(ಏಕಾಂಕ ನಾಟಕ)
ಪಾತ್ರಗಳು
೧. ಕವಿರಾಜ
೨. ಘೂಕರಾಜ
[ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ ; ಕೊಠಡಿಯ ಕಿಟಕಿಗಳು ಉತ್ತರಾಭಿಮುಖವಾಗಿವೆ. ಎರಡೇ ಕಿಟಕಿಗಳಿರುವುವು. ಸುಮಾರು ನಾಲ್ಕು ಅಡಿ ಉದ್ದ ಮೂರಡಿ ಅಗಲ ಒಂದೊಂದಕ್ಕೂ ಮೇಲಿನ ಬಾಗಿಲು ಕೆಳಗಿನ ಬಾಗಿಲು ಎಡ ಬಲ ಭಾಗಗಳಲ್ಲಿ ಇರುವುವು. ಕೊಠಡಿಯ ಉದ್ದ ೧೨ ಅಡಿಗಳು, ಅಗಲ ೧೦ ಅಡಿಗಳು, ಎತ್ತರ ೧೦ ಅಡಿಗಳು. ಒಳಗಡೆ ವಿದ್ಯುತ್ತಿನ ದೀಪ ಉರಿಯುತ್ತಿದೆ. ಕವಿಯು ಮಂಚದಮೇಲೆ ಒಬ್ಬನೇ ಮಲಗಿದ್ದಾನೆ. ಮಂಚ ೬|| ಅಡಿ ಉದ್ದ, ೩ || ಅಡಿ ಅಗಲವಿದೆ ತಲೆಯ ಭಾಗದಲ್ಲಿ ಕವಿಯು ತಾನು ಬರೆದ ಕವಿತೆಗಳನ್ನೆಲ್ಲ ಸೇರಿಸಿ ಇಟ್ಟಿರುವನು. ಹಿಂದಿನ ಸಾಯಂಕಾಲ ಹೆಚ್ಚಾಗಿ ಕಾಫಿ ಕುಡಿದದ್ದರಿಂದ ಕವಿಗೆ ಸರಿಯಾಗಿ ನಿದ್ದೆ ಬಾರದೆ ಆಗಾಗ ಹೊರಳುತ್ತಿರುವನು. ಮನೆಯ ಮುಂಭಾಗದ ಮರದ ಮೇಲೆ ಘೂಕರಾಜನು ಅಸಮಾಧಾನದಿಂದ ಬಂದು ಕುಳಿತಿರುವನು. ಕೊಠಡಿಯ ಕಿಟಕಿಗಳು ಮುಚ್ಚಿರುವುದರಿಂದ ಎರಡು ಬಾರಿ ಕೂಗುವನು. ಕವಿ ಎದ್ದು ಕಿಟಕಿಯೊಂದನ್ನು ತೆಗೆದು ನೋಡಿ, ಪುನಃ ಮಲಗಿಕೊಳ್ಳುವನು. ಆಗ ಘೂಕರಾಜನು ಕೂಗುವನು, ಮಾತಿಗಾರಂಭ ಮಾಡುವನು.]
ಘೂ. ರಾ.- ಹೊತ್ತಾಯಿತೇಳಯ್ಯ ಸಾಕು ನಿನ್ನಯ ಗರ್ವ, ಎನಗೆ ಉತ್ತರಕೊಟ್ಟು ಬಳಿಕ ನೀ ಮಲಗಯ್ಯ.
ಕವಿ ರಾ.- ಅರುಣೋದಯಕೆ ಮುನ್ನ ಕೂಗುವನು ಆರಿವನು ?
ಘೋ. ರಾ.- ನಾ ಬರುವೆನೆಂದರಿದು ಪಾಪಿ ರವಿಯಂದದಲಿ ಹೆದರಿ ಹಾಸಿಗೆ ಹಿಡಿವೆ; ನಾ ತೆರಳೆ, ಧೈರದಿಂ ಬಿಟ್ಟೆದ್ದು ರಾಗಮಂ ಬೀರುತಿಹೆ ! ಏನಯ್ಯ ಲಜ್ಜೆಯಿಲ್ಲದ ಬಾಳು.
ಕವಿ ರಾ.- ನಿದ್ದೆಗಣ್ಣಾಗಿಹುದು, ಮಂಜು ತೆರೆ ಮರೆಯಲ್ಲಿ ಕಾಂಬಂತೆ ಕಾಣುವುದು. ನೀನೊಳಗೆ ಬಾರಯ್ಯ.
ಘೂ. ರಾ.- ಪರಮಪಾತಕ ನೀನು ! ರವಿಯ ಮರಿಗಳ ತಂದು ಅವರ ಮಧ್ಯದಿ ನಿಂದು ಏನೆನ್ನ ಕರೆಯುವೆಯೊ, ಆದರವ ತೋರುವೆಯೊ! ಸಾಯೆ ಸರಸಂಸಾಕು, ದುರ್ಬುದ್ಧಿಯದು ಸಾಕು ನಿನ್ನ ಮನೆ ಹೊಗಲೊಲ್ಲೆ, ನಿರಪರಾಧಿಗಳಾವು, ಎಮ್ಮ ನೀ ಹಳಿದಿರುವೆ ಅಪಮಾನ ಮಾಡಿರುವೆ. ಹೇಳಯ್ಯ, ಕಾದ ಸೀಸವನೆಂದು ಸುರಿದೆವೋ ನಿನಗೆ ಕೆಡಕೇನು ಮಾಡಿರುವೆವೋ ಹೇಳಯ್ಯ, ತಲೆಯೇಕೆ ಕೆರೆಯುವೆಯೊ ಮೇಲೇನು ನೋಡುವೆಯೊ ಕಣ್ಣುಗಳನೇಕುಜ್ಜುವೆಯೊ, ಅರಿಯದಂತೇಕೆ ನಟಿಸುವೆಯೊ ಆಷಾಢಭೂತಿಯೆಂಬುದ ಬಲ್ಲೆ.
ಕವಿ ರಾ.- ನಿಮ್ಮ ನಾನೆಂದು ಹಳಿದೆನೋ ? ನಿಮಗೆ ನಾನೆಂದು ಅಪಮಾನ ಮಾಡಿದೆನೋ? ನೆನಪಿಲ್ಲ, ನೆನಪಿಲ್ಲ. ನೀನಾರೊ ಮೊದಲೆನಗೆ ತಿಳಿದಿಲ್ಲ. ಆರಯ್ಯ?
ಘೋ. ರಾ.- ಅಹುದಹುದು ನೆನಪಿಲ್ಲ! ಏಕಿರುವುದೋ ನಿನಗೆ! ಏನಾನುಮೊಂದು ಉಪಕಾರವಂ ನೀ ಮಾಡೆ ಬಹುಕಾಲ ನೆನಪಿಹುದು; ದಿಟವಯ್ಯ, ದಿನ ದಿನವು ಲೆಕ್ಕವಿಲ್ಲದ ರೀತಿ ಅಪಕಾರ ಮಾಡುತಿರೆ ನೆನಪಿಲ್ಲ! ನೆನಪಿಲ್ಲ! ದುಷ್ಟ ಮಾನವ ಜನ್ಮ ! ಪಕ್ಷಿಗಳು ನಾವು ನಿಮ್ಮಂತಲ್ಲ.
ಕವಿ ರಾ.- ಏಕಯ್ಯ ಬಲು ಮುನಿಸು ? ನೆನಪಾಗದೆಂದು ದಿಟ ನುಡಿಯುತಿರೆ ಏನೇನೋ ಆಡುತಿಹೆ, ದೂರುತಿಹೆ.
ಘೋ. ರಾ.- ರಕ್ತೋಪವನವನ್ನು ನಾವೆಲ್ಲ ಬಿಟ್ಟಿಹೆವು. ನೀನವರ ನಮಗೆ ಹೋಲಿಸಬಹುದೆ? ಹೇಳಯ್ಯ,
ಕವಿ ರಾ. – ಅಹಹಾ! ನೆನಪಾಯ್ತು! ಬಂದಿರುವನಾರೆಂದು ಅರಿವಾಯ್ತು, ಭಾಗ್ಯದೇವತೆ ನೀನು ಬಂದಿರುವೆ ದಯವಿಟ್ಟು ಬಾರಯ್ಯ.
ಘೋ. ರಾ.-ಇವಗೆಷ್ಟು ಸಂತೋಷ ! ಪಾಪಕಾರ್ಯವ ಮಾಡಿ ನಲಿಯುತಿಹ ರಾಕ್ಷಸನು !
ಕವಿ ರಾ.- ಈ ಕವಿಯ ಮಂದಿರವ ಪಾವನವ ಮಾಡಯ್ಯ.
ಘೋ. ರಾ.- ಕವಿರಾಜ | ಭಾಪುರೇ !
ಕವಿ ರಾ.-ಎನ್ನ ದೊರೆ ಚಿತ್ತವಿಸು, ನಿನ್ನ ನುಡಿ ದಿಟವಕ್ಕೆ ಚಿತ್ತವಿಸು. ಅವರಲ್ಲಿ ಕುಳಿತಿರಲು ಕಂಡಂತೆ ಆಡಿದೆನು. ನಿಮಗೇಕೆ ಕೋಪವೆಂಬುದನರಿಯೆ ಅಪಮಾನವೇನಾಯ್ತೋ ನಾನರಿಯೆ.
ಘೋ. ರಾ.- ಹಸುಗೂಸು ! ನೀನರಿಯೆ! ಎಂತರಿವೆ! ಕಿವಿಯಲ್ಲಿ ಕೇಳಿದೆವು ಮನದಲ್ಲಿ ಕೊರಗಿದೆವು ಬೆಳಕು ಕಂಡಂತೆ ಸಂಕಟವಾಯು, ಬಸಿರೆಲ್ಲ ಕುದಿಯಾಯ್ತು.
ಕವಿ ರಾ.- ಕಂಡಂತೆ ಆಡಿದರೆ ತಪ್ಪಾಯ್ತೆ?
ಘೋ. ರಾ.- ಕಂಡಂತೆ ಆಡಿದೆಯ ? ಸಟೆಯ ಹೇಳುವೆಯೇಕೊ? ಕವಿಯೆಂಬ ಹುಚ್ಚಿನಲಿ ಬಂದಂತೆ ಆಡುವುದೆ? ಅವರಂತೆ ನಮಗೇನು ನರೆತ ಹುಬ್ಬುಗಳಿವೆಯೆ ? ಅವರಂತೆ ಕಣ್ಣುಗಳು ಪಾತಾಳಕಿಳಿದಿವೆಯೆ ? ಅವರಂತೆ ಗೂನುಬೆನ್ನಲಿ ಕುಳಿತು ಮಡಕೆಯಲಿ ಕಲ್ಲನಾಡಿಸುವಂತೆ ಮಾತನ್ನಾಡುವೆವೆ? ಎಮ್ಮ ಹೆಸರೆತ್ತಿ ಹೋಲಿಸಬಹುದೆ ? ಶಿವ ಶಿವಾ! ನಮಗಾದ ಅಪಮಾನ ಮತ್ತಾರಿಗೂ ಬೇಡ. ಮಾಡಬಹುದೇನಯ್ಯ ? ಇದು ಧರ್ಮವೇನಯ್ಯ ? “ಚಿನ್ನದಾ ನಾಡಿನಲ್ಲಿ” ಹುಟ್ಟಿ ಬೆಳೆದವರಾವು “ಗಂಧದ ಗುಡಿಯಲ್ಲಿ” ಹೆಜ್ಜೆಗಲಿತವರಾವು “ಬೀಣೆಯಾ ಬೆಡಗಿನಲಿ” ಒಡನಾಡಿದವರಾವು ಬ್ರಾಹ್ಮಣಗೆ ಲಕ್ಷ್ಮಿಯಂ ಒಲಿಸಿಕೊಟ್ಟವರಾವು ಕಾಶ್ಯಪನು ದಾಮ್ರೆಯುಂ ತಂದೆತಾಯಿಗಳೆಮಗೆ ನೆಲಸಿತ್ತು ನಮ್ಮಲ್ಲಿ ಬುದ್ದಿಯುಂ ಸತ್ಯವುಂ ಸಂಗೀತ ಸಾಹಿತ್ಯ ಚೌಷಷ್ಠಿ ಕಲೆಗಳುಂ ಲೋಕದೊಳು ನಮ್ಮಂತೆ ಪಂಡಿತರು ಇಲ್ಲಯ್ಯ, ನಾರದಗೆ ಸಂಗೀತ ವಿದ್ಯೆಯಂ ಬೋಧಿಸಿದ ಗಾನಬಂಧುವು ಎಮ್ಮ ಕುಲಜನಾಗಿಹನಯ್ಯ, ವಿಷ್ಣುಶರ್ಮನ ಕಥೆಯು ಪಂಚತಂತ್ರದ ಕಥೆಯು ಎಮ್ಮಿಂದ ಬೆಳೆಯಿತ್ತು, ಅದರ ಕಳೆಯೇರಿತ್ತು. ಸಂಗೀತ ಸಾಹಿತ್ಯ ನಿಪುಣರಲ್ಲದೆ, ರಾಜ ನೀತಿಯಲ್ಲಿ ಮುಂಚಿದವರಾರುಂಟು ಹೇಳಯ್ಯ. ಮಲಯಕೇತುವಿನಯ್ಯ ಪರ್ವತಾಧಿಪನ ಬಳಿ ಎಮ್ಮ ಹೆಸರವನೊಬ್ಬ ಮಂತ್ರಿತನ ಮಾಡಿದನು ಶತ್ರುಮಂಡಲಕೆಲ್ಲ ಕಗ್ಗಪ್ಪು ಕವಿಸಿದನು ಸಚಿವರಲಿ ಆತನೇ ನಚ್ಚಿಕೆಗೆ ಮೆಚ್ಚಿಕೆಗೆ ಹೆಸರಾಗಿ ಗುಹೆಗೆ ಕತ್ತಲೆಯಂತೆ ಮೆರೆದನಯ್ಯ. ಮತ್ತೆ ನೀಂ ಕೇಳಯ್ಯ, ಇರುಳಲ್ಲಿ ನಿಮ್ಮೂರ ತೋಟಿಗಳು ತಳವಾರರಲ್ಲಲ್ಲಿ ತೂಕಡಿಸಿ ನಿದ್ದೆಗೈಯುತ್ತಿರಲು, ಕಳ್ಳ ಬಂಟರು ಬಂದು ಹೊಂಚುತಿರೆ, ಕೂಗುವೆವು ಕಾಹಿನವರಂದದಲಿ ಎಚ್ಚರದಿ ತಿರುಗುವೆವು; ಅಪಶಕುನವಾಯ್ತೆಂದು ಹೆದರಿಯೋಡುವರವರು. ಉಪಕಾರವಿಷ್ಟಿರಲು
ಸುಟ್ಟ ಮಾನವ ಜಾತಿ ಉಪಕಾರವೆಣಿಸುವುದೆ !
ಕವಿ ರಾ.- ಮುಂಗಾರ ಮೊದಲ ಮಳೆ ಜಿರ್ರೆಂದು ಸುರಿವಂತೆ ಆಲಿಕಲ್ಗಳ ಮಳೆಯು ರಪರಪನೆ ಹೊಡೆವಂತೆ ಎಡೆಬಿಡದೆ ನೀಯೆನ್ನ ತಲೆಮೇಲೆ ಮಾತುಮಳೆ ಹೊಡೆಯುತಿಹೆ. ಎನ್ನ ದೊರೆ! ಶಾಂತಿಯಂ ತಾಳಯ್ಯ. ನಾನೆರಡು ಮುತ್ತುಗಳನಾಡುವೆನು ಕೇಳಯ್ಯ.
ಘೋ. ರಾ.- ಮುತ್ತುಗಳೆ ! ಭಾಪುರೇ ! ಕವಿರಾಜ !
ಕವಿ ರಾ.- ಎನ್ನ ದೊರೆ ! ನಿನ್ನ ನುಡಿ ಹಿರಿಯ ನುಡಿ ಫಲಿಸುವುದು, ಎನ್ನ ನುಡಿ ಚಿತ್ತವಿಸು, ನಿಮಗೆ ನಾನಪಕಾರ ಮಾಡಿದೆನೆ? ನಿಮಗಲಂಕಾರಮಂ ನಮಗಲಂಕಾರಮಂ ನಲ್ಮೆಯಿಂದಾಡಿದೆನು ; ಹಳಿವೆಣಿಕೆ ಎನಗಿಲ್ಲ ಮೆಚ್ಚುನುಡಿಯಾಡಿದೆನು ; ನಿಮ್ಮ ಉಪಕೃತಿ ಹಿರಿದು ನಿಮ್ಮ ದೆಸೆಯಿಂದೆಮಗೆ ಉಪಮಾನ ದೊರೆಯಿತ್ತು.
ಘೋ. ರಾ.- ಉಪಮಾನ ನಿಮಗಾಯ್ತು, ಅಪಮಾನ ನಮಗಾಯ್ತು ಆಡಿ ಫಲವೇನಯ್ಯ ಬಣ್ಣನೆಯ ಕೊಂಕು ನುಡಿ; ರಕ್ತೋಪವನವನ್ನು ಬಿಟ್ಟಿಹೆವು, ಇನ್ನೀಗ ಈವೂರು, ಈ ದೇಶ ಎಲ್ಲವಂ ಬಿಡಲಿಹೆವು.
ಕವಿ ರಾ.- ಅರಸು ಮುನಿದರೆ ತಿಳುಹುವುದು ಕಷ್ಟ. ಹೇಳೆನ್ನ ದೊರೆಯೆ ! ನೀನಿಂತು ಮುನಿದರೆ ನಾನು ಬದುಕುವೆನೆ ?ಒಲುಮೆಯಿಂ ಎರಡು ನುಡಿ ಕೇಳಯ್ಯ ತಪ್ಪಾಯ್ತು.
ಘೋ. ರಾ.- ಎರಡು ನುಡಿ ಕೇಳಾಯ್ತು, ಎಲ್ಲವಂ ಕೇಳಾಯ್ತು ತಡಮಾಡಿ ಫಲವಿಲ್ಲ, ಇನ್ನೆನಗೆ ಹೊತ್ತಾಯ್ತು ಆಗಲೇ ಪಾಪಿ ಸೂರ್ಯನು ರಕ್ತವಂ ಕಾರಿ ಹರಣ ಬಿಡುತಿಹನಲ್ಲಿ.
ಕವಿ ರಾ.- ತಪ್ಪನೆಸಗಿದೆನಯ್ಯ, ತಪ್ಪನೊಪ್ಪಿದಮೇಲೆ ಮನ್ನಿಪುದು ಹಿರಿಯತನ ನೀನೆನ್ನ ಮನ್ನಿ ಪುದು, ದಯೆಯಿಂದ ಮನ್ನಿ ಪುದು. ಊರನೇಂ ಬಿಡಬೇಡಿ, ದೇಶವಂ ಬಿಡಬೇಡಿ ರಕ್ತೋಪವನದಲ್ಲಿ ಮತ್ತೆ
ನೀವೈತಂದು ದರ್ಶನವ ಕೊಡಿರಯ್ಯ, ನಿಮ್ಮ ಬೇಡುವೆನಯ್ಯ, ಒಂದೊಂದು ಉಪಮಾನ ಒಂದೊಂದಲಂಕಾರ ನಾನು ಹೇಳುತ್ತಿರಲು ಒಂದೊಂದು ಜಾತಿಯುಂ ಕೋಪದಿಂ ಬಿಡುತಿರಲು ನಾಡು ಬಯಲಾಗುವುದು. ಅಲ್ಲಿದ್ದ ಸಿಂಹ ಹುಲಿ ನರಿ ಕರಡಿಗಳನೆಲ್ಲ ಇಂತೆಯೇ ಧೂರ್ತತನದಲಿ ಕಳೆದುಕೊಂಡಿದೆವು ಕಡೆಗಲ್ಲಿ ಕಾಡುಕಪಿಯದುಮಿಲ್ಲ ಕುರಿಯಿಲ್ಲ ಕಾಡುಮನುಜನುಮಿಲ್ಲ, ಎಲ್ಲವಂ ಬಯಲಾಯ್ತು ; ನೀವಾದೊಡಂ ಅಲ್ಲಿ ನೆಲಸಿರ್ದು ಆಗಾಗ ದರ್ಶನವ ಕೊಡುತೆಮಗೆ ಸಂತಸವ ಬೀರುತಿರಿ ಬಿಟ್ಟೆಮ್ಮ ಹೋಗದಿರಿ ಕಾಲೂರಿ ಬೇಡುವೆನು ; ಬಂಧುಗಳು ಬಳಗಗಳು ನೀವೆಲ್ಲ ಹೋಗುತಿರೆ ನಾಡಿನಲಿ ಚೆಲುವುಂಟೆ ಗೆಲುವುಂಟೆ ಸುಖವುಂಟೆ ?
ಘೋ. ರಾ.- ಎಲ್ಲರರಿವಂತೆ ನೀನಪಮಾನ ಮಾಡಿರುವೆ ಸಾಕ್ಷಿಗಳು ಆರಾರು ಇಲ್ಲದಿರೆ ನೀನೆನ್ನ ಕಾಲ್ವಿಡಿದು ಬೇಡುತಿಹೆ.
ಕವಿ ರಾ.- ಮುನಿಸಿನ್ನು ಬೇಡಯ್ಯ, ಕಾಲಿಡಿದು ಬೇಡಿರುವ ವಿಷಯವಂ ಜಗಕೆಲ್ಲ ತಿಳಿವಂತೆ ಮುದ್ರಿಪೆನು ; ಓದುವವರಾರುಂಟು ಅವರ ಕೈಯಲ್ಲಿ ಕೊಟ್ಟು ಎಲ್ಲರಿಗೆ ತಿಳಿಸುವೆನು ; ಬೀದಿ ಬೀದಿಯ ಹೊಕ್ಕು ಡಂಗುರವ ಹಾಕುವೆನು ; ಪತ್ರಿಕೆಗಳೆನಿತುಂಟೊ-ದಿನ ದಿನದ ಪತ್ರಿಕೆಯು ವಾರ ವಾರದ ಪತ್ರಿಕೆಯು, ಮಾಸಪತ್ರಿಕೆಯು ಅದಕೆಲ್ಲ ಕಳುಹುವೆನು ; ಮೂರು ತಿಂಗಳಿಗೊಮ್ಮೆ ತಡೆತಡೆದು ಮೂರು ವರ್ಷಕ್ಕೊಮ್ಮೆ ಬರುತ್ತಿರುವ ಪತ್ರಿಕೆಗಳಾದೊಡಂ ಹುಡು ಹುಡುಕಿ ಕಳುಹುವೆನು. ಎಲ್ಲರುಂ ಹೊಗಳುವರು ಎನ್ನ ದೊರೆ! ನಿನಗೇನು ನಾಡಲ್ಲಿ ಹೊಗಳಿಕೆಯೆ ತುಂಬಿಹುದು, ಹೇಳಲೇಂ ಕೇಳಲೇಂ! ಮುಗಿಲನ್ನು ಮುಟ್ಟಿಸುವ ಹೊಗಳಿಕೆಯು ಸಗ್ಗಕ್ಕೆ ಏರಿಸುವ ಹೊಗಳಿಕೆಯು, ತಾರೆಗಳ ಸೂಡಿಸುವ ಚಂದ್ರನಂ ಚುಂಬಿಸುವ ಹೊಗಳಿಕೆಯು ಮೇರುಮಂದರಗಳಿಗೆ ತೂಗು ಉಯ್ಯಲೆ ಕಟ್ಟಿ ತೂಗುವಾ ಹೊಗಳಿಕೆಯು, ಎನ್ನ ದೊರೆ ! ಈಯೆನ್ನ ನಾಡಿನಲಿ ನಿನ್ನ ಹೊಗಳದರುಂಟೆ ? ಏನಿಲ್ಲ ಮೆಂದೊಡಂ ಚಾಮುಂಡಿಗೇರಿಸಲಿ, ಶಿವಗಂಗೆ ಸಾಕೇಳು, ಅವರಾರು ಹೊಗಳದಿರ್ದೊಡೆಯೇನು? ಏನು ಗತಿ? ಎನ್ನದಿರು, ಬೇರೊಂದು ಹೆಸರಿನಲಿ ನಾ ಹೊಗಳಿ ಕೈಲಾಸಕೇರಿಸುವೆ, ಅಲ್ಲದೊಡೆ ವೈಕುಂಠಕೇರಿಸುವೆ, ಸಂಕೋಚ ಬೇಡಯ್ಯ. ನೀನೊಮ್ಮೆ ಮಂದಹಾಸವ ಸೂಸಿ ಎನ್ನ ಗೃಹ ಬೆಳಗಯ್ಯ, ನಿನ್ನ ಮನದಣಿವಂತೆ ಬಣ್ಣಿಸಲೆ? (ಘೂಕರಾಜನು ಎಳನಗೆಯನ್ನು ಮಿತವಾಗಿ ನಗುವನು.) ಸಪ್ತಪಾತಾಳದಲಿ ಕಗ್ಗವಿಯ ಮೂಲೆಯಲಿ ಮಿನುಗುವಾ ನೀಲಮಣಿಗಳೊ ಕಣ್ಣ ಪಾಪೆಗಳೊ ಪಾತಾಳ ಗೃಹದ ಮುಂಬಾಗಿಲಲಿ ನಿಂದಿರುವ ವಿಷ್ಣು ಚಕ್ರಗಳೊ ನೇತ್ರ ಪರಿವೇಷ ಶೋಭೆಗಳೊ-
ಘೋ. ರಾ.- ಸಾಕಯ್ಯ ವರ್ಣನೆಯು, ತಪ್ಪನ್ನು ಒಪ್ಪಿರುವೆ, ಮೆಚ್ಚಿದೆನು. ಊರಿನಲ್ಲಿ ದೇಶದಲ್ಲಿ ನಾವಿದ್ದು ಕಳೆಯನ್ನು ಕಟ್ಟುವೆವು ; ಮುನಿಸನ್ನು ಬಿಟ್ಟಿಹೆವು. ಆದರೀ ನುಡಿಯೊಂದು ಹೇಳುವೆನು ಕೇಳಯ್ಯ, ಅವರು ತೊಲಗುವ ತನಕ ರಕ್ತೋಪವನವನ್ನು ಇಟ್ಟಿಣಿಕಿ ನೋಡಲೊಲ್ಲೆವು ನಾವು; ಅವರೆಂದು ಉಪವನಕೆ ಕಾಲಿಡದೆ ಬೇರೆಡೆಗೆ ಪೋಗುವರೋ ಅಂದಲ್ಲಿ ಬಂದಾವು ನೆಲಸುವೆವು. ನಿನಗೊಪ್ಪೋ?
ಕವಿ ರಾ.- ಎನ್ನ ದೊರೆ ! ಎನಗೊಪ್ಪು, ಇನ್ನು ಮಾಡುವುದೇನು ! ಅವರೆಂದು ತೋಲಗುವರೋ ನಾನರಿಯೆ. ದೇಶದಲಿ ರಮ್ಯ ವಸ್ತುಗಳೆಲ್ಲ ಹೆರರ ಅನುಭವದಲ್ಲಿ ಸಾಲುಮಳಿಗೆಗಳೆಲ್ಲ ಹೆರರ ಕೈವಶದಲ್ಲಿ ನಾವೆಲ್ಲ ನಿರ್ಲಿಪ್ತರಾಗಿಹೆವು. ಎನ್ನ ದೊರೆ ! ರಕ್ತೋಪವನವನ್ನು ನೀವೆಲ್ಲ ಬಿಟ್ಟಿರಲು ನಾನೇನು ಬಿಟ್ಟರೆನೆ? ಬಿಟ್ಟಿಹೆನು ಬಿಟ್ಟಿಹೆನು. ಗೊಗ್ಗೇಶ್ವರಾಲಯಕೆ ದಿನ ದಿನವು ನಾ ಹೋಗಿ ಶಾಂತಿಯಂ ಪಡೆಯುವೆನು ; ಎನ್ನುಮಂ ನಾಡುಮಂ ದಯೆಯಿಂದ ಉಳಿಸಿರುವೆ, ನಿನಗೀಗ ಸಾಷ್ಟಾಂಗ ವಂದನೆಯು, ನಾಡಲಿಹ ಕ್ರಿಮಿ ಕೀಟ ಮೃಗಪಕ್ಷಿ ಎನ್ನ ಬಂಧುಗಳಯ್ಯ, ತರುಲತೆಗಳೆಲ್ಲವುಂ ಎನ್ನ ಬಳಗಗಳಯ್ಯ, ನೋಡಿ ಸುಖಿಸುವೆನಯ್ಯ.
(ಘೂಕರಾಜನು ವಂದಿಸಿ ಹೊರಟುಹೋಗುವನು.)
*****