” ಮಾನವೇಚ್ಛೆಯನ್ನು ಹೋಗಲಾಡಿಸಿ ಪರಮೇಚ್ಛೆಯನ್ನು ಅನುಸರಿಸುವದೆಂದರೇನು ? ಅದನ್ನು ಸಾಧಿಸುವ ಬಗೆ ಯಾವುದು? ಪರಮೇಚ್ಛೆಯನ್ನು ಅನುಸರಿಸುವಾಗ ಉಂಟಾಗುವ ಎಡರುಗಳು ಯಾವವು? ಆ ಎಡರುಗಳನ್ನು ತೊಡೆದುಹಾಕಿದರೆ ಆಗುವ ಸುಗಮದಾರಿಯ ಲಕ್ಷಣಗಳೇನು ?- ಈ ಮೊದಲಾದ ತೊಡಕುಗಳನ್ನು ಬಗೆಹರೆಯುವಂತೆ ವಿಂಗಡಿಸಿ ವಿವರಿಸಬೇಕೆಂದು ಜೀವಜಂಗುಳಿಯು ಅತ್ಯಂತ ಪ್ರಾಂಜಲತೆಯಿಂದ ಕೇಳಿಕೊಂಡಿತು.
ಸಂಗನುಶರಣನು ತನ್ನ ಅಂತಃಕರಣದಲ್ಲಿ ಅಳವಟ್ಟ ಆಮೃತವಾಣಿಯನ್ನು ಹರಿಯಿಸಿಬಿಟ್ಟರುವ ರೀತಿಯೇನಂದರೆ-
“ಮಾನವೇಚ್ಛೆಯೆಂದರೆ ಮಾನವನ ಅಹ೦ಕಾರಯುಕ್ತವಾದ ಬೇಡಿಕೆ; ಶರೀರ-ಪ್ರಾಣ-ಮನಗಳ ಕ್ಷುದ್ರವಾದ ಆಶೆ-ಆಕಾಂಕ್ಷೆಗಳು.
ಅಹಂಕಾರಯುಕ್ತ ಆಶೆ-ಆಕಾಂಕ್ಷೆಗಳನ್ನು ತಿಳಿಯಿಸಿ ಅವುಗಳ ಸ್ಥಳದಲ್ಲಿ ಇನ್ನೊಂದು ಅದಾವುದೋ ಗಂಭೀರವೂ ನಿರ್ವಿಕಾರವೂ ಆದ ಅಭೀಪ್ಸೆಯನ್ನು ಸ್ಥಾಪಿಸಲೆಳಸುವದೇ ಪರಮೇಚ್ಛೆಯನ್ನು ಅನುಸರಿಸುವ ಪದ್ಧತಿಯಾಗಿದೆ.
ಮಾನವೇಚ್ಛೆಯ ಹೊಲಬುಗಳನ್ನು ಗುರುತಿಸಿ, ಅವು ಕರಗಿ ತಿಳಿಯಾಗುವಂತೆ ನಿರಂತರವಾಗಿ ಹೆಣಗಾಡುವುದೇ ಜೀವನ ಹೋರಾಟದ ಗುಟ್ಟು. ಅದಕ್ಕಾಗಿಯೇ ಬಾಳು-ಬದುಕು. ಅದಕ್ಕಾಗಿಯೇ ಸ್ನೇಹ-ವೈರ. ಅದಕ್ಕಾಗಿಯೇ ರೋಗ-ರುಜಿನ. ಅದರ ಸಲುನಾಗಿ ಗಟ್ಟಿಗೊಂಡು ನಿಲ್ಲುವದಕ್ಕಾಗಿಯೇ ಆರೋಗ್ಯ, ಸುಖ-ಸೌಲಭ್ಯಗಳು.
ಪರಮೇಚ್ಛೆ ದಿವ್ಯ ಸಂಕಲ್ಪವಾಗಿದೆ. ಪ್ರಯತ್ನವಾಗಲಿ, ವಾಸನೆಯಾಗಲಿ ಅದಕ್ಕಿರುವದಿಲ್ಲ. ಅದರ ದಿವ್ಯಸ೦ಕಲ್ಪ- ವಾಗಿರುವದರಿಂದ ಅದು ಮೈದಾಳುತ್ತಲೇ ಕಾರ್ಯಸಿದ್ಧಿಯೂ ಕಾಣಿಸಿಕೊಳ್ಳುತ್ತದೆ. ಅದನ್ನು ಕಾಣಬೇಕಾದರೆ
ಮಾನವೇಚ್ಛೆಯು ತಲೆಯಡಗಿಸಬೇಕು. ತಲೆಯಡಗಿದ ಮಾನವೇಚ್ಛೆಯೇ ದಿವ್ಯಸ೦ಕಲ್ಪವಾಗಿ ಪರಮೇಚ್ಛೆಯು ತಲೆಯೆತ್ತತೊಡಗುವದು.
ಮನಸ್ಸು ಶಾ೦ತವಾಗಿ, ಪ್ರಾಣವು ನಿಸ್ತಬ್ಬವಾಗಿ, ಶರೀರವು ಅಚಲವಾಗಿ ನಿಂತರೆ ಪರಮೇಚ್ಛೆಯ ಹೊ೦ಬಿಸಿಲು ಮುಗುಳುವದು.
ಶರೀರ-ಪ್ರಾಣ-ಮನಗಳನ್ನೊಳಗೊಂಡ ಪ್ರಕೃತಿಯ ಕೆಳಗಿನ ಗುಣಗಳೇ ಮಾಯೆಯೆನಿಸುವವು. ಪ್ರಕೃತಿಯ ಸ್ವಭಾವವೂ ಅದರ ಚಲನವಲನಗಳೂ ಬೇರೊಂದು ಹೆಜ್ಜೆಯಲ್ಲಿ ಅಡಿಯಿಡುವದಕ್ಕೆ ರೂಢಿಯಾಗಿ ಬಿಟ್ಟಿದ್ಧರಿ೦ದ ಆ
ತಪ್ಪು ಹೆಜ್ಜೆಯನ್ನು ತಿದ್ದಿ ಸರಿಯಾದ ಹೆಜ್ಜೆಯಿಡಿಸುವದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ, ಮಾಯೆ ಮಾಡಿಕೊಂಡ ಗಂಡನನ್ನೇ ಬಿಡಬಲ್ಲಳೇ ಹೊರತು ಗುಣಗಳನ್ನು ಬಿಡುವ ಗುಣವಂತಿಯಲ್ಲ ಆಕೆ. ಆಕೆಯ ಗುಣಗ
ಳಾದರೋ ಅತಿ ವಿಚಿತ್ರವಾಗಿವೆ.
ಆ ಮಾಯೆಯ ಗುಣಗಳ ಆಳಿಕೆಗೊಳಗಾಗಲಾರದ ವ್ಯಕ್ತಿಯೇ ಸಿಗಲಾರನೆಂಬುದು ನಿಜವೇ. ಆದರೂ ಗುಣಗಳನ್ನು ಗುರುತಿಸುವುದು ಸಹ ವ್ಯಕ್ತಿಗೆ ಅತ್ಯಂತ ಕಠಿಣವಾಗಿರುತ್ತದೆ. ಅದನ್ನು ಗುರುತಿಸುವ ಕಲೆ ಕೈವಶವಾದರೂ ಕಡಿಮೆಯ ಮಾತಾಗುವದಿಲ್ಲ.
ಕಾಯಕ್ಕೆ ನೆಳಲಾಗಿ ಕಾಡಿತ್ತು, ಮಾಯೆ.
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ.
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ.
ನೆನಹಿ೦ಗೆ ಅರಿವಾಗಿ ಕಾಡಿತ್ತು ಮಾಯೆ.
ಜಗದ ಜಂಗಂಳಿಗೆ ಬೆಂಗೋಲನೆತ್ತಿ
ಕಾಡಿತ್ತು-. ಮಾಯೆ.
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯ-
ನಾರೂ ಗೆಲಲಾರರು.
ಚೆನ್ಮಮಲ್ಲಿಕಾರ್ಜುನನೊಡ್ಡಿದ ಮಾಯೆ ಅದು. ಜಗದ ಜಾಲಗಾರನು ಜಗದ ತುಂಬ ಹರಡಿದ ಮಲಕಿನ ಬಲೆ. ಅದನ್ನಾರೂ ಬಿಡಸಲಾರರು. ಅದರೊಳಗಿಂದ ಯಾರೂ ಕಡೆಗಾಗಲಾರರು. ಬಲೆಯನೊಡ್ಡಿದ ಬಲೆಗಾರನೇ
ಸುಲಭವಾಗಿ ಕಡೆಗಾಗಬಲ್ಲನು. ಅವನೊಡನೆ, ಅವನ ಕೈಹಿಡಿದವನೇ ಕಡೆಗಾಗಬಲ್ಲನು. ಅದನ್ನು ಬಿಟ್ಟರೆ ನಿಜವಾಗಿಯೂ ಮಾಯೆಯನ್ನು ಯಾರೂ ಗೆಲ್ಲಲಾರರು. ಗೆಲ್ಲಲೇ ಆಗದು.
ಮಾಯೆಯೆಂದರೆ ಕಣ್ಣುಕಟ್ಟೆಂದು ತೋರುವುದೂ ಇಲ್ಲ; ತಿಳಿಯುವದೂ ಇಲ್ಲ. ಅದು ಕಣ್ಣು ಮಸುಕೆ೦ದು ಬಗೆಯು- ವದಕ್ಕೂ ಆಗದು. ಯಾಕಂದರೆ ಹೊತ್ತು ಹೆತ್ತು ತುತ್ತಿಟ್ಟ ತಾಯಿ; ಮೋಹದಿಂದ ಮುದ್ದು ಬೀರಿ ಮುದ್ದು ಗೈಯುವ ಮಗು; ಕೈಹಿಡಿದು ಜೀವನದ ಜೊತೆಗಾರ್ತಿಯಾಗಿ ಅರ್ಧಾಂಗಿಯಂತೆ ನಿಂತ ಪತ್ನಿ; ಈ ಎಲ್ಲ ವ್ಯಕ್ತಿಗಳೂ ಆ ವ್ಯಕ್ತಿಗಳಿಗೆ ಹಿನ್ನೆಲೆಯಾಗಿ ನಿಂತ ಜೀವನ ಸೌಲಭ್ಯಗಳಿಗೂ ಮಾಯೆಯೆಂದು ಯಾರು ಬಗೆಯ ಬಲ್ಲರು? ಅದೇ ಜೀವನದ ಜೀವಾಳವೆಂದು ತೋರುತ್ತಿರುವಾಗ ಅದಕ್ಕೆ ಬಿಸಿಲುಗುದುರೆಯೆಂದು ಬಗೆಯುವ ಬುದ್ಧಿ ಯಾರಿಗೆ ಉಂಟಾದೀತು ? ತಾಯಿಯೂಡಿಸುವ ಮೊಲೆವಾಲಿನಲ್ಲಿಯೇ ನಂಜು ಬೆರೆತಿದ್ದರೆ, ಬದುಕುವದಕ್ಕೆ ನೆಲೆಯಲ್ಲಿ ? ಕುಡಿಯುವ ನೀರಿನಲ್ಲಿ ವಿಷ ಬೆರೆತಿದ್ದರೆ ಬಾಳುವದಕ್ಕೆ ಠಾವೆಲ್ಲಿ? ಜೀವ ಸತ್ವದ ತುತ್ತು ಜೀವನಾಶಕ ಕುತ್ತಾಗಿ ಬಿಟ್ಟರೆ ಅಡಗುವುದಿನ್ನೆಲ್ಲಿ ?
ತನ್ನವರಾಗಿ ಬಂದು ನಿಂತು ಮೋಸಕ್ಕೀಡು ಮಾಡುವ ಠೌಳಿಯಿಂದ ಬಿಡುಗಡೆ ಹೊಂದುವದು ಸುಲಭವಾದೀತೇ? ಸಹಜವಾದೀತೇ? ಅನ್ನಿಗರ ಮೋಹದ ಬಲೆಗೂ ಮರುಳಾಗುವ ಮಾನವನು, ತನ್ನವರ ಕರುಳಿನ ಆಟವು ಮರುಳಿನ ಮಾಟವೆಂದು ಭಾವಿಸುವುದು ಸುಲಭವೇನಲ್ಲ.
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ.
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ.
ಇದಾವಾವ ಪರಿಯಲ್ಲಿ ಕಾಡಿಸಿತು ಮಾಯೆ.
ಈ ಮಾಯೆಯ ಕಳೆದರೆ ಎನ್ನಳವಲ್ಲ.
ನೀನೇ ಬಲ್ಲರಿ ಕೂಡಲಸಂಗಮದೇವಾ.
ಕೀಲಿಸಿದವನ ಹತ್ತಿರವೇ ಕೀಲಿಯಿರಬಲ್ಲದು. ಗಂಟಿಕ್ಕಿದವನಿಗೇ ಬಿಚ್ಚುವುದಕ್ಕೆ ಸುಲಭವಾಗುವದು. ಅದು ಮಾನವನ ತುತ್ತಲ್ಲ. ಯಾಕ೦ದರೆ ಮರೆತವನೇ ಮಾನವನೆನಿಸುತ್ತಾನೆ. ಅರಿತ ಶರಣನು ಮಾತ್ರ ಆ ಕೀಲು ಬಲ್ಲನು. ಅವನೇ ಹಾವಸೆಗಲ್ಲಿನ ಹಾದಿಯಲ್ಲಿ ಹೆಜ್ಜೆಯಿಟ್ಟು ದಾಟಬಲ್ಲನು, ಮಾಯೆಯ ಸಾಗರವನ್ನು ದಾಟುವದಕ್ಕೆ ಭಕ್ತಿಯೇ ಈಸುಗುಂಬಳ. ಭಕ್ತಿಯ ಸಂಗಡಿಯೊಂದು ಮಾತ್ರ ಸಂಗಡವಿದ್ದರೆ ಎಂಥ ಅಪರಂಪಾರವಾದ ಜಲಾಶಯವಾದರೂ ಅಡಿ ತೋಯಿಸಲಾರದು.
ಭಕ್ತಿ ಬಾಳೆಯಂತೆ ಬಾಗಿಕೊಂಡಿರುತ್ತದೆ. ಮಾವಿನಂತೆ ತುಂಬಿಕೊಂಡಿರುತ್ತದೆ. ಅದು ಸೇವೆಯಿಂದ ಸಾರ್ಥಕಗೊಳ್ಳಬೇಕಾಗಿರುತ್ತದೆ. ಅದರ ಮಾಧುರ್ಯವು ಪರಮಾತ್ಮನಿಗೆ ಪರಮ-ನೈವೇದ್ಯವಾಗಬೇಕಾಗಿರುತ್ತದೆ.
ಭಕ್ತಿಯು ನಡೆಸುವ ಸೇವೆಯೇ ದಾಸೋಹವೆನಿಸುತ್ತದೆ. ದಾಸೋಹವೃತ್ತಿಯಿಂದ ಕಲ್ಯಾಣಶಕ್ತಿಯು ಮೊಳೆತು ಜಿಗಿಯತೊಡಗುತ್ತದೆ. ದಾಸೋಹವೃತ್ತಿ ಯಿಂದ ಅನಿಷ್ಟದ ಪರಿಸರವು ಹರಿದು ಹೋಗಿ ಬಯಲಾಗತೊಡಗುತ್ತದೆ. ಅನಿಷ್ಟವು ಮಾಯೆಯ ಮುಖನಾದರೆ, ಆಶೆಯು ಅದರ ಮೂಗು. ಆ ಮೂಗು ಒಳ್ಳೆಯ ವಾತಾವರಣವನ್ನೆಲ್ಲ ಎಳೆದುಕೊಂಡು ವಿಷವಾತಾವರಣವನ್ನು ಹರಹುತ್ತಿರುತ್ತದೆ. ಅದರ ಉಸಿರಾಟವು ಕಲ್ಯಾಣಕರನಾಗಬೇಕಾದರೆ,
ಸೇನೆಯ ಚೂಡಾಮಣಿಯಾದ ದಾಸೋಹದ ದಾರಿ ಫಲಕಾರಿಯಾದುದು,
ಆಶೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು.
ಆಶ್ರಯದ ನಿಃ ಕ್ರೀ ಕೆಟ್ಟತ್ತು.
ಗ್ರಾಸ ಮೆಲ್ಲನಾಯಿತ್ತು.
ಸ್ತ್ರೀಯರ ಮೇಲಣಿಚ್ಛೆ ಕೆಟ್ಟಿತ್ತು.
ಈಶ್ವರಾ ನಿಮ್ಮ ಪಾದಾಂಬುಜ ಸೇವೆಯಿಂದ
ಕಾಣಾ ರಾಮನಾಥಾ.
ಪರಮಾತ್ಮನ ಪಾದಾಂಬುಜ ಸೇವೆಯಾದ ದಾಸೋಹದಿಂದ ಊಟದ ದುರಾಶೆ ದೂರವಾದರೆ, ಸ್ತ್ರೀಯರ ಮೇಲಣಿಚ್ಛೆ ಮರೆಯಾಗಿ ಬಿಡಬೇಕು. ಹಾಗೆ ಪರಿಣಮಿಸಿದಾಗ ಮಾತ್ರ ದಾಸೋಹವು ಸಾರ್ಥಕವಾಯಿತೆಂದು ಬಗೆಯಬೇಕು. ದಾಸೋಹವು ಯಾಂತ್ರಿಕವಾಗಿದ್ದರೆ ಆಶೆಯ ನಾಗಾಲೋಟಕ್ಕೆ ಪರಿಣಾಮಕಾರಿಯಾದ ಪರಿಸ್ಥಿತಿಯುಂಟಾಗಲಾರದು. ದ್ರವ್ಯದ ಅನುಕೂಲವಿದ್ದಲ್ಲಿ ದಾಸೋಹವು ಯಾಂತ್ರಿಕವಾಗಿ, ತಾಂತ್ರಿಕವಾಗಿ, ನಡೆಯಲಿಕ್ಕೆ ತಕ್ಕ ಸುಸಂದರ್ಭವನ್ನು ತಂದು ಕೊಡುತ್ತದೆ. ಯಾಂತ್ರಿಕವಾದ ದಾಸೋಹವು ಇಷ್ಟವಾದ ಪರಿಣಾಮವನ್ನು ಉಂಟು ಮಾಡುವದಕ್ಕೆ ಎಂದಿಗೂ ಸಮರ್ಥವಾಗಲಾರದು. ಅರ್ಧಾನುಕೂಲತೆಯು ದಾಸೋಹಕ್ಕೆ ಎಳಸುವ ಮುಖ್ಯಕಾರಣ ವೆಂದರೆ ಅಹಂಕಾವೇ ಸರಿ. ಅಹಂಕಾರದ ಪರಿಮಾರ್ಜನವೇ ದಾಸೋಹದ ಫಲಪರಿಣಾಮವೆಂದು ಬಗೆದಿರುವಾಗ, ದಾಸೋಹದಿಂದ ಅಹಂಕಾರವೇ ಮೊತ್ತ ಮೊತ್ತವಾಗಿ ಹುಟ್ಟಿಬರುತ್ತಿದ್ದರೆ, ದಾಸೋಹವೂ ವ್ಯರ್ಥ; ದ್ರವ್ಯವೂ ಅಪವ್ಯಯ, ಅಸಾರ್ಥಕ. ಅಂತೆಯೇ ಅದು ಯಾಂತ್ರಿಕವಾದ ದಾಸೋಹವೆನಿಸುತ್ತದೆ; ಅದು ತಾಂತ್ರಿಕವಾಗಿರುವಂತೆ ಅತಂತ್ರವೂ ಆಗಿರುತ್ತದೆ.
ಅರ್ಥವುಂಟೆಂದು ಅಹಂಕರಿಸಿ ಮಾಡುವ ಭಕ್ತಿ
ತೊತ್ತಿನ ಕೂಟದ ತೂರ್ಯ ಮೇಳದಂತೆ.
ತನುಮನಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ
ಮನೆಯ ಕೂಳು,
ಶುನಕನ ಬಾಯ ಎಲುವ ಪ್ರತಿ ಶುನಕ ತಿಂದಂತೆ
ಕಾಣಾ ರಾಮನಾಥಾ.
ಅಹಂಕಾರವನ್ನು ಹೆಚ್ಚಿಸುವ ದಾಸೋಹವು ದಾಸೋಹವೇ ಅಲ್ಲ. ಅನ್ನದಾನವು ಅನ್ನದಾನನೆನಿಸದೆ, ಎಂಜಲಕೂಳು ಎನಿಸುತ್ತದೆ. ಎಂಜಲುಕೂಳು ನೀಡಿ; ಅಹಂಕಾರದ ತ್ಯಾಗವನ್ನು ಬಯಸುವದು ಮರುಳಾಟ. ದಾಸೋಹವು ಲೇಸಿನ ದಾರಿಯೇನೋ ಸರಿ. ಲೇಸನ್ನು ಸಹ ಆಶಿಸಿ ಬಯಸಕೂಡದು. ಆಶೆಯ ಪರಿಹಾರಕ್ಕಾಗಿ ಆಚರಿಸುವ ಲೇಸಿನ ದಾಸೋಹವು ಆಶೆಯ ಕಲಂಕವನ್ನು ಎಷ್ಟೂ ಉಳಿಸಿಕೊಳ್ಳುವದು ಸರಿಯಲ್ಲ. ದಾಸೋಹವೆಂದರೆ ನಮ್ಮ ಸ್ವಾಭಾವಿಕವಾದ ಕರ್ತವ್ಯ. ದೊರೆಯುವುದು ದೊರೆವ ಕಾಲಕ್ಕೆ ದೊರಕೊಳ್ಳುವುದು. ಕಾಲ ಕೂಡಿ ಬಂದಾಗ ಕಾಲಹರನು ಒಂದು ಕ್ಷಣ ಸಹ ತಡ ಮಾಡದೆ ಕೊಡಮಾಡುವನು.
ಲೇಸ ಕಂಡು ಮನ ಬಯಸಿ ಬಯಸಿ
ಆಶೆಮಾಡಿದಡಿಲ್ಲ.
ತಾಳಮರಕ್ಕೆ ಕೈಯ ನೀಡಿ ಮೇಲೆ ನೋಡಿ
ಗೋಣು ನೊಂದುವಯ್ಯಾ.
ಕೂಡಲಸಂಗಮದೇವ ಕೇಳಯ್ಯ.
ನೀನೀವ ಕಾಲಕ್ಕಲ್ಲದೆ ಇಲ್ಲ ಕಂಡಯ್ಯ!
ಲೇಸು ಲೇಸಾಗಿದ್ಧರೂ ಬಯಕೆಯ ಪಡಿನೆಳಲು ಬಿದ್ದಮಾತ್ರಕ್ಕೆ ಲೇಸಿನ ಲೇಸು ಗುಣವು ಉಳಿಯದೆ ಎಲ್ಲಿಯೋ ಅಡಗುವದು. ಲೇಸಿನ ಬಯಕೆಯೆಂದರೆ ತನ್ನಿಚ್ಛೆಯ ನುಡಿದಂತೆ. ಆಗ ಮನವು ಮೆಚ್ಚಿದರೆ ಅಚ್ಚರಿಯಲ್ಲ. ಇದಿರಿಚ್ಛೆಯ ನುಡಿದಾಗಲೂ ಮನವು ಮೆಚ್ಚಿ ಮೆಚ್ಚಿ ನಲಿಯಬೇಕು. ಇಲ್ಲಿಯೆ ಮಾನವೇಚ್ಛೆಯ ತ್ಯಾಗದ ನಿಲುಮೆ. ಇಲ್ಲಿಯೇ ಪರಮೇಚ್ಛೆಯ ಸ್ವೀಕಾರದ ಒಲುಮೆ. ಇದೇ ಆರ೦ಭದ ಬಿಂದು. ಮೊದಲ ಮೆಟ್ಟಲು.
ಕಾಲವು ಕೂಡಿ ಬಂದ ಕೂಡಲೇ ಕಾಲಹರನು ಕೊಡಬೇಕಾದುದನ್ನು ಟ್ಟು ಬಿಡುವನೆಂದು ತಿಳಿದ ನಾವು ಕೊಡಬಂದ ಕಾಲಹರನನ್ನು ಗುರುತಿಸುವುದಕ್ಕೆ ನಮಗೆ ಹೊಸದೃಷ್ಟಿಬೇಕು. ತೆರೆದ ಕಣ್ಣು ಬೇಕು; ತಿಳಿ ಕಣ್ಣುಬೇಕು. ಕೊಡಬೇಕಾದ ಕಲ್ಯಾಣ ವಸ್ತುವನ್ನು ನೀಡ ಬಂದ ತಂದೆ, ಎಂಥವನೆಂಬುದನ್ನು ತಿಳಿಯದಿದ್ದರೆ ಮೋಸಕ್ಕೀಡಾಗ ಬಲ್ಲೆವು. ಧರ್ಮವು ಕೊಡಬಂದಾಗ ಕರ್ಮವು ಕಟ್ಟಿಕೊಂಡು ಹೋಗಬಹುದು. ಹಾಲು ಕುಡಿಸ ಬರುವ ಅಕ್ಕರೆಯ ಕರುಳು ನಮ್ಮನ್ನು ಒಲಿಸಬಹುದು; ರಂಬಿಸಬಹುದು; ಮುಂಡಾಡಲೂ ಬಹುದು; ಮೈದಡುಹಲೂ ಬಹುದು. ಅಷ್ಟಾಗಿಯೂ ಹಸುಳೆ ಹಾಲು
ಕುಡಿಯಲು ಅಲ್ಲಗಳೆಯುವಾಗ ಒಲ್ಲಗಳೆಯುವಾಗ ಆ ಅಕ್ಕರೆಯ ಕರುಳು ಮಾಡುವುದೇನು ಉಳಿಯುವದು? ಮುಖ ತಿರುಹಿದ ಕೂಸಿಗೆ ಆಶೆಹುಟ್ಟಿಸುವದೂ, ಬಾಯಿಮುಚ್ಚಿದ ಹಸುಳೆಗೆ ಬಾಯಿ ತೆರಸುವುದೂ ಸ್ವಾಭಾವಿಕವಾದ ದಾರಿ. ಅದಕ್ಕಾಗಿ ಆ ಕರುಳು ಕೈಯಲ್ಲಿ ಕೋಲು ಹಿಡಿಯಬಹುದು; ಬೆನ್ನ ಮೇಲೆ ಕೋಲೆತ್ತಬಹುದು; ತಲೆಯ ಮೇಲೆ ಕೋಲೆರಗಿಸಬಹುದು.
ಎಡದ ಕೈಯಲು ಹಾಲು ಬಟ್ಟಲು,
ಬಲದ ಕೈಯಲು ಓಜುಗಟ್ಟಗೆ.
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲ ಕುಡಿಸುವ ತಂದೆ ?
“ದಂಡಕ್ಷೀರದ್ವಯಂ ಹಸ್ತ ಜಂಗಮೋ ಮಂದಿರಂ
ಅತಿ ಭಕ್ತ್ಯಾಲಿಂಗ ಸಂತುಷ್ಟಿಃ ಅಪಹಾಸ್ಯಂ ಯಮದಂಡನಂ.”
ಎಂಬುದಾಗಿ ಕೂಡಲಸಂಗಮದೇವಯ್ಯ. ತಾನೇ
ಭಕ್ತಿಪಥವ ತೋರುವ ತಂದೇ.
ಪರಮೇಚ್ಛೆಯ ಪರಿಣಾಮದಿಂದ ಹಾಲುಕುಡಿಯುವದೇ ಅನಿವಾರ್ಯ ವಾದರೂ ಒಮ್ಮೊಮ್ಮೆ ಓಜುಗಟ್ಟಿಗೆಯ ಕಡಬು ತಿಂದ ಬಳಿಕ, ಹಾಲು ಕುಡಿಯುವ ಪ್ರಸಂಗವೂ ಬರುವದುಂಟು. ಹಾಲು ತಂದವನ ಕೈಯಲ್ಲಿ ಓಜುಗಟ್ಟಗೆಯೂ ಉಂಟೆಂಬುದನ್ನು ಲಕ್ಷ್ಯದಲ್ಲಿಡತಕ್ಕದ್ದು. ಮಾನವೇಚ್ಛೆಯು ಹಾಲು ಮಾತ್ರ ಕುಡಿಯಬೇಕೆನ್ನುತ್ತದೆ. ಪರಮೇಚ್ಛೆಯು ಪೆಟ್ಟು ಸಹ ಅದರೊಡನೆ ತಿನ್ನಬೇಕಾಗುತ್ತದೆಂದು ಸ್ಪಷ್ಟವಡಿಸುತ್ತದೆ. ಪರಮೇಚ್ಛೆಗೆ ವರದ ಕರವಿರುವಂತೆ, ಪಾಶಾಂಕುಶಕರವೂ ಇರುತ್ತದೆ. ಅಭಯ ಹಸ್ತವೊಂದೇ ಇರದೆ, ಕಾಳಹಸ್ತವೂ ಅದರೊಂದಿಗಿದೆ.
ಓಜುಗಟ್ಟಿಗೆಯ ಪೆಟ್ಟು ಮಾನವೇಚ್ಛೆಯನ್ನು ಕರಗಿಸುವ ಕಳೆ. ಹಾಲು ಕುಡಿಸುವ ಒಲವು ಪರಮೇಚ್ಛೆಯನ್ನು ಕುದುರಿಸುವ ಬೆಳೆ. ಕಸ ತೆಗೆದಂತೆ ಬೆಳೆಗೆ ನಿರ್ವಿಘ್ನತೆ. ಕಸತೆಗೆದು ನಿರ್ವಿಘ್ನತೆಯುಂಟು ಮಾಡಿದ ಮಾತ್ರಕ್ಕೆ
ಸಾಲದು. ಬೆಳೆಗೆ ಹೊಯ್ ನೀರು ಹಾಯಿಸುವದೂ ಅವಶ್ಯವಾಗಿ ಮಾಡಬೇಕಾದ ಉಪಾಯವಾಗಿದೆ. ಹಾಗೆ ಮಾಡುವುದೇ ಅತ್ಯುತ್ತಮವಾದ ಕೃಷಿಯೆನಿಸುತ್ತದೆ.
ಪ್ರಕೃತಿಯ ಗುಣಗಳು ಇಂಗಬೇಕು. ಅಂತರಂಗದ ಭಕ್ತಿಸೆಲೆಯು ನೆಗೆಯಬೇಕು-ಇದೇ ಉತ್ತಮ ಪಯರಿನ ಲಕ್ಷಣ. ಪ್ರಕೃತಿ ತತ್ವವು ಪುರುಷ ಸತ್ವವನ್ನು ಒಲಿದು ಬೆಂಬಳಿಸಬೇಕು. ಅಂಗವು ಲಿಂಗಕ್ಕಾಗಿ ಭ್ರಾಂತಿಗೊಂಡು
ಬೆಂಬಳಿಸಬೇಕು. ಇದೇ ಸಫಲ ಬೆಳಸಿನ ಕುರುಹು. ಇದೊಂದು ಕರುಣೆ. ಅಂದರೆ ಬಲೆಯನ್ನು ಹರಹಿದವನೇ ಬಯಲ ಮಾಡುವ ಚಲಕ, ಚಾಪಲ್ಯ.
ಅರೆತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿರಸ.
ಅವರಿಸಿತಯ್ಯ ಅಂಗ ಲಿಂಗವನು.
ಏನೆಂದರಿಯೆನಯ್ಯ ಲೋಕ ಲೌಕಿಕದ ಮದವ.
ಲಿಂಗ ಭ್ರಾಂತನಾದೆನಯ್ಯ ಕೂಡಲಸಂಗಮದೇವಾ
ನಿಮ್ಮ ಕರುಣ ಎನ್ನನೆಡೆಗೊಂಡಿತ್ತಾಗಿ.
ಪರಮೇಚ್ಛೆಯ ಕವಚ ತೊಟ್ಟು ನಿಂತ ಜೀವವು, ನಿರ್ಭಯನಾಗಿ ನಿರಾತಂಕನಾಗಿ ಜೀವನ ನಡೆಯಿಸ ಬಲ್ಲದು. ಅಂಥ ಜೀವಿಗೆ ಸೋಲು ಎಲ್ಲಿ, ಅಪಯಶ ಎಲ್ಲಿ? ಆ ಜೀವವು ದಣಿವಿಗೆ ಇಂಬಾಗಲಾರದು; ತಣಿವಿಗೆ ಹಾತೊರೆಯಲಾರದು. ಅದು ಪರಾಮಾತ್ಮವೃಕ್ಷದೊಡನೆ ಕಸಿಮಾಡಿದ ತೊಂಗಲು. ಪರಮಾತ್ಮವೃಕ್ಷದ ರಸ, ಮಾಧುರ್ಯ, ಶಕ್ತಿ, ಸತ್ವಗಳೆಲ್ಲ ತೊಂಗಲಲ್ಲಿ ಸಂಚರಿಸತೊಡಗುವವು. ತೊಂಗಲು ವೃಕ್ಷಕ್ಕೆ ಒಂದ೦ಗವೇ ಆಗಿ ನಿಲ್ಲುವದು. ಆಗ ವಾತಾವರಣವು ಉಸಿರಾಟದ ದಾರಿಯಾಗುವದು. ಪರಿಸರವು ಗಾಳಿಗೊಬ್ಬರದ ಹದವಾಗುವದು. ಜೀವನವು ಲೀಲೆಯಾಗುವದು. ಆನಂದದ ಸೆಲೆಯಾಗುವದು.”
ಕೊನೆಯಲ್ಲಿ ಜಗಜ್ಜನನಿಯು ಯಾವ ನುಡಿಗಳಿಂದ ವಿಷಯವನ್ನು ಪರಿಪೂರ್ತಿಗೊಳಿಸಿದಳೆಂದರೆ-
“ಯಾವ ಮಾನವೇಚ್ಛೆಯೂ ಪರಮಸಂಕಲ್ಲವನ್ನು ಎದುರಿಸಿ ನಿಲ್ಲಲಾರದು. ಎದುರಿಸಿ ನಿಂತರೂ ಕೊನೆಯವರೆಗೆ ಉಳಿಯಲಾರದು. ಆದಕಾರಣ ಮಕ್ಕಳೇ, ನೀವು ಸಂಪೂರ್ಣವಾಗಿ ಪರಮಾತ್ಮ ಪಕ್ಷಕ್ಕೆ ನಿಲ್ಲಿರಿ. ನೀವು ಅನನ್ಯವಾಗಿ ಪರಮಾತ್ಮ ಪಕ್ಷಕ್ಕೆ ನಿಲ್ಲಿರಿ. ಆಗ ನಿಮಗೆ ಕೊನೆಯ ವಿಜಯವು ನಿಶ್ಚಯನಾಗಿಯೂ ದೊರಕೊಳ್ಳುವದು. ಅಂತಿಮ ವಿಜಯಕ್ಕಾಗಿ ನಡುಗಟ್ಟಿರಿ..ಅಂತಿಮ ವಿಜಯಕ್ಕಾಗಿ ಪರಮಸಂಕಲ್ಪವನ್ನು ಆಶ್ರಯಿಸಿರಿ. “