೧
ಬಾ ಕೆಳೆಯ, ಬಾ ಕೆಳೆಯ
ಹೋಗೋಣ ಬಾ-
ಗುಡ್ಡವೆದ್ದಿಹ ಕಡೆಗೆ
ಕಣಿವೆ ಬಿದ್ದಿಹ ಕಡೆಗೆ
ತೊರೆಯುರುಳಿ ದನಿಹರಳ ಹೊಳೆಸುವೆಡೆಗೆ.
ಇಲ್ಲದಿರೆ,
ಜಲದ ಜಲ್ಪವ ಕೇಳೆ ಕೊಳದ ತಡಿಗೆ.
ಹೆಡೆಯ ತೆರದೊಳು ಮಲೆಯ
ನೆಳಲನಾಡಿಪ ಕೆರೆಯ
ಸನಿಯದುಪವನದಲ್ಲಿ ನಡೆದಾಡುವ.
ಇದು ಬೇಡ?
ನೀರ್ಮುತ್ತಿನಾಟವನೆ ನೆರೆ ನೋಡುವ.
ಶೀಲವತಿಯರು ತೋರೆ
ಬಿನ್ನಣದ ಬಿಸಿಲ್ಗುದುರೆ
ಬನದಿ, ಅದನಾಸೆಯೊಳು ಹಿಡಿಯೋಣ ಬಾ.
ಒಲ್ಲೆಯಾ?
ಬಯಲಲೆದು ಬೇಸರವ ಪಡೆಯೋಣ ಬಾ.
೨
ಮಲೆಯ ಮೇಲೇನಿಹುದೊ
ತೊರೆಬನದೊಳೇನಿಹುದೊ
ಕೆರೆಯೊಳೇನೋ ಕೊಳದ ತಡಿಯೊಳೇನೋ
ಹಗ್ಗ-ಹಾವಿನ ಗರತಿಚೆಲುವೊಳೇನೋ?
ಗುಡಿಯ ಕೈಸಾಲೆಯೊಳು
ರಾಮು-ಶಾಮುಗಳಿರಲು
ಬೇರೆ ಬಿನದವೆ ನಮಗೆ, ಬಾರೊ ಬೆಪ್ಪೆ,
ಅವರ ಮಾತಿನ ಮತ್ತಿಗೆಲ್ಲ ಸಪ್ಪೆ!
*****