ಯಾತಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||
ಮಳೆಯಿಲ್ಲ ಬೆಳೆಯಿಲ್ಲ ಶಿವನೆ
ನಮ ಬದುಕಿಗೆ ನೆಲೆಯೆಲ್ಲಿ ಶಿವನೆ ||
ದಿನವೂ ಮುಗಿಲತ್ತ ದಿಟ್ಟಿಯನಿಟ್ಟು
ಕಾಣದಾದೆವೊ ಹೊಟ್ಟೆಗೆ ಹಿಟ್ಟು
ಎತ್ತ ನೋಡಲ್ಲಿ ಬಿಸಿಲು ರಣರಣಾ
ಬರಿದಾದ ಒಡಲೆಲ್ಲ ಭಣ ಭಣಾ ||
ಮಳೆರಾಯ ನಮ್ಮ ಮರೆತಾನಲ್ಲ
ಸೂರ್ಯಪ್ಪ ನಮ್ಮ ಸುಡುತಾನಲ್ಲ
ಗಂಗಮ್ಮ ನಮ್ಮ ಕೈಬಿಟ್ಟಳಲ್ಲ
ಭೂತಾಯಿ ಮಾತ್ರ ಸಲುವ್ತಾಳಲ್ಲ ||
ಯಾತಕ್ಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||
ಹಾಡು – ೨
ಗಂಡ ಹೆಂಡಿರ ಕೆಡಿಸಿತು
ನೀರು ಕಣಣ್ಣಾ ನೀರು ||
ಅತ್ತೆ ಸೊಸೆಯ ಕೆಡಿಸಿತು
ನೀರು ಕಣಣ್ಣಾ ನೀರು ||
ತಾಯಿ ಮಗನ ಕೆಡಿಸಿತು
ನೀರು ಕಣಣ್ಣಾ ನೀರು ||
ಹಾಡು – ೩
ದೊಡ್ಡ ಮನೆಯ ದೊಡ್ಡವ್ವ
ಮನಸು ಮಾತ್ರ ಚಿಕ್ಕದವ್ವ ||
ಹಟ್ಟಿಯಿಂದ ಹನುಮಂತನ
ದೊಡ್ಡವ್ವನಲ್ಲಿಗೆ ಕರೆಸಿತು ನೀರು ||
ಒಡತಿ ಆಳಿನ ಮನಸನೆಲ್ಲ
ಕೆಡಿಸಿತು ನೀರು ||
ಹಾಡು – ೪
ಊರಿನ ಮಾನ ಎಲ್ಲೈತಣ್ಣ
ಕುಡಿಯೊ ನೀರಲ್ಲಿ ||
ಹೆಣ್ಣಿನಮಾನ ಗಂಡಿನ ಕಣ್ಣು
ಕೆರೆಯ ನೀರಿನ ಬಣ್ಣ ||
ಜೀವ ನೀರು ಮಾನ ಪ್ರಾಣ
ಊರ ಘನತೆಣ್ಣ ||
ಹಾಡು – ೫
ದೇಸಾಯಿಗೆ ಎಂಥಾ ರೋಗವಯ್ಯ
ದೊಡ್ಡರೋಗ ದೊಡ್ಡರೋಗ ||
ಯಾತರಿಂದ ಬಂದ ರೋಗ
ಸಾವಿನ ಸಿದ್ಧತೆಗೆಲ್ಲಾ ಯೋಗ ||
ಜೀವನ ಶುದ್ಧ ಇಲ್ಲದಿದ್ದರೆ
ಬರುತೈತಣ್ಣ ದೊಡ್ಡ ರೋಗ ||
ಹಾಡು – ೬
ನೀಡಿರಮ್ಮ ದಾನ ನೀರ
ಕೇಳ ಬಂದಿಹನೀ ವಜೀರ ||
ಬಾವಿ ಬತ್ತಿ ಬಾಯಿ ಬತ್ತಿ
ಜೀವ ತಲ್ಲಣಿಸೂತೈತೆ ||
ಸಾಯಲಿರುವ ಜೀವವನ್ನು
ಚೊಂಬು ನೀರಲಿ ಉಳಿಸಲಿನ್ನು ||
ಹಾಡು – ೭
ಜೀವಕ್ಕೆ ಜಲಬೇಕು
ಜಲದೊಳಗೆ ಜೀವವುಂಟು ||
ದೇಸಾಯ ಜೀವ ಎಂಬೋದು
ಊರು ನೀಡಿದ ಧರ್ಮ ||
ಮಾಡಿದ್ದ ಉಣ್ಣುತೀಯ ತಮ್ಮ
ತಿಳೀಯಿದುವೆ ಬದುಕ ಮರ್ಮ ||
ಹಾಡು – ೮
ಬಾವಿ ಬತ್ತಿದರೇನಣ್ಣಾ
ಭೂಮಿ ಬಂಜೆಯಲ್ಲ ||
ಕರೆಯ ಆಳದಿ ತೋಡಣ್ಣ
ನೀರ ನೆಲೆಯ ನೋಡಣ್ಣ ||
ಬಿದ್ದ ಮಳೆಯ ನೀರನ್ನು
ಕೆರೆಯಲಿ ತಡೆಯಣ್ಣ ||
ಹಾಡು – ೯
ನೀರಿನ ನಾಯಕನೊ
ನಮ್ಮ ವಜೀರ್‌ಸಾಬನೊ ||
ಕೆರೆ ಹೂಳೆತ್ತಿಸಿ ನೀರನಿಂಗಿಸಿ
ಬಾವಿ ಜಲವನು ಬರಿಸಿದನೊ ||
ಮಳೆಯ ಬೆಳೆಯನು ಬೆಳೆಸಿದನೊ
ಊರಿನ ಬರವಾ ಮುಗಿಸಿದನೊ ||
*****