ನಮ್ಮನೆ ತೆಂಗಿನ ಮರಕ್ಕೆ ಎಂಟು
ವರ್ಷ ಆಯ್ತಂತೆ,
ಆದ್ರೂ ಎಷ್ಟೊಂದ್ ಎತ್ರ! ಮೊದ್ಲು
ಪುಟ್ಟಕ್ಕಿತ್ತಂತೆ
ನನಗೂ ಈಗ ಅಷ್ಟೇ ವರ್ಷ
ಆದ್ರೂ ಚಿಕ್ಕೋನು,
ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ
ಮರದಷ್ಟ್ ದೊಡ್ಡೋನು?
ಅಪ್ಪನ್ ಕೇಳ್ದೆ ಗದರಿಸಿ ಹೇಳ್ದ
ನನಗೀಗ್ ಬಿಡುವಿಲ್ಲ,
“ನೀ ಚಿಕ್ಕೋನು, ಹೇಳಿದ್ರೂನು
ನನಗದು ತಿಳಿಯೊಲ್ಲ”
ಅಮ್ಮನ್ ಕೇಳ್ದೆ ಹೇಳಮ್ಮಾಂತ
ಬಾಚಿ ತಬ್ಕೊಂಡ್ಲು.
ನಿಧಾನವಾಗಿ ಯಾಕೇನ್ನೋದ
ಎಲ್ಲಾ ಹೇಳಿದ್ಲು.
“ತೆಂಗಿನ್‌ಮರವೋ ಗಲಾಟೆ ಮಾಡ್ದೆ
ಸುಮ್ನೆ ಬೆಳೆಯತ್ತೆ,
ಹಗಲೂ ರಾತ್ರಿ ಬೆಳೆಯೋದನ್ನೇ
ಯೋಚ್ನೆ ಮಾಡತ್ತೆ
ನೀನ್ಹಾಗಲ್ಲ ಐವತ್ತೆಂಟು
ಕೀಟ್ಲೆ ಮಾಡ್ತಿರ್‍ತಿ,
ತಮ್ಮನ್ ಹೊಡ್ದು, ತಂಗೀನ್ ಚಿವುಟಿ
ಅಣ್ಣಂಗ್ ಬಯ್ತಿರ್‍ತಿ.
ಓದಿ ಬರೆದು ಕಲತ್ಕೊ ಒಳ್ಳೇ
ಬುದ್ಧಿ ನಡತೇನ,
ಆಗ ಗುಣದಲ್ ನೀನೂ ತೆಂಗಿನ
ಮರವೇ ಆಗ್ತೀಯ!
ಕಣ್ಣೀಗ್ ಕಾಣೋ ಎತ್ತರ ಒಂದೇ
ಮುಖ್ಯ ಅಲ್ಲ ಮರಿ
ಗುಣದಲ್ ಎತ್ರ ಆಗೋವ್ರೂನೂ
ತೆಂಗಿನ ಮರವೆ ತಿಳಿ”
*****