‘ಈತನಜರಾಮರನು’; ‘ಈತಸಿರಬೇಕಿತ್ತು’
ಎಂದು ಕವಿಗಳು ತಮಗೆ ಮನವಂದ ಕವಿವರರ
ಹೊಗಳುವರು. ಹೇಳೆನಗೆ. ಏನೆಂದು, ಗುರುವರ!
ನಾನು ನುತಿಸಲಿ ನಿನ್ನ ? ಅಹುದು ನಿನ್ನಯ ತೊತ್ತು
ಧಾರಿಣಿಯು, ಕಾಲನಿನ ಕಾಲಾಳು ಮೂವತ್ತು-
ಮೂರು ಕೋಟಿಯ ಗಣದ ಜೀವಕಳೆ, ಇನ್ನಿತರ
ಪ್ರಾಣಿಗಳ ಪ್ರಾಣಪತಿ, ಮತ್ತೊಂದು ದಿವ್ಯತರ
ಸ್ವರ್‍ಗದಧಿಪತಿ, – ಬಾಳ್ದೆ ಧರಣಿಯೊಳು ಮೈವೆತ್ತು!
ಬಾಳುವಯ ಹೊಂದೇರಿಗಿನ್ನೊಂದು ಹೊಂಗಳಸ
ವಿಡಲೆಂದು ಹೊಂಬಸಿರನೆಡೆಗೆ ಸಾಹಸಮಾಡಿ
ಹೋಗಬಯಸಿದ ರಧಿಕ, ಚಿರವಧಿಕ! ನೀ ಲಲ್ಲೆ –
ಯಲಿ ಕಂಡು ಬೆಳಕು-ಕತ್ತಲೆಗಳನು, ಇದು ಎಲ್ಲ
ಚೆಲುವೆಂದು ಸಾರಿದವ! ಜನಕೆ ಬೆಳಕನ್ನು ನೀಡಿ
ನಿನ್ನ ನೋಟವ ಕೊನರಿಸಲು ನಡೆದೆ, ಮನದರಸ!
*****