ರಾಮನೇನು ಗೊತ್ತು ನಮಗೆ
ತ್ಯಾಗರಾಜರಿಲ್ಲದೆ
ಕೃಷ್ಣನೇನು ಗೊತ್ತು
ಪುರಂದರ ದಾಸರಿಲ್ಲದೆ
ಶಿವನೇನು ಗೊತ್ತು ನಮಗೆ
ಅಲ್ಲಮರಿಲ್ಲದೆ
ದಿವವೇನು ಗೊತ್ತು ನಮಗೆ
ಸೂರ್‍ಯಚಂದ್ರರಿಲ್ಲದೆ
ಭಕ್ತಿಯೇನು ಗೊತ್ತು ಆ-
ನಂದವೇನು ಗೊತ್ತು
ಅನುಭವವೇನು ಗೊತ್ತು ಅನು-
ಭಾವವೇನು ಗೊತ್ತು
ಸಂಗೀತವೇನು ಗೊತ್ತು
ನಾದವೇನು ಗೊತ್ತು
ತಾಳಲಯವೇನು ಗೊತ್ತು
ಸಂಸ್ಕಾರವಿಲ್ಲದೆ
ಬುದ್ಧಿಯೇನು ಗೊತ್ತು
ಗಾದೆಯಿಲ್ಲದೆ
ಕಲ್ಪನೆಯೇನು ಗೊತ್ತು
ಕತೆಯಿಲ್ಲದೆ
ಕನಸೇನು ಗೊತ್ತು
ಜೋಗುಳವಿಲ್ಲದೆ
ಆಟವೇನು ಗೊತ್ತು
ಪುಟ್ಟ ಮಕ್ಕಳಿಲ್ಲದೆ
ಋತುವೇನು ಗೊತ್ತು ಬೇ-
ಸಾಯವಿಲ್ಲದೆ
ದಿನ ತಿಥಿಗಳೇನು ಗೊತ್ತು
ಹಬ್ಬಗಳಿಲ್ಲದೆ
ರಾಮಾಯಣ ಮಹಾಭಾರತಗಳೇನು ಗೊತ್ತು
ಕಬ್ಬಗಳಿಲ್ಲದೆ
ಬಂಧುಗಳೇನು ಗೊತ್ತು ಮದುವೆ
ಮುಂಜಿಗಳಿಲ್ಲದೆ
ಮಮತೆಯೇನು ಗೊತ್ತು
ಮಾತೆಯಿಲ್ಲದೆ
ಪ್ರೀತಿಯೇನು ಗೊತ್ತು
ಸಂಸಾರವಿಲ್ಲದೆ
ಅಂದವೇನು ಗೊತ್ತು
ಹೆಣ್ಣಿಲ್ಲದೆ
ಕಲೆಗಳೇನು ಗೊತ್ತು ಒಳ-
ಗಣ್ಣಿಲ್ಲದೆ
ಯಾವುದೇನು ಗೊತ್ತು ತಾ-
ಯ್ನುಡಿಯಿಲ್ಲದೆ
ಜಗವೇನು ಗೊತ್ತು ಜಗ-
ನ್ಮಾತೆಯಿಲ್ಲದೆ
*****