ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ
ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ
ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು
ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ
ನೀರ ಜಾಲರಿಬಟ್ಟೆ ಮೈಗಂಟಿ
ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು ಮೋಡಿ ರೂಪ
ಅಲ್ಲಿ ವರದೆ ಇಲ್ಲಿ ಶಾರದೆ ಅಲ್ಲಿ ಗಂಗೆ ಇಲ್ಲಿ ತುಂಗೆ
ಮುಂತಾಗಿ ಎಲ್ಲೆಲ್ಲೂ ಬಳುಕಿ ತುಳುಕಿ
ನಗೆನೂರೆಯುಕ್ಕಿ ಒಯ್ಯಾರ ಚಿಮ್ಮುವ
ನಿನ್ನ ಲಾಸ್ಯಗತಿ ಕಣ್ಣಿಗೊಂದು ಹಬ್ಬ
ಹಣ್ಣು ಕಾಯಿಗಳ ಹುಳಿಸಿಹಿ ರಸವಾಗಿ
ಕಣ್ಣು ಕಣ್ಣುಗಳಲ್ಲಿ ರಾಗಾಲಾಪಗಳ ಭಾವರಸವಾಗಿ
ಎದೆಎದೆಗಳ ಬಾಚಿ ತಬ್ಬುವ ಸರಸವಾಹಿನಿಯಾಗಿ
ಅಂತಃಕರಣದಂತರ ಗಂಗೆ ನೀನೊಲವಿನ ಸೆಲೆಯಾಗಿ
ಅನ್ನದ ಬೇರಿಗನ್ನವಾಗುವೆ
ಮಾಂಸಲ ದಂಡೆಗಳ ತುಂಬಿ ಹರಿವ ರಕ್ತ ಶಕ್ತಿಯಾಗುವೆ
ಅಂಗ ಅಂಗಗಳಲನಂಗನಂತೆ ವಿಧ ವಿಧ ರೂಪ ಕೊಡುವೆ
ಮಲಿನವೆಲ್ಲವ ತೊಳೆದು ತಳಕಾಣಿಸಿ ತಿಳಿಗೊಳಿಸಿ
ಮನದ ಕನ್ನಡಿಯಲಾಗಸವ ಬಿಂಬಿಸಿ ತಿದ್ದಿ ತೀಡಿ ಮುಂಗುರುಳ
ಚಂದ್ರ ಸೂರ್ಯ ತಿಲಕವಸೊಪ್ಪವಿಡುವೆ
ಶಿವನ ಜಡೆಯಿಂದಿಳಿದು ಸಾಗರದೊಡೆಯನ ಸೇರಿ
ಲಿಂಗಾಂಗ ಸಮರಸವನುಂಡು ನಲಿವ ನೀರೆ
ಎಲ್ಲೆಡೆ ಸಂವೃದ್ಧಿಯ ತಾರೆ
*****