ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ
ಮುಖಗಳನ್ನು ಹುಡುಕುತ್ತಾ
ಬೆಕ್ಕಸ ಬೆರಗಾಗುತ್ತಾನೆ
ತನ್ನದೇ ಮುಖ ಕಂಡ ನಿರ್ಲಿಪ್ತ
ಆದರೂ ಹುಚ್ಚು ಪ್ರೇಮಿ!
ತಪ್ಪು – ಸರಿಗಳ ಲೆಕ್ಕ ಹಿಡಿದು
ತೂಗಲಾರದ ತಕ್ಕಡಿಗಳಿಗೆ
ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನೆಗಳಿಗೆ
ಎಲ್ಲಾ ಇದ್ದೂ ಏನೂ ಇಲ್ಲೆನುತ
ಮತ್ತೇನೂ ಬೇಡೆನುವ ನಿರಾಕರಣಕ್ಕೆ
ಹಿಮಾಲಯದೆತ್ತರಗಳಲಿ
ಉತ್ತರ ಹುಡುಕುವ ಹುಚ್ಚು
ಮುಖವೊಂದಕ್ಕೆ.
ಪ್ರಶ್ನೆಯೊಂದಕ್ಕೇ ನೂರು
ಉತ್ತರಗಳ ಸಮಜಾಯಿಷಿಯಲಿ
ಎಲ್ಲವೂ ಬೇಕು
ಎಲ್ಲವೂ ನಾನೇ ಎನುವ
ಪ್ರೀತಿಯಮಲಿಗೆ
ಮತ್ತೆ ಮತ್ತೆ ಸಿಕ್ಕಿ
ಹಸಿಮಣ್ಣಿನ ಸೆಳೆತಕ್ಕೆ
ಇಳಿದು ಅದರಾಳದಾಳಕ್ಕೆ
ಎಲ್ಲವಾಗುತ್ತಲೇ ಇಲ್ಲವಾಗುವ
ತೆವಲು ಇನ್ನೊಂದು ಮುಖಕ್ಕೆ.
ಸಂತನಂತೆ ಹಿಮಾಲಯದೆತ್ತರಕ್ಕೆ
ಏರಿ ನಿಲ್ಲುವುದು ಸುಲಭ
ಎಲ್ಲ ಎಲ್ಲವೂ ಸಾಕೆನಿಸಿ
ಎಲ್ಲ ಕಿತ್ತೂಗೆದು, ಸುತ್ತ
ತಣ್ಣನೆಯ ಹಿಮದ ಆಲಯವನ್ನೆ
ಕಟ್ಟಿಕೊಳ್ಳುತ್ತಾ ಜೀವನ್ಮುಕ್ತನಾಗುವದೂ ಸಾಧ್ಯ
ಆದರೆ…
ಈ ನೆಲದ ಆರ್ದ್ರ ಹಸಿಮಣ್ಣಿನ ಹುಡಿಯಲ್ಲಿ
ಮೆಲ್ಲಗೆ ಬೆರೆತು
ಕಣಕಣದಲ್ಲೂ ಕಲೆತು
ಹದಗೊಳ್ಳುತ್ತಲೇ
ಮತ್ತೆ ಮತ್ತೆ ಬಿಡದೇ
ಕುಡೆಯೊಡೆಸುವ ತಾಕತ್ತು
ಆ ಶಾಖಕ್ಕೇ ಹಿಮಮಣಿಗಳ
ಕರಗಿಸಿ ನೀರಾಗಿಸಿ
ಬೊಗಸೆ ತುಂಬಿಕೊಳ್ಳುತ್ತಾ ಹೀರಿ
ನಿಧಾನಕ್ಕೆ ಹಸಿಮಣ್ಣೇ ಆಗುವ ರೀತಿ
ಜೀವಂತಿಕೆಗೇ
ಮುಖಾಮುಖಿಯಾಗುವ ಪ್ರೀತಿ
ಆಗಿಬಿಡುವುದು ಕಷ್ಟ – ಸಾಧ್ಯ!
*****