Home / ಲೇಖನ / ಪತ್ರ / ಪೂರ‍್ಣಿಮ – ೪

ಪೂರ‍್ಣಿಮ – ೪

ಒಲುವಿನ ಚಿಲುಮೆ,

ನಿನ್ನ ಪತ್ರ ಬಂದು ತಲುಪಿತು. “ನೀವಾದರೂ ರಸವತ್ತಾದ ಪತ್ರ ಬರೆದು ನನ್ನ ಮನಸ್ಸನ್ನು ಶಾಂತಪಡಿಸಿರಿ.” ಎಂದು ಕೇಳಿಕೊಂಡಿರುವಿ. ನೀನಿಲ್ಲದ ನನ್ನ ಜೀವನದಲ್ಲಿ ರಸ ಒಸರುವುದೆಂತು? ಪತ್ರಗಳು ರಸವತ್ತಾಗ ಬಲ್ಲವೆಂತು? ದುಂಬಿ ಝೇಂಕರಿಸುವುದು ಪುಷ್ಪದ ಬಂಡಿನವಾಸನೆ ಮೂಗಿಗೇರಿದಾಗಲಲ್ಲವೆ? ಏಕಾಕಿ ಜೀವನದಲ್ಲಿರುವ ಈ ನಿನ್ನ ದುಂಬಿಗೆ ಈಗ ನೆಮ್ಮದಿಯನ್ನು ಕೊಡುವುದು ಗತ ಜೀವನದ ನೆನಹು. ಈ ನೆನಹಿನಲ್ಲೇ ಸ್ವರ್ಗ ನರಕಗಳನ್ನು ಕಾಣುತ್ತಿರುವ ನಾನು, ನೆನಹಿನ ತೆರೆಯ ಮೇಲೆ ಏನು ಬಿಂಬಿಸುವುದೋ ಅದನ್ನು ವಂಚನೆಯಿಲ್ಲದೆ ಬರೆಯುವೆನು.

ತಾಪತ್ರಯಗಳ ವರದಿಯನ್ನು, ಈ ನಿನ್ನ ಪತ್ರದಲ್ಲಿ ಬೇಕೆಂತಲೇ ಕಡಮೆ ಮಾಡಿರುವಿ. ಆದರೂ ಒಂದು ಮಾತಿನಲ್ಲೇ ಹೇಳಬೇಕಾದದ್ದೆಲ್ಲವನ್ನು ಹೇಳಿ ಮುಗಿಸಿರುವಿ. “ಹೇಗೋ ತೇಲಲಾರದ ದೋಣಿಯನ್ನು ಬಲವಾದ ಹುಟ್ಟಿನಿಂದ, ತೇಲಿಸುತ್ತ ತಳ್ಳುತ್ತಿರುವೆನು. ಎಂತು ದಡ ಮುಟ್ಟುವುದೋ ಈಗಲೇ ಹೇಳಲಾರೆ.” ದೋಣಿ ಮುಳುಗುವುದೆಂಬ ನಿರಾಶೆಯೂ ಇಲ್ಲ. ದಡಮುಟ್ಟುವುದೆಂಬ ನಂಬಿಕೆಯೂ ಇಲ್ಲ. ಇವೆರಡರ ಮಧ್ಯದಲ್ಲಿ ನೀನು, ನಿನ್ನ ದೋಣಿ, ಅದರ ಯಾನ ಏನಾಗಿರುವುದೆಂಬದನ್ನು ನಾನು ಚಿತ್ರಿಸಿಕೊಳ್ಳಲಾರೆನೆ? ಚಿತ್ರಿಸಿಕೊಂಡಿರುವೆನು, ಆದರೇನು? ಆ ದೋಣಿಗೆ ನಾನು ಕಾಲಿಟ್ಟರೆ ಎಲ್ಲೂ ಇಲ್ಲದೆ ಬಿರುಗಾಳಿ, ಅಲೆ, ಅಬ್ಬರ, ಉಬ್ಬರಗಳೇ ಬಂದಡರುವುವಲ್ಲ? ಇಂತಹ ಈ ಸಂಸಾರ ನೌಕದ ಸ್ವಾರಸ್ಯದ
ರಹಸ್ಯವೇನೋ?

“ಸ್ವರ್ಗಕ್ಕೆ ನಾನು ಹೋದರೂ ಅಲ್ಲಿ ನಾನು ನನ್ನ ಹೆಂಡತಿಯನ್ನು ಸಂಧಿಸುವುದಾಗದಿದ್ದರೆ ಅದು ನನಗೆ ಸ್ವರ್ಗವೇ ಅಲ್ಲ. ಆ ಸ್ವರ್ಗವೆ ನನಗೆ ಬೇಡ” ಎಂದೊಬ್ಬ ಆಂಗ್ಲ ಸಾಹಿತಿ ಹೇಳಿರುವುದು ನನಗೆ ಗೊತ್ತಿಲ್ಲದಿಲ್ಲ. ಆದರೆ ಈ ಇಹಲೋಕದಲ್ಲಿರುವ ಇಂದು ನಾಳೆಯಲ್ಲೂ ನಿನ್ನೊಡನೆ ಇರುವ ಸೌಭಾಗ್ಯ ನನಗೆ ಇಲ್ಲವೆಂದ ಮೇಲೆ ಈ ಜೀವನವದೆಷ್ಟು ಸೌರಭ ಮಯವಾಗಿರಬೇಕು? ಈ ಪ್ರಶ್ನೆ, ಈ ಪರಿಸ್ಥಿತಿ ನನಗೊಬ್ಬನಿಗೇ ಅಲ್ಲ. ನಿನ್ನ ಪಾಲಿಗೂ ಇರುವುದೆಂದ ಮೇಲೆ, ನಮ್ಮಿಬ್ಬರ ದಾಂಪತ್ಯ ಜೀವನವು ನೀನಂದಂಗೆ ಇಲಾರದ ದೋಣಿಯನ್ನು ತೇಲಿಸಿದಂತೆಯೇ ಇರುವುದು.

ಎಂತಹ ಸೊಗಸಾದ, ಉಚಿತವಾದ ಉಪಮೆಗಳನ್ನು ಕೊಡುವುದನ್ನು ಕಲಿತುಕೊ೦ಡಿರುವಿ ಪೂರ‍್ಣಿ? ಇದನ್ನು ಶಾಲೆ ಕಲಿಸಿಲ್ಲ ನಿನಗೆ ಪುಸ್ತಕ ಹೇಳಿ ಕೊಟ್ಟಿಲ್ಲ. ನೀನು ಶಾಲೆಯಲ್ಲಿ ಕಲಿತುದು ಏನೆಂಬುದು ನೆನಗೆ ಗೊತ್ತಿಲ್ಲವೆ? ಚನ್ನಪ್ಪ ಮೇಷ್ಟರ ತ್ರೈರಾಶಿ, ಮದ್ದೂರಾಯ ಮಾಸ್ತರರ ಚದುರಗಣಿತ, ಸುಬ್ಬರಾಯರ ಘಜನೀಯಾತ್ರೆ. “ವನಿತೆ ಮಲಗಿಹಳೋ ಅಧೈರ್ಯದಿ ದೈವವನೆನವಳೋ” ಎಂಬ ನಳಚರಿತ್ರೆಯ ಪದ್ಯವನ್ನು ಮಧ್ಯ ರಾತ್ರಿ ಮೀರಿದರೂ ನೀನು ಉರುವು ಹಾಕುತ್ತಿದ್ದ ದೃಶ್ಯವನ್ನು ನಾನು ಮರೆತಿಲ್ಲ. ಗಂಟಲು ಗೀಚಿ ಹೋದರೂ ಬಿಡುತ್ತಿರಲಿಲ್ಲ. ಇಂತಹ ವಿದ್ಯಾ ವಿಶಾರದೆ, ಈಗ ಶಾರದೆಯ ಮರಿಯ೦ತೆ, ಅರ್ಥಗರ್ಭಿತವಾದ ಮಾತುಗಳನ್ನೂ ಮಸೆಯುತ್ತಿರುವಿ.

ಮರತೆಯೇನು? ಮದುವೆಯಾದ ಹೊಸದು, ಶಾಂತಿ ಪ್ರಸ್ತದ ಮಾತೇ ಇಲ್ಲ; ಆದರೂ ನಿಮ್ಮ ತಾಯಿ ತಂದೆ ನಿನ್ನನ್ನು ನನ್ನ ಮೇಲಿನ ವಿಶ್ವಾಸದಿಂದ ನಮ್ಮ ಮನೆಯಲ್ಲೇ ಬಿಟ್ಟು ಬಿಟ್ಟಿದ್ದರು. “ಪಾಪ ಸಾಧುವಾದ ಹಿಂದೆ ಬಂದರೆ ಒದೆಯುವುದಿಲ್ಲ, ಮುಂದೆ ಬಂದರೆ ಹಾಯುವುದಿಲ್ಲ” ವೆಂದು ನನ್ನ ಮಾವ ಅತ್ತೆಯರು ನಂಬಿದ್ದರು. ನಾನಾದರೂ ಈ ನಂಬಿಕೆಯನ್ನು ಬಹು ಕಷ್ಟದಿಂದ ಉಳಿಸಿಕೊಂಡೆನು ಅಲ್ಲವೆ? ಇದಕ್ಕೆ ಕಾರಣ ನನ್ನ ಸಾಧು ತನಕ್ಕಿಂತ ಅಪ್ಪನ ವ್ಯಾಘ್ರತನವೇ ಅಲ್ಲವೆ!

ನಿನ್ನ ಓದು ಮುಗಿದಿರಲಿಲ್ಲ. ಈ ಓದೇ ನಮ್ಮಿಬ್ಬರ ಮಧ್ಯೆಯ ಮೋಟುಗೋಡೆಯಾಗಿದ್ದಿತು. ದಾಟುವುದು ಕಷ್ಟವಿರಲಿಲ್ಲ. ದಾಟಬೇಕೆಂಬ ದಿಟ್ಟುತನ ಮಾತ್ರ ಬರಲಿಲ್ಲ. ನೀನು ಆಗಿನ ದಿನಗಳಲ್ಲಿ ಹೊರಲಾರದಷ್ಟು ಪುಸ್ತಕಗಳನ್ನು ಅಪ್ಪಿ ತಬ್ಬಿಕೊಂಡು ಕಾಲೇಜಿಗೆ ಹೋಗುತ್ತಿದ್ದಾಗ, ಅರ್ಧದಾರಿಗೆ ಅಡ್ಡವಾಗಿ ಬಂದು ಆ ಪುಸ್ತಕಗಳನ್ನು ಕಾಲೇಜಿನವರೆಗೆ ಹೊತ್ತು ತಂದು ಕೊಡಲೇ ಎಂದನ್ನಿಸುತ್ತಿತ್ತು. ಆದರೆ ದಾರಿಯಲ್ಲಿ ತಿರುಗಾಡುವವರ ಭಯ; ಮದುವೆಯಾದ ಹೆಂಡತಿಯನ್ನು ಮಾತಾಡಿಸಲು ದಾರಿಯವರ ದಯ ದಾಕ್ಷಿಣ್ಯಗೊಳಗಾಗಿದ್ದ ನನ್ನ ಅಂದಿನ ಸ್ಥಿತಿ, ಇಂದು ನೆನಸಿಕೊಂಡರೆ ನಗು ಬರುವುದಿಲ್ಲ; ನಾಚಿಕೆ ಬರುವುದು. ಹದಿನೈದು ವರುಷಗಳ ಹಿಂದಿನ ಮಾತು. ಮೈಸೂರು ಗಂಡ-ಹೆಂಡಿರ ಸ್ಟ್ರೀಟವಾಕಿಂಗ, ಟಾಕಿಂಗ, ಜೋಕಿಂಗದಲ್ಲಿ ಈಗಿನಷ್ಟು ಮುಂದುವರೆದಿದ್ದರೆ, ನಾನೂ ಸಹ ನಿನ್ನ ಜಡೆಯ ಕುಚ್ಚನ್ನು ನನ್ನ ತೋಳಸಂದಿನಲ್ಲಿ ಸುತ್ತಿಕೊಂಡು ಸುತ್ತಾಡಿ ಬರುತ್ತಿದ್ದೆ.

ಒಂದು ದಿನ; ಅಂದು ಶನಿವಾರ ಅಮ್ಮ ಅಪ್ಪ ಇಬ್ಬರೂ ದೊಡ್ಡ ಮನಸ್ಸು ಮಾಡಿದರು. ಸಂಜೆ ಕೋಟೆಯ ಆಂಜನೇಯನ ಗುಡಿಗೆ ನೀವಿಬ್ಬರೇ ಹೋಗಿರೆಂದು ಹೇಳಿಯೇಬಿಟ್ಟರು. ನೀನು, ಜೊತೆಗೆ ನಿಮ್ಮ ಅತ್ತೆಯನ್ನು ಕರೆಯುತ್ತಿದ್ದುದನ್ನು ನೋಡಿ ಕೆನ್ನೆಗೆ ಎರಡು ಬಿಗಿಯುವಷ್ಟು ಕೋಪ ಬ೦ದಿತ್ತು; ಬಿಗಿಯಲಿಲ್ಲ. ಏನು ಮಾಡಲಿ? ಇನ್ನೂಪೂರ್ಣ ಲೈಸೆನ್ಸ ಸಿಕ್ಕಿರಲಿಲ್ಲ. ಹೇಗೋ ನಾವಿಬ್ಬರೇ ಹೊರಬಿದ್ದೆವು. ಅಂದು ನೀನುಟ್ಟ ಮೇಘವರ್ಣದ ಸೀರೆ ನಿನಗೊಪ್ಪಿದ್ದಿತು. ದೇವಾಲಯವು ದೂರ, ದೂರವಾಗಲಿ, ಎಂದು ಹೆಜ್ಜೆಗಳ ಉದ್ದವನ್ನು ಕಡಿಮೆ ಮಾಡುತ್ತ ನಡೆದುಹೋದ ದಿನವದು. ಹೋದ ಗುರುತಿಗೆ ತೆಂಗಿನಕಾಯ ಪ್ರಸಾದ ಮನೆಗೆ ತೆಗೆದು ಕೊಂಡು ಹೋಗಬೇಕಾಗಿಲ್ಲದಿದ್ದರೆ ದೇವಾಲಯದ ಮುಂದೆಯೇ ಹಾಯುತ್ತಿರಲಿಲ್ಲ ಅಲ್ಲವೇ ಪೂರ‍್ಣಿ! ಹೇಗೋ ದೇವಾಲಯವನ್ನು ಪ್ರವೇಶಿಸಿ ತೆಂಗಿನ ಹೋಳು ಮಾಡಿ, ತೀರ್ಥ ತೆಗೆದುಕೊಳ್ಳುವುದೇ ಅವಸರ; ದೇವರಿಗೆ ಕೈ ಮುಗಿಯದೆ ಪಕ್ಕದ ಪಾರ್ಕಿಗೆ ಬಂದು ಕುಳಿತಾಗ, ಅಪ್ಪನೆಲ್ಲಿ ಬಂದು ಬಿಡುವನೋ ಎಂಬ ಅಳುಕು ಇದ್ದರೂ ಮಾತಾಡುವುದೆಲ್ಲವನ್ನೂ ಮಾತನಾಡಿ ಮುಗಿಸಿದೆವು ನಿಜವೆ? ಅಂದಿನ ನಾಸ್ತಿಕತನ ದೇವರಲ್ಲಿ ಇದ್ದ ಅಸಡ್ಡೆ ಇಂದು ನಿನಗೆ ದೇವರಲ್ಲಿ ಅದೂ ಶ್ರೀ ರಾಘವೇಂದ್ರರಾಯರಲ್ಲಿ ಇರುವ ನಿಕಟನಂಬಿಕೆ ಇವುಗಳನ್ನು ಹೋಲಿಸಿದರೆ ಎಲ್ಲಿಯ ಆ ಪೂರ‍್ಣಿಮಾ, ಎಲ್ಲಿಯ ಈ ಪೂರ‍್ಣಿಮಾ? ಮೂವತ್ತು ವರುಷ ತುಂಬುವುದರೊಳಗಾಗಿ ಬಡತನದ ಬವಣೆಯನ್ನು ಬದಿಗೊತ್ತಿ, ನನ್ನ ಬಡ ಪ್ರೇಮವನ್ನು ಎದೆಗೊತ್ತಿಕೊಂಡು, ಲೀಲಾ, ಶಂಕರ, ರಾಘವರನ್ನು ನನಗೆ ಕಾಣಿಕೆಯಾಗಿ ಕೊಟ್ಟೆ. ಈ ಉಪಕಾರವನ್ನು ಕೃತಜ್ಞತೆಯ ಸಹವಾಸದಿಂದ ತೀರಿಸಬೇಕೆಂದು ನನ್ನ ಸರ್ವಶ್ರಮದಿಂದ ಶ್ರಮಿಸುತ್ತಿರುವಾಗಲೇ ಅಗಲಿಕೆಗೆ ಆರಂಭವಾಯಿತು. ದಾರಿದ್ರ್ಯವು ನಮ್ಮಒಡನಾಡಿಯಾಗಿಲ್ಲದಿದ್ದರೆ ಈ ಅಗಲಿಕೆಯು ಅಸಂಭವವೆಂದು ನನಗನ್ನಿಸಿದಾಗ ಮಾತ್ರ ಬಡತನವನ್ನು ಬಾಯಿಗೆ ಬಂದಂತೆ ಶಪಿಸುವೆನು. ಆದರೆ ಅದೇ ಬಡತನದ ಬೇಗೆ ನನ್ನ ಕಣ್ಣರಳಿಸಿ, ನನ್ನಂತಹ ಸಾವಿರಗಟ್ಟಲೆ ಸೋದರರ ಗುಡಿಸಲುಗಳತ್ತ ಅದು ನನ್ನನ್ನು ನೂಕಿದಾಗ, ಆಗ ನನಗೆ ಉಕ್ಕಿಬರುವ ಸ್ಫೂರ್ತಿಯನ್ನು ಅನುಭವಿಸಿದಾಗ, ಬಡತನವೇ ಇರಲೆಂದು ಆಶಿಸುವೆನು. ನೀನಿಲ್ಲದ ಸಿರಿತನವು ನನಗೆ ಬೇಡವೆನ್ನುವೆನೇ ಹೊರತು ನೀನಿರುವ ಬಡತನವು ಬೇಕೆಂದರೂ ನೀನಿಲ್ಲದ ಬಡತನವೇ ನನಗೆ ದೊರೆಯುತ್ತಿರುವುದಿಲ್ಲ! ಇದು ಯಾರ ಪ್ರಾರಬ್ಧ?

ಮೈ-ಮನಕ್ಕೊಪ್ಪಿದ ವೃತ್ತಿಯೇನೂ ದೊರಕಿದಂತಾಗಿದೆ. ಆದರೆ ಮೈ ಮನವನ್ನು ಅಪ್ಪಿದ ಮಡದಿಯನ್ನು ದೂರವಿಡಿಸಿದೆ. ಈ ನಮ್ಮ ವಿರಹ ವಿಧಿಗೆ ವಿಲಾಸವಾಗಿದ್ದರೆ ಅವನೆದುರಿಗೆ ಗೊಣಗುಟ್ಟಲು ನಾವೆಷ್ಟರವರು?

ಇಂದೊಬ್ಬ ನನ್ನ ಮಿತ್ರರು ನೀವೆಷ್ಟುದಿನ ಹೀಗೆಯೇ ಅಧಿಕವಾಗಿ ನಿಮ್ಮ ಸಂಸಾರದಿಂದ ದೂರಿರುವಿರಿ ಎಂದು ನನ್ನನ್ನು ಕೇಳಿದರು. ಉತ್ತರವನ್ನು ಏನೆಂದು ಹೇಳಲಿ! ಆದರೂ ಅವರ ಬಾಯಿಂದ ಹೊರಬಿದ್ದಾಗ “ಅನಿಶ್ಚಿತವಾಗಿ” ಎನ್ನುವ ಮಾತು ನನ್ನನ್ನು ಅಧೀರಗೊಳಿಸದಿಲ್ಲ. ಇಲ್ಲ. ಎಂದಿಗೂ ಹೀಗೆಯೇ ಇರುವುದಕ್ಕಾಗುವುದೆ ಎಂದು ನಾನು ಗೊಣಗಿ ಕೊಂಡು ಉತ್ತರವನ್ನು ಕೊಟ್ಟೆನು. ಈ ಉತ್ತರದಿಂದ ಅವರಿಗೆ ಯಾವ ಸಮಾಧಾನವೂ ಆಗಲಿಲ್ಲ. ಅವರಿಗೇನು ಗೊತ್ತು ನನ್ನ ಜೀವನದ ಈ ದೊಡ್ಡಾಟ?

ಲೀಲಾ ದಿನಕ್ಕೆಷ್ಟು ಅಂಗುಲ ಬೆಳೆಯುತ್ತಿರುವಳು? ಈಗ ಉದಯ ಶಂಕರ ಮುಂಜಾವಿನಿಂದ, ಸಂಜೆಯವರೆಗೆ ಎಷ್ಟು ತಾಯಿಯರ ದೂರನ್ನು ತರುತ್ತಿರುವನು? ಮುದ್ದು ರಾಘವೇಂದ್ರ ನನ್ನ ಫೋಟೋದ ಕಡೆಗೆ ದಿನಕೆಷ್ಟು ಬಾರಿ ಕೈ ತೋರಿಸಿ ತನ್ನ ಅಣ್ಣನೊಡನೆ ಮಾತನಾಡಲು ಸೊಂಟದಿಂದ ಕುಸಿದುಬೀಳುವನು? ಇವೆಲ್ಲವನ್ನೂ ಪತ್ರದಲ್ಲಿ ತಿಳಿಸಬಾರದೆ? ನನಗೆ ನಾನೇ ಚಿತ್ರಿಸಿಕೊಳ್ಳಬೇಕೆ?

ನೀವು ಎಂದು ಬರುವಿರಿ ಎಂದು ಪ್ರತಿಯೊಂದು ಪತ್ರದಲ್ಲಿ ಬರೆಯುತ್ತಿರುವಿ? ಇದಕ್ಕೆ ಮಾತ್ರ ಉತ್ತರವನ್ನು ಬರೆಯುವುದು ಕಷ್ಟವಾಗುವುದು. ಒಂದು ಸಾರಿ ಬಂದು ಹಿಂದುರುಗಿದರೆ ಐವತ್ತು ರೂಪಾಯಿಗಳ ವೆಚ್ಚವಾಗುವುದು, ನನ್ನ ತಿಂಗಳ ಸಂಪಾದನೆಯಲ್ಲಿ ಈ ಐವತ್ತು ರೂಪಾಯಿ ಒಂದು ಸಣ್ಣ ಭಾಗವೇನಲ್ಲ. ಇದರ ಲೆಕ್ಕವೇ ನನ್ನ ಕಾಲಿನ ಉತ್ಸಾಹವನ್ನು ಅಡಗಿಸುತ್ತಿದೆ. ಮನೋವೇಗವನ್ನು ತಡೆಹಿಡಿಯುತ್ತಿದೆ. ಸ೦ಯಮ ನಿಗ್ರಹಗಳ ಮಾತು ನಲವತ್ತರ ಅಂಚಿನಲ್ಲಿರುವ ನನಗೇ ಇಷ್ಟು ಕಷ್ಟವೆನಿಸಿದರೆ ಹತ್ತು ವರುಷ ಚಿಕ್ಕವಳಾದ ನಿನಗೆ ನಾನು ಕೊಡುತ್ತಿರುವ ಶಿಕ್ಷೆಯ ಉಗ್ರತೆಯನ್ನು ನಾನು ಅರ್ಥ ಮಾಡಿಕೊಂಡಿರುವೆನು. ಅರ್ಥ ಮಾಡಿಕೊಂಡು ಮಾಡುವುದೇನು? ಇರಲಿ ಮತ್ತೆ ಬರೆಯುವೆನು.

ಇತಿ ನಿನ್ನ ಪತಿ
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...