ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ
ಹೃದಯಗಳು ಮಿಡಿಯುತಿವೆ ಅಸಂಖ್ಯ
ನಾಡಿ ತುಡಿಯುತಿವೆ ಅಸಂಖ್ಯ
ನಾದ ಮೊಳಗುತಿವೆ ಅಸಂಖ್ಯ
ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ
ಇವು ಬರೀ ಕರಿಬಣ್ಣದ ಅಂಕು ಡೊಂಕು ಆಕಾರಗಳೆನ್ನುವಿಯಾ?
ಸೂರ್ಯೋದಯ ಸೂರ್ಯಾಸ್ತದ ಇನಿದಾದ ಬನಿ
ಏರು ಹೊತ್ತಿನ ಪ್ರಖರ ಸಾರ ಧುನಿ
ಗುಲಾಬಿ ಗೋರಂಟಿ ತಾವರೆ ತಂಗಡಿಕೆ ಹೂಮಿಸುನಿ
ಕೋಗಿಲೆ ಕಾಗೆ ಕಾಜಾಣ ಗುಬ್ಬಿ ಗಿಳಿ ಗೊರವಂಕಗಳ ಕುಕಿಲು ದನಿ
ನದಿ ಕೊಳ್ಳ ಜಲಪಾತಗಳ ಧುಮ್ಮಿಕ್ಕುವ ಭೋರ್ಗರೆತ
ಸರಾಗ ಹರಿವ ಕಲಕಲ ಧ್ವನಿ
ಮಲೆ ಮಲೆಗಳ ಅಲೆ ಅಲೆ ಮೈನರಗಳಲೆದಾಡಿದ
ಕುಸುರು ಕಲೆಯ ಕಲರವ
ಹುಲಿ ಸಿಂಹ ಆನೆ ಕರಡಿ ಹಂದಿ ಎಮ್ಮೆ ಎತ್ತು
ಬೆಕ್ಕು ಬಾವಲಿ ಹಾವು ಮುಂಗುಸಿ ಪ್ರಾಣಿ ಬಳಗಗಳ ಜೀವ ಧ್ವನಿ
ಇದರಲ್ಲಿ ಎಲ್ಲ ಅಡಗಿವೆ
ಬಾಲ ಭಾಷೆಯ ಕಲಿಸಿವೆ
ಭಾವ ಸ್ವಭಾವಗಳ ಬಲಿಸಿವೆ
ನೆಲವನಪ್ಪುವ ಮೂಲ ಸೆಲೆಗೆ,
ಅನ್ನಮಾಂಸದಗುಳಿಗೆ
ತನ್ನತನದುಳಿವಿಗೆ ಪ್ರಾಣ ತರ್ಪಣವೂ ಹೆಚ್ಚಲ್ಲ
ಎಂಬ ಮೂಲ ಬೇರನಿಳಿಸಿವೆ ತಿಳಿಸಿವೆ.
ಲಕ್ಷ ಲಕ್ಷ ವಸಂತ ವರ್ಷ ಶಿಶಿರಗಳು
ಗುಡ್ಡ ಅಡವಿ ಗಾಳಿ ಮಲೆ ಬಿಸಿಲುಗಳೊಡನಾಡಿ ಆಡಿ
ಅ ಆ ಇ ಈ ಕಲಿತು ನನ್ನ ನಾಲಿಗೆ
ನಮ್ಮೆಲ್ಲರ ಪಾಡ ತುಂಬಿ ಹಾಡತೊಡಗಿದರೆ “ಅಕ್ಷರ” ವಾಯಿತು
ಮಾನವ ಜಾತಿಯ ಹೃದಯದಾಲಾಪ ಶ್ರವಣರೂಪ
ಎದೆ ಬಡಿತಗಳಿಗೊಂದೊಂದು ಸ್ವರ ಸಂಚಾರ
ಧ್ವನಿ ರಾಗ ಭಾವ ಸಾರ ಸಾರ
ನಾನು ನಾನುಗಳುದಿಸಿ
ಈ ಅಕ್ಷರದಕ್ಷಯ ಸಾಗರದಲೀಜಾಡಿ ಅಳಿದವು
ತಲೆ ತಲೆಗಳಲ್ಲಿ ಅಲೆಗೊಂಡು
ಸಾಗುತ್ತಲೇ ಮಾಗುತ್ತಲೇ
ಹಬ್ಬಿ ಹರವಾಗುತ್ತಲೇ ಬಂದ ಇದಕ್ಕೆ
ಸಾವಿಲ್ಲ-ಅದಕ್ಕೆ ಇದು ಅ-ಕ್ಷರ
ಆದರೆ….
ಹನಿ ಹನಿಯಾಗಿ ಕೂಡಿಸಿಟ್ಟ ಜೇನ,
ಕಾಳು ಕಾಳು ಕಲೆ ಹಾಕಿದ ಆಹಾರ ಕಣಜವ,
ಕಲ್ಲು ಮುಳ್ಳುಗಳ ತುಳಿದ ಹೆಜ್ಜೆ ಹೆಜ್ಜೆಗಳ
ಗೆಜ್ಜೆ ನಾದಗಳ ಪೋಣಿಸಿಟ್ಟ ಮುತ್ತು ರತ್ನಾವಳಿಯ
ನಮ್ಮೊಳಗಿನ ಕೆಲ ಕುನ್ನಿಗಳು
ಬಾಚಿ ದೋಚಿ ಬಚ್ಚಿಟ್ಟುಕೊಂಡಾಗ
ಅಕ್ಷರ ಸಂಪದವ ಕಳೆದುಕೊಂಡ
ಅಸಂಖ್ಯ ಜನ ನಾವು
ಅನಾಥರಾದೆವು ಅನೇಕ ಅನೇಕ ವರ್ಷ
ಕಪ್ಪು ಬಾವಿಯ ಕೊಳಚೆ ಕುತ್ತ ಯಾತನೆಗಳ
ನರನರದಲ್ಲಿ ತುಂಬಿ ನಾಡಿಗರ ಕಿತ್ತು ತಿನ್ನುತ್ತ ಬಂದ
ಅಕ್ಕರ ಸಂಪದ ದೋಚಿಗರ
ಭೂಪರೋ ಭೂಸುರರೋ ಎಂಬ
ನಂಬಿಗೆಯೇ ಬೆಂಬತ್ತಿ ಬಂದೆವು
ಆದರಿಂದು
ವಿಜ್ಞಾನ ರವಿ ವಿಶ್ವದಗಲಗಳ ಕತ್ತಲೆಕಳೆದು
ನಮ್ಮನ್ನು ಬಾವಿಗಳಿಂದ ಬಯಲಿಗೆ ಕರೆಯುತ್ತಿದ್ದಾನೆ
ನಾನು ಅಕ್ಷರಗಳಿಗಾಗಿ ಬೆದಕಾಡಿ ಕಾಡಿ ಬೇಡಿ
ದೊರೆತಾಗ ನೋಡಿದರೆ
ಲಕ್ಷ ಲಕ್ಷ ವರ್ಷಗಳ ಹೊಕ್ಕುಳ ಬಳ್ಳಿ ಬಂಧುತ್ವ
ಸಾವಿರಾರು ವರ್ಷಗಳ ಅಂಧತ್ವ
ಎಲ್ಲ ಕಾಣತೊಡಗಿದೆ.
೧೩-೬-೧೯೮೬