ನನ್ನೆದೆಯು-ನಿನ್ನೆದೆಯು; ನಡುವೆ ಕ್ಷಾರೋದಧಿಯು!
ಕಾಡಿನಲಿ ಅತ್ತಂತೆ ಎಲ್ಲ ಹಾಡು!
ತಂತಮ್ಮ ಕಂಬನಿಯಲೆಲ್ಲರೂ ಮುಳುಗಿದರೆ
ಕೆಳೆಯ ಬೇಡುವ ಎದೆಗೆ ಯಾರು ಜೋಡು?
ಅರಿವಿನಾಳದೊಳಿರುವ ಅಣಿಮುತ್ತುಗಳನೆತ್ತಿ
ಪವಣಿಸುವ ಜಾಣು ಬಗೆಗೆಂದು ಬಹದೊ?
ಸೂಜಿಗೂ ಹದನು, ಎಳೆನೂಲಿಗೂ ಮಿದುವಾದ
ನುಡಿನುಡಿಯ ನಾಲಗೆಗೆ ನಿಲುಕಲಹುದೊ?
ಹೆಣೆದು ಹೂ-ಹೊರೆ-ಹಾರ ಹಾರಗಳನು
ಕಳುಹುವೊಲು ಗಾಳಿಯಲಿ ಹಾಡುಗಳನು;
ಕಳುಹಿ ಎದೆವಾತುಗಳ ತಣಿವೆನೆಂದು
ರಸಿಕ! ನಿನ್ನೆದೆ-ಕೊರಳಿಗಿಂಪ ತಂದು?
*****