ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು
ಮಿಂಚಿನಣುಗಳನೇರಿ ಸಕಲ ದಿಙ್ಮಂಡಲವ
ಸಂಚರಿಸುತಂತರದಿ ಮೌನದಿಂ ಮಿಡಿಯುತಿಹ
ಸೋಜಿಗದ ಗೀತವನ್ನು ಹಿಡಿದು, ಉಜ್ಜ್ವಲಗೊಳಿಸಿ,
ಶ್ರೋತೃಪಥವೈದಿಸುವ ಯಂತ್ರದೊಲು,-ಹೇ ಕವಿಯೆ,
ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ-
ರಾಳದೊಳು ಸಂತತಂ ಸಂಜನಿಸುವಾನಂದ-
ಮಾತೃಕೆಯೆ ತಾನಾದ, ವಿಶ್ವ ಕೆಲ್ಲಕು ಹರಡಿ
ವಿಕೃತಿ ಪದರಗಳಲ್ಲಿ ಮೌನವಾಗಿಹ, ಶಿವದ
ಗೀತವನು ಕರಣಗೋಚರಮಾಗೆ ಸ್ಪಂದಿಸುತ
ಚೇತನರೊಳಾ ಚಿದಾನಂದವನೆ ಮರುಕೊಳಿಪ,
ಪ್ರಕೃತಿ ಶಿಲ್ಪಿಯು ಸಮೆದ ಚಿದ್ಯಂತ್ರ ನೀನಲಾ!
ಮನದ ಮೊನೆಯನು ಮಾಡು ಶಿವಸೂಚಿಯಾಗುವಂತೆ;
ಮರ್ಮವನು ನುಡಿ, ಲೋಕ ತನ್ನ ತಾನರಿಯುವಂತೆ.
*****