Home / ಬಾಲ ಚಿಲುಮೆ / ಕಥೆ / ಹಾಡುವ ಕತ್ತೆಯ ಕಥೆ

ಹಾಡುವ ಕತ್ತೆಯ ಕಥೆ

ಒ೦ದೂರಿನಲ್ಲಿ ಒಂದು ಕತ್ತೆಯಿತ್ತು. ಅದು ಹಗಲುಹೊತ್ತು ಅಗಸನ ಮನೆಯಲ್ಲಿ ಭಾರಗಳನ್ನು ಹೊರುವುದು : ರಾತ್ರಿಯಹೊತ್ತು ಮನ ಬಂದಂತೆ ಅಲೆಯುವುದು: ಮತ್ತೆ ಬೆಳಗಾಗುತ್ತಲೂ ಅಗಸನ ಮನೆಗೇ ಬಂದುಬಿಡುವುದು.
ಹೀಗಿರಲು, ರಾತ್ರಿಯ ಹೊತ್ತು ಸ್ವೇಚ್ಛೆಯಾಗಿ ತಿರುಗುವ ಕತ್ತೆಗೂ ಒಂದು ನರಿಗೂ ಸ್ನೇಹವು ಬೆಳೆಯಿತು. ಅವೆರಡೂ ನಿತ್ಯವೂ ಇರಳು ಎಲ್ಲೆಂದರಲ್ಲಿ ಮೇದುಕೊಂಡು ಸುಖವಾಗಿದ್ದುವು. ಒಂದು ದಿನ ಎರಡೂ ಸೌತೆಯಕಾಯಿ ಬೆಳೆದಿರುವ ಹೊಲಕ್ಕೆ ನುಗ್ಗಿವೆ: ಆನಂದವಾ ಮೆಯ್ದಿವೆ: ಆ ಹೊತ್ತಿಗೆ ಸರಿಯಾಗಿ ಚಂದ್ರನು ಹುಟ್ಟಿ ಬೆಳುದಿಂಗಳು ಎಲ್ಲೆಲ್ಲೂ ಹರಡಿತು. ತಂಗಾಳಿಯು ಬೀಸಿತು. ಆಗ ಕತ್ತೆಗೆ ಒಂದು ಹಾಡು ಹಾಡಬೇಕು ಎನ್ನಿಸಿತು. ನರಿಯನ್ನು ಕರೆದು, “ಮಿತ್ರ ಹಾಡಬೇಕು ಎನ್ನಿಸುತ್ತಿದೆ. ಏನು ಮಾಡಲಿ?” ಎಂದು ಜಂಭವಾಗಿ ಕೇಳಿತು. ಅದಕ್ಕೆ ಆ ನರಿಯು “ಮಾವ, ಬಾಯಿಬಿಟ್ಟೀಯೇ” ಕದಿಯುವುದಕೆ ಬಂದವರು
ಬಾಯಿ ಹೊಲಿದುಕೊಂಡಿರಬೇಕು ಅಲ್ಲದೆ, ನಿನ್ನ ಸ್ವರವೂ ಚೆನ್ನಾಗಿಲ್ಲ. ನೀನು ಕೂಗಿದರೆ ದೂರದಲ್ಲಿದವರಿಗೂ ಕೇಳಿಸಿ ನಿನ್ನ ಕೆಲಸವು ಮುಗಿಯುವುದು. ಸುಮ್ಮನಿದ್ದು ಬೇಕಾದಷ್ಟು, ತಿಂದು ಹೋಗೋಣ” ಎಂದು ಎಷ್ಟೋ ಹೇಳಿತು.
ಕತ್ತೆಯು ಅದನ್ನು ಕೇಳಿ “ಎಷ್ಟೇ ಆಗಲಿ ನೀನು ಕಾಡಿನ ಜಂತು. ನಿನಗೆ ಸಂಗೀತದ ಸೊಗಸೇನು ಗೊತ್ತು
ಕತ್ತಲನು ಚಂದ್ರಿಕೆಯು ದೂಡಿದಂದು | 
ಪ್ರಿಯ ಜನರು ಪ್ರೀತಿಯಿಂ ಸೇರಿದಂದು ||
ಸಂಗೀತ ಕೇಳದಿರೆ ಧನ್ಯರೆಂತು ? ||೨೫||
ಎಂದಿತು. ನರಿಯು “ಮಾವ ಅದಿರಲಿ, ನಿನಗೆ ಸಂಗೀತವೇನು ಗೊತ್ತು? ಸುಮ್ಮನೆ ಅರಚುವೆ. ಅದರಿ೦ದ ನಮ್ಮ ಕೆಲಸವು ಕೆಡುವುದು. ಅಷ್ಟೇ ಫಲ” ಎಂದಿತು. ಕತ್ತೆಗೆ ಕೋಪ ಬಂದು” ನನಗೆ ಸಂಗೀತವು ತಿಳಿಯದೆ? ಸಪ್ತ ಸ್ವರಗಳು, ತಾಳಗಳು ನಲವತ್ತೊಂಭತ್ತು, ಅರವತ್ತಮೂರು ರಾಗಗಳು, ಭರತ ಮುನಿಯು ಇದರ ಕರ್ತೃ. ಇನ್ನೇನು ಬೇಕು ಕೇಳು” ಎಂದು ಗದರಿಸಿತು. ನರಿಯು “ಹಾಗಾದರೆ, ಮಾವ, ನಾನು ಕಾವಲಿನವನು ಬರುವುದನ್ನು ನೋಡಿಕೊಳ್ಳುತ್ತಾ ದೂರದಲ್ಲಿ ಕಾಯ್ದು ಕೊಂಡಿರುವೆನು. ನಿನಗೆ ತೋರಿದ ಹಾಗೆ ಹಾಡಿಕೋ” ಎಂದು ತಾನು ದೂರವಾಗಿ ಹೋಯಿತು. ಕತ್ತೆಯೂ ಹಾಡಿತು.
ಅದನ್ನು ಕೇಳಿ ಹೊಲದ ಯಜಮಾನನು ದೊಣ್ಣೆಯನ್ನು ಎತ್ತಿ ಕೊಂಡು ಬಂದು ಚೆನ್ನಾಗಿ ಹೊಡೆದು ನೆಲಕ್ಕೆ ಕೆಡವಿ, ಒಂದು ಬೀಸುವ ಕಲ್ಲನ್ನು ಅದರ ಕತ್ತಿಗೆ ಕಟ್ಟಿದನು. ಕತ್ತೆಯೂ ಒ೦ದು ಘಳಿಗೆ ನೋವನ್ನು ಅನುಭವಿಸುತ್ತಿದ್ದು ಮತ್ತೆ ಎದ್ದು ಹೊರಟಿತು.
ನಾಯಿ ಕತ್ತೆಯು ಕುದುರೆ | ಎಲ್ಲಕಿಂತಲು ಕತ್ತೆ ||
ಹೊಡೆದ ಏಟಿನ ನೋವ | ಕಳೆದುಕೊಂಬುವು ಕೂಡಲೆ ||೨೬||
ನರಿಯು ದೂರದಿಂದ ಅದನ್ನು ನೋಡಿ ಹೇಳಿತು;
ಬೇಡೆಂದರೆ ಬಿಡದೇ ಹಾಡಿದ ಮಾವನಿಗೆ |
ಬೀಸುವ ಕಲ್ಲಿನ ಸರವಾಯಿತು ಕೊರಳೊಳಗೆ ||
“ನೀನೂ ಹಾಗೆಯೇ ಹೇಳಿದ ಮಾತು ಕೇಳದೆ ಹೀಗಾದೆ” ಎನ್ನಲು ಚಕ್ರಧರನು “ಹೌದು ಹೌದು” ಕೇಳಿಲ್ಲವೇ?
ತನಗುಂ ಮತಿಯಿಲ್ಲದೆ । ಮಿತ್ರನ ನುಡಿಕೇಳದೆ ॥ 
ನಡೆದರೆ ಮರಣನೆ ಫಲ। ಮಂಥರಗಾಹಂತೆ ||೨೭||
ಸುವರ್ಣಸಿದ್ಧಿಯು ಕೇಳಿದನು; “ಅದೆಂತು?” ಚಕ್ರಧರನು ಹೇಳಿದನು:-
*****
ಮಂಥರನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...