ಜಾಣರಾಗಿರೋ ಜನರು ಜಾಣರಾಗಿರೋ
ವೋಟು ಬೇಟೆಯಾಟದಲ್ಲಿ ಜಾಣರಾಗಿರೋ ||ಪ||
ನಮ್ಮ ನಿಮ್ಮ ಮಧ್ಯದಲ್ಲಿ ಪಕ್ಷ ಪಾರ್ಟಿ ಭೇದ ಮಾಡಿ
ನಮಗೆ ಕುಡಿಸಿ ತಿನಿಸಿ ಟಗರು ಕಾಳಗವನು ಮಾಡಿಸುವರು
ನಾವು ನೀವು ಬಡಿದಾಡುತ್ತ ಕಚ್ಚಾಡುವ ಬೆಂಕಿ ಹಚ್ಚಿ
ತಾವು ಅದರ ಉರಿಗೆ ಮೈಯ ಕಾಯಿಸುತ್ತ ಕುಳಿತಿರುವರು ||೧||
ವೋಟುಗಳಿಗೆ ನೋಟು ಚೆಲ್ಲಿ ಸೀಟು ಪಡೆದು ಕುಳಿತುಕೊಂಡು
ತಾವು ಚೆಲ್ಲಿದಂಥ ನೋಟು ನೂರು ಪಟ್ಟು ಹಡೆಯುವರು
ಜಾತಿ ಜಾತಿ ಎತ್ತಿ ಕಟ್ಟಿ ಭೇದಗಳ ಗೋಡೆ ಕಟ್ಟಿ
ಜನರ ದಡ್ಡತನವ ಬಳಸಿ ಭಂಡವಾಳ ಮಾಡುವರು ||೨||
ಚುನಾವಣೆಯ ವ್ಯಾಪಾರವು ನಡೆದಿರುವುದು ಭರ್ತಿಯಾಗಿ
ಹಣವ ಉಗ್ಗಿ ಹಣವ ಬಳಿವ ದೊಡ್ಡ ಸುಲಿಗೆ ವ್ಯಾಪಾರವು
ಕುರಿಗಳನ್ನು ಬೋಳಿಸಲಿಕೆ ಜನಕೋಟಿಯ ದೋಚಲಿಕ್ಕೆ
ಪೈಪೋಟಿಯ ನಡೆದಿದೆ ಕಟುಕರ ನೆರೆ ಮೆರೆದಿದೆ ||೩||
ಕೈಯ ತೋರಿಸುವವರಾಯ್ತು ನೇಗಿಲ ಹೊತ್ತವರೆ ಆಯ್ತು
ಜನರ ಸುಲಿಗೆ ಮಾಡುವಂಥ ವೇಷ ಪರಿಗಳೇ
ವೋಟು ಪಡೆದು ಹೊಳೆದಾಟಿದ ಮೇಲೆ ಜನರ ಮಿಂಡರು
ವೋಟಿಗಾಗಿ ಬೇಡುವಾಗ ಪೂಜ್ಯರಂತೆ ಕಂಡರು ||೪||
ಇಂಥ ತೋಳ ಹದ್ದುಗಳಿಗೆ ತಗ್ಗಿ ಬಗ್ಗಿ ಒಪ್ಪಿಕೊಂಡು
ಅವರು ಕುಣಿಸಿದಂತೆ ಕುಣಿವ ಜನರೆ ಸ್ವಲ್ಪ ಯೋಚಿಸಿ
ಅವರಿಗಾಗಿ ನಿಮ್ಮ ನಿಮ್ಮ ನಡುವೆ ಭೇದ ಬೆಳೆಸಿಕೊಂಡು
ಕಚ್ಚಾಡುವ ಬಡಿದಾಡುವ ನಾಯ್ಗಳೇನು ಚಿಂತಿಸಿ ||೫||
೧೪-೧೦-೮೬
*****