Home / ಕವನ / ಕವಿತೆ / ಬಾಳು

ಬಾಳು

ಆಸರಕಿ ಅಳದಿಟ್ಟು, ಬ್ಯಾಸರಕಿ ಬಳದಿಟ್ಟು
ಚಿಂತಿ ಕಾಲಾಗ ತುಳದಿಟ್ಟು | ಈ ದೇಹ
ಶೀಲ ಮಾಡಿಟ್ಟ ಜನದಾಗ ||

ಕನ್ನೇಯ ಬಡಿಬ್ಯಾಡ, ಕೈಬಳಿ ಒಡೆದಾವು
ಸಣ್ಣಂಚಿನ್ವಾಲೆ ಮುರಿದಾವು | ನನ ಮಗನ
ನನ್ನಾಣಿ ಮಡದಿ ಬಡಿಬ್ಯಾಡ ||

ಛೀ! ಏಳ ಛೀಮಾರಿ, ನಾಚಿಕಿಲ್ಲದ ನಾರಿ
ಗಂಡನ್ನ ಬೈವ ಗೈಯಾಳಿ | ಗಂಡಽಗ
ಆಂವ ಇಂವನೆಂದು ಕರದಾಳ ||

ನನ್ನ ಬೈದರು ಬೈಯ್ಯೊ, ಬೆನ್ನ ಬೈಯಲಿಬ್ಯಾಡ
ಬೆನ್ಹಿಂದ ಬೆಂಕಿ ಒಯ್ಬ್ಯಾಡ | ನನಗೊಬ್ಬ
ತಮ್ಮ ಇರವೂನ ಅರ್ಜೂನ ||

ಅಣ್ಣತಮ್ಮರ ಜಗಳ, ನಿನ್ನೆ ಮೊನ್ನ್ಯಾಗ್ಯಾವ
ಬಣ್ಣ ಬಾಗೀಲ ಎರಡಾಗಿ | ಕಡೆಮಗನ
ಸಣ್ಣವನಾಗಿ ಸರಕೋರೊ ||

ಊರ ಮ್ಯಾಗಲ ಊರ, ದಾರಿಮ್ಯಾಗಲ ಮನೆಯ
ಬಾರದ್ಯಾಕ್ಹೋದ ನನ್ನಣ್ಣ | ನಿನ ಮಡದಿ
ಬ್ಯಾಡಂದಳೇನೊ ನನ ಮನೆಗೆ ||

ಸೆಗಣ್ಣಿ ಮಾತೇನ, ಸೆಗಣಿಯ ದಂಟೇನ
ಗಾಳೀಗೆ ಬಂದ ರವದೀಯ | ಮಾತೀಗೆ
ಮಾರಾಯ ಮನಸ ತೆಗೆದಾರ ||

ಹೊಂದಿಕಿಲ್ಲದ ಮಾತು, ಹೊಂದಿಸ್ಯಾಡಲಿಬ್ಯಾಡ
ಬಂಧಾನ ನಾನು ಬಡಲಾರೆ | ಕಣ್ಣೀರು
ಮುಂದಿರಲಿ ಅವರ ಶಿಸುವೀಗೆ ||

ಅಣ್ಣನ ಮಗಳಂತ, ಹಮ್ಮೀಲಿ ನಾ ತಂದೆ
ಉಣ್ಣಾಳ ಮುಸಕ ತಗಿಯಾಳ | ಅಣ್ಣಯ್ಯ
ಮನ್ನೂಣಿ ಹೇಳ ಮಗಳೀಗೆ ||

ಮನ್ನೂಣಿ ಹೇಳಾಕ, ಹೊನ್ನೆಷ್ಟು ಅಳದೆವ್ವ
ಪುಣ್ಣೇಕ ದಾರಿ ಎರದೀನೆ | ತಂಗೆವ್ವ
ಸೊನ್ನಿಲೆ ಮಗ್ಗ ಇರಹೇಳ ||

ಊರಮ್ಯಾಗ್ಹಾಸಿ, ಬೀಸುವ ಬಿರುಗಾಳಿ
ತೀರಾವ ದುಃಖ ತೋಡುದಕ | ಹಡದವ್ಗ
ಮಾರಿನೋಡಾಕ ಬರಹೇಳ ||

ಹೆಂತಾದು ಮಾಡಿದರು, ಸಿಂತರಿಸಿ ಬಿಡವೂರ
ಹೆಂತಾದ ನನ್ನ ಕೈಗೂಣ | ಶಿವಲಿಂಗ
ಬೆಂಕಿಯಂತವರು ಅರುವಿರಲಿ ||

ಅಲ್ಲದವರ ತಡವಿ, ಜಲ್ಲೆಂದ ನನ ಮನವ
ಕಲ್ಲಾಗ ಕಡ್ಲಿ ಒಡಿದ್ಹಾಂಗ | ನೆಗ್ಗೂಲ
ಮುಳ್ಳಾಗ ಹಾದಿ ತಗೆದ್ಹಾಂಗ ||

ಒಡಹುಟ್ಟಿದವರಿಗೆ, ಒಡಜಾಲಿ ಮುಳ್ಳಾದ
ಹಡದವ್ವಗೀದ ಹುಲಿಯಾದ | ನನ ತಮ್ಮ
ಮಡದಿಗೆ ಮಾಣಿಕ ಹರಳಾದ ||

ಹಡದವ್ವ ನೀ ನನ್ನ, ಹಡದೇನು ಸುಡಬೇಕ
ನಡುಬಟ್ಟಿಲೊಬ್ಬ ಇದಿರಂಡಿ | ಸೆಟಿಗವ್ವ
ಮನಬಲ್ಲ ಬರಿಯ ಬರಿದಾಳ ||

ಆಸೊತ್ರ ನನ ಮನೆಯು, ಬೇಸೊತ್ರ ನನ ಮನೆಯು
ಕೂಸು ಕಾಡಿದರು ನನ ಮನೆಯು | ತವರೂರು
ಏಸು ದಿನ ಇದ್ರ ನೆರೆಮನೆಯು ||

ಬೀಸುವ ಕಲ್ಲಿಗೆ, ಬಿಡಿಮುತು, ರ್ಯಾವಳ
ಬೇಸ್ಯಾಗಿ ಹೊಯ್ಯೊ ಹೊಳೆಗಾರ | ನನ ಮನೆಗೆ
ಬೀಸ ಬರತಾರೊ ಗೆಳತೇರು ||

ಹಾಡ್ಯಾಡಿ ಬೀಸೀನಿ, ಹವಳ ಬಣ್ಣದ ಗೋದಿ
ಬೀಸಾಕ ಹಿಡದೀನಿ ಬಿಳಿಜೋಳ | ಅಣ್ಣಯ್ಯ
ಚ್ಯಾಜಕ ಹಿಡದೀನಿ ನಿನ ಮಗಳ ||

ಏಸನೀ ಬೀಸಿದರ, ಸಾಕಬೇಕೆನ್ನಳ
ಸಾಕ್ಷೇದ ತಾಯಿ ಸಿರಿಗೌರಿ | ಬೀಸೀದ್ಹಿಟ್ಟು
ಸಾಕುಸಾಕಾಗಿ ಬಳಗಕ ||

ಕಲ್ಲ ಕೊಟ್ಟವ್ವಗ, ಎಲ್ಲ ಬಾಗೇವಿರಲಿ
ಮಲ್ಲಿಗಿ ಮುಡಿವ ಮಗನಿರಲಿ | ಹೇಮ್ರಡ್ಡಿ
ಮಲ್ಲವ್ವನಂಥ ಸೊಸಿ ಇರಲಿ ||

ಆದಾವ ನಮಜೋಳ, ತೀರಾಽವ ನಮ ಹಾಡ
ಸಾಕ ಗೌರವ್ವ ಕೈಬೀಡ | ನನ ಮನಿಯ
ಗ್ಯಾನದತ್ತೆವ್ವ ಬೈದಾಳ ||

ಬೀಸೂವ ಕಲ್ಲಿಗೆ, ತೋಳಾಡಿ ತೊಡಿಯಾಡಿ
ನಾಗರ್ಹೆಡಿಯಂತ ನಡವಾಡಿ | ಗೌರವ್ವ
ನಿನ್ನಗೂಡಾಡಿ ದಣಿಯಾವ ||

ಆಗೂವ ಮುಕ್ಕಿಗೆ, ನಾಯಾರ ನೆನೆಯಾಲೆ
ರಾಜೇವ ಸಲುವ ಬಸವಣನ | ಹೇಣೂತಿ
ನೀಲವನ ಹಾಡಿ ನಿಲಸೇನ ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...