Home / ಕವನ / ಕವಿತೆ / ಕಿತ್ತೂರು

ಕಿತ್ತೂರು

ಕಾಡಾನೆ ಕಾಡಯ್ಯ, ಬ್ಯಾಡರ ಬೀಡಯ್ಯ
ನಾಡಾಗಿ ಮಾಡಿ ಮಲ್ಲಣ್ಣ, ಕಿತ್ತೂರ
ಗೂಡೀಗೆ ಗುಡಿಯ ನೇರಿಸಿದೊ  ೧
ಬಣಜೀಗ ಮಲ್ಲಣ್ಣ, ಜನದಾಗ ಕಣಿಯಾದ
ಕುಣಿಸಿ ಲಕ್ಕಸಮಿ ನಾಡಾಗ | ಕಿತ್ತೂರ
ಕಣಜಾತು ಮುತ್ತು ಮಾಣಿಕದ  ೨
ಕಿತ್ತೂರ ಕಡೆಯರಸು, ಮುತ್ತು ಮಾಣಿಕದೊಡೆಯ
ದತ್ತಕಽ ಮಗಽ ಮಲಸಜ್ಜೊ | ಸಮಸೂರ
ಸತ್ತ ಕಿತ್ತೂರ ಮುಟ್ಟುದಕೊ  ೩
ಹಾಲಗುಂಬಳ ಬಳ್ಳಿ, ಹಾದೀಗೆ ಹಬ್ಬ್ಯಾವ
ಹಾರೂರಿಗೆ ಬಂತೊ ದೌವಲತ್ತೊ | ಕಿತ್ತೂರ
ಮಲಸರ್ಜ್ಗ ಬಂತೊ ವನದೇಶೋ  ೪
ಸೊಗಲಂಬು ಊರಿಲ್ಲ, ಸಮುದರಕ ನೆಲೆಯಿಲ್ಲ
ಜ್ಯಾತ ಮುತ್ತಿಽಗೆ ಬೆಲೆಯಿಲ್ಲ | ಕಿತ್ತೂರ
ಮಲಸರ್ಜನಂಥ ದೊರೆಯಿಲ್ಲ  ೫
ರಂಗ ಕಿತ್ತೂರ ಮಾಲ, ಹೊಕ್ಕು ನೋಡುಣ ಬಾರ
ಮಾಲ ಮಾಲೆಲ್ಲ ಕನ್ನಡಿ | ಮಲಸರ್ಜ
ಮಾಲ ಕಟ್ಟಿಸಿ ಇರಲಿಲ್ಲೊ  ೬
ಕಿತ್ತೂರ ನೀಮಾಲ, ಮತ್ತ್ಯಾರ ಕಟ್ಟಿಸ್ಯಾರ
ಮಕ್ಕಳ ತಂದಿ ಮಲಸರ್ಜ | ನಿಮ್ಮಾಲ
ಹೊಕ್ಕ ನೋಡ್ಯಾರ ಹೊಲಿಯಾರ  ೭
ಕಿತ್ತೂರ ಮಲಸಜ್ಜ, ಕಿಚ್ಚ ಕಂಜವನಲ್ಲ
ದತ್ತಗೇಡೊಬ್ಬ ಮಗ ಹುಟ್ಟಿ | ಕಳೆದಾನೊ
ಹತ್ತ ತಲಿಗಂಡ ವತನಾವ  ೮
ಕಿತ್ತೂರ ಮಲಸಜ್ಜ, ಯಾರಿಗಂಜವನಲ್ಲ
ಪಚ್ಛೇದ ಕಣ್ಣ ತಿರವೂತ | ಮಲಸರ್ಜ
ತಕೊಂಡೆನೆಂದ ಹುದಲಿಽಯ  ೯
ಶಿವಲಿಂಗ ರುದ್ರನಿಗೆ, ಸಾವುಕೂಡಲೆ ಬಂತು
ಜೀವ ಕಸವೀಸಿ ಚೆನ್ನವ್ವಗೊ | ಹಾರೂರು
ಹಾವಾಗಿ ಮನೆಗೆ ವಿಷ ಬಿಟ್ಟೊ  ೧೦
ಮಡದೇರಿಬ್ಬರು, ಸಿಡಿದು ಕಡದಾಡಿ ಒಡಕ್ಹುಟ್ಟಿ
ತಡಮಾಡ್ದೆ ದತ್ತಕ ತಗೊಂಡು | ಚೆನ್ನಮ್ಮ
ಒಡತ್ಯಾಗಿ ನಾಡ ಆಳ್ಯಾಳೊ  ೧೧
ಹಾಲಿನಂಥ ಕಿತ್ತೂರ್ಗೆ, ಹನ್ನೆರಡು ಕೀಲಗಸಿ
ಸುತ್ತ ಸುತ್ತೆಲ್ಲ ಕಿರಿಜಿಡ್ಡಿ | ಈರಪನ
ಕಿತ್ತೂರಿಗೆ ತಂದು ಇಳುವ್ಯಾರೊ  ೧೨
ಕಂದವ್ನ ಹಡಿಲಿಲ್ಲ, ಕೈ ಬೀಸಿ ನಡೆಲಿಲ್ಲ
ಗಂಡನ ಪುಣ್ಯ ಉಣಲಿಲ್ಲ | ಈರವ್ವ
ರಂಡಿತನ ನಿನಗ ಮೂಲಾತೊ  ೧೩
ಕನ್ನೂರ ಮಲ್ಲಗ, ತನ್ನಿ ಬ್ಯಾನ್ಹತ್ತಲಿ
ಚೆನ್ನಮನ ರಾಜ್ಯ ನುಂಗಾಕೊ | ಥಾಕರೆಗ
ಗುನ್ನೆ ಮಾಡುದಕ ಪುಸಲಿಟ್ಟೊ  ೧೪
ಕಲ್ಲೂರ ಮಲ್ಲಗ, ಎಲ್ಲಾರು ಒಡೆಯಽಲಿ
ಗುಲ್ಲಾಗಂಟೇರು ಉಗಳಽಲಿ | ಥಾಕರೆಗೆ
ಸಲ್ಲಾ ಕೊಟ್ಟಾನೊ ಮುತ್ತಾಕೊ  ೧೫
ಧಾರ್ವಾಡ ವೆಂಕಾಟಿ, ದಾರೆಳಿಲೆ ಸಿರಕೊಯ್ದ
ಕಾರಭಾರಿಗಳು ಕಿವಿಗೊಟ್ಟು | ಕಿತ್ತೂರು
ಚೂರು ಚೂರಾತೊ ಕದನಾತೊ  ೧೬
ಕಿತ್ತೂರ ಚೆನ್ನಮ್ಮ, ಸುತ್ತೂರ ಒಡತ್ಯಾಗಿ
ಕತ್ತಿ ಕವಚಗಳ ಉಡವುಟ್ಟೊ | ಅಬ್ಬರದಿ
ಬತ್ತಲಗುದರೀಯ ಜಿಗದೇರೊ  ೧೭
ಗಂಡನ್ನ ಕಳಕೊಂಡು, ಬೆಂಡಾದ ಚೆನ್ನಮ್ಮ
ಗಂಡಾಗಿ ರಣಕ ಇಳಿದಾಳೊ | ನಾಡನ್ನ
ವುಂಡ ಬಂಡಾಯ ಹಿಂಡಾಕೊ  ೧೮
ಧಾರವಾಡದ ದಂಡು, ವಾರ್ಯಾಗ ಬರುತಿರಲು
ಏರೀಯ ಹತ್ತಿ ಸುರಿಸ್ಯಾರೊ | ಕಿತ್ತೂರ
ವೀರರೊಗೆದಾರೊ ಗುಂಡೀರೊ  ೧೯
ಕೆಂಪು ಮೋರೆಯ ದಂಡು, ಚಿಂಪಾಗಿ ಸಿಡದೀತೊ
ರಂಪರಂಪೆಂದು ಓಡೀತೊ ಅಮಟೂರ
ಬಾಳು ಗುಂಡಿಟ್ಟೊ ಥಾಕರೆಗೊ  ೨೦
ಮುಚ್ಚಿನ ಕಾಳಗಕ, ಮೆಚ್ಚ್ಯಾಳೊ ಚೆನ್ನಮ್ಮ
ಉಚ್ಚಿ ಬೆಳ್ಳಿಗಳ ಕೊಡತಾಳೊ | ಬಂಟರಿಗೆ
ಹೆಚ್ಚಿನ ರೋಜ ಬರೆಸ್ಯಾಳೊ  ೨೧
ಬೆಳಗಾವಿ ಚಿಪ್ಲಿನ್ನ, ಒಳ ಹಾದಿಲೆ ದಂಡೆತ್ತಿ
ಬೆಳಗಾಗಿ ದಂಡು ಬೀಡಿಟ್ಟೊ | ಕಿತ್ತೂರು
ತಳಮಳ ನೋಡೊ ಚಣದಾಗೊ  ೨೨
ಹೊನ್ನು ಹಣಗಳನೀವೆ, ಮನ್ನೂಣಿ ನಿನಗೀವೆ
ಬೇಡಿದ್ದ ನೀವೆ ಗೋವಿಂದ | ಮನಸಿಟ್ಟು
ಮದ್ದಿಽಗೆ ಎಣ್ಣೆ ನೀ ಬೆರಿಸೊ  ೨೩
ಲದ್ದೀಯ ಗೋವಿಂದ, ಕುದ್ದಲಗೇಡ್ಹಾರೂವ
ಮದ್ದಿಽಗೆ ಲದ್ದಿ ಬೆರಿಸ್ಯಾನೊ | ನಸಿಬಾವೊ
ಬಿದ್ದು ಕಿತ್ತೂರು ಹಾಳಾತೊ  ೨೪
ಕನ್ನೂರ ಕಲ್ಲೂರ, ಮಲ್ಲರದು ಪಿತೂರಿ
ರಾಗಿ ಕೂಡಿಸಿದ ಹುಸಿ ಮದ್ದೊ | ಕಿತ್ತೂರ
ನಸಿಬ ಹಾರ್ಯಾವೊ ಹುಸಿ ಗುಂಡೊ  ೨೫
ಕಿತ್ತೂರ ಕಿಲ್ಲೇಕ, ಉತ್ತಿ ಕರ್ಯಾರಿಲ್ಲ
ಉಕ್ಕಿಽನ ಗುಂಡು ಬಿಗಿವಾಗ | ಚೆನ್ನಮ್ನ
ಹಕ್ಕ್ಯಾಗಿ ಬಾಯ ಬಿಡತಾಳ  ೨೬
ಕಿತ್ತೂರ ಕಿಲ್ಲೇಕ, ಏನೇನ ಮಸಲತ್ತ
ಉಕ್ಕಿಽನ ಗುಂಡ ಉರಿಬಾಣ | ಚೆನ್ನಮ್ಮ
ಅರಮನಿಗೆ ಬಾಣ ಬಿಡತಾರೊ  ೨೭
ಜಮಖಂಡಿ ದೇಸಾಯಿ, ಯಮಕೀಲೆ ಕೂಡಿಽದ
ಸಮಯಕ ಚಿಪ್ಲಿನ್ನ ದಂಡಿಽಗೊ | ಕಿತ್ತೂರ
ಸಮನಾಗೈಸೀರಿ ಹೊತ್ತೊಯ್ದೊ  ೨೮
ಎಂಥಾದ ಕಿತ್ತೂರು, ಚಿಂತ್ಯಾಗ ಬೆಳಗಾತ
ಕೆಂಪು ಮೋತೆವರು ಒಲಿಹೂಡಿ | ಚೆನ್ನವ್ನ
ಚಿತ್ರದ ಮೂಲ ಮುರಿದಾರೊ  ೨೯
ಕಿತ್ತೂರ ಕಿಲ್ಲೇಕ, ಹತ್ತು ಕಾಲ್ನಚ್ಚಣಕಿ
ಕೊತ್ತ ಕೊತ್ತಲಕ ಕೈವಂಜು | ಹಿಡಕೊಂಡು
ಸುತ್ತ ಚೆನ್ನವ್ನ ಹುಡಿಕ್ಯಾರೊ  ೩೦
ಕಿತ್ತೂರ ಶರಸೂರಿ, ಮತ್ತೇನ ಹೇಳಲಿ
ಚಿತ್ತರದ ಗೊಂಬಿ ಅಳತಾವ | ಚೆನ್ನವಗ
ಹಿಂಡೆಮ್ಮಿ ಹಸವು ಎಳಿಗಾರ  ೩೧
ಕೆರಳಿಽದ ಕೇಸರಣಿ, ಕಿತ್ತೂರ ಬಿಟಿಗೊಟ್ಟು
ಬತ್ತಲಗುದರೀಯ ಜಿಗದೇರಿ | ಹೊಂಗಲದ
ಗಡಿಯಾಗ್ಬೈರೀಗೆ ಸೆರೆಯಾಗಿ  ೩೨
ಕಿತ್ತೂರ ಶರಸೂರಿ, ಮತ್ತೇನ ಹೇಳಽಲಿ
ಎತ್ತೊಂಟಿ ಮ್ಯಾಗ ಸದಲ್ಹೇರಿ | ಹೊಡೆದಾರೊ
ಮತ್ತ ಧಾರ್ವಾಡ ಕಿಲ್ಲೇಕೊ  ೩೩
ಅತ್ತೆ ಸೊಸ್ತೆರ ತಂದು, ಮತ್ತ ಹೊಂಗಲದಾಗ
ಸುತ್ತ ಕಾವಲಿಯೊ ಹಗಲಿರುಳೊ | ಜನದಾಗ
ಎತ್ತ ನೋಡಿದರೂ ತಳಮಳೊ  ೩೪
ಮುಕ್ಕಣ್ಣ ಗತಿಯೆಂದು, ಸಿಕ್ಕು ಸೆರೆಯಾಗಿದ್ದು
ಬಿಕ್ಕಿ ಅಳತಾಳೊ -ಈರವ್ಹೊ | ರಾಯಣ್ಣ
ಅಸ ನಿಮ್ಮುಪ್ಪು ಈ ರಾಯೊ  ೩೫
ಗೆದ್ದು ಕಿತ್ತೂರ ತಂದು, ಉದ್ದ ಬೀಳುವೆ ತಾಯಿ
ಕದ್ದ ಮಾತಲ್ಲ ನಿಮ್ಮಾಣಿ | ಇಲದಿರಕ
ಬಿದ್ದ ಹೋಗೂವೆ ರಣದಾಗೊ  ೩೬
ಸಂಗೊಳ್ಳಿ ರಾಯಣ್ಣ, ಹಂಗ್ಹರಿದ ದಳವಾಯಿ
ದಂಗೆ ಎಬ್ಬಿಸಿದ ನಾಡಾಗೊ | ಕಿತ್ತೂರ
ಕಂಗೆಟ್ಟ ಜನರು ಕೂಡ್ಯಾರೊ  ೩೭
ಸುದ್ದಿ ಹಬ್ಬಿತು ಸುತ್ತ, ಎದ್ದು ಕೂಡಿತು ಮಂದಿ
ಗದ್ದಲಕ ಅಂಜಿ ಸರಕಾರ | ಈರವ್ನ
ಕದ್ದಿಲ ಕೊಂದಾರೊ ವಿಷ ಕೊಟ್ಟೊ  ೩೮
ಬೆಳ್ಳಿ ಹರಿವಾಣದಾಗ, ಬಿಳಿ ಮುತ್ತು ಸುರಿದ್ಹಾಂಗ
ಚಂದ್ರಸಾಲಿಗೋಡಿ ಬಿರಿಯಾಲಿ | ಈರವ್ನ
ಕೊಂದವರ ವಂಶ ಹುರಿಯಾಲಿ  ೩೯
ಖದಾನ ಪುರದಾಗ ಹೋದಾನೊ ರಾಯಣ್ಣ
ಭೇದವಿಡಲಿಲ್ಲ ಮನದಾಗ | ಲಿಂಗೊಂಡ
ವಾದಿ ರಾಯಣ್ಣ ಮೋಸಾಗಿ  ೪೦
ನಂದಗಡ ಊರಾಗ, ಮಂದ್ಯಾಗ ರಾಯಣ್ಣ
ತಂದು ಶೂಲಕ ಹಾಕ್ಯಾರೊ | ಕಿತ್ತೂರ
ಗೊಂದಲ ಶೂರಗ ದುದಿಮರಣೊ  ೪೧
ಹೊಂಗಲದ ಮಟದಾಗ, ಲಿಂಗ ಪೂಜೆಯ ಮಾಡಿ
ಭಂಗಾಗುದೆಂದು ಎದೆಗುಂದಿ | ಚೆನ್ನವ್ವ
ಉಂಗರ್ವಜ್ಜಿಽರ ನುಂಗ್ಯಾಳೊ  ೪೨
*****
Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...