ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ
ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ
ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ
ಬೇರಿಗೆ ಕಸುವಾಗೊ ಸತುವನ್ನು ತಾರೆ ||೧||
ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ
ಹನಿಹನಿ ಸುರಿಸುತ್ತ ಹಸರಿಸು ಬಾರೆ
ಬಾಯೊಣಗಿ ಬೋರ್ಯಾಡಿ ಪ್ರಾಣಾ ಓಡಾಡ್ಯಾವೆ
ಜೀವಾನ ಉಳಿಸಾಕೆ ಮೇಲಿಂದ ಬಾರೆ ||೨||
ಎದೆಯೆಂಬ ಪೀಠಾನ ಝಾಡಿಸಿ ಜಪ್ಪಿಸಿ
ಕಾದೀನಿ ನಿನಗಾಗಿ ಕುಂತುಗೊ ಬಾರೆ
ಸಭೆ ತುಂಬಿ ಕಾದೈತೆ ಕಣ್ಕಣ್ಣು ಬಿಡತೈತೆ
ಹಡದೀಯ ಹಾಸ್ಯೈತೆ ನಡಕೊಂತ ಬಾರೆ ||೩||
ಎದೆಯೆಂಬ ನೆಲದಾಗೆ ಗಿಡಮರ ನರನರಾ
ಒಣಗ್ಯಾವೆ ಹಿಡಿದಾವೆ ಒಳಗೆಲ್ಲೋ ಜೀವಾ
ಈ ನೆಲಾ ಬಾಯ್ಬಿಟ್ಟು ಬಿರುಕೀನ ಮಕವಿಟ್ಟು
ನೀರೆ ಬಾರೇ ಬಾರೆ ಕೂಗ್ಯೈತೆ ಜೀವಾ ||೪||
ಎದೆಯೆಂಬ ಗುಡಿಯಾಕೆ ಬಣಬಣ ಬರಿಗಂಟೆ
ಉರದೈತೆ ಇರುಳೆಲ್ಲಾ ದೀಪಾಧೂಪಾ
ಗರ್ಭಾಗುಡಿಯಾಗೆ ನೀ ಮನಿದೇವ್ತೆ ಇರದಾಗ
ಯಾರೀಗೆ ಈ ಗುಡಿ ಈಪೂಜಿ ಪಾಪಾ ||೫||
ಎದೆಯೆಂಬ ಪಂಜರದೊಳಗೊಂದು ಗಿಣಿರಾಮಾ
ಸಂಗಾತಿ ಬೇಕಂತಾ ಕರದೈತೆ ಬಾರೆ
ಹಣ್ಣನ್ನ ತಿನವಲ್ದು ಕಣ್ಣನ್ನ ಮುಚುವಲ್ದು
ಸೆಳ್ಳನ್ನೆ ಕುಕತೈತೆ ಅರಗಿಣಿ ಬಾರೆ ||೬||
ಎದೆಯೆಂಬ ಬಾವ್ಯಾಗೆ ಬರಿತಳ ಕಂಡೈತೆ
ಬರಿಕೊಡ ಜೋತಾಡಿ ನೇತಾಡುತಾವೆ
ಬಾವೇನು ಜೀವಿಲ್ದ ಹೆಣಬಾಯಿಯಾಗ್ಯೈತೆ
ಅಂತಾರಾಗಂಗೀಬಾ ತುಳುಕಲಿ ಒಲವೇ ||೭||
ಎದೆಯೆಂಬ ಗಿಡದಾಗೆ ಎಲಿಯಿಲ್ಲ ಚಿಗುರಿಲ್ಲ
ಬರಲಾಗಿ ನಿಂತೈತೆ ರಸವಿಲ್ದ ಜೀವಾ
ಹಸಿರಿನ ಸೀರ್ಯುಟ್ಟು ಹೂಮುಡಿದು ಕಾಯಾಗಿ
ಹಣ್ಣಾಗಿ ಗಿಡತುಂಬು ಬಾರೆನ್ನ ಸತುವಾ ||೮||
ಎದೆಯೆಂಬ ಹೊನ್ನಾಡು ರತ್ನ ಮುತ್ತಿನ ನಾಡು
ಹಾಳಾಗಿ ಹಂಪ್ಯಾಗಿ ಕೂಗ್ಯಾವೆ ಗೂಗಿ
ನಿನ್ನ ಗೆಜ್ಜಿ ಪಾದ ಸೋಕಿದರೆ ಈ ಕೊಂಪಿ
ನಂದಾನವಾದೀತು ಕೋಗಿಲೆ ಕೂಗಿ ||೯||
ಎದೆಯೆಂಬ ಈ ಮನಿ ಕಸಕಾಗಿ ತೌರ್ಮನಿ
ಧೂಳು ದುಮ್ಮು ಮೂಲಿಮೂಲಿಗೆಲ್ಲ
ವಾರಣ ಸಾರಣಿ ಮಾಡಿ ಈ ಮನಿಯಾಗೆ
ಹಣತೆಯ ಹಚ್ಚು ಬಾ ಕಳೆಯಲಿ ಕತ್ಲಾ ||೧೦||
*****