ಪ್ರಿಯ ಸಖಿ,
ಸಾವು ನಿಶ್ಚಿತವೆಂದು ತಿಳಿದೂ ಮಾನವ ತನ್ನ ಬದುಕಿನ ಕೊನೆಯ ಕ್ಷಣದವರೆಗೂ ತಾನು ಶಾಶ್ವತ. ತನ್ನಿಂದಲೇ ಪ್ರಪಂಚವೆಲ್ಲಾ ಎಂದುಕೊಂಡು ಇರುತ್ತಾನೆ. ಆದರೆ ಅವನು ಸತ್ತು ಹೆಣವಾದ ನಂತರ ಏತಕ್ಕೆ ಉಪಯೋಗಕ್ಕೆ ಬರುತ್ತಾನೆ? ಕವಿ ಜರಗನಹಳ್ಳಿ ಶಿವಶಂಕರ್ ಅವರು ತಮ್ಮ ಬಾಳಿಕೆ ಎಂಬ ಹನಿಗವನದಲ್ಲಿ.
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ.
ನೂರು ವರುಷ
ಆಳಿದ ಅರಸ
ಉಳಿಯಲಿಲ್ಲ ಹೆಣವಾಗಿ
ಮೂರು ದಿವಸ
ಎನ್ನುತ್ತಾರೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಮರ ಇದ್ದರೂ ಉಪಯೋಗಕ್ಕೆ ಬರುತ್ತದೆ. ಸತ್ತರೂ ಉಪಯೋಗಕ್ಕೆ ಬರುತ್ತದೆ. ಮಾನವ ಸತ್ತ ನಂತರವಂತೂ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಆದರೆ ಬದುಕಿದ್ದಾಗಲಾದರೂ ಇತರರಿಗೆ, ಸಮಾಜಕ್ಕೆ ಉಪಯೋಗವಾಗುವಂತೆ ಬದುಕಿದರೆ ಅದಕ್ಕಿಂತಾ ಧನ್ಯತೆ ಬೇರೆಲ್ಲಿದೆ.
ಈ ಮನುಜ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಅದನ್ನು ಸಾರ್ಥಕಗೊಳಿಸುವಂತೆ ಬದುಕುವುದು ಮನುಜನ ಕರ್ತವ್ಯ. ವ್ಯಕ್ತಿಗಳು ಅಳಿದರೂ ಅವರು ಮಾಡಿದ ಕೆಲಸ ಇತಿಹಾಸದ ಪುಟಗಳಲ್ಲಿ ದಾಖಲಾಗುವುದಂತೂ ಖಂಡಿತಾ. ಹಾಗಾದರೆ ಈ ಸಾವಿನ ಕಬಂಧ ಬಾಹುಗಳಲ್ಲಿ ಸಿಲುಕದೆ ಅವಿನಾಶಿಯಾಗಿ ಉಳಿಯುವುದು ಯಾವುದು? ಕಥೆಗಾರ, ಚಿಂತಕ, ಚದುರಂಗರು ‘ಮಾನವನ ಬದುಕಿನಲ್ಲಿ ಮರಣವೇ ಅತ್ಯಂತ ಪ್ರಮುಖವಾದ ಸತ್ಯವಾದ ಸಂಗತಿ, ಉಳಿದೆಲ್ಲಾ ವಿಷಯಗಳೂ ಗೌಣ. ಈ ಸಾವಿನ ಮರುಳುಗಾಡಿನಲ್ಲಿ ಅವಿನಾಶಿಯಾಗಿ ಉಳಿಯಬಲ್ಲ ಒಂದೇ ಒಂದು ವಸ್ತುವೆಂದರೆ-ಕಲೆ’ ಎನ್ನುತ್ತಾರೆ.
ಹೌದಲ್ಲವೇ ಸಖಿ ಯಾವ ಕಲೆಗೂ ಸಾವೆಂಬುದಿಲ್ಲ. ಅವಿನಾಶಿ ಕಲೆಯ ಹೆಸರಿನೊಂದಿಗೆ, ಕಲೆಗಾರ ಸತ್ತರೂ ಜೀವಂತವಾಗುಳಿಯುತ್ತಾನೆ! ನಿಜವಾದ ಬದುಕಿನ
ಸಾರ್ಥಕತೆ ಇರುವುದೇ ಇಲ್ಲಲ್ಲವೇ?
*****