ಶ್ರೀರಾಮನ ಹೆಸರ್ನಾಗೆ ಈ ದೇಶದಾಗೆ ಭಾಳೋಟು ಲೂಟಿಗಳು ಖೂನಿಗಳು ನೆಡೆದು ಹೋದವು. ರಾಮ ಅಂದ್ರಂತೂ ಸಾಬರು ಹಗಲೊತ್ತೂ ವಂದ ಮಾಡ್ಕೋತಾರೆ. ಗೋದ್ರಾ
ಹತ್ಯಾಕಾಂಡ ನೆನೆಸ್ಕೊಂಡ್ರೆ ಗುಜರಾತಿನೋರು ಗುಳೆ ಹೊಂಡಾಕೆ ರೆಡಿ ಆಯ್ತಾರೆ. ಇಂತದ್ರಾಗೆ ಇತ್ತೀಚೆಗೆ ರಾಗವೇಸ್ವರನೆಂಬೋ ಹವ್ಯಕ ಸ್ವಾಮಿ ಶ್ರೀರಾಮನಿಗೆ ಅಮರಿಕಂಬಿಟ್ಟವ್ನೆ! ಯಾರೀ ರಾಗವೇಸ? ರಾಮಚಂದ್ರಾಪುರ ಎಲ್ಲಿದೆ? ಧಿಡೀರ್ ಅಂತ ಅದೆಂಗೆ ಫೇಮಸ್ಸಾದ ಅನ್ನೋದು ಇತರ ಸ್ವಾಮಿಗಳಿಗೂ ಯಕ್ಷ ಪ್ರಶ್ನೆ ಆಗೇತ್ರಿ. ಬಿಫೋರ್ ಲಸ್ಟ್ ಇಯರ್ನಾಗೆ ಕ್ಷೌರಿಕ ಜನಾಂಗದ ಬಗ್ಗೆ ಕೀಳಾಗಿ ಮಾತಾಡಿ, ಮಕ್ಕೆ ಇಕ್ಕಿಸಿಕೊಂಡ ಮ್ಯಾಗೆ ಇವಯ್ಯನಿಗೆ ನೇಮು ಫೇಮು ಸಿಕ್ಕಿದ್ದು.
ಆಮ್ಯಾಗೆ ಕುರಿ ಸಿಗಿದು ಅದರ ವಪೆ ಅಂಬೋ ಮಟನ್ ತುಕ್ಡಾ ಹಾಕಿ ಯಾಗ ಮಾಡಿದ ಮ್ಯಾಗಂತೂ ಈವಯ್ಯ ತನ್ನ ತಿಕ್ಕಲುತನದಿಂದಾಗಿ ಅಗ್ದಿ ಫೇಮಸ್ಸಾದ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಏಜೆಂಟನಂತಾದ ರಾಗವೇಸ, ಅಮ್ನೋರಿಗೆ ವಜ್ರದ ಕಿರೀಟ ಕೊಡು ಅಂತ ಸಂಗೀತದ ಇಳಯ ರಾಜನಿಗೇ ಟ್ಯೂನ್ ಮಾಡೋದೇನು, ಜೇಸುದಾಸನಿಂದ ಕಾಣಿಕೆ ಕಸಿಯೋದೇನು. ಹಿಂಗೆ ಪ್ರಚಾರದ ಗೀಳಿಗೆ ಬಿದ್ದ ಈವಯ್ಯ, ಗೋಸಂಕ್ಷರಣೆ ಮಾಡ್ತೀತೀನಂತ ಯಾತ್ರೆನೇ ಹೊಂಟುಬಿಟ್ಟ. ಯಾಕೆ,
ಎತ್ತುಗಳು ಬಂಡಿ ಎಳೆಯಲ್ವೆ, ಹೊಲ ಉಳಾಕಿಲ್ವೆ? ಅವು ಇಲ್ದೆ ರೈತ ಎಲ್ಲಿದ್ದಾನು? ಮೇಕೆ ಎಮ್ಮೇನೂ ಹಾಲು ಕೊಡಾಕಿಲ್ವೆ? ಮೇಕೆ ಹಾಲು ಕುಡಿತಿದ್ರಂತೆ ಮಾತ್ಮಾ ಗಾಂಧಿ. ಹಂದಿ ಗೊಬ್ಬರಕ್ಕಿಂತ ಬೇಕೆ ಪರ್ಟಿಲೈಸರ್ಸು? ಅದರಾಗೂ ಹಂದಿ ವರಹಾವತಾರ, ನಾಯಿ ನಿಯತ್ತಿನ ಪ್ರಾಣಿ ನಾರಾಯಣ. ಇವನ್ನೆಲ್ಲಾ ಮರ್ತುಬಿಟ್ಟು ಹಸ ಒಂದನ್ನ ಹಿಡ್ಕೊಂಡು ಬಿಜೆಪಿನೋರ್ನ ಮಳ್ಳು ಮಾಡ್ತಾ ಬುಟ್ಟಿಗೆ ಹಾಕಿಕೊಂಡ ರಾಗವೇಸನೀಗ ರಾಮಭಕ್ತ ಹನುಮಾನ್ ವೇಸ ಹಾಕ್ಕಂಡ. ಹತ್ತು ದಿನ ರಾಮಾಯಣ ಮಹಾಸತ್ರ ಮಾಡ್ತೀನಿ ಆಂತ ೯ ಕೋಟಿ ಗಂಟನ್ನ ಅದೆಲ್ಲಿಂದ ಸಂಪಾದ್ನೆ ಮಾಡ್ತೋ ಈ ಎಳೆನಿಂಬೆ. ಹಾಗಂತ ದಡ್ಡನೇನಲ್ಲ ಬಿಡ್ರಿ. ತಾನು ಮಾಡೋ ಯಜ್ಞ ಯಾಗ ಹೋಮ ಧೂಮಗಳಿಂದ ಕಾಡು ನೆಲಜಲ ಜೀವಚರಗಳ ಮ್ಯಾಗೆ ಆಗೋ ಎಫೆಕ್ಟ್ನ ಪ್ರೂವ್ ಮಾಡ್ತೀನಂತ ವೇದಿಕೆ ಮೇಲೆಲ್ಲಾ ಲ್ಯಾಪ್ಟಾಪು ಕಂಪ್ಯೂಟರಸ್ ಎಂತೆಂತದೋ ಮಿಸೀನುಗಳನ್ನೆಲ್ಲಾ ಮಡಗಿ ಇಜ್ಞಾನಿಗಳನ್ನೂ ಕುಂಡ್ರಿಸಿದ. ೧೧೦೮ ಬಾಂಬ್ರು ರಾಮಾಯಣ ಪಾರಾಯಣ ಮಾಡೋವಾಗ ಬರೋ ಸೌಂಡು ವೈಬ್ರೇಶನ್ನಿಂದಾಗಿ ಇಡೀ ವರ್ಲ್ಡೇ ಶಾಂತವಾಗಿ ನಿದ್ದೆ ಮಾಡ್ತದೆ ಅಂತ ಪ್ರೂವ್ ಮಾಡೋಕ ಹೊಂಟ ಅಲ್ಟ್ರಾ ಮಾಡರನ್ ಸ್ವಾಮಿ ಈತ. ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂಬಂಗಾಗಿ ೯ ಕೋಟಿ ಬೆಂಕಿನಾಗೆ ಬಿದ್ದು ಸುಟ್ಟು ಹೋತು. ಉಳಿದಿದ್ದು ಬರೀ ಬೂದಿ. ಅದನ್ನ ಎಲ್ಲಂದರಲ್ಲಿಗೆ ಬಳ್ಕೋಬೋಕು ಜನ ಸಿಗಲಿಲ್ಲ. ಕೊನೆದಿನ ಭರ್ಜರಿ ಮಳೆಹೊಡೀತು. ಆದೂಬರೀ ಮಠದ ಆಸುಪಾಸ್ನಾಗಷ್ಟೆ! ವೇದಿಕೆ ಮುರ್ಕೊಂಡೋತು ಶಾಮಿಯಾನ ಎಗರೋತು. ಗಾಳಿಗೆ ತಾನೂ ಹಾರಿ ಹೋಗ್ದಂಗೆ ಸಿಸ್ಯರ ನಡುವೆ ನಿತ್ಕಂಡು ಜೀವ ಉಳಿಸ್ಕೊಂಡ ಆಸಾಮಿ ಏನ್ ಹೇಳ್ದ? ‘ಇದೆ ಕಣ್ರಪಾ ಪರಿಸರದ ಮ್ಯಾಗಾದ ಪರಿಣಾಮ’ ಅಂದು ನಕ್ಕನಂತೆ. ನಾವು ಎಲ್ಲಿಂದ ನಗಬೇಕೇಳ್ರಿ? ಈ ಪಡಿಪಾಟಲಿಗೆ ಶರಾವತಿ ರಿವರ್ ದಂಡೆಮ್ಯಾಗೆ ೨೩೬ ವೈದಿಕರು ಕುಂತು ಕೋಟಿ ತಾರಕ ಮಂತ್ರ ಕುಂಡಗಳ ಒಳ್ಗೆ ೨೫ ಟನ್ ತುಪ್ಪ ರೇಷ್ಮ ವಸ್ತ್ರ ದವಸ ಧಾನ್ಯ ಸುರಿಬೇಕಿತ್ತೆ? ಇನ್ನೊಂದು ಸೈಡ್ನಾಗೆ ಆಯೋಧ್ಯಯಿಂದ ಕರೆಸಿಕೊಂಡ ೧೧೦೮ ಸಾಧು ಸಂತರ, ರಾಮಾಯಣ ಪಾರಾಯಣ. ಇವರ ಸೇವೆಗೆ ೨೫೦೦ ಜನ ರಾಮಸೇವಕರು. ಹತ್ತು ದಿನಕ್ಕೆ ೨೦ ಲಕ್ಷಕ್ಕೂ ಹೆಚ್ಚು ರಾಮಭಕ್ತರೂ ಸೇರಿ ಅಖಂಡ ಬಜ್ನೇನೂ ಮಾಡಿದ್ರಪ್ಪಾ! ಇವರಿಗೆಲ್ಲಾ ಕೂಳು ಬೇಯಿಸಿ ಹಾಕುವಂತೆ ೨೬೦ ಕುಕ್ಕುಗಳು ಉರಿ ಬಿಸಿಲ್ನಾಗೆ ಮಾಡೋ ನಳಪಾಕದಾಗೆ ತಮ್ಮ ಬೆವರಿಳಿಸಿ ಐಟಂಗಳಿಗೆ ಹೊಸರುಚಿ ತಂದರು. ಬ್ರಾಂಬುಗಳೆಲ್ಲಾ ಪದ್ಮಾಸನ ಹಾಕಿ ಹೊಟ್ಟೆ ಸವರ್ಕೋಂಡು ‘ರಾಮ’ ಅಂತ ಬಾಳೆಎಲೆ ಮ್ಯಾಗೆ ಬಡಿಸಿದ್ನೆಲ್ಲಾ ಸೀಟಿ ನೆಕ್ಕಿದರು. ಬ್ರಾಂಬ್ರ ಸುವಾಸಿನಿಯರು ರೇಷ್ಮೆ ಸೀರೆನಾಗೆ ಮಿಂಚಿದರು. ಈ ಸಡಗರದ ಸತ್ರಕ್ಕೆ ಬರೀ ತುಪ್ಪದ ಖರ್ಚೆ ೪೫ ಲಕ್ಷ ಆಗೇತಂತ್ರಿ. ಬೇರೆ ಮಠಗಳೂ ಯಜ್ಞ-ಯಾಗ ಮಾಡ್ತಾವೇಳ್ರಿ. ಆದರೆ ಈಯ್ಯಂದು ಭಾಳ ಅತಿರೇಕಾತು. ಕಡಿಗೇನಾತು, ಇಂಥ ಸತ್ರದಿಂದಾಗಿ ಧರ್ಮ ಮತ್ತು ಇಜ್ಞಾನಕ್ಕೂ ಭಾರಿ ಇನ್ಸಲ್ಟಾತು ಅಷ್ಟೆಯಾ. ಇದನ್ನೆಲ್ಲಾ ನೋಡಿ ಖುಸಿ ಪಟ್ಟಿದ್ದು ಜನಿವಾರಿಗಳು ಸಂಘ ಪರಿವಾರಗಳು. ಬಾಕಿ ಮಂದಿ ದೂರ್ದಾಗೇ ನಿಂತು ಹಸಿದ ಹೊಟ್ಟೆ ಸವರ್ಕಂತು. ದಿನಾ ಹುಟ್ಟೋ ಕಂದಮ್ಮಗಳಿಗೆ ಕುಡಿಯೋಕೆ ಹಾಲು ಸಿಗೋದೆ ತ್ರಾಸು. ಇನ್ನು ಕೊಳಚೆಗೇರಿನಾಗೆ ಬೆಳೆಯೋ ಹುಡ್ರಂತೂ ಮೊಸರು ಬೆಣ್ಣೆ ತುಪ್ಪ ಅನ್ನೋವ್ನ ಜೀವಮಾನ್ದಾಗೆ ನೋಡಂಗೆ ಇಲ್ಲೇಳ್ರಿ. ಇಂಥ ಸತ್ರಗಳಿಂದ ದೀನದಲಿತರಿಗೇನು ಉಪೇಗ? ಹವ್ಯಕ ವಿದ್ಯಾರ್ಥಿಗಳಿಗಾದ್ರೂ ಯಾವ ಲಾಭ? ದನಗಳ ಪೂಜೆ ಮಾಡಿ ಜನಗಳ್ನ ಮುಟ್ಟಿಸಿಕೊಳ್ಳದಂಗೆ ದೂರ ಇಡೋ ಈ ದೇಸದಾಗೆ ಮಾತ್ರ ಇಂಥ ಹೈಲಾಟಗಳು ನಡೆಯೋಕೆ ಸಾಧ್ಯ. ಈ ಕರ್ಮಕಾಂಡ ನೋಡೋಕೆ ಭಾರಿ ರಾಜಕಾರಣಿಗಳು, ಮಹಾ ಮಹಾ ಸ್ವಾಮೇರು ಓಡಿಬಂದ್ವು, ರವಿಶಂಕರ್ ಗುರೂಜಿ ಭಜನೆಗೆ ಮಳ್ಳಾಗಿ ಹೋದಂಗೆ. ರಾಜ್ಯಪಾಲ ಚತುರ್ವೇದಿ ತಾತ ಇದನ್ನೆಲ್ಲಾ ನೋಡಿ ಆನಂದದಿಂದ ಬೇಹೋಶ್ ಆತು. ಪೇಜಾವರಶ್ರಿ ಸೇತುಬಂಧ ವೇದಿಕೆ ಮ್ಯಾಗೆ ಕುಂತು ಜನ ಸಾಗರ ನೋಡಿ, ‘ಇವನ್ಯಾವನಯ್ಯ ನನ್ನ ಉತ್ತರಾಧಿಕಾರಿ ಹಂಗೆ ಕಾಣ್ತಾ ಅವ್ನೆ.’ ಅಂತ ಒಳಗೇ ತಿಕ ಉರಿಸಿಕೊಳ್ಳುತ್ತಾ, ‘ಬಿಜೆಪಿಯವರಂತೂ ರಾಮರಾಜ್ಯ ಮಾಡಲಿಲ್ಲ. ಈ ಮಹಾಶಯ ಸತ್ಯವಾಗ್ಲೂ ಮಾಡ್ತಾರೆ’ ಎಂದು ಕೀರಲು ಕಂಠದಲ್ಲಿ ಶ್ಲಾಘಿಸಲೇಬೇಕಾತು. ಇಂತದ್ರಾಗೆಲ್ಲಾ ಬಿಲಿಫೇ ಇಟ್ಟುಕೊಳ್ಳದ ಸಿರಿಗೆರೆ ಡಾಕ್ಟರ್ ಸ್ವಾಮೀಜಿ ಪ್ರಸೆಂಟ್ ಹಾಕಿದ್ದು ಮಾತ್ರ ವಾಟ್ ಎ ಸರ್ಪ್ರೈಸ್!
ಆದ್ರೂ ಡಾಕ್ಟರ್ ಸ್ವಾಮಿ ರಾಗವೇಸ್ವರನಿಗೆ ಇಂಜಕ್ಷನ್ ಮಾಡೋದ್ನ ಮರೀನಿಲ್ಲ. ‘ಶ್ರೀ ರಾಮ ಎಂದೋ ರಾವಳಾಸುರನ್ನ ಸುಟ್ಟ. ಈಗ ನಮ್ಮೊಳಗಿರೋ ರಾವಳಾಸುರನ್ನ
ಸುಡಬೇಕಾಗೇತ್ರಿ. ತುಪ್ಪ ತೈಲ ದವಸ ಧಾನ್ಯ ಸುಡೋದಲ್ಲವೋ ಕಂದಾ ರಾಗವೇಸ’ ಅಂತ ಮಾರ್ಮಿಕವಾಗಿ ಟಾಂಟ್ ಕೊಟ್ಟರೂ ಅದನ್ನ ಕೇಳಿಸಿಕೊಳ್ದಂಗೆ ‘ಅಯ್ಯಾ ಎನ್ನ ಕಿವುಡನ ಮಾಡಯ್ಯ’ ಅಂಬಂಗೆ ರಾಗವೇಸ ಕುಂತು ಬಿಡಬೇಕೆ! ಎಂಡಿಂಗ್ ದಿನ ತೆಲಿಮ್ಯಾಲೆ ಸೆರಗು ಹೊದ್ದುಕೊಂಡು ರಾಮಸೀತೆ ಗೊಂಬೆಗೆ ಆಭೀಸೇಕ ಮಾಡ್ಸಿ ಮಹಾಪೂಜೆ ಮಾಡಿ ಆರತಿ ಎತ್ತಿದ ರಾಗವೇಸ್ವರನ ಪರಮ ಅಜ್ಞಾನಕ್ಕೆ ಕೈ ಬಿಚ್ಚಿ ದೇಣಿಗೆ ನೀಡಿದ ಹವ್ಯಕರು, ಇತರ ಬ್ಲಾಕ್ಮೋನಿಯಾ ಬ್ಲಾಕ್ ಜನರು ತಾವು ಕೊಟ್ಟಿದ್ದೆಲ್ಲಾ ಬೆಂಕಿನಾಗೆ ಬಿದ್ದು ಬೂದಿಯಾಗೋವಾಗ ಬೆಚ್ಚಿ ಬಿದ್ದಿರಲೇಬೇಕು. ದೀನ ದಲಿತರಿಗಾಗಿ ಈವಯ್ಯ ಮಾಡಿದಿದ್ರೆ ಅಷ್ಟೇಹೋತು. ಹವ್ಯಕ ಹುಡುಗರಿಗೆ ಈಸ್ಕೂಲು ಕಾಲೇಜು ಕಟ್ಟಿಸಬೋದಿತ್ತು. ಬೆವರು ಬಸಿದು ದುಡಿದು ಸಂಪಾದಿಸಿದ ಅಡಿಕೆ ಧಣಿಗಳ ದುಡ್ಡು ಸತ್ರದ ನೆಪ್ಪಾಗೆ ಸತ್ಕನಾಶ್‍ವಾಗೋತಲ್ರಿ. ದಣಿದೇ ಗೊತ್ತಿಲ್ಲದ ರಾಗವೇಸ್ವರ ಧಣಿಗೆ ಇದೆಲ್ಲಾ ಹೆಂಗೆ ಗೊತ್ತಾದಾತು! ಗೋವಿನ ತುಪ್ಪನ್ನೆಲ್ಲಾ ಬೆಂಕಿಗೆ ಸುರಿದು ವಿಕೃತಾನ೦ದ ಪಡೋ ಇಂಥೋರಿಂದ ಗೋಸಂರಕ್ಷಣೆನಾರ ಹೆಂಗಾದಾತು ಹೇಳ್ರಲಾ?
*****
( ದಿ. ೨೫-೦೫-೨೦೦೬)