ಅತ್ತಿ ಸಸ್ತೆರ ಜಗಳಾ ಹತ್ತು ವರುಷವು ಆಗಿ|
ಬಿಚ್ಚಿ ಹೇಳ್ಯಾಳ ಮಾತ ತನ್ನ ಮಗನ ಮುಂದ| ಸೂಯಿ ||೧||
ಬಿಚ್ಚೀನೆ ಹೇಳ್ಯಾಳ ಮಗನ ಮುಂದ ಈವ ಮಾತಾ|
ಬಿಟ್ಟಬಿಡೊ ಮಗನೆ ನಿನ್ನ ಮಡಽದೀನ| ಸೂಯಿ ||೨||
ಬಿಟ್ಟಾರ ಬಿಡಲಾಕ ಕಟ್ಟಿದ್ದ ಗಂಟಲ್ಲ|
ಹತ್ತು ಮಂದಿ ರೈತರು ಕೂಡಿ ಹಾಕೀದ ಗಂಟಽ| ಸೂಯಿ ||೩||
* * *
ದೇವರ ಮನಿಯಾನ ಮಜ್ಜೀಗಿ ಮಾಡತ್ತೆವ್ವಾ|
ನಾ ಹೋಗಿ ಬರಽತ ನನ್ನ ತವಽರೀಗೆ| ಸೂಯಿ ||೪||
ಹ್ವಾದಽ ಬಗ್ಗೆವ ಏನ ಇದ್ದಽ ಬಗ್ಗೇವ ಏನ|
ಹೋಗಿ ನಿನ್ಹಾಲಿ ನೀನು ಹರಿಕೊಳ್ಳ| ಸೂಯಿ ||೫||
ಮಂಚಽದ ಮ್ಯಾಲ ಕುಂತು ಎಲಿ ತಿನ್ನು ಮಾವಯ್ಯ|
ನಾ ಹೋಗಿ ಬರಽತ ನನ್ನ ತವರೀಗೆ| ಸೂಯಿ ||೬||
ಹ್ವಾದಽರ ಹೋಗವ್ವಾ ಜತ್ತನ್ಲೆ ಬಾರವ್ವಾ|
ತವರೊಳ್ಳೆವರಂತ ನೀನು ತಡೀಬ್ಯಾಡಾ| ಸೂಯಿ ||೭||
ಹಿಂಡ ಮಂದ್ಯಾಗ ನಿಂತು ಚಂಡಾಡು ಭಾವಯ್ಯಾ|
ನಾ ಹೋಗಿ ಬರತ ನನ್ನ ತವಽರೀಗೆ| ಸೂಯಿ ||೮||
ಹ್ವಾದಽರ ಹೋಗವ್ವಾ ಜತ್ತನ್ಲೆ ಬಾರವ್ವಾ|
ತವರೊಳ್ಳೆವರಂತ ನೀನು ತಡೀಬ್ಯಾಡ| ಸೂಯಿ ||೯||
ಹಾದೀ ಹೊಲದವನ ಹಾಲಂತ ಗುಣದವನ|
ಹಾಡ್ಹ್ಯಾಡಿ ಹಕ್ಕಿ ನೀನು ಹೊಡಿಽಯವನ| ಸೂಯಿ ||೧೦||
ಹಾಡೀಹಾಡೀ ಹಕ್ಕಿ ಹೊಡಿವಂಥ ಮನಿ ಪುರುಷ|
ನಾ ಹೋಗಿ ಬರತ ನನ್ನ ತವಽರೀಗೆ| ಸೂಯಿ ||೧೧||
* * *
ಹೊರಿಹುಲ್ಲ ತಂದಾನ ಧಪ್ಪಂತ ಒಗದಾನ|
ಚಂದರಸಾಲ್ಯಾಗ ಇಲ್ಲ ಮನಿ ಮಡದಿ| ಸೂಯಿ ||೧೨||
ತುಪ್ಪಬಾನುಣ ಮಗನ ಮೇಲುಪ್ರಿ ಏರ ಮಗನ|
ಮಡದೆಂಬು ಶಬುದ ನೀನು ಮರಿ ಮಗನ| ಸೂಯಿ ||೧೩||
ತುಪ್ಪಾ ಬಾನಾ ಒಯ್ದು ತಿಪ್ಪೀಗಿ ಸುರುವವ್ವಾ|
ತುಪ್ಪಿನಂಥಕ್ಕಿ ನನ್ನ ಮನೀ ಮಡದಿ| ಸೂಯಿ ||೧೪||
ತುಪ್ಪೀನ ಅಂಥಕಿ ಮನಿ ಮಡದಿನ ಬಿಟಕೊಟ್ಟು|
ತಿಪ್ಪಿ ಸೋಬೂತಿ ನನ್ನ ಮಾಡಿದಿ ತಾಯಿ| ಸೂಯಿ ||೧೫||
ಹಾಲಾ ಬಾನುಣು ಮಗನೆ ಮೇಲುಪ್ರಿಗೇರು ಮಗನ|
ಮಡದೆಂಬು ಶಬದ ನೀನು ಮರಿ ಮಗನ| ಸೂಯಿ ||೧೬||
ಹಾಲಾ ಬಾನಾ ಒಯ್ದು ಹಾದೀಗಿ ಸುರವವ್ವಾ|
ಹಾಲಿನಂಥಕ್ಕಿ ನನ್ನ ಮನೀ ಮಡದಿ| ಸೂಯಿ ||೧೭||
ಹಾಲಿನಂಥಕ್ಕಿ ಮನಿ ಮಡದಿನ ಬಿಟಕೊಟ್ಟು|
ಹಾದಿ ಸೋಬೂತಿ ನನ್ನ ಮಾಡೀದಿ ತಾಯಿ| ಸೂಯಿ ||೧೮||
*****
ಅತ್ತೆಮನೆಯ ಕಾಟ
ಅತ್ತೆಯ ಮನೆಯಲ್ಲಿ ಸೊಸೆಗೆ ಅಲ್ಲಿಯ ಹೆಣ್ಣುಮಕ್ಕಳೆಂಬುವರಾರಿಂದಲೂ ಸುಖವಿರುವುದಿಲ್ಲ. ಅತ್ತೆ ಸೊಸೆಯರ ಕದನದ ವಿಷಯವಂತೂ ಸರ್ವಶ್ರುತವೇ ಇದೆ. ಅಲ್ಲದೆ ಗಂಡನ ಅಕ್ಕತಂಗಿಯರು ತಮ್ಮ ತಾಯಿಯ ಪಕ್ಷವನ್ನು ಹಿಡಿದು ಇವಳ ಕೂಡ ಕದನವಾಡುತ್ತಾರೆ. ಅವಳಿಗೆ ಅಲ್ಲಿ ಆಸರೆಂದರೆ ಗಂಡ ಮತ್ತು ಮಾವ. ಮಾವನಿಗೆ ಸೊಸೆಯಂದಿರ ಮೇಲೆ ಬಲು ಅಕ್ಕರೆ. ಏಕೆಂದರೆ ಅವರಿಂದ ತನ್ನ ನಂತದ ಬಳ್ಳಿಯು ಬೆಳೆಯಲಿರುವುದು. ನಲ್ಲನ ಅನುರಾಗವೇನೋ ಸರಿಯೇ ಸರಿ. ಅಂತೂ ಗಂಡಸರ ಆಸರ; ಹೆಂಗಸರ ತ್ರಾಸ. ಆದರೆ ಗಂಡಸರು ಯಾವಾಗಲೂ ಮನೆಯಲ್ಲಿರುವವರಲ್ಲ. ಹೆಂಗಸರು ಮಾತ್ರ ಸದಾ ಬಳಿಯಲ್ಲಿದ್ದು ಕಿಟಿಕಿಟಿ ಮಾಡುವವರು. ಹೀಗಾಗಿ ಎಷ್ಟೋ ಸೊಸೆಯಂದಿರು ಕೆರೆಗಳ ಪಾಲಾಗುವುದುಂಟು. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಏನಾದರೂ ನಾಲ್ಕು ದಿನ ವಿಶ್ರಾಂತಿ ಸಿಕ್ಕಬೇಕಾದರೆ ಅದು ತವರುಮನೆಯಲ್ಲಿಯೆ. ಆದುದರಿಂದಲೇ ಹೆಣ್ಣುಮಕ್ಕಳಿಗೆ ತವರುಮನೆಯವರು ಹಬ್ಬಕ್ಕೆ ಕರೆಯಲು ಬಾರದಿದ್ದರೆ ಬಹಳ ದುಃಖವಾಗುತ್ತದೆ. ಈ ವಿಭಾಗದಲ್ಲಿ ಅತ್ತೆಯ ಮನೆಯ ತ್ರಾಸದ ಮತ್ತು ತವರುಮನೆಯ ಆಸೆಯ ಹಾಡುಗಳನ್ನು ಸಂಗ್ರಹಿಸಿದೆ.
ಅತ್ತೆ ಸೊಸೆಯರ ಜಗಳ
ಈ ಹಾಡಿನಲ್ಲಿ ಸೊಸೆಯೆಂಬವಳನ್ನು ಅತ್ತೆಯ ಮನೆಯಲ್ಲಿರುವವರು ಯಾವ ಯಾವ ಬಗೆಯಿಂದ ನೋಡುತ್ತಾರೆಂಬುದು ಸ್ಪಷ್ಟವಾಗಿ ಬಣ್ಣಿಸಲ್ಪಟ್ಟಿದೆ.
ಛಂದಸ್ಸು:- ತ್ರಿಪದಿ.
ಶಬ್ದ ಪ್ರಯೋಗಗಳು:- ಮಜ್ಜಿಗೆ ಮಾಡತ್ತೆವ್ವ=ಮಜ್ಞಿಗೆ ಮಾಡುವ ಅತ್ತೆವ್ವಾ. ಭಗ್ಗೆ=ಭಾಗ್ಯ. ಹಾಲೀ ಹರಕೊ=ತಾಳೀ ಹರಕೊ. ಜತ್ತನ್ಲೆ=ಜೋಪಾನವಾಗಿ. ಮೇಲುಪ್ರಿ=ಮೇಲುಪ್ಪರಿಗೆ. ಹಾದಿ ಸೋಬುತಿ=ಹಾದೀ ಪಾಲು.