ಯಾರಿಗೆ ಕೊಡಬೇಕು ಕನ್ಯೆ

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು ದಾಳಿಂಬರ ಬೀಜ; ಆಕೆಯನ್ನು ಯಾರು ಬೇಡವೆಂದಾರು? ಆಕೆಗಿದ್ದ ಮೂವರೂ ಸೋದರ ಮಾವಂದಿರು ಕೇಳುತ್ತಿದ್ದರು – ಆಕೆ ನನಗೆ ಬೇಕು, ನನಗೆ ಬೇಕು – ಎಂದು.

ಅಕ್ಕನಿಗೆ ಇದ್ದವಳು ಒಬ್ಬಳೇ ಮಗಳು. ಕೇಳುವವರು ಮೂವರು ತಮ್ಮಂದಿರು. ಯಾರಿಗೆ ಕೊಡಬೇಕು ?

ಎಲ್ಲರೂ ಒಳ್ಳೆಯವರೇ ಆಗಿದ್ದರು; ಚೆಲುವರೂ ಆಗಿದ್ದರು. ಒಬ್ಬನಿಗೆ ಕೊಟ್ಟರೆ ಇಬ್ಬರು ಸಿಟ್ಟಾಗುತ್ತಾರೆ. ಏನು ಮಾಡುವುದು ಯುಕ್ತಿ ?

ಮೂವರೂ ತಮ್ಮರನ್ನು ಕರೆದು ಅಕ್ಕನು, ತಲೆಗೆ ನೂರುನೂರು ರೂಪಾಯಿ ಕೊಟ್ಟಳು. “ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿರಿ. ಯಾರು ತೀವ್ರವಾಗಿ ಹೆಚ್ಚು ಗಳಿಸಿಕೊಂಡು ಬರುವಿರೋ ಅವರಿಗೆ ನನ್ನ ಮಗಳನ್ನು ಕೊಡುವೆನು” ಎಂದು ಹೇಳಿದಳು.

ಆ ಮಾತಿಗೆ ಮೂವರೂ ಒಪ್ಪಿ ದೇಶಾಂತರಕ್ಕೆ ನಡೆದರು. ಕೆಲವು ದಿನಗಳಲ್ಲಿ ಅವರು ಮೈಸೂರಿನಂಥ ಪಟ್ಟಣಕ್ಕೆ ಹೋದರು. ಊರತುಂಬ ಅಂಗಡಿಗಳು ! ಪ್ರತಿಯೊಂದು ಅಂಗಡಿಯಲ್ಲಿ ತರತರದ ಬದುಕು ! ನೋಡುತ್ತ ನೋಡುತ್ತ ಒಂದು ಅಂಗಡಿಯನ್ನು ಪ್ರವೇಶಿಸಿದರು. ಅಲ್ಲೊಂದು ಕನ್ನಡಿಯಿತ್ತು. ಅದರಲ್ಲಿ ನೋಡಿದರೆ ಜಗತ್ತೆಲ್ಲ ಕಣ್ಣಮುಂದೆ ಬರುತ್ತಿತ್ತು. ಹಿರಿಯಣ್ಣನು ತನ್ನ ಬಳಿಯಲ್ಲಿದ್ದ ನೂರು ರೂಪಾಯಿಕೊಟ್ಟು ಅದನ್ನು ಕೊಂಡುಕೊಂಡನು.

ಇನ್ನೊಂದು ಅಂಗಡಿಯಲ್ಲಿ ವಿಚಿತ್ರವಾದ ತೊಟ್ಟಿಲು ಕಂಡರು. ಅದರಲ್ಲಿ ಕುಳಿತು ಮನಸ್ಸು ಹರಿದಲ್ಲಿ ಹೋಗಲು ಬರುವಂತಿತ್ತು. ನಡುವಿನಣ್ಣನು ಅದನ್ನು ನೂರು ರೂಪಾಯಿಗಳಿಗೆ ಖರೀದಿಮಾಡಿದನು. ಮುಂದಿನ ಪೇಟೆಯಲ್ಲಿ ಗೊಂಬೆಗಳ ಅಂಗಡಿಯಿತ್ತು. ಅಲ್ಲಿ ಸತ್ತವರನ್ನು ಬದುಕಿಸುವ ಗೊಂಬೆಗಳಿದ್ದವು. ಅವುಗಳನ್ನು ಸಣ್ಣವನು ಕೊಂಡುಕೊಂಡನು. ಅಷ್ಟಾಗುವುದಕ್ಕೆ ಊಟದ ಹೊತ್ತಾಗಿತ್ತು. ಮೂವರೂ ಹಸಿದಿದ್ದರು. ಅಕ್ಕ ಕಟ್ಟಿದ ಬುತ್ತಿಯಂತೂ ಇತ್ತು. ಅದನ್ನು ತೆಗೆದುಕೊಂಡು ಊರಹೊರಗೆ ಹಳ್ಳದ ಕಡೆಗೆ ಊಟಕ್ಕೆಂದು ನಡೆದರು. ಹಳ್ಳದಲ್ಲಿ ಕೈಕಾಲು ತೊಳೆದುಕೊಂಡು ಬಂದು ಬುತ್ತಿ ಬಿಚ್ಚಿದರು. ಇನ್ನೇನು, ಊಟಕ್ಕೆ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ, ತಮ್ಮೂರ ಕಡೆಯ ಸಂಗತಿಯನ್ನು ತಿಳಿದುಕೊಳ್ಳಬೇಕೆಂದು ಕನ್ನಡಿಯಲ್ಲಿ ನೋಡಿದರು. ದುರ್ದೈವ ಎದುರಿಗೇ ಬಂದಂತಾಯ್ತು. ತಾವು ಮದುವೆಯಾಗಬೇಕೆಂದಿರುವ ಕನ್ಯೆ ತೀರಿಕೊಂಡಿತ್ತು. ಗೋರಿಮರಡಿಗೆ ಒಯ್ಯುವ ಸಿದ್ಧತೆ ನಡೆದಿತ್ತು. ಬಿಚ್ಚಿದ ಬುತ್ತಿ ಕಟ್ಟಿದರು. ಇನ್ನೆಲ್ಲಿಯ ಊಟವೆಂದು ಕೂಡಲೇ ತೊಟ್ಟಿಲಲ್ಲಿ ಕುಳಿತರು. ಹಾ೦ ಅನ್ನುವಷ್ಟರಲ್ಲಿ ಊರಿಗೆ ಬಂದು ತಲುಪಿದರು. ಸಣ್ಣ ತಮ್ಮನು ತನ್ನ ಬಳಿಯಲ್ಲಿರುವ ಗೊಂಬೆಯಿಂದ ಸತ್ತವಳನ್ನು ಎಬ್ಬಿಸಿದನು.

ಇನ್ನು ಹೇಳಿರಿ – ಅಕ್ಕನು ಯಾರಿಗೆ ಕೊಡಬೇಕು. ತನ್ನ ಮಗಳನ್ನು ?
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೫
Next post ವೋಟು ಬೇಟೆಯಾಟ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…