ನಗೆಯಾಡದಿರು ನನ್ನ ನಲುಮೆ ಒಲುಮೆಯ ಕುರಿತು.
ಅರಿಯೆನೇ ತುಂಬು ಮೈ ಮಾಂಸಪಿಂಡದ ಡಂಭ-
ವೆಂಬುದನು? ನಾಣು ನೆತ್ತರದಾಟ, ಮಧು ಚುಂಬ-
ನವು ಕುನ್ನಿ ಚಿನ್ನಾಟ, ಸಂತತಿಯ ತಂತು ಋತು-
ಮಾನಗಳ ಮಾಟ; ಅಂತಃಕರಣ ಹುಲು ಡೊಂಬ-
ನೊಲು ಕುಣಿದು ಮಣಿವಾಟ. ಅತಿಥಿ ರೂಢಿಗೆ ಹೊರತು
ಎನುವ ಮರಣವ ನಾನು ಎಂತು ಬಿಡುವೆನು ಮರೆತು?
ವಸ್ತುವು ಸ್ವಯಂಜ್ಯೋತಿ, ಘನ ಘನ ನಿರಾಲಂಬ!
ನಗೆಯಾಡು; ಬೀಭತ್ಸ ಹಾಸ್ಯದಲ್ಲಿ, ವಿರಕ್ತಿ
ರೌದ್ರವನ್ನುಳಿದು, ಅಭಯವ ಪಡೆದು, ಭಿನ್ನರುಚಿ
ರಂಜಿಸಲಿ, ತಮವ ಹಿಂಜಿಸಲಿ, ತರಿಯಲಿ ನಸುಕು.
ನನ್ನ ಒಲುಮೆಗೆ ಇದುವೆ ಫಲವೆಂಬೆ. ನಿತ್ಯ ರುಚಿ.
ಯಾನಂದ ತನುವು; ರಸರಸವು ಮೋಹದ ಮುಸುಕು.
ಸತ್ಯಮಿಥ್ಯವನರಸೆ, ಸಾಕು ಪ್ರೇಮದ ಯುಕ್ತಿ.
*****