Home / ಕವನ / ಕವಿತೆ / ಗಾಂಧೀಸ್ತವ

ಗಾಂಧೀಸ್ತವ

ನೆನೆವೆನೀ ದಿನ ಪುಣ್ಯಜಾತನ ನಮ್ಮ ನಾಡವಿಧಾತನ
ಜನಪದ ಸ್ವಾತಂತ್ರ್ಯದಾತನ ಸಕಲಹೃದಯೋಪೇತನ
ನೆನೆಯುತಚ್ಚರಿಗೊಳುವೆ ಮಹಿಮನ ದಿವ್ಯಮಂಗಳ ಚರಿತೆಗೆ
ಕೊನೆಯ ಕೇಡಿಗೆ ದುಗುಡಗೊಳುವೆನು ರಿಕ್ತವಾದೀ ಜನತೆಗೆ.
ನಡಸುವೊಲೆ ನಡೆವಂಥ ಕುರಿಗಳೆ ನೀವು, ಭಾರತಪುತ್ರರೆ?
ಪಡೆದುದನು ಪಡುವಂಥ ದುರ್ಬಲ ದೈವದೇಯ ನಿರೀಹರೇ?
ನಡೆಯಿರೀ ಬಳಿ, ನೋಡಿಕೊಳ್ಳಿರಿ ಪಡಿನೆಳಲ ನನ್ನಿರವೊಳು
ಬಿಡಿರಿ ದೈನ್ಯವನೆಂದು ಸಾರಿದ ಈತನಲ್ಲವೆ ತೀರ್ಥನು!
ಎನಿತು ತಾರೆಗಳಿರಲಿ ಇರುಳೀ ಚಂದ್ರನಿಂ ಜ್ಯೋತಿಷ್ಮತಿ
ಅನಿತೆ ತಮವಿಡಿದೆಮ್ಮ ನೆಲವೀ ಗಾಂಧಿಯಿಂ ಜ್ಯೋತಿಷ್ಮತಿ
ಮನಕೆ ನಿಲುಕದ ದಿವ್ಯದೀಪ್ತಿಯ ಸೊಂಡು ಮೈಯೊಳು ಪಳಗಿಸಿ
ತನಿವೆಳಗ ನಮ್ಮೆಡೆಗೆ ಚೆಲ್ಲಿದ ಸೌಮ್ಯನಿವನೆಮಗಿನಿಯನೈ.
ತನ್ನ ನಿಜದೊಳು ತಾನು ನಡೆಯಲು ಲೋಕ ತನ್ನಂತಪ್ಪುದು
ಉನ್ನತಿಯ ಬಯಸುವೊಡೆ ವಿಷಯದ ನಂಟು ಸಾಧಕಗೊಪ್ಪದು
ಬನ್ನಗಳ ಬೆಲೆಯಿಂದಲಾತ್ಮದ ಸಂಪದವ ವಿಧಿಯಳೆವನು
ಎನ್ನುವೀ ಸಾಮಾನ್ಯನೀತಿಯಿನಾದನಿವನಸಮಾನನು.
ತಾಳ್ಮೆಯಿಂ ಕ್ರೌರ್ಯವನು ಶಾಂತಿಯಿಂ ಕೋಪವನು
ಸತ್ಯದಿಂದನೃತವನು ಗೆಲ್ಲೆ ಬಯಸಿ
ಜಾಲ್ಮತೆಗೆ ಜಾಲ್ಮತೆಯನೊಡ್ಡಿ ಸೆಣಸುವ ರೂಢ
ರಾಜನೀತಿಯನೊಡೆದನೀ ಸಾಹಸಿ
ನಲ್ಮೆಗುರಿಯನು ಮುಟ್ಟೆ ಪೊಲ್ಲಮೆಯ ಬಳಿ ಸಲ್ಲ
ಭಾವದಂದದಿ ಬದುಕು, ಬೇರೆಯಲ್ಲ
ಮೇಲ್ಮೆಯನು ಸಾಧಿಪೊಡೆ ನೇರವಿರಲೆಮ್ಮ ನಡೆ
ಎಂಬಿವನ ಶಿವಛಲವನಾವ ಬಲ್ಲ?
ಕೇಡಿಗೆ ಕೇಡೆಣಿಸುವ ಬಗೆ ದೇವಗು ತಪ್ಪದೆನೆ
ಹಾಡುವೆವೆಂಟವತಾರದ ಗೋವಿಂದನ ಭವವ
ಈಡಾಗದೆ ಈತೆರ ಖಲಶಾಪಕೆ ಮಾತವಸಿ
ನೀಡಿದನಭಯವ ಲೋಕಕೆ-ಈತನಿಗಾವನೆಣೆ?
ಹೊಗಳಲೆ ಹರಿಜನಶಾಪವಿಮೋಚನ ಕಾರ್ಯವ
ಹೊಗಳಲೆ ನಾಡಿನ ನೈಚ್ಯವನಳಿಸಿದ ಕಾರ್ಯವ
ಹೊಗಳಲೆ ನರಪಶು ಮಾನವನೆನಿಸಿದ ಕಾರ್ಯವ?
ಹೊಗಳಿಕೆಗೂ ಮಿಗಿಲೀತನ ಕಲ್ಯಾಣಕೃತಿ.
ಹದಗೆಡುವೊಲು ನರಲೋಕದೊಳಾಸುರಶಕ್ತಿಯ ತುಂಬಿ
ಅದತೂಗಲು ದುರ್ಬಲಶಿವಸದ್‌ಬಲನೊಬ್ಬನ ತಂದು
ಒದಗುತ್ತಿರಲೀ ತೂಕಕೆ ಶಿವಾಶಿವದ ಸಮಭಾರ
ವಿಧಿಯೀತನನೊಯ್ದನಲಾ ಏನೀ ವಿಷಮವಿಲಾಸ!
ತಕ್ಕುದೆ ಉಳಿಯುವುದೆನ್ನುವ ನಿಯಮವ
ಪಾಶವಲೋಕದೊಳನ್ವಯಿಸಿ
ತಕ್ಕವನೆನಿಸದ ಮಾನವಶಿಶುವನು
ಜೀವಶಕ್ತಿ ಹೊರತಂದಂತೆ
ಉಕ್ಕಿನ ಯುಗದೊಳು ಯಾಂತ್ರಿಕ ಬಲವ-
ದ್ಧರ್ಮವ ಹಿಂಚಿಸಿ ಮುಂಬರಿಯೆ
ಸೊಕ್ಕಿದವರು ಬಲುನಕ್ಕು ಜರೆಯುವೀ
ಗಾಂಧೀಧರ್ಮವ ತಂದಿಹುದೋ?
೧೦
ಮಹಾತ್ಮನುದಿಸುವ ಮುನ್ನೀನಾಡಿನ ಬಾಳ್ವೆಯ ತೆರ ಬೇರೆ
ಇಹಯಾತ್ರೆಯನಿವ ಮುಗಿಸುತ ಮರಳಲು ಇದರೀತೆರ ಬೇರೆ
ಮಹಾನುಭಾವನ ಸಮೃದ್ಧರುಚಿಯೀ ಜೀವನರಸ ಬೆರೆತು
ಮಹಾಂತವಹುದೀ ಭಾರತಜೀವನ ಸೌಹೃದರಸರುಚಿರ.
೧೧
ಈತೆರವೀ ದಿನ ಸಂತನ ನೆನೆಯುತ
ನುತಿಸುತ ಹರಕೆಯನಾಡುತ್ತ
ಮಾತನು ಹೃದಯದ ತುಡಿತಕೆ ನಡೆಸುತ
ಆತಗೆ ಮಣಿಯುತ್ತಿದೆ ಚಿತ್ತ.
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...