Home / ಕವನ / ಕವಿತೆ / ನೆನೆದೆ ನೆನೆಯುವೆ

ನೆನೆದೆ ನೆನೆಯುವೆ

ನೆನೆದೆ ನೆನೆಯುವೆ ನೆನೆದೆ ನೆನೆಯುವೆ
ಒಂದು ದಿನ ನೀನೆನ್ನನು-
ನಿನ್ನೆದೆಯ ಕದ ತಟ್ಟಿ ಪ್ರೇಮದ
ಭಿಕ್ಷೆ ಬೇಡಿದ ನನ್ನನು! || ಪಲ್ಲವಿ ||

ಇಂದು, ದಿಟ, ನೀನೆನ್ನನಳಲಿನ
ಕಮರಿಯಾಳಕೆ ತಳ್ಳುತ
ಗಟ್ಟಿ ನೆಲದೊಳೆ ನಿಂದೆನೆನ್ನುತ
ಭಾವಿಸಿಹೆ ಮುದಗೊಳ್ಳುತ!
ಅರಿಯೆಯೌ ನೀ! ಕಾಲ ಕೆಳಗಣ
ಭೂಮಿ ದುಗುಡದ ಭಾರದಿ
ಕುಸಿದು ಬೀಳುವುದೊಂದು ದಿನ್ನ ನೀ-
ನಂದು ಪಶ್ಚಾತ್ತಾಪದಿ-

ಅದ್ದಿ ದುಗುಡದೊಳಿರಿಸಿದಂತಿಹ
ಈ ಪ್ರಪಂಚದ ಬಾಳೊಳು
ಅಳಲ ಸವಿಯದೆ ನಡೆವೆನೆನ್ನುವ
ಮಂದನಮತಿಗಳ ಸಾಲೊಳು
ಕಣ್ಣುಗಳ ಮುಚ್ಚಿಂದು ನಡೆದಿಹೆ
ಸವಿಗನಸುಗಳ ಕಾಣುತ.
ಕನಸ ರಂಗಿನ ಗುಳ್ಳೆಯೊಡೆಯದೆ?
ಅಂದು ಕಂಬನಿ ಕಾರುತ-

ಓರೆನೋಟದ ಗಾಳವೆಸೆಯುತ
ಸನಿನುಡಿಯ ನೊಣ ಸಿಕ್ಕಿಸಿ
ಗಿರುಗಿರನೆ ತಿರುಗಿಸುತ ಮೀನೊಲು,
ಕೊರಲ ರಕುತನ ಕಕ್ಕಿಸಿ,
ಬೆಸ್ತನೊಲು, ದಯೆಯಿಂದ ಕೊಲ್ಲದೆ

ಮತ್ತೆ ಜೀವನಕೆಸೆಯುತ
ನಡೆದುದನು ನೀ, ನಿನಗಿದೇ ಸಂ-
ಭವಿಸೆ, ಕೈಕೈ ಹೊಸೆಯುತ-

ಎನಿತೆನಿತೊ ಎಂಥೆಂಥದೋ ಗಾ-
ಯಗಳ ಮರೆಸುವ ಮದ್ದನು
ತನ್ನೊಳಗೆ ಸಂಗ್ರಹಿಪನೆಂಬರು
ಕಾಲನೆನ್ನುವ ವೈದ್ಯನು!
ಆದರೆನ್ನೆದೆಗಾಯ ಮರೆಸಲ-
ಶಕ್ತನಾ ವೈದ್ಯರ ಗುರು!-
ಜಾರೆ ಕೂಸನು ತಿಪ್ಪೆಗೆಸೆವೊಲು
ಇಂದು ನೀನಿದ ಮರೆತರೂ-

ಇಂದು, ಸರಿ, ನೀ ಬಿಟ್ಟ ಚಿಂತೆಯು;
ಹಿಂದೆ ಸಹ ಸುಖ ಕಂಡೆನೆ?
ನಿನ್ನ ಪಡೆಯಲು ಬೆಂದುದಲ್ಲದೆ
ಸವಿಯನಾದರು ಉಂಡೆನೆ?
ಆದರೆನ್ನೊಲೆ ತಪಿಪೆ ನೀನೆಂ-
ದಿರಲು, ಜಾರಿದೆ ತೊರೆಯುತ!
ಮುಂದಕೆಂದಿಗು ಎಡವದಿರುವೆಯ!
ಅಂದು ಕೂಗುತ ಕರೆಯುತ-

ಅಳಲಿಗೆನ್ನನು ತಳ್ಳಿ ಸೊಗವನು
ಪಡೆವ ಭ್ರಾಂತಿಯ ಕಟ್ಟಿಡು!
ಮುಳ್ಳ ಬಿತ್ತುತ ಹೂವ ಬೆಳೆಯುವ
ಆಸೆಗಳ ನೀ ಬಿಡು ಬಿಡು!
ಬರಿಯ ಮುಳ್ಳನೆ ಕಂಡು, ಬಿತ್ತಿದ
ಬೀಜ ನೆನಪಿಗೆ ಬರುವೊಲು

ದುಃಖ ಕವಿಯಲು ಹಿಂದ ನೆನೆಯುತ
ಅತ್ತಕಟ ಎದೆಯೊಡೆವೊಲು-

ಪುರುಷನೊಬ್ಬನದೊಂದು ಹೆಣ್ಣನು
ಒಲಿದರವಳೂ ಅವನನು
ಒಲಿಯಲೇ ಬೇಕೆಂಬ ನಿಯಮವು
ಇಲ್ಲ, ದಿಟ, ಅದ ಬಲ್ಲೆನು!
ಆದರೇನಿದು ನೀನು ಗೈದುದು
ಒಲಿದವೊಲೆ ನೀ ನಟಿಸುತ
ಇದ್ದಕಿದ್ದೊಲೆ ತೊರೆದೆಯೆನ್ನನು;
ಇದನು ದುಗುಡದಿ, ಕೊರಗುತ-

ರೋಗ, ಬಡತನ, ಕಲಹ, ತಟವಟ,
ಗರ್ವಭಂಗವು, ಬೇಸರ,
ಒಲಿಯದಿಹ ಪತಿ, ಒಂದೆ ಇರುಳಿಗೆ
ನಶಿಪ ಕಾಮದ ಕಾತರ-
ಅಳಲ ವೇಷಗಳಿಂತು ವಿಧ ವಿಧ-
ವೆಂಬುದನು ನೀ ಮರೆಯುತ
ಜಾರಲೆತ್ನಿಸಿ ವಿಷಮವ್ಯೂಹದಿ
ಬಿದ್ದೆ ಬೀಳುವೆ! ಕೊರಗುತ-

ಬರುವ ಬಾಳೊಳು ನಿನಗೆ ಕೆಟ್ಟುದ
ಬಯಸುವುದು, ದಿಟ, ಸಲ್ಲದು.
ಬಲ್ಲೆ; ನಿನ್ನಯ ಕ್ರೌರ್ಯವೆನ್ನನು
ಅಂಥ ಮಟ್ಟಕೆ ಒಯ್ಯದು!
ಆದರೆನ್ನೆದೆಯೊಳಗಿನಾಳದಿ-
ನಾವುದೋ ದನಿ ಚಿಮ್ಮಿದೆ
ಎಡೆಬಿಡದೊಲುಕ್ಯುತ್ತ, ಸೇಡೊಳು
ಷಂಡ ರೋಷದಿ ಚೀರಿದೆ:

“ನೆನೆದೆ ನೆನೆಯುವೆ ನೆನೆದೆ ನೆನೆಯುವೆ
ಒಂದು ದಿನ ನೀನೆನ್ನನು-
ನಿನ್ನೆದೆಯ ಕದ ತಟ್ಟಿ ಪ್ರೇಮದ
ಭಿಕ್ಷೆ ಬೇಡಿದ ನನ್ನನು!”
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...