ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು
ಎಂಥ ಸಂಭ್ರಮ
ಎಂಥ ಹುಲ್ಲು ಎಂಥ ಕಡ್ಡಿ
ಈ ಮಾಡಿನಲ್ಲಿ ಬಂದು ಸೇರಿ
ಎಂಥ ಸಂಭ್ರಮ
ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು
ಎಂಥ ಸಂಭ್ರಮ
ಎಂಥ ಪರಾಗ ಎಂಥ ಮಧುರ
ಈ ಕೊಂಬೆಯಲ್ಲಿ ಬಂದು ಸೇರಿ
ಎಂಥ ಸಂಭ್ರಮ
ಹುಟ್ಟುತಾವೆ ನಾಯ್ಮರಿ ಹಿತ್ತಿಲಿನ ಮೂಲೆಯಲ್ಲಿ
ಎಂಥ ಸಂಭ್ರಮ
ಎಂಥ ಒಡಲು ಎಂಥ ಜೀವ
ಈ ಮೂಲೆಯಲ್ಲಿ ಬಂದುಸೇರಿ
ಎಂಥ ಸಂಭ್ರಮ
ಬರುತಾವೆ ತರಕಾರಿ ಹೂ ಹಣ್ಣು ಸಂತೆಯಲ್ಲಿ
ಎಂಥ ಸಂಭ್ರಮ
ಎಂಥ ಚಪ್ಪರ ಎಂಥ ಜನಗಣ
ಸಂತೆಯಲ್ಲಿ ಬಂದುಸೇರಿ
ಎಂಥ ಸಂಭ್ರಮ
ಡೋಲು ಬಡಿಯುತಾನೆ ಡೊಂಬ ಮನೆ ಮುಂದಣ ಬೀದಿಯಲ್ಲಿ
ಎಂಥ ಸಂಭ್ರಮ
ಎಂಥ ಹಾವು ಎಂಥ ಹುಡುಗಿ
ಬೀದಿಯಲ್ಲಿ ಬಂದುಸೇರಿ
ಎಂಥ ಸಂಭ್ರಮ
ಉರುಳುವುದು ಊರ ತೇರು ಜಾತ್ರೆ ಸೇರಿ ಕೇರಿಯಲ್ಲಿ
ಎಂಥ ಸಂಭ್ರಮ
ಎಂಥ ಹೂವು ಎಂಥ ಗಂಧ
ಕೇರಿಯಲ್ಲಿ ಬಂದುಸೇರಿ
ಎಂಥ ಸಂಭ್ರಮ
*****