ಸ್ತ್ರೀ ಸ್ವತಂತ್ರ ಅಸ್ತಿತ್ವದ ಅಗತ್ಯತೆ

ಸ್ತ್ರೀ ಸ್ವತಂತ್ರ ಅಸ್ತಿತ್ವದ ಅಗತ್ಯತೆ

ಆಧುನಿಕ ಮಹಿಳಾ ಜಗತ್ತು ತನ್ನದೇ ಸ್ವಯಂಕೃತ ಸಾಧನೆಯ ಸರಣಿಯಲ್ಲಿ ಸಾಗಲು ಅತೀ ಜರೂರತ್ತು ಇರುವುದು ಆಕೆಗೆ ಶಿಕ್ಷಣದ ಅಗತ್ಯತೆ. ಶೈಕ್ಷಣಿಕ ಕ್ಷಮತೆಯಲ್ಲಿ ಆಕೆಯ ಹೆಜ್ಜೆಗಳು ದಿಟ್ಟ ದಾಪುಗಾಲು ಹಾಕಬೇಕಿದೆ. ಶೈಕ್ಷಣಿಕ ಅಗತ್ಯತೆಯ ಅರಿವು ಇನ್ನೂ ಹಲವು ಹಳ್ಳಿಗಳಲ್ಲಿ ಮೂಡಿಲ್ಲ. ಅರ್‍ಧಕ್ಕೆ ಶಿಕ್ಷಣದಿಂದ ವಂಚಿತರಾಗುವ ಅದೆಷ್ಟೋ ಹುಡುಗಿಯರಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ಅತಿ ಚಿಕ್ಕ ವಯಸ್ಸಿನಲ್ಲಿ ವಿವಾಹಮಾಡಿಕೊಡುವ ಸಂಪ್ರದಾಯಗಳು ನಿಂತಿಲ್ಲ. ಹೆಣ್ಣು ಕಲಿತು ಉದ್ಧಾರ ಮಾಡುವುದು ಅಷ್ಟೇ ಇದೆ. ಮುಸರೆ ತೊಳೆಯುವುದೇನೂ ತಪ್ಪೋಲ್ಲ ಅನ್ನೋ ಮನಸ್ಥಿತಿ ಇಂದಿಗೂ ಜೀವಂತ. ಹಿಂದೆಲ್ಲಾ ಬಾಲ್ಯವಿವಾಹದ ಘನಘೋರ ದುರಂತಗಳು ಎಲ್ಲ ಕಡೆಯ ಸಾಮಾನ್ಯ ಆಚರಣೆಯಾಗಿತ್ತು. ಇಂದಿಗೆ ಸಂಖ್ಯೆಯಲ್ಲಿ ಇಳಿಕೆ ಕಂಡಿದೆಯೇ ಹೊರತು ಸಂಪೂರ್‍ಣ ನಾಶವಾಗಿಲ್ಲ. ನಮ್ಮ ದೇಶದ ಹಿಂದಿನ ಪುಟಗಳ ತಿರುವಿ ಹಾಕಿದರೆ ಭಾರತೀಯ ಮಹಿಳೆಯರ ಸ್ವತಂತ್ರ ಸಾಮರ್ಥ್ಯವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ಪರಂಪರೆಗೆ ದೊಡ್ಡ ಹಿನ್ನೆಲೆ ಇದೆ. ಸಮಾಜದ ಗುರುತರ ಕೈವಾಡವು ಇದೆ. ಪರಕೀಯರ ದಾಳಿಯ ಪ್ರಭಾವವಿದೆ. ಪುರುಷ ಹೇರಿದ ಯಾವ ಕಟ್ಟಳೆಗಳನ್ನು ನಿರಾಕರಿಸುವ ಸಾಮರ್‍ಥ್ಯ ಆಕೆಗಿರಲಿಲ್ಲ. ನಮ್ಮ ಎರಡು ತಲೆಮಾರಿನ ಹಿಂದಿನ ಸ್ತ್ರೀಯರೆಲ್ಲ ಬರಿಯ ಒಂಬತ್ತು ಇಲ್ಲವೇ ಹತ್ತು ವರ್ಷಗಳಿಗೆ ವಿವಾಹಿತರಾಗಿದ್ದರು. ಅಂತಹ ಸಾಮಾಜಿಕ ವರ್‍ತುಳದಲ್ಲಿ ಆಕೆ ತನ್ನತನವನ್ನು ಪ್ರದರ್ಶಿಸಲು ಸಾಧ್ಯವಾಗದೇ ಸತತ ಶೋಷಿತಳು. ಕೆಲವೊಮ್ಮೆ ಆಕೆ ಈ ಪರಿಸ್ಥಿತಿಯನ್ನು ತಾನಾಗಿಯೇ ಸಹಿಸಿಕೊಳ್ಳುತ್ತಾಳೆ. ಕಾರಣ ಆಕೆಯದು ಹೆಣ್ಣು ಕರುಳು. ಹೆಣ್ಣು ಜನ್ಮತಃ ತಾಯಿ. ಹುಟ್ಟಿದ ಎರಡು ಮೂರು ವರ್‍ಷಗಳಿಗೆ ಮಕ್ಕಳಾಟಿಕೆಯಲ್ಲಿಯೇ ತಾಯಿಯ ಪಾತ್ರವ ಹುಡುಗಿಯರು ಆಡಲು ಬಯಸಿದಂತೆ ಹುಡುಗರು ತಂದೆಯ ಪಾತ್ರವನ್ನು ಅದರ ಸಂತಸವನ್ನು ಅನುಭವಿಸಲು ಸಂಭ್ರಮಿಸಲು ಇಷ್ಟಪಡುವುದಿಲ್ಲ. ಹಾಗಾಗೇ ಮಮತೆಗೆ ತಾಯಿ ಸರ್ವೋಚ್ಛ ಸಾಕ್ಷಿಯಾಗುತ್ತಾಳೆ. ಹೆಣ್ಣು ತಾಯಿಯಾಗಿ ಸಮಾಜದಲ್ಲಿ ಗುರುತರ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅನೇಕ ಸನ್ನಿವೇಷಗಳಲ್ಲಿ ತನಗಿಷ್ಟವಿಲ್ಲದ ಬದುಕನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂತಾನದ ಭವಿಷ್ಯಕ್ಕೋಸ್ಕರವೇ ಜೀವನದುದ್ದಕ್ಕೂ ಕುಡುಕ, ಅನಾಚಾರಿಯಾದ ಒಲ್ಲದ ಪತಿಯೊಂದಿಗೆ ಬಡಿದಾಡುತ್ತ ಬದುಕುವ ಸಾವಿರ ಹೆಂಗಳೆಯರು ನಮ್ಮ ಸುತ್ತಮುತ್ತಲಿದ್ದಾರೆ. ಮಕ್ಕಳ ಭವಿಷ್ಯದ ಕಾಳಜಿ, ಮರ್‍ಯಾದೆ ಸಂಸ್ಕಾರಗಳಿಗೆ ಹೆದರಿ ಸಭ್ಯತೆಯ ಸೋಗಿನಲ್ಲಿ ದಿನನಿತ್ಯ ನವೆಯುವ ಸಹೋದರಿಯರಿದ್ದಾರೆ. ಇವೆಲ್ಲವೂ ಸಮಾಜ ವಿಧಿಸಿದ ಕಟ್ಟಳೆಗಳ ಕೊರಳ ಹಾರವಾಗಿ ಜೋಪಾನ ಮಾಡುತ್ತ ತಮ್ಮ ಬದುಕನ್ನು ಆಸ್ವಾದಿಸದೇ ಬದುಕುವ ನಾರಿಯರ ಸಂಖ್ಯೆ ಅಪರಿಮಿತ. ಇದಕ್ಕೆಲ್ಲಾ ತಾಯ್ತನ ತಂದುಕೊಡುವ ಆ ಹೊಣೆಗಾರಿಕೆಯೇ ಬಹಳಷ್ಟು ಸಂದರ್ಭಗಳಲ್ಲಿ ಕಾರಣ.

ವೀಣಾ ಶಾಂತೇಶ್ವರ ಬರೆದ ‘ನಿರಾಕರಣೆ’ ಪುರಾಣದ ದುಶ್ಯಂತ ಶಕುಂತಲೆಯರ ಕಥೆಯನ್ನು ಮೂಲವಾಗಿಟ್ಟುಕೊಂಡು ಹಣೆದ ಸಣ್ಣಕಥೆ. ಹೆಣ್ಣು ಶೋಷಣೆಯನ್ನು ಪ್ರತಿಭಟಿಸುವ ಸಾಮರ್ಥ್ಯವನ್ನು ಸಂಚಯಿಸಿಕೊಂಡಾಗಲೂ ತಾಯ್ತನದ ಹೊಣೆ ಆಕೆಗೆ ಹೆಚ್ಚು ಮಹತ್ವವೆನ್ನಿಸುವುದು. ದುಶ್ಯಂತ ಶಕುಂತಲೆಯರ ಪ್ರೇಮ ಸಲ್ಲಾಪಗಳು ಜಗತ್ಪ್ರಸಿದ್ದ ಪ್ರೇಮಿಗಳಿಗೆ ಆದರ್‍ಶ. ಆದರೆ ಮುಂದಿನ ಶಕುಂತಲೆಯ ಜೀವನದ ಪಾಡು ಗಾಂಧರ್ವ ವಿವಾಹದಿಂದ ಆಕೆ ಪಟ್ಟ ಪರಿತಾಪ ಇವೆಲ್ಲವೂ ಸ್ತ್ರೀಯನ್ನೆ ಗೋಳಾಡಿಸಿವೆ. ರಾಜ ಸಭೆಯಲ್ಲಿ ದುಶ್ಯಂತನಿಂದ ತಿರಸ್ಕೃತಳಾದ ಶಕುಂತಲೇ ಕಣ್ವಮಹರ್ಷೀಗಳ ಆಶ್ರಯದಲ್ಲಿ ಮಗ ಭರತನ ಜೋಪಾನ ಮಾಡುತ್ತಾ ದುಶ್ಯಂತನಿಂದ ತನಗಾದ ದ್ರೋಹದಿಂದ ಹಗಲು ರಾತ್ರಿಯೆನ್ನದೆ ಅವಮಾನದ ಕುದಿಯಲ್ಲಿ ಬೇಯುತ್ತ ಮಾನಸಿಕ ಯಾತನೆಯಲ್ಲಿ ಕಾಲಕಳೆಯುತ್ತಿರುವಾಗ ಅದೊಂದು ದಿನ ಪುನಃ ದುಶ್ಯಂತ ಆಕೆಯ ಕಾಣಲು ಬರುತ್ತಾನೆ. ತಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದಿರುವೆನೆಂದು ಕ್ಷಮೆ ಕೋರುತ್ತಾನೆ. ದೂರ್‍ವಾಸರ ಶಾಪದ ಕಾರಣ ತಾನು ಹಾಗೆ ನಡೆದುಕೊಂಡೆ ಎಂದು ಈಗ ತನ್ನನ್ನು ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ವೀಣಾ ಶಾಂತೇಶ್ವರ ಮಹಿಳಾ ದೃಷ್ಟಿಕೋನದಿಂದ ಕಥೆಯನ್ನು ನೋಡುತ್ತಾರೆ. ದೂರ್‍ವಾಸರ ಶಾಪ ಕೇವಲ ನೆವ. ಗಂಡಿಗೆ ಹೆಣ್ಣನ್ನು ಶೋಷಿಸಲು, ಆ ಶೋಷಣೆಯನ್ನು ಸಮರ್‍ಥಿಸಲು ತನಗೆ ಬೇಕಾದಂತೆ ಕಥೆ ಹೆಣೆಯಲು ಹತ್ತು ಹಲವು ಸಾಧ್ಯತೆಗಳಿವೆ. ಶಕುಂತಲೆ ದುಶ್ಯಂತನನ್ನು ನಿರಾಕರಿಸುತ್ತಾಳೆ. ಆದರೆ ಮಗ ಭರತನ ಭವಿಷ್ಯದ ಪ್ರಜ್ಞೆ ಆತನ ವಿದ್ಯೆ ಶ್ರೇಯಸ್ಸಿಗಾಗಿ ರಾಜನೊಂದಿಗೆ ಅರಮನೆಗೆ ಹೋಗುವಂತೆ ಪ್ರೇರೆಪಿಸಿದರೂ ಆಕೆ ಮುಂದೆ ದುಶ್ಯಂತನ ಸೇವಿಸದೇ ಆತನ ನಿರಾಕರಿಸುವ ದೈರ್ಯವನ್ನು ಮಾಡುತ್ತಾಳೆ. ಶಕುಂತಲೆ ತನ್ನ ಬದುಕನ್ನು ದುಶ್ಯಂತನ ಅರಮನೆಯಲ್ಲಿ ಕಳೆವ ನಿರ್‍ಧಾರಕ್ಕೆ ಬಂದರೂ ಅಲ್ಲೂ ಒಳತೋಟಿಯಲ್ಲಿ ತನ್ನ ಅಂತರ್ಗತ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆತ್ಮಾಭಿಮಾನಕ್ಕೆ ಹೊರತಾಗಿ ಬದುಕನ್ನು ಅಪ್ಪಿಕೊಂಡ ನೋವನ್ನು ಶಾಂತೇಶ್ವರ ಚಿತ್ರಿಸುತ್ತಾರೆ. ತನ್ನ ವ್ಯಕ್ತಿಗತ ಸುಖಕ್ಕಾಗಿ ಬಂದಿಲ್ಲವೆಂದು ಮಗನ ಅಭಿವೃದ್ದಿಗಾಗಿ ಆ ಒಂದೇ ಕಾರಣ ಆ ಜವಾಬ್ದಾರಿ ತನ್ನನ್ನು ಅರಮನೆಗೆ ಕರೆತಂದಿರುವುದಾಗಿಯೂ, ಮುನಿಶಾಪದ ಕ್ಷುಲಕ ಕಾರಣಗಳು ಗಂಡಿಗೆ ತನ್ನನ್ನು ಸಮರ್ಥಿಸಲು ಇರುವ ಕಾರಣಗಳೆಂದು, ಅಂತಹ ಕಾರಣಕ್ಕೆ ಪ್ರೀತಿಸಿದ ಹೆಣ್ಣನ್ನು ಕೈಬಿಟ್ಟ ಪುರುಷನ ಪ್ರೀತಿಗೆ ಅರ್ಥವಿಲ್ಲವೆಂದು ಹೇಳಿ ತನ್ನ ಮಾನಸಿಕ ಸ್ಥೈರ್ಯ ಉದಾತ್ತ ವ್ಯಕ್ತಿತ್ವದಿಂದ ಮಾನ್ಯಳಾಗುತ್ತಾಳೆ. ಮಗನಿಗಾಗಿ ಆಕೆಯ ತ್ಯಾಗ ಅನನ್ಯವೆನಿಸುತ್ತದೆ.

ಹಾಗೇ ಇಂದಿನ ಆಧುನಿಕ ವ್ಯವಸ್ಥೆಯಲ್ಲಿಯೂ ಅನೇಕ ಕುಟುಂಬಗಳಲ್ಲಿ ಹೆತ್ತ ಕುಡಿಗಳಿಗಾಗಿ ನರಕಸದೃಶ ಜೀವನ ಮಾಡುತ್ತಿರುವ ಹಲವು ಗೃಹಿಣಿಯರಿದ್ದಾರೆ. ಅಂತವರ ಒಳಗುದಿ ಕಣ್ಣಿಗೆ ಕಾಣದ್ದು. ಅವರದ್ದೊಂದೇ ಆಶಯ ಅದು ಮಕ್ಕಳು. ಅಶಿಕ್ಷಿತ ಹೆಣ್ಣು ಎಷ್ಟೆಲ್ಲಾ ಅವಮಾನ, ಹಿಂಸೆ, ನೋವುಗಳನ್ನು ಸಹಿಸುತ್ತ ಮಕ್ಕಳ ಶ್ರೇಯಸ್ಸಿಗೆ ಹಲಬುತ್ತಾಳೆ. ತನ್ನ ಬದುಕನ್ನು ಸವೆಯುತ್ತಾಳೆ. ಪುರುಷನ ಪ್ರಾಬಲ್ಯದ ಸಮಾಜದಲ್ಲಿ ಮಹಿಳೆಯ ಸೊಲ್ಲು ಗೌಣ. ಆದರೆ ಆಕೆ ಸಂಬಂಧಗಳ ಬೆಸೆಯಬಯಸುತ್ತಾಳೆ. ಸ್ತ್ರೀ ಮನೋವ್ಯಾಕುಲತೆ, ಮಾನಸಿಕ ಬೆಂಬಲದ ಭಾವ, ಪುರುಷನೊಡನೆ ಬೆರೆತಿರುವುದರಿಂದಲೇ ಆಕೆ ಆತನಿಗಿಂತ ಸಮರ್ಥಳಾಗುವ ಎಲ್ಲ ಅವಕಾಶಗಳಿದ್ದಾಗಲೂ ಮೆದುವಾಗುತ್ತಾಳೆ. ತನ್ನ ಸೊಲ್ಲನ್ನು ಮೌನವಾಗಿಡುತ್ತಾಳೆ. ಆಕೆ ಪತ್ನಿ, ಮಾತೆ, ಸಹೋದರಿ, ಹೀಗೆಲ್ಲಾ ಬಂಧನಗಳಲ್ಲಿ ಮೀಯುವ ಆಕಾಂಕ್ಷೆಯುಳ್ಳವಳು. ಅನಾದಿ ಕಾಲದಿಂದಲೂ ಹೆಣ್ಣು ಹತ್ತು ಹಲವು ರೀತಿಯಲ್ಲಿ ವಸ್ತುವಿನಂತೆ ಬಳಸಲ್ಪಡುತ್ತಿದ್ದಾಳೆ. ಇಂದಿಗೆ ಆಕೆ ಜಾಹಿರಾತು ಕಂಪನಿಗಳ ಕೈ ದಾಳವಾಗಿದ್ದರೆ ಪುರಾಣ ಇತಿಹಾಸದ ಕಾಲದಲ್ಲಿ ಜೂಜಿನ ದಾಳವಾಗಿ, ಎರವಲು ಕಡವಾಗಿ, ದಾನದ ವಸ್ತುವಾಗಿ ಬಳಸಲ್ಪಟ್ಟ ಹೇರಳ ಉದಾಹರಣೆಗಳಿವೆ.

ಇಂದು ಕೆಲವು ವಿದ್ಯಾವಂತ ಮಹಿಳೆ ಪತಿಯಿಂದ ಪರಿತ್ಯಕ್ತರಾದರೂ ತನ್ನ ವಿದ್ಯೆಯ ಬಲದಿಂದ ಸ್ವಯಂ ಬದುಕನ್ನು ಕಟ್ಟಿಕೊಳ್ಳಬಲ್ಲಳು. ತನ್ನ ಮಕ್ಕಳನ್ನು ನೋಡಿಕೊಳ್ಳಬಲ್ಲಳು. ಸಮರ್ಥವಾಗಿ ತಂದೆ ತಾಯಿಯ ಸ್ಥಾನವನ್ನೂ ತುಂಬಬಲ್ಲಳು. ಶೋಷಣೆಯ ವಿರುದ್ಧ ಬಡಿದೆದ್ದ ಅದೆಷ್ಟೋ ಹೆಣ್ಣು ಮಕ್ಕಳು ಒಂಟಿಯಾಗಿ ಬದುಕುತ್ತಿರುವುದು ಇಂದು ಸಾಮಾನ್ಯವಾಗಿವೆ. ಹಾಗಿದ್ದೂ ಸನಾತನ ಸಂಸ್ಕೃತಿಯ ಬೀಳಲುಗಳು ಹೇಗಿವೆಯೆಂದರೆ ಅತ್ಯಂತ ಮುಂದುವರೆದ ಕುಟುಂಬಗಳಲ್ಲೂ ತಂದೆ ಬಿಟ್ಟ ಮಕ್ಕಳು ಇಲ್ಲವೇ ಗಂಡ ಬಿಟ್ಟ ಹೆಂಡತಿ ಎಂಬ ಅನ್ವರ್‍ಥಕ ಬಿರುದನ್ನು ಮರೆಯದೆ ನೀಡಿ ಅಣುಕಿಸುವ ಜಗತ್ತು ನಮ್ಮದು. ಆದರೂ ಇಂತಹ ಸಂಗತಿಗಳನ್ನೆಲ್ಲೆಲ್ಲಾ ಧೈರ್ಯದಿಂದಲೇ ಎದುರಿಸಬೇಕಾದ ಅನಿವಾರ್ಯತೆ ಇದೆ. ಉದ್ದಕ್ಕೂ ಸವಾಲುಗಳಿವೆ, ಸೋಲುಗಳಿವೆ, ಅಪನಿಂದೆಗಳಿವೆ, ತಿರಸ್ಕಾರಗಳಿವೆ. ಆದರೆ ಜೊತೆಜೊತೆಗೆ ಪರಿಹಾರಗಳು ಇದೆ. ಇವನ್ನೆಲ್ಲಾ ಮೆಟ್ಟಿ ಗೆಲ್ಲಬೇಕೆಂದರೆ ಜ್ಞಾನ ವಿದ್ಯೆಯಿಂದ ಮಾತ್ರ ಸಾಧ್ಯ. ಸ್ತ್ರೀಯರಿಗೆ ಶಿಕ್ಷಣ ಸ್ವಯಂಪ್ರಜ್ಞೆಯ ಅರಿವಿನ ಮೂಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ ಪುಟ್ನಂಜಿ ನಕ್ರೆ
Next post ಗಗನ ಹಕ್ಕಿಯು ಗಾನ ತುಂಬಿತು

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…