಡು ಯಾರಿದ್ದಾರೆ ಹೇಳು! ಮೊದಲೇ ಭಯಂಕರ ರೋಗವಿತ್ತು, ಔಷಧಿ ಕೊಟ್ಟರೂ ಬದುಕಲಿಲ್ಲ ಎಂದು ಊರವರ ಬಳಿ ಸುಳ್ಳು ಹೇಳಿದರಾಯಿತು.
ಪಿಳ್ಳಾರಿ ಗೋವಿಂದ– ಆದರೂ ಈಗ ಯಾರಾದರೂ ಬಂದರೆಂದಾದರೆ ತೊಂದರೆಯಾದೀತು ಗುರುಗಳೇ.
ವೆಂಕಟಾಚಾರ್ಯರು– ಏನೂ ತೊಂದರೆಯಿಲ್ಲ. ನಾವೇನೋ ಚಿಕಿತ್ಸೆ ನೀಡುತ್ತಿದ್ದೇವೆಂದು ತಿಳಿದುಕೊಳ್ಳುತ್ತಾರೆ ಅಷ್ಟೇ. ಅದರ ಚಿಂತೆ ನಿನಗ್ಯಾಕೆ? ಅದೆಲ್ಲಾ ನಾನು ನೋಡಿಕೊಳ್ಳುತ್ತೇನೆ. ನಾನು ಹೇಳಿದಷ್ಟನ್ನು ನೀನು ಮಾಡಿದರಾಯಿತು.
(ಗೊಂದಲದಿಂದಲೇ ತಲೆಯಲ್ಲಾಡಿಸಿದ ಪಿಳ್ಳಾರಿ ಗೋವಿಂದ ತಕ್ಷಣ ಮನೆಯೊಳಕ್ಕೆ ಹೋಗಿ ಕೆಲವು ಗುಳಿಗೆಗಳನ್ನೂ, ಒಂದು ಪಾತ್ರೆಯಲ್ಲಿ ಎಲೆಯ ರಸವನ್ನೂ ತಂದು ವೆಂಕಟಾಚಾರ್ಯರ ಎದುರು ಇಡುತ್ತಾನೆ)
ವೆಂಕಟಾಚಾರ್ಯರು– ಪಿಳ್ಳಾರಿ, ಅವನ ಎದೆಯ ಭಾಗಕ್ಕೆ ಈ ಎಲೆಯ ರಸವನ್ನು ಹಚ್ಚಬೇಕು. ಹಾಗೆ ಹಚ್ಚುವಾಗ ನಿನ್ನ ಬಲಗೈ ಮೂಲಕ ಸ್ವಲ್ಪ ಒತ್ತಡವನ್ನೂ ಹಾಕಬೇಕು, ತಿಳಿಯಿತೇ?
ಪಿಳ್ಳಾರಿ ಗೋವಿಂದ– ಆಯಿತು ಗುರುಗಳೇ.
(ವೆಂಕಟಾಚಾರ್ಯರು ಹೇಳಿದ ರೀತಿಯಲ್ಲಿಯೇ ಪಿಳ್ಳಾರಿ ಗೋವಿಂದ ಎಲೆಯ ರಸವನ್ನು ಹಚ್ಚುತ್ತಾನೆ. ವೆಂಕಟಾಚಾರ್ಯರು ಯಾರಾದರೂ ಬರುತ್ತಿದ್ದಾರೋ ಎನ್ನುವುದನ್ನು ಗಮನಿಸುತ್ತಿರುತ್ತಾರೆ)
ಪಿಳ್ಳಾರಿ ಗೋವಿಂದ– ಎಲೆಯ ರಸ ಹಚ್ಚಿ ಮುಗಿಸಿದ್ದೇನೆ ಗುರುಗಳೇ.
ವೆಂಕಟಾಚಾರ್ಯರು– ಸರಿ. ಈಗ ಆ ಗುಳಿಗೆಗಳಲ್ಲಿ ಒಂದನ್ನು ಅವನ ಬಾಯೊಳಗಿಟ್ಟು ನೀರನ್ನು ಸುರಿ.
(ಪಿಳ್ಳಾರಿ ಗೋವಿಂದ ಹಾಗೆಯೇ ಮಾಡುತ್ತಾನೆ)
ವೆಂಕಟಾಚಾರ್ಯರು– ಈಗ ಆತನ ಬಲ ಅಂಗೈಯ್ಯನ್ನು ಉಜ್ಜಿ, ಬಿಸಿಮಾಡುತ್ತಾ ಹೋಗು.
(ವೆಂಕಟಾಚಾರ್ಯರ ಮಾತನ್ನು ಪಿಳ್ಳಾರಿ ಗೋವಿಂದ ಅಂತೆಯೇ ಪಾಲಿಸುತ್ತಾನೆ)
ಪಿಳ್ಳಾರಿ ಗೋವಿಂದ– ಏನು ಗುರುಗಳೇ, ಇನ್ನೂ ಇವನು ಎದ್ದು ಕುಳಿತುಕೊಳ್ಳುತ್ತಿಲ್ಲವಲ್ಲ?
ವೆಂಕಟಾಚಾರ್ಯರು– ಲೋ, ಆತುರಗಾರನಿಗೆ ಬುದ್ಧಿಮಟ್ಟ. ಇಂತಹ ವಿಷಯಗಳಲ್ಲೇನಿದ್ದರೂ ಆತುರ ಒಳ್ಳೆಯದಲ್ಲವೇ ಅಲ್ಲ. ಆತನ ಕೈ ಉಜ್ಜುವುದನ್ನು ಮುಂದುವರೆಸು.
( ಪಿಳ್ಳಾರಿ ಗೋವಿಂದ ಗೋಪಾಲನ ಕೈಯ್ಯನ್ನು ಬಿಸಿ ಮಾಡುತ್ತಲೇ ಹೋಗುತ್ತಾನೆ. ಗೋಪಾಲನ ದೇಹ ಒಮ್ಮೆ ಅಲುಗಾಡುತ್ತದೆ)
ಪಿಳ್ಳಾರಿ ಗೋವಿಂದ– (ಉದ್ವೇಗದಿಂದ) ಗುರುಗಳೇ ನೋಡಿ, ನೋಡಿ. ಆತನ ದೇಹ ಅಲುಗಾಡತೊಡಗಿದೆ.
ವೆಂಕಟಾಚಾರ್ಯರು– ಆ ಗ್ರಂಥದಲ್ಲಿ ಬರೆದ ಲಕ್ಷಣಗಳೇ ಕಾಣಿಸಿಕೊಂಡಿದೆ ಎಂದ ಮೇಲೆ ಔಷಧ ಫಲಿಸತೊಡಗಿರುವುದಂತೂ ನಿಸ್ಸಂಶಯ.
(ಇದ್ದಕ್ಕಿದ್ದಂತೆಯೇ ಗೋಪಾಲ ಎದ್ದು ಕುಳಿತುಕೊಳ್ಳುತ್ತಾನೆ. ಪಿಳ್ಳಾರಿ ಗೋವಿಂದನಲ್ಲಿ ಅಪರಿಮಿತವಾದ ಆಶ್ಚರ್ಯ ಕಾಣಿಸಿಕೊಳ್ಳುತ್ತದೆ. ವೆಂಕಟಾಚಾರ್ಯರ ಮುಖ ನೂರ್‍ಮಿಂಚಿನ ಕಾಂತಿಯಲ್ಲಿ ಬೆಳಗತೊಡಗುತ್ತದೆ)
ಗೋಪಾಲ– (ವೆಂಕಟಾಚಾರ್ಯರನ್ನು ನೋಡುತ್ತಾ) ನನಗೇನಾಗಿತ್ತು ವೈದ್ಯರೇ? ನೀವು ಕೊಟ್ಟ ಗುಳಿಗೆ ಸೇವಿಸಿದ ಕೂಡಲೇ ತಲೆಯೆಲ್ಲಾ ತಿರುಗಿದಂತಾಯಿತು. ಎದೆಯಲ್ಲೇನೋ ಸಂಕಟ. ಬಾಯಿಬಿಟ್ಟು ಹೇಳೋಣವೆಂದರೆ ನಾಲಗೆಯೇ ಹೊರಳುತ್ತಿಲ್ಲ.
ವೆಂಕಟಾಚಾರ್ಯರು– ಕೆಲವೊಮ್ಮೆ ಹಾಗಾಗುವುದುಂಟು ಗೋಪಾಲ. ನಾನು ಕೊಟ್ಟ ಗುಳಿಗೆ ನಿನ್ನ ದೇಹಪ್ರಕೃತಿಗೆ ಒಗ್ಗಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿದಿದೆಯಷ್ಟೇ. ಈಗ ನಿನ್ನ ಆಯಾಸವೆಲ್ಲಾ ಕಡಿಮೆಯಾಗಿದೆ ತಾನೇ?
ಗೋಪಾಲ– ಹ್ಞಾ ವೈದ್ಯರೇ, ಕಡಿಮೆಯಾಗಿದೆ. ಹಣ ತೆಗೆದುಕೊಳ್ಳಿ.
(ಹಣ ನೀಡಲು ಮುಂದಾಗುತ್ತಾನೆ)
ವೆಂಕಟಾಚಾರ್ಯರು– ಬೇಡವೋ ಗೋಪಾಲ. ಈ ಲೋಕದ ಬಹುದೊಡ್ಡ ರೋಗವನ್ನು ಗೆದ್ದು ನೀನು ಎದ್ದು ಕುಳಿತೆಯಲ್ಲ, ನನಗದುವೇ ಸಂತೋಷ.
ಗೋಪಾಲ– ಏನು? ಬಹುದೊಡ್ಡ ರೋಗ ನನಗೆ ಬಂದಿತ್ತೇ? ಮತ್ತೆ ನೀವಾಗ ಹೇಳಲೇ ಇಲ್ಲ! ಯಾವ ರೋಗ ವೈದ್ಯರೇ ಅದು?
ವೆಂಕಟಾಚಾರ್ಯರು– ಅದೆಲ್ಲಾ ನಾನೀಗ ಹೇಳಿದರೆ ನಿನಗೆ ಅರ್ಥವಾಗಲಿಕ್ಕಿಲ್ಲ ಬಿಡು.
(ಗೋಪಾಲ ಗೊಂದಲದಿಂದಲೇ ಅಲ್ಲಿಂದ ತೆರಳುತ್ತಾನೆ. ಪಿಳ್ಳಾರಿ ಗೋವಿಂದನ ಮುಖದ ಆಶ್ಚರ್ಯ ಭಾವ ಇನ್ನೂ ಸ್ಥಿರವಾಗಿಯೇ ಇದೆ)
ಪಿಳ್ಳಾರಿ ಗೋವಿಂದ– ಏನು ಗುರುಗಳೇ ನಿಮ್ಮ ಕೈಚಳಕ! ನನಗೆ ನಂಬಲಾಗುತ್ತಿಲ್ಲ.
ವೆಂಕಟಾಚಾರ್ಯರು– ನಿನಗೆ ಮಾತ್ರವಲ್ಲವೋ ಪಿಳ್ಳಾರಿ, ನನಗೇ ಪೂರ್ತಿಯಾಗಿ ನಂಬಲಾಗುತ್ತಿಲ್ಲ! ಸಾವಿಲ್ಲದ ಪ್ರಪಂಚವೊಂದು ನನ್ನಿಂದಾಗಿ ನಿರ್ಮಾಣಗೊಳ್ಳುತ್ತದೆಂದಾದರೆ ಅದೇನು ಸುಲಭದಲ್ಲಿ ನಂಬತಕ್ಕ ವಿಷಯವೇನೋ ಪಿಳ್ಳಾರಿ?
ಪಿಳ್ಳಾರಿ ಗೋವಿಂದ– ಗುರುಗಳೇ, ಇನ್ನು ನಿಮ್ಮನ್ನು ಹಿಡಿದು ನಿಲ್ಲಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಸಂಪತ್ತು ನಿಮ್ಮೆದುರು ಕಾಲು ಮುರಿದುಕೊಂಡು ಬಿದ್ದಿರುತ್ತದೆ.
ವೆಂಕಟಾಚಾರ್ಯರು– ನನಗೆ ಹಣ ಸಂಪಾದಿಸುವ ಉದ್ದೇಶವಿಲ್ಲವೋ ಪಿಳ್ಳಾರಿ. ಹಾಗೇನಾದರೂ ನಾನು ಸಂಪಾದಿಸತೊಡಗಿದ್ದರೆ ಈ ಹೊತ್ತಿಗೆ ಕೋಟಿ ಸಂಪತ್ತಿನ ಒಡೆಯನಾಗಿರುತ್ತಿದ್ದೆ. ನನ್ನಿಂದ ಈ ಲೋಕಕ್ಕೇನಾದರೂ ಒಳ್ಳೆಯದಾಗಬೇಕೆಂಬ ಯೋಚನೆ ನನ್ನದು. ಇಪ್ಪತ್ತು ವರುಷಗಳ ಹಿಂದೆ ನನ್ನ ಹೆಂಡತಿಯನ್ನು ಕಳೆದುಕೊಂಡೆನಲ್ಲ, ಅಂದು ನನ್ನಲ್ಲಿ ಹುಟ್ಟಿಕೊಂಡ ಯೋಚನೆಯಿದು. ಇಪ್ಪತ್ತು ವರುಷಗಳಿಂದ ನನ್ನನ್ನು ಕಾಡುತ್ತಲೇ ಬಂದ ಯೋಚನೆಯಿದು. ಕೆಲವು ಕ್ಷಣಗಳ ಹಿಂದಿನವರೆಗೂ ಕಾಡುತ್ತಲೇ ಇದ್ದ ಯೋಚನೆಯಿದು. ಸಾವೇ ಸಾವನ್ನಪ್ಪುವಂತೆ ಮಾಡಿದ ಯೋಚನೆಯಿದು ಪಿಳ್ಳಾರಿ, ಸಾವೇ ಸಾವನ್ನಪ್ಪುವಂತೆ ಮಾಡಿದ ಯೋಚನೆ.
(ಹೇಳುತ್ತಾ, ಹೇಳುತ್ತಾ ವೆಂಕಟಾಚಾರ್ಯರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಅರೆಕ್ಷಣದ ಮೌನ ಅಲ್ಲಿ ನೆಲೆಸುತ್ತದೆ)
ಹ್ಞಾ ಪಿಳ್ಳಾರಿ, ಮಧ್ಯಾಹ್ನದ ಊಟ ಮುಗಿಸಿದ ತಕ್ಷಣ ಅರಮನೆಗೆ ಹೋಗಿ ರಾಜರನ್ನು ಕಂಡುಬರುತ್ತೇನೆ. ವಿಷಯವನ್ನು ಅವರಿಗೆ ತಿಳಿಸಬೇಕು. ಸಮಸ್ತ ಪ್ರಜೆಗಳೂ ಈ ಔಷಧವನ್ನು ಪಡೆಯುವಂತಾಗಬೇಕು, ಸಾವನ್ನು ಗೆಲ್ಲುವಂತಾಗಬೇಕು. ನಾನು ಈಗಲೇ ಸ್ನಾನ ಮುಗಿಸಿ ಬರುತ್ತೇನೆ. ನೀನು ಊಟಕ್ಕೆ ತಯಾರಿ ಮಾಡಿಡು. ತಿಳಿಯಿತೇ?
(ವೆಂಕಟಾಚಾರ್ಯರು ಸ್ನಾನಕ್ಕೆಂದು ತೆರಳುತ್ತಾರೆ. ಪಿಳ್ಳಾರಿ ಗೋವಿಂದ ಅವರು ತೆರಳುವುದನ್ನೇ ವೀಕ್ಷಿಸುತ್ತಾ ಕುಳಿತುಕೊಳ್ಳುತ್ತಾನೆ)
ಪಿಳ್ಳಾರಿ ಗೋವಿಂದ– ಲೋಕದ ಯೋಚನೆಯಂತೆ, ಅದಂತೆ, ಇದಂತೆ. ಇಂಥ ದಿವ್ಯೌಷಧ ಕೈಯ್ಯಲ್ಲಿರುವಾಗ ಅದನ್ನು ಬಳಸಿಕೊಂಡು ಜೇಬು ಭರ್ತಿ ಮಾಡಿಕೊಳ್ಳುವುದು ಬಿಟ್ಟು ಲೋಕಕಲ್ಯಾಣಕ್ಕೆ ಹೊರಟಿದ್ದಾರಲ್ಲ, ಇವರಿಗೆ ಬುದ್ಧಿ ಇದೆಯಾ? ಸ್ವ- ಕಲ್ಯಾಣಕ್ಕಾಗದ ಲೋಕಕಲ್ಯಾಣದಿಂದಾಗುವ ಪ್ರಯೋಜನವಾದರೂ ಏನು? ಇವರ ಸ್ಥಾನದಲ್ಲಿ ನಾನಿರಬೇಕಿತ್ತು, ಹೇಗೆಲ್ಲಾ ಹಣ ಮಾಡಿಕೊಳ್ಳಬಹುದೆಂದು ತೋರಿಸಿಕೊಡುತ್ತಿದ್ದೆ. ಅಲ್ಲ! ಇಷ್ಟೆಲ್ಲಾ ಲೋಕಕಲ್ಯಾಣ ಎಂದು ಮಾತಾಡುವವರು ಆ ಗೋಪಾಲನನ್ನು ಕೊಲ್ಲುವುದಕ್ಕೆ ಹೊರಟದ್ದ್ಯಾಕೋ? ಇವರು ಕೊಟ್ಟ ಔಷಧದಿಂದ ಅವನು ಬದುಕಿದ್ದು ಆಮೇಲಿನ ಮಾತು. ಏನಾದರೂ ಬದುಕಿರದಿದ್ದರೆ? ಔಷಧ ಕಂಡುಹಿಡಿಯುವ ಉತ್ಸಾಹದಲ್ಲಿ ವ್ಯಕ್ತಿಯೊಬ್ಬನ ಪ್ರಾಣವೂ ಲೆಕ್ಕಕ್ಕೇ ಬರಲಿಲ್ಲವಲ್ಲ ಇವರಿಗೆ! ಹ್ಞು, ದೊಡ್ಡ ಗುರಿಯೊಂದರ ಈಡೇರಿಕೆಗೆಂದು ಹೊರಟಾಗ ಸಣ್ಣ ಅನಾಹುತಗಳೆಲ್ಲಾ ಗಣನೆಯನ್ನೇ ಕಳೆದುಕೊಳ್ಳುವುದುಂಟು, ಆಲದಮರವೊಂದನ್ನು ನೆಲಕ್ಕುರುಳಿಸಿದಾಗ ಅದರ ಮೇಲಿದ್ದ ಹಕ್ಕಿಗೂಡುಗಳು ನಾಶವಾಗುವಂತೆ. ನಾನು ಆಲದಮರವನ್ನು ಉರುಳಿಸುವುದು ಯಾವಾಗಲೋ! (ಸ್ವಲ್ಪ ಹೊತ್ತು ಬಿಟ್ಟು) ನಾನು ಪ್ರಯತ್ನಿಸಿದೆನೆಂದಾದರೆ ಆಲದಮರವನ್ನುರುಳಿಸುವುದೇನೂ ಕಷ್ಟವಲ್ಲ. ಹೌದು! ಉರುಳಿಸಲೇಬೇಕು. ಉರುಳಿಸುತ್ತೇನೆ.
(ಪಿಳ್ಳಾರಿ ಗೋವಿಂದನ ಮುಖದಲ್ಲಿ ದೌರ್ಷ್ಟತೆಯ ನಗು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಸ್ವಲ್ಪ ಹೊತ್ತು ಕುಳಿತುಕೊಂಡಿರುತ್ತಾನೆ. ಬಳಿಕ ಎದ್ದು ಮನೆಯೊಳಕ್ಕೆ ಹೋಗುತ್ತಾನೆ)
ಮೇಳ ೨– ಹಾಲು ಹಾಳಾಗಲು ನಿಂಬೆಹನಿ ಸಾಕು
ಮನವ ಕೆಡಿಸಲು ಇನ್ನೇನು ಬೇಕು?
ಬರಿ ಕೊಳಕು ಸಾಕು
ಬರಿ ಕೊಳಕು ಸಾಕು
ಮೇಳ ೧– ಏನದು ಕೊಳಕು?
ಎಲ್ಲಿಹುದು ಕೊಳಕು?
ಮೇಳ ೨– ಎಳೆ ಮನಸ್ಸಿನಾ ಮೂಲೆಯಲಿ
ಬೆಳೆಯುತಿದೆ ಕೊಳಕು
ಕತ್ತಲಿನ ರಾಜ್ಯದಲಿ
ಮಾಯವಾಗಿದೆ ಬೆಳಕು
*******************************************************
ಅಂಕ– ೩
(ಸ್ನಾನಕ್ಕೆ ತೆರಳಿದ್ದ ವೆಂಕಟಾಚಾರ್ಯರು ಬರುವಷ್ಟರ ಹೊತ್ತಿಗೆ ಪಿಳ್ಳಾರಿ ಗೋವಿಂದ ಊಟಕ್ಕೆ ಸಿದ್ಧತೆಯನ್ನು ನಡೆಸಿಟ್ಟಿದ್ದಾನೆ)
ಪಿಳ್ಳಾರಿ ಗೋವಿಂದ– ಗುರುಗಳೇ, ಅಡುಗೆ ಸಿದ್ಧವಾಗಿದೆ. ಬನ್ನಿ, ಊಟಮಾಡಿ.
ವೆಂಕಟಾಚಾರ್ಯರು– ಬೇಡವೋ ಪಿಳ್ಳಾರಿ. ಊಟ ಸಿದ್ಧಮಾಡಿಡು ಎಂದು ಆಗ ನಾನು ನಿನ್ನಲ್ಲಿ ಹೇಳಿದ್ದು ಹೌದು. ಆದರೆ ಈಗ ಯಾಕೋ ಊಟ ಬೇಡವೆನಿಸುತ್ತಿದೆ. ಅರಸರಿಗೆ ವಿಷಯವನ್ನು ತಿಳಿಸಬೇಕೆಂಬ ಕಾತುರತೆ ಹಸಿವನ್ನೂ ಮೀರಿನಿಂತಿದೆ. ಅರಮನೆಗೆ ಹೋಗಿ ಬಂದ ಬಳಿಕವೇ ಊಟ ಮಾಡುತ್ತೇನೆ.
(ಹೀಗೆಂದವರೇ ವೆಂಕಟಾಚಾರ್ಯರು ಹೊರಡಲನುವಾಗುತ್ತಾರೆ)
ಪಿಳ್ಳಾರಿ ಗೋವಿಂದ– (ವೆಂಕಟಾಚಾರ್ಯರನ್ನು ತಡೆದು) ಅಯ್ಯೋ, ನಿಲ್ಲಿ ಗುರುಗಳೇ. ಈಗಲೇ ಊಟದ ಹೊತ್ತು ಸಮೀಪಿಸಿದೆ. ವಿಷಯ ತಿಳಿದ ಕೂಡಲೇ ಅರಸರು ನಿಮಗೆ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಂಡಾರು. ಅದನ್ನೆಲ್ಲಾ ಮುಗಿಸಿ ನೀವು ಮನೆ ತಲುಪುವಾಗ ಸಂಜೆ ಕಳೆದಿರುತ್ತದೆ. ಅದಕ್ಕೆ ಈಗಲೇ ಊಟ ಮುಗಿಸಿ ಹೊರಡಿ ಗುರುಗಳೇ.
ವೆಂಕಟಾಚಾರ್ಯರು– (ಮುಗುಳ್ನಗುತ್ತಾ) ಆಯಿತು, ನಿನ್ನಿಚ್ಛೆಯಂತೆಯೇ ಆಗಲಿ ಪಿಳ್ಳಾರಿ. ಊಟ ಬಡಿಸು.
(ಪಿಳ್ಳಾರಿ ಗೋವಿಂದ ಊಟವನ್ನು ಬಡಿಸುತ್ತಾನೆ. ವೆಂಕಟಾಚಾರ್ಯರು ಉಣ್ಣಲು ಪ್ರಾರಂಭಿಸುತ್ತಾರೆ)
ವೆಂಕಟಾಚಾರ್ಯರು– ನೀನೂ ಒಟ್ಟಿಗೆ ಊಟ ಮಾಡೋ.
ಪಿಳ್ಳಾರಿ ಗೋವಿಂದ– ಬೇಡ ಗುರುಗಳೇ. ನನ್ನ ಸರದಿಯೇನಿದ್ದರೂ ನಿಮ್ಮ ಸರದಿ ಮುಗಿದ ಮೇಲೆ!
ವೆಂಕಟಾಚಾರ್ಯರು– ನಿನ್ನ ಈ ನಿಷ್ಠತೆಯಲ್ಲೇ ನನ್ನ ಯಶಸ್ಸು ಅಡಗಿದೆ ಪಿಳ್ಳಾರಿ. ಔಷಧಿ ತಯಾರಿಯ ಹಿಂದೆ ನಿನ್ನ ಸಹಾಯವಿದೆ ಎಂದು ಅರಸರಿಗೆ ತಿಳಿಸಲು ನಾನು ಮರೆಯುವುದಿಲ್ಲ. ತಿಳಿಯಿತೇ?
ಪಿಳ್ಳಾರಿ ಗೋವಿಂದ– ಹ್ಞಾ ಗುರುಗಳೇ, ಆಗಲೇ ನಿಮ್ಮಲ್ಲಿ ಕೇಳಬೇಕೆಂದುಕೊಂಡಿದ್ದೆ. ಈ ಮಾತ್ರೆ ಸತ್ತಮೇಲೆ ಉಪಯೋಗಕ್ಕೆ ಬರುತ್ತದೆ ಎಂದಮೇಲೆ ಬದುಕಿರುವಾಗಲೇ ಇದನ್ನು ಸೇವಿಸಿದವರು ಸಾಯುವ ಪ್ರಶ್ನೆಯೇ ಇರುವುದಿಲ್ಲವಲ್ಲ?
ವೆಂಕಟಾಚಾರ್ಯರು– ಹೌದು ಪಿಳ್ಳಾರಿ. ನಿನ್ನೆ ನಾನು ಓದುತ್ತಿದ್ದೆನಲ್ಲ ಗ್ರಂಥ, ಅದರಲ್ಲಿಯೂ ಹೀಗೇ ಬರೆದಿತ್ತು. ಈ ಮಾತ್ರೆಯು ಸಕಲ ವ್ಯಾಧಿಗಳಿಂದಲೂ, ವಿಷಪ್ರಾಶನದಿಂದಲೂ ದೇಹವನ್ನು ಮುಕ್ತಗೊಳಿಸುತ್ತದೆ ಎಂಬ ಉಲ್ಲೇಖವಿದೆ ಆ ಗ್ರಂಥದಲ್ಲಿ. ಅಂದಮೇಲೆ ಈ ಮಾತ್ರೆಯನ್ನು ಮೊದಲೇ ಸೇವಿಸಿದರೆ ಸಾವು ಬರುವುದು ಸಾಧ್ಯವೇ ಇಲ್ಲ.
(ಕೊನೆಯ ವಾಕ್ಯವನ್ನು ಹೇಳುತ್ತಿದ್ದಂತೆಯೇ ವೆಂಕಟಾಚಾರ್ಯರ ಬಾಯಿ ತೊದಲಲು ಆರಂಭಗೊಳ್ಳುತ್ತದೆ. ಎದೆಯನ್ನು ಹಿಡಿದುಕೊಂಡ ವೆಂಕಟಾಚಾರ್ಯರು ನೆಲದ ಮೇಲೆ ಉರುಳಿ ಒದ್ದಾಡಲಾರಂಭಿಸುತ್ತಾರೆ)
ವೆಂಕಟಾಚಾರ್ಯರು– (ಪಿಳ್ಳಾರಿ ಗೋವಿಂದನತ್ತ ಕೈ ಚಾಚಿ, ತೊದಲುತ್ತಲೇ) ಲೋ ಪಿಳ್ಳಾರಿ, ಯಾಕೋ ಸಂಕಟವೆನಿಸುತ್ತಿದೆ. ನಾನಿನ್ನು ಬದುಕಿರಲಾರೆನೆಂಬ ಭಾವನೆ ಉಂಟಾಗುತ್ತಿದೆ. ನನಗೇನಾದರೂ ಆಯಿತೆಂದಾದರೆ ತಕ್ಷಣವೇ ಆ ಔಷಧಿಯನ್ನು ನೀಡಿ ನನ್ನನ್ನು ಬದುಕಿಸಬೇಕು. ಬಹುಶಃ ಹಲ್ಲಿಯೋ, ಓತಿಕ್ಯಾತನೋ ಅಡುಗೆಗೆ ಬಿದ್ದಿರಬೇಕು. ನೀನು ಗಮನಿಸಿಲ್ಲವಷ್ಟೇ.
ಪಿಳ್ಳಾರಿ ಗೋವಿಂದ– (ಎದ್ದುನಿಂತು, ಕುಹಕದ ನಗೆ ನಗುತ್ತಾ) ನಾನು ಗಮನಿಸದೇ ಆದದ್ದಲ್ಲ ಗುರುಗಳೇ. ನಾನೇ ವಿಷವನ್ನು ಹಾಕಿದ್ದು.
(ವೆಂಕಟಾಚಾರ್ಯರು ಗೊಂದಲದಿಂದ ಪಿಳ್ಳಾರಿ ಗೋವಿಂದನನ್ನೇ ನೋಡಲಾರಂಭಿಸುತ್ತಾರೆ. ಪಿಳ್ಳಾರಿ ಗೋವಿಂದ ಮಾತು ಮುಂದುವರಿಸುತ್ತಾನೆ)
ನಿಮ್ಮಂತಹ ಮುಟ್ಠಾಳರು ಈ ಔಷಧಿಯ ಒಡೆಯರಾಗುವುದಕ್ಕೆ ಅರ್ಹರೇ ಅಲ್ಲ. ಇಂತಹ ಅಮೂಲ್ಯ ಔಷಧವೇನಿದ್ದರೂ ಯೋಗ್ಯರ ಕೈಯ್ಯಲ್ಲಿರಬೇಕು, ಅರ್ಥಾತ್ ನನ್ನ ಕೈಯ್ಯಲ್ಲಿರಬೇಕು. ನೀವಿರುವವರೆಗೂ ಅದು ನನ್ನ ಪಾಲಾಗುವುದು ಸಾಧ್ಯವೇ ಇಲ್ಲ. ಈಗಲಾದರೂ ಸಾಧ್ಯ ಮಾಡಿಕೊಳ್ಳುತ್ತೇನೆ.
(ಅಸಹಾಯಕತೆ ವೆಂಕಟಾಚಾರ್ಯರ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ವೆಂಕಟಾಚಾರ್ಯರ ಕಡೆಗೆ ತಿರಸ್ಕಾರದ ದೃಷ್ಟಿಯನ್ನು ಬೀರುತ್ತಾ ಪಿಳ್ಳಾರಿ ಗೋವಿಂದ ಮಾತು ಮುಂದುವರಿಸುತ್ತಾನೆ)
ಇಷ್ಟು ವರ್ಷ ನಿಮ್ಮ ಸಹಾಯಕನಾಗಿ ದುಡಿದೆನಲ್ಲ, ಸ್ವಲ್ಪವಾದರೂ ಕೀರ್ತಿ, ಸಂಪತ್ತು ನನ್ನ ಪಾಲಿಗೆ ಸಂದದ್ದಿದೆಯೇ? ಕೂತದ್ದು ನಿಂತದ್ದಕ್ಕೆಲ್ಲ ಮುಟ್ಠಾಳ, ದಡ್ಡ ಎಂಬ ಬೈಗಳು ಮಾತ್ರ. ಅಲ್ಲಾ, ನನ್ನನ್ನು ದಡ್ಡ ಎಂದು ಹೇಳಿ ಹೇಳಿ, ನೀವೆಂತಹ ಮೂರ್ಖರಾದಿರಿ ಎಂದು ಯೋಚಿಸಿದರೆ ನಿಜಕ್ಕೂ ನಗು ಬರುತ್ತದೆ. ಈ ಮಾತ್ರೆಯನ್ನು ಮೊದಲು ನೀವು ಸೇವಿಸುವುದು ಬಿಟ್ಟು ಅರಸರಿಗೆ ಈ ವಿಷಯ ತಿಳಿಸಹೊರಟಿದ್ದೀರಲ್ಲಾ, ನಿಮಗೆ ನಿಜಕ್ಕೂ ಬುದ್ಧಿ ಇದೆಯಾ? ಮಾತ್ರೆ ಮೊದಲೇ ತಿಂದಿದ್ದರೆ ನಾನಿತ್ತ ವಿಷಾನ್ನವೂ ನಿಮ್ಮ ದೇಹವನ್ನು ಬಾಧಿಸುತ್ತಿರಲಿಲ್ಲ. ಇನ್ನು ಸಾಯದೆ ನಿಮಗೆ ವಿಧಿಯಿಲ್ಲ. ನಿಮ್ಮ ಸರದಿ ಮುಗಿದಿದೆ. ಇನ್ನೇನಿದ್ದರೂ ನನ್ನ ಸರದಿ.
(ವೆಂಕಟಾಚಾರ್ಯರು ಕಷ್ಟಪಟ್ಟು ಎದ್ದುನಿಂತು, ಮಾತ್ರೆಯನ್ನು ತಾವೇ ತೆಗೆದುಕೊಳ್ಳಲು ಮುಂದಾಗುತ್ತಾರೆ. ಪಿಳ್ಳಾರಿ ಗೋವಿಂದ ಅವರನ್ನು ತಡೆದು ಹಿಂದಕ್ಕೆ ತಳ್ಳುತ್ತಾನೆ. ನೆಲದ ಮೇಲೆ ಬಿದ್ದ ವೆಂಕಟಾಚಾರ್ಯರಲ್ಲಿ ಸಂಕಟ ತೀವ್ರಗೊಳ್ಳುತ್ತದೆ. ಕಾಲುಗಳನ್ನು ಜೋರಾಗಿ ಬಡಿದುಕೊಳ್ಳಲಾರಂಭಿಸುತ್ತಾರೆ. ಪ್ರಾಣಪಕ್ಷಿ ಹಾರಿಹೋಗುತ್ತದೆ)
ಮೇಳ ೧– ಒದ್ದಾಡುತಿಹುದು ಅಲ್ಲೊಂದು ಜೀವ
ಸಾವಿಗೇ ಸಾವಿತ್ತವನು ಕಾಣುತಿಹನು ಸಾವ
ಮತ್ತೊಬ್ಬನ ಮನಸ್ಸಿನಲಿ ಸಂತಸದ ಭಾವ
ಮೇಳ ೨– ಕಾಡುತಲಿದೆ ನೋವು
ನುಗ್ಗಿಬರುತಿದೆ ಸಾವು
ಸಾವು- ನೋವಿನ ನಡುವೆ
ಇನ್ನಾರಿಗೋ ಗೆಲುವು
ಇನ್ನಾರದೋ ನಲಿವು
ಮೇಳ ೧– ಅಲ್ಲ್ಯಾರದೋ ಸಾವು
ಇಲ್ಲ್ಯಾರದೋ ನಲಿವು|| ೨ ||
ಪಿಳ್ಳಾರಿ ಗೋವಿಂದ– (ವಿಕೃತವಾಗಿ ನಗುತ್ತಾ) ಆಲದಮರವನ್ನು ಉರುಳಿಸಿದ್ದೇನೆ. ಉರುಳಿಬಿದ್ದ ಆಲದಮರದ ಫಲಾಫಲವನ್ನು ಇನ್ನುಮುಂದೆ ಅನುಭವಿಸುವವನು ನಾನೇ. ಹಹ್ಹಹ್ಹ! ಹಹ್ಹಹ್ಹ…. ಈಗಿಂದೀಗಲೇ ಅರಸರಲ್ಲಿಗೆ ಹೋಗಿ ಔಷಧವನ್ನು ನಾನೇ ಕಂಡುಹಿಡಿದವನೆಂದು ತಿಳಿಸಿ ಬರಬೇಕು. (ಒಂದುಕ್ಷಣ ಯೋಚಿಸಿ) ಅಲ್ಲಾ, ಈಗಲೇ ತಿಳಿಸಿದೆನೆಂದಾದರೆ ಗುರುಗಳ ಸಾವಿನ ಕುರಿತು ಸಂಶಯ ಉದ್ಭವಗೊಳ್ಳುತ್ತದೆ. ಈ ಔಷಧಿಯನ್ನು ನೀಡಿ ಗುರುಗಳನ್ನೇಕೆ ನಾನು ಬದುಕಿಸಿಕೊಳ್ಳಲಿಲ್ಲವೆಂಬ ಪ್ರಶ್ನೆಯನ್ನೂ ನಾನು ಎದುರಿಸಬೇಕಾದೀತು. ಬೇಡ. ಈಗಲೇ ತಿಳಿಸುವುದು ಬೇಡ. ಏನಿದ್ದರೂ ಇನ್ನೊಂದು ತಿಂಗಳು ಕಾಯುತ್ತೇನೆ. (ವೆಂಕಟಾಚಾರ್ಯರ ಹೆಣದ ಕಡೆಗೆ ನೋಡುತ್ತಾ) ಅದಕ್ಕೂ ಮೊದಲು ಈ ಹೆಣವನ್ನು ಸುಟ್ಟುಹಾಕಬೇಕು. ಇಲ್ಲೇ ಹಿತ್ತಲಲ್ಲಿ ಸುಟ್ಟರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಈಗಲೇ ಸುಡುತ್ತೇನೆ.
(ಪಿಳ್ಳಾರಿ ಗೋವಿಂದ ವೆಂಕಟಾಚಾರ್ಯರ ಹೆಣವನ್ನು ಎಳೆದುಕೊಂಡು ಮನೆಹಿತ್ತಲಿಗೆ ಹೋಗುತ್ತಾನೆ)
*******************************************************
ಅಂಕ– ೪
(ಕಾಡಿನೆದುರಿನಲ್ಲೊಂದು ಗುಹೆ. ಆ ಗುಹೆಯ ಎದುರಿನಲ್ಲೊಬ್ಬ ದಷ್ಟಪುಷ್ಟ ಶರೀರದ ವ್ಯಕ್ತಿಯೊಬ್ಬ ಅತ್ತಿಂದಿತ್ತ ಚಲಿಸುತ್ತಿದ್ದಾನೆ. ನೆಲದತ್ತ ದೃಷ್ಟಿನೆಟ್ಟು ಅತ್ತಿತ್ತ ಚಲಿಸುತ್ತಿರುವ ಆತನ ಮುಖದಲ್ಲಿ ಅನೇಕ ಯೋಚನೆಗಳು ಸುಳಿದಾಡುತ್ತಿವೆ. ಅದೇ ಸಮಯಕ್ಕೆ ಆತನ ಜೊತೆಗಾರ ಅಲ್ಲಿಗೆ ಬರುತ್ತಾನೆ)
ಶರಣ– ಲೋ ಇದೇನೋ ಇಷ್ಟು ತಡವಾಗಿ ಬಂದಿದ್ದೀಯಾ? ಎಷ್ಟು ಹೊತ್ತಿನಿಂದ ನಿನಗಾಗಿ ಕಾಯುತ್ತಿದ್ದೇನೆ ಗೊತ್ತಾ?
ಅರುಣ– ಓಹೋ! ಹಾಗಾದರೆ ಕನ್ನ ಹಾಕುವುದಕ್ಕೆ ದೊಡ್ಡದಾದ ಮನೆಯೇ ಸಿಕ್ಕಿದೆ ಎಂದಾಯಿತು.
ಶರಣ– ಅದನ್ನು ಹೇಳುವುದಕ್ಕೇ ನಾನು ಆಗಲಿಂದ ಕಾದುಕುಳಿತಿರುವುದು. ಊರಿನ ದೊಡ್ಡ ಮನೆಯಿದೆಯಲ್ಲ, ಆ ಮನೆಯವರು ಸೂರ್ಯಾಸ್ತಮಾನದ ವೇಳೆಗೆ ಮದುವೆಗೆಂದು ತಮ್ಮ ನೆಂಟರ ಮನೆಗೆ ಹೊರಡುತ್ತಾರೆ. ಇಷ್ಟು ಹೊತ್ತು ಅವರ ಮನೆಯ ಹಿಂಬದಿಯಲ್ಲಿ ಕುಳಿತು ಎಲ್ಲವನ್ನೂ ಕೇಳಿಸಿಕೊಂಡು ಬಂದೆ. ಆದ್ದರಿಂದಲೇ ಇಷ್ಟು ತಡವಾದದ್ದು ಬರಲಿಕ್ಕೆ.
ಅರುಣ– ಓಹೋ! ವಿಷಯ ಇಷ್ಟೇ. ಇದನ್ನು ಹೇಳುವುದಕ್ಕೆ ಅಷ್ಟೊಂದು ಆತುರ! ಹ್ಞೂ , ನಿನ್ನದೇನಿದ್ದರೂ ಅಡಿಕೆ ಕದ್ದುವ ಯೋಚನೆ ಮಾತ್ರ.
ಶರಣ– (ವ್ಯಂಗದಿಂದ) ಮತ್ತೆ ನೀನೇನು ಆನೆ ಕದ್ದುವವನಾ?
ಅರುಣ– ಅದೇ ಮನೋಭಾವ ನನ್ನಲ್ಲೀಗ ಹುಟ್ಟಿಕೊಂಡಿದೆ. ಇಷ್ಟು ದಿನ ನಾನೂ ನಿನ್ನ ಹಾಗೆ ಅಡಿಕೆ ಕದ್ದುವ ಯೋಚನೆಯಲ್ಲಿದ್ದವನಷ್ಟೇ. ಆದರೆ ಇಂದಿನ ಘಟನೆ ಕಂಡ ಬಳಿಕ ನನ್ನ ಮನಸ್ಸು ಎತ್ತರದ ಪರ್ವತವನ್ನೇರಿ ಕುಳಿತಂತೆ ಭಾಸವಾಗುತ್ತಿದೆ.
ಶರಣ– ಏನಪ್ಪಾ ಅದು ಅಂಥ ಘಟನೆ?
ಅರುಣ– ಇಂದು ಬೆಳಿಗ್ಗೆ ನಾವಿಬ್ಬರೂ ಯಾವತ್ತಿನ ಹಾಗೆ ಪ್ರತ್ಯೇಕ- ಪ್ರತ್ಯೇಕವಾಗಿ ಹೊರಟೆವಲ್ಲ, ನಾನು ಹೋದದ್ದು ಊರಿನ ಮೂಲೆಯಲ್ಲಿರುವ ವೈದ್ಯ ಕುಟೀರಕ್ಕೆ.ಮನೆ ಸಮೀಪದ ಪೊದೆಯ ಹಿಂದುಗಡೆ ಅಡಗಿ ಕುಳಿತಿದ್ದೆ.
ಶರಣ– ಅಲ್ಲವೋ, ವೈದ್ಯರು ಇನ್ನಿಲ್ಲವಾಗಿ ಐದು ದಿನ ಕಳೆಯುತ್ತಾ ಬಂದಿದೆ. ಅವರೇ ಇಲ್ಲದ ಮೇಲೆ ಆ ಪಿಳ್ಳಾರಿ ಗೋವಿಂದನೂ ಅಲ್ಲಿರಲಾರ. ಊರುಬಿಟ್ಟು ಹೋಗಿರುತ್ತಾನೆ. ಒಂದೇ ಸಲಕ್ಕೆ ಮನೆಯೊಳಕ್ಕೆ ನುಗ್ಗಿ, ಇದ್ದದ್ದನ್ನೆಲ್ಲಾ ದೋಚಿಕೊಂಡು ಬರುವುದು ಬಿಟ್ಟು…
ಅರುಣ– ನನ್ನ ಯೋಚನೆಯೂ ಅದೇ ಆಗಿತ್ತು. ಆದರೆ ಆ ರೀತಿಯೇನಾದರೂ ನಾನು ಮಾಡಿದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಸೆರೆಮನೆ ಸೇರಿಯಾಗುತ್ತಿತ್ತು. ಪಿಳ್ಳಾರಿ ಗೋವಿಂದನಿನ್ನೂ ಆ ಮನೆಯಲ್ಲೇ ಇದ್ದಾನೆ.
ಶರಣ– ಅಲ್ಲಾ, ವೈದ್ಯರೇ ಇಲ್ಲವೆಂದಮೇಲೆ ಆತನಾದರೂ ಏಕಿರುತ್ತಾನೆ ಆ ಮನೆಯಲ್ಲಿ?
ಅರುಣ-ಚಿನ್ನದ ಭಂಡಾರವನ್ನೇ ಸಂಪಾದಿಸುವ ಯೋಚನೆ ಆತನದ್ದು.
ಶರಣ– ಏನು? ಚಿನ್ನದ ಭಂಡಾರವೇ?
ಅರುಣ– ಹೌದು. ನಾನು ಪೊದೆಯ ಹಿಂದೆ ಅವಿತು ಕುಳಿತಿದ್ದೆನಲ್ಲ, ಎಷ್ಟು ಹೊತ್ತಾದರೂ ಮನೆಯೊಳಗಿನಿಂದ ಒಂದು ಶಬ್ದವೂ ಕೇಳಿಸಲಿಲ್ಲ. ಮನೆಯೊಳಗೆ ಯಾರೂ ಇಲ್ಲವೆಂದೇ ಭಾವಿಸಿದ ನಾನು ಕಿಟಕಿಯ ಬಳಿ ನಿಂತು ಮನೆಯೊಳಗನ್ನು ನೋಡಿದೆ. ಪಿಳ್ಳಾರಿ ಗೋವಿಂದ ಅವನಷ್ಟಕ್ಕೆ ಒಬ್ಬನೇ ಮಾತನಾಡುತ್ತಾ ಕುಳಿತಿದ್ದಾನೆ.
ಶರಣ– ಹಹ್ಹಹ್ಹ! ವೈದ್ಯರು ಸತ್ತಮೇಲೆ ಅವನಿಗೇನಾದರೂ ಭ್ರಾಂತಿ ಹಿಡಿದಿದೆಯೋ ಹೇಗೆ?
ಅರುಣ– ನಾನೂ ಆರಂಭದಲ್ಲಿ ಹಾಗೆಯೇ ಅಂದುಕೊಂಡದ್ದು. ವಿಷಯ ಏನೆಂದು ತಿಳಿದದ್ದು ಆಮೇಲೆಯೇ.
ಶರಣ– ಏನದು ವಿಷಯ?
ಅರುಣ– ನೋಡು ಶರಣ, ನಾನಾಡುವ ಮಾತನ್ನು ಸರಿಯಾಗಿ ಕೇಳಿಕೊ. ಪಿಳ್ಳಾರಿ ಗೋವಿಂದನ ಹತ್ತಿರ ದಿವ್ಯೌಷಧವೊಂದಿದೆ. ಆ ದಿವ್ಯೌಷಧದ ಶಕ್ತಿ ಏನೆಂದು ತಿಳಿದರೆ ನೀನು ಅಚ್ಚರಿಪಡುವುದಂತೂ ಸತ್ಯ. ಸಾವನ್ನು ತಡೆಗಟ್ಟುವ ಶಕ್ತಿ ಆ ದಿವ್ಯೌಷಧಕ್ಕಿದೆ.
ಶರಣ– (ಜೋರಾಗಿ ನಗುತ್ತಾ) ಹಹ್ಹಹ್ಹ, ಇದೊಳ್ಳೆಯ ತಮಾಷೆಯ ವಿಷಯವಾಯಿತು ಬಿಡು. ಭ್ರಾಂತಿ ಹಿಡಿದದ್ದು ಆ ಗೋವಿಂದನಿಗೋ? ಅಲ್ಲ ನಿನಗೋ? ನನಗಂತೂ ತಿಳಿಯುತ್ತಿಲ್ಲ ಹಹ್ಹಹ್ಹಹ್ಹ….ನಿನ್ನ ತಲೆಗೇನಾದರೂ ಏಟು ಬಿದ್ದಿದೆಯೋ ನೋಡುತ್ತೇನೆ ಇರು.
(ಶರಣ ತಮಾಷೆಗಾಗಿ ಅರುಣನ ತಲೆಯನ್ನು ಪರೀಕ್ಷಿಸಲು ಮುಂದಾಗುತ್ತಾನೆ)
ಅರುಣ– (ಶರಣನನ್ನು ತಡೆದು) ನಿನ್ನ ತಮಾಷೆ ಸಾಕುಮಾಡು ಶರಣ.
ಶರಣ– ಹಹ್ಹಹ್ಹ, ತಮಾಷೆ ಮಾಡುತ್ತಿರುವುದು ನಾನೋ? ನೀನೋ?
ಅರುಣ– (ಗಂಭೀರನಾಗಿ) ಶರಣ, ನಾನು ತಮಾಷೆಯೂ ಮಾಡುತ್ತಿಲ್ಲ, ನನಗೆ ಭ್ರಾಂತಿಯೂ ಹಿಡಿದಿಲ್ಲ. ಆ ಪಿಳ್ಳಾರಿ ಗೋವಿಂದ ಕೋಣೆಯಲ್ಲಿ ಕುಳಿತು ಈ ವಿಚಾರವಾಗಿ ಒಬ್ಬನೇ ಮಾತನಾಡಿಕೊಳ್ಳುತ್ತಿರುವುದನ್ನು ನಾನು ಕೇಳಿಸಿಕೊಂಡಿದ್ದೇನೆ, ನೋಡಿದ್ದೇನೆ. ಆ ಔಷಧವನ್ನು ಸ್ವಂತ ಮಾಡಿಕೊಳ್ಳುವುದಕ್ಕಾಗಿ ವೈದ್ಯರನ್ನು ಕೊಂದದ್ದೂ ಅವನೇ.
(ಶರಣನ ಮುಖದಲ್ಲಿ ನಗು ಕಡಿಮೆಯಾಗುತ್ತದೆ. ಅದರ ಬದಲಿಗೆ ಕುತೂಹಲದ ಭಾವ ಮೂಡಲಾರಂಭಿಸುತ್ತದೆ)
ಶರಣ– ಅರುಣ, ನೀನು ಹೇಳುತ್ತಿರುವುದು ನಿಜವೇನೋ?
ಅರುಣ– ಸುಳ್ಳು ಹೇಳಿ ನನಗೆ ಆಗಬೇಕಾದ್ದಾದರೂ ಏನಿದೆ? ನನ್ನ ಮೇಲೆ ನಂಬಿಕೆಯಿದೆಯಾದರೆ ನನ್ನ ಮಾತನ್ನು ನಂಬು.
ಶರಣ– ಸರಿ, ನಂಬುತ್ತೇನೆ. ಆಗ ಅದೇನೋ ಆನೆ ಕದ್ದುವುದು ಎಂದೆಲ್ಲಾ ಹೇಳುತ್ತಿದ್ದೆಯಲ್ಲ, ಏನದು?
ಅರುಣ– ನಾವು ಇಷ್ಟು ವರ್ಷ ಅದೆಷ್ಟೋ ಚಿನ್ನಾಭರಣಗಳನ್ನು ದೋಚಿದ್ದೇವೆ, ಮಾರಿದ್ದೇವೆ. ಆದರೂ ನಮ್ಮ ಪಾಲಿಗೆ ಉಳಿದದ್ದು ಪುಡಿಗಾಸು ಮಾತ್ರ. ಚಿನ್ನವನ್ನು ಕದ್ದು ತರುವುದು, ಸೆತ್ತಿಯ ಬಳಿಗೆ ತೆಗೆದುಕೊಂಡು ಹೋಗುವುದು, ’ಇದು ಕದ್ದ ಚಿನ್ನಾಭರಣ’ ಎಂದು ಹೇಳಿ ಆತ ಅಷ್ಟೋ ಇಷ್ಟೋ ಹಣ ಕೊಡುವುದು, ಹೆಚ್ಚು ಹಣವೇನಾದರೂ ಕೇಳಿದರೆ ಅರಸರಿಗೆ ತಿಳಿಸುವುದಾಗಿ ಆತ ಹೆದರಿಸುವುದು, ನಾವು ಬಾಯಿ ಮುಚ್ಚಿಕೊಂಡು ವಾಪಸ್ಸಾಗುವುದು- ಇದೇ ತಾನೆ ಇಷ್ಟರವರೆಗೆ ನಡೆದುಕೊಂಡು ಬಂದದ್ದು. ನಾವು ಒಬ್ಬರನ್ನು ದೋಚಿದರೆ ನಮ್ಮನ್ನು ದೋಚುವವನು ಮತ್ತೊಬ್ಬ!
ಶರಣ– ಲೋಕದ ನಿಯಮವೇ ಹಾಗೆ. ಹುಲ್ಲು, ಮಿಡತೆ, ಕಪ್ಪೆ, ಹಾವು, ಹದ್ದು, ಮನುಷ್ಯ- ಹೀಗೆ ಇಡೀ ಲೋಕವೇ ಸರಪಣಿಯೊಂದರಲ್ಲಿ ಬಂಧಿತವಾಗಿದೆ. ಈ ಸರಪಣಿಯೊಳಗಡೆ ತಾನೇ ಅಂತಿಮ, ತನ್ನನ್ನು ಹಿಡಿಯುವವರ್‍ಯಾರೂ ಇಲ್ಲ ಎಂದೇ ಮನುಷ್ಯ ಭಾವಿಸಿರುತ್ತಾನೆ. ಆದರೆ ಮನುಷ್ಯನೂ ಕೂಡ ಬೇರೊಬ್ಬರು ಬೀಸಿದ ಬಲೆಯೊಳಗೆ ಕೊಸರಾಡಿಕೊಂಡಿರುತ್ತಾನೆ, ತನಗೇ ಗೊತ್ತಿಲ್ಲದಂತೆ. ಬಲೆಯಿಂದ ಹೊರಬಂದೆ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಬಲೆ ಅವನನ್ನು ಆಕ್ರಮಿಸಿಯಾಗಿರುತ್ತದೆ.
ಅರುಣ– ಇಷ್ಟು ವರ್ಷದ ನಮ್ಮ ಬದುಕೂ ಹಾಗೇ ತಾನೇ? ಬಾಹ್ಯ ದೃಷ್ಟಿಗೆ ನಾವಿಬ್ಬರು ಕಳ್ಳರು. ಯಾರ್‍ಯಾರ ಅಂತರಂಗದಲ್ಲಿ ಅದೆಷ್ಟು ಕಳ್ಳರಿದ್ದಾರೋ, ಯಾರಿಗೆ ಗೊತ್ತು?!
ಶರಣ– ಸರಿ. ಆ ವಿಷಯ ಬಿಡು. ಆ ದಿವ್ಯೌಷಧದ ಬಗೆಗೆ ಏನೋ ಹೇಳುತ್ತಿದ್ದೆಯಲ್ಲ, ಅದನ್ನು ಮುಂದುವರಿಸು.
ಅರುಣ– ಏನಿಲ್ಲ, ಆ ದಿವ್ಯೌಷಧವನ್ನು ನಮ್ಮದಾಗಿಸಿಕೊಳ್ಳಬೇಕು. ಅದು ಸಾಧ್ಯವಾಯಿತೆಂದಾದರೆ ಸಂಪತ್ತು ನಮ್ಮ ಕೈವಶವಾಗುವುದರಲ್ಲಿ ಎರಡು ಮಾತಿಲ್ಲ.
ಶರಣ– ಆದರೆ ಕೈವಶ ಮಾಡಿಕೊಳ್ಳುವುದು ಹೇಗೆ?
ಅರುಣ– ಕೊಂದು!
ಶರಣ– ಅಂದರೆ?
ಅರುಣ– ಹೌದು. ಪಿಳ್ಳಾರಿ ಗೋವಿಂದನನ್ನು ಕೊಲ್ಲಬೇಕು. ಆಗ ಮಾತ್ರ ಆ ದಿವ್ಯೌಷಧ ನಮ್ಮದಾಗುತ್ತದೆ.
ಶರಣ– ಕೊಲ್ಲಲೇಬೇಕಾದ ಅಗತ್ಯ ಏನಿದೆ? ಔಷಧವನ್ನು ಕದ್ದುಕೊಂಡು ಬಂದರಾಗದೇ?
ಅರುಣ– ಕೇವಲ ಕದ್ದರೆ ಸಾಲದು. ಅವನು ದೂರು ಕೊಟ್ಟನೆಂದಾದರೆ ನಾವು ಸಿಕ್ಕಿಬೀಳುತ್ತೇವೆ. ನಾವು ಕಳ್ಳರೆಂಬ ಅನುಮಾನ ಈಗಾಗಲೇ ಊರವರಿಗಿದೆ. ಆದ್ದರಿಂದ ಯಾರಿಗೂ ಗೊತ್ತಾಗದ ರೀತಿಯಲ್ಲಿ ಆ ಗೋವಿಂದನನ್ನು ಕೊಂದು, ಆ ಔಷಧಿ ಪಡೆದುಕೊಳ್ಳಬೇಕು.
ಶರಣ– ಅದೆಲ್ಲಾ ಸರಿ. ಆದರೆ ಸಾವನ್ನೇ ಗೆಲ್ಲುವ ಔಷಧ ಆತನಲ್ಲಿದೆಯಲ್ಲ? ಆತನನ್ನು ಕೊಲ್ಲುವುದಾದರೂ ಹೇಗೆ?
ಅರುಣ– ಆ ಔಷಧಿ ಸಾವನ್ನು ತಡೆಗಟ್ಟುತ್ತದೆ ನಿಜ. ಅದರರ್ಥ, ತಲೆಮೇಲೆ ಕಲ್ಲು ಎತ್ತಿಹಾಕಿದರೂ ಬದುಕುತ್ತಾರೆಂದಲ್ಲ. ವಿಷದಿಂದ, ರೋಗದಿಂದ ದೇಹವನ್ನು ರಕ್ಷಿಸುವ ಶಕ್ತಿ ಆ ಔಷಧಿಗಿದೆಯಷ್ಟೆ. ಅಲ್ಲದೆ, ಸತ್ತ ದೇಹ ಕೊಳೆಯದೇ, ಜಜ್ಜಿಹೋಗದೇ ಸುಸ್ಥಿತಿಯಲ್ಲಿದ್ದಾಗ ಮಾತ್ರ ಆತನಿಗೆ ಮರುಜೀವ ನೀಡುವುದೂ ಸಾಧ್ಯವಿದೆ. ಗ್ರಂಥವೊಂದನ್ನು ಓದಿಕೊಂಡು, ಅದರಲ್ಲಿದ್ದ ಶ್ಲೋಕದ ಅರ್ಥವನ್ನು ಆ ಗೋವಿಂದ ಈ ರೀತಿ ಹೇಳುತ್ತಿದ್ದದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ.
ಶರಣ– ಹಾಗಾದರೆ ಇಂದು ರಾತ್ರಿಯೇ ತಲೆಮೇಲೆ ಕಲ್ಲು ಎತ್ತಿಹಾಕಿ ಆತನನ್ನು ಕೊಂದರಾಯಿತು. ಹ್ಞಾ, ಕೊಲ್ಲುವುದಕ್ಕೆ ಮೊದಲು ಔಷಧ ತಯಾರಿಸುವ ವಿಧಾನವನ್ನೂ ಆತನಿಂದ ತಿಳಿದುಕೊಳ್ಳಬೇಕು, ನೆನಪಿಡು.
ಅರುಣ– ಹೌದೌದು, ಮುಂದಕ್ಕೆ ನಮಗೆ ಪ್ರಯೋಜನಕ್ಕೆ ಬಂದೀತು.
*******************************************************
ಅಂಕ– ೫
(ರಾತ್ರಿಯ ಸಮಯ. ವೈದ್ಯರ ಮನೆ. ಪಿಳ್ಳಾರಿ ಗೋವಿಂದನನ್ನು ಕಂಬಕ್ಕೆ ಕಟ್ಟಿಹಾಕಲಾಗಿದೆ. ಅರುಣ- ಶರಣರು ನಗಾಡುತ್ತಾ ಆತನೆದುರು ನಿಂತಿದ್ದಾರೆ. ಬಂಧನದಿಂದ ಬಿಡಿಸಿಕೊಳ್ಳುವುದಕ್ಕಾಗಿ ಪಿಳ್ಳಾರಿ ಗೋವಿಂದ ಕೊಸರಾಡುತ್ತಿದ್ದಾನೆ)
ಪಿಳ್ಳಾರಿ ಗೋವಿಂದ– ಲೋ, ಯಾರೋ ನೀವಿಬ್ಬರು? ನನ್ನನ್ನ್ಯಾಕೋ ಕಟ್ಟಿಹಾಕಿದ್ದೀರಾ? ಬಿಟ್ಟುಬಿಡಿ ನನ್ನನ್ನು.
ಅರುಣ– ಬಿಡುತ್ತೇವೆ, ನಿನ್ನಲ್ಲಿರುವ ಆ ದಿವ್ಯೌಷಧವನ್ನು ಕೊಟ್ಟರೆ ಮಾತ್ರ.
(ಪಿಳ್ಳಾರಿ ಗೋವಿಂದನ ಮುಖದಲ್ಲಿ ಆತಂಕ ಕಾಣಿಸಿಕೊಳ್ಳುತ್ತದೆ. ಆದರೂ ಅದನ್ನು ತೋರಿಸಿಕೊಳ್ಳುವುದಿಲ್ಲ)
ಪಿಳ್ಳಾರಿ ಗೋವಿಂದ– ಯಾವ ಔಷಧ? ನನ್ನಲ್ಲ್ಯಾವ ದಿವ್ಯೌಷಧವೂ ಇಲ್ಲ.
ಶರಣ– ಲೋ ಪಿಳ್ಳಾರಿ, ಅತಿ ಬುದ್ಧಿವಂತಿಕೆ ಪ್ರದರ್ಶಿಸಬೇಡ. ಸಾವನ್ನೇ ಮೆಟ್ಟಿನಿಲ್ಲಬಲ್ಲ ಔಷಧಿ ನಿನ್ನ ಬಳಿ ಇದೆ ಎಂಬ ಸತ್ಯ ನಮಗೆ ಗೊತ್ತಿದೆ.
ಪಿಳ್ಳಾರಿ ಗೋವಿಂದ– (ತಡವರಿಸುತ್ತಾ) ಯಾರು ನಿಮಗೆ ಹೇಳಿದ್ದು? ಅದೆಲ್ಲಾ ಸುಳ್ಳು.
ಅರುಣ– ನೋಡೋ ಪಿಳ್ಳಾರಿ, ನಿನಗೆ ಎರಡು ಆಯ್ಕೆ ನೀಡುತ್ತೇವೆ. ಒಂದು, ಆ ಔಷಧಿಯ ರಹಸ್ಯ. ಎರಡು, ನಿನ್ನ ಪ್ರಾಣ. ಎರಡರಲ್ಲಿ ಯಾವುದನ್ನು ಕಾಪಾಡಿಕೊಳ್ಳುತ್ತೀಯೋ ನಿನ್ನಿಷ್ಟಕ್ಕೆ ಬಿಟ್ಟದ್ದು. ರಹಸ್ಯ ಉಳಿಸಿಕೊಂಡರೆ ನಿನ್ನ ಪ್ರಾಣ ಕಳೆದುಕೊಳ್ಳುತ್ತೀಯ. ರಹಸ್ಯವನ್ನು ಕಳೆದುಕೊಂಡು ನಿನ್ನ ಪ್ರಾಣ ಉಳಿಸಿಕೊಳ್ಳೋ ಮೂರ್ಖ.
ಪಿಳ್ಳಾರಿ ಗೋವಿಂದ– (ಸ್ವಲ್ಪ ಭಯದಿಂದಲೇ) ಔಷಧಿಯ ರಹಸ್ಯ ತಿಳಿಸಿದರೆ ನನ್ನನ್ನು ಜೀವಸಹಿತವಾಗಿ ಬಿಟ್ಟುಬಿಡುತ್ತೀರಿ ತಾನೆ?
ಶರಣ– ಹ್ಞೂ, ಖಂಡಿತವಾಗಿಯೂ.
ಪಿಳ್ಳಾರಿ ಗೋವಿಂದ– ಸರಿ, ಹಾಗಿದ್ದರೆ ಹೇಳುತ್ತೇನೆ. ಆ ಮೂಲೆಯ ಕಪಾಟಿನಲ್ಲಿ ಮರದ ಪೆಟ್ಟಿಗೆಯಿದೆಯಲ್ಲ, ಅದರೊಳಗಡೆ ಆ ಔಷಧವಿದೆ.
(ಶರಣ ಆ ಪೆಟ್ಟಿಗೆಯನ್ನು ಕಪಾಟಿನಿಂದ ತೆಗೆದು ತರುತ್ತಾನೆ)
ಶರಣ– ಲೋ ಅರುಣ, ನೀನು ಬೆಳಿಗ್ಗೆ ಕದ್ದು ಗಮನಿಸಿದ್ದೆಯಲ್ಲ, ಆ ಔಷಧಿ ಇದುವೇ ತಾನೆ?
ಅರುಣ– (ಗುಳಿಗೆಯನ್ನು ಕೈಗೆತ್ತಿಕೊಂಡು ನೋಡಿ) ಹ್ಞಾ ಇದುವೇ. ಬಣ್ಣ, ಗಾತ್ರ ಎಲ್ಲವೂ ಬೆಳಿಗ್ಗೆ ನೋಡಿದಂತೆಯೇ ಇದೆ. (ಪಿಳ್ಳಾರಿ ಗೋವಿಂದನತ್ತ ನೋಡಿ ಏರುಧ್ವನಿಯಲ್ಲಿ) ಈ ಮಾತ್ರೆ ತಯಾರಿಸುವುದು ಹೇಗೆಂದು ಹೇಳು.
ಪಿಳ್ಳಾರಿ ಗೋವಿಂದ– ಅದೇ ಕಪಾಟಿನಲ್ಲಿ ದೊಡ್ಡದಾದ ಗ್ರಂಥವೊಂದಿದೆಯಲ್ಲ, ಆ ಗ್ರಂಥದ ಮೂರನೇ ಅಧ್ಯಾಯದಲ್ಲಿ ಬರೆದಿದೆ ನೋಡಿ.
(ಶರಣ ಆ ಗ್ರಂಥವನ್ನು ತೆಗೆದುಕೊಂಡು ಗಮನಿಸುತ್ತಾನೆ)
ಶರಣ– ಹಹ್ಹಹ್ಹ, ನಮಗೆ ಸಂಸ್ಕೃತ ಬರುವುದಿಲ್ಲ ಎಂಬುವುದು ಈ ಗ್ರಂಥ ಬರೆದವನಿಗೂ ಗೊತ್ತಿದ್ದಿರಬೇಕು. ಅದಕ್ಕೇ ಕನ್ನಡ ಭಾಷೆಯಲ್ಲಿ ಅರ್ಥವನ್ನೂ ನೀಡಿದ್ದಾನೆ. ಹಹ್ಹಹ್ಹ.
(ಅರುಣನೂ ಆತನ ನಗುವಿಗೆ ಜೊತೆಯಾಗುತ್ತಾನೆ)
ಪಿಳ್ಳಾರಿ ಗೋವಿಂದ– ಸರಿ. ನಿಮಗೆ ಬೇಕಾದದ್ದು ದೊರೆತಾಯಿತಲ್ಲ. ಇನ್ನಾದರೂ ನನ್ನನ್ನು ಬಿಟ್ಟುಬಿಡಿ.
ಅರುಣ– ಲೋ ಶರಣ, ಇವನನ್ನು ಬಿಟ್ಟುಬಿಡಬೇಕಂತೆ. ಒಳಕೋಣೆಗೆ ಕರೆದುಕೊಂಡುಹೋಗಿ ಜಾಗ್ರತೆಯಿಂದ ಸ್ಲೋಕಕ್ಕೆ ಬಿಟ್ಟು ಬಾ. ಯಾರಾದರೂ ಬರುತ್ತಾರೋ ಎನ್ನುವುದನ್ನು ನಾನು ಆ ಕಿಟಕಿಯ ಬಳಿ ನಿಂತು ಗಮನಿಸುತ್ತಿರುತ್ತೇನೆ.
ಪಿಳ್ಳಾರಿ ಗೋವಿಂದ– ಇದು ಮೋಸ, ಇದು ಮೋಸ. ನನ್ನಿಂದಲೇ ಔಷಧದ ಗುಟ್ಟನ್ನು ಉಪಾಯವಾಗಿ ತಿಳಿದುಕೊಂಡು ಈಗ ನನ್ನನ್ನೇ ಕೊಲ್ಲುತ್ತೀರೇನೋ?
ಅರುಣ– ಹ್ಞ! ಮೋಸವಂತೆ ಮೋಸ! ನಾವು ಮಾಡುತ್ತಿರುವುದು ಮೋಸವಾದರೆ ನೀನು ನಿನ್ನ ಗುರುಗಳಿಗೆ ಮಾಡಿದ್ದು ಮತ್ತೇನನ್ನು?!
(ಪಿಳ್ಳಾರಿ ಗೋವಿಂದನ ಮುಖ ಮತ್ತಷ್ಟು ಗಾಬರಿಗೊಳಗಾಗುತ್ತದೆ. ಅಂತಿಮವಾಗಿ ಪಶ್ಚಾತಾಪದ ಭಾವ ಆತನಲ್ಲಿ ಮೂಡುತ್ತದೆ)
ಪಿಳ್ಳಾರಿ ಗೋವಿಂದ– (ಸಣ್ಣ ಧ್ವನಿಯಲ್ಲಿ) ಹೌದು! ಆದಮರವನ್ನುರುಳಿಸಿದ ಫಲವನ್ನು ನಾನೇ ಉಣ್ಣಬೇಕು, ನಾನೇ ಉಣ್ಣುತ್ತೇನೆ! (ಅದೇ ಮಾತನ್ನು ದೊಡ್ಡ ಧ್ವನಿಯಲ್ಲಿ ಮತ್ತೆ ಮತ್ತೆ ಹೇಳತೊಡಗುತ್ತಾನೆ)
(ಪಿಳ್ಳಾರಿ ಗೋವಿಂದನ ಮಾತು ಮುಂದುವರಿಯುತ್ತಿರುವಂತೆಯೇ ಶರಣ ಆತನನ್ನು ಎಳೆದುಕೊಂಡು ಒಳಕೋಣೆಗೆ ಹೋಗುತ್ತಾನೆ. ಅರುಣ ಕಿಟಕಿಯ ಬಳಿಯಲ್ಲಿ ನಿಂತುಕೊಂಡು ಅತ್ತಿತ್ತ ನೋಡುತ್ತಿರುತ್ತಾನೆ. ಸ್ವಲ್ಪ ಹೊತ್ತಿನಲ್ಲಿಯೇ ಪಿಳ್ಳಾರಿ ಗೋವಿಂದನ ಆಕ್ರಂದನ ಕೇಳಿಬರುತ್ತದೆ. ಅರುಣನ ಮುಖದಲ್ಲಿ ನಗು ಮೂಡುತ್ತದೆ)
ಶರಣ– (ಕೋಣೆಯೊಳಗಿನಿಂದ ಓಡಿಬಂದು) ಅರುಣ, ಕೆಲಸ ಮುಗಿಯಿತು. ಬಾ, ಇಲ್ಲಿಂದ ಆದಷ್ಟು ಬೇಗ ತೆರಳೋಣ.
(ಅರುಣ– ಶರಣರಿಬ್ಬರೂ ಔಷಧ ಮತ್ತು ಗ್ರಂಥವನ್ನು ತೆಗೆದುಕೊಂಡು ಆತುರಾತುರವಾಗಿ ಅಲ್ಲಿಂದ ತೆರಳುತ್ತಾರೆ)
*******************************************************
ಅಂಕ– ೬
(ಅರಮನೆಯ ಮೇಲಂತಸ್ತಿನಲ್ಲಿ ಅರಸ ಮತ್ತು ಮಂತ್ರಿ ಒಬ್ಬರಿಗೊಬ್ಬರು ಅಭಿಮುಖರಾಗಿ ನಿಂತಿದ್ದಾರೆ. ಅಲ್ಲಿ ಅವರಿಬ್ಬರನ್ನು ಬಿಟ್ಟರೆ ಬೇರಾರೂ ಇಲ್ಲ)
ಮಂತ್ರಿ– ಪ್ರಭೂ, ಈ ರಾತ್ರಿವೇಳೆಯಲ್ಲಿ ನನ್ನನ್ನು ಬರಹೇಳಿದ್ದೀರೆಂದರೆ ಏನೋ ಗಹನವಾದ ವಿಷಯವೇ ಇರಬೇಕಲ್ಲವೆ?
ಅರಸ– ಹೌದು ಮಂತ್ರಿ. ಓಲೆಯೊಂದು ಬಂದು ತಲುಪಿದೆ, ಉತ್ತರದೇಶದ ರಾಜನಿಂದ. ಈಗ ತಾನೇ ದೂತ ಬಂದು ಕೊಟ್ಟುಹೋದ.
ಮಂತ್ರಿ– ಯುದ್ಧ ಸಂದೇಶವೇನೂ ಆಗಿರಲಿಕ್ಕಿಲ್ಲ, ಅಲ್ಲವೇ ಪ್ರಭು?
ಅರಸ– ಇಲ್ಲ ಇಲ್ಲ. ಯುದ್ಧದ ಪ್ರಸ್ತಾಪವೇನೂ ಅಲ್ಲ. ಅದರಲ್ಲಿರುವ ಸಂಗತಿಯೇ ಬೇರೆ. ಉತ್ತರದೇಶದಿಂದ ಇಬ್ಬರು ಮೇರು ವೈದ್ಯರು ನಮ್ಮ ರಾಜ್ಯಕ್ಕೆ ಭೇಟಿ ನೀಡಲಿದ್ದಾರಂತೆ. ಸುಕ್ಷೇಮ, ಸುಕಾಮ ಎಂಬುವುದವರ ಹೆಸರು.
ಮಂತ್ರಿ– ಮೇರು ವೈದ್ಯರುಗಳ ಭೇಟಿಯೆಂದಮೇಲೆ ನಿರ್ದಿಷ್ಟ ಕಾರಣ ಇರಲೇಬೇಕಲ್ಲವೇ ಪ್ರಭು?
ಅರಸ– ಹೌದು, ಉತ್ತಮ ಕಾರಣವೇ ಅದರ ಹಿಂದಿದೆ. ಆ ಇಬ್ಬರು ವೈದ್ಯರುಗಳು ಯಾವುದೋ ದಿವ್ಯೌಷಧವನ್ನು ಕಂಡುಹಿಡಿದಿದ್ದಾರಂತೆ. ಅದನ್ನು ನಮ್ಮ ರಾಜ್ಯದಲ್ಲಿ ಪ್ರದರ್ಶಿಸುವುದಕ್ಕೆಂದೇ ಅವರು ಭೇಟಿ ನೀಡುತ್ತಿರುವುದು.
ಮಂತ್ರಿ– ಓಹೋ! ಇದು ಒಳ್ಳೆಯದೇ ವಿಷಯ. ಆ ದಿವ್ಯೌಷಧದಿಂದಾಗಿ ನಮ್ಮ ರಾಜ್ಯಕ್ಕೆ ಬಹಳಷ್ಟು ಪ್ರಯೋಜನವಾದೀತು. ಅಲ್ಲವೇ ಪ್ರಭು?
ಅರಸ– ಪ್ರಯೋಜನವಾದೀತೆಂಬ ಯೋಚನೆಯ ಜೊತೆಗೆ ವಿರೋಧಿ ರಾಜರುಗಳ ಕುತಂತ್ರ ಇದಾಗಿರಬಹುದೇ ಎಂಬ ಭಯವೂ ನನ್ನ ತಲೆಯನ್ನೇರಿ ಕುಳಿತಿದೆ ಮಂತ್ರಿಗಳೇ.
ಮಂತ್ರಿ– ನಿಮ್ಮ ದೂರಾಲೋಚನೆ ಬಹು ಉತ್ತಮವಾಗಿದೆ ಪ್ರಭು. ಹಾಗೆಂದು ನಾವೇನೂ ಭಯಪಡಬೇಕಾದ ಅಗತ್ಯವಿಲ್ಲ. ನಮ್ಮ ಸೈನ್ಯವಂತೂ ಬಲಿಷ್ಠವಾಗಿದೆ. ಅಪ್ರತಿಮ ಗೂಢಚಾರರೂ ನಮ್ಮಲ್ಲಿದ್ದಾರೆ. ವಿರೋಧಿಗಳ ಆಟವೊಂದೂ ನಮ್ಮ ಮುಂದೆ ನಡೆಯದು. ಆ ವೈದ್ಯರುಗಳಿಂದ ನಮ್ಮ ರಾಜ್ಯಕ್ಕಾಗಬಹುದಾದ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ನೀವು ಪ್ರಯತ್ನಿಸಿ ಪ್ರಭು. ಏನೂ ಕೆಡುಕು ಉಂಟಾಗದ ಹಾಗೆ ನಾನು ನೋಡಿಕೊಳ್ಳುತ್ತೇನೆ.
ಅರಸ– ನನ್ನ ಉದ್ದೇಶವೂ ಅದೇ ಆಗಿದೆ. ಆ ಇಬ್ಬರು ವೈದ್ಯರು ತರಲಿರುವ ದಿವ್ಯೌಷಧಿ ಯಾವುದಿರಬಹುದೆಂಬ ಕುತೂಹಲವಂತೂ ನನಗೆ ಇದ್ದೇ ಇದೆ. ನನ್ನ ಜನರಿಗೆ ಒಳಿತಾಗಲಿ ಎಂಬ ಆಶಯ ನನ್ನದು. ಹೇಗೂ ಬರುತ್ತಾರಲ್ಲ, ಕಾದು ನೋಡೋಣ. ಅಲ್ಲವೇ ಮಂತ್ರಿಗಳೇ?
ಮಂತ್ರಿ– ಹೌದು ಪ್ರಭು. ಮಾತುಕತೆಯೆಲ್ಲಾ ಮುಗಿದಿದೆ ಎಂದು ಭಾವಿಸುತ್ತೇನೆ . ತಾವು ಅಪ್ಪಣೆಯಿತ್ತರೆ ನಾನಿನ್ನು ಹೊರಡುತ್ತೇನೆ ಪ್ರಭು.
(ಅರಸ ಮಂತ್ರಿಗೆ ಹೊರಡುವಂತೆ ಸೂಚಿಸುತ್ತಾನೆ. ಅರಸನಿಗೆ ಶಿರಬಾಗಿ ವಂದಿಸಿ ಮಂತ್ರಿ ಅಲ್ಲಿಂದ ಹೊರಡುತ್ತಾನೆ. ರಾಜ ಹಾಗೆಯೇ ಸ್ವಲ್ಪ ಹೊತ್ತು ಯೋಚಿಸಿ ಬಳಿಕ ಅರಮನೆಯೊಳಕ್ಕೆ ತೆರಳುತ್ತಾನೆ)
*******************************************************
ಅಂಕ– ೭
ಮೇಳ ೧– ಯಾರಿವರು? ಯಾರಿವರು?
ಪಲ್ಲಕ್ಕಿ ಪಯಣಿಗರು
ಮೂಡುತಿದೆ ಅನುಮಾನ
ದೇವದೂತರೆ ಇವರು?
ಮೇಳ ೨– ದೇವದೂತರೂ ಅಲ್ಲ
ಮಹಿಮ ಪುರುಷರೂ ಅಲ್ಲ
ಉತ್ತರದ ಮೇರು ವೈದ್ಯರಿವರು
ಇದೆಯಂತೆ ಇವರ ಬಳಿ
ದಿವ್ಯ ಔಷಧವೊಂದು
ತಿಳಿಯಲಿರುವನು ನಮ್ಮರಸ ಅದೇನೆಂದು
ತಿಳಿಯೋಣ ನಾವುಗಳೂ ಕಾದುಕುಳಿತು
(ರಾಜಬೀದಿಯ ಇಕ್ಕೆಲಗಳಲ್ಲಿ ಜನ ಸೇರಿದ್ದಾರೆ. ರತ್ನಗಂಬಳಿಯನ್ನು ಹಾದಿಯ ಉದ್ದಕ್ಕೂ ಹಾಸಲಾಗಿದೆ. ಪಲ್ಲಕ್ಕಿಯನ್ನು ಹೊತ್ತ ರಾಜಭಟರ ಆಗಮನವಾಗುತ್ತದೆ. ಎಲ್ಲರ ಕಣ್ಣುಗಳೂ ಅತ್ತ ಚಲಿಸುತ್ತವೆ. ಆ ಪಲ್ಲಕ್ಕಿಯೊಳಗಡೆ ಸುಕ್ಷೇಮ- ಸುಕಾಮರು ಕುಳಿತಿದ್ದಾರೆ. ಉದ್ದನೆಯ ಗಡ್ಡ, ಪೊದರು ಮೀಸೆ, ಹಣೆಯಲ್ಲಿ ತಿಲಕ, ಕೈಗಳಲ್ಲಿ ಚಿನ್ನದ ಕಡಗ, ಮುಖದಲ್ಲಿ ಅತಿಯಾದ ಲವಲವಿಕೆ- ಆ ಇಬ್ಬರಲ್ಲಿಯೂ ಇದೆ. ಸುತ್ತ ನಿಂತ ಜನರು ಪುಷ್ಪವೃಷ್ಟಿಗೈಯ್ಯುತ್ತಿದ್ದಾರೆ. ಅವರಿಬ್ಬರನ್ನು ಸ್ವಾಗತಿಸಲು ರಾಜನೇ ಅರಮನೆಯ ಮುಂಭಾಗದಲ್ಲಿ ಕಾದುನಿಂತಿದ್ದಾನೆ. ಪಲ್ಲಕ್ಕಿಯು ಅರಮನೆಯ ಮುಂಭಾಗವನ್ನು ತಲುಪುತ್ತದೆ. ಭಟರು ಪಲ್ಲಕ್ಕಿಯನ್ನು ಕೆಳಗುಮಾಡಿ ಸುಕ್ಷೇಮ– ಸುಕಾಮರನ್ನು ಕೆಳಗಿಳಿಸುತ್ತಾರೆ)
ಅರಸ– (ಶಿರಬಾಗಿ ವಂದಿಸಿ) ಪ್ರಣಾಮಗಳು ಮೇರು ವೈದ್ಯರುಗಳಿಗೆ. ತಮ್ಮ ಪಾದಸ್ಪರ್ಶದಿಂದ ಈ ನಗರಕ್ಕೆ ಕವಿದಿದ್ದ ವ್ಯಾಧಿಗಳೆಲ್ಲವೂ
ದೂರವಾದಂತೆ ನನಗೆ ಭಾಸವಾಗುತ್ತಿದೆ.
(ಸುಕ್ಷೇಮ- ಸುಕಾಮರಿಬ್ಬರೂ ಅರಸನಿಗೆ ಶಿರಬಾಗಿ ವಂದಿಸುತ್ತಾರೆ)
ಸುಕ್ಷೇಮ– ಸುಕಾಮ– (ಒಟ್ಟಾಗಿ) ವಂದಿಸಿಕೊಂಡಿದ್ದೇವೆ ಪ್ರಭು.
ಸುಕಾಮ– ತಾವು ನೀಡಿದ ಈ ಅದ್ಧೂರಿ ಸ್ವಾಗತಕ್ಕೆ ಚಿರಋಣಿಗಳಾಗಿದ್ದೇವೆ.
ಸುಕ್ಷೇಮ– ತಮ್ಮ ಉದಾತ್ತ ಗುಣ ಏನೆಂಬುವುದು ಈ ಮೂಲಕವೇ ಪ್ರತಿನಿಧಿತವಾಗಿದೆ ಪ್ರಭು.
ಅರಸ– ತಮ್ಮಿಬ್ಬರ ಪ್ರತಿಭೆ, ತಜ್ಞತೆಯ ಮುಂದೆ ಈ ಸ್ವಾಗತ ಏನೇನೂ ಅಲ್ಲ. ತಾವಿಬ್ಬರೂ ಪ್ರಯಾಣದಿಂದಾಗಿ ಬಳಲಿದ್ದೀರಿ. ವಿಶ್ರಾಂತಿ ತೆಗೆದುಕೊಳ್ಳಿ.(ಮಂತ್ರಿಯ ಕಡೆಗೆ ತಿರುಗಿ) ಮಂತ್ರಿಗಳೇ, ಈಗಲೇ ಇವರ ವಿಶ್ರಾಂತಿಗೆ ಸಕಲ ವ್ಯವಸ್ಥೆಯನ್ನೂ ಮಾಡಿ.
ಮಂತ್ರಿ– ತಮ್ಮ ಅಪ್ಪಣೆ ಪ್ರಭು.
(ಮಂತ್ರಿಯು ಸುಕ್ಷೇಮ- ಸುಕಾಮರನ್ನು ವಿಶ್ರಾಂತಿಗೃಹದ ಕಡೆಗೆ ಕರೆದುಕೊಂಡು ಹೋಗುತ್ತಾನೆ. ಅರಸ ಅರಮನೆಯ ಕಡೆಗೆ ತೆರಳುತ್ತಾನೆ)
*******************************************************
ಅಂಕ– ೮
(ಅರಮನೆಯ ವಿಶ್ರಾಂತಿಗೃಹ. ಅಲ್ಲಿ ಸುಕ್ಷೇಮ- ಸುಕಾಮರನ್ನು ಬಿಟ್ಟರೆ ಬೇರಾರೂ ಇಲ್ಲ)
ಸುಕಾಮ– ಲೋ ಅರುಣ, ಎಲ್ಲರೂ ನಮ್ಮನ್ನು ವೈದ್ಯರೆಂದೇ ಭಾವಿಸಿಬಿಟ್ಟಿದ್ದಾರಲ್ಲೋ, ಮೂರ್ಖರು! ಹಹ್ಹಹ್ಹ…
(ತಕ್ಷಣ ಸುಕ್ಷೇಮ ವೇಗವಾಗಿ ಬಾಗಿಲ ಬಳಿ ಹೋಗಿ ದೂತರು ಇದ್ದಾರೆಯೇ ಎಂಬುವುದನ್ನು ಗಮನಿಸಿ ಬರುತ್ತಾನೆ. ಅಷ್ಟೇ ವೇಗವಾಗಿ ಹಿಂದಿರುಗಿ ಬರುತ್ತಾನೆ)
ಸುಕ್ಷೇಮ– (ಕೋಪದಿಂದ) ಮೂರ್ಖರು ಅವರಲ್ಲ, ನೀನು. ಇಲ್ಲಿಗೆ ಬರುವುದಕ್ಕೆ ಮುಂಚೆ ಎಷ್ಟು ಸಲ ಹೇಳಿದ್ದೇನೆ, ನಮ್ಮ ಮುಂಚಿನ ಹೆಸರು- ಜೀವನ ಎರಡನ್ನೂ ಮರೆತುಬಿಡು ಅಂತ. ಇಲ್ಲಿರುವಷ್ಟೂ ಕಾಲ ನಾನು ಸುಕ್ಷೇಮ, ನೀನು ಸುಕಾಮ ಅಷ್ಟೆ.
ಸುಕಾಮ– ಆಯಿತಪ್ಪ, ಆಯಿತು. ಆದ ಸಣ್ಣ ಪ್ರಮಾದಕ್ಕೆ ಇಷ್ಟೊಂದು ಪ್ರಕೋಪ- ಪ್ರತಾಪ ಒಳ್ಳೆಯದಲ್ಲ.
ಸುಕ್ಷೇಮ– ನೆನಪಿಡು ಸುಕಾಮ, ಸಣ್ಣ ಪ್ರಮಾದವೇ ನಮ್ಮನ್ನು ಪ್ರಪಾತಕ್ಕೆ ತಳ್ಳಿಬಿಡುವ ಸಾಧ್ಯತೆಯುಂಟು. ಇಲ್ಲಿ ನಾವಿಡುವ ಪ್ರತಿಯೊಂದು ಹೆಜ್ಜೆಯೂ ನೀರಿನ ಮೇಲೆ ಯಕ್ಷಿಣಿಗಾರ ನಡೆದ ಹಾಗೆ. ಒಂದು ಹೆಜ್ಜೆ ತಪ್ಪಿದರೂ ಬಂಡವಾಳವೆಲ್ಲಾ ಬಟಾಬಯಲಾಗಿಬಿಡುತ್ತದೆ.
ಸುಕಾಮ– ಸರಿ. ಇನ್ನುಮುಂದೆ ಯಾವ ಪ್ರಮಾದವೂ ಆಗದಂತೆ ಎಚ್ಚರವಹಿಸುತ್ತೇನೆ ಬಿಡು. ಆದರೆ ನಿನ್ನ ನಡೆ ಏನೆಂಬುವುದೇ ನನಗೆ ಅರ್ಥವಾಗುತ್ತಿಲ್ಲ.
ಸುಕ್ಷೇಮ– ಯಾವ ನಡೆ?
ಸುಕಾಮ– ಆರಂಭದಲ್ಲಿ ನನಗೂ ಈ ಯೋಚನೆ ತಲೆಗೇ ಬಂದಿರಲಿಲ್ಲ. ಈಗ ಹೊಳೆಯುತ್ತಿದೆಯಷ್ಟೆ. ಅಲ್ಲಾ, ಈ ಔಷಧವನ್ನು ಹಿಡಿದುಕೊಂಡು ರಾಜರ ಬಳಿಗೆ ಬರುವ ಅಗತ್ಯವೇನಿತ್ತು? ಜನಸಾಮಾನ್ಯರಿಗೆ ಮಾರಿದರೆ ಸಾಕಿತ್ತಲ್ಲವೇ?
ಸುಕ್ಷೇಮ– ಮತ್ತೊಮ್ಮೆ ಹೇಳುತ್ತೇನೆ ಕೇಳು ಸುಕಾಮ. ಕದ್ದರೆ ಆನೆಯನ್ನೇ ಕದಿಯಬೇಕು. ಆದರೆ ನಿನ್ನದು ಇಂದಿಗೂ ಕೂಡ ಅಡಿಕೆ ಕದ್ದುವ ಯೋಚನೆ ಮಾತ್ರ. ಜನಸಾಮಾನ್ಯರಿಗೆ ಮಾರಿದೆವೆಂದಾದರೆ ಪುಡಿಗಾಸು ಸಿಕ್ಕಬಹುದಷ್ಟೆ, ಚಿನ್ನದ ನಾಣ್ಯವಲ್ಲ. ಯಾಕೆ ನಾನು ಈ ಮಾರ್ಗವನ್ನು ಆರಿಸಿಕೊಂಡೆನೆಂದು ಈಗಲಾದರೂ ತಿಳಿಯಿತೇ?
ಸುಕಾಮ– ಅದು ಸರಿ, ಆದರೆ ಅಷ್ಟೇ ಅಪಾಯವೂ ಇದೆ ಎನ್ನುವುದನ್ನು ಮರೆಯಬೇಡ. ಪಿಳ್ಳಾರಿ ಗೋವಿಂದನ ಕೊಲೆ, ಉತ್ತರದೇಶದ ರಾಜನ ಹೆಸರಲ್ಲಿ ಕಳ್ಳಪತ್ರ, ನಮ್ಮಿಬ್ಬರ ಕಳ್ಳವೇಷ- ಇವೆಲ್ಲಾ ರಾಜನಿಗೆ ತಿಳಿಯಿತೆಂದಾದರೆ ನಮಗೆ ಉಳಿಗಾಲವಿಲ್ಲ . ಅದರ ಅರಿವಿದೆಯೇ?
ಸುಕ್ಷೇಮ– ರಾಜರು ಆಗ ಒಂದು ಮಾತು ಹೇಳಿದ್ದನ್ನು ನೆನಪಿಸಿಕೊ. ನಿಮ್ಮ ಪ್ರತಿಭೆ, ತಜ್ಞತೆ… ಈ ಎಲ್ಲಾ ರಹಸ್ಯಗಳನ್ನು ಜತನದಿಂದ ಕಾಪಾಡಿಕೊಳ್ಳುವುದರಲ್ಲಿಯೇ ನಮ್ಮ ನಿಜವಾದ ಪ್ರತಿಭೆ, ತಜ್ಞತೆ ಅಡಗಿದೆ
(ಅದೇ ಸಮಯಕ್ಕೆ ರಾಜರ ಆಗಮನವಾಗುತ್ತದೆ. ಸುಕ್ಷೇಮ- ಸುಕಾಮರಿಬ್ಬರೂ ಜಾಗೃತರಾಗುತ್ತಾರೆ)
ಅರಸ– ನಮ್ಮ ಆತಿಥ್ಯ ತಮಗಿಬ್ಬರಿಗೂ ಹಿಡಿಸಿದೆ ಎಂದು ಭಾವಿಸುತ್ತೇನೆ. ಏನಾದರೂ ಲೋಪ- ದೋಷಗಳಿದ್ದರೆ ಕ್ಷಮಿಸುವಿರೆಂಬ ಭಾವನೆ ನನ್ನದು.
ಸುಕ್ಷೇಮ– (ನಗುತ್ತಾ) ಕೊರತೆಗಳಿದ್ದರೂ ಕೂಡಾ ಅವುಗಳೆಲ್ಲವನ್ನೂ ಮರೆಸುವ ಶಕ್ತಿ ಈ ನಿಮ್ಮ ನಯ- ವಿನಯಕ್ಕಿದೆ ಪ್ರಭು.
ಅರಸ– (ತುಂಟತನದ ಧಾಟಿಯಲ್ಲಿ) ಅಂದರೆ ಕೊರತೆಗಳಿವೆ ಎಂದಾಯಿತಲ್ಲ.
ಸುಕ್ಷೇಮ– ಅಯ್ಯಯ್ಯೋ, ಆ ಅರ್ಥದಲ್ಲಿ ನಾನು ಮಾತನಾಡಿಲ್ಲ. ಜಗವಾಳುವ ದೊರೆಯ ಅರಮನೆಯಲ್ಲಿ ಅದೆಂಥಾ ಕೊರತೆ?
ಅರಸ– ಕೊರತೆ ಎಂಬುವುದು ಎಲ್ಲರಲ್ಲೂ, ಎಲ್ಲದರಲ್ಲೂ ಇದ್ದದ್ದೇ, ಬಿಳಿಬಣ್ಣದ ಅಂತರಾಳದಲ್ಲೂ ಕಪ್ಪುಚುಕ್ಕೆಯೊಂದು ಇರುವಂತೆ. ಅಲ್ಲವೇ ವೈದ್ಯರೇ.
(ಸುಕ್ಷೇಮ- ಸುಕಾಮರಿಬ್ಬರೂ ತಲೆಯಲ್ಲಾಡಿಸುತ್ತಾರೆ. ಅರೆಕ್ಷಣದ ಮೌನ ಅಲ್ಲಿ ಮನೆಮಾಡುತ್ತದೆ)
ಹ್ಞಾ, ಮಾತಿನ ಭರದಲ್ಲಿ ಬಂದ ಕಾರಣವನ್ನೇ ಮರೆತುಬಿಟ್ಟಿದ್ದೆ. ನಾನೀಗ ಬಂದದ್ದು ನಿಮ್ಮಲ್ಲಿರುವ ದಿವ್ಯೌಷಧಿಯ ಕುರಿತು ವಿಚಾರಿಸಲಿಕ್ಕೆ. ಉತ್ತರದೇಶದ ರಾಜರ ಓಲೆ ತಲುಪಿದಾಗಿನಿಂದಲೂ ಆ ದಿವ್ಯೌಷಧದ ಕುರಿತ ಕುತೂಹಲ ನನ್ನನ್ನು ಕೆಣಕುತ್ತಲೇ ಬಂದಿದೆ.
ಸುಕಾಮ– ಅದು ಹಾಗೆಯೇ ಪ್ರಭು, ಕುತೂಹಲ ಹುಟ್ಟಿಸಿದ ಸಂಗತಿಯನ್ನು ಕಾಣುವವರೆಗೂ, ಅರಿಯುವವರೆಗೂ ಕುತೂಹಲ ತಣಿಯುವಂಥದ್ದಲ್ಲ. ಆದರೆ ನಾವೀಗ ತಂದಿರುವ ದಿವ್ಯೌಷಧ ಕುತೂಹಲವನ್ನು ತಣಿಸುವಂಥದ್ದಲ್ಲ, ಮತ್ತಷ್ಟು ಹೆಚ್ಚಿಸುವಂತಹದ್ದು.
(ಅರಸ ಆಶ್ಚರ್ಯದಿಂದ ಗಮನಿಸುತ್ತಾನೆ)
ಸುಕ್ಷೇಮ– ನಾವು ತಂದಿರುವ ದಿವ್ಯೌಷಧ ಸಾವನ್ನೇ ಗೆಲ್ಲುವಂತಹದ್ದು.
ಅರಸ– (ಅತ್ಯಂತ ವಿಸ್ಮಿತನಾಗಿ) ಏನಂದಿರಿ ವೈದ್ಯರೇ? ಮತ್ತೊಮ್ಮೆ ಹೇಳಿ.
ಸುಕಾಮ– ಹೌದು ಅರಸರೇ, ಸಾವನ್ನು ಬಳಿ ಸುಳಿಯಲೂ ಬಿಡದಂತಹ ಔಷಧ ನಮ್ಮಲ್ಲಿದೆ.
ಅರಸ– ಏನು? ನಿಮ್ಮ ಮಾತು ನಿಜವೇ? ನೀವು ತಮಾಷೆ ಮಾಡುತ್ತಿಲ್ಲ ತಾನೆ?
ಸುಕ್ಷೇಮ– ಇಲ್ಲ ಪ್ರಭು, ನಾವು ಹೇಳುತ್ತಿರುವುದು ಅಕ್ಷರಶಃ ಸತ್ಯ. ನಿಮಗೆ ನಂಬಿಕೆಯಿಲ್ಲವೆಂದಾದರೆ ಅದನ್ನು ಸಾಕ್ಷೀಕರಿಸಲು ನಾವು ಸಿದ್ಧರಿದ್ದೇವೆ.
ಅರಸ– ಹೋ! ನಿಜಕ್ಕೂ ನಿಮ್ಮಂತಹ ಮೇಧಾವಿಗಳನ್ನು ನನ್ನ ಸಾಮ್ರಾಜ್ಯಕ್ಕೆ ಕರೆಸಿಕೊಂಡ ನಾನೇ ಅದೃಷ್ಟವಂತ. ಅಂದರೆ, ಈ ಔಷಧಿ ಸೇವಿಸಿದವನಿಗೆ ಮರಣವೇ ಇಲ್ಲವೆಂದಾಯಿತು.
ಸುಕಾಮ– (ಸ್ವಲ್ಪ ಸಣ್ಣ ಧ್ವನಿಯಲ್ಲಿ) ಮರಣವೇ ಇಲ್ಲವೆಂದಲ್ಲ ಪ್ರಭು. ಅವಘಡಗಳಿಂದುಂಟಾಗುವ ಮರಣವನ್ನು ಈ ಔಷಧ ತಡೆಯಲಾರದು. ರೋಗದಿಂದ ಮತ್ತು ವಿಷದಿಂದ ದೇಹವನ್ನು ರಕ್ಷಿಸುತ್ತದೆ. ಮರಣ ಹೊಂದಿದವರನ್ನೂ ಬದುಕಿಸಲು ಸಾಧ್ಯವಿದೆ. ಆದರೆ ಅವರ ದೇಹ ಸುಸ್ಥಿತಿಯಲ್ಲಿದ್ದಾಗ ಮಾತ್ರ.
ಅರಸ– ಒಟ್ಟಾರೆಯಾಗಿ ಔಷಧ ಸೇವಿಸಿದವನಿಗೆ ಮರಣ ದೂರವಾಗುತ್ತದೆಂದಾಯಿತು. ನಿಮ್ಮಂತಹ ಪ್ರತಿಭಾಶಾಲಿಗಳು ನನ್ನ ಸಾಮ್ರಾಜ್ಯದಲ್ಲಿ ಜನ್ಮ ತಳೆದಿಲ್ಲವಲ್ಲ ಎಂದು ಅಸೂಯೆಯಾಗುತ್ತಿದೆ. ಇರಲಿ. ನೀವು ಒಪ್ಪುವಿರೆಂದಾದರೆ ರಾಜವೈದ್ಯರಾಗಿ ನಿಮ್ಮಿಬ್ಬರನ್ನೂ ಘೋಷಿಸಲು ನಾನು ಸಿದ್ಧನಿದ್ದೇನೆ. ಇನ್ನುಮುಂದೆ ನೀವೀರ್ವರೂ ಇಲ್ಲಿಯೇ ಶಾಶ್ವತವಾಗಿ ತಂಗಬೇಕು. ಇದು ನನ್ನ ಕೋರಿಕೆ. ನಾಳೆ ಬೆಳಿಗ್ಗೆಯಿಂದಲೇ ಈ ಔಷಧವನ್ನು ಪ್ರಜೆಗಳೆಲ್ಲರಿಗೂ ನೀಡುವ ವ್ಯವಸ್ಥೆ ಮಾಡುತ್ತೇನೆ. ನಾನಿನ್ನು ತೆರಳುತ್ತೇನೆ. ಆಗದೇ?
(ಅರಸ ವಂದಿಸುತ್ತಾನೆ. ಪ್ರತಿಯಾಗಿ ಸುಕ್ಷೇಮ– ಸುಕಾಮರೂ ವಂದಿಸುತ್ತಾರೆ. ಅರಸ ಅಲ್ಲಿಂದ ನಿರ್ಗಮಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಡಂಗುರದವನು ರಾಜಾಜ್ಞೆಯನ್ನು ಘೋಷಿಸುತ್ತಿರುವುದು ಸುಕ್ಷೇಮ– ಸುಕಾಮರಿಗೆ ಕೇಳಿಸುತ್ತದೆ)
ಡಂಗುರದವನು– ಕೇಳ್ರಪ್ಪೋ ಕೇಳಿ ಕೇಳ್ರಪ್ಪೋ ಕೇಳಿ
ಅರಮನೆಗೆ ಹೊಸತಾಗಿ ವೈದ್ಯರು ಬಂದಿದ್ದಾರಂತೆ
ಸಾವೇ ಬರದ ಔಷಧಿ ಅವರಲ್ಲಿದೆಯಂತೆ
ನಾಳೆ ಬೆಳಿಗ್ಗೆ ಆ ಔಷಧಿಯನ್ನು ನೀಡಲಿದ್ದಾರಂತೆ
ಎಲ್ಲರೂ ತಪ್ಪದೆ ಪಡೆದುಕೊಳ್ಳಬೇಕಂತೆ
ಇದು ರಾಜಾಜ್ಞೆ ಕಣ್ರಪ್ಪೋ ರಾಜಾಜ್ಞೆ
ಕೇಳ್ರಪ್ಪೋ ಕೇಳಿ ಕೇಳ್ರಪ್ಪೋ ಕೇಳಿ
ಸುಕ್ಷೇಮ– ಕೇಳಿದೆಯೇನೋ ಸುಕಾಮ, ನಾಳೆಯಿಂದಲೇ ಔಷಧ ವಿತರಣೆ ನಡೆಯಲಿದೆಯಂತೆ.
ಸುಕಾಮ– ಕೇವಲ ಔಷಧ ವಿತರಣೆ ನಡೆದರೆ ನಮಗೇನು ಬಂತು ಮಣ್ಣು! ಸಂಪತ್ತಿಲ್ಲದ ರೀ ಕೀರ್ತಿ ಯಾರಿಗೆ ಬೇಕು ಹೇಳು. ನನಗಂತೂ ಬೇಡ.
ಸುಕ್ಷೇಮ– ಸುಕಾಮ, ಆತುರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ನೀಡುವ ಔಷಧಕ್ಕೆ ಪ್ರತಿಫಲವಾಗಿ ಅಪಾರ ಸಂಪತ್ತನ್ನು ಕೇಳಬೇಕೆಂಬ ಯೋಚನೆ ಅರಸರ ಜೊತೆ ಮಾತನಾಡುವಾಗಲೇ ಬಂದಿತ್ತು. ಆದರೂ ಆ ಮಾತು ತುಟಿ ಮೀರದ ಹಾಗೆ ತಡೆದುಕೊಂಡೆ. ಯಾಕೆ? ಈಗಲೇ ಸಂಪತ್ತು, ಸಂಪತ್ತು ಎಂದು ಬಾಯ್ಬಿಟ್ಟರೆ ಅರಸರ ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ. ವಿಶ್ವಾಸವೊಂದನ್ನು ಗಳಿಸಿಕೊಂಡರೆ ಸಂಪತ್ತು ಗಳಿಸುವುದೇನೂ ಕಷ್ಟವಲ್ಲ ಬಿಡು.
ಸುಕಾಮ– ಹಾಗಾದರೆ ಇನ್ನೂ ಕೆಲವು ದಿನ ಕಾಯಬೇಕೆಂದು ಹೇಳುತ್ತಿದ್ದೀಯಾ?
ಸುಕ್ಷೇಮ– ಕಾಯಲೇಬೇಕು ಸುಕಾಮ. ಯಾರು ಕಾಯುವುದಕ್ಕೆ ಸಿದ್ಧರಿಲ್ಲವೋ ಅವರು ಯಾವುದನ್ನು ಪಡೆದುಕೊಳ್ಳುವುದಕ್ಕೂ ಅರ್ಹರಲ್ಲ. ಆದರೆ ನೀನು ಹೇಳಿದ ಹಾಗೆ ಕೆಲವು ದಿನಗಳೇನು ನಾವು ಕಾಯಬೇಕಿಲ್ಲ. ಯಾಕೆಂದರೆ, ಈಗಾಗಲೇ ಅರಸರಿಗೆ ನಮ್ಮ ಮೇಲೆ ವಿಶ್ವಾಸ ಮೂಡಿದ್ದಾಗಿದೆ. ಇಲ್ಲವಾದರೆ ರಾಜವೈದ್ಯರಾಗಿ ನೇಮಿಸಿಕೊಳ್ಳುತ್ತಿದ್ದರೇ? ನಾಳೆ ಸೂರ್ಯೋದಯಕ್ಕೂ ಮೊದಲೇ ಈ ವಿಚಾರವನ್ನು ಅರಸರ ಜೊತೆ ಚರ್ಚಿಸುತ್ತೇನೆ. ನೀನು ಚಿಂತೆ ಬಿಡು.
******************************************************
ಅಂಕ– ೯
ಮೇಳ ೨– ಹೋ ಹೋ ಏನದು?
ತಲೆತುಂಬಿದಾ ಪೇಟ
ಹೆಗಲಲ್ಲಿ ಶಾಲು
ಮುಖದಲ್ಲಿ ತುಂಬುನಗು
ಕೊರಳಲ್ಲಿ ಕನಕಸರ
ಮೇಳ ೧– ಅರಸನಾ ಸನ್ಮಾನವದು
ಉತ್ತರದ ವೈದ್ಯರಿಗೆ
ಮೇಳ ೨– ಅರಿತೂ ಆಡುವಿರೇಕೆ ತಪ್ಪು
ನಿಜವೈದ್ಯರಲ್ಲ ಅವರು
ಬರಿಯ ಕಳ್ಳವೇಷ
ನಿಜವ ಮೀರಹೊರಟಿಹುದು
(ಸುಕ್ಷೇಮ– ಸುಕಾಮರು ಅತಿಥಿಗೃಹವನ್ನು ಪ್ರವೇಶಿಸುತ್ತಿದ್ದಾರೆ. ಇಬ್ಬರ ತಲೆಮೇಲೂ ಚಿನ್ನದ ಪೇಟ, ಹೆಗಲಲ್ಲಿ ರೇಶಿಮೆ ಶಾಲು, ಕೊರಳಲ್ಲಿ ಚಿನ್ನದ ಹಾರ, ಕೈಯ್ಯಲ್ಲಿ ದಪ್ಪನೆಯ ಚಿನ್ನದ ಕಡಗ ರಾರಾಜಿಸುತ್ತಿದೆ. ಒಳಪ್ರವೇಶಿಸಿದ ಕೂಡಲೇ ಸುಕ್ಷೇಮ ಹಾಸಿಗೆಯಲ್ಲಿ ಅಂಗಾತ ಮಲಗಿಕೊಳ್ಳುತ್ತಾನೆ. ಸುಕಾಮ ಅವನ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಾನೆ)
ಸುಕ್ಷೇಮ– ಅಬ್ಬಬ್ಬಾ! ಏನು ಜನ! ಎಂಥಾ ಸನ್ಮಾನ! ರಜತ ಆಸನದ ಮೇಲೆ ಕುಳಿತೂ ಕುಳಿತೂ ಸೊಂಟವೆಲ್ಲಾ ಮರಗಟ್ಟಿದಂತಾಗಿದೆ.
ಸುಕಾಮ– ಹೌದಪ್ಪಾ ಹೌದು. ಇಷ್ಟು ದಿನ ಒರಟುಗಲ್ಲಿನ ಮೇಲೆ ಕೂರುತ್ತಿದ್ದವನನ್ನು ಒಂದೇ ಸಲಕ್ಕೆ ಬೆಳ್ಳಿ ಆಸನದಲ್ಲಿ ವಿರಾಜಮಾನರಾಗಿಸಿದರಲ್ಲ, ಮತ್ತೆ ಸೊಂಟ ಮರಗಟ್ಟದೇ ಇರುತ್ತದೆಯೇ?! ದೌಲತ್ತು ಎಂದರೆ ಹೀಗಿರಬೇಕು.
ಸುಕ್ಷೇಮ– ಓಹೋ ನೀನೇನು ಮಹಾ ಸಜ್ಜನಿಕೆಯ ಮನುಷ್ಯ! ಪೇಟದ ಭಾರಕ್ಕೆ ಕತ್ತು ನೋಯುತ್ತಿದೆ ಎಂದು ಹೇಳಿದೆಯೋ, ಇಲ್ಲವೋ?
ಸುಕಾಮ– (ನಸುನಗುತ್ತಾ) ನಾನೇನು ದೌಲತ್ತು ತೋರಿಸಲು ಹಾಗೆ ಹೇಳಿಲ್ಲ. ಇದ್ದದ್ದನ್ನೇ ಹೇಳಿದ್ದು. ಅರಸರು ತೊಡಿಸಿದ ಪೇಟ ಕತ್ತುನೋವನ್ನೂ ತರಲಿಲ್ಲವೆಂದರೆ ಅದಕ್ಕಾವ ಬೆಲೆ!
ಸುಕ್ಷೇಮ– ಹಾಗಾದರೆ, ಅರಸರು ನಿನ್ನ ಕಾಲುಗಳಿಗೆರೆದ ನೀರು ನಿನ್ನ ಕಾಲನ್ನೇ ಉರಿಸಿದೆಯೋ ಹೇಗೆ?!
ಸುಕಾಮ– (ಜೋರಾಗಿ ನಗುತ್ತಾ) ಹಹ್ಹಹ್ಹ! ಆ ಕ್ಷಣವನ್ನಂತೂ ನಾನು ಮರೆಯಲು ಸಾಧ್ಯವೇ ಇಲ್ಲ. ಈ ರಾಜ್ಯದ ಅರಸ ನಮ್ಮಂತಹ ಕಳ್ಳರ ಕಾಲನ್ನು ತೊಳೆಯುವುದೆಂದರೆ…
(ಸುಕ್ಷೇಮ ಸುಕಾಮನ ಮಾತನ್ನು ಅರ್ಧದಲ್ಲೇ ತಡೆಯುತ್ತಾನೆ. ದೂತರು ಯಾರಾದರೂ ಇದ್ದಾರೆಯೇ ಎಂಬುವುದನ್ನು ಬಾಗಿಲ ಬಳಿ ಹೋಗಿ ಗಮನಿಸಿ ಬರುತ್ತಾನೆ)
ಸುಕ್ಷೇಮ– ಬಾಯ್ಮುಚ್ಚು ಸುಕಾಮ. ಇಲ್ಲಿ ಗೋಡೆಗಳಿಗೂ ಕಿವಿಗಳಿರುತ್ತವೆ ಎಂಬುವುದನ್ನು ಮರೆತೇಬಿಟ್ಟೆಯೋ ಹೇಗೆ? ಎಷ್ಟೇ ಸನ್ಮಾನ- ಗೌರವ ಪಡೆದರೂ ನೀನಿನ್ನೂ ನಿನ್ನ ಪೂರ್ವಸ್ಥಿತಿಯಿಂದ ಹೊರಗೆ ಬಂದೇ ಇಲ್ಲ. (ಸ್ವಲ್ಪ ಸಮಾಧಾನಚಿತ್ತನಾಗಿ, ಸಣ್ಣ ಧ್ವನಿಯಲ್ಲಿ) ನೆನಪಿಟ್ಟುಕೋ ಸುಕಾಮ, ನಾವೇನಿದ್ದರೂ ಪೊರೆ ಕಳಚಿಕೊಂಡ ಹಾವಿನಂತಿರಬೇಕು. ಒಳಗಡೆ ಎಷ್ಟೇ ವಿಷ ತುಂಬಿರಲಿ, ಹೊರಗಡೆ ಮಾತ್ರ ಲಕಲಕ ಹೊಳೆಯುತ್ತಿರಬೇಕು.
ಮಾಮೂಲಿನ ದೂತರು ಕಿವಿಕೊಟ್ಟರೂ ಚಿಂತೆಯಿಲ್ಲ ಬಿಡು. ಅಷ್ಟೋ ಇಷ್ಟೋ ಹಣ ಬಿಸಾಕಿ ಅವರನ್ನು ನಮ್ಮ ತೆಕ್ಕೆಗೆ ಎಳೆದುಕೊಂಡದ್ದಾಗಿದೆ. ಅರಸನೋ ಮಂತ್ರಿಯೋ ಕಿವಿಕೊಟ್ಟಾರೇನೋ ಎಂಬುವುದಷ್ಟೇ ನನ್ನ ಚಿಂತೆ. ಅದಕ್ಕೇ ನಿನ್ನನ್ನು ಬೈದದ್ದು.
ಸುಕಾಮ– ನೀನು ಬೈದದ್ದೂ ಆಗಿದೆ, ನಾನು ಬೈಸಿಕೊಂಡದ್ದೂ ಆಗಿದೆ. ಆ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡು. (ತನ್ನ ಸೊಂಟವನ್ನು ಮುಟ್ಟಿನೋಡಿ) ಹೋ! ಮರೆತೇಹೋಗಿತ್ತು. (ಚಿನ್ನದ ನಾಣ್ಯಗಳಿಂದ ತುಂಬಿರುವ ಗಂಟನ್ನು ಹೊರತೆಗೆಯುತ್ತಾನೆ) ಕಡಿಮೆಯೆಂದರೂ ಇದರಲ್ಲಿ ಲಕ್ಷ ವರಹ ಇರಬಹುದು, ಅಲ್ಲವೇನೋ?
ಸುಕ್ಷೇಮ– ಉಳಿಸಿಕೊಳ್ಳುವ ಬುದ್ಧಿವಂತಿಕೆಯಿಲ್ಲವೆಂದಾದರೆ ಲಕ್ಷವಲ್ಲ, ಕೋಟಿ ವರಹವಿದ್ದರೂ ಒಂದೇ.
ಸುಕಾಮ– ಆಯಿತಪ್ಪ. ನಾನು ದಡ್ಡ, ನೀನೇ ಮಹಾ ಬುದ್ಧಿವಂತ. ಅದಕ್ಕೇ ಆ ಗುಳಿಗೆಗಳೆಲ್ಲವನ್ನೂ ರಾಜನ ಕೈಗಿತ್ತು ಕೈಮುಗಿದದ್ದು!
ಸುಕ್ಷೇಮ– ನಿನಗ್ಯಾವ ಅವಿವೇಕಿ ಹೇಳಿದ್ದು, ಗುಳಿಗಗಳೆಲ್ಲವನ್ನೂ ರಾಜರ ಕೈಗಿತ್ತಿದ್ದೇನೆಂದು? (ಧ್ವನಿ ಸಣ್ಣದು ಮಾಡಿ) ಅಂದು ಆ ಗೋವಿಂದನಿಂದ ತೆಗೆದುಕೊಂಡೆವಲ್ಲ, ಅದರಲ್ಲಿ ಅರ್ಧದಷ್ಟನ್ನು ಮಾತ್ರ ಕೊಟ್ಟಿದ್ದೇನೆ. ಉಳಿದ ಗುಳಿಗೆಗಳೆಲ್ಲಾ ನನ್ನ ಹತ್ತಿರವೇ ಇದೆ. ಗುಳಿಗೆ ತಯಾರಿಸುವುದು ಹೇಗೆಂಬ ರಹಸ್ಯವನ್ನೂ ನಾನು ಬಿಟ್ಟುಕೊಟ್ಟಿಲ್ಲ. ಅದನ್ನಿಟ್ಟುಕೊಂಡೇ ಹಣ ಹೇಗೆ ಸಂಪಾದಿಸುತ್ತೇನೆ, ನೋಡುತ್ತಿರು. ನಾನು ಈಗಾಗಲೇ ರಾಜರಲ್ಲಿ ಮಾತನಾಡಿಯಾಗಿದೆ. ಹೇಗೂ ನಾವೀಗ ರಾಜವೈದ್ಯರು. ಕುಂಟಿದ್ದು, ಕೆಮ್ಮಿದ್ದಕ್ಕೆಲ್ಲಾ ನಾವೇ ಆಗಬೇಕು. ಹಾಗಿರುವಾಗ ಹಣ ಕೀಳುವುದು ಬಲು ಸುಲಭ ಬಿಡು.
ಸುಕಾಮ– ಆದರೂ ಇದು ಸರಿಯಲ್ಲ ಸುಕ್ಷೇಮ.
ಸುಕ್ಷೇಮ– ಯಾವುದು ಸರಿಯಲ್ಲ? ರಾಜರಲ್ಲಿ ಹಣ ಕೀಳುವುದೇ?
ಸುಕಾಮ– (ತಮಾಷೆಯಾಗಿ) ಅದಲ್ಲವೋ. ನಿನ್ನ ಕೊರಳಲ್ಲಿರುವ ಚಿನ್ನದ ಸರ, ನನ್ನ ಕೊರಳಲ್ಲಿರುವ ಸರಕ್ಕಿಂತ ಜಾಸ್ತಿ ಹೊಳೆದಂತೆ ತೋರುತ್ತಿದೆ. ಅರಸರಿಂದಾದ ಈ ಅನ್ಯಾಯವನ್ನು ನಾನು ಸಹಿಸಲಾರೆ. ಈಗಲೇ ದೂರು ಕೊಡುತ್ತೇನೆ ಇರು.
ಸುಕ್ಷೇಮ– (ಬಾಗಿಲಿನ ಕಡೆಗೊಮ್ಮೆ ನೋಡಿ, ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡು) ಪಿಳ್ಳಾರಿ ಗೋವಿಂದನಲ್ಲಿ ಇದ್ದ ಔಷಧವನ್ನು ಪತ್ತೆಹಚ್ಚಿದವನು ನಾನು, ಕೊಲ್ಲುವುದಕ್ಕೆ ಉಪಾಯ ಕೊಟ್ಟವನು ನಾನು, ರಾಜರಲ್ಲಿಗೆ ಬಂದು ಹಣ ಸಂಪಾದಿಸುವ ಮಾರ್ಗ ಹಾಕಿಕೊಟ್ಟವನು ನಾನು, ಪಾಲು ಪಡೆದುಕೊಳ್ಳುವುದಕ್ಕೆ, ಆ ಪಾಲಿನಲ್ಲೂ ಕೊರತೆ ಹುಡುಕುವುದಕ್ಕೆ ಮಾತ್ರ ನೀನು! ಹಹ್ಹಹ್ಹ…ಹಹ್ಹಹ್ಹ
(ಸುಕ್ಷೇಮ ಜೋರಾಗಿ ನಗುತ್ತಾನೆ. ಸುಕಾಮನ ಮುಖ ಸಪ್ಪಗಾಗುತ್ತದೆ. ಆದರೂ ಒತ್ತಾಯಪೂರ್ವಕ ನಗುವನ್ನು ಮುಖದ ಮೇಲೆ ತಂದುಕೊಳ್ಳುತ್ತಾನೆ. ಸುಕ್ಷೇಮ ಹಾಸಿಗೆಯಲ್ಲಿಯೇ ಒರಗಿಕೊಳ್ಳುತ್ತಾನೆ. ಸುಕಾಮ ಅಲ್ಲಿಂದ ಹೊರಹೋಗುತ್ತಾನೆ)
ಮೇಳ ೧– ಇದ್ದಾಗ ಕಾಡಿನಲಿ
ದ್ವೇಷವೇ ಇರಲಿಲ್ಲ
ನಾನು, ನೀನೆಂಬ ಭೇದ
ಹತ್ತಿರಕೂ ಬರಲಿಲ್ಲ
ಸಂಪತ್ತಿನ ಸಂಗದಲಿ
ಗೆಳೆತನವು ನಿರ್ನಾಮ
ಸ್ನೇಹದಾ ಕುರುಹೆಲ್ಲಾ
ನೀರಲ್ಲಿ ಹೋಮ
ಮೇಳ ೨– ಅವನು ನಗಾಡಿದ್ದಕ್ಕೆ
ಇವನ ಹೊಟ್ಟೆ ಉರಿಯಿತು
ಒಗ್ಗಟ್ಟಿನ ಬಟ್ಟೆ ಹರಿಯಿತು
ಮೇಳ ೧– ಒಗ್ಗಟ್ಟಿನ ಬಟ್ಟೆ ಹರಿದ ಮೇಲೆ
ರಹಸ್ಯ ಉಳಿದತೇನು?
ಒಗ್ಗಟ್ಟೇ ಇಲ್ಲವೆಂದ ಮೇಲೆ
ದೊರಕಿತೆಂತು ಜೇನು?
*******************************************************
ಅಂಕ– ೧೦
(ಅರಮನೆಯ ಮಹಡಿಯಲ್ಲಿ ಅರಸ ಮಂತ್ರಿಯ ಬರುವಿಕೆಗಾಗಿ ಕಾದುನಿಂತಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಮಂತ್ರಿ ರಾಜನಿಗೆ ವಂದಿಸುತ್ತಾನೆ)
ಅರಸ– ಮಂತ್ರಿಗಳೇ, ನಾನಂದು ನಿಮ್ಮೆದುರು ವ್ಯಕ್ತಪಡಿಸಿದ ಆತಂಕ ನಿಜವಾಗಿಲ್ಲ ತಾನೆ?
ಮಂತ್ರಿ– ಇಲ್ಲ ಪ್ರಭು. ಭಯಪಡಬೇಕಾದ ಅಗತ್ಯವೇನೂ ಇಲ್ಲ. ಅವರಿಬ್ಬರು ನಿಜವಾಗಿಯೂ ವೈದ್ಯರೆನ್ನುವುದರಲ್ಲಿ ಸಂಶಯವಿಲ್ಲ. ನಾನು ನೇಮಿಸಿರುವ ದೂತರು ಬಹು ನಂಬಿಕಸ್ಥರು. ಅವರೇ ಈ ವಿಚಾರವನ್ನು ನನ್ನಲ್ಲಿ ತಿಳಿಸಿದ್ದಾರೆ.
ಅರಸ– ನಿಮ್ಮ ಈ ಮಾತನ್ನು ಕೇಳಿದ ಮೇಲೆ ದೈರ್ಯ ಬಂತು ಮಂತ್ರಿಗಳೆ. ಈ ಕ್ಷಣದವರೆಗೂ ನನ್ನಲ್ಲಿ ಆತಂಕ ಮನೆಮಾಡಿತ್ತು. ಆ ಕಾರಣಕ್ಕಾಗಿಯೇ ಡಂಗುರ ಹೊಡೆಸಿದ್ದರೂ ಕೂಡಾ, ಆ ದಿವ್ಯೌಷಧವನ್ನು ನೀಡುವ ದಿನವನ್ನು ನಾನು ಮುಂದೂಡಿದ್ದು.
ಮಂತ್ರಿ– ಅಷ್ಟೊಂದು ಭಯವನ್ನು ಹೊಂದಿದ್ದ ನೀವು ಅವರನ್ನು ರಾಜವೈದ್ಯರಾಗಿ ಹೇಗೆ ನೇಮಿಸಿದಿರೆಂಬ ಕುತೂಹಲ ನನ್ನದು ಪ್ರಭು.
ಅರಸ– ತಂತ್ರಕ್ಕೆ ಪ್ರತಿತಂತ್ರ ಮಾಡಲೇಬೇಕಲ್ಲ ಮಂತ್ರಿಗಳೇ! ನೀವೀಗ ಬಂದು ತಿಳಿಸುವವರೆಗೂ ನಮ್ಮೆಲ್ಲರ ಪಾಲಿಗೂ ಅವರು ಆಗಂತುಕರೇ ತಾನೇ? ಹಣದಾಸೆಗಾಗಿ ಅವರಿಂದ ಏನಾದರೂ ಕೆಡುಕಾದೀತು ಎಂಬ ದೂರಾಲೋಚನೆಯಿಂದಲೇ ರಾಜವೈದ್ಯ ಹುದ್ದೆಯನ್ನು ನೀಡಿದ್ದು. ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿದ್ದೂ ಇದೇ ಕಾರಣಕ್ಕಾಗಿ.
ಮಂತ್ರಿ– ಹಾಗಾದರೆ ಅವರಿಗಿತ್ತ ಪದವಿಯನ್ನು ಮತ್ತೆ ಕಿತ್ತುಕೊಳ್ಳುತ್ತೀರಾ ಪ್ರಭು?
ಅರಸ– ಇಲ್ಲ ಮಂತ್ರಿಗಳೆ. ಈಗ ಅದರ ಅಗತ್ಯವಿಲ್ಲ. ಅವರು ಸಭ್ಯರೆನ್ನುವುದು ಖಚಿತವಾಗಿದೆಯಲ್ಲ. ಮತ್ತೇಕೆ ಅವರ ಬಗೆಗೆ ಕಟುಧೋರಣೆ? ಇನ್ನುಮುಂದೆ ಗೌರವ- ಸನ್ಮಾನಗಳು ನಿಜಾರ್ಥದಲ್ಲಿ ಅವರಿಗೆ ಸಲ್ಲಿಕೆಯಾಗಲಿದೆ.
(ಮಂತ್ರಿ ಒಪ್ಪಿಗೆಸೂಚಕವಾಗಿ ತಲೆಯಲ್ಲಾಡಿಸುತ್ತಾನೆ)
ಮಂತ್ರಿಗಳೆ, ನಾಳೆಯಿಂದಲೇ ದಿವ್ಯೌಷಧವನ್ನು ಪ್ರಜೆಗಳೆಲ್ಲರೂ ಪಡೆಯುವಂತಾಗಬೇಕು. ಈ ಸಲದ ನನ್ನ ನಿರ್ಧಾರ ಯಾವ ಕಾರಣಕ್ಕೂ ಬದಲಾಗುವುದಿಲ್ಲ. ಈ ಕೂಡಲೇ ಡಂಗುರ ಹೊಡೆಸಿ.
ಮಂತ್ರಿ– ತಮ್ಮ ಅಪ್ಪಣೆ ಪ್ರಭು.
(ರಾಜನಿಗೆ ವಂದಿಸಿ, ಮಂತ್ರಿ ಅಲ್ಲಿಂದ ತೆರಳುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಡಂಗುರ ಕೇಳಲಾರಂಭಿಸುತ್ತದೆ)
ಡಂಗುರದವನು– ಕೇಳ್ರಪ್ಪೋ ಕೇಳಿ ಕೇಳ್ರಪ್ಪೋ ಕೇಳಿ
ರಾಜವೈದ್ಯರಲ್ಲಿ ಸಾವಿಲ್ಲದ ಔಷಧಿಯಿದೆಯಂತೆ
ನಾಳೆ ಬೆಳಿಗ್ಗೆ ಆ ಔಷಧಿಯನ್ನು ನೀಡಲಿದ್ದಾರಂತೆ
ಎಲ್ಲರೂ ತಪ್ಪದೆ ಪಡೆದುಕೊಳ್ಳಬೇಕಂತೆ
ಇದು ರಾಜಾಜ್ಞೆ ಕಣ್ರಪ್ಪೋ ರಾಜಾಜ್ಞೆ
ಕೇಳ್ರಪ್ಪೋ ಕೇಳಿ ಕೇಳ್ರಪ್ಪೋ ಕೇಳಿ
*******************************************************
ಅಂಕ– ೧೧
(ಅತಿಥಿಗೃಹ. ಸುಕ್ಷೇಮ ನಿಧಾನವಾಗಿ ಎಚ್ಚರಗೊಳ್ಳುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಸುಕಾಮ ಅವನತ್ತಲೇ ನೋಡುತ್ತಾ ನಿಂತಿದ್ದಾನೆ)
ಸುಕ್ಷೇಮ– ಅಯ್ಯೋ, ಆಗಲೇ ಕತ್ತಲಾಗಿಬಿಟ್ಟಿದೆಯಲ್ಲ. ಇಷ್ಟು ನಿಶ್ಚಿಂತೆಯಿಂದ ನಿದ್ರಿಸಿ ಅದೆಷ್ಟು ದಿನವಾಗಿತ್ತೋ. (ಸುಕಾಮನನ್ನು ನೋಡಿ) ಏನೋ ಸುಕಾಮ, ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದೀಯ. ಏನು ಸಮಾಚಾರ?
ಸುಕಾಮ– ಏನಿಲ್ಲ. ನೀನು ಏಳುವುದನ್ನೇ ಕಾಯುತ್ತಿದ್ದೆ.
ಸುಕ್ಷೇಮ– ಯಾಕಪ್ಪಾ? ಅಂಥ ಗಂಭೀರ ವಿಷಯ ಏನಿದೆ?
ಸುಕಾಮ– ಗಂಭೀರ ವಿಷಯವೇನಲ್ಲ, ಹಾಗೇ ಸುಮ್ಮನೆ ಉದ್ಯಾನದಲ್ಲೊಮ್ಮೆ ಸುತ್ತಾಡಿಬರುವ ಮನಸ್ಸಾಯಿತು. ಅದಕ್ಕೆ ನಿನ್ನನ್ನೂ ಕಾದುಕುಳಿತದ್ದು.
ಸುಕ್ಷೇಮ– (ನಗುತ್ತಾ) ಹೌದೌದು! ನಾವಿದ್ದ ಕಾಡಿನಲ್ಲಿರುವ ಬೋಳು ಮರಗಳು ಹೇಳುತ್ತವೆ ನೀನೆಂತಹ ಪ್ರಕೃತಿಪ್ರೇಮಿ ಎಂದು! ಇಲ್ಲಿಯೂ ಅಂತಹದ್ದೇ ಪರಾಕ್ರಮವನ್ನೇನಾದರೂ ತೋರಿಸಹೊರಟಿದ್ದೀಯೋ ಹೇಗೆ?
(ಸುಕಾಮನ ಮುಖ ಗಂಭೀರವಾಗುತ್ತದೆ. ಸಣ್ಣಮಟ್ಟಿನ ಕೋಪವೂ ಆತನ ಮುಖದಲ್ಲಿ ವ್ಯಕ್ತವಾಗುತ್ತದೆ)
ಸುಕಾಮ– ಹಾಗಲ್ಲ ಸುಕ್ಷೇಮ. ಬೀಸುತ್ತಿರುವ ತಂಗಾಳಿ, ಚೆಲ್ಲಿರುವ ಬೆಳದಿಂಗಳು, ಸಾಲದ್ದಕ್ಕೆ ಮನಸ್ಸಿನಲ್ಲಿ ತುಂಬಿಕೊಂಡಿರುವ ಸಂತೋಷ- ಇವೆಲ್ಲವುಗಳೂ ಸೇರಿಕೊಂಡರೆ ಎಂತಹ ಅರಸಿಕನೂ ರಸಿಕನಾಗಿಬಿಡುತ್ತಾನೆ. ನೀನು ಬರದಿದ್ದರೆ ಬೇಡ ಬಿಡು. ನಾನೇ ಹೋಗುತ್ತೇನೆ.
ಸುಕ್ಷೇಮ– ಆಯಿತಪ್ಪ, ಅದಕ್ಕ್ಯಾಕೆ ಅಷ್ಟೊಂದು ಕೋಪ? ನಾನೂ ಬರುತ್ತೇನೆ ಇರು.
(ಸುಕ್ಷೇಮ– ಸುಕಾಮರು ಉದ್ಯಾನದಲ್ಲಿ ನಡೆಯುತ್ತಾ ಮುಂದೆ ಸಾಗುತ್ತಿದ್ದಾರೆ. ಅಲ್ಲಿ ಅವರಿಬ್ಬರನ್ನು ಬಿಟ್ಟರೆ ಬೇರ್‍ಯಾರೂ ಇಲ್ಲ)
ಸುಕ್ಷೇಮ– ಅಲ್ಲವೋ ಸುಕಾಮ, ಬದುಕು ಕೆಲವೊಮ್ಮೆ ಹೇಗೆ ತಿರುವು ಪಡೆದುಕೊಳ್ಳುತ್ತದೆ ನೋಡು. ಮೊನ್ನೆಮೊನ್ನೆವರೆಗೂ ಜನರ ಪಾಲಿಗೆ ನಾವು ಕಳ್ಳರು. ಆದರೆ ಇಂದು ರಾಜವೈದ್ಯರು. ಈ ಕೃತಕವೇಷವೇ ನಮ್ಮನ್ನು ಇಷ್ಟು ಮೇಲ್ಮಟ್ಟಕ್ಕೇರಿಸಿರುವುದು. ಲೋಕವೇ ಹೀಗೆಯೇನೋ ಅನ್ನಿಸಿಬಿಡುತ್ತದೆ ಕೆಲವೊಮ್ಮೆ. ನೈಜತೆಗಿಂತಲೂ ಕೃತಕತೆಗೆ ಮಾರುಹೋಗುವವರೇ ಜಾಸ್ತಿ. ಹಾಗಿರುವ ಮನೋಭಾವ ನಮ್ಮ ಪಾಲಿಗೆ ಒಳ್ಳೆಯದನ್ನೇ ನೀಡಿದೆ. ಹಾಗೆಂದು ಅರಸರು ನಮ್ಮನ್ನು ಪೂರ್ತಿಯಾಗಿ ನಂಬಿಯೂ ಇಲ್ಲ. ಅಂದು ಆ ದೂತರೇ ಹೇಳಿದರಲ್ಲ, ನಮ್ಮ ಮೇಲಿನ ಗೂಢಚಾರಿಕೆಗಾಗಿಯೇ ಅವರಿಬ್ಬರನ್ನು ನೇಮಿಸಲಾಗಿದೆಯೆಂದು. ನಾನೇನೋ ಅವರನ್ನು ನನ್ನ ಬಲೆಗೆ ಕೆಡವಿಕೊಂಡದ್ದರಿಂದ ನಾವಿಂದು ಬಚಾವಾಗಿದ್ದೇವೆ. ಇಲ್ಲವಾದರೆ…
(ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿದ ಸುಕ್ಷೇಮ ಸುಕಾಮನತ್ತ ನೋಡುತ್ತಾನೆ. ಸುಕಾಮ ಬೇರೆ ಯಾವುದೋ ಯೋಚನೆಯಲ್ಲಿ ಮುಳುಗಿದ್ದಾನೆ)
ಸುಕ್ಷೇಮ– ಅಲ್ಲವೋ ಸುಕಾಮ, ಹೊರಗೆ ಸುತ್ತಾಡಲು ಹೋಗಬೇಕು ಎಂದು ಒತ್ತಾಯಮಾಡಿದವನು ನೀನು. ಈಗ ನೋಡಿದರೆ ಮಾತಾಡದೇ ಇದ್ದೀಯಲ್ಲ. ಏನೋ ಭಾರೀ ಯೋಚನೆಯಲ್ಲಿರುವ ಹಾಗಿದೆ.
(ಸುಕಾಮ ಆಗಲೂ ಏನನ್ನೂ ಮಾತನಾಡುವುದಿಲ್ಲ)
ನೋಡು ಸುಕಾಮ, ನೀನು ಹೀಗೆ ಮಾತನಾಡದೆ ಇದ್ದರೆ ನಾನು ಆಮರದ ಜೊತೆಗೆ ಮಾತನಾಡುತ್ತೇನಷ್ಟೆ.
(ಸುಕ್ಷೇಮ ತಮಾಷೆಗಾಗಿ ಅಲ್ಲೇ ಇದ್ದ ಮರದ ಕಡೆಗೆ ತಿರುಗಿ ಅದನ್ನು ಮಾತನಾಡಿಸಲು ತೊಡಗುತ್ತಾನೆ. ತಕ್ಷಣ ಸುಕಾಮ ತನ್ನ ಸೊಂಟದಲ್ಲಿದ್ದ ಚೂರಿಯನ್ನು ಹೊರತೆಗೆದು ಸುಕ್ಷೇಮನ ಬೆನ್ನಿನ ಭಾಗಕ್ಕೆ ತಿವಿಯುತ್ತಾನೆ. ಅನಿರೀಕ್ಷಿತ ಆಕ್ರಮಣದಿಂದ ಸುಕ್ಷೇಮ ಕೆಳಕ್ಕೆ ಬೀಳುತ್ತಾನೆ. ಆತನ ಹೊಟ್ಟೆಯ ಮೇಲೆ ಕುಳಿತ ಸುಕಾಮ ಸತತವಾಗಿ ಆತನ ಎದೆ, ಕುತ್ತಿಗೆ ಭಾಗಕ್ಕೆ ಇರಿಯುತ್ತಲೇ ಹೋಗುತ್ತಾನೆ. ತೀವ್ರ ರಕ್ತಸ್ರಾವದಿಂದ ಸುಕ್ಷೇಮ ಸಾವನ್ನಪ್ಪುತ್ತಾನೆ)
ಸುಕಾಮ– (ಸುಕ್ಷೇಮನ ಹೆಣದ ಕಡೆಗೆ ನೋಡುತ್ತಾ) ಇಂದು ಮಧ್ಯಾಹ್ನದವರೆಗೂ ನೀನು ನನಗೆ ಮಿತ್ರನೇ ಆಗಿದ್ದವನು ಕಣೋ ಸುಕಾಮ. ಆದರೆ ನೀನ್ಯಾವಾಗ ನನ್ನ ಪರಿಶ್ರಮವನ್ನು ನಿನ್ನಿಂದ ಪ್ರತ್ಯೇಕಿಸಿಕೊಂಡೆಯೋ, ಆ ಕ್ಷಣವೇ ನೀನು ವೈರಿಯಂತೆ ಕಾಣತೊಡಗಿದೆ. ನೀನು ನನಗೆ ಸಹಕಾರಿಯಾಗಿದ್ದೆ, ನಾನು ನಿನಗೆ ಸಹಕಾರಿಯಾಗಿದ್ದೆ. ಆದರೆ ಈಗಲ್ಲ. ಸತ್ತು ಮಲಗಿರುವ ಈ ನಿನ್ನ ಹೆಣವೂ ಕೂಡ ಎದುರಾಳಿಯೆಂಬಂತೆ ತೋರುತ್ತಿದೆ. ಬಗಲಲ್ಲೇ ಎದುರಾಳಿಯನ್ನು ಇಟ್ಟುಕೊಂಡು, ಅದೂ ನಿನ್ನಂತಹ ಎದುರಾಳಿಯನ್ನು ಇಟ್ಟುಕೊಂಡು ಸ್ಪರ್ಧೆ ಗೆಲ್ಲುವ ದೈರ್ಯ ನನ್ನಲ್ಲಂತೂ ಇರಲಿಲ್ಲ.
ಬಾಲ್ಯದಲ್ಲೊಮ್ಮೆ ನಾವು ಆಟವಾಡುತ್ತಿದ್ದಾಗ ನೀನೇ ಹೇಳಿದ ಮಾತು ನೆನಪಿರಬೇಕು ನಿನಗೆ. ನಿನಗೆಲ್ಲಿ ನೆನಪಿರುತ್ತದೆ ಬಿಡು! ಅರಸನ ಹೊಗಳಿಕೆ, ಬಿಟ್ಟಿ ಗಳಿಕೆ ಇವುಗಳೇ ನಿನ್ನ ತಲೆಯಲ್ಲಿ ತುಂಬಿರುವಾಗ ಈ ಹಳೇ ನೆನಪುಗಳಿಗೆ ಜಾಗವಾದರೂ ಎಲ್ಲಿರುತ್ತದೆ ಹೇಳು! ನಾನೇ ನೆನಪಿಸುತ್ತೇನೆ. ಆಟ ಗೆದ್ದದ್ದು ಹೇಗೆಂಬುವುದು ಮುಖ್ಯವಲ್ಲ, ಆಟ ಗೆಲ್ಲುವುದಷ್ಟೇ ಮುಖ್ಯ ಎಂದು ಅಂದು ಹೇಳಿದವನು ನೀನು. ಅದನ್ನು ಇಂದು ಬದುಕಿನಲ್ಲಿ ಅನ್ವಯಿಸಿಕೊಂಡವನು ನಾನು. ಹೌದು! ನಿನ್ನೆದುರಿನ ಸ್ಪರ್ಧೆಯಲ್ಲಿ ಗೆದ್ದವನು ನಾನು. ಗೆದ್ದವನು ನಾನೇ. ಗೆದ್ದವನು ನಾನೇ.
(ಜೋರಾಗಿ ನಗಲಾರಂಭಿಸುತ್ತಾನೆ. ನಗು ನಿಲ್ಲಿಸಿದ ಮೇಲೆ ಚಪ್ಪಾಳೆ ತಟ್ಟುತ್ತಾನೆ. ಅಲ್ಲೇ ಗಿಡಗಳ ಹಿಂದೆ ಅವಿತಿದ್ದ ಇಬ್ಬರು ದೂತರು ಬಂದು ನಿಲ್ಲುತ್ತಾರೆ)
ನಾನು ಹೇಳಿದ್ದೆಲ್ಲಾ ನೆನಪಿದೆ ತಾನೆ? ನಾನು ಹೇಳಿಕೊಟ್ಟಂತೆ ಅರಸರೆದುರು ನಾಳೆ ಹೇಳಬೇಕು. ಮತ್ತೊಮ್ಮೆ ಹೇಳುತ್ತಿದ್ದೇನೆ, ಈ ವಿಷಯ ನಿಮ್ಮಿಬ್ಬರನ್ನು ಬಿಟ್ಟು ಬೇರೆ ಯಾರ ಕಿವಿಯ ಸನಿಹಕ್ಕೂ ಸುಳಿಯಕೂಡದು. ಸದ್ಯಕ್ಕೆ ಇದನ್ನು ಇಟ್ಟುಕೊಳ್ಳಿ.
(ಎರಡು ಚಿನ್ನದ ನಾಣ್ಯ ತುಂಬಿರುವ ಗಂಟನ್ನು ತೆಗೆದು ಅವರಿಗೆ ಕೊಡುತ್ತಾನೆ)
ಕೆಲಸ ಮುಗಿದ ಮೇಲೆ ಇನ್ನೂ ಇದೆ. ಹ್ಞೂ! ಇನ್ನು ನೀವು ಹೊರಡಿ.
(ದೂತರು ಸುಕ್ಷೇಮನ ಹೆಣವನ್ನು ಎಳೆದುಕೊಂಡು ಅಲ್ಲಿಂದ ಸಾಗುತ್ತಾರೆ. ಸುಕಾಮ ಸುತ್ತಲೂ ಒಮ್ಮೆ ಕಣ್ಣಾಡಿಸಿ, ಅಲ್ಲಿಂದ ಅತಿಥಿಗೃಹದ ಕಡೆಗೆ ತೆರಳುತ್ತಾನೆ)
*******************************************************
ಅಂಕ– ೧೨
(ಮರುದಿನ ಬೆಳಗ್ಗಿನ ಹೊತ್ತು. ಅರಮನೆಯ ಸಭಾಂಗಣದಲ್ಲಿ ಅರಸ ನಿಂತುಕೊಂಡಿದ್ದಾನೆ. ಅಲ್ಲಿಗೆ ಸುಕಾಮ ಆತುರಾತುರವಾಗಿ ಓಡಿಕೊಂಡು ಬರುತ್ತಾನೆ)
ಸುಕಾಮ– ಅರಸರೇ, ನಿನ್ನೆ ರಾತ್ರಿಯಿಂದ ಸುಕ್ಷೇಮ ಕಾಣಿಸುತ್ತಿಲ್ಲ.
ಅರಸ– ಹೌದೇ? ಎಲ್ಲಿ ಹೋಗಿರಬಹುದು? ಛೇ! ನಿನ್ನೆ ರಾತ್ರಿಯೇ ನನ್ನಲ್ಲಿ ಬಂದು ತಿಳಿಸಬಹುದಿತ್ತಲ್ಲ?
ಸುಕಾಮ– ನಿನ್ನೆ ಕತ್ತಲು ಕವಿಯುವಾಗಲೇ ನಾನು ನಿದ್ರಿಸಿಯಾಗಿತ್ತು. ಆ ವೇಳೆಗಾಗಲೇ ಸುಕ್ಷೇಮ ಹೊರಹೋಗಿಯಾಗಿತ್ತು. ರಾತ್ರಿ ಹೊತ್ತಿಗೆ ನನಗೊಮ್ಮೆ ಎಚ್ಚರವಾದಾಗಲೂ ಅವನು ಕಾಣಿಸಲಿಲ್ಲ.ನಿಮ್ಮ ಜೊತೆಯಲ್ಲಿ ಮಾತನಾಡುತ್ತಿರಬಹುದೇನೋ ಎಂದುಕೊಂಡೆ. ಆದರೆ ಮುಂಜಾನೆ ಎದ್ದು ನೋಡಿದಾಗಲೂ ಅವನಿಲ್ಲ. ಅದಕ್ಕೆ ನಿಮ್ಮಲ್ಲಿ ತಿಳಿಸೋಣವೆಂದು ಬಂದೆ.
ಅರಸ– ಸುಕಾಮರೇ,ಅವರಿಗೆ ಪರಿಚಯದವರ್‍ಯಾರಾದರೂ ಈ ಪಟ್ಟಣದಲ್ಲಿದ್ದಾರೆಯೇ? ಅವರ ಮನೆಗೇನಾದರೂ ಹೋಗಿರಬಹುದೇ?
ಸುಕಾಮ– ಇಲ್ಲ ಪ್ರಭು. ಅಪರಿಚಿತ ಪಟ್ಟಣಕ್ಕೆ ಕಾಲಿಟ್ಟಿರುವ ನಮ್ಮಿಬ್ಬರಿಗೂ ಈ ಪಟ್ಟಣದಲ್ಲಿ ಪರಿಚಿತರಿರುವುದು ಹೇಗೆ ಸಾಧ್ಯ?
ಅರಸ– ಹಾಗಾದರೆ ಇನ್ನೆಲ್ಲಿ ಹೋಗಿರಲು ಸಾಧ್ಯ?
(ಅಷ್ಟರಲ್ಲಿ ಇಬ್ಬರು ದೂತರು ಆತುರಾತುರವಾಗಿ ಬಂದು ಅರಸನಿಗೆ ವಂದಿಸುತ್ತಾರೆ)
ದೂತ ೧– ಅರಸರೇ, ಸುಕ್ಷೇಮ ವೈದ್ಯರ ಹೆಣ ನಮ್ಮ ಉದ್ಯಾನವನದಲ್ಲಿದೆ.
ದೂತ ೨– ಹೌದು ಪ್ರಭು. ಕುತ್ತಿಗೆ- ಎದೆಯ ಭಾಗಕ್ಕೆ ಚೂರಿಯಲ್ಲಿ ಇರಿದಿರುವಂತಹ ಗಾಯಗಳಿವೆ.
ಅರಸ– ಎಲ್ಲಿದೆ ಹೆಣ? ಬೇಗ ಇಲ್ಲಿಗೆ ತನ್ನಿ. ಈಗಲೇ ಸುಕಾಮ ವೈದ್ಯರ ಮೂಲಕ ಮರುಜೀವ ಕೊಡಿಸಿದರಾಯಿತು. ಹ್ಞೂ! ಬೇಗ ತನ್ನಿ.
(ದೂತರು ಶವವನ್ನು ತರಲು ಹೊರಕ್ಕೆ ಓಡುತ್ತಾರೆ)
ಅಂದು ನೀವು ಮತ್ತು ಸುಕ್ಷೇಮರೇ ಹೇಳಿದ್ದಿರಲ್ಲ, ಸತ್ತ ವ್ಯಕ್ತಿಯನ್ನೂ ಬದುಕಿಸಲು ಸಾಧ್ಯವಿದೆ ಎಂದು. ಅಲ್ಲವೇ ಸುಕಾಮರೇ?
ಸುಕಾಮ– ಆದರೆ ದೇಹ ಸುಸ್ಥಿತಿಯಲ್ಲಿದ್ದಾಗ ಮಾತ್ರ ಪ್ರಭು!
(ಅಷ್ಟರಲ್ಲಿ ದೂತರು ಸುಕ್ಷೇಮನ ಶವವನ್ನು ಹೊತ್ತುಕೊಂಡು ಬಂದು, ನೆಲದಲ್ಲಿ ಮಲಗಿಸುತ್ತಾರೆ)
ಅರಸ– ಸುಕಾಮರೇ, ತಕ್ಷಣ ಮರುಜೀವ ನೀಡುವ ಪ್ರಕ್ರಿಯೆಯನ್ನು ಶುರುಹಚ್ಚಿಕೊಳ್ಳಿ.
ಸುಕಾಮ– (ಸುಕ್ಷೇಮನ ಶವದ ಮೇಲೆ ಬಿದ್ದು) ಅಯ್ಯೋ ಸುಕ್ಷೇಮ, ನನ್ನನ್ನೊಬ್ಬನನ್ನೇ ಬಿಟ್ಟು ಹೋದೆಯೇನೋ ನೀನು?
ಅರಸ– ಸುಕಾಮರೇ, ಈ ಕ್ಷಣಕ್ಕೆ ದುಃಖವನ್ನು ತಡೆದುಕೊಳ್ಳಿ. ಸುಕ್ಷೇಮರಿಗೆ ಮತ್ತೆ ಪ್ರಾಣವನ್ನು ನೀಡುವತ್ತ ಕಾರ್ಯಪ್ರವೃತ್ತರಾಗಿರಿ.
ಸುಕಾಮ-ಸಾಧ್ಯವಿಲ್ಲ ಪ್ರಭು.
ಅರಸ-ಅಂದರೆ?
ಸುಕಾಮ– ನಾನು ಆಗಲೇ ಹೇಳಿದೆನಲ್ಲ ಪ್ರಭೂ, ದೇಹ ಸುಸ್ಥಿತಿಯಲ್ಲಿದ್ದರೆ ಮಾತ್ರ ಮರುಜೀವ ನೀಡಲು ಸಾಧ್ಯ ಎಂದು. ಈ ದೇಹ ಸ್ವ-ಸ್ವರೂಪವನ್ನೇ ಕಳೆದುಕೊಂಡಿದೆ. ಮತ್ತೆ ಹೇಗೆ ಬದುಕಿಸಲಿ ಪ್ರಭು?
ಅರಸ– ಏನಾದರೂ ಮಾಡಿ ಸುಕಾಮರೇ. ನಿಮ್ಮಿಂದ ಬದುಕಿಸಲು ಸಾಧ್ಯವಿದೆ.
ಸುಕಾಮ– ಇಲ್ಲ ಪ್ರಭು. ನನ್ನಿಂದ ಮಾತ್ರವಲ್ಲ, ಯಾರಿಂದಲೂ ಬದುಕಿಸಲು ಸಾಧ್ಯವಿಲ್ಲ.
ಅರಸ– ಛೇ! ಇದೆಂತಹ ವಿಪರ್ಯಾಸ? ಸಾವಿಗೆ ಸಾವು ತಂದವರೇ ಸಾವನ್ನು ಕಾಣುವಂತಾಯಿತಲ್ಲ! ಇರಲಿ. ವೈದ್ಯರನ್ನು ಕೊಂದಂತಹ ಆ ದುರಾತ್ಮರು ಯಾರೆಂಬುವುದನ್ನು ಆದಷ್ಟು ಶೀಘ್ರ ಕಂಡುಹಿಡಿಯಬೇಕಾಗಿದೆ. ಅವರನ್ನಂತೂ ನಾನು ಸುಮ್ಮನೆ ಬಿಡುವುದಿಲ್ಲ. ಅಲಾ, ವೈದ್ಯರನ್ನು ಕೊಲ್ಲಲು ಕಾರಣವಾದರೂ ಏನಾಗಿರಬಹುದು?
(ಆ ಸಮಯಕ್ಕೆ ಸುಕಾಮ ದೂತರಿಗೆ ಕಣ್ಸನ್ನೆಯನ್ನು ಮಾಡುತ್ತಾನೆ. ಸುಕಾಮನ ಸನ್ನೆಯನ್ನು ದೂತರು ಅರ್ಥೈಸಿಕೊಳ್ಳುತ್ತಾರೆ)
ದೂತ ೧– ಪ್ರಭೂ ತಾವು ಅಪ್ಪಣೆಯಿತ್ತರೆ ನಾನೊಂದು ಮಾತು ಹೇಳಲೇ?
ಅರಸ– ಏನದು? ಹೇಳು.
ದೂತ ೧– ಆ ದಿವ್ಯೌಷಧದ ಕಾರಣಕ್ಕಾಗಿಯೇ ವೈದ್ಯರ ಕೊಲೆ ನಡೆದಿರಬೇಕು ಪ್ರಭೂ. ಯಾರೋ ಆ ದಿವ್ಯೌಷಧದ ರಹಸ್ಯವನ್ನು ವೈದ್ಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿರಬೇಕು. ವೈದ್ಯರ ಪ್ರತಿರೋಧಕ್ಕೆ ಪ್ರತಿಯಾಗಿ ಕೊಲೆಗೈದಿರಬೇಕು.
ದೂತ ೨– ಅಲ್ಲದೆ, ಬೇರ್‍ಯಾವುದೋ ದೇಶದಿಂದ ಬಂದ ವೈದ್ಯರುಗಳಿಗೆ ರಾಜವೈದ್ಯರ ಗೌರವವನ್ನಿತ್ತಿದ್ದು ಕೆಲವರ ಹೊಟ್ಟೆ ಉರಿಸಿರಬೇಕು ಪ್ರಭು. ಇದುವೇ ವೈದ್ಯರ ಕೊಲೆಗೆ ಕಾರಣವಾಗಿರಬಹುದು.
ಅರಸ– ನಿಮ್ಮಿಬ್ಬರ ಮಾತೇ ನಿಜ ಕಾರಣವಾಗಿರಲೂಬಹುದು. ಸುಕ್ಷೇಮ ವೈದ್ಯರನ್ನು ಉಳಿಸಿಕೊಳ್ಳಲಂತೂ ಆಗಲಿಲ್ಲ. ಅವರ ಅಂತಿಮಸಂಸ್ಕಾರವನ್ನಾದರೂ ಅತ್ಯಂತ ಶಿಷ್ಟಾಚಾರಪೂರ್ವಕವಾಗಿ ನಡೆಸುತ್ತೇನೆ. ದೂತರೇ, ಈಗಲೇ ಸುಕ್ಷೇಮರ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆಯನ್ನೂ ನಡೆಸಿ (ಅರಸ ನಿಧಾನವಾಗಿಯೇ ಒಳಹೋಗುತ್ತಾನೆ. ಸುಕ್ಷೇಮರ ಶವವನ್ನು ಹೊತ್ತುಕೊಂಡು ದೂತರಿಬ್ಬರೂ ತೆರಳುತ್ತಾರೆ. ಸುಕಾಮ ಅವರ ಹಿಂದಿನಿಂದಲೇ ತೆರಳುತ್ತಾನೆ)
ಮೇಳ ೨– ಸುಳ್ಳಿನಾ ನಾಲಿಗೆ ಶಿಖರವನೇ ಮುಟ್ಟಿದೆ
ಕಪಟದಾ ಕಣ್ಣು ಗಗನಕ್ಕೆ ನೆಟ್ಟಿದೆ
ಮೇಳ ೧– ಸ್ವಾರ್ಥದುರಿಯಲಿ ಸತ್ಯ ಮರಗಟ್ಟಿ ಸತ್ತಿದೆ
ಕಾಲಪಕ್ಷಿಯ ಹೃದಯ ಕೊನೆಯನ್ನು ಎಣಿಸುತಿದೆ
ಮೇಳ ೨– ಕಾಲಪಕ್ಷಿಯ ಹೃದಯ ಕೊನೆಯನ್ನೇ ಎಣಿಸುತಿದೆ|| ೨ ||
*******************************************************
ಅಂಕ– ೧೩
(ಅರಸ ಮಂತ್ರಿಯ ಜೊತೆಗೆ ಮಾತನಾಡುತ್ತಾ ನಿಂತಿದ್ದಾನೆ)
ಅರಸ– ಏನು ಮಂತ್ರಿಗಳೇ, ತಾವು ಹೇಳುತ್ತಿರುವುದು ನಿಜವೇ?
ಮಂತ್ರಿ– ಹೌದು ಪ್ರಭೂ. ಈಗ್ಗೆ ಒಂದು ತಿಂಗಳ ಹಿಂದೆ ವೈದ್ಯ ವೆಂಕಟಾಚಾರ್ಯರ ಕೊಲೆ ನಡೆದಿದೆ. ಅದಾಗಿ ಐದು ದಿನಗಳಲ್ಲಿ ಅವರ ಶಿಷ್ಯ ಪಿಳ್ಳಾರಿ ಗೋವಿಂದನನ್ನೂ ಕೊಲ್ಲಲಾಗಿದೆ. ದೂತರು ಬಂದು ಈಗ ತಿಳಿಸಿಹೋದರು.
ಅರಸ– ಅಲ್ಲ ಮಂತ್ರಿಗಳೇ, ಕೊಲೆ ನಡೆದು ತಿಂಗಳು ಕಳೆಯುತ್ತಾ ಬಂದಿದ್ದರೂ, ಸುದ್ದಿ ನಮ್ಮನ್ನು ಈಗ ತಲುಪುತ್ತಿದೆ ಎಂದರೆ ಏನರ್ಥ?
ಮಂತ್ರಿ– ಇದಕ್ಕೆ ಕಾರಣವೂ ಇದೆ ಪ್ರಭೂ. ವೆಂಕಟಚಾರ್ಯರು ಹೊರಗಿನ ಜನರ ಜೊತೆಗೆ ಸಂಪರ್ಕವನ್ನೇನೂ ಇಟ್ಟುಕೊಂಡವರಲ್ಲ. ತಿಂಗಳಿನ ಮೊದಲ ಮಂಗಳವಾರ ಮಾತ್ರವೇ ಅವರು ಔಷಧವನ್ನು ನೀಡುತ್ತಿದ್ದದ್ದು. ಈ ಕಾರಣದಿಂದಲೇ ಪ್ರಭೂ, ಇಷ್ಟು ದಿವಸವಾದರೂ ಅವರ ಕೊಲೆ ನಮ್ಮ ಗಮನಕ್ಕೇ ಬಂದಿಲ್ಲ.
ಅರಸ– ಒಂದು ತಿಂಗಳ ಹಿಂದೆ ವೈದ್ಯ ವೆಂಕಟಾಚಾರ್ಯರ ಕೊಲೆ, ನಿನ್ನೆ ರಾತ್ರಿಯ ಹೊತ್ತಿಗೆ ವೈದ್ಯ ಸುಕ್ಷೇಮರ ಕೊಲೆ. ಇದರಲ್ಲೇನೋ ಸಾಮ್ಯತೆ ಅಡಗಿದೆಯೆಂದು ನಿಮಗೆ ಅನಿಸುತ್ತಿಲ್ಲವೇ, ಮಂತ್ರಿಗಳೇ?
ಮಂತ್ರಿ– ಹೌದು ಪ್ರಭು. ಖಂಡಿತವಾಗಿಯೂ ವೈದ್ಯ ವೆಂಕಟಾಚಾರ್ಯರ ಕೊಲೆ ರಹಸ್ಯವನ್ನು ಭೇದಿಸಿದೆವೆಂದಾದರೆ ಸುಕ್ಷೇಮರ ಕೊಲೆ ರಹಸ್ಯವೂ ಬಯಲಾದೀತೆಂದು ನನಗೆ ಅನಿಸುತ್ತಿದೆ.
ಅರಸ– ಅದು ನಿಜ. ಈ ಕ್ಷಣದಿಂದಲೇ ವೆಂಕಟಾಚಾರ್ಯರ ಕೊಲೆಗೆ ಕಾರಣರಾದವರಾರೆಂಬುವುದನ್ನು ಪತ್ತೆಹಚ್ಚುವ ಕೆಲಸ ನಡೆಯಬೇಕು. ಇದು ನನ್ನ ಆಜ್ಞೆ . (ದನಿ ತಗ್ಗಿಸಿ) ವೈದ್ಯ ಸುಕ್ಷೇಮರ ಕೊಲೆಯನ್ನು ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ ಮಂತ್ರಿಗಳೇ. ನಿನ್ನೆ ಬೆಳಗ್ಗೆ ತಾನೇ ಆ ದಿವ್ಯೌಷಧವನ್ನು ಅವರ ಸಮ್ಮುಖದಲ್ಲೇ ಪ್ರಜೆಗಳೆಲ್ಲರಿಗೂ ವಿತರಿಸಿದ್ದೆವು. ಅವರನ್ನು ಬಹು ಸಂತೋಷದಿಂದಲೇ ಸನ್ಮಾನಿಸಿದ್ದೆವು. ಆದರೆ ಇಂದು ನೋಡಿದರೆ ಅವರಿಲ್ಲ. ನನ್ನ ರಾಜ್ಯದಿಂದ ಸಾವನ್ನು ಕಿತ್ತೊಗೆಯಲಿಕ್ಕಾಗಿಯೇ ಬದುಕಿದ್ದರೇನೋ ಎನಿಸುತ್ತಿದೆ ನನಗೆ.
ಮಂತ್ರಿ– ಯಾರ ಬದುಕೂ ಶಾಶ್ವತವಲ್ಲ ಬಿಡಿ ಪ್ರಭೂ. ನಾನಿನ್ನು ತೆರಳುತ್ತೇನೆ.
(ಅರಸರಿಗೆ ವಂದಿಸಿ ತೆರಳುತ್ತಾನೆ. ಅರಸ ಹಾಗೆಯೇ ಸ್ವಲ್ಪಹೊತ್ತು ಯೋಚಿಸುತ್ತಾ ನಿಂತುಕೊಳ್ಳುತ್ತಾನೆ)
*******************************************************
ಅಂಕ– ೧೪
(ಅತಿಥಿಗೃಹ. ಕೈಯ್ಯಲ್ಲಿ ದೊಡ್ಡ ಗ್ರಂಥವನ್ನು ಹಿಡಿದುಕೊಂಡಿರುವ ಸುಕಾಮ, ಅದರ ಪುಟಗಳನ್ನು ಅತ್ತಿಂದಿತ್ತ ವೇಗವಾಗಿ ತಿರುಚುತ್ತಿದ್ದಾನೆ. ಆತನ ಮುಖದಲ್ಲಿ ಅತಿಯಾದ ಆತಂಕ ತುಂಬಿದೆ)
ಸುಕಾಮ– ಅಯ್ಯೋ! ಎಲ್ಲಿ ಹೋಯಿತು? ಆ ಅಧ್ಯಾಯವೇ ಕಾಣಿಸುತ್ತಿಲ್ಲವಲ್ಲ!
(ಮತ್ತೆ ಮತ್ತೆ ವೇಗವಾಗಿ ಪುಟಗಳನ್ನು ತಿರುಗಿಸುತ್ತಲೇ ಹೋಗುತ್ತಾನೆ)
ಹೋ! ಇದು ಆ ಸುಕ್ಷೇಮನದ್ದೇ ಕೆಲಸ. ಸಾಯುವುದಕ್ಕೆ ಮೊದಲು ನನ್ನನ್ನು ಸಾಯಿಸಿಹೋಗಿದ್ದಾನೆ ಮುಟ್ಠಾಳ! ಆ ದಿವ್ಯೌಷಧ ತಯಾರಿಸುವುದು ಹೇಗೆಂಬ ವಿಧಾನ ಬರೆದಿದ್ದ ಅಧ್ಯಾಯವನ್ನೇ ಹರಿದಿದ್ದಾನಲ್ಲ ದ್ರೋಹಿ! ಕೊಂದದ್ದೇ ಒಳ್ಳೆಯದಾಯಿತು ಆ ನಾಯಿಯನ್ನು. (ಒಂದು ಕ್ಷಣ ಯೋಚಿಸಿ) ಇಲ್ಲ, ಕೊಲ್ಲಬಾರದಿತ್ತು. ನಾನು ಅವನನ್ನು ಮಾತ್ರ ಕೊಂದದ್ದಲ್ಲ, ಔಷಧ ತಯಾರಿಸುವ ವಿಧಾನವನ್ನೂ ಕೂಡಾ. ಈ ಕಾರಣಕ್ಕಾಗಿಯಾದರೂ ಅವನನ್ನು ಉಳಿಸಿಕೊಳ್ಳಬೇಕಿತ್ತು. (ಮತ್ತೆ ಪುನಃ ಯೋಚಿಸಿ) ಅಲ್ಲ, ನಾನು ಅವನನ್ನು ಉಳಿಸಿದರೂ ಕೂಡಾ ಅವನು ನನ್ನನ್ನು ಉಳಿಸುತ್ತಿರಲಿಲ್ಲ. ಅಧ್ಯಾಯವನ್ನೇ ಹರಿದಿಟ್ಟುಕೊಂಡಿದ್ದಾನೆಂದ ಮೇಲೆ ನನ್ನ ಪ್ರಾಣ ತೆಗೆಯಲೂ ಸಂಚಕಾರ ಹೂಡಿದ್ದಾನೆಂದೇ ಅರ್ಥವಲ್ಲವೇ? ಅವನನ್ನು ಕೊಂದದ್ದೇ ಸರಿ, ಕೊಂದದ್ದೇ ಸರಿ.
(ಅಷ್ಟರಲ್ಲಿ ಇಬ್ಬರು ದೂತರು ಅಲ್ಲಿಗೆ ಬರುತ್ತಾರೆ)
ದೂತ ೧– ಸುಕಾಮರೇ, ತಾವು ಹೇಳಿದಂತೆಯೇ ಅರಸರೆದುರು ಅಭಿನಯಿಸಿದ್ದೇವೆ (ನಗುತ್ತಾ) ಕೆಲಸ ಮುಗಿದ ಮೇಲೆ ಇನ್ನೂ ಹಣ ಕೊಡುತ್ತೇನೆ ಎಂದಿದ್ದಿರಲ್ಲ, ಅದನ್ನು ಕೇಳುವುದಕ್ಕೆ ನಾವು ಬಂದದ್ದು.
ದೂತ ೨– ಎಲ್ಲಾ ತಮ್ಮಿಚ್ಛೆಯಂತೆಯೇ ನಡೆದಿದೆಯೆಂದಮೇಲೆ ನೀವು ಬಹಳ ಸಂತೋಷದಲ್ಲಿಯೇ ಇರಬೇಕಲ್ಲ. (ತಲೆಯನ್ನು ತುರಿಸುತ್ತಾ) ಅಂದಮೇಲೆ ನಮಗೂ ಹೆಚ್ಚಿನ ಮೊತ್ತ ಸಂದಾಯವಾದೀತೆಂದು ತೋರುತ್ತದೆ.
ಸುಕಾಮ– (ಕೋಪದಿಂದ ಅವರನ್ನೇ ದಿಟ್ಟಿಸುತ್ತಾ) ಹೌದೌದು, ಸರಿಯಾಗಿ ಹೇಳಿದಿರಿ! ನಾನು ಬಹಳ ಸಂತೋಷವಾಗಿದ್ದೇನೆ. ಎಷ್ಟು ಸಂತೋಷವೆಂದರೆ, ಆ ಸುಕ್ಷೇಮವನ್ನು ಚೂರಿಯಿಂದ ತಿವಿದಂತೆ ನಿಮ್ಮನ್ನೂ ತಿವಿಯಬೇಕೆಂದೆನಿಸುತ್ತಿದೆ.
ದೂತ- ಯಾಕೆ? ನಮ್ಮಿಂದ ಏನಾದರೂ ತಪ್ಪಾಗಿದೆಯೇ? ಎಲ್ಲಾ ನೀವು ಹೇಳಿಕೊಂಟ್ಟಂತೆಯೇ ಮಾಡಿದ್ದೇವಲ್ಲ.
ಸುಕಾಮ– ನಿಮ್ಮಿಂದಲ್ಲವೋ ತಪ್ಪಾಗಿರುವುದು, ನನ್ನಿಂದ ಮಾಡಬಾರದ್ದನ್ನು ಮಾಡಿರುವುದು ನಾನು
ದೂತ- ನೀವೇನು ಹೇಳುತ್ತಿದ್ದೀರೆಂದೇ ನಮಗೆ ಅರ್ಥವಾಗುತ್ತಿಲ್ಲ. ನಮಗೆ ಕೊಡಬೇಕಾದ ಹಣ ಕೊಡದೇ ಇರುವುದಕ್ಕೆ ಹೀಗೆಲ್ಲಾ ಹೇಳುತ್ತಿದ್ದೀರೆಂದು ತೋರುತ್ತದೆ. ಹಣ ಕೊಟ್ಟರೆ ಸರಿ. ಇಲ್ಲವಾದರೆ ಈಗಲೇ ಅರಸರ ಬಳಿಹೋಗಿ ಎಲ್ಲಾ ವಿಚಾರವನ್ನೂ ತಿಳಿಸುತ್ತೇವೆ.
ಸುಕಾಮ– ಏನೋ, ನೀವಿಬ್ಬರೂ ನನ್ನನ್ನೇ ಹೆದರಿಸುತ್ತೀರೇನೋ? ಅರಸನಂತೆ ಅರಸ! ನಾನ್ಯಾವನಿಗೂ ಹೆದರುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಹೋಗಿ.
(ದೂತರಿಬ್ಬರ ಮುಖದಲ್ಲೂ ಕೋಪ ಮೂಡುತ್ತದೆ. ಆವೇಶಭರಿತರಾದಂತೆ ಅವರಿಬ್ಬರೂ ಅಲ್ಲಿಂದ ತೆರಳುತ್ತಾರೆ)
ಹೋ! ಆವೇಶದ ಭರದಲ್ಲಿ ನಾನು ಹೀಗೇಕೆ ಮಾತನಾಡಿದೆನೋ? ಈಗ ಇವರಿಬ್ಬರೂ ಅರಸರಿಗೆ ವಿಷಯ ತಿಳಿಸಿದರೆಂದರೆ ಮುಗಿಯಿತು ನನ್ನ ಕಥೆ. ಆ ದಿವ್ಯೌಷಧವೂ ನನ್ನ ಕೈ ಬಿಟ್ಟು ಹೋಗಿಯಾಗಿದೆ. ನಾನಿನ್ನು ಇಲ್ಲಿದ್ದು ಪ್ರಯೋಜನವಿಲ್ಲ. ಈಗಲೇ ತಪ್ಪಿಸಿಕೊಳ್ಳುತ್ತೇನೆ.
(ತನ್ನ ಬಟ್ಟೆಗಳೆಲ್ಲವನ್ನೂ ಗಂಟು ಕಟ್ಟಿಕೊಂಡು, ಗ್ರಂಥವನ್ನೂ ಹಿಡಿದುಕೊಂಡು ಅಲ್ಲಿಂದ ಆತುರಾತುರವಾಗಿ ಹೊರಟುಹೋಗುತ್ತಾನೆ)
*******************************************************
ಅಂಕ– ೧೫
(ಮಂತ್ರಿ ತನ್ನ ಜೊತೆಗೆ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಅರಸನಿರುವಲ್ಲಿಗೆ ಬರುತ್ತಾನೆ)
ಮಂತ್ರಿ– ವಂದಿಸಿಕೊಂಡಿದ್ದೇನೆ ಪ್ರಭೂ.
(ಅರಸ ಕುತೂಹಲದಿಂದ ಮಂತ್ರಿಯ ಜೊತೆಗಿದ್ದ ವ್ಯಕ್ತಿಯತ್ತ ನೋಡುತ್ತಾನೆ. ಆ ವ್ಯಕ್ತಿ ಅರಸನಿಗೆ ವಂದಿಸುತ್ತಾನೆ)
ಅರಸ– ಮಂತ್ರಿಗಳೇ, ಈ ವ್ಯಕ್ತಿ ಯಾರೆಂದು ತಿಳಿಯಲಿಲ್ಲ. ವೈದ್ಯ ವೆಂಕಟಾಚಾರ್ಯರ ಹತ್ಯೆಗೆ ಸಂಬಂಧಿಸಿದವನೋ ಹೇಗೆ?
ಮಂತ್ರಿ– ತಮ್ಮ ಊಹೆ ನಿಜ ಪ್ರಭೂ. ಈತನ ಹೆಸರು ಗೋಪಾಲ. ವೆಂಕಟಾಚಾರ್ಯರು ಕೊಲೆಯಾದ ದಿನ ಬೆಳಗ್ಗೆ ಈತ ಅವರಲ್ಲಿ ಔಷಧವನ್ನು ಪಡೆದಿದ್ದನಂತೆ. ಇವನಿಂದ ಏನಾದರೂ ಮಾಹಿತಿ ದೊರಕಬಹುದೆಂದು ಕರೆದುಕೊಂಡು ಬಂದೆ.
ಅರಸ– (ಗೋಪಾಲನತ್ತ ತಿರುಗಿ) ನಿನಗೆ ವೈದ್ಯರ ಕೊಲೆಯ ಬಗ್ಗೆ ಏನು ಗೊತ್ತು ಹೇಳು?
ಗೋಪಾಲ– ಅವರ ಕೊಲೆ ಹೇಗಾಯಿತೆಂದು ನನಗೆ ತಿಳಿದಿಲ್ಲ ಪ್ರಭು. ಆದರೆ ಸತ್ತವರನ್ನು ಬದುಕಿಸುವ ಔಷಧ ಅವರ ಬಳಿ ಇತ್ತೆಂಬ ಅನುಮಾನ ನನ್ನದು
ಅರಸ– ಅದು ಹೇಗೆ ಹೇಳುತ್ತಿ?
ಗೋಪಾಲ– ಅದೇ, ವೆಂಕಟಾಚಾರ್ಯರು ಕೊಲೆಯಾದರಲ್ಲ, ಆದಿನ ಬೆಳಿಗ್ಗೆ ನಾನು ಔಷಧಿಗೆಂದು ಅವರ ಬಳಿ ಹೋಗಿದ್ದೆ. ಯಾವುದೋ ಗುಳಿಗೆಯನ್ನು ಕೊಟ್ಟು, ಅಲ್ಲೇ ಸೇವಿಸುವಂತೆ ಹೇಳಿದರು. ಅದನ್ನು ಸೇವಿಸಿದ್ದೇ ತಡ, ನನ್ನ ಪ್ರಾಣವೇ ಹೋದಂತಹ ಅನುಭವ ನನ್ನದಾಗಿತ್ತು. ಅದಾದ ಮೇಲೆ ಏನಾಯಿತೋ ನನಗೆ ತಿಳಿಯದು. ಪ್ರಜ್ಞೆ ಬಂದ ಮೇಲೆ ವೈದ್ಯರನ್ನೇ ಕೇಳಿದೆ. ಅದು ಔಷಧಿಯಿಂದಾದ ಪರಿಣಾಮ ಎಂದಷ್ಟೇ ಅವರು ಹೇಳಿದ್ದು. ಹಣ ಕೊಟ್ಟಾಗಲೂ ತೆಗೆದುಕೊಳ್ಳದೆ ಅವರು ಹೇಳಿದ ಮಾತಿದೆಯಲ್ಲ ಅರಸರೇ, ಅದು ನನಗೆ ಈಗಲೂ ನೆನಪಿದೆ. ’ಈ ಲೋಕದ ಬಹುದೊಡ್ಡ ರೋಗವನ್ನು ಗೆದ್ದು, ಎದ್ದು ಕುಳಿತೆಯಲ್ಲ, ಅದುವೇ ನನಗೆ ಸಂತೋಷ ’ ಎಂದು ಹೇಳಿದ್ದರು ಅರಸರೇ. ಆವಾಗಲೇ ನನಗೆ ಅನುಮಾನ ಬಂದಿತ್ತು. ಯಾವಾಗ ಇಬ್ಬರು ವೈದ್ಯರು ನಮ್ಮ ರಾಜ್ಯಕ್ಕೆ ಭೇಟಿ ಇತ್ತರೋ, ಅವರಲ್ಲಿ ಸಾವೇ ಬರದ ಔಷಧವಿತ್ತೋ, ಆವಾಗ ನನ್ನ ಅನುಮಾನ ಮತ್ತಷ್ಟು ಬಲಗೊಂಡಿತು.
ಮಂತ್ರಿ– ನಿನಗೆ ಅಷ್ಟು ಅನುಮಾನ ಬಂದ ಮೇಲೂ ಸುಮ್ಮನಿದ್ದದ್ದು ಯಾಕೆ? ಅಂದೇ ಅರಸರಲ್ಲಿಗೆ ಬಂದು ತಿಳಿಸಬಹುದಿತ್ತಲ್ಲ.
ಗೋಪಾಲ– ತಿಳಿಸಲು ಬಂದಿದ್ದೆ ಮಂತ್ರಿಗಳೇ. ಅರಮನೆಯ ದ್ವಾರದವರೆಗೂ ಬಂದಿದ್ದೆ. ಅಲ್ಲಿಂದ ಮುಂದಕ್ಕೆ ಕಾಲಿಡಲು ಕಾವಲುಗಾರರು ಬಿಡಲಿಲ್ಲ. ಲಂಚ ಕೇಳಿದರು. ಬಡವ ನಾನು. ನನ್ನಲ್ಲಿ ಅವರು ಕೇಳಿದಷ್ಟು ಹಣ ಇರಲಿಲ್ಲ. ಹಾಗೆಯೇ ಹಿಂದೆ ಹೋಗುವಂತಾಯಿತು.
ಅರಸ– ನೋಡಿದಿರಾ ಮಂತ್ರಿಗಳೇ, ದೀಪದ ಕೆಳಗಿನ ಕತ್ತಲನ್ನು?! ಆ ದಿನ ಪಾಳಿಯಲ್ಲಿದ್ದ ಕಾವಲುಗಾರರಾರೆಂಬುವುದನ್ನು ಈಗಲೇ ತಿಳಿದು, ಅವರನ್ನು ಸೆರೆಮನೆಗಟ್ಟಿ.
ಮಂತ್ರಿ– ಇವನ ಮಾತಿನಲ್ಲಿ ಇನ್ನೊಂದು ಅಂಶವನ್ನು ಗಮನಿಸಿದ್ದೀರಾ ಪ್ರಭು. ವೆಂಕಟಾಚಾರ್ಯರ ಕೊಲೆ, ಸುಕ್ಷೇಮ- ಸುಕಾಮರ ಪ್ರವೇಶ- ಈ ಎರಡಕ್ಕೂ ಸಾಮ್ಯತೆ ಇದೆ ಎನ್ನುವ ರೀತಿ ಮಾತನಾಡುತ್ತಿದ್ದಾನೆ.
ಅರಸ– ಅದು ನಿಜವಿರಲೇಬೇಕು ಮಂತ್ರಿಗಳೇ. ವೆಂಕಟಾಚಾರ್ಯರಲ್ಲಿದ್ದ ಔಷಧಿಯನ್ನು ಸ್ವಾಧೀನಪಡಿಸಿಕೊಂಡು ವೇಷ ಮರೆಸಿಕೊಂಡು ಬಂದ ಖದೀಮರೇ ಈ ಸುಕ್ಷೇಮ- ಸುಕಾಮರಿರಬೇಕು.
ದೂತ ೧, ದೂತ ೨– (ಒಟ್ಟಾಗಿ) ಅದು ನಿಜ ಪ್ರಭುಗಳೇ.
(ಎಲ್ಲರೂ ಧ್ವನಿ ಬಂದತ್ತ ನೋಡುತ್ತಾರೆ. ಅಲ್ಲಿ ದೂತರಿಬ್ಬರು ನಿಂತಿರುತ್ತಾರೆ)
ಅರಸ– ಅದು ನಿಮಗೆ ಹೇಗೆ ಗೊತ್ತು?
ದೂತ ೧– ಈಗ ತಾನೇ ಸುಕಾಮರಾಡಿದ ಮಾತನ್ನು ನಾವೇ ಕದ್ದು ಕೇಳಿಸಿಕೊಂಡಿದ್ದೇವೆ ಪ್ರಭು. ವೈದ್ಯರಿಂದ ಔಷಧವನ್ನು ವಶಪಡಿಸಿಕೊಂಡದ್ದು ಈ ಸುಕ್ಷೇಮ– ಸುಕಾಮರೇ.
ದೂತ ೨– ಮಾತ್ರವಲ್ಲ, ಸುಕ್ಷೇಮರನ್ನು ಕೊಂದದ್ದೂ ಕೂಡಾ ಈ ಸುಕಾಮರೇ. ಅವರಿಬ್ಬರೂ ಹೊರದೇಶದಿಂದ ಬಂದ ವೈದ್ಯರುಗಳೇನೂ ಅಲ್ಲ. ಎಲ್ಲಾ ಬರಿ ವೇಷ. ಅವರು ನಮ್ಮದೇ ರಾಜ್ಯದ ದರೋಡೆಕೋರರು.
ಅರಸ– ಬರೀ ಮೋಸ, ಬರೀ ಮೋಸ. ಇಲ್ಲ, ಆ ಸುಕಾಮನನ್ನು ನಾನು ಸುಮ್ಮನೆ ಬಿಡುವುದಿಲ್ಲ. ಈಗಲೇ ಅವನನ್ನು ಎಳೆದು ತನ್ನಿ. (ದೂತರು ಅಲ್ಲಿಂದ ಹೊರಡುತ್ತಾರೆ)
(ಗೋಪಾಲನತ್ತ ತಿರುಗಿ) ನೀನಿನ್ನು ಹೊರಡಬಹುದು. ಹ್ಞಾ, ನೀನಿತ್ತ ಈ ಮಾಹಿತಿಗೆ ಪ್ರತಿಫಲವಾಗಿ ನೂರು ವರಹಗಳನ್ನು ಭಂಡಾರಕನಿಂದ ತೆಗೆದುಕೊಂಡು ಹೋಗು.
ಗೋಪಾಲ– ಸರಿ ಪ್ರಭು.
(ಅರಸನಿಗೆ ವಂದಿಸಿ, ತೆರಳುತ್ತಾನೆ)
ಅರಸ– ಇದೆಲ್ಲ ಏನೆಂದೇ ಅರ್ಥವಾಗುತ್ತಿಲ್ಲ ಮಂತ್ರಿಗಳೇ. ಕೊಲೆ, ಮೋಸ, ವಂಚನೆ ಇದೆಲ್ಲಾ ಯಾಕಾಗಿ ನಡೆಸುತ್ತಿದ್ದಾರೋ?
ಮಂತ್ರಿ– ಕೀರ್ತಿ ಮತ್ತು ಸಂಪತ್ತು ಇದೆಯಲ್ಲಾ ಪ್ರಭು, ಇದು ಏನು ಬೇಕಾದರೂ ಮಾಡಿಸಿಬಿಡುತ್ತದೆ.
(ಅಷ್ಟರಲ್ಲಿ ದೂತರು ಓಡೋಡಿ ಬರುತ್ತಾರೆ)
ದೂತ ೧– ಸುಕಾಮ ಅತಿಥಿಗೃಹದಲ್ಲಿ ಇಲ್ಲ ಪ್ರಭೂ.
ದೂತ ೨– ಅರಮನೆಯಿಡೀ ಹುಡುಕಾಡಿ ಬಂದೆವು. ಎಲ್ಲೂ ಕಾಣಿಸುತ್ತಿಲ್ಲ.
ಮಂತ್ರಿ– ಹಾಗಾದರೆ ನಮಗೆ ನಿಜವಿಚಾರ ತಿಳಿದಿದೆಯೆಂಬುವುದು ಅವನಿಗೆ ತಿಳಿದಿರಬೇಕು. ಈ ಕಾರಣಕ್ಕಾಗಿಯೇ ಪಲಾಯನಗೈದಿದ್ದಾನೆ ಪ್ರಭೂ.
ಅರಸ– ಈ ತಕ್ಷಣವೇ ಕಾವಲು ಭಟರನ್ನು ಕಳುಹಿಸಿ, ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಹುಡುಕಲು ಹೇಳಿ. ಅವನು ಎಲ್ಲಿಯೂ ತಪ್ಪಿಸಿಕೊಳ್ಳಕೂಡದು. ಹ್ಞೂ! ಬೇಗ
(ಮಂತ್ರಿ ಹೊರಡಲನುವಾಗುತ್ತಾನೆ. ಆಗಲೇ ಕಾವಲುಭಟರು ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಬರುತ್ತಾರೆ)
ಕಾವಲುಭಟ ೧– ಪ್ರಭೂ, ಈ ವ್ಯಕ್ತಿ ಅರಮನೆಯ ದಕ್ಷಿಣದ್ವಾರದ ಬಳಿಯಿಂದ ಓಡಿಹೋಗುತ್ತಿದ್ದ. ಅಲ್ಲದೆ, ಅನುಮಾನಾಸ್ಪದವಾಗಿ ಮಾತನಾಡುತ್ತಿದ್ದಾನೆ. ಏನು ಹೆಸರೆಂದು ಕೇಳಿದರೆ ಸರಿಯಾದ ಉತ್ತರವನ್ನೇ ಕೊಡುತ್ತಿಲ್ಲ .
(ಅರಸ ಮತ್ತು ಮಂತ್ರಿ ಆ ವ್ಯಕ್ತಿಯನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸುತ್ತಾರೆ.)
ಮಂತ್ರಿ– ಎಲ್ಲಿ ಹೋಯಿತು ಸುಕಾಮ, ನಿನ್ನ ಗಡ್ಡ-ಮೀಸೆ, ಹಣೆಯಲ್ಲಿನ ನಾಮ?
ವ್ಯಕ್ತಿ– (ತೊದಲುತ್ತಾ) ನಾನು ಸುಕಾಮನಲ್ಲ.
ಮಂತ್ರಿ– ಮೂರ್ಖ! ನೀನು ಸುಳ್ಳು ಹೇಳಿದರೂ ಅರಸರು ಅಂದು ನಿನಗಿತ್ತ ಈ ಹಾರ ಸುಳ್ಳು ಹೇಳಲಾರದು.
(ಸುಕಾಮನ ಕುತ್ತಿಗೆಯಲ್ಲಿದ್ದ ಹಾರವನ್ನು ಮಂತ್ರಿ ಕೈಯಲ್ಲಿ ಹಿಡಿದು ತೋರಿಸುತ್ತಾನೆ)
ಅರಸ– ಏನೋ? ಮಾಡಬಾರದ ಅನರ್ಥವನ್ನೆಲ್ಲಾ ಮಾಡಿ, ಈಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೀಯಾ? ವೆಂಕಟಾಚಾರ್ಯರ ಕೊಲೆ, ಪಿಳ್ಳಾರಿ ಗೋವಿಂದನ ಕೊಲೆ, ಸುಕ್ಷೇಮನ ಕೊಲೆ, ಸಾಲದ್ದಕ್ಕೆ ಈ ಕಳ್ಳವೇಷ. ನಿನ್ನ ಈ ಮೋಸಕ್ಕೆ ತಕ್ಕ ಶಾಸ್ತಿಯನ್ನೇ ಮಾಡುತ್ತೇನೆ ಇರು.
ಸುಕಾಮ– (ಸಣ್ಣ ಧ್ವನಿಯಲ್ಲಿ) ಪ್ರಭೂ, ತಿಳ್ಳಾರಿ ಗೋವಿಂದನನ್ನು ನಾನು ಮತ್ತು ಸುಕ್ಷೇಮ ಜೊತೆಸೇರಿ ಕೊಂದೆವು. ಸುಕ್ಷೇಮನನ್ನು ಕೊಂದವನು ನಾನೇ. ಆದರೆ ವೆಂಕಟಾಚಾರ್ಯರ ಸಾವಿಗೆ ನಾನು ಕಾರಣನಲ್ಲ. ಅವರನ್ನು ಕೊಂದದ್ದು ಆ ಪಿಳ್ಳಾರಿ ಗೋವಿಂದನೇ.
ಅರಸ– ಏನು ಪಿಳ್ಳಾರಿ ಗೋವಿಂದನೇ? ಈ ಸಾವಿಲ್ಲದ ಔಷಧಕ್ಕಾಗಿ ಅದೆಷ್ಟು ಸಾವು ಸಂಭವಿಸಿದೆಯೋ? ಈಗಲೇ ಈ ಧೂರ್ತನನ್ನು ಸೆರೆಮನೆಗೆ ತಳ್ಳಿ. ಇನ್ನು ಈತನನ್ನು ಉಳಿಸಿದೆವೆಂದಾದರೆ ಆ ದೇವರೂ ನಮ್ಮನ್ನು ಕ್ಷಮಿಸಲಾರ. ಈತನನ್ನು ಒಂದೇ ಸಲಕ್ಕೆ ಸಾಯಿಸುವುದೂ ತರವಲ್ಲ. ಚಿತ್ರಹಿಂಸೆ ಕೊಟ್ಟು ಸಾಯಿಸಬೇಕು. ಇದು ರಾಜಾಜ್ಞೆ . ಹ್ಞೂ, ಕರೆದುಕೊಂಡು ಹೋಗಿ.
(ಕಾವಲು ಭಟರು ಕರೆದೊಯ್ಯಲು ಮುಂದಾಗುತ್ತಾರೆ)
ಸುಕಾಮ– ದಯಮಾಡಿ ನನ್ನನ್ನು ಕ್ಷಮಿಸಿ ಪ್ರಭೂ. ನಾನು ಸಂಪತ್ತು ಗಳಿಸಬೇಕು… ಪ್ರಸಿದ್ಧನಾಗಬೇಕು…
(ಸುಕಾಮ ಬೊಬ್ಬೆ ಹೊಡೆಯುತ್ತಿರುವಂತೆಯೇ, ಕಾವಲು ಭಟರು ಮತ್ತು ದೂತರು ಅವನನ್ನು ಎಳೆದುಕೊಂಡು ಹೋಗುತ್ತಾರೆ. ಅರಸ ಮತ್ತು ಮಂತ್ರಿ ಅವನನ್ನೇ ನೋಡುತ್ತಾ ನಿಂತುಕೊಳ್ಳುತ್ತಾರೆ)
ಮೇಳ ೧– ಕಳ್ಳವೇಷವು ಬಯಲು
ಸುಳ್ಳೆಲ್ಲಾ ಬೆತ್ತಲು
ಮುತ್ತಿರುವ ಕತ್ತಲು
ಸರಿಯುತ್ತಿದೆ ಸುತ್ತಲೂ
ಮೇಳ ೨– ಹಾಗಂದುಕೊಳ್ಳದಿರಿ
ಸಂತೋಷಗೊಳ್ಳದಿರಿ
ಸತ್ತ ಕತ್ತಲು ಮತ್ತೆ
ಹುತ್ತವನು ಕಟ್ಟುವುದು
ಎಂಬ ಸತ್ಯವನು
ಎಂದಿಗೂ ಮರೆಯದಿರಿ
ಅವ ಸತ್ತ ಮಾತ್ರಕ್ಕೆ
ಸಮಸ್ಯೆ ಸಾಯುವುದಿಲ್ಲ
ಹುಟ್ಟಿಕೊಂಡ ತೊಂದರೆಗೆ
ಸಿಲುಕುವವರಿನ್ನೂ ಇಹರಲ್ಲ
*******************************************************
ಅಂಕ– ೧೬
ಮೇಳ ೧– ಕಳೆದುಹೋಗಿದೆಯಾಗಲೇ ಹದಿನೈದು ವರುಷ
ಭಾಸವಾಗುತಿದೆ ವರುಷದಂತೆ ಬರಿ ಒಂದು ನಿಮಿಷ
ಆಹಾರವಿಲ್ಲ, ಹನಿ ನೀರಿಗೂ ಕೊರತೆ
ಹಸಿವಿನಾ ಯಾತನೆಯು ಮುಗಿಯದಾ ಕವಿತೆ
ಮೇಳ ೨– ಕಾರಣನು ಅರಸನೇ ನಮ್ಮ ಈ ಯಾತನೆಗೆ
ಅವನಿತ್ತ ಔಷಧವೇ ಈ ತೊಂದರೆಯ ಮೂಲ
ಮೇಳ ೧– ಅವನಿತ್ತ ಔಷಧವೇ ತೊಂದರೆಯ ಮೂಲ
ಆ ಮೂರ್ಖ ಅರಸನೇ ಈ ತೊಂದರೆಯ ಮೂಲ || ೨||
(೧೫ ವರ್ಷಗಳ ನಂತರ. ಅರಸ ಮತ್ತು ಮಂತ್ರಿ ಅರಮನೆಯ ಮೇಲಂತಸ್ತಿನಲ್ಲಿ ಮಾತನಾಡುತ್ತಿದ್ದಾರೆ. ಅವರಿಬ್ಬರ ಮುಖದಲ್ಲೂ ಗಂಭೀರತೆ ತುಂಬಿದೆ)
ಅರಸ– ಜನರ ಆಕ್ರೋಶ ಇನ್ನೂ ಕಡಿಮೆಯಾಗಿರುವಂತೆ ಕಾಣುತ್ತಿಲ್ಲವಲ್ಲ ಮಂತ್ರಿ.
ಮಂತ್ರಿ– ಇಲ್ಲ ಪ್ರಭೂ, ಅವರ ಅಗತ್ಯಕ್ಕನುಗುಣವಾದ ಆಹಾರ ದೊರೆಯುವವರೆಗೂ ಅವರ ಕೋಪ ಕಡಿಮೆಗೊಳ್ಳುವ ಸಾಧ್ಯತೆಯಿಲ್ಲ.
ಅರಸ– ಅಲ್ಲ ಮಂತ್ರಿ, ಆ ಸಾವಿಲ್ಲದ ಔಷಧಿ ಇಂದು ಏನೆಲ್ಲಾ ಪರಿಣಾಮಗಳನ್ನು ಹುಟ್ಟುಹಾಕಿದೆ ನೋಡಿ. ಜನರ ಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಹಾಗೆಂದು ಅವರೇನೂ ದುಡಿಯಲು ಶಕ್ತರಲ್ಲ. ಭಾಗಶಃ ಜನರು ಮುದುಕರು. ದುಡಿಯಲು ಕೈಗಳಿಲ್ಲ, ತಿನ್ನಲು ಹೊಟ್ಟೆಯಿದೆ ಎಂಬಂತಹ ಪರಿಸ್ಥಿತಿ. ನಮ್ಮ ಖಜಾನೆಯೇ ಬರಿದಾಗಿದೆ. ಇನ್ನು ಅವರ ಹಸಿವನ್ನು ನೀಗಿಸುವುದು ಹೇಗೋ ನಾನರಿಯೆ. ಮಂತ್ರಿಗಳೇ, ನೀವು ಹೇಗಾದರೂ ಅವರನ್ನು ಒಪ್ಪಿಸಿ ಬನ್ನಿ, ಹೋಗಿ.
ಮಂತ್ರಿ– ಇಲ್ಲ ಪ್ರಭೂ, ಪ್ರಯೋಜನವಿಲ್ಲ. ಹಸಿವಾದ ಹೊಟ್ಟೆ ಆಹಾರವನ್ನು ಬಯಸುತ್ತದೆಯೇ ಹೊರತು ಬೋಧನೆಯನ್ನಲ್ಲ.
ಅರಸ– ಮತ್ತೇನು ಮಾಡುವುದು? ನೀವೇ ಹೇಳಿ ಮಂತ್ರಿಗಳೇ.
ಮಂತ್ರಿ– ಇನ್ನಿರುವುದು ಒಂದೇ ಪರಿಹಾರ ಪ್ರಭೂ. ದುಡಿಯಲಾಗದ ಮುದುಕರನ್ನು ಈ ರಾಜ್ಯ ಬಿಟ್ಟು ತೆರಳುವಂತೆ ಆಜ್ಞೆ ಹೊರಡಿಸಬೇಕು.
ಅರಸ– ಅದನ್ನು ಜನ ಒಪ್ಪಿಕೊಳ್ಳುತ್ತಾರೆಂದು ನನಗನ್ನಿಸುತ್ತಿಲ್ಲ.
ಮಂತ್ರಿ– ಹಾಗೇನಾದರೂ ಒಪ್ಪದಿದ್ದರೆ ಅಂತಹವರನ್ನು ಕೊಲ್ಲುವುದು ಬಿಟ್ಟು ಬೇರೇನೂ ಮಾರ್ಗ ಉಳಿದಿಲ್ಲ ಪ್ರಭೂ.
ಅರಸ– (ಅತ್ಯಂತ ಬೇಸರದಿಂದ) ಛೇ! ಸಾವಿಲ್ಲದ ಔಷಧ ಹುಟ್ಟುಹಾಕಿರುವ ಈ ದುರಂತ ಎಂತೆಂತಹ ಕ್ರೂರ ಕೃತ್ಯಗಳನ್ನು ನನ್ನಿಂದ ಮಾಡಿಸಲಿದೆಯೋ? ಸಾವಿಲ್ಲದ ಔಷಧಿಯಿಂದ ನನ್ನ ಪ್ರಜೆಗಳೆಲ್ಲರೂ ಚಿರಕಾಲ ಬದುಕುವಂತಾಗಬೇಕು ಎಂದು ಬಯಸಿದವನು ನಾನು. ಆದರೆ ಇಂದು ಆ ಔಷಧವೇ ಜನರಿಗೆ ಬಲವಂತದ ಸಾವನ್ನು ತಂದೊಡ್ಡುತ್ತಲಿದೆಯಲ್ಲ? ಇದನ್ನು ನಾನು ಹೇಗೆ ಸಹಿಸಿಕೊಳ್ಳ ಬೇಕೆಂದೇ ತಿಳಿಯುತ್ತಿಲ್ಲ.
ಮಂತ್ರಿ– ಈಗಲಾದರೂ ಆಹಾರ ಸಮಸ್ಯೆ ಮಾತ್ರ ಇದೆ. ಮುಂದೆ ಏನೆಲ್ಲಾ ಸಮಸ್ಯೆ ಉದ್ಭವವಾದೀತೆಂದು ಸ್ವಲ್ಪ ಯೋಚಿಸಿ ನೋಡಿ ಪ್ರಭೂ. ಒಬ್ಬ ವ್ಯಕ್ತಿಯ ತಲೆಯ ಮೇಲೆಯೇ ಇನ್ನೊಬ್ಬ ವ್ಯಕ್ತಿ, ಆ ವ್ಯಕ್ತಿಯ ಮೇಲೆ ಮತ್ತೊಬ್ಬ ವ್ಯಕ್ತಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ. ಆದ್ದರಿಂದಲೇ ನಾನು ಹೇಳಿದ್ದು, ಮುದುಕರನ್ನು ರಾಜ್ಯದಿಂದ ಹೊರಕಳಿಸುವುದೇ ಒಳ್ಳೆಯದು ಪ್ರಭು. ಒಪ್ಪದವರನ್ನು ಕೊಲ್ಲುವುದು ಅನಿವಾರ್ಯ. ಮುಂದೆ ಬರುವ ದೊಡ್ಡ ವಿಪತ್ತನ್ನು ಎದುರಿಸಲು ಸಿದ್ಧರಿರುವಿರಾದರೆ ಮಾತ್ರ ಈಗಿನ ನನ್ನ ನಿರ್ಧಾರವನ್ನು ಮುಂದೂಡಬಹುದು.
ಅರಸ– ನಿಮಗೇನನ್ನಿಸುತ್ತದೆಯೋ ಅದರಂತೆ ಮಾಡಿ ಮಂತ್ರಿಗಳೇ. ಏನು ಹೇಳುವ ಸ್ಥಿತಿಯಲ್ಲಿಯೂ ಇಂದು ನಾನಿಲ್ಲ. ಪ್ರಜೆಗಳನ್ನು ಕೊಲ್ಲಬೇಕೆಂಬ ಮಾತೇ ನನ್ನ ಆತ್ಮಸ್ಥೈರ್ಯವನ್ನು ಕುಂದಿಸಿದೆ.
(ಅರಸ ಅಲ್ಲಿಂದ ತೆರಳುತ್ತಾನೆ. ಮಂತ್ರಿಯೂ ಆತನ ಹಿಂದಿನಿಂದಲೇ ತೆರಳುತ್ತಾನೆ)
ಮೇಳ ೨– ಅಲ್ಲೊಬ್ಬ ಮುದುಕ
ಊರು ಬಿಟ್ಟು ಹೋಗ
ಖಡ್ಗದಾ ಏಟಿಗೆ
ಮುದಿದೇಹವು ಭಾಗ
ಮೇಳ ೧– ಅಲ್ಲೊಬ್ಬನ ಕೈ, ಇಲ್ಲೊಬ್ಬನ ಕಾಲು
ಕಲ್ಲಿನ ಹೊಡೆತಕ್ಕೆ ಇವನ ತಲೆ ಹೋಳು
ಮೇಳ ೨– ಕಣ್ಣೀರು ಹರಿಯುತಿದೆ
ನೆತ್ತರು ಸುರಿಯುತಿದೆ
ಜನರ ನೋವಿನ ನದಿಯು
ಕಡಲನ್ನೂ ಮೀರುತಿದೆ
ಮೇಳ ೧– ನುಗ್ಗಿ ಬರುತಿದೆ ಗುಂಪು
ಅರಮನೆಯ ಕಡೆಗೆ
ಸಿಕ್ಕಿದಂತಾಯ್ತು ಸೈನಿಕರು
ಹಾವಿನಾ ಹೆಡೆಗೆ || ೨ ||
*******************************************************
ಅಂಕ– ೧೭
(ಅರಮನೆಯ ಮೇಲಂತಸ್ತು. ಅರಸ ಮತ್ತು ಮಂತ್ರಿಯ ನಡುವಿನ ಮಾತುಕತೆ)
ಅರಸ– ಇದೇನು ಮಂತ್ರಿ, ಜನರು ನನ್ನ ವಿರುದ್ಧವೇ ತಿರುಗಿಬಿದ್ದಂತೆ ಕಾಣಿಸುತ್ತಿದೆಯಲ್ಲ. ಜನರ ದಂಗೆಯನ್ನು ನಿಗ್ರಹಿಸಲು ಸೈನಿಕರೂ ವಿಫಲರಾಗುತ್ತಿದ್ದಾರೆ.
ಮಂತ್ರಿ– ಹೌದು ಪ್ರಭೂ, ಜನರು ರೊಚ್ಚಿಗೆದ್ದಿದ್ದಾರೆ.
ಅರಸ– ಅಲ್ಲ ಮಂತ್ರಿಗಳೇ, ಜನರು ನನ್ನ ವಿರುದ್ಧ ದಂಗೆಯೆದ್ದಿದ್ದಾರಲ್ಲ. ಇದರಲ್ಲಿ ನನ್ನ ತಪ್ಪೇನೆಂಬುವುದೇ ನನಗೆ ಅರ್ಥವಾಗುತ್ತಿಲ್ಲ. ನನ್ನ ಪ್ರಜೆಗಳೆಲ್ಲರೂ ಸಾವಿಲ್ಲದೆ ಬದುಕುವಂತಾಗಲಿ ಎಂದು ಬಯಸಿದೆನಲ್ಲ, ಅದರಲ್ಲಿ ತಪ್ಪಿದೆಯೇ? ಹಲವರನ್ನು ಉಳಿಸುವುದಕ್ಕೆ ಕೆಲವರನ್ನು ಕೊಲ್ಲುವುದಕ್ಕೆ ಹೊರಟೆನಲ್ಲ, ಅದರಲ್ಲಿ ತಪ್ಪಿದೆಯೇ? ನೀವೇ ಹೇಳಿ ಮಂತ್ರಿಗಳೇ.
ಮಂತ್ರಿ– ತಪ್ಪಿದೆ ಪ್ರಭೂ. ಹಿಂದೆ ಮುಂದೆ ಯೋಚಿಸದೆ ಆ ಇಬ್ಬರು ಖದೀಮರನ್ನು ವೈದ್ಯರೆಂದು ನಂಬಿದಿರಲ್ಲ ಪ್ರಭೂ, ಅಲ್ಲಿದೆ ತಪ್ಪು. ಅವರಿತ್ತ ಔಷಧಿಯನ್ನು ಕಣ್ಣು ಮುಚ್ಚಿ ನಂಬಿದಿರಲ್ಲ, ಅಲ್ಲಿದೆ ತಪ್ಪು.
ಅರಸ– (ಆಶ್ಚರ್ಯದಿಂದ) ಮಂತ್ರಿ, ಈ ಮಾತನ್ನು ನೀವು ಹೇಳುತ್ತಿದ್ದಿರಾ? ಅಂದು ಔಷಧದ ಬಗ್ಗೆ ನಿಮ್ಮ ಸಲಹೆ ಕೇಳಿದಾಗ ನೀವಂದ ಮಾತು ಮರೆತುಹೋಗಿಲ್ಲ ತಾನೇ?
ಮಂತ್ರಿ– ಖಂಡಿತವಾಗಿಯೂ ನೆನಪಿದೆ ಪ್ರಭೂ. ಈ ತಪ್ಪು ನಿರ್ಧಾರದಲ್ಲಿ ನನ್ನದೂ ಸಮಾನ ಪಾಲಿದೆ. ವಾಸ್ತವ ಸತ್ಯ ಇಂದು ನನಗೆ ಹೊಳೆಯುತ್ತಿದೆ ಪ್ರಭು. ಒಳ್ಳೆಯವೆಂದು ಕರೆಸಿಕೊಳ್ಳುವುದರಲ್ಲಿ ರಾಜನಾದವನ ಸಾರ್ಥಕತೆ ಅಡಗಿಲ್ಲ, ಒಳ್ಳೆಯ ಆಡಳಿತಗಾರನೆಂದು ಕರೆಸಿಕೊಳ್ಳುವುದರಲ್ಲಿ ಅಡಗಿದೆ. ಮಂತ್ರಿಯಾದವನ ಸಾರ್ಥಕತೆ ರಾಜ ಅಂದಮಾತನ್ನು ಮೆಚ್ಚಿಕೇಳುವುದರಲ್ಲಿಲ್ಲ, ರಾಜನ ಕೆಟ್ಟ ನಿರ್ಧಾರವನ್ನು ವಿರೋಧಿಸುವುದರಲ್ಲೇ ಅಡಗಿದೆ.
(ಅರಸ ಏನೂ ಪ್ರತಿಕ್ರಿಯಿಸುವುದಿಲ್ಲ. ಅಷ್ಟರಲ್ಲಿ ಜನರ ಗಲಾಟೆ, ಬೊಬ್ಬೆಗಳು ಜೋರಾಗಿ ಕೇಳಿಸಲಾರಂಭಿಸುತ್ತವೆ)
ಮಂತ್ರಿ– ಪ್ರಭೂ, ನೋಡಿ ಅಲ್ಲಿ. ನಮ್ಮ ಸೈನಿಕರನ್ನೂ ಮೀರಿ ಜನ ಮುನ್ನುಗ್ಗುತ್ತಿದ್ದಾರೆ. ಆ ಜನರ ಆಕ್ರೋಶ ನಮ್ಮನ್ನೇ ಗುರಿಯಾಗಿರಿಸಿಕೊಂಡಂತೆ ಕಾಣಿಸುತ್ತಿದೆ ಪ್ರಭು.
ಅರಸ– ಯಾರದೋ ಪ್ರಯತ್ನ, ಫಲ ಉಣ್ಣುವವರು ಯಾರೋ? ಸಾವಿಲ್ಲದ ಔಷಧವನ್ನು ಕಂಡುಹಿಡಿದವರ ಹೆಸರೇ ಇಂದು ಹೆಸರಿಲ್ಲದಂತಾಗಿ ಹೋಗಿದೆ. ಆದರೆ ಅದರಲ್ಲೇನೂ ನೇರ ಭಾಗಿಗಳಾಗದ ನಮ್ಮ ಕೊರಳಿಗೆ ಸುತ್ತಿಕೊಂಡ ಉರುಳು ಬಿಗಿಗೊಳ್ಳುತ್ತಲೇ ಹೋಗಿದೆ, ಹೋಗುತ್ತಿದೆ. ಮಂತ್ರಿಗಳೇ, ಇದಕ್ಕೆಲ್ಲಾ ಇರುವ ಅಂತಿಮ ಪರಿಹಾರ ಒಂದೇ; ಸಾವು.
(ಮಂತ್ರಿಯ ಮುಖದಲ್ಲಿ ಆಶ್ಚರ್ಯ ಕಾಣಿಸಿಕೊಳ್ಳುತ್ತದೆ)
ಹೌದು ಮಂತ್ರಿಗಳೆ. ಸಾವೊಂದೇ ಇದಕ್ಕಿರುವ ಅಂತಿಮ ಪರಿಹಾರ. ನಾನು ಸಾಯುವ ನಿರ್ಧಾರ ಮಾಡಿದ್ದೇನೆ.
ಮಂತ್ರಿ– ನಿಮ್ಮ ಈ ಪರಿಸ್ಥಿತಿಗೆ ಕಾರಣನಾದ ನಾನೂ ಕೂಡಾ ಸಾಯುವುದಕ್ಕೆ ಅರ್ಹ ಪ್ರಭು.
ಅರಸ– ನಾನೇ ಸಾಯಲು ಹೊರಟಿರುವಾಗ ನಿಮ್ಮನ್ನು ಸಾಯಬೇಡಿ ಎಂದು ಹೇಳುವ ದೈರ್ಯವಂತೂ ನನ್ನಲ್ಲಿ ಉಳಿದಿಲ್ಲ ಮಂತ್ರಿಗಳೆ. ಕೊನೆಯದಾಗಿ ಒಂದು ಮಾತು ಹೇಳುತ್ತೇನೆ ಕೇಳಿ. ಈ ಲೋಕಕ್ಕೆ ಬೇಕಾಗಿರುವುದು ಸಾವಿಲ್ಲದ ಔಷಧವಲ್ಲ; ಸಾವೇ ಈ ಲೋಕದ ಬಹುದೊಡ್ಡ ಔಷಧ.
(ಅಷ್ಟರಲ್ಲಿ ಜನರ ಗಲಾಟೆ, ಬೊಬ್ಬೆಗಳು ಮತ್ತಷ್ಟು ಹತ್ತಿರದಿಂದ ಕೇಳತೊಡಗುತ್ತದೆ. ತಕ್ಷಣವೇ ಅರಸ ಮತ್ತು ಮಂತ್ರಿ ತಮ್ಮ ಸೊಂಟದಿಂದ ಚೂರಿಯನ್ನು ಹೊರತೆಗೆಯುತ್ತಾರೆ. ಅರಸ ಮಂತ್ರಿಯ ಕುತ್ತಿಗೆಗೆ, ಮಂತ್ರಿ ಅರಸನ ಕುತ್ತಿಗೆಗೆ ಏಕಕಾಲಕ್ಕೆ ಚೂರಿಯನ್ನು ತಿವಿಯುತ್ತಾರೆ. ಪ್ರಾಣ ಕಳೆದುಕೊಂಡ ಇಬ್ಬರೂ ಕೂಡಾ ನೆಲದಲ್ಲಿ ಒರಗುತ್ತಾರೆ)
ಮೇಳ ೧– ಸಾವೆಂದರೇ ಹೀಗೆ
ನಮ್ಮ ನೆರಳಿನ ಹಾಗೆ
ಮೀರಲು ಹೊರಟರೆ
ಸಾಧ್ಯವಾದಿತು ಹೇಗೆ?
ಮೇಳ ೨– ಈ ಲೋಕಕ್ಕೆ ಬೇಡ
ಸಾವು ಇಲ್ಲದ ಮದ್ದು
ಸಾವೇ ಈ ಲೋಕಕ್ಕೆ
ಬಹುದೊಡ್ಡ ಮದ್ದು
ಮೇಳ ೧– ಸಾವೇ ಮದ್ದು ಸಾವೇ ಮದ್ದು
*****
ಮುಗಿಯಿತು