ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಸದಿರು ತಂಬೂರಿ ||ಪ||
ಸರಸ ಸಂಗೀತದ ಕುರುಹುಗಳರಿಯದೆ
ಕರದೊಳ್ಹಿಡಿಬಾಡ ತಂಬೂರಿ ||ಅ.ಪ.||
ಮಧ್ಯದೊಳೇಳು ನಾದದ ತಂಬೂರಿ ಅದ್ನ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಕ್ಕ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||೧||
ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆಯರಿಯದಂಥ
ತಾಳಗೇಡಿಗೆ ಸಲ್ಲ ತಂಬೂರಿ ||೨||
ಸತ್ಯ ಸುಗುಣರಿಗೆ ತಂಬೂರಿ ಇದ
ನಿತ್ಯ ಉತ್ತಮರ್‍ಹಾಡುವ ತಂಬೂರಿ
ಬತ್ತೀಸರಾಗದ ಬಗೆಯನಯರಿದಂತ
ಕತ್ತೀಗಿನ್ಯಾತಕೆ ತಂಬೂರಿ ||೩||
ಅಸಮ ಸುಮ್ಯಾಳಕ ತಂಬೂರಿ ಇದು
ಕುಳಲರಿಗೊಪ್ಪುವ ತಂಬೂರಿ
ಶಿಶುನಾಳ ಗ್ರಾಮದೊಳು ಓದುವ ಪುರಾಣದಿ
ಹಸನಾಗಿ ಬಾರಿಸೋ ತಂಬೂರಿ ||೪||
* * * *