ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ-
ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ
ರಾಮೇಶ್ವರವೆ ಆಗುತದು ಭರತಖಂಡದಲಿ
ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ
ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ
ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ
ಮೂಡಲಿಹ ಕೊನೆಯ ಲಿಂಗವನಳಿಸಿ! ದಿಂಡದಲಿ
ಎಲ್ಲ ಲಿಂಗಗಳರಳಿ ಮುಡಿಗೆ ಬರೆ,- ಹೋಯ್ತು, ಹದ!
ಸುತ್ತಲೊಂಭೈನೂರು ತೊಂಭತ್ತೊಂಭತ್ತು!
ಇರಲೇನು? ಸಾವಿರಕೆ ಬರಿ ಒಂದು ಕಡಿಮೆಯಿರೆ
ಗಣಿತವಾಯಿತು ವ್ಯರ್‍ಥ ಗಿಡಗಂಟೆಯದು ಸುತ್ತ
ಬೆಳೆದಿಹುದು. ದೇಗುಲವ ನೋಡಬಯಸುವರಿಲ್ಲ
ಸಮೃದ್ಧಿಗೂ,-ಅಮೃತಸಿದ್ದಿಯು ಕೊನೆಗೆ ಬಾರದಿರೆ,-
ಇಡಿಯ ಜನ್ಮವೆ ವ್ಯರ್‍ಥ. ಇದನ್ನು ಬಲ್ಲವ ಬಲ್ಲ.
*****