ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ
ಕೆಳ ಕೆಳಗಾಳದ ಕಣಿವೆಯೊಳು;
ಕಪ್ಪೆಯ ಗೂಡೋ, ಹುತ್ತವೊ ಇದು ಎನೆ
ನಗೆಗೇಡಾಯಿತು ನೆರೆಹೊಳಲು;
ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ,
ಹಳುವೋ ಹುಲ್ಗಾವಲ ಹರಹೋ?
ಎನ್ನುತ ಭ್ರಮಿಸುವ ತೆರವಿಂದಾಯಿತು
ನಂದಿಯ ಬೆಟ್ಟದ ಮೇಲುಗಡೆ.
ಐರಾವತವೆನೆ ಬಿಳಿಮುಗಿಲಾನೆಯ
ಸದರದಿ ಮುಟ್ಟುತ ನೇವರಿಸಿ,
ಕುಸುಮಾವಳಿಯೆನೆ ಬಾನಿನ ನೀಲವ
ಟೊಂಗೆಯ ತುದಿಯೊಳು ದೋಲಯಿಸಿ,
ಚಿರ ಯೌವನವೆನೆ ಹಸುರನು ಮೆರೆಯಿಸಿ,
ಜುಮ್ಮೆನೆ ಸುರಭಿಯ ನಿಃಶ್ವಸಿಸಿ,
ದನಿಯೊಳು ನೆಳಲೊಳು ಚೋದ್ಯಂಗೊಳಿಸುವ
ಬನವಿದಿಗೋ ಮಲೆ ಮೇಲುಗಡೆ!
ಕಿರುದೆರೆಕುದುರೆಯ ರವಿರಾವುತರನು
ಕೊಳದಂಗಣದೊಳಗೋಡಿಸುತ,
ಚಣಕೂ ಚೆದರುವ ಮೋಡದ ಮಂದೆಗೆ
ಬಾನಿನ ಬಯಲೊಳಗೂಳಿಡುತ,
ತಲೆ ಕೆದರುತ, ಮೈ ಕುಣಿಸುತ ತರುಗಳ
ಹುಡುಗಾಟಕೆ ಹುಯಿಲಿಡಿಸುತ್ತ,
ತಿಣ್ಣನೆ ಮಂದಿಯ ತುಡುಕುತ, ಜಡತೆಯ
ಕಸಿಯುವೆಲರ್ ಮಲೆ ಮೇಲುಗಡೆ.
ಪಗಲಿರುಳಾಗಿಸಿ ದೆಸೆಯೊಗ್ಗೂಡಿಸಿ
ಲೋಕವ ಮೋಹಿಸುತುರವಣಿಸಿ,
ಘುಡು ಘುಡಿಸುತಸುತಲಾರ್ಭಟಿಸುತ ಫಳ್ಳನೆ
ಪಲ್ಕಿಯುತ ಭೀಕರನೆನಿಸಿ,
ಬುದ್ಧನ ಮಾರನೊಲಚಲವ ತಾಗುತ
ಹಮ್ಮುಳಿದೋಡಲು ಕಾರ್ಮುಗಿಲು,
ನಗುತಿಹ ದೇವರ ದಿವ್ಯಸ್ಮಿತವೆನೆ
ಮಳೆಬಿಸಿಲಿದೂ ಮಲೆ ಮೇಲುಗಡೆ.
ಸೊದೆಯಂತಸುವನು ಬಿಸಿಲುದ್ದೀಪಿಸೆ
ನಲಿದುಲಿದಾಡುವೆ-ಸುರನವೊಲು;
ಕೈಯೆಡೆ ಕೋಡೊಳು ರೆಕ್ಕೆಯಗೊಳ್ಳಲು
ಮುಗಿಲುತ್ಸುಕಿಸುವೆ-ಯಕ್ಷನೊಲು;
ಗಿರಿಶನೊಲದ್ರಿಯ ನಡೆವ ಮಹಾತ್ಮನ
ಹಿಂಬಾಲಿಸುವೆನು- ಗಣರವೊಲು;
ಅಮರ್ತ್ಯಚೇತನರನೇಕಭಾವಗ-
ಳಿಂತೆನಗಹುದೈ ಮೇಲುಗಡೆ.
ಮೆಲ್ಲನೆ ಮೆಲ್ಲನೆ ಬೆಳುದೆಸೆ ದಳಗಳ
ತಿರೆ ಹೂ ಮುಚ್ಚಲು, ಇರುಳಿಳಿಯೆ,
ಶಾಂತನ ತೇಜಸ್ವಿಯ ಸಾನ್ನಿಧ್ಯದಿ
ತಮ್ಮೊಳಬೆಳಕೊಳು ಜನವೆಸೆಯೆ,
ಶ್ರುತಿ ನುಡಿಯಲು, ನುತಿಯೊಗೆಯಲು, ಕರಣಗ-
ಳಮಿತಾಚರಣೆಯ ಸುತನವೊಲು
ದಣಿದಾತ್ಮದ ಬಳಿಗೈತರ-ಅಹ ಏ-
ನುತ್ಸವವೋ ಮಲೆ ಮೇಲುಗಡೆ!
*****