ಎಂದೋ ಬಿದ್ದ ಕಾಳೊಂದು
ಇತ್ತೀಚಿನ ಮಳೆಗೆ ಮೊಳಕೆಯೊಡೆದು
ಎರಡೆಲೆ ಚಿಗುರಿಸಿ ನಗುತಿದೆ
ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ
ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ-
ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ
ಕೊನೆಗೆ ಸ್ನಾನ ಕಣ್ಣೀರೂ ಬಚ್ಚಲು ಮೋರಿಗೆ,
ನಕ್ಷತ್ರಕರೂ ಮಾತನಾಡಲು
ಅಲ್ಲಿಯೇ ಹೋಗುವುದಿದೆಯಲ್ಲ!
ಎರಡು ನಾಲ್ಕು ಆರೆಂಟು ಹತ್ತಿಪ್ಪತ್ತು
ಚಿಗುರೆಲೆಗಳ ಗುಂಪು ಕಂಪೌಂಡು ಮುದ್ದಿಸುತ್ತಲೇ
ಮೆಲ್ಲನೆ ಮೇಲೇರಿ ಬಳಕಾಡುವುದು
ತೊನೆದಾಡುವುದೇನು ಆಹಾ!
ನೆಲದಾಳಕ್ಕಿಳಿದು ಹೆಕ್ಕಿ ಹೆಕ್ಕಿ ನೀರು ಹೀರಿ
ಪಸರಿಸಿದ ಬೇರಿನ ಸಂಭ್ರಮ.
ಉರುಳಾಡಿದವು ನಕ್ಷತ್ರಗಳು
ಬೆಳದಿಂಗಳ ಹಾಸಿಗೆಯನೇರಿ
ಚುಮು ಚುಮು ಉಷೆ
ಜಮುರು ಮಳೆ
ಮೊನ್ನೆ ಮೊನ್ನೆಯೇ ಕಣ್ಣುಬಿಟ್ಟ
ಎಲೆಗಳ ನಡುವೆ ಮುಗುಳು
ಮೊಗ್ಗು ಹೂವುಗಳ ನಗು
ಈಗಷ್ಟೇ ತುಂಬಿಕೊಳ್ಳುತ್ತಿವೆ ಹಾಲುಗಾಳು
ಗೋಡೆಯಾಚೆ ಕಳೆಗುಂದಿ ಕೊರಳು ತುಂಬಿ
ಉಕ್ಕೇರುವ ನದಿಯೋ ನದಿ ಆಕೆ
ಒಂದಿರುಳು ಏರುಬ್ಬರ ಇಳಿದು
ಭೂಮಿ ಎಲ್ಲವೂ ಶಾಂತ
ಅನಾಥಕಂದ ಉಡಿತುಂಬಿ ಕಲಕಲಿಸಿದ್ದು
ಲಾಲಿ ಹಾಡು ಇಂಪಾಗಿ ಎಲ್ಲರೆದೆ ತಟ್ಟಿದ್ದು
ಅದು ನಕ್ಕರೆತಾನು ನಕ್ಕು
ಕಣ್ಣುರೆಪ್ಪೆಯೊಳಗಿಟ್ಟು ಕಾಯುವ ಸಂತೋಷಿ
ದಿನ ದಿನಕೂ ಚಿಗುರಿ
ಜಗದೆತ್ತರ ಬೆಳೆಯುವ ಕನಸು
ಕೊಡುತಿದೆ ಮಲ್ಲಿಗೆ ನಗುವಿನ
ಹಾಲುಗಲ್ಲಿನ ಕಂದ
ಮಳೆ-ನದಿ ಆಹಾ ಅದೇನು ಸ್ಪರ್ಷ.
*****
ಪುಸ್ತಕ: ಇರುವಿಕೆ