ಸ್ವಚ್ಛ ಆಸ್ಪತ್ರೆ, ಬಿಳಿಯುಡುಪು ಧರಿಸಿದ ವೈದ್ಕರು, ದಾದಿಯರು. ನಿಮ್ಮತೋಳು ಹಿಡಿದ ದಾದಿ ಇನ್ನೇನು ತೋಳಿಗೆ ಚುಚ್ಚುಮದ್ದು ಚುಚ್ಚಬೇಕು. ಆ ಕ್ಷಣದಲ್ಲಿ ಎಲ್ಲವೂ ಸುರಕ್ಷಿತ ಎಂದು ನೀವು ಭಾವಿಸುತ್ತೀರಿ. ಆದರೆ ಚುಚ್ಚುಮದ್ದು ನೀಡುವ ಸಿರಿಂಜ್ ಮತ್ತು ಸೂಜಿ ಶುಚಿಯಾಗಿವೆಯೇ? ಉಪಯೋಗಿಸಲು ಅಯೋಗ್ಕವಾದ ಸಿರಿಂಜ್ ಅಥವಾ ಸೂಜಿಯಿಂದ ಏನೇನು ಅನಾಹುತಗಳುಂಟಾಗಬಹುದೆಂದು ಬಲ್ಲಿರಾ?
ಅಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಅಂಡ್ ರೀಸರ್ಚ ಸೊಸೈಟಿ (ಸಿಇಆರ್ ಸೊಸೈಟಿ) ಅವುಗಳನ್ನು ಕೂಲಂಕಷವಾಗಿ ಪರೀಕ್ಷಿಸಲು ನಿರ್ಧರಿಸಿತು. ಒಮ್ಮೆ ಬಳಸಿ – ಎಸೆಯುವ ಸಿರಿಂಜುಗಳ ಮತ್ತು ಸೂಜಿಗಳ ವೈಜ್ಞಾನಿಕ ಪರೀಕ್ಷೆ ನಡೆಸಿತು. ನಮ್ಮ ದೇಶದಲ್ಲಿ ಕಡ್ಡಾಯವಾದ ಭಾರತೀಯ ಮಾನದಂಡಗಳ ಆಧಾರದಿಂದ 40 ಬ್ರಾಂಡ್‌ಗಳ ಸೂಜಿಗಳು ಮತ್ತು ಸಿರಿಂಜುಗಳನ್ನು ಪರೀಕ್ಷಿಸಲಾಯಿತು. ಪ್ರತಿಯೊಂದು ಬ್ರಾಂಡಿನ 32 ಸ್ಯಾಂಪಲ್‌ಗಳನ್ನು, ಅಂದರೆ ಒಟ್ಟು 1,280 ಸ್ಯಾಂಪಲ್‌ಗಳನ್ನು ಪರೀಕ್ಷಿಸಲು 370 ಪರೀಕ್ಷೆಗಳನ್ನು ಜರಗಿಸಲಾಯಿತು! ಆ ಸ್ಯಾಂಪಲ್‌ಗಳನ್ನು ದೇಶದ ಉದ್ದಗಲದಿಂದ ಖರೀದಿಸಲಾಗಿತ್ತು.
ಒಮ್ಮೆ ಬಳಸಿ ಎಸೆಯುವ ಸಿರಿಂಜುಗಳು ಬಳಕೆಗೆ ಸಿದ್ದ . ಏಕೆಂದರೆ ಅವನ್ನು ಸೊಂಕುರಹಿತಗೊಳಿಸಿ ಪ್ಯಾಕ್ ಮಾಡಲಾಗಿರುತ್ತದೆ. ಆದರೆ ಗಾಜಿನ ಸಿರಿಂಜುಗಳನ್ನು ಬಳಸುವ ಮುನ್ನ ಪ್ರತಿಸಲವೂ ಕುದಿಯುವ ನೀರಿನಲ್ಲಿ ಹಾಕಿ ಸೊಂಕುರಹಿತಗೊಳಿಸಬೇಕು. ಹಾಗೆ ಮಾಡುವಾಗ ಕೆಲವೊಮ್ಮೆ ಸರಿಯಾಗಿ ಸೋಂಕು ನಿವಾರಣೆ ಆಗದಿರಬಹುದು. ಅದರಿಂದಾಗಿ ಮರುಬಳಕೆಯ ಈ ಸಿರಿಂಜುಗಳ ಮೂಲಕ ಎಚ್ಐವಿ ಅಥವಾ ಹೆಪಾಟಿಟಿಸ್ ಸೊಂಕು ತಗಲುವ ಅಪಾಯ ಇದೆ.
ಸ್ವಚ್ಛವಿಲ್ಲದ ಸಿರಿಂಜುಗಳು
ಬೇರೆ ಬೇರೆ ಗಾತ್ರದ ಸಿರಿಂಜುಗಳು ಲಭ್ಯವಿವೆ. ಆದರೆ ಚುಚ್ಚುಮದ್ದು ನೀಡಲಿಕ್ಕಾಗಿ 2 ಮಿಲೀ ಮತ್ತು 5 ಮಿಲೀ ಗಾತ್ರಗಳ ಸಿರಿಂಜುಗಳನ್ನು ಬಳಸುತ್ತಾರೆ. ಸಿಇಆರ್ ಸೂಸ್ಕಟಿ 2 ಮಿಲೀ ಸಿರಿಂಜಿನ 10 ಬ್ರಾಂಡ್‌ಗಳನ್ನು ಮತ್ತು 5 ಮಿಲೀ ಸಿರಿಂಜಿನ 9 ಬ್ರಾಂಡ್‌ಗಳನ್ನು ಪರೀಕ್ಷಿಸಿತು.
ಸಿರಿಂಜ್ ಸಹಿತ ಎಲ್ಲ ವೈದ್ಕಕೀಯ ಸಾಧನಗಳು ಸ್ವಚ್ಚವಾಗಿರಬೇಕು. ಸ್ವಚ್ಛವಿಲ್ಲದ ಸಿರಿಂಜಿನಲ್ಲಿ ತುಂಬಿಸಿದ ಚುಚ್ಚುಮದ್ದಿನ ದ್ರಾವಣ ಸಿರಿಂಜಿನಲ್ಲಿರುವ ಧೂಳು ಇತ್ಯಾದಿ ಸೂಕ್ಷ್ಯ ಕಣಗಳನ್ನು ಹೀರಿಕೊಂಡು ರೋಗಿಯ ಶರೀರವನ್ನು ಪ್ರವೇಶಿಸುತ್ತದೆ. ಇದರಿಂದಾಗಿ ರೋಗಿಗೆ ಹಾನಿ ಆಗಬಹುದು. ಆ ಸೂಕ್ಷ್ಯಕಣಗಳಲ್ಲಿ ಸೋಂಕು ಇದ್ದರೆ ರೋಗಿಯ ಜೀವಕ್ಕೇ ಅಪಾಯ.
ಸಿಇಆರ್ ಸೊಸೈಟಿಯ ಪರೀಕ್ಷಾ ಫಲಿತಾಂಶ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಪರೀಕ್ಷಿಸಿದ ಸಿರಿಂಜುಗಳ 19 ಬ್ರಾಂಡ್ಗಳಲ್ಲಿ 13 ಬ್ರಾಂಡ್ಗಳ ಸಿರಿಂಜುಗಳು ಸ್ವಚ್ಚವಾಗಿರಲಿಲ್ಲ! 6 ಮಿಲೀ ಸಿರಿಂಜುಗಳಲ್ಲಿ ಮೆಡಿಸೇಫ್ ಮತ್ತು ಡಾಕ್ಟರ್ ಸೇಫ್ ಹಾಗೂ 2 ಮಿಲೀ ಸಿರಿಂಜುಗಳಲ್ಲಿ ಪ್ರಿಕೋನ್, ಮೆಡಿಸೇಫ್, ಡಾಕ್ಟರ್ ಮತ್ತು ಡಿಸ್‌ಪೋವನ್ – ಈ ಹೆಸರಿನ (ಬ್ರಾಂಡಿನ) ಸಿರಿಂಜುಗಳು ಮಾತ್ರ ಭಾರತೀಯ ಮಾನದಂಡದ ಪ್ರಕಾರ ಸ್ವಚ್ಛವಾಗಿದ್ದವು.
ಸಿರಿಂಜುಗಳಲ್ಲಿ ಲ್ಯೂಬ್ರಿಕೇಷನ್
ಸಿರಿಂಜುಗಳ ಕೊಳವೆಯಲ್ಲಿ ತಳ್ಳುಕ (ಪ್ಲಂಜರ್) ಸಲೀಸಾಗಿ ಚಲಿಸಬೇಕೆಂದು, ಅವುಗಳನ್ನು ಉತ್ಸಾದಿಸುವಾಗ ಲೂಫಬ್ರಿಕೆಟ್ ಮಾಡುತ್ತಾರೆ. ಆದರೆ ಸಿರಿಂಜುಗಳಲ್ಲಿ ಅಧಿಕ ಲ್ಯೂಬ್ರಿಕೆಂಟ್ ಉಳಿದರೆ, ಅದು ಸೂಜಿಯಲ್ಲಿ ಇಂಚೆಕ್ಷನಿನ ಔಷಧಿ ಸರಾಗವಾಗಿ ಹರಿಯಲು ತೊಡಕಾಗುತ್ತದೆ. ಅದಲ್ಲದೆ ಲ್ಯೂಬ್ರಿಂಟ್ ಬೆರಕೆಯಾಗಿ ಇಂಜೆಕ್ಷನ್ ಔಷಧಿಯಲ್ಲಿ ರಾಸಾಯನಿಕ ಬದಲಾವಣೆ ಆಗಲೂಬಹುದು. ಭಾರತೀಯ ಮಾನದಂಡಗಳ ಪ್ರಕಾರ, ಸಿರಿಂಜುಗಳಿಗೆ ಕನಿಷ್ಠ ಪರಿಮಾಣದ ಲ್ಯೂಬ್ರಿಕೆಂಟ್ ಲೇಪಿಸಬೇಕು; ಅವು ತುಂತುರು ಅಥವಾ ಸಣ್ಣ ಕಣಗಳಲ್ಲಿ ಸಿರಿಂಜುಗಳಲ್ಲಿ ಉಳಿದಿರಬಾರದು. ಈ ಪರೀಕ್ಷೆಯಲ್ಲಿಯೂ ಕೆಲವು ಬ್ರಾಂಡ್‌ಗಳ ಸಿರಿಂಜುಗಳು ತೇರ್ಗಡೆ ಆಗಲಿಲ್ಲ.
ಸಿರಿಂಜಿನ ಭಾಗಗಳು
ಕೊಳವೆ, ತಳ್ಳುಕ ಮತ್ತು ಮೂತಿ (ನಾಝಲ್) ಇವು ಸಿರಿಂಜಿನ ಭಾಗಗಳು. ಸಿರಿಂಜ್ ಸರಿಯಾಗಿ ಕೆಲಸ ಮಾಡಲಿಕ್ಕಾಗಿ ಇವುಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆ ಹೇಗಿರಬೇಕೆಂದು ಭಾರತೀಯ ಮಾನದಂಡ ನಿಗದಿಪಡಿಸಿದೆ. ತಳ್ಳುಕ ಎಷ್ಟು ಉದ್ದವಿರಬೇಕು? ಪಿಸ್ಟನನ್ನು ಸಿರಿಂಜಿನ ಕೊಳವೆಯ ಉದ್ದಕ್ಕೂ ತಳ್ಳುವಷ್ಟು ಉದ್ದವಿರಬೇಕು. 5 ಮಿಲೀ ಸಿರಿಂಜುಗಳಲ್ಲಿ ಮೆಡಿಫ್ಲೋ ಮತ್ತು ಡಾಕ್ಷರ್, 2 ಮಿಲೀ ಸಿರಿಂಜುಗಳಲ್ಲಿ ಮೆಡಿಸೇಫ್, ಹೆಲ್ತ್ ಕೇರ್ ಮತ್ತು ಮೆಡಿಫ್ಲೋ. ಇವುಗಳ ತಳ್ಳುಕ ಅಷ್ಟು ಉದ್ದವಿರಲಿಲ್ಲ. ಸಿರಿಂಜಿನ ಬೆರಳು, ಹಿಡಿತಗಳು ನಯವಾಗಿರಬೇಕು. ಅವು ಹರಿತವಾಗಿ ಬೆರಳುಗಳಿಗೆ ಚುಚ್ಚುವಂತಿದ್ಧರೆ ಇಂಜೆಕ್ಷನ್ ಕೊಡುವವರಿಗೆ ಕಷ್ಟವಾಗುತ್ತದೆ 2 ಮಿಲೀ ಸಿರಿಂಜುಗಳಲ್ಲಿ ಮೆಡಿಫ್ಲೋ, ಗೆಟ್‌ವೆಲ್ ಮತ್ತು ಕೊರೆಲ್‌ಲೈಫ್ – ಇವುಗಳ ಬೆರಳು – ಹಿಡಿತಗಳು ಹರಿತವಾಗಿದ್ದವು.
ವ್ಯರ್ಥ ಜಾಗ
ಸಿರಿಂಜಿನ ಕೊಳವೆಯಲ್ಲಿ ಪಿಸ್ವನನ್ನು ಪೂರ್ತಿ ತಳ್ಳದಾಗ, ಕೊಳವೆಯ ತುದಿ ಮತ್ತು ಮೂತಿಯಲ್ಲಿ ಉಳಿಯುವ ಇಂಜೆಕ್ಷನಿನ ಔಷಧಿ ಆವರಿಸುವ ಜಾಗವೇ ವ್ಯರ್ಥ ಜಾಗ. ಇದು ಕಡಿಮೆಯಾದಷ್ಟೂ ವ್ಯರ್ಥವಾಗುವ ಔಷಧಿಯ ಪರಿಮಾಣ ಕಡಿಮೆಯಾಗುತ್ತದೆ. 6 ಮಿಲೀ ಸಿರಿಂಜುಗಳಲ್ಲಿ ಮೆಡಿಫ್ಲೋ, ಮೆಡಿಸೇಫ್, ಡಾಕ್ಟರ್, ಡಿಡೆಲ್ಟಾವದ್ ಮತ್ತು ದಾಕ್ಟರ್ ಸೇಫ್ – ಇವುಗಳ ವ್ಕರ್ಥ ಜಾಗ ಭಾರತೀಯ ಮಾನದಂಡ ನಿಗದಿಪಡಿಸಿದ ವ್ಕರ್ಥ ಜಾಗಕ್ಕಿಂತ ಅಧಿಕವಾಗಿತ್ತು. ಅರ್ಥಾತ್ ಈ ಸಿರಿಂಜುಗಳನ್ನು ಬಳಸಿದಾಗ ಔಷಧಿ ವ್ಯರ್ಥವಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ವೈದ್ಯರು ಸೂಚಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಔಷಧಿ ರೋಗಿಗೆ ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ಬಲ್ಲಿರಾ?
ಲೀಕ್ ಇದೆಯೇ?
ಸಿರಿಂಜಿನಿಂದ ಗಾಳಿ ಅಥವಾ ಔಷಧಿ ಲೀಕ್ ಆಗುವಂತಿದ್ದರೆ, ಔಷಧಿ ವ್ಯರ್ಥವಾಗುವುದು ಮಾತ್ರವಲ್ಲ ದೇಹದೂಳಕ್ಕೆ ಚುಚ್ಚುವ ಔಷಧಿಯ ಪರಿಮಾಣದಲ್ಲೂ ಹೆಚ್ಚು ಕಡಿಮೆಯಾದೀತು; ಇದರಿಂದಾಗಿ ರೋಗಿ ಚೇತರಿಸಿಕೂಳ್ಳುವ ಪ್ರಕ್ರಿಯೆ ಏರುಪೇರಾದೀತು. ಸಿರಿಂಜಿನ ಕೊಳವೆಯ ಒಳವ್ಯಾಸ ಮತ್ತು ತಳ್ಳುಕ ಅಥವಾ ಪಿಸ್ಟನಿನ ಹೊರವ್ಯಾಸ ಸರಿಯಾಗಿಲ್ಲದಿದ್ದರೆ ಲೀಕ್ ಆದೀತು. 6 ಮಿಲೀ ಸಿರಿಂಜುಗಳಲ್ಲಿ ಡಾಕ್ತರ್ ಸೇಫ್, ಬಿ.ಡಿ, ಮೆಡಿಸೇಫ್, ಡಾಕ್ಟರ್ ಮತ್ತು ಮೆಡಿಫ್ಲೋ 2 ಮಿಲೀ ಸಿರಿಂಜುಗಳಲ್ಲಿ ಪ್ಪಿಕೋನ್, ಮೆಡಿಸೇಫ್ ಮತ್ತು ಮೆಡಿಫ್ಲೋ, ಇವುಗಳಿಂದ ಲೀಕ್ ಆಗುವಂತಿದ್ದು, ಇವು ನಿಗದಿತ ಗುಣಮಟ್ಟ ಹೊಂದಿರಲಿಲ್ಲ. ಅಳತೆ ಗುರುತುಗಳು ಸಿರಿಂಜಿನ ಅಳತೆ ಗುರುತುಗಳು ಸ್ಪಷ್ಟ ಮತ್ತು ಕರಾರುವಾಕ್ಕಾಗಿ ಇರಬೇಕು. ಭಾರತೀಯ ಮಾನದಂಡದಲ್ಲಿ ಈ ಬಗ್ಗೆ ವಿವರವಾದ ಮಾರ್ಗದರ್ಶಿ ಸೂತ್ರಗಳಿವೆ. ಡಿಸ್ಟೋವನ್ (2 ಮಿಲೀ) ಮತ್ತು ಬಿ.ಡಿ. (2 ಮಿಲೀ ಮತ್ತು 6 ಮಿಲೀ) ಬ್ರಾಂಡಿನ ಸಿರಿಂಜುಗಳು ಮಾತ್ರ ಆ ಸೂತ್ರಗಳ ಅನುಸಾರವಾಗಿದ್ದವು. ಸಿರಿಂಜಿನ ಅಳತೆ ಗುರುತುಗಳು ತಪ್ಪಾಗಿದ್ದರೆ ದೇಹದೊಳಕ್ಕೆ ಚುಚ್ಚುವ ಔಷಧಿ ಜಾಸ್ತಿ ಅಥವಾ ಕಡಿಮೆ ಆದೀತು. ಇದರಿಂದಾಗಿ ಪ್ರಾಣಕ್ಕೇ ಸಂಚಕಾರವಾದೀತು. ಸಿರಿಂಜುಗಳಲ್ಲಿ ಔಷಧೀಯ ಪರಿಮಾಣದ ಅಳತೆ – ಗುರುತಿನಲ್ಲಿ 5 ಮಿಲೀ ಸಿರಿಂಜುಗಳಲ್ಲಾದರೆ ಶೇ. 4 ತಪ್ಪನ್ನು ಮತ್ತು 2 ಮಿಲೀ ಸಿರಿಂಜುಗಳಲ್ಲಾದರೆ ಶೇ. 5 ತಪ್ಪನ್ನು ಮಾತ್ರ ಭಾರತೀಯ ಮಾನದಂಡ ಸಹನೀಯವೆಂದು ಪರಿಗಣಿಸುತ್ತದೆ. ಮೆಡಿಸೇಫ್(5 ಮಿಲೀ) ಮತ್ತು ಹೆಲ್ತ್ ಕೇರ್ (2 ಮಿಲೀ) ಸಿರಿಂಜುಗಳಲ್ಲಿ ಅಳತೆ ಗುರುತುಗಳು ಭಾರತೀಯ ಮಾನದಂಡದ ಪ್ರಕಾರ ಇರಲಿಲ್ಲ.
ಪ್ಯಾಕೇಜಿಂಗ್
ಪ್ರತಿಯೊಂದು ಸಿರಿಂಜಿಗೆ ಯಾವುದೇ ಹಾನಿಯಾಗದಂತೆ ಅದನ್ನು ಪ್ರತ್ಯೇಕ ಕನ್‌ಟೈನರ್ನಲ್ಲಿ ಪ್ಯಾಕ್ ಮಾಡಬೇಕು. ಕನ್‌ಟೈನರಿನ ವಸ್ತು ಮತ್ತು ಪ್ಯಾಕಿಂಗ್ ವಿಧಾನ ಸಿರಿಂಜಿಗೆ ಸೋಂಕು ತಗಲದಂತೆ ರಕ್ಷಿಸಬೇಕು. ಅದರೆ ಕನ್‌ಟೈನರ್ ಹೇಗಿರಬೇಕೆಂದರೆ ಒಮ್ಮೆ ಬಿಚ್ಚಿದರೆ ಪುನಃ ಅದನ್ನು ಸೀಲ್‌ಮಾಡಲು ಸಾಧ್ಯವಾಗಬಾರದು.
ಆದರೆ 5 ಮಿಲೀ ಸಿರಿಂಜುಗಳಲ್ಲಿ ಮೆಡಿಫ್ಲೋ, ಡಾಕ್ಟರ್ ಮತ್ತು ಡಾಕ್ಟರ್ ಸೇಫ್ ಹಾಗೂ 2 ಮಿಲೀ.ನ ಡಾಕ್ಷರ್ ಇವುಗಳ ಪ್ಯಾಕಿಂಗ್ ಸೂಕ್ತವಾಗಿರಲಿಲ್ಲ. 5 ಮಿಲೀ ಸಿರಿಂಜುಗಳಲ್ಲಿ ಮೆಡಿಫ್ಲೋ, ಡಾಕ್ಟರ್ ಮತ್ತು ಡಿಸ್ಪೋವನ್ ಹಾಗೂ 2 ಮಿಲೀ.ನ ಮೆಡಿಫ್ಲೋ, ಇವುಗಳ ಪ್ಯಾಕೇಜಿಂಗ್ ಸಿರಿಂಜುಗಳಿಗೆ ಸೊಂಕು ತಗಲದಂತೆ ರಕ್ಷಿಸುವಂತಿರಲಿಲ್ಲ.
ಸೂಜಿಗಳು ಸುರಕ್ಷಿತವೇ?
ವಿವಿಧ ಅಳತೆಯ ಇಂಜೆಕ್ಷನ್ ಸೂಜಿಗಳು ಲಭ್ಯವಿವೆ. ಅವುಗಳ ‘ಗಾಜ್’ ಪ್ರಕಾರ ಅವನ್ನು ಗುರುತಿಸಲಾಗುತ್ತದೆ. ಗಾಜ್
ಕಡಿಮೆಯಾದನ್ನೂ ಸೂಜಿಯ ತುದಿ ತೆಳುವಾಗಿರುತ್ತದೆ. ಸಾಮಾನ್ಯವಾಗಿ 23 ಗಾಜ್ ಸೂಜಿಗಳನ್ನು ರೋಗಿಗಳಿಗೆ ಚುಚ್ಚುಮದ್ದು ನೀಡಲು ಬಳಸಲಾಗುತ್ತದೆ. ದಪ್ಪವಾಗಿರುವ ಔಷಧಿಗಳನ್ನು ಚುಚ್ಚಲಿಕ್ಕಾಗಿ ಅಥವಾ ದೇಹದಿಂದ ದ್ರವ ಹೊರ ಸೆಳೆಯಲಿಕ್ಕಾಗಿ 22 ಗಾಜ್ ಸೂಜಿಗಳನ್ನು ಬಳಸುತ್ತಾರೆ.
ಅಹ್ಮದಾಬಾದಿನ ಸಿಇಆರ್ ಸೋಸ್ಕಟಿ 22 ಗಾಜ್ನ 6 ಬ್ರಾಂಡ್‌ಗಳ ಮತ್ತು 23 ಗಾಜ್ ನ 7 ಬ್ರಾಂಡ್ಗಳ ಸೂಜಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿತು.
ಇಂಜೆಕ್ಷನ್ ಸೂಜಿಗಳು ಸೂಕ್ಷ್ಮಕ್ರಿಮಿರಹಿತವಾಗಿರಬೇಕು. ಸೂಜಿಯಲ್ಲಿ ಯಾವುದೇ ಬ್ಯಾಕ್ಟೀರಿಯಾ ಅಥವಾ ಸೊಂಕು ಕ್ರಿಮಿ ಇದ್ದರೆ, ಅದು ಸೂಜಿಯ ಮೂಲಕ ನಮ್ಮ ಶರೀರದೂಳಕ್ಕೆ ವರ್ಗಾಯಿಸಲ್ಪಡುತ್ತದೆ. ಆದ್ದರಿಂದ ಈ ಸೂಜಿಗಳು ಅತ್ಯುತ್ತಮ ಗುಣಮಟ್ಟ ಮತ್ತು ಶುದ್ದತೆ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಅವುಗಳಿಂದ ಕೊಟ್ಟ ಚುಚ್ಚುಮದ್ದು ರೋಗಿಗೆ ಪ್ರಾಣಾಪಾಯ ತಂದೀತು. ಸಿಇಆರ್ ಸೊಸೈಟಿ ನಡೆಸಿದ ಪರೀಕ್ಷೆಯಲ್ಲಿ ಮೆಡಿಫ್ಲೋ ಬ್ರಾಂಡಿನ 23 ಗಾಜ್ ನ ಸೂಜಿಗಳು ಸೂಕ್ಷ್ಯ ಕ್ರಿಮಿರಹಿತವಾಗಿಲ್ಲ ಎಂದು ಪತ್ತೆಯಾಯಿತು! ಅಂತೆಯೇ, ಮೆಡಿಫ್ಲೋ ಬ್ರಾಂಡಿನ 22 ಗಾಜ್ ನ – ಸೂಜಿಗಳು ಅವಶ್ಯವಾದ ಪರಿಶುದ್ದತೆ ಕಾಯ್ದುಕೊಂಡಿರಲಿಲ್ಲ.
ಇಂಜೆಕ್ಷನ್ ಸೂಜಿಗಳನ್ನು ಚರ್ಮಕ್ಕೆ ಚುಚ್ಚುವುದು ಸುಲಭವಾಗಲಿಕ್ಕಾಗಿ ಅವನ್ನು ಲ್ಯೂಬ್ರಿಕೇಟ್ ಮಾಡಲಾಗುತ್ತದೆ. ಆದರೆ ಸೂಜಿಯಲ್ಲಿ ಅಧಿಕ ಲ್ಯೂಬ್ರಿಕೆಂಟ್ ಉಳಿದಿದ್ದರೆ ಅದರಿಂದಾಗಿ ಇಂಜೆಕ್ಷನ್ ಔಷಧೀಯ ರಾಸಾಯನಿಕ ಸ್ಥಿರತೆ ಏರುಪೇರಾದೀತು. ಮೆಡಿಫ್ಲೋ (22 ಗಾಜ್) ಮತ್ತು ಕೇರ್ ಲೈಫ್ (23 ಗಾಜ್) ಬ್ರಾಂಡಿನ ಸೂಜಿಗಳು ಲ್ಯೂಬ್ರಿಕೇಶನಿನ ಭಾರತೀಯ ಮಾನದಂಡಗಳ ಪ್ರಕಾರ ಸುರಕ್ಷಿತವಾಗಿರಲಿಲ್ಲ.
ಸೂಜಿಯ ಭಾಗಗಳು
ಸೂಜಿಯ ನಾಳ, ಸೂಜಿಯ ಬುಡ, ರಕ್ಷಾಕವಚ . ಇವು ಸೂಜಿಯ ಭಾಗಗಳು. 2.5 ಭೂತಕನ್ನಡಿಯ ಮೂಲಕ ಪರೀಕ್ಷಿಸಿದಾಗ 22 ಗಾಜ್ ನ ಮೆಡಿಫ್ಲೋ, ಮತ್ತು 23 ಗಾಜ್ ನ ಸೆಫ್ಟಿ, ಮೆಡಿಫ್ಲೋ, ಕೋರ್ ಲೈಫ್, ಮೆಡಿಸೇಫ್ ಬ್ರಾಂಡಿನ ಸೂಜಿಗಳ ಬುಡಗಳಿಗೆ ಅನ್ಯಕಣಗಳು ಅಂಟಿಕೊಂಡಿದ್ದವು. ಹಾಗಾಗಿ ಇವು ಪರೀಕ್ಷೆಯಲ್ಲಿ ಸುರಕ್ಷಿತವೆಂದು ತೇರ್ಗಡೆ ಆಗಲಿಲ್ಲ.
ಸೂಜಿಯ ಬುಡ ಮತ್ತು ಸೂಜಿಯ ಜಾಯಿಂಟ್ ಇಂಜೆಕ್ಷನ್ ಚುಚ್ಚುವಾಗ ಕಿತ್ತು ಹೋಗದಷ್ಟು ಶಕ್ತಿಯುತವಾಗಿರಬೇಕು. ಇದನ್ನು ಪರೀಕ್ಷಿಸಲು ವಿಶೇಷ ವೈಜ್ಞಾನಿಕ ಪರೀಕ್ಷೆ ನಡೆಸಲಾಯಿತು. ಇದರಲ್ಲಿ 22 ಗಾಜ್ ಮತ್ತು 23 ಗಾಜ್‌ಗಳ 8 ಬ್ರಾಂಡ್‌ಗಳ ಸೂಜಿಗಳು ಬುಡದಲ್ಲಿ ಕಿತ್ತುಹೋದವು!
ಸೂಜಿಗಳ ಉದ್ದ, ವ್ಯಾಸ ಮತ್ತು ತೂತಿನ ಅಳತೆಗೂ ಭಾರತೀಯ ಮಾನದಂಡ ನಿಗದಿಪಡಿಸಲಾಗಿದೆ. 23 ಗಾಜ್‌ನ ಬಿ . ಡಿ ಮತ್ತು ಮೆಡಿಸೇಫ್, 22 ಗಾಜ್ ನ ಡಿಸ್ಪೋವನ್ ಮತ್ತು ಮೆಡಿಫ್ಲೋ ಸಿರಿಂಜುಗಳು ಆ ಮಾನದಂಡಗಳ ಅನುಸಾರ ಇರಲಿಲ್ಲ.
ಪ್ರತಿಯೊಂದು ಸೂಜಿಯ ಕನ್‌ಟೈನರ್ನಲ್ಲಿ ಅದರ ಒಳಗಿರುವ ಸೂಜಿಯ ವಿವರಗಳನ್ನು ಮುದ್ರಿಸಬೇಕು : ಅಳತೆ, ‘ಸೂಕ್ಷ್ಯಕ್ರಿಮಿರಹಿತ’ ಎಂಬ ಪದ, ಉತ್ಪಾದಕನ ಮತ್ತು ಪೂರೈಕೆದಾರನ ಹೆಸರು, ಟ್ರೇಡ್‌ಮಾರ್ಕ್, ಬ್ಯಾಚ್ ನಂಬರ್ ಅಥವಾ ಉತ್ಪಾದನಾ ದಿನಾಂಕ. ಒಂಬತ್ತು ಬ್ರಾಂಡ್‌ಗಳ ಸೂಜಿಗಳ ಕನ್‌ಟೈನರ್ಗಳಲ್ಲಿ ಈ ಎಲ್ಲ ವಿವರಗಳು ಇರಲಿಲ್ಲ.
ತನ್ನ ರೋಗ ವಾಸಿಯಾಗಿ ತಾನು ಆರೋಗ್ಕವಂತ ಆಗುತ್ತೇನೆಂಬ ವಿಶ್ವಾಸದಿಂದ ರೋಗಿಯೊಬ್ಬ ಚುಚ್ಚುಮದ್ಧಿನ ಸೂಜಿಗೆ ತೋಳು ಒಡ್ಡುತ್ತಾನೆ. ಆದರೆ ಸುರಕ್ಷಿತವಲ್ಲದ ಸಿರಿಂಜ್ ಅಥವಾ ಸೂಜಿಯಿಂದ ಔಷಧಿ ಚುಚ್ಚಿಸಿಕೊಂಡರೆ ಅದುವೇ ಪ್ರಾಣಾಪಾಯಕ್ಕೆ ಕಾರಣವಾದೀತು. ಆದ್ದರಿಂದ ವೈದ್ಯರು ಹಾಗೂ ರೋಗಿಗಳು ಔಷಧಿ ಬಗ್ಗೆ ಮಾತ್ರವಲ್ಲ, ಸಿರಿಂಜು ಮತ್ತು ಸೂಜಿಗಳ ಬಗ್ಗೆಯೂ ಎಚ್ಚರ ವಹಿಸಬೇಕಾಗಿದೆ.
‘ಉದಯವಾಣಿ’ 14-11-2002