ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ
ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ,
ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ;
ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ
ಸ್ತುತಿಸುವಂತೆ ಪತನಗೊಂಡ ವೈಭವವನ್ನ
ಬರೆಯುವುದಿದೊಂದೆ ಕೈ ಗತಿಸಿದ್ದನ್ನ.
ಮುಖಮಾಟ, ನಗು ಮಧುರವಾಗಿಸಿದ ಹೃದಯ
ಉಳಿಯುವುವು ಇವು, ಕಳೆದದ್ದನ್ನು ಕಡೆಯುವ ನಾನು.
ಮತ್ತೆ ನೆರೆಯುವುದು ಜನ ಹಳೆ ಜಾಗದಲ್ಲೆ,
ತಿಳಿಯದು ಅದಕ್ಕೆ ಅದೆ ರಸ್ತೆಯಲ್ಲೆ
ಹಿಂದೆಂದೂ ಒಂದು ದಿನ ನಡೆದಾಡಿತ್ತು ಎಂದು
ಉರಿಮುಗಿಲಿನಂತಿದ್ದ ವಸ್ತುವೊಂದು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಮಾಡ್‌ಗಾನಳ ವೈವಾಹಿಕ ಜೀವನ ಸಂತೃಪ್ತಿಕರವಾಗಿರಲಿಲ್ಲ. ಅವಳು ತನ್ನ ಗಂಡನಿಂದ ಬೇರೆಯಾಗಿ ವಾಸಿಸತೊಡಗಿದಳು. ಹಿಂದೆ ಅವಳನ್ನು ಗೌರವದಿಂದ ನಡೆಸಿಕೊಂಡ ಐರಿಷ್ ರಾಷ್ಟ್ರೀಯ ಚಳುವಳಿಯ ಜನ ಈಗ ಅವಳ ಬಗ್ಗೆ ಕೆಟ್ಟ ರೀತಿಯಲ್ಲಿ ನಡೆದುಕೊಂಡರು. ಅಂಥ ಸಂದರ್‍ಭಗಳು ಮನಸ್ಸಿನಲ್ಲಿ ಇರುತ್ತ ಏಟ್ಸ್ ಬರೆದ ಕವನ ಇದು.