ಸ್ಥವಿರ ಗಿರಿಯ ಚಲನದಾಸೆ,
ಮೂಕ ವನದ ಗೀತದಾಸೆ,
ಸೃಷ್ಟಿ ಹೊರೆಯ ಹೊತ್ತ ತಿರೆಯ
ನಗುವಿನಾಸೆ ನಾ.
ಬಾಳ್ವೆಗೆಲ್ಲ ನಾನೆ ನಚ್ಚು,
ಲೋಕಕೆಲ್ಲ ಅಚ್ಚುಮೆಚ್ಚು,
ನಾನೆ ನಾನೆ ವಿಧಿಯ ಹುಚ್ಚು,
ಹೊನಲ ರಾಣಿ ನಾ.
ಕಿರಣ ನೆಯ್ದ ಸರಿಗೆಯುಡಿಗೆ,
ಇರುಳು ಕೊಟ್ಟ ತಾರೆತೊಡಿಗೆ,
ಇಂದುಕಳೆಯ ಹೂವೆ ಮುಡಿಗೆ –
ದೇವಕನ್ಯ ನಾ.
ಬೆಳ್ಳಿ ನೊರೆಯ ನಗೆ ನಗುತ್ತ,
ತೆರೆಯ ನಿರಿಯ ಚಿಮುಕಿಸುತ್ತ,
ಕಡಲ ವರಿಸೆ ತವಕಿಸುತ್ತ,
ನಡೆವ ವಧುವೆ ನಾ.
ನಲಿತ ಕುಣಿತವೆನ್ನ ಶೀಲ,
ಚಲನವೆನ್ನ ಜೀವಾಳ,
ಲುಪ್ತಮಾಗೆ ದೇಶಕಾಲ
ಎನ್ನ ಗಾಯನಾ.
ದಡದ ಗಿಡಕೆ ಪುಷ್ಪಹಾಸ,
ಸನಿಯದಿಳೆಗೆ ಸಸ್ಯಹಾಸ,
ಹಾಸಕೀರ್ಣ, ಹಾಸಪೂರ್ಣ,
ಎನ್ನ ಜೀವನಾ.
ಹೂವಿನಾಸೆಯನ್ನು ತೋರಿ
ಎಲೆಯ ಕಣ್ಣನೀರ ಕಾರಿ
ರೆಂಬೆಯಡ್ಡಗಟ್ಟಿ, ಹಳುವು
ಆಡೆ ಕರೆವುದು;
ಬೆಟ್ಟ ಮುದ್ದು ಮಾಡಲೆಂದು,
ಮಡುವು ಹಾದಿ ತಂಗಲೆಂದು,
ಕಡಲು ಒಲುಮೆ ಸಾಲದೆಂದು-
ನನ್ನ ತಡೆವುದು.
ನಾನು ನಿಲ್ವುದೊಂದೆ ಚಣಂ
ಸತತ ಕರ್ಮವೆನ್ನ ಗುಣಂ
ಅದಕೆ, ಕಾಣೆ ಗೋಳನಣಂ
ಹರ್ಷಮೆನಗೆ ಚಿರಂತಣಂ.
ಗವಿಗಳಲ್ಲಿ ಹುಳನಡಗಿ
ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲನೆ ಜರುಗಿ
ಕಡಲಿಗೋಡುವೆ;
ಬಿಸಿಲ ಕೋಲ ಹಿಡಿದು ಹತ್ತಿ
ನೀರ ತೇರನೇರಿ ಸುತ್ತಿ
ತಿರುಗಿ ತಿರೆಯ ಮಡಿಲಿನಲ್ಲಿ
ಧುಮುಕಿ ಹರಿಯುವೆ.
ಅಚರ ಜಗದ ಚಲನದಾಸೆ
ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ
ನಗುವಿನಾಸೆ ನಾ.
ವನವಿನೋದ, ಮಲೆಯ ಮೋದ,
ಮುಗಿಲ ಮೇಲ್ಮೆ, ನಾಡ ನಲ್ಮೆ,
ನಾನೆ ನಾನೆ ದಿವದ ಕೂರ್ಮೆ-
ಪೊನಲ ರಾಣಿ ನಾ.
*****