೧
ಮುಳ್ಳಗಳ್ಳಿ ಬಳಿಯೆ ನೀನು
ಕಳ್ಳಿಕರಿಯ ಹುಳದ ಕೊಲೆಗೆ
ಅಳಲಿ ಬಳಲಿ ಬಾಯಬಿಟ್ಟು
ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ
ಚಂದದಿಂಪು ಸಂದಿತೆಂದು ಸವೆಯುತಿರುವೆಯ
೨
ಕೋಟಗೀಟೆಯಂತೆ ಬೇಲಿ
ಕೂಟಕೆಲ್ಲ ನಿನ್ನ ನಡಿಸೆ
ಮಾಟವಾಗಿ ಮೆರೆದು ನಿಂದು
ಸೊಬಗಿನಿಂದ ಬೆಳೆದು ಬಂದ ದಿವಸ ಪೋಯಿತೆ
ಜವನ ಜಾತ್ರೆ ಜವದಿ ಬಂದು ಮೋಸವಾಯಿತೆ
೩
ಮುಳ್ಳಿನಿಂದ ಕೂಡಿಯಿರುವ
ಒಳ್ಳೆ ಹಣ್ಣಿನಿಂದ ಸಿಳ್ಳಿ-
ಮಿಳ್ಳಿ ಜಗವ ತಣಿಸಿ ಕುಣಿಸಿ
ಚಲುವಿನಿಂದ ಬೆಳೆಪ ಬಾಲರಮೃತವೆಲ್ಲಿದೆ
ತಿಳಿಯದಾಯ್ತು ತಿರೆಗೆ ಬೇರೆತರವದೆಲ್ಲಿದೆ
೪
ಹಕ್ಕಿ ಹರಿಣಿ ಹಾವುಗಳಿಗೆ
ತಕ್ಕುದಾದ ಇಕ್ಕೆಯನ್ನು
ಮಕ್ಕಳಂತೆ ಸಾಕಿ ಕೊಡಲು
“ನಾಡತಾಯಿ ಬೀಡು” ಎಂದು ಕೂಗಿ ಕಲೆತವೆ
ಕೇಡುಗಾಲ ಬರಲು ತಾವೆಯೋಡಿ ಹೋದವೆ
೫
ಹಲವು ಕಾಲ ಹಲವು ಬಗೆಯ
ಹೊಲವ ಬಳಸಿ ಮಲೆತುನಿಂತು
ಛಲದೆ ಬೆಳೆಯ ಜನರು ನಿನ್ನ
ಸವರಿ ಸವರಿ ಸೋತು ಸೋತು ಸರಿದು ನಿಂತರೈ
ಬವಣೆಯಿಂದ ಕೊಲುವ ಮದ್ದನಿತ್ತು ದಣಿದರೈ
೬
ರಕ್ತಬೀಜ ರಾತ್ರಿಚರನ
ರಕ್ತದಂತೆ ಬಿದ್ದ ಕಡೆಗೆ
ವ್ಯಕ್ತರೂಪದಿಂದಲೇಳೆ
ಮತಿಯು ಹರಿಯದಿರಲು ನರರು ಮೊರೆಯನಿಟ್ಟರೆ
ವ್ಯಥಿತವಾದ ದನಿಯನೆಲ್ಲ ದೇವ ಕೇಳ್ದನೆ
೭
ರೀತಿ ನೀತಿ ತಿಳಿದುನೋಡಿ
ಜಾತಿ ರತ್ನದಂತ ದೇವಿ
ಖ್ಯಾತಿಗೊಂಡು ನಡೆಯದಿರಲು
ಪೊಡವಿಯೊಡೆಯ ಸಿಟ್ಟಿನಿಂದೆ ಪಿಡುಗಬಿಟ್ಟನೆ
ಒಡನೆ ಹುಳದ ಗಡಣದಿಂದೆ ಕೊಲೆಯ ನಡಿಸಿತೆ
೮
ಸಿಟ್ಟಿಗೆದ್ದು ದೇವ ಕಷ್ಟ
ಕೊಟ್ಟನೆಂಬ ನಾಡ ನುಡಿಯ
ಮಟ್ಟಿಗಿಳಿಯದಿರುವ ಮಾತ
ಮನದೆ ತೂಗಿ ನೋಡೆ ದಯಾಮಯನು ಮಾಳ್ಪನೆ
ಜನಕತಂದೆ “ಅನುವ ತನುವ” ನೋಡದಿರುವನೆ
೯
ಸಾವಿರಾರು ವರುಷದಿಂದೆ
ಧರೆಯ ಬಳಸಿ ಮರೆದು ನಿಂದ
ಅರಸುತನದ “ಅರವು ಮರವು”
ಅರಿಯದಂತೆ ಕರಗಿ ಕರಗಿ ಮಾಯವಾಯಿತೆ
ಪಿರಿದೆನಿಪ್ಪ ಸಿರಿಯ ಮರವು ಸರಿದು ಹೋಯಿತೆ
೧೦
ತಾಯಿ ನಿನ್ನ ಬೇನೆಯೇನು
ಬಾಯಿ ಬರದೆ ಪೇಳುವುದಕೆ
ಕಾಯ್ವರಾರೊ ಕೊನೆಯ ಕಾಣೆ
ಯಾವದುಷ್ಟ ಪಿಡುಗು ಬಂದು ಕುಲವ ಕಡಿವುದೈ
ಕಾವನೆಲ್ಲಿ ಇರುವನಯ್ಯೊ ಕುಲವೆ ಕಳೆವುದೈ
೧೧
ಕರ್ಮಭೂಮಿಯಲ್ಲಿ ಬಂದು
ಕರ್ಮವನ್ನು ಮಾಡಿ ನಿಂದು
ಕರ್ಮದಿಂದ ಹುಟ್ಟು ಸಾವ
ತೊಟ್ಟು ಧರೆಗೆ ಬಂದು ಆಡಿಪಾಡಿ ಮಡಿವೆವೈ
ಬಿಟ್ಟು ಬಿಡದ ಕರ್ಮವನ್ನು ಕಟ್ಟಿ ನಡೆವೆವೈ
೧೨
ಬರದ ಕಾಲ ಬಂದು ಜನರ
ತರಿದು ತರಿದು ತೂರುತ್ತಿರು
ಹರಣವುಳಿಸಿ ಪೊರೆದ ತಾಯಿ
ಸಿರಿಯ ತೊರೆದು ಧರೆಯ ತೊರೆದು ಪೋಗುತಿರುವೆಯ
ಮರುಕದಿಂದ ಮನದೆ ನೊಂದು ಹರಣ ತೊರೆವೆಯ
೧೩
ಕಷ್ಟ ಕಾಲವೊದಗಿ ಬರಲು
ಇಷ್ಟರಾಪ್ತ ಮಿತ್ರರೆಲ್ಲ
ನಿಷ್ಟುರಾಗಿ ನಡೆವರಯ್ಯ
ಕಾಲ ಬರಲು ಕಾಲು ತಾನೆ ಕೊಲೆಗೆ ನಿಲುವುದೈ
ಗೆಳೆಯರೆಂಬ ಕೊಳಚೆಯೆಲ್ಲ ಕಳಚಿ ಬೀಳ್ವುದೈ
೧೪
ಪರಮಪುಣ್ಯ ಪರಮಪಾಪಿ
ಧರೆಯನಾಳ್ದ ನರಪರೆಲ್ಲ
ಹಿರಿದು ಕಿರಿದು ಪದವಿ ತೊರೆದು
ಕಾಲಗತಿಗೆ ಕಟ್ಟುಬಿದ್ದು ಮಾಯವಾದರೈ
ಕಾಲಬರಲು ಯಾರು ತಾನೆ ಜಗದೆ ಉಳಿವರೈ
೧೫
ಅಂಗವೆಲ್ಲ ರೋಗದಿಂದ
ವಿಂಗಡಾಗಿ ಕಳಚಿ ಬೀಳ್ವ
ಸಾಂಗವಾದ ಸಾವ ನೋಡೆ
ಒಡನೆ ದುಗುಡದಿಂದ ಕೂಡಿ ಒಡಲೆಯುರಿಯುದೈ
ಪೊಡವಿಯಾಣ್ಮನಡಿಯಕಂಡು ನುಡಿಯುತ್ತಿರುವುದೈ
೧೬
ನಿನ್ನ ದುಃಖವೆನ್ನತಾಗೆ
ಬನ್ನ ಬಡುವ ಮನವು ತಾನೆ
ಭಾವಗೀತೆಯಲ್ಲಿ ಮೊಳೆಯೆ
ಕಲಿಸದಿರ್ದ ಕವನ ತಾನೆ ಕಟ್ಟಿ ಬರುವುದೈ
ಕರುಳಿಗೆಲ್ಲ ತಿಳಿವ ತಾನೆ ತೊಳೆದು ನಿಲುವುದೈ
೧೭
ಜಗದ ಬಗೆಯ ಬಗೆದು ನೋಡಿ
ಬಗೆದ ದುಗುಡವೆಲ್ಲ ನುಂಗಿ
ಮಗುಳಿ ಮನವ ಬಿಗಿದು ಬಿಗಿದು
ಇಳೆಗೆ ತಂದು ತಿಳಿವನಿತ್ತ ದೊರೆಯ ಪಾಡುವ
ಕಳೆವಕಾಯ ಕಳಚಿಬೀಳೆ ಒಲಿದು ಪಾಡುವ
*****