
೧
ನಸುಕಿನೆಸಕವ ನೋಡಲರಿಯದೆ
ಕುಸಿದು ಕುಗ್ಗುತ್ತಿರಲು ವಸುಧೆಯು
ನಸು ನಗುತ ಹೊಸ ಬೆಳಕ ಬೆಳಗಿಸಿದಂಧ ಹೊಸ ಹೊತ್ತೇ!
೨
ವಿಷದ ಬೇವದು ವಿಶ್ವದೊಳು ವ್ಯಾ-
ಪಿಸಿರೆ ಅಮೃತದ ಕಿರಣಗಳ ಪಸ-
ರಿಸುತ ಬೆಲ್ಲದ ಭೂಮಿಯನು ಮಾಡಿರುವ ತಿ೦ಗಳನೇ!
೩
ಸಾಕು ಸಾಕೀ ಪಾರತಂತ್ರ್ಯವು
ಬೇಕು ವರ ಸ್ವಾತಂತ್ರ್ಯವೆಂಬೀ
ಭೀಕರದ ಗರ್ಜನೆಯ ಗೈದಿಹ ಭರತ ಕೇಸರಿಯೇ!
೪
ನಾಕದಾ ಸೌಂದಯ್ಯವನ್ನೀ
ಲೋಕದೊಳು ಸ್ಥಿರವಾಗಿ ಸ್ಥಾಪಿಸಿ
ಲೋಕಮಾನ್ಯನೆ ಎಂದು ಹೆಸರಾಗಿರುವ ಬಲವಂತಾ!
೫
ಮೇರೆಯಿಲ್ಲದ ಬುದ್ಧಿಯಲಿ ಗೀ-
ತಾ ರಹಸ್ಯವನರಿತು ಜನರಿಗೆ
ಸಾರಿ ಸಾರಿದೆ ಪಾರತಂತ್ರ್ಯವು ನರಕಸಮವೆಂದು!
೬
ಶಾರದಾಂಬೆಯ ಸರಸ ಹೃದಯದ
ಸಾರವನು ಸಲೆ ತಿಳಿದುಳಿದು ನೀ
ಭಾರತಾಂಬೆಯ ಭಾಗ್ಯತಿಲಕನೆ ಆದೆ ಲೋಕದೊಳು!
*****

















