ಪ್ರಸನ್ನ ಶರದಿಂದುಮಂಡಲದಂತೆ ‘ಶ್ರೀ’ ಗುರುವೆ
ನೀವೆನ್ನ ಹೃದಯಪೀಠವನೇರಿದಂತೆನಗೆ
ನಿಮ್ಮ ಸಂಸ್ಮರಣೆ. ನಿಮ್ಮಿಂದ ಪಂಪನ ಜೊತೆಗೆ
ಬಂದರಾ ಪೇಕ್ಸ್‌ಪಿಯರ್ ಸಾಫೊಕ್ಲೀಸ್ ಭಾಸರೆ;
ದೈವಹತ ಧನ್ಯಾತ್ಮನಾದನಶ್ವತ್ಥಾಮನ್.
ಇತ್ತ ‘ಇಂಗ್ಲಿಷ್ ಗೀತೆ’ ಹೊಸತೊಂದು ಲೋಕಮನ್
ಕನ್ನಡದ ಕಣ್ಗೆ ತೆರೆದಿತ್ತು ಸಂಪ್ರೀತಿಯಲಿ.
ನಿಮ್ಮ ಸಿಂಹ ಧ್ವನಿಯೆ ಪಂಜಾಯ್ತು ಪಯಣದಲಿ.
ಈಗ, ನೀವಂದು ಮುತ್ತಿಟ್ಟು ಮೀರಿದ ನೆಲವೆ
ನಿಮ್ಮ ನೆನೆವಂತೆ ನನ್ನೆಣಿಕೆ. ಅಂತಿರಬಹುದೆ?
ಜ್ವಲಿಸುವ ವಸಂತವಿದೆ, ತಿಳಿನೀಲಿ ಗಗನವಿದೆ
ಅರೆ ಯಾವುದಿಲ್ಲಿ? ಅರೆ ನಿಮ್ಮ ದನಿಯೊಂದೆ!
ನಿಮ್ಮ ಸಿರಿ ದನಿಯೊಂದೆ, ಅರೆ ನಿಮ್ಮ ದನಿಯೊಂದೆ.
ಅರಕೆಯನೆ ಸರ ಕಟ್ಟಿ ನಿಮ್ಮಡಿಗಳಿಗೆ ತಂದೆ.
*****