ಹುಬ್ಬಳ್ಳಿ ಶಾರ್‌ದೋಳು ಮಂಗ್ಯಾ ಬಾಜಾರದೊಳು|
ಮಾಡಿದ್ದ ಆಟವ ನೋಡಿದ್ದೇನ
ಅಂಜಿ ಅಡ್ರಾಸಿ ಮುಂದಕ ಹೋಗಿದ್ದೇನ
ಹಂತಿಲಿದ್ದ ಮಂದೀನೆಲ್ಲ ದೂಡಿದ್ದೆನಽ ತಂಗಿ
ಛಪ್ಪರದಾನ ಸಪ್ಪಽಳ ಕೇಳಿ ಭರ್ರನೆ ಓಡಿ ಬಂದು
ಚರ್ರನೆ ಹರದಿತ್ತ ಛೆಂದಗೇಡಿ ಮಂಗ್ಯಾ| ಮಲ್ಲೀಗೆ ದುಂಡಮಲ್ಲಿಗೆ ||೧||
ಅಂಗೂಡಿ ಮ್ಯಾಽಳೀಗಿ ಅಳತಿಲ್ದೆ ಕೆಡಸಿತ್ತ
ರೊಕ್ಕಽದ ಚೀಲೊಂದಮಚಿತ್ತವ್ವಾ
ತೆಕ್ಕಮಿಕ್ಕಿಲೆಡಬಲ ನೋಡಿದ್ದೆವ
ಗಂಡಗ ಲೆಕ್ಕವು ಏನಂತ ಹೇಳಲೆವ್ವಾ ತಂಗಿ
ದುಕ್ಕಽವ ಮಾಡೂತ ಸನಿಯಾಕ ಹ್ವಾಽದಾರ
ಚೆಕ್ಕಂದನಾಡೀತ ಛೆಂದಗೇಡಿ ಮಂಗ್ಯಾ| ಮಲ್ಲೀಗೆ… ||೨||
ಅಕ್ಕೀಯ ಅಂಗಡ್ಯೊಂದು ಅಳವ ಮಾಡಿತ್ತವ್ವ
ಬಾಳಿ ಹಣ್ಣಿಗಿ ಬಾಯಿ ಹಾಕಿತ್ತವ್ವಾ
ಮಾವೀನ ಹಣ್ಣೊಂದು ಅಮಚಿತ್ತವ್ವಾ
ಕಡ್ಲಿ ಕರದಂಟ ಕೈಯಾಗ ಹಿಡಿದಿತ್ತವ್ವಾ
ಅದು ಎಂಥ ಮಿಕ ನೋಡ ಇದು ಎಂಥ ಸುಖ ನೋಡ|
ಹುಬ್ಬಳ್ಳಿ ಶಾರಾ ಮಾಡ್ಯಾವ ಹಾಳಾ| ಮಲ್ಲೀಗೆ… ||೩||
ಸಣ್ಣಽ ಹುಡಗರ ಕೈಯಾಗ ಬೆಣ್ಣೀ ರೊಟ್ಟಿ ಕೊಟ್ಟು
ಅಪ್ಪಾ ಅಣ್ಣಾನಂದು ಖಳವಿದ್ದೆಪ
ರಾಮಣಗ ಮೀಸಲ ಹಿಡಿದಿದ್ದೆವ
ಬೆಣ್ಣಿ ರೊಟ್ಟಿ ಕಣ್ಣಿಲಿ ಕಂಡು ಕಸಗೊಂಡು ಓಡ್ಹೋಗಿ
ಮರನೇರಿ ನಿಂತಾವ ಮಾನ್ಗೇಡಿ ಮಂಗ್ಯಾ| ಮಲ್ಲೀಗೆ… ||೪||
ಆಡಗೀಯ ಮನೆಯೋಳು ಗಡನೇರಿ ನಾ ಹ್ವಾದ|
ತುಡಿಗೀಲಿ ಹಾಲ್ಕುಡಿದು ಹಾರೀ ಹ್ವಾದೀತವ್ವಾ
ಅಡಕಲ ಗಡಿಗಿ ವಡದ್ಹಾಳಮಾಡಿತವ್ವಾ
ಕಾಳಕಡಿಽಗೋಳು ಕೂಡಿಸಿಬಿಟ್ಟಿತ್ತವ್ವಾ
ತುಟ್ಟೀಯ ಕಾಲ್ದೋಳು ಎಷ್ಟಂತ ಹೇಳಽಲಿ
ಕೆಟ್ಟ ಮಂಗ್ಯಾನ ಸುಟ್ಟು ಮಣ್ಣಾ ಗಿಡಬಾರ್‍ದೆ| ಮಲ್ಲೀಗೆ…||೫||
ಹಪ್ಪಽಳ ಶಂಡೀಗಿ ಒಪ್ಪುಳ್ಳ ಉಗರಂಽತ ಛಪ್ಪರ ಮಾಲೊಣ ಹಾಕಿದ್ದೇವ|
ನೆರಮನಿ ತಿಪ್ಪವ್ವ ನೋಡಂತ ಹೇಳಿದ್ದೇನ|
ಒಳಗೆ ತುಪ್ಪಽವ ಕಾಸಾಕ ಹೋಗಿದ್ದೇನ
ಸಪ್ಸಳಿಲ್ದೆ ಮಂಗ್ಯಾ ಬಂದು ಹೆಪ್ಪಽಳ ತಿಂದ್ಹೊಯ್ತ
ಛಪ್ಪರ ಖೆಡಿವ್ಹೊಯ್ತ ಚಂಡಾಳಿ ಮಂಗ್ಯಾ| ಮಲ್ಲೀಗೆ… ||೬||
ಪಂಚಿಮಿ ಬಂತೆಂದ ಹೆಂಚಿಟ್ಟಳ್ಳಾ ಹುರಿದ
ಮುಂಚೆ ತಂಬಿಟ್ಟಾವ ಮಾಡಿದ್ದೇನ
ಎಳ್ಳುಂಡೀಯ ಸಾಹಿತ್ಯ ಮಾಡ್ದೇನ
ಗೋದಿ ಅಳ್ಳಿಟ್ಟಿಗಾಽಣವ ಕಾಸಿದ್ದೇನ
ಕಡ್ಲ್ಯುಂಡಿ ಕಟ್ಟಿಕೇರಿ ನೆಲಿನ ಮ್ಯಾಲ ಇಟ್ಟಿದ್ದ
ಬೆಳಿಖಿಂಡ್ಯಾಗ್ಹಾಸಿ ಎಳಕೊಂಡ್ವ್ಹಾದಾಽವ| ಮಲ್ಲೀಗೆ… ||೭||
ಹಬ್ಬ ಬಂದೈಽತೆಂತ ಹಿಗ್ಗಿಲಿ ಹೊರಣಕಿಟ್ಟು
ಉಬ್ಬಿಲಿ ಹೂರಣಗಡಬ ಮಾಡಿದ್ದೆ ನ
ಉಂಡ ಉಲ್ಲಾಸಾಗಿ ಕುಂತಿದ್ದೆ ನ
ಕಂಡಮಂದಿನೆಲ್ಲಾ ನೋಡ್ಲಕ್ಹೋಗಿದ್ದೇನ
ಹಿಂಡ್‌ಮಂಗ್ಯಾ ಕೂಡಿಕೊಂಡು ಹಿತ್ತಲದಾಗ ಹಾದೀ ಮಾಡಿ
ಇದ್ದಾ ಸ್ಹೂರಣಗಡಬ ಎಳಕೊಂಡ್ಹೋದಾವ| ಮಲ್ಲೀಗೆ…||೮||
ವಾರೀಗಿ ಗೆಳೆದಾರು ನೂಲಕ್ಕ ಬಂದಾರ
ನಡುವ ನನ್ನ ಹಾಸ ಇಟ್ಟಿದ್ದೆನವ್ವಾ
ಕುಕಡಿ ಕಮ್ ಬಿದ್ದಾರೆ ತರಹ್ವಾದೆನವ್ವಾ
ಹೊಯ್ದಂತೆ ಏಳ್ಹುಂಜ ಕೊರಳೀಗಿ ಹಾಯ್ಕೊಂಡು
ಮರನೇರಿ ಕುಂತಾದ ನೋಡ ನೀಲವ್ವಾ| ಮಲ್ಲೀಗೆ… ||೯||
ಊರಾಗ ಗೌಡಽರ ಮದವಿ ಆಗತಾದ
ಸನಾಯಿ ಸಂಬಽಳ ತರಸಿದ್ದ ರವರು
ತೆಳಗಿಟ್ಟು ಎಲಿಅಡಕಿ ಮೆಲಿತಿದ್ದ ರವರು
ಬಡಿವಂಥ ಸಂಬಾಳ ಕೊರಳೀಗಿ ಹಾಯ್ಕೊಂಡು
ಮರನೇರಿ ಕುಂತಾದ ನೋಡೆ ಗಂಗವ್ವಾ| ಮಲ್ಲೀಗೆ… ||೧೦||
ಹಿಂಡಕೋಳುದು ಬಿಟ್ಟು ಹಾಲ ಕಾಸುದು ಬಿಟ್ಟು
ತೆಪ್ಪಿದಂತ ನುಡಿಗೋಳು ಒಳಕೂವಳ
ಆಕಿ ಯಾಳಿಯಾಳಿಯಾಕ ಹೇಳುವಳ
ಹತ್ತೆಂಟ ನುಡಿಗೋಳ ನೆಪ್ಪಿಟ್ಟು ಕಲಸ್ಯಾಳ
ಅಕಿ ಹಲಸೀಗಿ ಹರದಿ ನಿಂಗವ್ವಾ| ಮಲ್ಲೀಗೆ… ||೧೧||
****
ಮಂಗ್ಯಾನ ಹಾಡು
ಕೋತಿಗಳಿರುವ ಊರಲ್ಲಿ ನಡೆಯುವ ವಿಚಿತ್ರವು ಈ ಹಾಡಿನಲ್ಲಿ ವರ್ಣಿಸಟ್ಟಿದೆ.
ಛಂಧಸ್ಸು:- ಮಂದಾನಿಲರಗಳೆ.
ಶಬ್ದಪ್ರಯೋಗಗಳು:- ಶಾರ=ಪಟ್ಟಣ. ಮಂಗ್ಯಾ=ಕೋತಿ. ಮಿಕ=ಮೃಗ. ಕಾಳಕಡಿ=ದವಸಧಾನ್ಯ. ಬಂದೈತಿ=ಬಂದಿದೆ. ಆಣ=ಬೆಲ್ಲದ ಪಾಕ. ಕಟ್ಟಿಕೇರಿ=ಕಟ್ಟಿ ಬಿಟ್ಟು. ಬೆಳೆಖಿಂಡಿ=ಬೆಳಕಿನ ಕಿಂಡಿ. ಇದ್ದಾಸು=ಇದ್ದಷ್ಟು. ಹಾಸ=ನೂಲು ತೋಡುವ ಕಟ್ಟಿಗೆ. ಹುಂಜ=ನೂಲಿನ ಲಡಿ. ಒಳಕು=ನೆನಪು, ಮಾಡಿಕೋ(?) ಆಕಿ=ಆಕೆ. ಯಾಳಿ=ವೇಳೆ. ನೆಪ್ಪು=ನೆನಪು. ಕೊನೆಯ ನುಡಿಯು ಮುದ್ರಿಕೆಯಂತೆ ಇದೆ.