Home / ಬಾಲ ಚಿಲುಮೆ / ಕಥೆ / ಚಂದ್ರ ಭೂಪತಿಯ ಕಥೆ

ಚಂದ್ರ ಭೂಪತಿಯ ಕಥೆ

ಒ೦ದೂರಿನಲ್ಲಿ ಒಬ್ಬ ಚಂದ್ರನೆಂಬ ಅರಸನಿದ್ದನು. ಅವನ ಮಕ್ಕಳಿಗೆ ಕಪಿಗಳೊಡನೆ ಆಟವಾಡುವುದು ಎಂದರೆ ಬಹಳ ಆಶೆ. ಅದರಿಂದ ಆ ರಾಜಪುತ್ರರು ಆ ಕಪಿಗಳಿಗೆ ಬೇಕಾದ ತಿಂಡಿಗಳನ್ನು ಕೊಡುತ್ತಿದ್ದರು.
ಆ ಅರಮನೆಯಲ್ಲಿಯೇ ಎಳೆಯ ಮಕ್ಕಳ ಗಾಡಿಗೆ ಕಟ್ಟುವುದಕ್ಕೆಂದು ಟಗರುಗಳನ್ನು ಸಾಕಿದ್ದರು. ಅವುಗಳಲ್ಲಿ ಒ೦ದು ನಿತ್ಯವೂ ಅಡುಗೆ ಮನೆಗೆ ನುಗ್ಗಿ ಅಲ್ಲಿದ್ದ ಹಸಿ ಬಿಸಿ ಪದಾರ್ಥಗಳನ್ನೆಲ್ಲ ತಿನ್ನುವುದು. ಅಡುಗೆಯವನು ಕಂಡರೆ ತಪ್ಪದೆ ಅದನ್ನು ಕೈಗೆ ಸಿಕ್ಕಿದುದನ್ನು ತೆಗೆದುಕೊಂಡು ಹೊಡೆದು ಓಡಿಸುವನು.
ಒರಿದು ದಿವಸ ಆ ಟಗರು ಒಳಗೆ ನುಗ್ಗಿತು. ಅದನ್ನು ಹೊಡೆಯಲು ಥಟ್ಟನೆ ಏನೂ ಸಿಕ್ಕಲಿಲ್ಲ. ಆಗ ಅಡುಗೆಯವನು ಒಲೆಯಲ್ಲಿದ್ದ ಕೊಳ್ಳಿಯನ್ನು ತೆಗೆದುಕೊಂಡು ಅದರಿಂದಲೇ ಆ ಟಗರನ್ನು ಹೊಡೆದನು. ಬೆಂಕಿಯು ತಗಲುತ್ತಲೇ, ಬೆಳೆದು ನಿಂತಿದ್ದ ತುಪ್ಪಟವು ಹತ್ತಿ ಕೊಂಡಿತು. ಅದು ಗಾಬರಿಯಲ್ಲಿ ಓಡಿಹೋಗಿ ಕುದುರೆಯ ಲಾಯದ ಮಗ್ಗುಲಲ್ಲಿದ್ದ ಹುಲ್ಲಿನ ಬಣವೆಯ ಬಳಿ ಹೋಯಿತು. ಅದಕ್ಕೆ ಬೆಂಕಿಯು ಹತ್ತಿತು. ಅದೇ ಬೆಂಕಿಯು ಹರಡಿಕೊಂಡು ಕುದುರೆಗಳ ಲಾಯಕ್ಕೂ ಬೆಂಕಿ ಹೊತ್ತಿಕೊಂಡು ಕುದುರೆಗಳಿಗೆಲ್ಲ ಸುಟ್ಟ ಗಾಯಗಳಾಯಿತು.
ಆಗ ಅರಮನೆಯ ಕುದುರೆ ವೈದ್ಯರು ಬಂದು ಕುದುರೆಗಳ ಗಾಯಗಳಿಗೆ ಕಪಿಗಳ ಕೊಬ್ಬು ಬೇಕು ಎಂದು ಹೇಳಿದರು. ಅರಸನು ಅರಮನೆಯ ತೋಟದಲ್ಲಿದ್ದ ಕಪಿಗಳನ್ನೇ ಕೊಲ್ಲಿಸಿದನು. ಆ ಕಪಿಯ ಹಿಂಡಿನಲ್ಲಿ ಒಂದು ಗಡವನಿತ್ತು. ಅದು ತಪ್ಪಿಸಿಕೊಂಡು ಓಡಿ ಹೋಯಿತು.
ಆ ಗಡವನು ಕಾಡಿನಲ್ಲಿ ಸೇರಿಕೂಂಡು ತನ್ನ ಕುಲವನ್ನೇ ಕೊಲ್ಲಿಸಿದ ಆ ಅರಸನಿಗೆ ಏನಾದನೂ ಒಂದು ಕೆಡುಕು ಮಾಡಬೇಕೆಂದು ಸಮಯ ಕಾದಿತ್ತು.
ಒಂದು ದಿನ ಅದು ಬಾಯಾರಿ ನೀರು ಕುಡಿಯಲೆಂದು ಒಂದು ಕೊಳದ ಬಳಿಗೆ ಹೋಯಿತು. ಅಲ್ಲಿ ಹಜ್ಜೆಗಳೆಲ್ಲ ನೀರಬಳಿಗೆ ಹೋದವೇ ಹೊರತು ಒಂದೂ ಹಿಂತಿರುಗಿ ಬಂದಂತೆ ಇರಲಿಲ್ಲ ಅದರಿಂದ “ಈ ನೀರಿನಲ್ಲಿ ಮೊಸಳೆ ಇರಬೇಕು. ಅದು ಬಂದವರನ್ನೆಲ್ಲ ಹಿಡಿದು ಕೊ೦ದಿರಬೇಕು” ಎಂದು ಯೋಚಿಸಿ, ಒ೦ದು ನಾಳವನ್ನು ಸಂಪಾದಿಸಿಕೊಂಡು ಬಂದು, ದೂರದಲ್ಲಿ ನಿಂತು ಅದರಿಂದ ನೀರು ಕುಡಿಯಿತು.
ಆ ಕೊಳದಲ್ಲಿ ಒಬ್ಬ ರಾಕ್ಷಸನಿದ್ದನು. ಅವನು ಕಪಿಯು ಮಾಡಿದುದನ್ನು ನೋಡಿ ಸಂತೋಷಪಟ್ಟು ಅದಕ್ಕೆ ದರ್ಶನವನ್ನು ಕೊಟ್ಟು, “ಎಲೈ ಕಪಿಯೆ, ನಿನ್ನ ಬುದ್ಧಿಗೆ ಮೆಚ್ಚಿದೆನು. ನಾನು ಕೊಳದಲ್ಲಿ ಇರುವೆನು. ಈ ನೀರಿನೊಳಕ್ಕೆ ಇಳಿದವರೆಲ್ಲ ನನಗೆ ಭಕ್ಷ್ಯರು. ನಿನ್ನಂತೆ ಯಾರೂ ನೀರಿಗೆ ಇಳಿಯದೆ ನೀರು ಕುಡಿದವರಿಲ್ಲ. ಭಲೆ! ನಿನಗೆ ಒಂದು ವರವನ್ನು ಕೇಳು, ಕೊಡುವೆನು.”
ಕಪಿಯು ಕೇಳಿತು: “ನೀನು ಎಷ್ಟು ಜನರನ್ನು ತಿನ್ನಬಲ್ಲೆ?”
“ನೂರು, ಸಾವಿರ, ಒಂದು ಲಕ್ಷನನ್ನಾದರೂ ತಿಂದು ಹಾಕಬಲ್ಲೆ”
“ಹಾಗಾದರೆ ನನಗೆ ನಿನ್ನಿ೦ದ ಒಂದು ಕಾರ್ಯವಾಗ ಬೇಕಾಗಿದೆ. ನನಗೆ ಒಬ್ಬ ಅರಸಿನ ಮೇಲೆ ಕೋಪವಿದೆ. ಅವನ ಕುಲವನ್ನೆಲ್ಲ ಕರೆದು ತಂದರೆ ಅವರನ್ನೆಲ್ಲ ತಿಂದುಹಾಕಬಲ್ಲೆಯಾ?”
“ಅವರು ನೀರೊಳಗೆ ಹೊಕ್ಕರೆ ಸಾಕು. ಅವರು ನನ್ನ ಹೊಟ್ಟೆಯನ್ನೇ ಹೊಕ್ಕ ಹಾಗೆ ಎಂದುಕೋ.”
“ಹಾಗಾದರೆ ನಿನ್ನ ಕತ್ತಿನಲ್ಲಿರುವ ಮುತ್ತಿನ ಸರವನ್ನು ನನಗೆ ಸಾಲವಾಗಿ ಕೊಟ್ಟಿರು. ನಾನು ನಿನಗೆ ನಿನ್ನ ಹೊಟ್ಟ ಹಿಡಿಯುವಷ್ಟು ಭೋಜನವನ್ನು ತರುವೆನು.”
ರಾಕ್ಷಸನು ತನ್ನ ಕಂಠದಲ್ಲಿದ್ದ ಮಾಲೆಯನ್ನು ಸಂತೋಷವಾಗಿ ಕೊಟ್ಟನು. ಕಪಿಯು ಅದನ್ನು ಧರಿಸಿಕೊಂಡು ತಾನು ಹಿಂದಿದ್ದ ಅರಸನ ಉದ್ಯಾನಕ್ಕೆ ಹೋಯಿತು. ಅಲ್ಲಿದ್ದವರೆಲ್ಲಾ
ಅದರ ಕತ್ತಿನಲ್ಲಿದ್ದ ಮುತ್ತಿನ ಸರವನ್ನು ಕಂಡು ಆಶ್ಚರ್ಯಪಟ್ಟರು.
ಈ ಸುದ್ದಿಯು ಅರಸನಿಗೂ ತಿಳಿಯಿತು. ಅರಸನು ಅದನ್ನು ನೋಡಲು ಬಗೆ ಬಗೆಯಾದ ತಿಂಡಿಗಳನ್ನು ತೆಗೆಸಿಕೊಂಡು ತೋಟಕ್ಕೆ ಬಂದನು. “ಎಲೈ ಕಪಿರಾಜ ನಿನಗೆ ಈ ಸರವು ಎಲ್ಲಿ ಸಿಕ್ಕಿತು?” ಎಂದು ಕೇಳಿದನು. ನಿಜವಾಗಿಯೂ ಆ ಸರದ ಮುತ್ತುಗಳು ಶುದ್ಧವಾಗಿ, ಮುದ್ದಾಗಿ, ಇದ್ದು ಅರಸನೂ ಅಬ್ಬಾ ಎಂದು ಆಶ್ಚರ್ಯ ಪಡುವಂತಿತ್ತು.
ಕಪಿಯು ಹೇಳಿತು: “ಅರಸ, ಕಾಡಿನಲ್ಲಿ ಒ೦ದು ಕೊಳವಿದೆ. ಅಲ್ಲಿ ಸ್ನಾನ ಮಾಡಿದವರಿಗೆಲ್ಲ ಒಂದೊಂದು ಮುತ್ತಿನ ಸರವು ಸಿಕ್ಕುತ್ತದೆ. ನನಗೂ ಅಲ್ಲಿ ಸ್ನಾನ ಮಾಡಿದಾಗ ಇದು ಸಿಕ್ಕಿತು.”
“ಯಾರು ಸ್ನಾನ ಮಾಡಿದರೂ ಸಿಕ್ಕುತ್ತದೆಯೇ?”
“ಹೌದು, ನಾನು ನೋಡಿದೆ. ಆದರೆ ಆ ಕೊಳ ಕಾಡಿನಲ್ಲಿದೆಯಾಗಿ ಅನೇಕರಿಗೆ ತಿಳಿಯದು.”
“ಹಾಗಾದರೆ, ನಾನು ಬಂದರೆ ಆ ಕೊಳವನ್ನು ತೋರಿಸುವೆಯಾ?”
“ಅಗತ್ಯವಾಗಿ ತೋರಿಸುವೆನು. ಬಾ.”
ಆ ಸರವನ್ನು ನೋಡಿದ ಹಾಗೆಲ್ಲ ಅದರ ಮುತ್ತುಗಳ ಮೇಲಿನ ಆಸೆಯು ಹೆಚ್ಚಾಯಿತು. “ಇದು ಭೂಲೋಕದ ಮುತ್ತುಗಳಲ್ಲ. ಇಂತಹ ಸರಗಳು ನಮ್ಮವರಿಗೆಲ್ಲಾ ಇರಲಿ” ಎಂದು
ತನ್ನ ಬಂಧುಬಳಗ ಮಿತ್ರ ಭೃತ್ಯ ಪತ್ನೀ ಪುತ್ರಾದಿಗಳನೆಲ್ಲ ಕರೆದುಕೊಂಡು ಅಲ್ಲಿಗೆ ಹೊರಟನು. ಅಸೆಯು ಯಾರನ್ನು ಬಿಡುವುದು? ಕೇಳಿಲ್ಲವೆ?
ನೂರಿರೆ ಸಾಸಿರಬೇಕೆಂಬ | ಸಾಸಿರವಿರೆ ಲಕ್ಷವು ಬೇಕೆಂಬ ॥
ಲಕ್ಷವು ಇರೆ ರಾಜ್ಯವು ಬೇಕೆಂಬ । ರಾಜ್ಯವೆ ಇರೆ ನಾಕವು ಬೇಕೆಂಬ ॥೩೦॥ 
ಮುದಿತನ ಬರಲಂಗವು ಕಂಗೆಡುವುದು । 
ಕಂಗಳು ಕಾಣವು ಕಿವಿಗಳು ಕೇಳವು! 
ಯೌವನ ಬರುವುದು ಆಸೆಗೆ ಮಾತ್ರ ॥ ೩೧ ॥ 
ವಾನರವು ಅವರನ್ನೆಲ್ಲ ರಾಕ್ಷಸನಿದ್ದ ಸರಸ್ಸಿನ ಬಳಿಗೆ ಕರೆದುಕೊಂಡು ಹೋಯಿತು. ಕೈಮುಗಿದುಕೊಂಡು ಅರಸನಿಗೆ ಹೇಳಿತು :-
“ದೇವ ಸೂರ್ಯನು ಅರ್ಧಾರ್ಧವಾಗಿ ಉದಯಿಸಿರುವ ವೇಳೆಯಲ್ಲಿ ಈ ಸರೋವರದಲ್ಲಿ ಸ್ನಾನ ಮಾಡಿದವರಿಗೆ ಸಿದ್ದಿಯು ಲಭಿಸುವುದು. ಅದರಿಂದ ಎಲ್ಲರೂ ಒಂದೇ ವೇಳೆಯಲ್ಲಿ ನೀರಿಗೆ ಇಳಿಯಲಿ” ಎಂದಿತು. ರಾಜನು ಹಾಗೆಯೇ ಆಜ್ಞೆ ಮಾಡಿದನು. ಎಲ್ಲರೂ ಒಟ್ಟಿಗೇ ನೀರಿಗೆ ಇಳಿದರು ಕೋತಿಯು ರಾಜನನ್ನು “ದೇವ ನಾವು ಅತ್ತಕಡೆ ಇಳಿಯೋಣ. ಅಲ್ಲಿ ರತ್ನ ಹಾರಗಳು ಬಹಳವಾಗಿವೆ” ಎಂದು ತಡೆಯಿತು.
ಇತ್ತ ನೀರಿಗೆ ಇಳಿದ ಜನರನ್ನೆಲ್ಲ ರಾಕ್ಷಸನು ತಿಂದು ಬಿಟ್ಟನು ಅವರು ಎಷ್ಟು ಹೊತ್ತಾದರೂ ನೀರಿನಿಂದ ಎದ್ದು ಬರದಿರಲು ಅರಸನು ಇದೇಕೆಂದು ಕೇಳಿದನು. ಕಪಿಯು ಥಟ್ಟನೆ ಎತ್ತರವಾಗಿರುವ ಒಂದು ಮರವನ್ನೇರಿಕೊಂಡು, “ಅರಸಾ, ನೀನು ಕಟ್ಟೆ. ನೀರ ಒಳಗಿರುವ ರಾಕ್ಷಸನು ನಿನ್ನವರನ್ನೆಲ್ಲಾ ತಿಂದು ಹಾಕಿದನು. ನೀನು ಹಿಂದೆ ಕೊಲ್ಲಿಸಿದ ಕಪಿಗಳ ಹಿಂಡಿನಲ್ಲಿ ಇದ್ದವನು ನಾನು. ನಾನು ನನ್ನ ವೈರವನ್ನು ಸಾಧಿಸಿಕೊಂಡೆನು. ನೀನು ಎಷ್ಟಾಗಲೀ ಅರಸನೆಂದು ನಿನ್ನನ್ನು ಉಳಿಸಿದೆನು. ನೀನು ಹೋಗು. ನಿನ್ನ ಹಿಂಸೆಗೆ ನಾನೂ ಪ್ರತಿ ಹಿಂಸೆ ಮಾಡಿದೆನು. ದುಷ್ಟನಿಗೆ ದುಷ್ಟನೇ ಆದರೆ ತಪ್ಪೇನು? ನೀನು ನನ್ನ ಕುಲವನ್ನು ಕೊಂದೆ; ನಾನು ನಿನ್ನ ಕುಲವನ್ನು ಕೊಂದೆ? ಎಂದು ಹೇಳಿತು.
ಅರಸನು ತನ್ನ ಕೋಪವನ್ನೆಲ್ಲಾ ನುಂಗಿಕೊಂಡು ಹಿಂತಿರುಗಿ ಹೋದನು.
ಅದರಿಂದ ನಾನು ಹೇಳಿದ್ದು. “ಚಪಲ ಮತಿಯಿಂ ಕೆಲಸ ಮಾಡಲು ಕೇಡು ತಪ್ಪದು” ಎಂದು “ನಾನು ಇನ್ನು ನಾನು ಹೋಗಿ ಬರುವೆನು ಕಳುಹಿಸಿಕೊಡು” ಎಂದನು.
ಚಕ್ರಧರನು “ಅಯ್ಯಾ” ಆಪತ್ಕಾಲಕ್ಕೆ ಬೇಕೆಂದಲ್ಲವೆ, ಧನವನ್ನೂ ಮಿತ್ರರನ್ನೂ  ಸಂಗ್ರಹಿಸುವುದು? ನಾನು ಹೀಗಿರುವಾಗ ನನ್ನನ್ನು ಬಿಟ್ಟು ಹೋಗುವುದು ತರವೆ? ಆಪತ್ತಿನಲ್ಲಿರುವ ಮಿತ್ರನನ್ನು ಬಿಟ್ಟು ಹೋದವನು ಕೃತಘ್ನನು. ಅಂಥವನಿಗೆ ನರಕವಾಗುವುದು ಅಲ್ಲವೆ?” ಎಂದು ಕೇಳಿದನು.
ಸುವರ್ಣಸಿದ್ಧಿಯು ಹೇಳಿದನು: “ನನ್ನಿಂದ ನಿನಗೆ ಏನಾದರೂ ಉಪಕಾರವಾಗುವುದಾದರೆ ನಾನು ಇದ್ದರೂ ಸಾರ್ಥಕ. ನಾನು ನಿನ್ನ ಬಾಧೆಯನ್ನು ನೀಗಲಾರೆ. ನಿನ್ನ ತಲೆಯ ಮೇಲೆ ಸುತ್ತುತ್ತಿರುವ ಚಕ್ರವನ್ನೂ ಅದರಿಂದ ನಿನಗೆ ನೋವಾಗಿ ನೀನು ಮುಖವನ್ನು ವಿಕಾರ ಮಾಡಿಕೊಳ್ಳುವುದನ್ನೂ ನೋಡುತ್ತ ನಿನಗೆ ಆದ ಅನರ್ಥವು ನನಗೂ ಆದೀತೋ ಎಂದು ದಿಗಿಲಾಗುತ್ತದೆ. ಅದರಿಂದ, ಕೇಳಿಲ್ಲವೆ?
ಮುಸುಡಿ ನೋಡಲು ತಿಳಿಯದೆ | ನಿಜವಿಕಾಲವು ಹಿಡಿದಿದೆ ॥ 
ದಿಟವ ಹೇಳುವೆ ತಿಳಿದುಕೋ | ಓಡಿ ಗೆದ್ದವ ಬದುಕಿದ ॥ ೩೨ ॥ 
ಚಕ್ರಧರನು “ಅದೆಂತು?” ಎಂದು ಕೇಳಿದನು ಅವನು ಹೇಳಿದನು:-
*****
ವಿಕಾಲನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...