ಯಾರಿವಳೀ ದೀಪಿಕಾ?
ಕವಿಕನಸಿಗೆ ಕಣ್ಣು ಬಂತೊ ಉಸಿರಾಡಿತೊ ರೂಪಕ!
ಬಿಸಿಯೂಡಿಸಿ ಹಸಿರಾಡಿಸಿ
ಕನವರಿಕೆಯ ನಾಡಿಗೆ
ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ
ಕನಕಾಂಬರ ಬೆಳಕ ಹೊದ್ದ ಮುಗಿವ ಹಗಲ ತುದಿಗೆ
ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡಗೆ
ಚಿತ್ರವಾಗಿ ಅರಳಿ
ವಿಚಿತ್ರವಾಗಿ ಹೊರಳಿ
ಬರೆದು ಅಳಿಸಿ ಬರೆದು ಸರಿವ ಬೆಳ್ಳಕ್ಕಿಯ ಗೆರೆಯೆ,
ಸಿಕ್ಕಿದ೦ತೆ ಸಿಕ್ಕದಂತೆ
ಹರಿವ ಜಿ೦ಕೆಮರಿಯೆ,
ಯಾರೇ ನೀ ದೀಪಿಕಾ?
ಒಳಗೆ ಬರುವೆ ತೆಗೆಯೇ ನಿನ್ನೆದೆ ಬಾಗಿಲ ಚಿಲಕ
ಕಣ್ಣಪಟ್ಟಿ ಕಟ್ಟಿ ನಡೆದ ಬಿನ್ನಾಣದ ಚೆಲುವೆ
ಬೇರೇನೂ ಕಾಣದೀಗ ಬರಿಯ ನಿನ್ನ ನಿಲುವೆ!
ನೋಟಕಷ್ಟೆ ಸಿಕ್ಕು
ಉಳಿದುದಕ್ಕೆ ಮಿಕ್ಕು
ಕೆರೆಯ ನಡುವೆ ನಿಂತು ಅರಳಿ ನಗುವ ಕೆಂಪು ಕಮಲೇ
ಉರಿಯ ನೂರು ಬುಗ್ಗೆ ಹಿರಿಯುತಿರುವ ಚಿಗುರು ಹಿಗ್ಗೇ
ಧಗೆಯೆ ನಗುವ ದೀಪಿಕಾ
ಬಗೆವೆ ಕಣೇ ನವನಿಧಿಗಳ ಚೆಲುವೆ ನಿನ್ನ ಮೂಲಕ!
ನೀ ಹಚ್ಚಿದ ಪಂಚಾಗ್ನಿಯ ವೃತ್ತದಲ್ಲಿ ಉರಿದೆ
ಕಬ್ಬಿನಾಲೆಯಲ್ಲಿ ಸಿಕ್ಕ ಜಲ್ಲೆಯಂತೆ ನುರಿದೆ.
ದಳ ದಳ ದಳ ತೆರೆದು ನೀನು ಪರಿಮಳಗಳ ಸುರಿಯೆ
ಸೊಕ್ಕಿನ ಗಡಿಯೊಡೆದು ಒಳಗೆ ಮೆತ್ತಗಾಗಿ ಬಿರಿದೆ
ನೋವೇ ಹೂವಾಗಿದೆ ಇದೊ ಒಪ್ಪಿಕೊಳ್ಳೆ ದೀಪಿಕಾ
ಕೆಂಡಸಂಪಿಗೆಯನೆ ಕಟ್ಟಿತಂದ ಭಾವಮಾಲಿಕಾ!
ದೀಪಿಕಾ ದೀಪಿಕಾ
ಕವಿಕನಸಿಗೆ ಕಣ್ಣು ಬ೦ದು ಉಸಿರಾಡುವ ರೂಪಕ!
*****
ಪುಸ್ತಕ: ನಿನಗಾಗೇ ಈ ಹಾಡುಗಳು