ಎಲ್ಲರೂ ಆ ಕಡೆನೇ ಓಡ್ತಾ ಇದ್ದಾರೆ. ಅವಳನ್ನು ಎಳೆದುಕೊಂಡು ಆತ ಎಲ್ಲರಿಗಿಂತಲೂ ಮುಂದೆ ಮುಂದೆ ಓಡ್ತಾ ಇದ್ದಾನೆ. ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಏರುತ್ತಿದ್ದಾನೆ. ಅವು ಕಲ್ಲಿನ ಮೆಟ್ಟಿಲುಗಳಲ್ಲ; ಮನುಷ್ಯರೇ ಬೆನ್ನು ಬಾಗಿಸಿ ಮೆಟ್ಟಿಲುಗಳಾಗಿದ್ದಾರೆ. ಆಶ್ಚರ್ಯವಾಯಿತವಳಿಗೆ. ಇವರೆಲ್ಲ ಯಾಕೆ ಹೀಗೆ
ಮೆಟ್ಟಿಲುಗಳಾಗಿದ್ದಾರೆ? ಅವರುಗಳ ಮೇಲೆಯೇ ಏಕೆ ಎಲ್ಲರೂ ಹತ್ತಿ ಹೋಗುತ್ತಿದ್ದಾರೆ? ಒಂದೂ ಅರ್ಥವಾಗದೆ ಅವನ ಜೊತೆ ಓಡುತ್ತಲೇ ಇದ್ದಾಳೆ.
ಸಾಕಷ್ಟು ಮೇಲೆ ಹತ್ತಿಯಾಗಿದೆ. ತುದಿ ಇನ್ನೂ ದೂರವಿದೆ. ಆದರೆ ಮೆಟ್ಟಲುಗಳೇ ಇಲ್ಲ. ಕೊಂಚ ಅತ್ತಿತ್ತ ಕಣ್ಣಾಡಿಸಿದ. ಅವಳನ್ನು ತಟ್ಟನೆ ತಳ್ಳಿ ಅವಳ ಬೆನ್ನ ಮೇಲೆಯೇ ಕಾಲಿರಿಸಿ, ಮತ್ತೊಂದು ಮೆಟ್ಟಿಲಿಗಾಗಿ ಮೇಲಿದ್ದವನ ಎಳೆದು ತುಳಿದು, ಮತ್ತೊಬ್ಬ ಮಗದೊಬ್ಬ ಹೀಗೆ ಎಳೆದು ತಳ್ಳುತ್ತ ಅವರ ಬೆನ್ನ ಮೇಲೆ ಹತ್ತಿ ತುದಿ ಏರಿಯೇ ಬಿಟ್ಟ.
ಇತ್ತ ಬಿದ್ದಿದ್ದ ಅವಳು ಏಳದಂತೆ ಅವಳ ಬೆನ್ನ ಮೇಲಿನ ಮೆಟ್ಟಲು ತುಳಿಯುತ್ತ ಜನ ನಡೆಯುತ್ತಿದ್ದಾರೆ. ಆಕೆ ಮೇಲೇಳದಂತೆ ತುಳಿಯುತ್ತಲೇ ಇದ್ದಾರೆ. ಅವಳ ತುಳಿತಕ್ಕೆ ಬೆನ್ನು ನಜ್ಜುಗುಜ್ಜಾಗಿ ರಕ್ತ ಸುರಿಯುತ್ತಿದೆ. ನೋವಿನಿಂದ ಚೀರಾಡುತ್ತಿದ್ದಾಳೆ. ಅವಳ ಚೀರಾಟಕ್ಕೆ ಗಹಗಹಿಸಿ ನಗುತ್ತಾ ಕೇಕೇ ಹಾಕುತ್ತಿದ್ದಾರೆ ಮೇಲೆ ನಿಂತ ಮಂದಿ.
‘ಬಿಡಿ ನನ್ನ, ಇನ್ಯಾರಿಗೂ ನಾನು ಮೆಟ್ಟಿಲಾಗಲಾರೆ’ ಆರ್ತಳಾಗಿ ಕೂಗುತ್ತಿದ್ದಾಳೆ. ಕಿವಿಗೆ ಬೀಳದಂತೆ ದಡ ದಡ ಹತ್ತುತ್ತಲೇ ಇದ್ದಾರೆ. ನೋವಿನಿಂದ ಕಂಗೆಟ್ಟವಳಿಗೆ ಎಲ್ಲಿತ್ತೋ ರೋಷ, ಸರಕ್ಕನೆ ಎದ್ದು ನಿಂತು ಬಿಟ್ಟಳು. ಅವಳ ಬೆನ್ನ ಮೇಲೆ ಒಂದು ಕಾಲಿಟ್ಟಾತ ಕೆಳಗೆ ಬಿದ್ದು ಚೀರಿದ. ಬೆನ್ನು ಕೊಡವಿಕೊಂಡು ನೆಟ್ಟಗೆ ನಿಂತಳು. ಕ್ಷಣ ಮಾತ್ರದಲ್ಲಿ ಬೆನ್ನ ಗಾಯವೆಲ್ಲ ಮಾಯ. ಸೇಡಿನಿಂದ ಕ್ರೂರವಾಗಿ ನಗುತ್ತ ಅಲ್ಲಿದ್ದವರನ್ನೆಲ್ಲ ನೆಲಕ್ಕೆ ತಳ್ಳಿ ಅವರ ಬೆನ್ನ ಮೇಲೆ ಸರಸರನೇ ನಡೆಯುತ್ತಿದ್ದಾಳೆ. ತುತ್ತ ತುದಿ ತಲುಪಬೇಕೆನ್ನುವ ಅವಸರದಲ್ಲಿ ಯಾರ ಬೆನ್ನ ಮೇಲೆ ಕಾಲಿರಿಸಿದಳೊ “ಬೇಡಾ,
ಬೇಡಾ ಅವನ ಮೇಲೆ ಕಾಲಿರಿಸಬೇಡ. ಅವನನ್ನು ಮೆಟ್ಟಿಲಾಗಿಸಬೇಡಾ” ಕೂಗುವ ಆರ್ತಧ್ವನಿ.
“ಕೊಂದು ಬಿಡುತ್ತೇನೆ ನಿನ್ನ” ಬೆಚ್ಚಿದಳು. ಅದು ಯಾರ ಬೆನ್ನು ಎಂದು ನೋಡಿದರೆ ಶಂಕರನ ಬೆನ್ನು. ದಿಗ್ಭ್ರಾಂತಳಾದಳು. “ಬೇಡಾ ಅಂದ್ರೂ ತುಳೀತಿದೀಯಾ; ಕೊಂದು
ಬಿಡುತ್ತೇನೆ ನಿನ್ನಾ” ತೀವ್ರ ಘರ್ಜನೆ, ಕೊಂದೇ ಬಿಟ್ಟಂತಾಗಿ ಬೆದರಿ ಕಣ್ಣು ಬಿಟ್ಟಳು. ಮೈಯಿಡೀ ಬೆವೆತು ಹೋಗಿತ್ತು. ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ನಾಲಿಗೆ ಒಣಗಿ ಹೋಗಿತ್ತು.
ಥೂ! ಈ ಮೆಟ್ಟಲುಗಳೇಕೆ ಹೀಗೆ ದಿನಾ ಕನಸಲಿ ಕಾಡುತ್ತವೆ. ಬೆನ್ನಿನ ನೋವು ಇನ್ನೂ ಕಾಡುವಂತೆ ಭಾಸವಾಗಿ ನೋವಿನಿಂದ ಮುಖ ಹಿಂಡಿಕೊಳ್ಳುತ್ತಾಳೆ. ಯಾಕೆ
ಹೀಗಾಗುತ್ತಿದೆ. ಇದೇ ಚಿತ್ರಣ ದಿನಾ ನನ್ನ ಕನಸಲ್ಲಿ ಬಂದು ಏಕೆ ಕಾಡುತ್ತವೆ. ಛೇ! ಮನಸ್ಸೆಲ್ಲ ಅಸ್ತವ್ಯಸ್ತ ಭಯ ಇನ್ನೂ ಕಾಡುತ್ತಿದೆ. ಸಾವರಿಸಿ ಎದ್ದು ಕುಳಿತಳು. ಮೆಲ್ಲನೆದ್ದು ನೀರು ಕುಡಿದು ಹಾಗೆಯೇ ಹಾಸಿಗೆಯ ಮೇಲೆ ಉರುಳಿಕೊಂಡಳು. ಇನ್ನವಳಿಗೆ ನಿದ್ರೆ ಬಹುದೂರ, ಟೈಮ್ ನೋಡಿಕೊಂಡಳು. ಇನ್ನು ಹತ್ತುಗಂಟೆ. ಇಷ್ಟು ಬೇಗ ನಿದ್ರೆ ಹತ್ತಿ ಇದೇ ಕನಸು ಬೀಳಬೇಕೇ? ಇನ್ನೂ ಇಡೀ ರಾತ್ರಿ ಜಾಗರಣೆ. ಎದ್ದು ಕುಳಿತು ಸಂಜೆ ನೋಡುತ್ತಿದ್ದ ಫೈಲು ತೆಗೆದು ನೋಡತೊಡಗಿದಳು.
‘ಮೇಡಂ’ ರವೀಂದ್ರನ ಕರೆ.
ರೂಮಿನಲ್ಲಿ ಲೈಟ್ ಹಾಕಿದ್ದನ್ನು ಕಂಡು ಬಾಗಿಲು ಬಡಿದಿದ್ದನು. ಬಾಗಿಲು ತೆರೆದಳು.
“ಮೇಡಂ, ನಿಮ್ಮನ್ನ ನೋಡೋಕೆ ಅವರು ಬಂದಿದ್ದಾರೆ. ನೀವು ಮಲ್ಗಿದೀರಾ ಅಂತ ಗೆಸ್ಟ್ ರೂಮಿನಲ್ಲಿ ಕೂರಿಸಿದ್ದೇನೆ, ಏನು ಹೇಳಲಿ? ಇಲ್ಲಿಗೆ ಕಳಿಸಲಾ” ರವೀಂದ್ರ ಕೇಳಿದನು.
ಅವರು ಬರಬಹುದು ಅನ್ನೊ ನಿರೀಕ್ಷೆ ಇತ್ತು. ಆದರೆ ಈ ರಾತ್ರಿನೇ, ಅದೂ ಇಷ್ಟು ಹೊತ್ತಿನಲ್ಲಿ ಬರಬಹುದು ಅಂತ ಅಂದುಕೊಂಡಿರಲಿಲ್ಲ. ಅಂದ್ರೆ ಬೆಳಗ್ಗೆ ಪ್ರೆಸ್
ಮೀಟಿನಲ್ಲಿ ಹೇಳಿದ್ದು ಚೆನ್ನಾಗಿ ಪ್ರಭಾವ ಬೀರಿದೆ. ಮನದೊಳಗೆ ಗೆಲುವಿನ ನಗೆ.
“ನಾನೇ ಆಲ್ಲಿಗೆ ಬರ್ತೀನಿ’ ಮತ್ತೆ ಫೈಲಿನೊಳಗೆ ಕಣ್ಣು ನೆಟ್ಟಳು. ಯಾವ ಸಿದ್ಧತೆಯೂ ಇಲ್ಲದೆ ಅವರನ್ನು ಎದುರಿಸಲು ಕೊಂಚ ಅಳುಕು ಕಾಡಿತು. ತಾನು ಕೊಟ್ಟ ಶಾಕ್‌ನ್ನು ತಡೆಯಲಾರದೆ ಶಕ್ತಿಹೀನರಾಗಿ ಹತಾಶೆಯಿಂದ, ಕೋಪದಿಂದ ಕೂಡಿರುವ ಅವರ ಮುಖ ಎದುರಿಗೆ ಬಂದಂತಾಗಿ ಮನಸ್ಸಿನ ಮೂಲೆಯಲ್ಲಿ ಹಾಯ್ ಎನ್ನುವ ಭಾವ. ಈ ದಿನಗಳಿಗಾಗಿಯೇ ಅಲ್ಲವೇ ತಾನು ಇಷ್ಟು ವರ್ಷ ಕಾದದ್ದು. ಈಗ ತಾನು ಧೈರ್ಯ ಕಳೆದುಕೊಳ್ಳಬಾರದು.
ನಿಧಾನವಾಗಿ ಗೆಸ್ಟ್‌ರೂಮ್ ಪ್ರವೇಶಿಸಿದಳು. ಶತಪಥ ತಿರುಗುತ್ತಿದ್ದ ಆತ ತಟ್ಟನೆ ಇತ್ತ ತಿರುಗಿ, “ನೀನು……. ನೀನು ಮಾಡ್ತಾ ಇರೋದು ಸರೀನಾ” ನೇರವಾದ ಪ್ರಶ್ನೆ. ಕಟುವಾಗಿತು ಧ್ವನಿ. ಸಿಟ್ಟಿನಿಂದ ದರ ದರ ನಡುಗುತ್ತಿದ್ದರು.
‘ಯಾಕೆ ತಪ್ಪು ಅನ್ನಿಸುತ್ತಾ ಇದೆಯಾ’ ಕೊಂಕಿಸಿ, ಅಮಾಯಕಳಂತೆ ನುಡಿದಳು.
“ತಪ್ಪು ಅಲ್ಲವಾ? ಅಧಿಕಾರದ ದಾಹ ನಿನ್ನನ್ನು ಪ್ರಪಾತಕ್ಕೆ ತಳ್ತಾ ಇದೆ. ತಪ್ಪು ಹೆಜ್ಜೆ ಇಡ್ತಾ ಇದ್ದೀಯಾ. ಸ್ವಾರ್ಥಕ್ಕಾಗಿ, ದುರಾಸೆಗಾಗಿ ಏನು ಬೇಕಾದರೂ ಮಾಡೋಕೆ ಸಾಧ್ಯವಾ” ಹತಾಶರಾಗಿ ನುಡಿದರು.
ಅವರ ಮಾತಿಗೆ ನಕ್ಕುಬಿಟ್ಟಳು.
“ನೀವೇನಾ ಈ ಮಾತು ಹೇಳ್ತಾ ಇರೋದು! ರಾಜಕೀಯದ ಚದುರಂಗದಾಟವನ್ನು ಕಲಿಸಿದವರೇ ನೀವು. ನಿಮ್ಮ ಬಾಯಿಂದಲಾ ಈ ಮಾತುಗಳು. ಏನು ಬೇಕಾದರೂ
ಮಾಡಬಹುದು ಅನ್ನೋ ಪಾಠವನ್ನು ಹೇಳಿಕೊಟ್ಟವರು ನೀವೇ ಅಲ್ವಾ ಜನಾರ್ಧನ ರಾಯರೇ” ವ್ಯಂಗ್ಯವಾಗಿ ಇರಿದಳು. “ವಿಭಾ, ವಿಭಾ ಏನಾಗಿದೆ ನಿಂಗೆ. ಸಂಬಂಧಗಳ ಅರಿವೇ ಇಲ್ಲದಂತೆ ಆಡ್ತಾ ಇದ್ದಿಯಲ್ಲ, ನೀನು ಮದ್ವೆ ಮಾಡಿಕೊಳ್ಳೊಕೆ ನನ್ನ ಮಗನೇ ಬೇಕಾಗಿತ್ತಾ? ನಿನ್ನ ಸೊಸೆ ಅಂತ ಒಪ್ಪಿಕೊಳ್ಳೊಕೆ ಸಾಧ್ಯವಾ” ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತು ಬಿಟ್ಟರು.
“ಯಾಕೆ? ನಿಮ್ಮ ಸೊಸೆ ಆಗೋ ಅರ್ಹತೆ ನನಗಿಲ್ಲವೆ? ಲುಕ್ ಮಿ. ರಾವ್, ನಾನು ಮುಂದಿನ ಮುಖ್ಯಮಂತ್ರಿ ಆಗೋಳು. ನಾನು ಮನಸ್ಸು ಮಾಡಿದ್ರೆ ನಿಮ್ಮ ಮಗನ
ರಾಜಕೀಯ ಬದುಕಿಗೇ ಹೊಸ ತಿರುವನ್ನು ಕೊಡಬಲ್ಲೆ. ನನಗೇನು ನಿಮ್ಮ ಮಗನನ್ನು ಮದ್ವೆ ಆಗೋ ಆಸೆ ಏನೂ ಇಲ್ಲ. ಈ ಮದ್ವೆಗೆ ನಿಮ್ಮ ಮಗನೇ ಬಲವಂತ. ಯಾರನ್ನೊ ಮದ್ವೆ ಆಗೋ ಬದಲು ನಿಮ್ಮ ಮಗನನ್ನು ಆದ್ರೆ ಏನು ತಪ್ಪು” ಕೆಣಕಿದಳು.
“ಬೇಡಾ ವಿಭಾ, ಬೇಡಾ. ಮೊದಲೇ ನೊಂದಿರೊ ನನ್ನ ಇನ್ನಷ್ಟು ನೋಯಿಸಬೇಡಾ. ಅಧಿಕಾರ ಕಳ್ಕೊಂಡೆ. ಆಸ್ತಿ ಕಳ್ಕೊಂಡೆ, ನೆಮ್ಮದಿ ಕಳ್ಕೊಂಡೆ. ಈಗ ಇರೋ ಒಬ್ಬ
ಮಗನನ್ನು ಕಳ್ಕೊಳ್ಳೋ ಹಾಗೆ ಮಾಡಬೇಡ. ಈ ರೀತಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಬೇಡ. ನನ್ನ ಮಗನ್ನ ನಂಗೆ ಬಿಟ್ಟು ಕೊಡು. ಜೀವನದ ಅಂತ್ಯದಲ್ಲಿರೋ
ನನ್ನನ್ನು ನೋವಿಗೆ ದೂಡಬೇಡ. ನಿನ್ನ ನಿರ್ಧಾರ ಬದಲಿಸಿಕೊ ವಿಭಾ ನಿನ್ನ ಕಾಲ್ಹಿಡಿದು ಬೇಡಿಕೊಳ್ಳುತ್ತೇನೆ” ಕಣ್ಣೀರು ಹಾಕುತ್ತಾ ಬೇಡಿಕೊಳ್ಳುತ್ತಿದ್ದರೆ ಅಟ್ಟಹಾಸದಿಂದ ನಗುವಂತಾಯ್ತು ವಿಭಾಳಿಗೆ.
“ಮಾಜಿ ಮುಖ್ಯಮಂತ್ರಿಗಳೇ, ಯಾಕಿಷ್ಟು ದೀನರಾಗಿ ಹೋಗ್ತೀರಿ, ನಿಮ್ಮ ಘನತೆಗೆ ಇದು ತಕ್ಕದ್ದಲ್ಲ. ಅಧಿಕಾರದ ಕುರ್ಚಿ ಏರಬೇಕಾದರೆ ಎಷ್ಟೊಂದು ಮೆಟ್ಟಿಲು ಏರಬೇಕು ಅಲ್ವೆ. ನಾನೂ ಒಂದು ಕಾಲದಲ್ಲಿ ನಿಮ್ಮ ಅಧಿಕಾರದಾಸೆಯ ಮೆಟ್ಟಿಲಾಗಿದ್ದೆ. ಈ ನಿಮ್ಮ ಮಗ ನನ್ನ ಮೆಟ್ಟಿಲು ಆಗುತ್ತಿದ್ದಾರೆ. ನಾನು ಮುಖ್ಯಮಂತ್ರಿ ಅಗಬೇಕಾದರೆ ಈ ಮದುವೆ ನಡೆಯಲೇಬೇಕು. ಶಂಕರನೊಂದಿಗಿರುವ ಬೆಂಬಲಿಗರು ನನ್ನತ್ತ ಬರಬೇಕಾದರೆ ಮದ್ವೆ ಅನಿವಾರ್ಯವಾಗಿದೆ. ಇದರಲ್ಲಿ ನನ್ನ ಸ್ವಾರ್ಥದ ಜೊತೆ ಶಂಕರ್ ಸ್ವಾರ್ಥವೂ ಇದೆ. ನಾನು ಮುಖ್ಯಮಂತ್ರಿಯಾದರೆ ಅವರು ಮುಖ್ಯಮಂತ್ರಿಯ ಗಂಡ ಆಗ್ತಾರೆ. ಯಾರೇ ಅಡ್ಡ ಬಂದ್ರೂ ಈ ಮದ್ವೆ ತಪ್ಪಿಸಲು ಸಾಧ್ಯವಿಲ್ಲ. ತಾವು ಇನ್ನು ಹೋಗಬಹುದು.”
ಮುಂದೇನು ಮಾತನಾಡದಂತೆ ಬಾಯಿ ಕಟ್ಟಿ ಬಿಟ್ಟಳು. ಮತ್ತೇನು ಹೇಳಲಾರದಂತೆ ಆ ನಿರ್ಧರಿತ ನುಡಿ ಅವರನ್ನು ತಡೆಯಿತು.
ದುರ್ದಾನ ತೆಗೆದುಕೊಂಡವರಂತೆ ಜನಾರ್ಧನರಾಯರು ಸೋತ ಹೆಜ್ಜೆ ಇರಿಸುತ್ತ ಹೊರಹೋಗುವುದನ್ನೇ ನೋಡುತ್ತಾ ವಿಭಾ ಗೆಲುವಿನಿಂದ ವಿಜೃಂಭಿಸುತ್ತಾ ನಿಂತಳು.
ಇನ್ನೊಂದು ವಾರದೊಳಗೆ ಶಂಕರನೊಂದಿಗೆ ಮದುವೆ ಎಂದು ಪತ್ರಿಕೆಯವರಿಗೆಲ್ಲ ತಿಳಿಸಿಯಾಗಿತ್ತು.
ರಾಜಕೀಯವಾಗಿ ಅಪ್ಪನಷ್ಟು ಶಂಕರ ಪ್ರಬಲವಾಗಿ ಬೆಳೆಯದಿದ್ದರೂ ಒಂದಿಷ್ಟು ಬೆಂಬಲಿಗರನ್ನು ತನ್ನೊಂದಿಗಿಟ್ಟು ಕೊಂಡಿದ್ದ. ತನ್ನ ಮಾತನ್ನು ಅವರು ಕೇಳುವಷ್ಟು ಪ್ರಭಾವಿತನಾಗಿದ್ದ. ರಾಯರ ರಾಜಕೀಯ ತಿರುಳುಗಳನ್ನೆಲ್ಲ ಅರೆದು ಕುಡಿದಿದ್ದ. ವಿಭಾ ಜನಾರ್ಧನರಾಯರು ಬೆಳೆಸಿದ್ದ ಶಿಷ್ಯೆಯಾಗಿದ್ದಳು. ಇವಳನ್ನು ಬೆಳೆಸುವಲ್ಲಿ ವಹಿಸಿದ್ದ ಶ್ರದ್ಧೆ ಆಸಕ್ತಿಗಳು ಮಗನನ್ನು ಬೆಳೆಸುವಲ್ಲಿ ಇರಲಿಲ್ಲ. ಈ ಅಸಮಾಧಾನ ಸದಾ ಶಂಕರನಲ್ಲಿ ಕಾಡುತ್ತಿತ್ತು. ಏಟಿಗೆ ತಿರುಗೇಟು ಎಂಬಂತೆ ವಿಭಾಳನ್ನು ತನ್ನತ್ತ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ವಿಭಾಳಿಂದಾದರೂ ತಾನು ರಾಜಕೀಯವಾಗಿ ಮೇಲೇರಬೇಕೆಂಬ
ಅವನ ಆಕಾಂಕ್ಷೆ. ಎಲ್ಲವನ್ನು ತಿಳಿದಿದ್ದರೂ ತಿಳಿಯದವನಂತೆ ಸುಮ್ಮನಿದ್ದು ಬಿಟ್ಟಿದ್ದ. ಅಪ್ಪನನ್ನೂ ಮೀರಿ ಬೆಳೆಯಬೇಕೆಂಬ ಅವನ ಯತ್ನ. ನಿರ್ಧಾರದಿಂದ ವಿಭಾ ಹೆಚ್ಚು ಲಾಭ ಪಡೆದಿದ್ದಳು. ಬದುಕಿಗೊಬ್ಬ ಸಂಗಾತಿ ದೊರೆಯುವ ಜೊತೆಗೆ, ರಾಜಕೀಯದ ಮುಂದಿನ ಹೆಜ್ಜೆ ಏನು ಎಂಬ ಪ್ರಶ್ನೆಗೆ ಉತ್ತರವಾಗಿದ್ದ ಶಂಕರ.
ಜನಾರ್ಧನರಾಯರು ಗೈರು ಹಾಜರಿಯಲ್ಲಿಯೇ ಮದುವೆ ನಡೆದು ಹೋಯಿತು. ತನ್ನಿಚ್ಛೆಯಂತೆ ಬಹುಮತ ಪಡೆದು ಮುಖ್ಯಮಂತ್ರಿಯಾದಳು ವಿಭಾ. ಗೆಲುವಿನ
ಸಂಭ್ರಮದಿಂದ ವಿಜೃಂಭಿಸುತ್ತಿದ್ದಾಗಲೇ ಸುದ್ದಿ ಬಂತು. ಎಲ್ಲ ಕೆಲಸವನ್ನೂ ಬದಿಗೋತ್ತಿ ಅಲ್ಲಿಗೆ ನಡೆದಳು.
ವಾತಾವರಣ ಗಂಭೀರವಾಗಿತ್ತು. ಎಲ್ಲರ ಮುಖದ ಮೇಲೂ ವಿಷಾದದ ಛಾಯೆ ನರ್ತಿಸುತ್ತಿತ್ತು. ಅವಳನ್ನು ಕಂಡಕೂಡಲೇ ಪಿಸುಮಾತು ಮಾತನಾಡುತ್ತಿದ್ದವರೆಲ್ಲ ಮಾತು ನಿಲ್ಲಿಸಿ ಅವಳಿಗೆ ಜಾಗ ಬಿಟ್ಟುಕೊಟ್ಟರು. ಅವಳ ಗಮನ ಸೆಳೆಯಲು ಅಲ್ಲಿದ್ದವರೆಲ್ಲ ಪೈಪೋಟಿ ನಡೆಸಿದರು. ಸುತ್ತಲಿನವರ ಯಾವ ಕ್ರಿಯೆಗೂ ಪ್ರತಿಕ್ರಿಯೆ ತೋರದೆ ವಿಭಾ ಗಂಭೀರವಾಗಿ ನಡೆದು ಬಂದು ಸುಮ್ಮನೆ ನಿಂತುಬಿಟ್ಟಳು. ಮನದೊಳಗಿನ ಹೋರಾಟ ಹೊರ ಕಾಣದಂತಿರಲು ಸಾಹಸ ಪಡುತ್ತಿದ್ದಳು. ಹಿಂದೆಯೇ ಬಂದ ಪಿ.ಎ. ‘ಮೇಡಂ’ ಎಂದು ಎಚ್ಚರಿಸಿ ಹೂಗುಚ್ಚ ಕೊಟ್ಟಾಗ ಮೌನವಾಗಿಯೇ ಕಾಲ ಬುಡದಲ್ಲಿರಿಸಿ, ಆ ಮೊಗವನ್ನು ದೀರ್ಘವಾಗಿ ದಿಟ್ಟಿಸಿದಳು. ಸಾಗರದ ಆಲೆಗಳಂತೆ ನೂರಾರು ಭಾವನೆಗಳು ಅವಳನ್ನು ಅಪ್ಪಳಿಸಿದಾಗ ಮೆಲ್ಲನೆ ನಡುಗಿದಳು.
ಆಟ ಇಷ್ಟು ಬೇಗ ಅಂತ್ಯವಾಯಿತೆ. ಕೊನೆಯ ಭೇಟಿಯ ನೆನಪಾಯಿತು. ತಮ್ಮ ಮದುವೆಯನ್ನು ತೀವ್ರವಾಗಿ ವಿರೋಧಿಸಿ ಕೊನೆಗೂ ಮದುವೆ ನಡೆದೇ ಹೋಯಿತೆಂದು
ಜೀವ ಕೊನೆಗಾಣಿಸಿಕೊಂಡರೆ, ವ್ಯಥೆ ಕಾಡಿತು ಅರೆಕ್ಷಣ.
ಮೆಟ್ಟಲುಗಳೇರುವ ಸಂಭ್ರಮದಲ್ಲಿ ತಾನಿರುವಾಗ ಅದನ್ನು ನೋಡಿ ಪರಿತಪಿಸುವ ಜೀವವೊಂದಿದೆ ಎನ್ನುವ ಸತ್ಯದರಿವೇ ತನಗೆ ಎಷ್ಟೊಂದು ತೃಪ್ತಿ ತರುತ್ತಿತ್ತು. ಸೇಡಿನ ಕಿಚ್ಚು ಹತ್ತಿ ಉರಿವಾಗ ತಂಪೆನಿಸುತ್ತಿತ್ತು. ಛೇ! ಮುಗಿದೇ ಹೋಯಿತಲ್ಲಾ ಎಲ್ಲಾ.
ಟಿ.ವಿಯವರು, ಪತ್ರಿಕೆಯವರು ಮುತ್ತಿಕೊಂಡು ಬಿಟ್ಟರು. ತಟ್ಟನೆ ಅವಳಲ್ಲಿದ್ವ ರಾಜಕೀಯಪ್ರಜ್ಞೆ ಜಾಗೃತವಾಯಿತು. ಮೊಗದ ಮೇಲೆ ಚಿಂತೆಯ ನೆರಳನ್ನೂ
ತಂದುಕೊಳ್ಳುತ್ತಾ ದುಃಖಿತಳಂತೆ “ಇಂಥ ಸಾವು ಇವರಿಗೆ ಬರಬಾರದಿತ್ತು. ಇದು ರಾಜಕೀಯ ಜಗತ್ತಿಗೆ ತುಂಬಲಾರದ ನಷ್ಟ ಹಾಗು ವೈಯಕ್ತಿಕವಾಗಿ ನನಗೂ ಸಹ. ನನ್ನ ರಾಜಕೀಯದ ಯಶಸ್ಸಿನ ಮೊದಲ ಮೆಟ್ಟಲೇ ಅವರಾಗಿದ್ದರು. ಅವರ ಸಾವು ನನಗೆ ದಿಗ್ಭ್ರಾಂತಿ ತಂದಿದೆ. ನೋವು ತಂದಿದೆ. ಇತ್ತೀಚೆಗಷ್ಟೆ ನಾನು ಅವರ ಸೊಸೆಯಾಗಿದ್ದೆ. ತಂದೆಯಂತಿದ್ದ ಅವರ ಸೇವೆ ಮಾಡುವ ಭಾಗ್ಯ ನನಗಿಲ್ಲದೆ ಹೋಯಿತು. ಯಾವ ತಂದೆ ಕೂಡ ತನ್ನ ಮಗಳ ಮೇಲೆ ತೋರಿಸಲಾರದಂತಹ ಪ್ರೀತಿ, ಆದರ ತೋರಿಸಿ ರಾಜಕೀಯ ಗುರುವಾಗಿದ್ವರು.” ಏಕೋ ಧ್ವನಿ ನಡುಗಿತು. ದುಃಖದ ಆವೇಗ ಎಂದುಕೊಂಡರು ಅಲ್ಲಿದ್ದವರೆಲ್ಲ.
ತಾನೇ ಮುಂದೆ ನಿಂತು ಗಂಡನಿಗೆ ಸಹಕರಿಸಿ ಮಾವನ ಅಂತ್ಯಕ್ರಿಯೆಗೆ ವ್ಯವಸ್ಥಿತವಾಗಿ ನಡೆಯುವಂತೆ ಮಾಡಿದಳು. ಎಲ್ಲವೂ ಮುಗಿದ ಮೇಲೆ ತಾನೊಬ್ಬಳೇ ಹೊರಟು ನಿಂತಳು. ಮುಂದಿನ ಕಲಾಪಗಳಿಗಾಗಿ ಶಂಕರ ಅಲ್ಲಿಯೇ ಉಳಿದ.
ಸೀಟಿನ ಹಿಂದಕ್ಕೊರಗಿ ಕಣ್ಮುಚ್ಚಿ ಕುಳಿತಿದ್ದಳು. ಮನಸ್ಸು ಮಳೆ ಬಿದ್ದ ಮಣ್ಣಿನಂತೆ ರಾಡಿಯಾಗಿತ್ತು. ಸಂತಾಪವೋ, ಸಂತಸವೋ, ನೋವೋ, ತೃಪ್ತಿಯೋ, ಯಾವ ಭಾವ ಈ ಮನದಾಳದ ಗರ್ಭದಲ್ಲಿ ಅಡಗಿದೆಯೋ ಅರ್ಥೈಸಿಕೊಳ್ಳಲು ಆಗದೆ ಬಳಲಿದಳು. ಯಾವುದನ್ನು ಮರೆತಂತೆ ನಟಿಸಿದ್ದಳೊ ಅವೆಲ್ಲವೂ ನೆನಪಾಗಿ ಅವಳು ಅಲ್ಲಿಯೇ ಕಳೆದುಹೋದಳು.
ಅವಳೀಗ ಈ ರಾಜ್ಯದ ಮುಖ್ಯಮಂತ್ರಿಯಲ್ಲ, ವಿಭಾಳಷ್ಟೆ. ಆ ಹರೆಯದ ದಿನಗಳು, ಕನಸುಗಳು, ಹುಡುಗಾಟ ಮರುಕಳಿಸಿದಂತಾಗಿ ಪುಳಕಿತಳಾಗುವಷ್ಟರಲ್ಲಿ ಮತ್ತೇನೋ ನೆನಪಾಗಿ ಮನ ವಿಲವಿಲ ಒದ್ದಾಡಿತು. ಮುಗಿದೆ ಹೋಗಿದ್ದ ಅಧ್ಯಾಯದ ಪುಟಗಳು ಇಂದು ಅವಳೆದುರು ತೆರೆದು ನಿಂತವು. ತಾನು ಹತ್ತಿ ಬಂದ ಒಂದೊಂದೇ ಮೆಟ್ಟಲುಗಳನ್ನೂ ನೆನಪಿಸಿಕೊಂಡು ತನ್ನ ಸ್ಥಿತಿಗೆ ತಾನೇ ಮರುಗುತ್ತಾ ಗಹಗಹಿಸಿ ನಗಬೇಕೆನಿಸಿತವಳಿಗೆ. ತನ್ನ ಯಶಸ್ಸಿನ ಮೊದಲ ಮೆಟ್ಟಿಲು ಹುಚ್ಚಿಯಂತೆ ನಗುತ್ತಾ ಮತ್ತೊಂದು ಕ್ಷಣದಲ್ಲಿಯೇ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಡ್ರೈವರ್ ಗಾಬರಿಯಾಗಿ
‘ಮೇಡಂ ಕಾರು ನಿಲ್ಲಿಸಲೇ’ ಕೇಳಿದ.
ತಕ್ಷಣವೇ ಎಚ್ಚೆತ್ತು ಸಂಯಮ ಕಳೆದುಕೊಂಡ ತನ್ನ ಬಗ್ಗೆ ಬೇಸರಿಸಿಕೊಳ್ಳುತ್ತಲೇ “ಬೇಡಾ ನಡೆ” ಎಂದ್ಹೇಳಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳಲೆತ್ನಿಸಿದಳು. ಕಾರು ಮುಂದೊಡುತ್ತಿದ್ದಂತೆ ಮನಸ್ಸು ಹಿಂದಕ್ಕೋಡುತ್ತಿತ್ತು.
ಓದು ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದ ದಿನಗಳಲ್ಲಿಯೇ ಜನಾರ್ಧನರಾಯರ ಆಗಮನವಾಗಿತ್ತು. ಹಾಸಿಗೆ ಹಿಡಿದ ಗೆಳೆಯನನ್ನು ನೋಡಲು ಬಂದಿದ್ದ ರಾಯರು ವಿಭಾಳನ್ನು ಕಂಡು ಕಣ್ಣರಳಿಸಿದರು. ಆಕೆಯ ಬುದ್ಧಿವಂತಿಕೆ, ನಡೆ ನುಡಿ ಆಕರ್ಷಿಸಿ “ಶಾಂತೂ ಹೇಗಯ್ಯಾ ನಿಂಗೆ ಇಂಥ ಬ್ರೈಟ್ ಮಗಳು ಹುಟ್ಟಿದಳು. ಅದೇನು ಆತ್ಮವಿಶ್ವಾಸ, ಅದೇನು ಬುದ್ದಿವಂತಿಕೆ, ಇಂಥ ಮಗಳು ನನ್ನ ಮಗಳಾಗಿರಬಾರದಿತ್ತ! ಅಂತಾ ಅಸೂಯೆ ಆಗುತ್ತೇ ಕಣೋ”. ಎಂದು ಹೊಗಳುತ್ತಿದ್ದರೆ ವಿಭಾ ಸಂಕೋಚಿಸುತ್ತ ಹೆಮ್ಮೆಯಿಂದ ಉಬ್ಬುತ್ತಿದ್ದಳು.
ಈಗಾಗಲೇ ಶಾಸಕರಾಗಿದ್ದ ಜನಾರ್ಧನರಾಯರು ವಿಭಾಳನ್ನು ತಮ್ಮ ಪಿ. ಎ. ಮಾಡಿಕೊಂಡು ಬಿಟ್ಟರು. ಕೈ ತುಂಬಾ ಸಂಬಳ, ಮನಕ್ಕೊಪ್ಪುವ ಕೆಲಸ. ವಿಭಾ
ತೃಪ್ತಳಾಗಿದ್ದಳು. ತಮ್ಮ ಸಂಸಾರದ ಸುಸ್ಥಿತಿಗೆ ಕಾರಣರಾದ ಜನಾರ್ಧನರಾಯರಲ್ಲಿ ಕೃತಜ್ಞಳಾಗಿದ್ದಳು.
ಶಾಸಕರಾಗಿದ್ವ ಜನಾರ್ಧನರಾಯರು ಮಂತ್ರಿಯಾಗಬೇಕಿತ್ತು. ಆದರೆ ಅದಷ್ಟು ಸುಲಭವಾಗಿರಲಿಲ್ಲ. ಕೆಲಪು ಗಿಮಿಕ್ಸ್ ಮಾಡಲೇಬೇಕಾಗಿತ್ತು. ಅದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿ ಮುಹೂರ್ತ ನಿಶ್ಚಯಿಸಿದ್ದರು. ಪಕ್ಷ ಬದಲಿಸಿದ ರಾಯರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿಯೆ ಟೆಕೆಟ್ ಗಿಟ್ಟಿಸಿಕೊಂಡಿದ್ದರು. ಈ ಬಾರಿ ಶತಾಯಗತಾಯ ಮಂತ್ರಿ ಪದವಿ ಪಡೆಯಲೇಬೇಕೆಂದು ಪ್ರಯತ್ನ ನಡೆಸಿದ್ದರು.
ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿತ್ತು. ಭಾಷಣಗಳ ಸ್ಕ್ರಿಪ್ಟ್ ತಯಾರಿಕೆ ಕಾರ್ಯಕ್ರಮಗಳ ಹೊಂದಾಣಿಕೆ ಇವುಗಳಲ್ಲಿ ವಿಭಾಳ ಪಾತ್ರ ಮಹತ್ವದ್ದಾಗಿತ್ತು. ಎಲ್ಲಿಯೂ ಲೋಪವಾಗದಂತೆ, ಏರುಪೇರಾಗದಂತೆ ನಿಭಾಯಿಸುವ ಅವಳ ಬುದ್ಧಿವಂತಿಕೆಯಿಂದಾಗಿ ಕಾರ್ಯಕ್ರಮಗಳು ಭರ್ಜರಿಯಾಗಿ ಯಶಸ್ವಿಯಾಗುತ್ತಿದ್ದವು. ಕೆಲವೇ ದಿನಗಳಲ್ಲಿ ಪಳಗಿದ ರಾಜಕಾರಣಿಯಂತೆ ರಾಯರ ಕೆಲಸಗಳಿಗೆ ಬಲಗೈಯಾಗಿಬಿಟ್ಟಳು ವಿಭಾ. ಅವಳಿಲ್ಲದೆ ಯಾವುದನ್ನೂ ನಡೆಸಲು ತನ್ನಿಂದ ಅಸಾಧ್ಯ ಎನ್ನುವ ಮಟ್ಟಕ್ಕೆ ಬಂದು ಬಿಟ್ಟರು. ಎಷ್ಟೋ ಸಮಾರಂಭಗಳಲ್ಲಿ ರಾಯರ ಪರವಾಗಿ
ಪ್ರಚಾರ ಭಾಷಣ ಮಾಡಿದಳು. ಅವಳ ಭಾಷಣದ ವೈಖರಿ ಗ್ಲಾಮರ್ ಪಕ್ಷದ ಪ್ಲಸ್‌ಪಾಯಿಂಟ್ ಎಂದು ಪಕ್ಷದ ಮುಖಂಡರೇ ಒಪ್ಪಿಕೊಳ್ಳುವಷ್ಟು ವಿಭಾ ಪ್ರಸಿದ್ಧಿಗೆ ಬಂದಳು. ಆ ದಿನಗಳಲ್ಲಿಯೇ ವಾಸುವಿನ ಪರಿಚಯವಾದದ್ದು. ಆತನೂ ಉತ್ಸಾಹಿ ಕಾರ್ಯಕರ್ತ. ನಿಧಾನವಾಗಿ ಅವರಿಬ್ಬರಲ್ಲಿ ಆಕರ್ಷಣೆ ಬೆಳೆಯುತ್ತಿತ್ತು.
ಇದು ರಾಯರ ಗಮನಕ್ಕೂ ಬಂದಿತು ಅವರೂ ಉತ್ತೇಜಿಸಿದರು. ಚುನಾವಣಾ ಗಲಾಟೆ ಎಲ್ಲಾ ಮುಗಿದ ಮೇಲೆ ತಾನೇ ಈ ವಿಷಯ ಹಿರಿಯರಲ್ಲಿ
ಮಾತನಾಡುವುದಾಗಿಯೂ ಹೇಳಿದರು.
ತಮ್ಮ ಕಣ್ಮುಂದಿನ ಹುಡುಗಿ ಚೆನ್ನಾಗಿರಬೇಕು, ಯಶಸ್ಸು ಅವಳದಾಗಬೇಕು ಎಂದು ಹೇಳುತ್ತಲೇ ಹುರಿದುಂಬಿಸುತ್ತಿದ್ದರು. ಅವಳ ಕಾರ್ಯವೈಖರಿ, ನೈಪುಣ್ಯತೆಯೇ ತಮ್ಮ ಜಯದ ಮಾಲೆ ಎಂದು ಅವರಿಗೆಂದೋ ಅರಿವಾಗಿತ್ತು. ನಿರೀಕ್ಷೆಯಂತೆಯೇ ಜಯ ರಾಯರದಾಯಿತು. ಆದರೆ ಮಂತ್ರಿ ಪದವಿ ದಕ್ಕುವಲ್ಲಿ ಅನುಮಾನವೆನಿಸಿತು. ಹೊಸದಾಗಿ ಪಕ್ಷ ಸೇರಿದ್ದ ರಾಯರಿಗೆ ಪ್ರಾಮುಖ್ಯತೆ ಸಿಗುವುದು ಹಳಬರಿಗೆ ಬೇಡವಾಗಿತ್ತು. ಆದರೆ ರಾಯರಿಗೆ ಬೇಕಾಗಿತ್ತು. ಷಡ್ಯಂತ್ರ ರಚಿಸುವಲ್ಲಿ ನಿರತರಾದರು. ವಿಭಾಳನ್ನು ದಾಳವಾಗಿ ಬಳಸಿದರು. ತನಗರಿವಿಲ್ಲದೆ ವಿಭಾ ಖೆಡ್ಡದಲ್ಲಿ ಬಿದ್ದಳು. ಯಶಸ್ಸಿನ ಮೆಟ್ಟಿಲೇರುವ ಭರದಲ್ಲಿ ವಿಭಾಳನ್ನೇ ಮೆಟ್ಟಿಲಾಗಿಸಿಕೊಂಡರು. ದಂತದ ಬೊಂಬೆಯ ಸೌಂದರ್ಯವನ್ನು ಬಳಸುತ್ತ ರಾಯರು ಒಂದೊಂದೇ ಹಂತವೇರತೊಡಗಿದರು. ಮಾರ್ಗ ಮಧ್ಯೆ ಅಡಚಣೆ
ಎಂದು ವಾಸು ಒಮ್ಮೆಲೇ ಕಾಣದಂತಾದ. ಕೆಲವೇ ದಿನಗಳಲ್ಲಿ ವಾಸು ಹೆಣವಾಗಿ ಕಾಣಿಸಿಕೊಂಡ.
ತಮ್ಮ ಮಗಳಂತೆ ಎನ್ನುತ್ತಲೇ ಚದುರಂಗದಾಟದ ದಾಳ ಮಾಡಿಕೊಂಡು ಬಿಟ್ಟರು. ವಿಭಾಳ ವಿರೋಧವನ್ನು ಲೆಕ್ಕಿಸದೆ ಅವಳನ್ನೂ ಉಪಯೋಗಿಸಿಕೊಂಡು ದಿನ ದಿನಕ್ಕೆ ಬೆಳೆಯತೊಡಗಿದ ರಾಯರು ತಮ್ಮೊಂದಿಗೇ ವಿಭಾಳನ್ನು ಬೆಳೆಸತೊಡಗಿದರು. ಪಕ್ಷದ ಟಿಕೇಟ್ ಕೊಡಿಸಿ ಶಾಸಕಿಯನ್ನಾಗಿಸಿದರು. ಈಗ ವಿಭಳಿಗೆ ಮೆಟ್ಟಿಲುಗಳನ್ನು ಏರಲು ಸಲೀಸಾಯಿತು. ಪಳಗಿದ ರಾಜಕಾರಣಿಯಾಗಿ ಬಿಟ್ಟಳು. ರಾಯರನ್ನೇ ಮೀರಿ ಬೆಳೆದು ರಾಯರನ್ನ ಒತ್ತರಿಸಿ ಬಿಟ್ಟಳು. ಅದಕ್ಕಾಗಿ ಅವಳು ತೆತ್ತ ಬೆಲೆ ಎಷ್ಟು?
ಕಾಮನೆಗಳು ಅರಳಬೇಕಾದ ಕಾಲದಲ್ಲಿ ಚಿವುಟಿ ಹಾಕಲ್ಪಟ್ಟ ಭಾವನೆಗಳು ಕೊನೆಯವರೆಗೂ ಅವಳ ಹೃದಯದಲ್ಲಿ ಪುಳಕದ ನವಿರು ಅಲೆಗಳನ್ನೂ ಏಳಲು ಬಿಡಲೇ ಇಲ್ಲಾ. ವಾಸುವನ್ನು ಒಲಿದಿದ್ದ ಮನಸ್ಸು ಮತ್ತಾರಿಗೂ ಒಲಿಯಲೆ ಇಲ್ಲಾ. ಸೇಡಿನ ಉರಿ ಆರಿಸಲು ಶಂಕರನನ್ನು ಕೈ ಹಿಡಿದಿದ್ದಳು. ಈ ಮದುವೆ ರಾಯರ ಬದುಕಿನಲ್ಲಿ ಎಂತಹ ಹೊಡೆತ ನೀಡಬಹುದೆಂದು ಊಹಿಸಿಯೆ ಸಂಭ್ರಮಿಸಿದ್ದಳು. ಅವರೆಸೆದ ರೀತಿಯಲ್ಲಿಯೇ ಗಾಳ ಎಸೆದು ಆಧಿಕಾರ ಪಡೆದಿದ್ದಳು. ಯಾರ್ಯಾರ ಯಶಸ್ಸಿನ ಮೆಟ್ಟಿಲಾಗಿದ್ದಳೋ ಇಂದು ಅವರನ್ನು ಮೆಟ್ಟಲುಗಳನ್ನಾಗಿ ಮಾಡಿ ಆಟವಾಡಿಸಬೇಕೆಂಬ ಬಯಕೆಯಿಂದ ಉತ್ಸುಕಳಾಗಿದ್ದಳೊ ಆ ಉತ್ಸಾಹವೇ ಇಂದು ದೂರಾಗಿತ್ತು. ರಾಯರ ಸಾವು ಅವಳ ಮನಸ್ಥಿತಿಯನ್ನು ಅಲ್ಲಾಡಿಸಿತ್ತು.
ಒಂದೊಂದೇ ಮೆಟ್ಟಿಲು ಏರುತ್ತಾ ತನ್ನ ನೈತಿಕತೆ ಹಾದಿಯಲ್ಲಿ ಇಳಿಯುತ್ತಾ ಪತನದ ಹಾದಿ ಹಿಡಿಯಲು ಕಾರಣರಾದ ರಾಯರ ಮೇಲೆ ಆಕ್ರೋಶವಿತ್ತು. ವಾಸುವಿನ ಸಾವಿನ ಹಿಂದಿನ ಕಾಣದ ಕೈ ರಾಯರದಿತ್ತೇ ಎಂಬ ಅನುಮಾನ ಕಾಡುತ್ತಿತ್ತು. ಮಗಳಂತಿದ್ದ ತನ್ನ ವಂಚಿಸಿ ತಮ್ಮ ಕಾರ್ಯಸಿದ್ದಿಸಿಕೊಂಡ ರಾಯರ ಕುಟಿಲತೆಯ ಬಗ್ಗೆ ಅಸಹ್ಯವಿತ್ತು. ಆಕ್ರೋಶವಿತ್ತು. ತನ್ನ ಈ ಸೌಂದರ್ಯವೇ ಶತ್ರುವಾದ ಬಗ್ಗೆ ಹೀನಾಯಗೊಂಡರೂ, ಅದೇ ಬಲದಿಂದ ರಾಯರನ್ನು ಮುಖ್ಯಮಂತ್ರಿಯನ್ನಾಗಿಸಿ, ಆ ಹಿಗ್ಗಿನಲ್ಲಿದ್ದ ಮುಖ್ಯಮಂತ್ರಿ ಹಾಸಿಗೆಗೆ ಎಳೆದಾಗಲೂ ಮನ ಅಳಲಿಲ್ಲ. ದಂಗೆ ಏಳಲಿಲ್ಲ. ಕಲ್ಲಾಗಿತ್ತು ಮನ.
ಹೆಬ್ಬಂಡೆಯಾಗಿತ್ತು ಭಾವ. ಅಂದೇ ಶಪಥಗೈದಿತ್ತು ಮನಸ್ಸು. ಅಸಹಾಯಕತೆ ಹೇಗೆ ತನ್ನ ಬದುಕನ್ನು ಬಲಿ ತೆಗೆದುಕೊಂಡಿತ್ತೋ, ಅಂತಹುದೇ ಬಲಿ ಬೇಡುವಷ್ಟು ಮನ ಕಠೋರವಾಗಿತ್ತು.
ಸಮಾಜದ ದೃಷ್ಟಿಯಲ್ಲಿ ತಾನು ಗಣ್ಯವ್ಯಕ್ತಿ. ಆದರೆ ತನ್ನೊಳಗಿನ ಕೊಳಕು ಅದೆಷ್ಟು ಜನರಿಗರಿವಿದೆ. ತಾನು ಬೇಡವೆಂದರೂ ಈ ಬದುಕು ತನ್ನ ಬಿಡಲಿಲ್ಲ. ಆಗ ತಾನೆಷ್ಟು ಬಲಹೀನಳಾಗಿದ್ದೆ. ಅಸಹಾಯಕಳಾಗಿದ್ದೆ. ಆದರೀಗ ನೆನೆದು ನಿಟ್ಟುಸಿರು ಬಿಟ್ಟಳು. ಎಲ್ಲವೂ ಗೊತ್ತಿದ್ದ ಶಂಕರ ತನ್ನ ಕೈಹಿಡಿದಿದ್ದಾನೆ. ಅವನೂ ಅಪ್ಪನಂತೆಯೇ ತನ್ನನ್ನು ಮೆಟ್ಟಲು ಮಾಡಿಕೊಂಡು ಏರುವ ಸನ್ನಾಹದಲ್ಲಿದ್ದಾನೆಯೇ? ಇಲ್ಲಾ ಇಲ್ಲಾ ಅದಕ್ಕೆ ಅವಕಾಶ ಮಾಡಿಕೊಡಬಾರದು. ಮೆಟ್ಟಿಲಾಗುವ ಬದುಕು ಸಾಕೆನಗೆ. ಈ ರಾಜಕೀಯ ಬದುಕೇ ಬೇಡ. ವಿದಾಯ ಹೇಳಿ ಬಿಡಲೇ, ಮುಂದೆ… ಪ್ರಶ್ನೆ ಕಾಡಿತು.
ಸಾಕಷ್ಟು ಸಂಪಾದಿಸಿದ್ದೇನೆ. ಅಸಹಾಯಕ ಅಬಲೆಯರಿಗೆ ಬದುಕು ಮೀಸಲಿಟ್ಟು ಬಿಡುತ್ತೇನೆ. ಇನ್ನು ಸಮಾಜಸೇವೆಯೇ ಮುಂದಿನ ಬದುಕು. ಮಕ್ಕಳಾಗುವ ವಯಸ್ಸು
ಮೀರಿದ ತಾನು ಒಂದಿಷ್ಟು ಆಸರೆ ಇಲ್ಲದ ಮಕ್ಕಳಿಗೆ ಅಮ್ಮನಾಗಿದ್ದು ಬಿಡಬೇಕು. ಹೌದು. ಮುಗಿಯಿತೆನ್ನುವ ಗುರಿ. ನಾಳೆಯೆ ಪ್ರೆಸ್ ಮೀಟ್ ಕರೆದು ರಾಜಕೀಯ ಸಂನ್ಯಾಸ ಸ್ವೀಕರಿಸಿ ಬಿಡುತ್ತೇನೆ. ಶಂಕರ್ ಬೇಕಾದರೆ ಮುಖ್ಯಮಂತ್ರಿಯಾಗಲಿ ಅಥವಾ ಬಿಡಲಿ. ಇನ್ನು ನನ್ನ ದಾರಿ ನನ್ನದು. ಮನಸ್ಸು ಈಗ ಪ್ರಪುಲ್ಲವಾಯಿತು. ನಿರಾಳವಾಯಿತು. ನೆಮ್ಮದಿ ತುಂಬಿತು. ಅಂದು ರಾತ್ರಿ ಕಣ್ತುಂಬ ನಿದ್ರೆ ಮಾಡಿದಳು. ಮೈ ಮರೆತು ನಿದ್ರಿಸಿದಾಗಲೆಲ್ಲ ಕಾಡುವ ಮೆಟ್ಟಿಲಿನ ಕನಸು ಅಂದು ಬೀಳಲೇ ಇಲ್ಲ.
*****
ಪುಸ್ತಕ: ದರ್ಪಣ