ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು.
ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು “ಹೂವೇ! ಹೂವೇ!” ಎಂದು ಬೆನ್ನು ತಟ್ಟಿ ಮಾತನಾಡಿಸಿತು. ಹೂವು ತನ್ನ ಧ್ಯಾನದ ನಿಲುವನ್ನು ತೊರೆಯಲಿಲ್ಲ.
ಬೆಳಕು ಬೀರುತ್ತ ಬೆಳ್ಳಿ ಕಿರಣ ಓಡಿ ಒಂದು-
“ಹೂವೇ! ಹೂವೇ! ನಿನ್ನ ಸಖನ ನೆನಪಿಲ್ಲವೇ?” ಎಂದು ಕೇಳಿತು.
ಸುಮನದ ಧ್ಯಾನದ ರೆಪ್ಪೆ ದಳ ಅಲಗಲಿಲ್ಲ.
ಧ್ಯಾನದ ಮೌನ ಮುಂದುವರಿಯಿತು.
ಮಧ್ಯಾಹ್ನ ಸೂರ್‍ಯ ನೆತ್ತಿಗೇರಿ ಬಂದು ಹೂ ಹೃದಯವನ್ನು ಕಲುಕಲು ನೋಡಿದ. ಹೂವು ಉರಿಬಿಸಲನ್ನು ಸಹಿಸಿ ಧ್ಯಾನ ಮುಂದುವರಿಸಿತು.
ಮತ್ತೆ “ಸಂಧ್ಯಾ” ಮೆಲ್ಲನೆ ಹೆಜ್ಜೆ ಇಟ್ಟು ಬಂದು “ಕಣ್ಣು ಮುಚ್ಚಾಲೆ ಆಡೋಣವೇ”? ಎಂದು ಪಿಸು ಗುಟ್ಟಿತು.
“ಮೂಕ ಮೌನ, ಮುನಿಸೇಕೆ? ಬಾ ಸಖಿ” ಎಂದು ಗೋಗರಿಯಿತು.
ಹೂವು ಕಣ್ಣು ತೆರೆಯಲಿಲ್ಲ, ಬಾಯಿ ಬಿಡಲಿಲ್ಲ. ಮೌನದಲ್ಲಿ ಮುಂದುವರಿಯಿತು.
ಸಂಜೆಗತ್ತಲೆ ತೆರೆ ಎಳೆದೊಡನೆ “ನಿಶೆ” ಕತ್ತಲೆಯ ಹೊದಿಕೆ ಹೊದ್ದು ಕಳ್ಳನಂತೆ ಹೂ ಹೃದಯ ಕದಿಯಲು ಬಂದಿತು.
“ಮೇಲೆ, ಆಗಸ, ಚಂದ್ರಮನ ಚೆಲುವು ನೋಡು, ಬೆಳದಿಂಗಳ ಹಾಡು ಕೇಳು, ನಕ್ಷತ್ರದ ನಾಟ್ಯನೋಡು. ನಿಶಾ ತೊಳಿನ ಅಪ್ಪುಗೆಗೆ ನೀ ಬರಲು ಏಕೆ ತಡ? ಸುಮನ, ನಿನ್ನ ಸಮಾಗಮಕ್ಕಾಗಿ ನಾ ಪರಿತಪಿಸುತಿರುವೆ” ಎಂದಿತು. ಹೂವಿನ ಧ್ಯಾನ, ತಪ ಹಾಗೆ ಮುಂದುವರೆದಿತ್ತು.
ಮಧ್ಯರಾತ್ರಿ ಹಿಮ ಬಿರುಗಾಳಿ ಅಪ್ಪಳಿಸಿ ಬಂತು. ಹೂವಿನ ಪಕಳೆಗಳೆಲ್ಲಾ ಉದರಿ ಮಣ್ಣು ಸೇರಿತು. ಅದರೊಡನೆ ಹೂಗರ್‍ಭದಲ್ಲಿ ಅಡಗಿದ್ದ ಧ್ಯಾನ ಬೀಜ ಮೃಣ್ಮಯವ ಸೇರಿ ಚಿನ್ಮಯವಾಯಿತು. ಬಿರುಗಾಳಿಗೆ ಸೋಲಾಯಿತು. ಹೂವಿನ ಹೃದಯ ನನ್ನಾದಾಗಲಿಲ್ಲ ಎಂದು, ರೊಯ್ಯನೆ ರೋದಿಸುತ್ತ ಬೆಳಗು ಮೂಡುವುದರಲ್ಲಿ ಸಮುದ್ರಗರ್‍ಭದಲ್ಲಿ ಬಚ್ಚಿಟ್ಟು ಕೊಂಡಿತು. ಹೂ ಸಂಕಲ್ಪಕ್ಕೆ ಸ್ವರ್‍ಗ ಕೈಗೆಟುಕಿತ್ತು.
*****