ಮುತ್ತಣ-ಸಾಬಿ-ದೊರೆಸಾಮಿ-ದೇವರು

ಮೇಲೂರ ಮುತ್ತಣ್ಣ ಬಲು ಬುದ್ಧಿವಂತ
ಅವನ ಮಾತೇ ಮಾತು ಅದಕಿಲ್ಲ ಅಂತ
ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ
ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ.
ನಮ್ಮ ಮನದಾರೋಗ್ಯಕವನ ಸಹವಾಸ
ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ
ಮಂಕನೇಳಿಪುದಣ್ಣ ಏನದರ ಬಣ್ಣ!
‘ಹೇಗೆ ಬೆಳೆಯಿತು ಬೊಜ್ಜು ನಿನಗೆ, ಮುತ್ತಣ್ಣ,
ಏನುಂಡೆ’ ಎನೆ, ಎಂಬ: ‘ಸತ್ತವರ ಪಿಂಡ!
ಅವರ ಸ್ವರ್ಗಕೆ ಎತ್ತೆ ಇಂಥ ದೋರ್ದಂಡ
ಮತ್ತಾರಿಗುಂಟಯ್ಯ ಈ ಊರಿನೊಳಗೆ?
ಎತ್ತಬೇಕಿರಿಸಬೇಕುರುಳದಂತಿಳೆಗೆ
ಅದಕೆನಗೆ ನಿಮಂತ್ರಣೆ ಮೂರುದಿನಕೊಮ್ಮೆ
ಹಿರಿಯ ಪಿತೃದೇವರನು ಹೊರಲಾನೆ ಎಮ್ಮೆ-
ನಮ್ಮ ಬ್ರಾಹ್ಮಣ್ಯದಲಿ ಶ್ರಾದ್ಧವೇ ಸಾರ
ಅದರ ಬಲವಿಲ್ಲದಿರಲೆಲ್ಲಿ ಸಂಸಾರ?’
ಎಂದು ನಗುವನು ಶ್ವೇತಮೃತ್ತಿಕೆಯ ತೀಡಿ
ಇದರ ಕೈಗೆಯ್ಮೆಯೊಳು ಯಾರಿವಗೆ ಜೋಡಿ?

ಕೊಕ್ಕರೆಯ ಗರಿಗಿಂತ ಬಿಳಿಯ ತಿರುಮಣ್ಣು-
ಎಲ್ಲ ಮೊಗದೊಳು ಹೊಳೆವಳಿವನ ಜಸೆವೆಣ್ಣು.
ಯತಿರಾಜರಿವನಿಗಿದೆ ಗಳಿಸಿಟ್ಟ ಆಸ್ತಿ
ಇವರು ಆ ಸಾಬಿಗೂ ಬಹಬಹಳ ದೋಸ್ತಿ.
ಇವನ ತಿರುಮಣ್ಣಿಡಲು ಅವನ ತಿರುಪುಟ್ಟಿ;
ಬೇಹಾರವೆಷ್ಟಿರಲಿ ಒಂದಿಲ್ಲ ಬಿಟ್ಟಿ.
ಯಾ ಅಲ್ಲ, ಏ ಸಾಮಿ, ಎಂದವನು ಬರುವ.
ಉಡಿದಾರ ತಿರುಚೂರ್ಣ ಎಲ್ಲವು ತರುವ.
“ಹರಿಯಲ್ಲ ಹರನಲ್ಲ ದಿಟ ನಿಮ್ಮ ಅಲ್ಲ
ನರಸಿಂಹನೂ ಅಲ್ಲ ನಾರಣನು ಅಲ್ಲ
ನೇತಿ ಎಂಬುದೆ ಅಲ್ಲ ಇತಿ ಎಂಬುದಲ್ಲ
ಆದೊಡಲ್ಲನ ಇಲ್ಲ ಎಂಬುಸಿರಿಲ್ಲ
ಅಲವೇ ಸಾಬಿ?” ಎನೆ, ಅರೆ ಅಲ್ಲ ಎನುವ.
ಏತಿ ಎಂದರೆ ಪ್ರೇತಿ ಎಂಬ ಪಂಥದವ
ನೀತಿ ಪ್ರೀತಿಗಳಲ್ಲಿ ಮಿಗಿಲೆ ಇಲ್ಲದವ
ವಾರ ವಾರಕು ಇರುಳನವನಿಲ್ಲೆ ಕಳೆವ.
“ನಾ ಗೈವೆ ಜನಿವಾರ ನೀನು ಉಡಿದಾರ,
ನಾ ನಾಮಕಾರ ನೀ ತಿರುಚೂರ್ಣಕಾರ
ಈ ಊರ ಹಾರುವಿಕೆಗಾವೆ ಆಧಾರ”
ಇಂತೆನಲು ಮುತ್ತಣ್ಣ, ನಗುವನವ ಪೂರ
“ಹೊರುವರೆಂದರೆ ಚೆನ್ನ ಹಾರುವರಿಗಿಂತ;
ನಮಗಿಲ್ಲವೀ ಭಾರ ಈ ಹೊರುವ ಪಂಥ”
ಇಂತಿವರ ಬಗೆ ತಾಗಿ ಕೆದರುವುದು ಹೊಗರ
ಇವರನಾಲಿಸುತಿರಲು ನಮ್ಮ ಬಗೆ ಹಗುರ.

ದಿಟವಾಗಿ ಮುತ್ತಣ್ಣ ಗೀತನೊಳು ಭಕ್ತಿ
ಇವ ನಮಾಜನು ಮಾಡೆ ನೋಡಲಾಸಕ್ತಿ;
ಎಂಥ ರಾಗದ ರಚನೆ ಈ ಮೊರೆಯೊಳೆಂಬ
ಭಾವದಂತಾಗುವನು ಈ ದೇವರೆಂಬ
ಶೂನ್ಯದಿಂ ಸೃಷ್ಟಿಯನು ಗೈವುದಿಂತೆಂಬ
ವ್ಯೋಮದಿಂ ಕಾಮವನು ಕರೆವುದಿಂತೆಂಬ
ಗದ್ದಲವ ಮಾಡುತಿರೆ ಸದ್ದು ಸದ್ದೆಂಬ
ಯಾವುದೋ ಯಕ್ಷಿಣಿಯ ನಿರುಕಿಪೊಲು ಕಾಂಬ.
“ದೇವಭಾವದ ಹೊಳೆಗೆ ಮರಳುಕಡ ಸಾಬಿ,
ಕಲ್ಲುಕಡವೆಮ್ಮ ಗುಡಿ ಭಟ್ಟನೇ ದೋಭಿ,
ಮನವ ಮಡಿಯಾಗಿಡಲು ದಮ್ಮಡಿಯ ತಮಡಿ
ನಮಗೆ ಬೇಕೀತನಿಗೊ ನಲ್ಮೊರೆಯೆ ತಮಡಿ”
ಇಂತೊರೆವನೊಮ್ಮೊಮ್ಮೆ ಮುತ್ತಣ್ಣನೆಮಗೆ.
ಪಡುವಲೋ ಮೂಡಲೋ ಎಲ್ಲವೊಳಿತವಗೆ
ಆಸ್ತಿಕ್ಯ ನಾಸ್ತಿಕ್ಯವೆರಡು ಬೇಕಿವಗೆ
ಆಸ್ತಿಕ್ಯದಾಧಿಕ್ಯ ನಾಸ್ತಿಕ್ಯ ಇವಗೆ.

ನವಶಾಸ್ತ್ರಿ ದೊರೆಸಾಮಿ ಇವಗಚ್ಚು ಮೆಚ್ಚು
ವೇದವೇದಾಂತಗಳೆ ಅವನಿದಿರು ಪೆಚ್ಚು!
“ಮನುಜನಿಗು ಮಿಗಿಲಿಲ್ಲ ಮನಕು ಮಿಗಿಲಿಲ್ಲ
ಇವನರಿವೆ ಜಗದೆಲ್ಲೆ, ಇದಕೆ ಹೊರತಲ್ಲ.
ತಿಳಿವ ಮೀರಿಹುದಿಹುದೊ? ಎಂತು ಇಹುದೆಂಬೆ?
ನಿನ್ನೀ ವಿತರ್ಕದೊಳೆ ನಾನಿಲ್ಲವೆಂಬೆ
ನನ್ನ ನೀ ನಂಬೆ ನಾನೂ ನಿನ್ನ ನಂಬೆ”
“ಅಬ್ಬ ನಿನ್ನೀ ವಾದಕೆನ್ನ ತಿಳಿವಿಂಬೆ?
ಎಂತರಿವೆನೋ ನಿನಗೆ ತಿಳಿವಿಹುದು ಎನುತ!”
ಎನ್ನುವನು ಮುತ್ತಣ್ಣ ಹುಸಿನಗೆಯ ನಗುತ.
“ತಿಳಿವಿರಲು ತಿಳಿವುದೈ ಇಲ್ಲದಿರಲಿಲ್ಲ
ಭಕ್ತಿಗೂ ನನ್ನುಕ್ತಿಗೂ ನೇಹವಿಲ್ಲ.
ಗುಡಿಯ ಪೊಂಗಲು ಹಿತ ಅದಕೆ ಪೂಜೆ ಕತ
ಅದರ ಸೇವನೆಗಿದರ ಸೈರಣೆಯೆ ವಿಹಿತ.
ರಾಮಾನುಜರು ಕಂಡ ವೈಕುಂಠ ಕನಸು
ಆಹ ನಮಗಾಗುತಿದೆ ತೇಂಗೊಳಲ ನನಸು.
ಅಂದರಸುಕುವರಿಯನು ಮೆಟ್ಟಿದ್ದ ದೆವ್ವ
ಇಂದೆಮಗೆ ಸವಿತಿಂಡಿಯುಣಿಸಿಸುತಿರುವವ್ವ.
ನಮೊ ಅದಕೆ ಅದರಧಿಷ್ಠಾನದರಮನೆಗು
ಅದನಟ್ಟಿದಾ ಯತಿಗು ಅವರನಟ್ಟಿದಗು
ಆ ಮಹಾಗುರು ನೆಟ್ಟ ಗುರುಪರಂಪರೆಗು
ಪುಳಿಯೋರೆಯಿರದೆ ಮೊರೆಯದ ಶಾತ್ತುಮೊರೆಗು
ಕಣ್ಮುಚ್ಚಿ ಕೈ ಮುಗಿದು ಕೂಳ್‌ಕಾಯ್ವ ನಿಮಗು
ಮುಗಿಯದೇ ನಿನ್ನ ಮರೆಯೊಳು ಬಾಳ್ಳ ನನಗು!”
ನವಯುವಕ ಇಂತೆನಲು, “ದಿಟ, ಪುಣ್ಯವಂತ
ಕೊಡಲು ಬೇಕಿಲ್ಲ ನೀನವಗೆ ಭಕ್ತಿ ಕಂತ.
ಸಂಕಟವೆ ಇಲ್ಲದಗೆ ವೆಂಕಟನು ಬೇಕೆ
ಸಂತೋಷವುಳ್ಳವಗೆ ದಾಸೋಹವೇಕೆ?
ದೇವರೊಲಿಯದ ನಮಗೆ ದಿನ ಅವನ ಚಿಂತೆ
ಅವನಿಂಬುತುಂಬಿರುವ ನಿನಗಿಲ್ಲ ಚಿಂತೆ
ಆಸ್ತಿಕ್ಯದಾಧಿಕ್ಯ ನಿನ್ನ ನಾಸ್ತಿಕ್ಯ
ದೈವವುಳ್ಳಗೆ ದೇವರುಂಟೆನೆ ಅಶಕ್ಯ”
ಇಂತು ಮುತ್ತಣ್ಣನೆನೆ, “ಗುಡಿಯ ರಸದೂಟೆ
ನನಗಿರಲಿ, ನೀವಿಟ್ಟುಕೊಳಿ ದೇವರೋಟೆ”
ಎಂದು ಕೊಂಕನು ನುಡಿದು ಎಲ್ಲವನು ನಗುವ
ದೊರೆಸಾಮಿಯನು ಕುರಿತು ಮುತ್ತಣ್ಣನೆನುವ
“ಎಳೆಯ ಕರುವಿಗೆ ಮೊಳೆವ ಕೊಂಬುಗಳ ಕಡಿತ
ಅಂತೆಮ್ಮ ದೊರೆಸಾಮಿಗೂ ಕಲಿತನುಡಿತ.
ಇದರ ನವೆ ತೀರಿಸಲು ನನ್ನರಿವೆ ಮೋಟುಕಂಬ
ಏತಕೂ ಸಗ್ಗದಿಹ ಮೊದ್ದುಮನವೆನ್ನ ಜಂಬ.”

ಇಂತು ನಡೆವುದು ಮಾತು ಸರಸಸುಮ್ಮಾನದಿಂದ
ಲಾಮಂಚವೂರಿರುವ ತೀರ್ಥಾಂಬುಪಾನದಿಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿದೊಡಲುಗಳು
Next post ಹೋಲಿಸದಿರೆಲೆ ಚೆಲುವ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…