ತಟಪಟ ತಟ್ಟುತ ಒಟ್ಟಿನಲಿ
ಕೋಲಿಂ ಕೆಲವರು ಹೊಲದಲ್ಲಿ,
ಕಿಣಿಕಿಣಿ ಮಣಿಯಿಂ ಕುಣಿಸುತಲಿ,
ಗಲಗಲ ಬಾಲರ ಒಲಿಸುತಲಿ.
ಡಂ ಢಂ ಡಾಂಬರ ಗಡಗಡಿಸಿ
ಪೆಂಪಾಪೆಂಪೆಂದು ಪೇಳಿರಿಸಿ,
ಲಲ್ಲಾಲ್ಲೆನ್ನುತ ಸೊಲ್ಲನೊಂದು
ಬಾಯೊಳು ಸಾಯಲು ಹಾತೊರೆದು!
ರತ್ನದ ಚಿನ್ನದ ಬಣ್ಣಗಳು,
ಹೊಳಪಿನ ಸುಲಲಿತ ಈ ಕಲೆಯು,
ಸೋಜಿಗದುಜ್ಜಿದ ಗೆಜ್ಜೆಯನು
ಕಾಲಲಿ ಸಾಲಲಿ ಠಣಠಣಿಸಿ!
ಆಚಿಂದೀಚೆಗೆ ಹಾಯುತಲಿ;
ಆನಂದದಾಡುತ ಹಾರುತಲಿ;
ಬಗ್ಗುತ ಏಳುತ ತಿರುಹುತಲು,
ಸಾಲಿಂ ಕೋಲ್ಗಳ ಕಟಕಟಿಸಿ.
ಸುಗ್ಗಿಯಲಗ್ಗದ ಸಗ್ಗವಿದು
ಒಗ್ಗುವ ಒಮ್ಮನದೊಲುಮೆಯಿದು;
ತಾಳದ ಗಣಗಣ ಪ್ರತಿಧ್ವನಿಯು,
ಮಾನಸಿಕಾಂಕ್ಷೆಯ ಸಿರಿಯೊಲವು.
ಕುಣುಕುಣು ಕುಲುಕುತ ಅಂಗಗಳೂ
ಥಕಥಕ ತಟ್ಟುತ ಪಾರುತಲಿ,
ಕೂಟದೊಳಾಟದ ಪಠನವಿದು
ಉತ್ಸವದಾಡಲು ಸಿರಿಸುರಿಯುಂ!
ಬಯಲಿನ ನಡುವಣ ಕುಣಿಬನವೂ,
ಬೆವರಿನ ದಣಿಮಣಿ ಚಿನ್ಮಣಿಯುಂ,
ನೋಡಲದಚ್ಚರಿ! ನಿಟ್ಟುಸುತ
ಆಡುವ ಬಗೆ-ಗೆಲು ಹುಟ್ಟಿಸುತ!
*****