– ಪಲ್ಲವಿ –
ಬೇಗನೆ ಬಾ, ಬರಲಿರುವಾ
ಸವಿದಿನ ನೀನು…
ಸಾಗಿಸುವೆನು ಇಂದಿನ ಈ
ಕಹಿಬವಣೆಯನು!
೧
ನಿನ್ನೆಯ ದಿನ ಹೋಯ್ತು, ಸಾಗಿ
ಬೇಕಿಹುದನು ಕೊಡಲೆ ಇಲ್ಲ;
ಇಂದಿನ ದಿನ ನಡೆದಿರುವುದು
ಹೇಗೊ ಕಾಲ ಸವೆಯುತಿಹುದು,
ಬೇಕಾದುದು ಬರಲೆ ಇಲ್ಲ!
ಬರಡೆ ಬಯಕೆಯೆಲ್ಲ…
ಗುರಿಯೆ ದೊರೆಯಲಿಲ್ಲ!
೨
ಆದರೇನು ಅಲ್ಲ ವ್ಯರ್ಥ,
ನಿನ್ನೆ-ಇಂದಿಗಿಹುದು ಅರ್ಥ!
ಹೊಸ ಹೊಸ ನೋಟಗಳ ತೋರಿ
ಹೊಸ ಅನುಭವ ಬೀರಿ ಬೀರಿ,
ಕಲಿಸಿರುವುವು ಒಂದನು;
ಬರಿಯೆ ಬಯಕೆಗಿಂತ ಗೆಯ್ಮೆ
ಹಿರಿಯದೆಂಬ ಹೊಂದನು.
೩
ಕಿವಿಯು ಕೇಳಬೇಕು ಶುಭವ,
ಕಣ್ಣು ನೋಡಬೇಕು ನಿಜವ,
ನಾಲಗೆ ನುಡಿದಾಡಬೇಕು
ಕೆಳೆ ತುಂಬಿದ ದಿಟವ !
ಕೈ ಒಳಿತಿಗೆ ಗೈಯಬೇಕು,
ಮನ ಶುಭವನೆ ನೆನೆಯಬೇಕು,
ಕಾಲು ನಡೆಯುತಿರಲೆಬೇಕು
ಅಮೃತದತ್ತ ತೆರಳಬೇಕು-
ಎಂಬನುಭವವ..
ಕಳೆದ ನಿನ್ನೆ ಕಳೆವ ಇಂದು
ಕೊಟ್ಟವೆ ತಿಳಿವ!
ನೀಡಿವೆ ವಿಭವ!
೪
ಬರಲಿಹ ದಿನ ಬರಿಯದಲ್ಲ;
ನನ್ನಯ ಅನುಭವವಿದೆಲ್ಲ-
ನನ್ನ ಗೈಮೆಯೊಂಹೊಂದನು
ಹಣ್ಣಿಗಣಿಯ ಮಾಡದೇನು?
ಅಂದು ನನ್ನ ಮಿಡಿವ ಬಯಕೆ
ಬಯಲಾಗುವ ಭೀತಿಯೇಕೆ?
ಬರಲಿಹ ದಿನ ನಾಳೆ…
ನಾನು ಗೈಮೆಗೇಳೆ….
ಮನೆಯ ತುಂಬ ಕಾಳೇ!