ಇದು ಹರಿವ ನೀರು
ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ
ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್‍ನಾಮ
-ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು.
ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ
ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ
ಜೀವರ ಬಳಿ ತೆವಳಿ ಕಂಪು ಮಾಡುತ್ತ
ಕಾಲ
ಹಿಡಿದೆಳೆದು ಮುಸಿ ಮುಸಿ
ಮೀಸೆ ಕುಣಿಸುವ ಸಹಜ ಠೀವಿ
ಮಂತ್ರದಂಡ ಬೇಕಿಲ್ಲದ ಮಹಾ ಮಾಯಾವಿ!
ಸಿಟ್ಟು ಬಂದರೆ ಇನ್ನು ಕಟ್ಟುಕಟ್ಟಳೆಯೆಲ್ಲಿ?
ದಡದ ಮಣ್ಣೆಲ್ಲ ಕೊಳೆತಮಂಡಲ ಕಡಿದ ಮೈ.
ಕ್ಷಣ ಕ್ಷಣಕ್ಕೆ ಬೆಳೆಯುವ ಕೈಬೆರಳು
ಉಗುರು; ಬೇರಿಗೆ ಉರುಳು.
ಬೆಳೆಯುತ್ತ ಬಲಿಯತ್ತ
ತೊಟ್ಟು ಸಡಿಲಿದ ಫಲಕ್ಕೆ ದುರ್‍ಬೀನು ಪತ್ತೆ
ರೊಚ್ಚಿಗೆ ಬೆಚ್ಚಿ ಬಿದ್ದವೆಷ್ಟೋ;
ಕಚ್ಚೆ ಹಿಡಿದು ದಡಬಡಿಸಿ ಎದ್ದೆದ್ದು ಬಿದ್ದು ಕೊಚ್ಚಿ ಹೋದವೆಷ್ಪೋ!
ಏನು ಹೇಳುವುದು ಮುಂದೆ?
ಕಡೆಗೆ ಉಳಿಯುವುದು ಬರೀ ನೆನಪು:
ದೊಕ್ಕರು ಬಿದ್ದ ನೆಲ ; ಅಲ್ಲಲ್ಲಿ ಅಸ್ತಿತ್ವ ಉಗ್ಗಡಿಸುವ ಜಲ;
ಹೊರ ಬಂದ ನೆಣ ; ಮರ ಮಸಣ ;
ಹದ್ದುಗಳಿಗೆ ಹಬ್ಬವೋ ಹಬ್ಬ :
ಗಬ್ಬ ಹತ್ತಿದ ಕಡಸು ತುರುಸು
ಮನದ ತಂಬೆಲ್ಲ ಬಾಣ ಬಿರುಸು.
ಪಾಪ! ಯಾವ ದಿಬ್ಬದ ಮೇಲೆ ಕದ್ದು ಹೊಂಚುತ್ತಿದೆಯೊ
ಸಹಜ ಸಂಚಿನ ಚುಂಚು!
ಸುಳ್ಳಲ್ಲ, ದಾರಿಗತ್ತಲಲ್ಲಿ ಹತ್ತಿ ಉರಿಯತ್ತವೆ ಲಾಂದ್ರ
ಎಣ್ಣೆ ಇದ್ದಷ್ಟು ಬೆಳಕು ಬೀದಿ,
ಸಂತೆ ಹಾದಿಯ ಕಾದ ಕಳ್ಳ ಇದ್ದಕ್ಕಿದ್ದಂತೆ ಅಮರಿ
ಅಡ್ಡಗಟ್ಟುವ ಪರಿ-
ಭೂತ ಭೇತಾಳಗಳ ವಿಜೃಂಭಿತ ಛತ್ರಿ ಚಾಮರ
ನೆಲಕ್ಕಂಟಿ ಬೇರಿಳದ ಗಾದಿ.
ಮೂಳೆ ಮೈ-
ಗಳ ಕುಣಿತ ಹುಲಿವೇಷ
ಕೊಂಬು ಕಹಳೆ ತಮ್ಮಟೆ ಆರ್‍ಭಟೆ
ಕತ್ತಿಗೆ ರೋಟಿ ಕೋಲು ಕಟಟಿದ ತೋಟಿ*
ಚಿತ್ತೈಸುವಾಗ ಕುಣಿಯುತ್ತ, ನೆಲಕ್ಕೆ ನಡುಗು ಒಳತೋಟಿ.
ಮೈ ತಂಬ ಸೆರಗು ಹೊದ್ದು ಬಾಳಿದರೂ ತಪ್ಪಿತೆ
ಸೀತಾ ಸಾಕ್ಷಾತ್ಕಾರ?
ಹುಟ್ಟಿಗೆ ಸಾವೊಂದೇ ಶಾಶ್ವತ ಪರಿಹಾರ
ಅದೇ ಅಮರ.
*****
*ತೋಟಿ -ಎಂಬುದು ಹಳ್ಳಿಯ ಕಡೆ ಹಾಕುವ ಒಂದು ವೇಷ. ಹಬ್ಬ ಹರಿದಿನಗಳಲ್ಲಿ ಭಯಂಕರ ಮೀಸೆಯೊಂದಿಗೆ ಈ ವೇಷ ವಾದ್ಯ ಶಬ್ಬಕ್ಕನುಗುಣವಾಗಿ ಕುಣಿಯುತ್ತ ಬೀದಿಯಲ್ಲಿ ಸಾಗುತ್ತದೆ.