ಮ್ಯಾಲ ತುಂತುರ ಹನಿಯು ತಂತಿ ವಾದ್ಯದ ಮುಗುಲು
ಬನತುಂಬ ಮಳೆಬಿಲ್ಲು ಬಿತ್ತಿಬಾರ
ಹನಿಹನಿಯು ಬಿದ್ದಲ್ಲಿ ಸವಿಮುದ್ದು ಇದ್ದಲ್ಲಿ
ಭೂರಮಣಿ ಮೈಬಿಚ್ಚಿ ಹೂವು ತಾರ
ಏಳು ಬಣ್ಣದ ಮುಗುಲು ಸಂಜಿ ಶೀತಲ ನವಿಲು
ಗಗನ ಮಲ್ಲಿಗಿ ಸುರಿದು ಕೈಯತಾರ
ಬಾಳಿ ತೋಳನು ಚಾಚ ಬಳ್ಳಿಗೂದಲ ಹೊಚ್ಚ
ಭೂಮಿ ಸುಂದರಿ ಮಳ್ಳಗೊಳಿಸಿ ಬಾರ
ಮುಗಿಯಲಾರದ ಮುಗುಲು ತಡೆಯಲಾರದ ಹಗಲು
ಚಂದ್ರ ಚುಂಬನಕಾಗಿ ಕಾದು ಬಂತ
ನಗಿಯ ಬೆಟ್ಟವ ದಾಟಿ ಮೌನ ಗಟ್ಟವ ದಾಟಿ
ಹಸಿರ ಮಂಚಕ ಹೂವು ಸುರಿದು ನಿಂತ
ದೂರ ದಾರಿಯ ಕಂಡೆ ಮಾರ ನಾರಿಯ ಕಂಡೆ
ದೂರಾದ ಸುಂದರಿಯ ಪಡೆದುಕೊಂಡೆ
ಆತ್ಮ ರಾಮನ ಕಂಡೆ ದೇವರಾಯನ ಕಂಡೆ
ಹರುಷ ರಾಯನ ಮನವ ಗೆದ್ದುಕೊಂಡೆ
*****