ಇಲೀ ಮರೀ ಇಲೀ ಮರೀ
ಗಿಡ್ಡು ಪುಟಾಣಿ ಇಲೀ ಮರೀ
ಆಟಕ್ ಬಂದ್ರೆ ಕೊಡ್ತೀನಿ
ಬಿಸಿ ಬಿಸಿ ಕಡ್ಲೆ ಮಸಾಲ್ ಪುರಿ.
ಪುರ್ ಪುರ್ ಓಡ್ತೀ ಯಾಕಪ್ಪ?
ನಾನೇನ್ ಪೋಲೀಸ್ ಅಲ್ಲಪ್ಪ
ಹತ್ತಿರ ಬಂದು ಆಡಿದರೆ
ತಿಂಡೀ ತೋರಿಸ್ತೀನಪ್ಪ.
ಚಕ್ಕುಲಿ ತುಂಬಿ ಡಬ್ಬಕ್ಕೆ
ಅಮ್ಮ ಹೋದಳು ಸ್ನಾನಕ್ಕೆ
ಮುಚ್ಚಳ ತೆಗೆದು ಚಕ್ಲೀನ
ಇಬ್ಬರೆ ಸೇರ್‍ಕೊಂಡು ಮೇಯೋಣ!
ತಿಂಡೀ ಪೋತ ನೀನಂತೆ,
ನಿನ್ ಥರಾನೇ ನಾನಂತೆ!
ಬಾಯೋ ಫ್ರೆಂಡ್ಸ್ ಆಗೋಣ
ಡಬ್ಬ ಖಾಲೀ ಮಾಡೋಣ
ಡೊಳ್ಳು ಹೊಟ್ಟೆ ಗಣಪನ್ನ
ಹ್ಯಾಗೆ ಹೊರ್ತೀ ಇಲಿಯಣ್ಣ?
ಹೂತರೆ ಡುಮ್ಮ ಗಣಪನ್ನ-ನೀ
ಪಡ್ಚ ಆಗಲ್ವೇನಣ್ಣ?
*****